ವಿಷಯಕ್ಕೆ ಹೋಗು

ಪಾಲಿಥಯಾನಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಲಿಥಯಾನಿಕ್ ಆಮ್ಲದ ರಚನಾ ಸೂತ್ರ

SO2.OH ಗುಚ್ಛಕ್ಕೆ ಸಲ್ಫಾನಿಕ್ ಗುಚ್ಛವೆಂದು ಹೆಸರು. ಎರಡು ಸಲ್ಫಾನಿಕ್ ಗುಚ್ಛಗಳು ನೇರವಾಗಿ ಅಥವಾ ಗಂಧಕದ ಪರಮಾಣುಗಳ ಮೂಲಕ ಬಂಧಿತವಾಗಿದ್ದರೆ ಅಂಥ ಆಮ್ಲಗಳನ್ನು ಥಯಾನಿಕ್ ಆಮ್ಲ ಎಂಬ ಹೆಸರಿನಿಂದ ಕರೆಯುವುದುಂಟು. ಇವನ್ನು H2SnO6 ಎಂಬ ಸಾಮಾನ್ಯ ಸೂತ್ರದಿಂದ ಸೂಚಿಸಬಹುದು. ಇಲ್ಲಿ n=2,3,4,5 ಅಥವಾ 6 ಆಗಿರಬಹುದು. ಆಗ ಅವನ್ನು ಅನುಕ್ರಮವಾಗಿ ಡೈ, ಟ್ರೈ, ಟೆಟ್ರ, ಪೆಂಟ ಮತ್ತು ಹೆಕ್ಸ ಥಯಾನಿಕ್ ಆಮ್ಲಗಳು ಎಂದು ಕರೆಯುತ್ತೇವೆ.

ಪಾಲಿಥಯಾನಿಕ್ ಆಮ್ಲ ಎಂದರೆ ಗಂಧಕದ ಪರಮಾಣುಗಳ ನೇರ ಸರಣಿಯನ್ನು ಹೊಂದಿರುವ ಆಮ್ಲ. ಇಂಥ ಥಯಾನಿಕ್ ಆಮ್ಲಗಳನ್ನು ಪಾಲಿಥಯಾನಿಕ್ ಆಮ್ಲಗಳು ಎಂಬ ವರ್ಗನಾಮದಿಂದ ಕರೆಯುವುದು ರೂಢಿ. ಈ ಆಮ್ಲಗಳು ಸರಾಗವಾಗಿ ಪರಸ್ಪರ ಪರಿವರ್ತಿತವಾಗುವುವು. ಅವುಗಳ ಅಣು ರಚನೆಯಲ್ಲಿ ಗಂಧಕದ ಪರಮಾಣುಗಳ ಸರಣಿ ಇರುವುದಾದರೆ ಅಂಥ ಪರಮಾಣು ಸರಣಿ ಸುಲಭವಾಗಿ ಒಡೆದು ಒಂದು ಗಂಧಕದ ಪರಮಾಣುವನ್ನು ಹೊರದೂಡುವುದು ಅಥವಾ ಕೂಡಿಸಿಕೊಳ್ಳುವುದು ಅಸಂಭವ. ಆದ್ದರಿಂದ ಈ ಆಮ್ಲಗಳಿಗೆಲ್ಲ ಟ್ರೈಥಯಾನಿಕ್ ಆಮ್ಲವೇ ಜನಕವೆಂದು ಸಲಹೆ ಮಾಡಲಾಗಿದೆ. ಏಕೆಂದರೆ ಇತರ ಥಯಾನಿಕ್ ಆಮ್ಲಗಳಿಂದ ಬರುವುದು ಟ್ರೈಥಯಾನಿಕ್ ಆಮ್ಲವೇ ವಿನಾ ಡೈಥಯಾನಿಕ್ ಆಮ್ಲವಲ್ಲ. ಟ್ರೈ ಮತ್ತು ಟೆಟ್ರ ಥಯಾನಿಕ್ ಆಮ್ಲಗಳನ್ನು ಉನ್ನತ ಥಯಾನಿಕ್ ಆಮ್ಲಗಳಿಗೆ ಪರಿವರ್ತಿಸಬಹುದು. ಡೈಥಯಾನಿಕ್ ಆಮ್ಲದಿಂದ ಹೀಗೆ ಮಾಡಲಾಗದು. ಡೈಥಯಾನಿಕ್ ಆಮ್ಲವನ್ನು ಸಲ್ಫ್ಯೂರಿಕ್ ಆಮ್ಲಕ್ಕೆ ಉತ್ಕರ್ಷಿಸುವುದು ಕಷ್ಟ. ಆದರೆ ಪಾಲಿಥಯಾನಿಕ್ ಆಮ್ಲಗಳು ಸರಾಗವಾಗಿ ಉತ್ಕರ್ಷಿತವಾಗುತ್ತವೆ.

ತಯಾರಿಕೆ

[ಬದಲಾಯಿಸಿ]

ಸಲ್ಫ್ಯೂರಸ್ ಆಮ್ಲದೊಡನೆ ನವಜಾತ ಗಂಧಕವನ್ನು ವರ್ತಿಸಿ ಅಥವಾ ಥಯೊಸಲ್ಫೇಟುಗಳ್ನು ಉತ್ಕರ್ಷಿಸಿ ಪಾಲಿಥಯಾನಿಕ್ ಆಮ್ಲಗಳನ್ನು ತಯಾರಿಸಬಹುದು. ವಾಸ್ತವವಾಗಿ ಪಾಲಿಥಯಾನಿಕ್ ಆಮ್ಲಗಳ ಅಸ್ತಿತ್ವ ಬೆಳಕಿಗೆ ಬಂದದ್ದು ವ್ಯಾಕೆನ್‍ರಾಡರನ ದ್ರಾವಣದ (Wackenroder solution) ಪರೀಕ್ಷೆಯಿಂದ. 00 ಸೆಂ.ನಲ್ಲಿರುವ ಸಾರಯುತ ಸಲ್ಫ್ಯೂರಸ್ ಆಮ್ಲದ ಮೂಲಕ ಹೈಡ್ರೊಜನ್ ಸಲ್ಫೈಡನ್ನು ಹಾಯಿಸಿದಾಗ ದ್ರಾವಣದಲ್ಲಿ ಪಾಲಿಥಯಾನಿಕ್ ಆಮ್ಲಗಳ ಮಿಶ್ರಣ ಉಂಟಾಗುತ್ತದೆ. ಇದೇ ವ್ಯಾಕೆನ್‍ರಾಡರನ ದ್ರಾವಣ. 20 °C ಮೇಲಿನ ತಾಪಮಾನಗಳಲ್ಲಿ ದ್ರಾವ್ಯಗಳು ನಿಧಾನವಾಗಿ ವಿಘಟಿಸಿ ಗಂಧಕ, ಗಂಧಕದ ಡೈಆಕ್ಸೈಡ್ ಮತ್ತು ಸಲ್ಫ್ಯೂರಿಕ್ ಆಮ್ಲಗಳೆಂಬ ಬೇರ್ಪಡಿಕೆ ಘಟಕಗಳಾಗುವವು.[]

ಈ ಮಿಶ್ರಣದಿಂದ ಆಮ್ಲಗಳನ್ನು ಪ್ರತ್ಯೇಕಿಸುವ ವಿಶಿಷ್ಟ ವಿಧಾನವೊಂದುಂಟು. ಮೊದಲು ದ್ರಾವಣವನ್ನು ಪೊಟ್ಯಾಷಿಯಂ ಅಸಿಟೇಟಿನಿಂದ ತಟಸ್ಥೀಕರಿಸಿದರೆ ಪೊಟ್ಯಾಷಿಯಂ ಪಾಲಿಥಯೊನೇಟುಗಳ ಮಿಶ್ರಣ ದೊರೆಯುವುದು. ದ್ರಾವಣವನ್ನು ಸ್ವಾಭಾವಿಕವಾಗಿ ಇಂಗಲು ಬಿಟ್ಟರೆ ಟೆಟ್ರ ಮತ್ತು ಪೆಂಟ ಥಯೊನೇಟುಗಳು ಸ್ಫಟಿಕೀಕರಿಸುತ್ತವೆ. ಈ ಸ್ಫಟಿಕ ಮಿಶ್ರಣವನ್ನು 2.2 ಸಾಂದ್ರತೆಯುಳ್ಳ ಬ್ರೊಮೊಫಾರಂ ಮತ್ತು ಕ್ಸೈಲೀನುಗಳ ದ್ರವಮಿಶ್ರಣಕ್ಕೆ ಹಾಕಿದಾಗ ಪೊಟ್ಯಾಸಿಯಂ ಪೆಂಟಥಯೊನೇಟು ತೇಲುವುದು. ಟೆಟ್ರಥಯೊನೇಟು ತಳವೂರುವುದು. ಟೆಟ್ರ ಮತ್ತು ಪೆಂಟ ಥಯೋನೇಟುಗಳ ಸ್ಫಟಕೀಕರಿಸಿದ ಬಳಿಕ ಉಳಿಯುವ ಮಾತೃದ್ರವ ತನ್ನ ಪಾಡಿಗೆ ತಾನು ಇಂಗಿ ಹೆಕ್ಸಥಯೊನೇಟುಗಳ ಹರಳುಗಳನ್ನು ಹೊರಹಾಕುತ್ತವೆ. ಶೇಷ ದ್ರವಕ್ಕೆ ಆಲ್ಕೋಹಾಲನ್ನು ಸೇರಿಸಿದರೆ ಅತಿದ್ರಾವ್ಯವಾದ ಪೊಟ್ಯಾಷಿಯಂ ಟ್ರೈಥಯೊನೇಟ್ ಕೂಡ ಒತ್ತರಿಸುವುದು.

ಥಯೊಸಲ್ಫೇಟುಗಳ ಉತ್ಕರ್ಷಣದಿಂದ ದೊರೆಯುವುದು ಪಾಲಿಥಯೊನೇಟುಗಳೇ ವಿನಾ ಆಮ್ಲಗಳಲ್ಲ. ಇವು ಪೊಟ್ಯಾಷಿಯಂ ಲವಣಗಳಾದರೆ ಪರ್‌ಕ್ಲೋರಿಕ್ ಆಮ್ಲದಿಂದ, ಬೇರಿಯಮ್ ಅಥವಾ ಸೀಸದ ಲವಣಗಳಾದರೆ ಸಲ್ಫ್ಯೂರಿಕ್ ಆಮ್ಲದಿಂದ ವಿಭಜಿಸಿ ಆಯಾ ಥಯೊನಿಕ್ ಆಮ್ಲಗಳನ್ನು ಪಡೆಯಲಾಗುವುದು.

ಗುಣಗಳು

[ಬದಲಾಯಿಸಿ]

ಪಾಲಿಥಯಾನಿಕ್ ಆಮ್ಲಗಳು ಅಸ್ಥಿರವಸ್ತುಗಳು. ಇವು ದ್ರಾವಣದಲ್ಲಿ ಮಾತ್ರ ಉಳಿಯಬಲ್ಲವು. ಟೆಟ್ರ ಮತ್ತು ಪೆಂಟ ಥಯಾನಿಕ್ ಆಮ್ಲದ ದ್ರಾವಣಗಳಾದರೆ ದ್ರಾವಣದ ಸಾಂದ್ರತೆ 1.5 ಮುಟ್ಟುವ ತನಕ ಇಂಗಿಸಿದರೂ ಬಾಧಕವಿಲ್ಲ. ಅವು ವಿಭಜಿಸವು. ಯಾವುದೇ ಥಯಾನಿಕ್ ಆಮ್ಲವನ್ನು ಕೂಡಿಟ್ಟರೆ ಅದು ಅಂತಿಮವಾಗಿ ಸಲ್ಫ್ಯೂರಿಕ್ ಆಮ್ಲ, ಗಂಧಕ ಮತ್ತು ಗಂಧಕದ ಡೈಆಕ್ಸೈಡುಗಳನ್ನು ಕೊಡುವುದು. ಉದಾಹರಣೆಗೆ. ಟ್ರೈ ಥಯಾನಿಕ್ ಆಮ್ಲ,

H2S3O6 → H2SO4 + SO2 + S

ಉತ್ಪತ್ತಿಯಾದ ಗಂಧಕದ ಒಂದಂಶವನ್ನು ಉಳಿದ ಟ್ರೈಥಯಾನಿಕ್ ಆಮ್ಲ ಹೀರಿಕೊಂಡು ಉನ್ನತ ಆಮ್ಲವಾಗಬಹುದು. ಇದು ವಿಭಜಿಸಿ ಈ ಶ್ರೇಣಿಯ ಕಿರಿಯ ಸದಸ್ಯರಾಗಬಹುದು. ಈಗ ಬಿಡುಗಡೆಯಾದ ಗಂಧಕ ಹಿಂದಿನಂತೆಯೇ ವರ್ತಿಸಬಹುದು. ಆದ್ದರಿಂದ ಯಾವುದೇ ಒಂದು ಥಯಾನಿಕ್ ಆಮ್ಲದ ದ್ರಾವಣವಾದರೂ ಅದು ಕ್ರಮೇಣ ಎಲ್ಲ ಥಯಾನಿಕ್ ಆಮ್ಲಗಳ ಮಿಶ್ರಣವಾಗಿಬಿಡುವುದೆಂಬುದು ಸ್ಪಷ್ಟ. ಆದರೆ ದ್ರಾವಣಕ್ಕೆ ಸ್ಪಲ್ಪ ಖನಿಜಾಮ್ಲವನ್ನು ಸೇರಿಸಿದರೆ ಥಯಾನಿಕ್ ಆಮ್ಲಗಳ ಸ್ಥಿರತೆಯನ್ನು ಹೆಚ್ಚಿಸಬಹುದೆಂದು ಗೊತ್ತಾಗಿದೆ. ಅದೇ ಕ್ಷಾರಗಳು ಈ ಆಮ್ಲಗಳ ಸ್ಥಿರತೆಯನ್ನು ಕಡಿಮೆ ಮಾಡುತ್ತವೆ. ಎಲ್ಲ ಪಾಲಿಥಯಾನಿಕ್ ಆಮ್ಲಗಳು ದ್ವಿಪ್ರತ್ಯಾಮ್ಲೀಯ ಆಮ್ಲಗಳೆಂಬುದು (dibasic acids) ನಿಜ. ಆದರೆ ಅವುಗಳ ಆಮ್ಲೀಯ ಲವಣಗಳನ್ನು ತಯಾರಿಸಲು ಇದುವರೆಗೆ ಸಾಧ್ಯವಾಗಿಲ್ಲ.

ದೊರಕುವಿಕೆ

[ಬದಲಾಯಿಸಿ]

ಪಾಲಿಥಯಾನಿಕ್ ಆಮ್ಲಗಳನ್ನು ಗುಳಿ ಸರೋವರಗಳಲ್ಲಿ ಪತ್ತೆಹಚ್ಚಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Sarkar, Ramaprasad (2012). General and inorganic chemistry. New Central Book Agency. p. 483. ISBN 9788173817274.
  2. Takano, B. (1987). "Correlation of Volcanic Activity with Sulfur Oxyanion Speciation in a Crater Lake". Science. 235 (4796): 1633–1635. Bibcode:1987Sci...235.1633T. doi:10.1126/science.235.4796.1633. PMID 17795598. S2CID 19856265.