ಸಂಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ[ಬದಲಾಯಿಸಿ]

ಸಂಸರ ಸಂಕ್ಷಿಪ್ತ ಪರಿಚಯ : - ಇವರು ಕನ್ನಡದ ಸಾಹಿತಿಗಳಲ್ಲೊಬ್ಬರು. ಸಂಸ ಅವರ ನಿಜವಾದ ಹೆಸರು ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಹುಟ್ಟೂರು ಯಳಂದೂರು ತಾಲೂಕಿನ ಅಗರ. ಸಂಸರು ತಮ್ಮದೇ ಹೆಸರನ್ನು ಸ್ವಲ್ಪ ಬದಲಾಯಿಸಿ ತಮ್ಮ ಕೃತಿಗಳನ್ನು ಪ್ರಕಟಿಸುತ್ತಿದ್ದರು. ಅವರ ಸಲ ವಿಗಡ ವಿಕ್ರಮರಾಯ ನಾಟಕಕ್ಕೆ “ಕಂಸ” ಎಂಬ ಕಾವ್ಯನಾಮದಿಂದ ಪ್ರಕಟಣೆಗೆ ನೀಡಿದಾಗ ಮುದ್ರಾರಾಕ್ಷಸನ ಕೃಪೆಯಿಂದ ಅದು “ಸಂಸ” ಎಂದಾಯಿತಂತೆ. ಆ ಹೆಸರೇ ಅವರ ಕಾವ್ಯನಾಮವಾಗಿ ಶಾಶ್ವತವಾಗಿ ಉಳಿದು ಕೊಂಡಿತು. ಸಂಸರು ಹೈಸ್ಕೂಲಿನ ಕೊನೆಯ ತರಗತಿಯಲ್ಲಿದ್ದಾಗಲೇ ‘ ಕೌಶಲ’ ಎನ್ನುವ ಬಂಗಾಳಿ ಶೈಲಿಯ ಕಾದಂಬರಿಯನ್ನು ರಚಿಸಿದ್ದರು. ಈ ಕಾದಂಬರಿ ೧೯೧೫ ರಲ್ಲಿ ಅಂದರೆ ಅವರ ೧೭ನೆಯ ವಯಸ್ಸಿನಲ್ಲಿ ಪ್ರಕಟವಾಯಿತು. ಆ ನಂತರ ‘ಶ್ರೀಮಂತೋದ್ಯಾನ ವರ್ಣನಂ’ ಎಂಬ ಚಂಪೂಕಾವ್ಯವನ್ನೂ ರಚಿಸಿದರು. ಇವರು ಬರೆದ ಮೊದಲ ನಾಟಕ ಸುಗುಣ ಗಂಭೀರ ಕ್ಕೆ ೧೯೧೯ ನೆಯ ಇಸವಿಯಲ್ಲಿ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀ ಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆ ಯಲ್ಲಿ ಎರಡನೆಯ ಬಹುಮಾನ ಲಭಿಸಿತು. (ಮೊದಲನೆಯ ಬಹುಮಾನ ದೊರೆತಿದ್ದು ಶ್ರೀ ಕೈಲಾಸಂ ಅವರ ನಾಟಕ ಟೊಳ್ಳು ಗಟ್ಟಿ ಗೆ.) ಸಂಸರ ಬದುಕು ನಿಗೂಢ ವಾಗಿ ಉಳಿದಿದೆ. ಅವರು ಫಿಜಿ, ಟಿಬೆಟ್, ಆಫ್ ಘಾನಿಸ್ತಾನ, ಬಲೂಚಿಸ್ತಾನ, ಬರ್ಮಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳನ್ನು ಸುತ್ತಿ ಬಂದವರು. ಅಲ್ಲಿಯ ಅವರ ಚಟುವಟಿಕೆಗಳ ಬಗೆಗೆ ಯಾರಿಗೂ ತಿಳಿದಿಲ್ಲ. ಸ್ವತಃ ಸಂಸರು persecution maniaದಿಂದ ಬಳಲುತ್ತಿದ್ದರು. ತಮ್ಮ ೨೨ನೆಯ ವಯಸ್ಸಿನಲ್ಲಿ ಒಮ್ಮೆ, ಹಾಗೂ ತಮ್ಮ ೩೭ನೆಯ ವಯಸ್ಸಿನಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾದರು. ಕೊನೆಗೆ ಫೆಬ್ರುವರಿ ೧೪, ೧೯೩೯ರಂದು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇವರನ್ನು "ಚಾರಿತ್ರಿಕ ನಾಟಕಗಳ ಪಿತಾಮಹ"ರೆಂದು ಕರೆಯಲಾಗಿದೆ.

ಸಂಸರ ಬಾಲ್ಯ[ಬದಲಾಯಿಸಿ]

"ಸಂಸ" ಎಂದರೆ ಎ.ಎನ್.ಸಾಮಿ ವೆಂಕಟಾದ್ರಿ ಐಯ್ಯರ್. "ಸಂಸ" - ಎಂಬುದು 'ವಿಗಡ ವಿಕ್ರಮರಾಯ' ಎಂಬ ಸ್ವತಂತ್ರ ಐತಿಹಾಸಿಕ ನಾಟಕವನ್ನು ಕನ್ನಡದಲ್ಲಿ ಬರೆದ ಕವಿ ತನ್ನ ಕೃತಿಗಳ ಸಂಬಂಧದಲ್ಲಿ ತಾನು ಬಳಸಿಕೊಂಡ ಒಂದು ಅಂಕಿತ. ಇವರಿಗೆ ನಾಮಕರಣವಾದಾಗ ಇಟ್ಟ ಹೆಸರು --'ವೆಂಕಟಾದ್ರಿ' ಇವರನ್ನು ಮನೆಯಲ್ಲಿ ಬಳಕೆಯಿಂದ ಕರೆಯುತ್ತಿದ್ದ ಅಡ್ದಹೆಸರು- 'ಸಾಮಿ'. ಇವರು ತಮ್ಮ ಹೆಸರನ್ನು ಸಾಮಿ, ಸಾಮಿ ವೆಂಕಟಾದ್ರಿ, ಎ.ಎನ್. ಸಾಮಿ ವೆಂಕಟಾದ್ರಿ ಅಯ್ಯರ್ ಎಂದು ಬೇರೆ ಬೇರೆ ಬಗೆಯಾಗಿ ಬರೆಯುತ್ತಿದ್ದುದೂ ಉಂಟು. ಇವರ ಕೃತಿ ಗಳನ್ನು ಅರ್ಥಮಾಡಿ ಕೊಳ್ಳವುದು ಕಷ್ಟ,.ಒರಟು ಅಂಚುಗಳ ಕಾರಣದಿಂದ ಇವರ ನಾಟಕಗಳನ್ನು ನಿರ್ಣಯಿಸವುದು ಬಹಳ ಕಷ್ಟ.ಕರವಾದುದು. ಇನ್ನೊಂದು ಕಾರಣವೇನೆಂದರೆ ಅವರ ಬಹಳಷ್ಟು ನಾಟಕಗಳನ್ನು ಅವರೇ ನಾಶ ಮಾಡಿದ್ದಾರೆ .ಆದರೆ ಈ ತೊಂದರೆಗಳ ನಡುವೆಯೂ, ಈ ಮನುಷ್ಯನ ಬುದ್ದಿವಂತಿಕೆಯನ್ನು ಪ್ರಶಂಸಿಸಲು ಸಾದ್ಯವಾಗುವುದಿಲ್ಲ. ಇವರು ಕಳೆದು ಹೋದ ಕಾಲಕ್ಕೆ (ಭೂತಕಾಲ) ಮೋಹಿತರು, ಇವರು ಸಂಪೂರ್ಣವಾಗಿ ಏಕಾಂತ ಜೀವನವನ್ನು ನಡೆಸುತಿದ್ದರು, ಆದ್ದರಿಂದ ಅವರು ಸಂಪೂರ್ಣವಾಗಿ ಸಮಕಾಲೀನ ಜೀವನ ವನ್ನು ತಿರಸ್ಕರಿಸಿದರು.

ಸಂಸರ ಶಿಕ್ಷಣ[ಬದಲಾಯಿಸಿ]

ಇದೇ ಕಳೆದ ಹೇವಿಳಂಬಿನಾಮ ಸಂವತ್ಸರದ ಪುಷ್ಯ ಬಹುಳ ಪಂಚಮಿ ಗುರುವಾರ ರಾತ್ರೆ ಕನ್ಯಾಲಗ್ನದಲ್ಲಿ (ಎಂದರೆ ೧೮೯೮ನೇ ಇಸವಿಯ ಜನವರಿ ೧೩) ಜನಿಸಿದ ಇವರ ಹುಟ್ಟೂರು ಮೈಸೂರು ಸಂಸ್ಥಾನದ ಯೆಳಂದೂರು ತಾಲ್ಲೂಕಿಗೆ ಸೇರಿದ ಅಗರವೆಂಬ ಗ್ರಾಮದ ಆಚೆಯ ಸ್ವರ್ಣಾವತೀ ನದಿಯನ್ನು ದಾಟಿದರೆ ಸಿಕ್ಕುವಾ ದಡವೇ ಈಗ ಸದ್ಯಕ್ಕೆ ಮದರಾಸಿಗೆ ಸೇರಿರುವ ಕೊಳ್ಳೇಗಾಲ. ಸಂಸರ ಪೂರ್ವಿಕರು ಅನೇಕ ತಲೆಮಾರುಗಳಿಂದ ಆಯುರ್ವೇದ ವಿದ್ಯೆಗೆ ಹೆಸರಾದ ಮನೆತನದವರು. ಇವರ ತಂದೆಯವರಾದ ಬ್ರಹ್ಮಸ್ರೀ ಅಗರದ ನರಸಿಂಹ ಪಂಡಿತರಿಗೆ ಮೂವರು ಗಂಡುಮಕ್ಕಳಲ್ಲಿ ಸಂಸರೇ ಕಡೆಯವರು. ಸಂಸರು ಇನ್ನೂ ಬಾಲಕರಾಗಿದ್ದಾಗ ಅಗರದಲ್ಲಿ ಪ್ರೈಮರಿ ಶಾಲೆ ಕೂಡ ಇರಲಿಲ್ಲವಂತೆ. ಹೊಳೆಯಾಚೆಯ ಕೊಳ್ಳೆಗಾಲದ ಮಿಡ್ಲ್ ಸ್ಕೂಲಿನ ಸಂಸ್ಕೃತ ಪಂಡಿತರಾಗಿದ್ದ ಶ್ರೀ ಪಾಳ್ಯದ ಶ್ರೀಕಂಠ ಶಾಸ್ತ್ರಿಗಳಿಂದ ಇವರಿಗೆ ಅಕ್ಷರಾಭ್ಯಾಸವಾಯಿತು. ಅನಂತರ ಅದೇ ಗ್ರಾಮದಲ್ಲಿ ಪೋಸ್ಟ್ ಮಾಸ್ಟರಾಗಿದ್ದ ಶ್ರೀ ಶ್ರೀನಿವಾಸಾಚಾರ್ಯರೆಂಬವರೇ ಇವರಿಗೆ ಓದು ಬರಹ ಕಲಿಸಿದವರು. ಮುಂದೆ ಮಿಡ್ಲ್ ಸ್ಕೂಲಿನ ವ್ಯಾಸಂಗ ಕೊಳ್ಳೆಗಾಲದ ಬೋರ್ಡ್ ಮಿಡ್ಲ್ ಸ್ಕೂಲಲ್ಲಿ ನಡೆಯಿತು. ಅನಂತರ ಸಂಸರು ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿಗೆ ಬಂದು ಸೇರಿದರು. ಅಲ್ಲಿಗೆ ಬಂದ ಬಳಿಕ ೧೯೧೪ರಲ್ಲಿ ಎಸ್.ಎಸ್.ಎಲ್.ಸಿ., ಪರೀಕ್ಷೆಗೆ ಕುಳಿತರು.

ಸಂಸರು ಮರಿಮಲ್ಲಪ್ಪನವರ ಹೈಸ್ಕೂಲಿಗೆ ಬಂದು ಸೇರಿದಾಗ ಅವರ ಹಿರಿಯ ಅಣ್ಣಂದಿರಾದ ಶ್ರಿ ಎ.ಎನ್.ನರಸಿಂಹಯ್ಯನವರು ಅದೇ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಆಗ, ಸಂಸರು ತಮ್ಮ ಅಣ್ಣನವರ ಶಿಷ್ಯರಾಗಿ ವಿದ್ಯೆ ಕಲಿತಾಗ, ಶ್ರೀ ಬಿ.ಎಮ್.ಸಿದ್ಧಲಿಂಗಶಾಸ್ತ್ರಿಗಳು ಎಂಬುವರು ಅಲ್ಲಿ ಕನ್ನಡ ಪಂಡಿತರಾಗಿದ್ದರು. ಪ್ರಾಯಃ ಅಲ್ಲಿ ಬಿದ್ದ ಅಡಿಪಾಯ ಅಚ್ಚುಕಟ್ಟಾ ಗಿದ್ದುದರಿಂದಲೇ ಇರಬಹುದು, ೧೯೧೪ರಲ್ಲಿ ಎಸ್.ಎಸ್.ಎಲ್.ಸಿ.,ಯಲ್ಲಿ ತೇರ್ಗಡೆಯಾಗದೆ ಹೈಸ್ಕೂಲನ್ನು ಬಿಟ್ಟರು ಸಂಸರು. ಆಗ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರಿ ಕರಿಬಸಪ್ಪ ಶಾಸ್ತ್ರಿಗಳಲ್ಲಿ ಕನ್ನಡ ಪ್ರೌಢಗ್ರಂಥಗಳನ್ನು ವ್ಯಾಸಂಗ ಮಾಡಿ, ಕೇವಲ ಆರೆಂಟು ವರ್ಷಗಳೊಳಗಾಗಿ ತಮ್ಮ "ವಿಗಡ ವಿಕ್ರಮರಾಯ" ದಂತಹ ಅಪೂರ್ವವಾದ ಐತಿಹಾಸಿಕ ನಾಟಕಗಳನ್ನು ರಚಿಸುವುದಕ್ಕೆ ಬೇಕಾದ ಪ್ರೌಢಿಮೆಯನ್ನು ಪಡೆದು ಪ್ರಬುದ್ಧರಾದರು.

ಸಂಸರು ಹತ್ತಾರು ವರುಷಗಳ ಕಾಲ, ನಾಲ್ಕಾರು ಕಡೆ, ತಾವು ಕಲಿತ ಕನ್ನಡವನ್ನು ಅನೇಕ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದಾರೆ. ಕೆಲವು ಕಾಲ ಅವರು ಹಾಸನಕ್ಕೆ ಸೇರಿದ ಹೆಬ್ಬಾಲೆ ಗ್ರಾಮದ ರೂರಲ್ ಎ.ವ್.ಸ್ಕೂಲಿನ ಮುಖ್ಯೇಪಾಧ್ಯಾಯರಾಗಿದ್ದರು. ಕೆಲವು ವರುಷ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮತ್ತೆ ಕೆಲವು ಕಾಲ ಮದರಾಸಿನ ಲಯೊಲಾ ಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದರು. ಮಂಗಳೂರಿನ ಸೆಂಟ್ ಎಲೋಸಿಯಸ್ ಕಾಲೇಜಿನಲ್ಲೂ ಕೆಲವು ಕಾಲ ಇದ್ದರೆಂದು ಕೇಳಿದ್ದೇನೆ.

ಅವರ ಕೊನೆಯ ದಿನಗಳು[ಬದಲಾಯಿಸಿ]

ಆದರೆ ಏನೋ, ಏಕೋ, ಸಂಸರು ಬಹುದಿನ ಒಂದು ಕಡೆ ನಿಲ್ಲಲಿಲ್ಲ. ಒಮ್ಮೆ, ಕೂಲಿಕಾರನಾಗಿ ಹೋಗಿ ಕಾಂಚನ ಸಂಪಾದಿಸಿಕೊಂಡು ಬರುತ್ತೇನೆಂದು, ಪೆಸಿಫಿಕ್ ಸಾಗರದಲ್ಲಿರುವ ಫಿಜಿ ದ್ವೀಪಗಳಿಗೆ ಹೊರಟು ಹೋಗಿದ್ದರು. ಅಲ್ಲಿಗೆ ಹೋಗುವುದಕ್ಕೆ ಮುಂಚೆಯೇ, ಅಲ್ಲಿಂದ ಬಂದು ಮೇಲೆಯೂ ಅಖಿಲ ಭಾರತವನ್ನೊಮ್ಮೆ ಸುತ್ತಿ ಕೊಂಡು ಬರಲು, ೧೯೩೪ರ ವೇಳೆಗೆ ಕ್ವೆಟ್ಟಾ ನಗರಕ್ಕೆ ಬಂದು, ಅಲ್ಲಿಯ ಮಿಲಿಟರಿ ಕಚೇರಿಯಲ್ಲಿ ಕಲಿಸುತ್ತ ನಿಂತರು. ಕ್ವೆಟ್ಟಾದ ಭೂಕಂಪವಾದ ಮೇಲೆ ೧೯೩೬ರ ವೇಳೆಗೆ ಸಂಸರು ಮೈಸೂರಿಗೆ ಹಿಂದಿರುಗಿ ಬಂದರು. ಆ ವೇಳೆಗೆ, (ಎಲ್ಲಿ ಏನಾಗಿತ್ತೋ ಏನೋ, ಯಾರಿಗೂ ತಿಳಿಯದು: ಸಂಸರಾದರೂ ಅದರ ಬಗ್ಗೆ ಯಾರೊಡನೆಯೂ ಪ್ರಸ್ತಾಪಿಸುತ್ತಿರಲಿಲ್ಲ); ಆ ವೇಳೆಗೆ, ಅವರಿಗೆ 'ನಾನೊಬ್ಬ ಕ್ರಾಂತಿಕಾರ, ಪೋಲೀಸಿನವರ ಕ್ರೂರ ಕಟಾಕ್ಷ ನನ್ನ ಕಡೆಗಾಗಿದೆ, ನನ್ನ ಸರ್ವನಾಶವನ್ನು ಸಾಧಿಸಲು ಇವರೆಲ್ಲ ಹಗಲಿರುಳೂ ಹೊಂಚುತಿದ್ದಾರೆ' ಎಂದು ಏಕೋ ಮನಸ್ಸಿಗೆ ಒಂದು ದುಸ್ಸಾಹವಾದ ಚಿಂತಾ ಭಾರ ಹತ್ತಿ ಬಿಟ್ಟಿತ್ತು. ಸುಮಾರು ಎರಡು ಮೂರು ವರ್ಷಗಳ ಕಾಲ ಇದೇ ಪೋಲಿಸು ಪೀಡನೆಯ ಭ್ರಮೆಯನ್ನು ಅತಿಯಾಗಿ ಅನುಭವಿಸಿಕೊಂಡು, ಯಾರಾರು ಏನೇನು ಧ್ಯೆರ್ಯ ಹೇಳಿದರೂ ನಂಬದೆ, ಅದೇ ಕೊರಗಿನಿಂದ ಜೀವನದಲ್ಲಿ ಅತಿ ಜುಗುಪ್ಸೆ ಹುಟ್ಟಿ . ಸಂಸರು ೧೪-೨-೧೯೩೯ರ ರಾತ್ರೆ ತಮ್ಮ ಕೈಯಾರ ತಾವೇ ಮಿತಿಮೀರಿ ವಿಷ ಕುಡಿದು, ತಮ್ಮ ಕೊಠಡಿ ಯಲ್ಲಿ ಕದವಿಕ್ಕಿಕೊಂಡು ಅಸ್ತಂಗತವಾದರು. ಅವರು ಇಂತಹ ಅಪಮೃತ್ಯುವಿಗೆ ಈಡಾದರೆಂಬುದು ಕೂಡ ಒಂದು ವಾರದ ಅನಂತರ ತಿಳಿದು ಬಂದಿತು. ಅದೂ ಶವದ ದುರ್ಗಂಧ ಸಹಿಸಲು ಸಾಧ್ಯವಾಗದೆ ಹೋದಾಗ.

ಸಂಸರ ಸಾಹಿತ್ಯ ಕೃತಿಗಳು[ಬದಲಾಯಿಸಿ]

ಸಂಸರ ಹೆಸರು ಮೊದಲು ತಿಳಿದದ್ದು- "ಪ್ರಬುದ್ಧ ಕರ್ನಾಟಕ"ವು ೧೯೨೫-೨೬ರಲ್ಲಿ ಅವರ "ವಿಗಡ ವಿಕ್ರಮರಾಯ" ನಾಟಕವನ್ನು ಪ್ರಕಟಿಸಿದಾಗ. ಇದಾದ ಎರಡು ವರ್ಷಗಳ ಮೇಲೆ ೧೯೨೮ರಲ್ಲಿ ಅವರ "ಸಂಸ ಪದಂ" ಎಂಬ ಕವಿ ಕಾವ್ಯಸ್ತನರೂಪವಾದ ಪದ್ಯ ಸಂಗ್ರಹವು ಧಾರವಾಡದಲ್ಲಿ ಪ್ರಕಟವಾಯಿತು.ಅದೇ ಕಾಲದಲ್ಲಿ "ಶ್ರೀಮಂತೋದ್ಯಾನವರ್ಣನಂ" ಎಂಬ ಇನ್ನೊಂದು ಕಾವ್ಯವೂ ಅಚ್ಚಾಯಿತಂತೆ. ಇದಕ್ಕೆ ಹಿಂದೆಯೇ ೧೯೨೧-೨೨ರಲ್ಲಿ ಪುಸ್ತಕ ರೂಪವಾಗಿ ಹೊರ ಬಿದ್ದಿತು.ಇದರ ಅನಂತರ ೧೯೩೬ರ 'ಕಥಾಂಜಲಿ' ಮಾಸಪತ್ರಿಕೆಯ ಮೊದಲನೆಯ ಸಂಚಿಕೆಯಲ್ಲಿ ಅವರದ್ದೇ 'ಬಿರುದಂತೆಂಬರ ಗಂಡ' ಎಂಬ ಮತ್ತೊಂದು ಐತಿಹಾಸಿಕ ಏಕಾಂಕ ನಾಟಕ ಮುದ್ರಿತವಾಯಿತು. ಮೇಲೆ ಹೇಳಿರುವ ಐದು ಕೃತಿಗಳು ಅಚ್ಚಾಗಿರುವುದರ ಜೊತೆಗೆ 'ಬೆಟ್ಟದರಸು', 'ಮಂತ್ರಶಕ್ತಿ' ಮತ್ತು 'ವಿಜಯ ನಾರಸಿಂಹ' ಎಂಬ ಮೂರು ಐತಿಹಾಸಿಕ ನಾಟಕಗಳು ಹಸ್ತಪ್ರತಿಗಳಾಗಿ ಇನ್ನೂ ಇವೆ. [೧]

ಕಾದಂಬರಿಗಳು[ಬದಲಾಯಿಸಿ]

  • ಕೌಶಲ
  • ಷರ್ಲಾಕ್ ಹೋಮ್ಸ್ ಇನ್ ಜೈಲ್

ಕಾವ್ಯ[ಬದಲಾಯಿಸಿ]

  • ಶ್ರೀಮಂತೋದ್ಯಾನವರ್ಣನಂ
  • ಸಂಸ ಪದಮ್
  • ಈಶ ಪ್ರಕೋಪನ
  • ನರಕ ದುರ್ಯೋಧನೀಯಮ್
  • ಅಚ್ಚುಂಬ ಶತಕ

ನಾಟಕಗಳು[ಬದಲಾಯಿಸಿ]

  • ಸುಗುಣ ಗಂಭೀರ
  • ಮಹಾಪ್ರಭು
  • ದೃಷ್ಟಿದಾನ
  • ಶರಣಾಗತ ಪರಿಪಾಲಕ
  • ರತ್ನಸಿಂಹಾಸನಾರೋಹಣ
  • ಮುತ್ತಿನ ಮೂಗುತಿ
  • ರಾಜವಿಭವೋತ್ಸವ
  • ತೆರಕಣಾಂಬಿ
  • ಅಮಂಗಳಾವಾಪ
  • ಬೊಕ್ಕಳಿಕ
  • ಬೆಟ್ಟದ ಅರಸು
  • ಜಗಜಟ್ಟಿ
  • ವಿಗಡ ವಿಕ್ರಮರಾಯ
  • ಚಲಗಾರ ಚನ್ನಯ್ಯ
  • ವಿಜಯನಾರಸಿಂಹ
  • ಮುಸ್ತಾಫ ವಿಜಯ
  • ತುಂಗ ನಿರ್ಯಾತನ
  • ನಂಜುಂಡ ನರಿ
  • ಶಪಥಮಂಗಳ
  • ಹಂಗಳ
  • ಸಂಚಿಯ ಹೊನ್ನಿ
  • ಬಿರುದೆಂತಂಬರ ಗಂಡ
  • ಮಂತ್ರಶಕ್ತಿ
  • Lali and Mammal

ಇದನ್ನೂ ನೋಡಿ[ಬದಲಾಯಿಸಿ]

http://chukkubukku.in/rangavihara/sample[ಶಾಶ್ವತವಾಗಿ ಮಡಿದ ಕೊಂಡಿ]

  1. https://dsal.uchicago.edu/books/artsandideas/text.html?objectid=HN681.S597_14-15_122.gif
"https://kn.wikipedia.org/w/index.php?title=ಸಂಸ&oldid=1058670" ಇಂದ ಪಡೆಯಲ್ಪಟ್ಟಿದೆ