ವಿಷಯಕ್ಕೆ ಹೋಗು

ಟಿ.ಪಿ.ಕೈಲಾಸಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೈಲಾಸಂ ಇಂದ ಪುನರ್ನಿರ್ದೇಶಿತ)
'ಟಿ.ಪಿ. ಕೈಲಾಸಂ'
ಟಿ.ಪಿ.ಕೈಲಾಸಂ
ಜನನ(೧೮೮೪-೦೭-೨೯)೨೯ ಜುಲೈ ೧೮೮೪
ಮೈಸೂರು, ಭಾರತ
ಮರಣ೧೯೪೬
ಬೆಂಗಳೂರು, ಕರ್ನಾಟಕ,ಭಾರತ
ವೃತ್ತಿನಾಟಕಕಾರ, ಬರಹಗಾರರು
ಪ್ರಕಾರ/ಶೈಲಿಕಾದಂಬರಿ, ಹಾಸ್ಯ

ಟಿ.ಪಿ.ಕೈಲಾಸಂ[ಬದಲಾಯಿಸಿ]

"ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ" ."ಕರ್ನಾಟಕ ಪ್ರಹಸನ ಪಿತಾಮಹ". ತಂಜಾವೂರು ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟವರು.[೧]

ಬಾಲ್ಯ ಜೀವನ[ಬದಲಾಯಿಸಿ]

ಕೈಲಾಸಂರವರು (೨೯.೦೭.೧೮೮೪-೧೯೪೬) ಮೈಸೂರು ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ತಮಿಳು ಮೂಲದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ. ಪದವಿ. ಎಂ.ಎ.ಪದವಿಗಳನ್ನು ಪಡೆದು ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಪಡೆದರು. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟುವಾಗಿದ್ದರು.[೨]

ನಾಟಕಕಾರರಾಗಿ[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು.[೩]


ಕೃತಿಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

 • ಟೊಳ್ಳುಗಟ್ಟಿ ಅಥವಾ ಮಕ್ಕಳಸ್ಕೂಲ್ ಮನೇಲಲ್ವೇ!
 • ಹೋಂರೂಲು,
 • ಬಹಿಷ್ಕಾರ,
 • ಗಂಡಸ್ಕತ್ರಿ,
 • ನಮ್ ಬ್ರಾಹ್ಮಣ್ಕೆ,
 • ಬಂಡ್ವಾಳಿಲ್ಲದ ಬಡಾಯಿ,
 • ನಮ್ ಕ್ಲಬ್ಬು,
 • ಅಮ್ಮಾವ್ರಗಂಡ,
 • ಸತ್ತವನ ಸಂತಾಪ,
 • ಅನುಕೂಲಕ್ಕೊಬ್ಬಣ್ಣ,
 • ಸೀಕರ್ಣೆ ಸಾವಿತ್ರಿ,
 • ಶೂರ್ಪನಖಾ ಕುಲವೈಭವ ಅಥವಾ ನಂಕಂಪ್ನಿ,
 • ತಾಳಿ ಕಟ್ಟೋಕ್ಕೂಲೀನೇ,
 • ಪೋಲಿಕಿಟ್ಟಿ,
 • ವೈದ್ಯನವ್ಯಾಧಿ,
 • ಸೂಳೆ .

-ಮೊದಲಾದ ನಾಟಕಗಳ ಜೊತೆಗೆ ನಾಲ್ಕು ಇಂಗ್ಲಿಷ್ ನಾಟಕಗಳೂ ರಚನೆಯಾದವು.

ಕಥೆಗಳು[ಬದಲಾಯಿಸಿ]

 1. ತಾವರೆಕೆರೆ
 2. ಸಮಶ್ಪೋಯಿನ ದಂಬ್ಡಿ
 3. ಮುದ್ದೋ ಇಲ್ಲಾ ಕದ್ದೋ
 4. ಸುಂಕದ ಕಟ್ಟೆ
 5. ಶಾಮಿಯ ಸೇಡು[೪]

ಕವನಗಳು[ಬದಲಾಯಿಸಿ]

 1. ತಿಪ್ಪಾರಳ್ಳಿ
 2. ಕೋಳಿಕೆ ರಂಗ [೫]
 3. ನಂಜಿ ನನ್ ಅಪರಂಜಿ
 4. ಕಾಶಿಗ್ ಹೋದ ನಂ ಬಾವ[೬]
 5. ಬೋರನ ಭಾರ
 6. ಅಲ್ಪಜ್ಞನ ಪದ
 7. ಅರಿವು
 8. [೭]

ಇಂಗ್ಲಿಷ್ ಕವನಗಳು[ಬದಲಾಯಿಸಿ]

 1. ದಿ ಡ್ರಮಾಟಿಸ್ಟ್ (The Dramatist)
 2. ಎಟೆರ್ನಲ್ ಕೆಯಿನ್ (Eternal Cain)
 3. ಟ್ರುತ್ ನೆಕೆಡ್ (Truth Naked)
 4. ದಿ ಲೇಕ್ (The Lake)
 5. ಕೈಕೇಯೀ
 6. ದ್ರೋಣ
 7. ಕಮಿಸರೇಶನ್ (Commiseration)
 8. ಮದರ್-ಲವ್ (Mother-Love)
 9. ದಿ ಸಿಕ್ಸತ್ ಕಾಲಮಿಸ್ಟ್ ೧೯೪೩ (The Sixth columnist 1943)
 10. ಎ ಮೋನೋಲಾಗ್ (A Monolougue)
 11. ದಿ ರೆಸಿಪಿ (The Recipe)
 12. ದಿ ಸ್ಮಿಲಿನ್ ಸೆವೆನ್ ೧೯೩೦ (The Smilin' Seven 1930)
 13. ಕೃಷ್ಣ (Krishna)
 14. ಸುಭದ್ರಾ (Subhadra)
 15. ದಿ ಆರ್ಟಿಸ್ಟ್ (The Artist)

ಇಂಗ್ಲಿಷ್ ನಾಟಕಗಳು[ಬದಲಾಯಿಸಿ]

 1. ದಿ ಬರ್ಡನ್ (The Burden)
 2. ಫುಲ್ಫಿಲ್ಮೆಂಟ್ (Fulfilment)
 3. ದಿ ಪರ್ಪಸ್ (The Purpose)
 4. ದಿ ಬ್ರಾಹ್ಮಿನ್ಸ್ ಕರ್ಸ್ (The Brahmin's Curse)(Karna ; Murder of Mercy?)
 5. ಕೈಲಾಸಂ ಎಂದೂ ಪೆನ್ನು ಹಿಡಿದವರಲ್ಲ. ಕನ್ನಡಾಂಗ್ಲಾ ಭಾಷೆಯಲ್ಲಿ ಹೇಳಿದ್ದನ್ನು ಸ್ನೇಹಿತರು ಬರೆದು ಕೊಂಡರು.

ಅವರ 'ಕೋಳಿಕೆ ರಂಗ' ಕವನ[ಬದಲಾಯಿಸಿ]

ಅವರು ಇಂಗ್ಲೆಂಡಿನಲ್ಲಿದ್ದಾಗ 'ಕಾನ್ಸ್ಟಂಟಿನೊಪಲ್' ಕವನವನ್ನು ಒಬ್ಬ ಇಂಗ್ಲಿಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿ, ಇದೇ ರಾಗದಲ್ಲಿ ಬೇರೆ ಹಾಡು ಹಾಡಿದರ ಅವರಿಗ ಬಹುಮಾನ ಕೊಡುವುದಾಗಿ ಸವಾಲು ಹಾಕುತ್ತಾನೆ. ಆಗ ಕೈಲಾಸಂ ಅದೇರಾಗದಲ್ಲಿ 'ಕೋಳಿಕೆ ರಂಗಾ' ಹಾಡು ಹೇಳಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕಥೆ ಇದೆ(ಪ್ರತಿ ೬ಗ್ರಾಂ ಗಳ ೧೦ ಪೌಂಡು). ಆ ಹಾಡು ಹೀಗಿದೆ (ಸುಮಾರು ೧೯೨೦ ರಲ್ಲಿ ರಚನೆ.)

ಕೋಳಿಕೆ ರಂಗ[ಬದಲಾಯಿಸಿ]

 
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ

ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ.

ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!

ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.

ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ!
ಹಃ ನಾನು..

ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.
- ಟಿ. ಪಿ. ಕೈಲಾಸಂ*

[೮]

ಕನ್ನಡಕ್ಕೊಬ್ನೆ ಕೈಲಾಸಂ[ಬದಲಾಯಿಸಿ]

 • ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ.
 • ಪ್ರತಿಪದ, ಪ್ರತಿವಾಕ್ಯಗಳೂ ಮೊದಲೇ ನಿರ್ಧಾರಿತವಾಗಿದ್ದು, ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಮೊದಲ ತಯಾರಿಯಿಲ್ಲದೆ ಯಾವ ಸಮಾರಂಭಕ್ಕೂ ಅವರು ಹೋಗುತ್ತಿರಲಿಲ್ಲ.
 • ಕನ್ನಡಕ್ಕೊಬ್ನೆ ಕೈಲಾಸಂ’, ಎಂದು ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ! ಯಾರೋ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೆ, ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಗೆ ಯಾಡಿದ್ದರಂತೆ. ಪಾಶ್ಚಾತ್ಯ ಸಂಗೀತಾಸಕ್ತರಾಗಿ ಅವರು ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಅಚ್ಚರಿ ಹುಟ್ಟಿಸುತ್ತಿದ್ದರಂತೆ.
 • ಕೈಲಾಸಂರ ಪದ್ಯದ ತುಣುಕೊಂದು ಹೀಗಿದೆ.

"ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ
ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ
ಕಲ್ಲಲ್ಲದೊಂದಿಲ್ಲ ! ಬಲ್ಲೆ--
ಕಲ್ಲೇ ಇದ್ದಿಲೆಂದನಲ್ಪಜ್ಞ ".

ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ,

"ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ?
ಕವಿ ಬಯಸನಿಂಥದೇ ಪ್ರತಿಫಲವೆ ಬೇಕು !
ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು
ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.(ಕಣ್ಣ ಹನಿಯಿತ್ತರೆ+ ಎನಗದು ಅನಿತೆ ಸಾಕು")

[೯]

ನಿಧನ[ಬದಲಾಯಿಸಿ]

ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ.[೧೦]

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Rao, L. S. Seshagiri (984). T.P Kailasam. Sahitya Akademi. pp. 1–8.
 2. http://tpkailasam.blogspot.com Kailasam's English Poems and Plays
 3. https://www.sapnaonline.com/shop/Author/tp-kailasam
 4. http://tpkailasam.blogspot.com/2008/09/kailasam.html
 5. "ವ್ಯಂಗ್ಯ-ಕೋಳೀಕೆ ರಂಗ". Archived from the original on 2013-10-09. Retrieved 2014-06-08.
 6. "ಆರ್ಕೈವ್ ನಕಲು". Archived from the original on 2019-12-20. Retrieved 2020-01-11.
 7. https://kn.wikisource.org/s/1jql ಮಹಾತ್ಮಾ ಗಾಂಧಿ
 8. ಕೋಳಿಕೆ ರಂಗ... / Kolike Ranga
 9. ೨೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು;ಟಿ. ಪಿ. ಕೈಲಾಸಂ
 10. T.P. Kailasam