ರೈಜ಼ೋಪೊಡ
ರೈಜ಼ೋಪೊಡ ಪ್ರಾಣಿಪ್ರಪಂಚದ ಮೊದಲನೆಯ ವಂಶ ಎನಿಸಿರುವ ಏಕಕೋಶೀಯ ಜೀವಿಗಳಿಗೆ ಸೇರಿದ ಒಂದು ವರ್ಗ.[೧][೨][೩] ಇವು ವಾಸಿಸುವ ಪರಿಸರ ಹಾಗೂ ಜೀವನಕ್ರಮವನ್ನು ಆಧರಿಸಿ ಇವುಗಳ ರಚನೆಯಲ್ಲಿ ಹಲವು ಮಾರ್ಪಾಡುಗಳಾಗಿವೆ. ಇವನ್ನು ಆಧರಿಸಿ ಏಕಕೋಶೀಯ ಜೀವಿಗಳ ಗುಂಪನ್ನು 4 ವರ್ಗಗಳಾಗಿ ವಿಂಗಡಿಸಿದೆ:
- ರೈಜ಼ೋಪೊಡ
- ಮೆಸ್ಸಿಗೊಫೊರ
- ಸ್ವೊರೊಜ಼ೋವ
- ಸಿಲಿಯೊಫೊರ
ರೈಜ಼ೋಪೊಡ ವರ್ಗದ ಸೇರಿದ ಎಲ್ಲ ಜೀವಿಗಳೂ ಮಿಥ್ಯಾಪಾದಿಗಳು. ಇವನ್ನು ಇವುಗಳ ಮಿಥ್ಯಾಪಾದದ ರಚನೆ, ಕೋಶಕೇಂದ್ರಗಳ ಸಂಖ್ಯೆ ಮತ್ತು ಜೀವದ್ರವದ ಸುತ್ತಲಿರುವ ಕವಚ ಮೊದಲಾದವನ್ನು ಗಮನಿಸಿ ಅನೇಕ ಉಪವರ್ಗಗಳಾಗಿ ವಿಂಗಡಿಸಿದೆ. 1. ಲೊಬೊಸ 2. ಫೊರಾಮಿನಿಫೆರ, 3. ಹೀಲಿಯೊಜ಼ೋವ 4. ರೇಡಿಯೊಲಾರಿಯ.
ಲೊಬೊಸ ಅಥವಾ ಅಮಿಬಿಜ಼ೋವ
[ಬದಲಾಯಿಸಿ]ಇವು ಸಿಹಿನೀರಿನಲ್ಲಿರುವ ಸೂಕ್ಷ್ಮಜೀವಿಗಳು. ಇವಕ್ಕೆ ಚಿಕ್ಕ ಮತ್ತು ಮೊಂಡು ಮಿಥ್ಯಾಪಾದಗಳಿವೆ. ಸಾಮಾನ್ಯವಾಗಿ ಪರಿಚಿತವಿರುವ ಅಮೀಬಾ ಮತ್ತು ಪರತಂತ್ರಜೀವಿ ಎನಿಸಿರುವ ಎಂಟಮೀಬಾ ಈ ಉಪವರ್ಗಕ್ಕೆ ಸೇರುತ್ತದೆ. ಕೆಲವು ಜೀವಿಗಳ ಹೊರಮೈ ಕವಚದಿಂದ ಆವೃತವಾಗಿರುವುದು. ಇಂಥ ಜೀವಿಗಳಲ್ಲಿ ವಿಭಜನೆ ಮೂಲಕ ಪ್ರಜನನಕ್ರಿಯೆ ನಡೆಯುತ್ತದೆ.
ಫೊರಾಮಿನಿಫೆರ
[ಬದಲಾಯಿಸಿ]ಇವು ಉಪ್ಪುನೀರಿನಲ್ಲಿರುವ ಜೀವಿಗಳು. ಇವಕ್ಕೆ ಅನೇಕ ಕವಲುಗಳಿರುವ ಮಿಥ್ಯಾಪಾದಗಳಿವೆ. ಬಿರುಸಾದ ಕವಚಗಳಲ್ಲಿ ಅನೇಕ ರಂಧ್ರಗಳಿದ್ದು, ಇವುಗಳ ಮೂಲಕ ಮಿಥ್ಯಾಪಾದಗಳು ಕೋಶದಿಂದ ಹೊರಕ್ಕೆ ಚಾಚಿಕೊಂಡಿರುತ್ತವೆ. ಪ್ರಜನನಕ್ರಿಯೆ ಮುಖ್ಯವಾಗಿ ವಿಭಜನೆಯ ಮೂಲಕ ಜರಗುತ್ತದೆ. ಉದಾಹರಣೆ: ಎಲ್‌ಫಿಡಿಯಮ್, ಗ್ಲೋಬಿಜರಿನ.
ಹೀಲಿಯೊಜ಼ೋವ
[ಬದಲಾಯಿಸಿ]ಸಿಹಿನೀರಿನಲ್ಲಿ ವಾಸಿಸುವ ಈ ಜೀವಿಗಳಿಗೆ ಬಿರುಸಾದ, ಕಿರಣಗಳೋಪಾದಿಯಲ್ಲಿ ಹೊರಚಾಚಿಕೊಂಡಿರುವ ಮಿಥ್ಯಾಪಾದಗಳಿವೆ. ಉದಾಹರಣೆ: ಎಕ್ಟಿನೊಫ್ರಿಸ್, ಎಕ್ಟಿನೊಸ್ವೆರಿಯಮ್.
ರೇಡಿಯೊಲಾರಿಯ
[ಬದಲಾಯಿಸಿ]ಇದು ರೈಜ಼ೋಪೊಡಗಳಲ್ಲಿ ಬಲು ದೊಡ್ಡ ಗುಂಪು. ಈ ಉಪವರ್ಗದ ಎಲ್ಲ ಜೀವಿಗಳೂ ಉಪ್ಪು ನೀರಿನಲ್ಲಿ ವಾಸಿಸುತ್ತವೆ. ರಂಧ್ರಗಳಿರುವ ಕೇಂದ್ರ ಕವಚ ಇವುಗಳ ಅತಿಮುಖ್ಯಗುಣ. ಈ ಕವಚ ಜೀವದ್ರವವನ್ನು ಒಳ ಮತ್ತು ಹೊರ ಭಾಗಗಳಾಗಿ ವಿಂಗಡಿಸುತ್ತದೆ. ಒಳಭಾಗದಲ್ಲಿ ಕೋಶಕೇಂದ್ರ ಇದೆ. ಕವಚ ಮರಳಿನಿಂದಾಗಿರುವುದರಿಂದ ಈ ವರ್ಗದ ಜೀವಿಗಳ ಪಳೆಯುಳಿಕೆಗಳು ಅಲ್ಲಲ್ಲಿ ಕಂಡುಬಂದಿವೆ. ಉದಾಹರಣೆ: ಎಕ್ಟಿನೊಮ, ಆಕೆಂಥೊಮೆಟ್ರಾ.
ಉಲ್ಲೇಖಗಳು
[ಬದಲಾಯಿಸಿ]- ↑ "Rhizopoda ." A Dictionary of Biology. . Encyclopedia.com. 18 Oct. 2023 <https://www.encyclopedia.com>.
- ↑ Britannica, The Editors of Encyclopaedia. "rhizopod". Encyclopedia Britannica, 15 Sep. 2023, https://www.britannica.com/science/rhizopod. Accessed 25 October 2023.
- ↑ https://theodora.com/encyclopedia/r/rhizopoda.html