ಭಾರತೀಯ ಗೋ-ತಳಿಗಳ ಸಂಶೋಧನಾ ಕೇಂದ್ರ, ದಾರದಹಳ್ಳಿ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಎಂಬ ಗ್ರಾಮದಲ್ಲಿ ಮಲೆನಾಡು ಗಿಡ್ಡ ತಳಿಯ ಸಂಶೋಧನಾ ಕೇಂದ್ರವಿದೆ.[೧] ಇಲ್ಲಿ ಮೂಲತಃ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವೇ ಮಲೆನಾಡು ಗಿಡ್ಡ ತಳಿ ಹಾಗೂ ಇನ್ನಿತರ ಭಾರತೀಯ ಗೋ ತಳಿಗೆ ಸಂಬಂಧಿಸಿದ ಅನೇಕ ವಸ್ತು ವಿಷಯಗಳ ಸಂಗ್ರಹಾಲಯವಾಗಿ ಮಾರ್ಪಾಡಾಗಿದೆ. ಈ ಕೇಂದ್ರದಲ್ಲಿ ಹಲವಾರು ರೀತಿಯ ಸಂಶೋಧನೆಗಳ ಫಲಿತಾಂಶಗಳ ಸಂಗ್ರಹವಿದೆ. ಅಳಿವಿನ ಅಂಚಿನಲ್ಲಿರುವ ಮಲೆನಾಡು ಗಿಡ್ಡದೆಡೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರದ ರಚನಾಕಾರ ಹಾಗೂ ವ್ಯವಸ್ಥಾಪಕ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಕೃಷ್ಣರಾಜ್ ಅರಸ್. ಮಲೆನಾಡು ಗಿಡ್ಡದ ನೈಜತೆ, ಶೇಷ್ಠತೆ, ವಿಷೇಶತೆಗಳನ್ನು ಸ್ವಇಚ್ಛೆಯಿಂದ ಅಧ್ಯಯನ ನಡೆಸಿದ ಇವರು ಅದನ್ನು ಸಾಮಾಜಕ್ಕೆ ತಲುಪಿಸುವ ನಿರಂತರ ಕಾರ್ಯ ನಡೆಸುತ್ತಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಹೊಸ ವಿಷಯಗಳನ್ನು ಕಂಡುಹುಡುಕುವ ಇವರು ಮಲೆನಾಡು ಗಿಡ್ಡದ ಪ್ರತಿ ಅಂಶದಲ್ಲೂ ಹೊಸತನ್ನು ಪತ್ತೆ ಮಾಡುತ್ತಾರೆ. ರೈತರಿಗೆ ಸಹಕಾರಿಯಾಗುವ ಮಾದರಿಗಳನ್ನು ಸಿದ್ಧಪಡಿಸಿ ಮಾರ್ಗದರ್ಶನ ನೀಡುತ್ತಾರೆ. ಅಧಿಕೃತವಾಗಿ ಪಶುವೈದ್ಯಕೀಯ ಪರೀಕ್ಷಕರಾದ ಇವರು ವೈಯಕ್ತಿಕ ಆಸಕ್ತಿಯಿಂದ ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ೨೦೧೬-೧೭ ರಲ್ಲಿ ರಾಜ್ಯದ ಶ್ರೇಷ್ಠ ಪುರಸ್ಕಾರವಾದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸಮಾಜಮುಖಿ ಕಾರ್ಯಗಳನ್ನು ಹಾಗೂ ವಿವಿಧ ಸಂಶೋಧನೆಗಳನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಇವರ ಸಂಶೋಧನೆಗಳ ಫಲಿತಾಂಶವಾಗಿ ತಯಾರಾದ ಉತ್ಪನ್ನಗಳಿಗೆ ತಾವೆ ಹೆಸರನ್ನಿಟ್ಟು ಸಾಮಾನ್ಯರಿಗೆ ಪರಿಚಯಿಸುತ್ತಿದ್ದಾರೆ.
ಕೇಂದ್ರದಲ್ಲಿರುವ ಭಾರತೀಯ ಗೋ ತಳಿಗಳ ಸಂಗ್ರಹಣೆಗಳು
[ಬದಲಾಯಿಸಿ]ವಿವಿಧ ತಳಿಯ ಗೋವಿನ ಕೊಂಬುಗಳು, ಕಾಲುಗುರು, ಅಲಂಕಾರಿಕ ಸಾಮಾನುಗಳು, ಗೋವಿನ ವಿವಿಧ ಬಗೆಯ ಗೆಜ್ಜೆಗಳು, ಹಗ್ಗದ ಪ್ರಕಾರಗಳು, ವಿಭಿನ್ನ ಬಗೆಯ ಮೂಗುದಾರಗಳು, ಬಾಲದಿಂದ ತಯಾರಿಸಿದ ಬೀಸಣಿಗೆಗಳು, ಕೊಂಬಿನ ಕಹಳೆ, ಕೊಂಬಿನ ವಿವಿಧ ಕಲಾಕೃತಿಗಳು, ಚರ್ಮ ವಾಧ್ಯಗಳು, ಗೋಮಯ ಕಲಾಕೃತಿಗಳು ಮುಂತಾದವು ಇಲ್ಲಿನ ಸಂಗ್ರಹಗಳಾಗಿವೆ.
ಅಂಗೈಯಲ್ಲಿ ಔಷಧಿವನ
[ಬದಲಾಯಿಸಿ]ಕೇಂದ್ರದ ಹೊರಾಂಗಣದಲ್ಲಿ ಅಂಗೈಯಲ್ಲಿ ಔಷಧಿವನವೆಂಬ ಚಿಕ್ಕಾದಾದ ಕೈತೋಟವಿದೆ. ಅಲ್ಲಿ ಬೇವು, ಕಣಗಲು ಗಿಡ, ಎಕ್ಕ, ಗರಿಕೆ, ಅರಿಶಿನ, ನಿತ್ಯಪುಷ್ಪ, ಲಾವಂಚ, ಚಿತ್ರಮೂಲ, ಗರುಡಪಾತಾಳ, ದೊಡ್ಡಪತ್ರೆ, ಹೆದ್ದುಂಬೆ, ಮುಟ್ಟಿದರೆ ಮುನಿ, ವಿಳ್ಯದೆಲೆ, ಕಾಳುಮೆಣಸು, ಬಿಲ್ಪತ್ರೆ, ಬನ್ನಿ ವೃಕ್ಷ, ಶತಾವರಿ, ಮಧುನಾಶಿನಿ, ಅಮೃತ ಬಳ್ಳಿ, ತುಂಬೆ, ಅಡಿಕೆ ಶುಂಠಿ, ಲೋಳೇಸರ, ಪುದೀನ, ಒಂದೆಲಗ, ಚಿತ್ರಮೂಲ, ಸರ್ಪಗಂಧಿ, ನಾಯಿಕಬ್ಬು ಇಂತಹ ಔಷಧೀಯ ಗುಣವುಳ್ಳ ಹಲವಾರು ಸಸ್ಯಗಳನ್ನು ಬೆಳೆಯಲಾಗಿದೆ.
ವಿವಿಧ ಸಂಶೋಧನೆಗಳು
[ಬದಲಾಯಿಸಿ]ಗೋಮೂತ್ರದಿಂದ ದೇಶಿಯ ಗೊಬ್ಬರ ತಯಾರಿಕೆ
[ಬದಲಾಯಿಸಿ]ಗೋವುಗಳ ಮೂತ್ರ ಸಂಗ್ರಹವಾಗುವಂತೆ ಕೊಟ್ಟಿಗೆಯ ಯಾವುದಾದರೂ ಮೂಲೆಯಲ್ಲಿ ಗುಂಡಿ ನಿರ್ಮಾಣ ಮಾಡಬೇಕು. ಅದರಲ್ಲಿ ಜರಡಿ ಮಾಡಿದ ಚಿಕ್ಕದಾದ ಮರಳನ್ನು ಹಾಕಬೇಕು. ಹೀಗೆ ಶೇಕರಣೆಯಾದ ಗೋಮೂತ್ರ ಮಿಶ್ರಿತ ಮರಳನ್ನು ೧೫ ದಿನಗಳ ನಂತರ ಚೆನ್ನಾಗಿ ಕಲೆಸಿಕೊಳ್ಳಬೇಕು. ನಂತರ ಅದನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಸಂರಕ್ಷಿಸಬೇಕು. ಮಲೆನಾಡು ಗಿಡ್ಡ ತಳಿಯ ಗೋಮೂತ್ರದಲ್ಲಿ ಅನ್ಯ ತಳಿಯ ಗೋವುಗಳ ಮೂತ್ರಕ್ಕಿಂತ ಹೆಚ್ಚು ನೈಟ್ರೋಜನ್ ಅಂಶವಿದ್ದು, ಉತ್ತಮ ಯೂರಿಯಾ ಗೊಬ್ಬರವಾಗಿ ಎಲ್ಲಾ ರೀತಿಯ ಬೆಳೆಗಳಿಗೂ ಬಳೆಸಬಹುದು.
ದೇಶಿಯ ಗೋವಿನ ಕೊಂಬಿನ ಗೊಬ್ಬರ
[ಬದಲಾಯಿಸಿ]ದೇಶಿಯ ಗೋವಿನ ಮರಣನಂತರ ಅದರ ಕೊಂಬುಗಳನ್ನು ಕತ್ತರಿಸಿ ಸಂಗ್ರಹಿಸಿಕೊಳ್ಳಬೇಕು. ಗೋವಿನ ಮರಣ ಯಾವುದೇ ಅನಾರೋಗ್ಯದಿಂದ ಸಂಭವಿಸಿರಬಾರದು. ಕೊಂಬುಗಳಲ್ಲಿ ರಂದ್ರವಿರದೆ, ಯಾವುದೇ ಬಣ್ಣ ಬಳಿದಿರದೆ ಶುಚಿಯಾಗಿರಬೇಕು. ಹೀಗೆ ನೈಸರ್ಗಿಕ ಆರೋಗ್ಯಯುತ ಕೊಂಬುಗಳಲ್ಲಿ ಕೇವಲ ಹುಲ್ಲು ನೀರನ್ನು ಅವಲಂಬಿಸಿ ಬದುಕುವ ನಾಟಿಹಸುವಿನ ಗೊಬ್ಬರ ತುಂಬಬೇಕು. ನಂತರ ಚೂಪಾದ ಕೊಂಬಿನ ಭಾಗವನ್ನು ಮೇಲ್ಮುಖ ಮಾಡಿ ಭೂಮಿಯಲ್ಲಿ ಹೂಳಬೇಕು. ಈ ಕಾರ್ಯಕ್ಕೆ ಅಕ್ಟೋಬರ್ ತಿಂಗಳು ಸೂಕ್ತವಾಗಿರುತ್ತದೆ. ಹೀಗೆ ಹೂತಿಟ್ಟ ಕೊಂಬುಗಳನ್ನು ಏಪ್ರಿಲ್ ತಿಂಗಳಿನಲ್ಲಿ ಹೊರತೆಗೆಯಬೇಕು. ಕೊಂಬನ್ನು ಅದರೊಳಗೆ ತುಂಬಿದ ಗೋಮಯ ಸಮೇತ ಸಣ್ಣಗೆ ಕುಟ್ಟಿ ಪುಡಿಮಾಡಿಕೊಳ್ಳಬೇಕು. ಈ ಪುಡಿಯ ತೇವಾಂಶ ಹೆಚ್ಚಿಸುವ ಸಲುವಾಗಿ ಮಣ್ಣಿನ ಮಡಿಕೆಯಲ್ಲಿ ತುಂಬಿಸಿಡಬೇಕು.
ಬಳಸುವ ವಿಧಾನ
[ಬದಲಾಯಿಸಿ]೩೦ಗ್ರಾಂ ಕೊಂಬಿನ ಗೊಬ್ಬರವನ್ನು ೧೩ ಲೀ ಬಾವಿ ಅಥವಾ ಬೋರಿನ ನೀರನ್ನೇ ಬಳಸಿ ಕಲೆಸಿಕೊಳ್ಳಬೇಕು. ಒಂದು ಎಕರೆ ಭೂಮಿಗೆ ಸಂಚಿಸಲು ಈ ಪ್ರಮಾಣ ಸೂಕ್ತ. ಹೀಗೆ ಪ್ರತಿ ಎಕರೆಗೂ ಇದೇ ಪ್ರಮಾಣದಲ್ಲಿ ಬೆರೆಸಿ ತಯಾರಿಸಿಕೊಳ್ಳಬೇಕು.ಹೀಗೆ ತಯಾರಾದ ಕೊಂಬಿನ ಗೊಬ್ಬರವನ್ನು ಪೈರು ಮಾಡುವ ಒಂದು ವಾರದ ಮೊದಲು ಸಿಂಪಡಿಸಬೇಕು. ಹುಣ್ಣಿಮೆಯ ಸಮಯದಲ್ಲಿ ರಾತ್ರಿಯ ಹೊತ್ತು ಚಂದ್ರನ ದೃಷ್ಟಿಯಿಂದ ಈ ಗೊಬ್ಬರ ಮತ್ತಷ್ಟು ಶಕ್ತಶಾಲಿಯಾಗುವ ಕಾರಣ ಇದು ಸಿಂಪಡಣೆಗೆ ಸೂಕ್ತ ಸಮಯ. ಕೊಂಬಿನ ಗೊಬ್ಬರದ ಸಿಂಪಡಣೆಯಿಂದ ಹೊಲಗದ್ದೆಗಳಲ್ಲಿ ಜೀವಾಣು ಶಕ್ತಿ ಹೆಚ್ಚಿ, ಎರೆಹುಳುಗಳ ಸಂತತಿ ದುಪ್ಪಟ್ಟಾಗಿ ಭೂಮಿ ಫಲವತ್ತತೆಯನ್ನು ಹೊಂದುತ್ತದೆ.
ಜೈವಿಕ ಕಳೆನಾಶಕ ತಯಾರಿಸುವ ವಿಧಾನ
[ಬದಲಾಯಿಸಿ]೩ಲೀ ನೀರಿನಲ್ಲಿ ೩ಕೆ.ಜಿ ಕಪ್ಪೆ ಚಿಪ್ಪಿನ ಸುಣ್ಣವನ್ನು ಬೇಯಿಸಿಕೊಳ್ಳಬೇಕು. ಬೆಂದ ನಂತರ ಅದಕ್ಕೆ ೭ಲೀ ನೀರು ಬೆರೆಸಿ ಬೆಳಿಗ್ಗೆ ಸಂಜೆ ಚನ್ನಾಗಿ ತಿರುಗಿಸಬೇಕು. ನಂತರ ೧೦ಲೀ ನೀರಿನಲ್ಲಿ ೪ಕೆ.ಜಿ ಉಪ್ಪನ್ನು ಕರಗಿಸಿ ೧೦ ಗಂಟೆಯ ನಂತರ ಸುಣ್ಣದ ತಿಳಿನೀರು ಸೋಸಿ ಬೇರ್ಪಡಿಸಿಕೊಳ್ಳಬೇಕು. ಹೀಗೆ ಬೆರ್ಪಡಿಸಿಕೊಂಡ ಉಪ್ಪು ಸುಣ್ಣ ಮಿಶ್ರಿತ ತಿಳೀನೀರಿಗೆ ಬೇವಿನ ಎಣ್ಣೆ, ಗೋಮೂತ್ರ ಎಲ್ಲವನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು. ಈ ಕಳೆನಾಶಕವನ್ನು ಸಿಂಪಡಿಸುವಾಗ ಗಿಡಗಳ ಕಾಂಡಕ್ಕೆ ತಗುಲದೆ ನೆಲಕ್ಕೆ ಮಾತ್ರ ಸಿಂಚಿತವಾಗುವಂತೆ ಎಚ್ಚರ ವಹಿಸಬೇಕು. ಇದನ್ನು ಬಳಸುವುದರಿಂದ ಕೇವಲ ಕಳೆ ನಾಶವಾಗುವುದು ಹಾಗೂ ಭೂಮಿಯ ಸೂಕ್ಷ್ಮಾಣು ಜೀವಾಣುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಗೋಮಯ ಸೊಳ್ಳೆಬತ್ತಿ/ ಧೂಪದ ಬತ್ತಿ
[ಬದಲಾಯಿಸಿ]೫೦೦ಗ್ರಾಂ ಒಣಗಿಸಿ ಪುಡಿಮಾಡಿಕೊಂಡ ಗೋವಿನ ಸಗಣಿಗೆ ೧೦೦ಗ್ರಾಂ ಗುಗ್ಗಳ, ೫೦ಗ್ರಾಂ ಸಾಮ್ರಾಣಿ, ೨೫ಗ್ರಾಂ ಕರ್ಪೂರ, ಕಹಿ ಬೇವಿನ ಸೊಪ್ಪಿನ ಪುಡಿ ೫೦ಗ್ರಾಂ, ತುಳಸಿ ಪುಡಿ ೫೦ಗ್ರಾಂ, ಟೊಮೇಟೋ ಸೊಪ್ಪಿನ ಪುಡಿ ೫೦ಗ್ರಾಂ ಹಾಗೂ ಲಕ್ಕಿ ಸೊಪ್ಪು ೫೦ಗ್ರಾಂ ಹಾಕಿ ಕಲೆಸಿ ಮುದ್ದೆ ತಯಾರಿಸಿಕೊಳ್ಳಬೇಕು. ನಂತರ ಇದನ್ನು ಬೇಕಾದ ಆಕಾರಕ್ಕೆ ತಂದು ಅಗರಬತ್ತಿಯಾಗಿ, ಸೊಳ್ಳೆಬತ್ತಿಯಾಗಿಯೂ ಉಪತೋಗಿಸಿಕೊಳ್ಳಬಹುದು. ಇದರ ಘಮ ಉಸಿರಾಟವನ್ನೂ ನಿರಾಳ ಮಾಡಿ ಆರೋಗ್ಯ ಕಾಪಾಡುತ್ತದೆ.
ನೋವಿನ ಎಣ್ಣೆ
[ಬದಲಾಯಿಸಿ]೫೦೦ಮಿ ಗೋಮೂತ್ರಕ್ಕೆ ೫೦೦ಮಿ ಹೊಂಗೆ ಎಣ್ಣೆ, ೫೦೦ಮಿ ಲಕ್ಕಿ ಸೊಪ್ಪಿನ ರಸ, ೨೫ಗ್ರಾಂ ಪಚ್ಚ ಕರ್ಪೂರ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಬೇಕು. ಇದನ್ನು ಮಂಡಿನೋವು, ಕೀಲುನೋವು, ಮೂಳೆ ನೋವು ಇತ್ಯಾದಿಗಳಿಗೆ ನೋವಿನೆಣ್ಣೆಯಾಗಿ ಉಪಯೋಗಿಸಿದಲ್ಲಿ ನಿಧಾನವಾದರು ಸರಿ ನೈಸರ್ಗಿಕವಾಗಿ ಗುಣಪಡಿಸುತ್ತದೆ.
ನೇತ್ರ ಬಿಂದು
[ಬದಲಾಯಿಸಿ]೧ಲೀ ಗೋಮೂತ್ರಕ್ಕೆ ೫೦ಗ್ರಾಂ ಲೋಳೆ ಸರ, ೨೫ಗ್ರಾಂ ಗುಲಾಬಿಧಳ ಹಾಗೂ ೨೫ಗ್ರಾಂ ಗೋವಿನ ತುಪ್ಪ ಬೆರೆಸಿದ ಮಿಶ್ರಣವನ್ನು ಒಂದು ಸೀಶೆಯಲ್ಲಿ ಸಂಗ್ರಹಿಸಿಟ್ಟರೆ ಕಣ್ಣಿನ ತೊಂದರೆಗೆ ಔಷಧಿಯಾಗಿ ಬಳಸಿಕೊಳ್ಳಬಹುದು.
ಗೋಅಂಜನ
[ಬದಲಾಯಿಸಿ]೫೦ಗ್ರಾಂ ಗೋವಿನ ತುಪ್ಪಕ್ಕೆ ೫೦ಗ್ರಾಂ ಜೇನು ಮೇಣ, ೫೦ಗ್ರಾಂ ತೆಂಗಿನೆಣ್ಣೆ, ೨೦ಗ್ರಾಂ ಉಂಡೆ ಕರ್ಪೂರ, ೨೦ಗ್ರಾಂ ಪಚ್ಚ ಕರ್ಪೂರ, ೨೦ಗ್ರಾಂ ಅಜ್ವಾನ್ ಸಾಸ್, ೨೦ಗ್ರಾಂ ನೀಲಗಿರಿ ಎಣ್ಣೆ ಬೆರೆಸಿ ತಯಾರಾದ ಮಿಶ್ರಣವನ್ನು ತಲೆನೋವಿನ ಸಮಯದಲ್ಲಿ ಅಂಜನವಾಗಿ ಲೇಪಿಸಿಕೊಳ್ಳುವುದರಿಂದ ಉಲ್ಲಾಸವಾಗುತ್ತದೆ.
ಹಲ್ಲು ಪುಡಿ
[ಬದಲಾಯಿಸಿ]ಗೋವಿನ ಸೆಗಣಿಯಿಂದ ಬೆರಣಿ ತಯಾರಿಸಿಕೊಂಡು ಅದನ್ನು ಉರಿಸಿ ಮಸಿಮಾಡಿಕೊಳ್ಳಬೇಕು. ೫೦೦ಗ್ರಾಂ ಗೋಮಯದ ಕಪ್ಪು ಮಸಿಗೆ ೫೦ಗ್ರಾಂ ಅಡಿಗೆ ಉಪ್ಪು, ೫೦ಗ್ರಾಂ ಸೈಂದವಣ, ೧೦ಗ್ರಾಂ ಕಾಳುಮೆಣಸಿನ ಪುಡಿ, ೨೦ಗ್ರಾಂ ಲವಂಗದ ಪುಡಿ, ೧೦ಗ್ರಾಂ ಪಚ್ಚ ಕರ್ಪೂರ, ಹಾಗೂ ೧೦ಗ್ರಾಂ ಸ್ಪಟಿಕ ಸೇರಿಸಿ ಮಿಶ್ರಿತ ಪುಡಿ ತಯಾರಿಸಿಕೊಳ್ಳಬೇಕು.
ಗೋಮುಲಾಮು
[ಬದಲಾಯಿಸಿ]೧ಲೀ ಗೋಮೂತ್ರಕ್ಕೆ ೫೦ಗ್ರಾಂ ಅರಿಶಿನ ಪುಡಿ, ೨೫ಗ್ರಾಂ ಕಾಡು ಜೀರಿಗೆ ಹಾಗೂ ೨೦ಗ್ರಾಂ ಕಾಳು ಮೆಣಸಿನ ಪುಡಿ ಬೆರೆಸಿ ತಯಾರಿಸಿದ ಕಣಕವನ್ನು ಮುಲಾಮಿನಂತೆ ಲೆಪಿಸಿಕೊಳ್ಳಬಹುದು.
ಕುಂಕುಮ
[ಬದಲಾಯಿಸಿ]೧೦೦ಗ್ರಾಂ ಗೋವಿನ ತುಪ್ಪಕ್ಕೆ ೧ಕೆ.ಜಿ ಅರಿಶಿನದ ಕೊನೆ, ೭೫೦ಮಿ ನಿಂಬೆರಸ ಬೆರೆಸಬೇಕು ಅದಕ್ಕೆ ೧೫೦ಗ್ರಾಂ ಬಿಳಿಗಾರ ಹಾಗೂ ೨೦ಗ್ರಾಂ ಪಚ್ಚ ಕರ್ಪೂರ ಕೂಡಿಸಿ ಪುಡಿ ತಯಾರಿಸಿದರೆ ನೈಸರ್ಗಿಕ ಕುಂಕುಮ ಸಿದ್ಧವಾಗುತ್ತದೆ.
ಕೇಶ ತೈಲ
[ಬದಲಾಯಿಸಿ]೨೫೦ಗ್ರಾಂ ಗೋಮೂತ್ರಕ್ಕೆ ೨೫೦ಗ್ರಾಂ ಕೊಬ್ಬರಿ ಎಣ್ಣೆ, ೨೫೦ಗ್ರಾಂ ಎಳ್ಳೆಣ್ಣೆ, ೧೦೦ಗ್ರಾ ಹರಳೆಣ್ಣೆ, ೫೦ಗ್ರಾಂ ಬೃಂಗರಾಜ, ೫೦ಗ್ರಾಂ ಕರಿಬೇವು, ೧೦೦ಗ್ರಾಂ ನೆಲ್ಲಿಕಾಯಿ ರಸ, ೨೦ಗ್ರಾಂ ಬಾದಾಮಿ ಬೀಜ, ೧೦೦ಗ್ರಾಂ ಆಲದ ಬೇರು, ೧೦೦ ಸೌತೆಕಾಯಿ ರಸ ಹಾಗೂ ೨೦ಗ್ರಾಂ ಪಚ್ಚ ಕರ್ಪೂರ ಇವೆಲ್ಲವನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಕೇಶ ತೈಲವಾಗಿ ಬಳಸುವುದರಿಂದ ಕೇಶವೂ ಸಂಮೃದ್ಧಿಯಾಗಿ ಬೆಳೆಯುತ್ತದೆ.
ಕಪ್ಪು ಪೆನಾಯಲ್
[ಬದಲಾಯಿಸಿ]೧ಲೀ ಗೋಮೂತ್ರಕ್ಕೆ ಸಮಪ್ರಮಾಣವಾಗಿ [[ಕರಿಬೇವಿನ ಮರ |ಕಹಿಬೇವಿನ]] ರಸವನ್ನು ಬೆರೆಸಬೇಕು. ನಂತರ ಅದಕ್ಕೆ ೨೦೦ಗ್ರಾಂ ದೇವದಾರು ಎಣ್ಣೆ, ೨೫ಮಿ ನೀಲಗಿರಿ ಎಣ್ಣೆ ಬೆರೆಸಿ ತಯಾರಿಸಿಕೊಂಡ ಮಿಶ್ರಣವನ್ನು ಶುಚಿ ಮಾಡುವ ದ್ರವವನ್ನಾಗಿ ಬಳಸಿಕೊಳ್ಳಬಹುದು.
ಕೇಶಶಾಂಪು
[ಬದಲಾಯಿಸಿ]೨ಲೀ ಗೋಮೂತ್ರಕ್ಕೆ ೧೦೦ಗ್ರಾಂ ಸೀಗೆ ಹುಡಿ, ೫೦ಗ್ರಾಂ ಅಂಟುವಾಳ, ೫೦ಗ್ರಾಂ ಮುತ್ತಿನೆಲೆ ಕಣಕ ಹಾಗೂ ೫೦ಗ್ರಾಂ ಲೋಳೆರಸ ಬೆರೆಸಿ ತಯಾರಿದ ಮಿಶ್ರಣವನ್ನು ತಲೆಗೆ ಶಾಂಪುವನ್ನಾಗಿ ಬಳಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ https://www.prajavani.net/district/chikkamagaluru/%E0%B2%A6%E0%B2%BE%E0%B2%B0%E0%B2%A6%E0%B2%B9%E0%B2%B3%E0%B3%8D%E0%B2%B3%E0%B2%BF-%E0%B2%AA%E0%B2%B6%E0%B3%81%E0%B2%9A%E0%B2%BF%E0%B2%95%E0%B2%BF%E0%B2%A4%E0%B3%8D%E0%B2%B8%E0%B3%86-%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%97%E0%B3%8B-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B0%E0%B3%82%E0%B2%AA-%E0%B2%A6%E0%B2%B0%E0%B3%8D%E0%B2%B6%E0%B2%A8-2104999