ಎಚ್. ಜಿ. ಶ್ರೀನಿವಾಸಮೂರ್ತಿ
ಎಚ್. ಜಿ. ಶ್ರೀನಿವಾಸಮೂರ್ತಿ (1918-) ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಆಕಾಶವಿಜ್ಞಾನಿ.[೧] ಎಚ್. ಜಿ. ಎಸ್. ಮೂರ್ತಿ ಎಂದು ಪ್ರಖ್ಯಾತರು. ಹೊಳೆನರಸೀಪುರ ಗೋವಿಂದ ಶ್ರೀನಿವಾಸಮೂರ್ತಿ ಎಂಬುದು ಇವರ ಪೂರ್ಣ ಹೆಸರು.
ಜೀವನ
[ಬದಲಾಯಿಸಿ]ಇವರು 1918 ಅಕ್ಟೋಬರ್ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಟರ್‌ಮೀಡಿಯೆಟ್ ತನಕ ಮೈಸೂರಿನಲ್ಲಿ ಓದಿ, ಬಳಿಕ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಓದಿ ಬಿ.ಇ. (ಮೆಕ್ಯಾನಿಕಲ್ ಎಂಜಿನಿಯರಿಂಗ್) ಪದವೀಧರರಾದರು (1940). ಮುಂಬಯಿಯ ಭಾಭಾ ಪರಮಾಣು ಕೇಂದ್ರದಲ್ಲಿ ಆಕಾಶ ಯೋಜನೆಯ ವಿಭಾಗದಲ್ಲಿ ತಪಾಸಣೆ ನಿರ್ದೇಶಕರಾಗಿ (ಟೆಸ್ಟ್ ಡೈರೆಕ್ಟರ್) ವಿಕ್ರಮ್ ಸಾರಾಭಾಯಿಯವರ ತಂಡವನ್ನು ಸೇರುವ (1963) ಮೊದಲು ಹಿಂದುಸ್ಥಾನ್ ಏರೋನಾಟಿಕ್ಸ್ ಮತ್ತು ಆರ್ಡ್ನೆನ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿದ್ದರು. ಅದೇ ವೇಳೆ ಇವರು ಯುದ್ಧಾಸ್ತ್ರಗಳು ಹಾಗೂ ರಾಕೆಟ್‌ಗಳು ಎಂಬ ವಿಚಾರ ಕುರಿತ ಪ್ರೌಢ ತರಬೇತಿಯನ್ನು ಸ್ವಿಟ್ಸರ್ಲೆಂಡಿನಲ್ಲಿ ಪಡೆದರು (1950).
ಇವರು ಕೇರಳದಲ್ಲಿರುವ ತುಂಬಾ ಸಮಭಾಜಕೀಯ ರಾಕೆಟ್ ಉಡಾವಣಾ ಕೇಂದ್ರದ (ತುಂಬಾ ಈಕ್ವೆಟೋರಿಯಲ್ ರಾಕೆಟ್ ಲಾಂಚಿಂಗ್ ಸೆಂಟರ್) ನಿರ್ದೇಶಕರಾಗಿದ್ದರು.[೨][೩][೪][೫][೬][೭] ಇದೇ ಅವಧಿಯಲ್ಲಿ ತುಂಬಾದಲ್ಲಿನ ಆಕಾಶವಿಜ್ಞಾನ ಮತ್ತು ತಂತ್ರವಿದ್ಯಾಕೇಂದ್ರದ (ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಸೆಂಟರ್) ಸಹ ನಿರ್ದೇಶಕರಾಗಿಯೂ ಇದ್ದರು. ವಿಶ್ವಸಂಸ್ಥೆ ಪ್ರವರ್ತಿಸಿದ ಪ್ರಥಮ ಅಂತಾರಾಷ್ಟ್ರೀಯ ರಾಕೆಟ್ ಉಡಾವಣಾ ಸೌಕರ್ಯವನ್ನು (ರಾಕೆಟ್ ಲಾಂಚಿಂಗ್ ಫೆಸಿಲಿಟಿ) ತುಂಬಾದಲ್ಲಿ ಸ್ಥಾಪಿಸಿದ ಹಿರಿಮೆ ಇವರದು. ಅಮೆರಿಕ ಸಂಯುಕ್ತ ಸಂಸ್ಥಾನ, ಸೋವಿಯತ್ ಒಕ್ಕೂಟ, ಫ್ರಾನ್ಸ್, ಬ್ರಿಟನ್, ಜಪಾನ್ ಹಾಗೂ ಪಶ್ಚಿಮ ಜರ್ಮನಿ ಈ ರಾಷ್ಟ್ರಗಳೊಡನೆ ವೈಜ್ಞಾನಿಕ ಪ್ರಯೋಗ ಕಾರ್ಯಕ್ರಮಗಳನ್ನು ಏರ್ಪಡಿಸುವ ಹೊಣೆ ಇವರದಾಗಿತ್ತು. ತುಂಬಾದಲ್ಲಿ ರಾಕೆಟ್ ತಯಾರಿಕಾ ಘಟಕವನ್ನೂ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾವಣಾ ಸೌಕರ್ಯವನ್ನೂ (ಸ್ಯಾಟೆಲೈಟ್ ಲಾಂಚಿಂಗ್ ಫೆಸಿಲಿಟಿ) ಸ್ಥಾಪಿಸುವುದರಲ್ಲಿ ಭಾಗಿಯಾಗಿದ್ದರು. ಶ್ರೀಹರಿಕೋಟಾ ಠಾಣ್ಯದ ನಿರ್ದೇಶಕರಾಗಿ ಹಾಗೂ ಭಾರತೀಯ ರಾಕೆಟ್ ಸಂಘದ ಸ್ಥಾಪಕ ಸದಸ್ಯ ಮತ್ತು ನಿರ್ವಾಹಕ ಕಾರ್ಯದರ್ಶಿಯಾಗಿ ಕೂಡ ಕೆಲಸ ಮಾಡಿದ್ದಾರೆ. 1972ರಲ್ಲಿ ಇವರ ಸೇವೆಯನ್ನು ವಿಶ್ವಸಂಸ್ಥೆಗೆ ಎರವಲು ನೀಡಲಾಗಿತ್ತು. ಆಕಾಶಾನ್ವೇಷಣೆಯ ಗಳಿಕೆಗಳು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳಿಗೆ, ತತ್ರಾಪಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಒದಗುವಂತೆಯೂ ಬಾಹ್ಯಾಕಾಶದ ಶಾಂತಿಯುತ ಉಪಯೋಗಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ಏರ್ಪಡುವಂತೆಯೂ ಆಕಾಶಾನ್ವಯಗಳ ಕಾರ್ಯಕ್ರಮವನ್ನು ಯೋಜಿಸಿ ನಿರ್ದೇಶಿಸುವುದು ಮೂರ್ತಿಯವರ ಹೊಣೆಗಾರಿಕೆಯಾಗಿತ್ತು.
ಭಾರತ ಸರ್ಕಾರ ಇವರಿಗೆ 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.[೮][೯] ಇವರು ಇಂಟರ್‌ನ್ಯಾಶನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ನಿನ ಉಪಾಧ್ಯಕ್ಷರಾಗಿದ್ದರು (1971-72).
ಉಲ್ಲೇಖಗಳು
[ಬದಲಾಯಿಸಿ]- ↑ Tzovaras, UN Photo/Michos (October 11, 1977). "Agreement Between Government of India and UN on Joint UN/UNESCO Panel Meeting". www.unmultimedia.org.
- ↑ "Gone too soon". The Week.
- ↑ "40 Years of Indian Space Program" (PDF). Space India. Indian Space Research Organisation. 2003. Archived from the original (PDF) on 2021-08-12. Retrieved 2023-06-02.
- ↑ "Archive Website". Bureau of Indian Standards.
- ↑ Subbaraya, B.H. (July 1968). Langmuir Probeof the Lower Equatorial Ionosphere at Thumba (PDF) (Thesis). Archived from the original (PDF) on 2022-03-19. Retrieved 2023-06-02.
- ↑ Murthy, H. G. S. (July 11, 1970). "Space Programme in India". In Partel, G. A. (ed.). Space Engineering. Astrophysics and Space Science Library. Vol. 15. Springer Netherlands. pp. 645–649. doi:10.1007/978-94-011-7551-7_44. ISBN 978-94-011-7553-1 – via Springer Link.
- ↑ "ISRO rising". Frontline. 23 January 2015.
- ↑ "The Gazette of India No. 221" (PDF). 26 January 1968. Retrieved 11 April 2023.
- ↑ "MINISTRY OF HOME AFFAIRS (Public Section) Padma Awards Directory (1954-2017)" (PDF). India Ministry of Home Affairs. Retrieved November 12, 2022.