ಹಿಂದೂ ಧರ್ಮದಲ್ಲಿ ದೇವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಏಕದೇವತಾವಾದದಲ್ಲಿ, ದೇವರ ಪರಿಕಲ್ಪನೆ ಒಂದು ಪಂಥದಿಂದ ಮತ್ತೊಂದಕ್ಕೆ ಬದಲಾಗುತ್ತದೆ. ಹಿಂದೂ ಧರ್ಮವು (ಸೈದ್ಧಾಂತಿಕ ಧಾರ್ಮಿಕ ವರ್ಗದ ಬದಲು ಪ್ರಾದೇಶಿಕವಾಗಿರುವ ಅದರ ಸ್ವರೂಪದಿಂದ) ಪ್ರತ್ಯೇಕವಾಗಿ ಏಕದೇವತಾವಾದಿಯಲ್ಲ, ಮತ್ತು ಏಕದೇವೊಪಾಸನೆ, ಏಕದೇವತಾವಾದ, ಬಹುದೇವತಾವಾದ, ಸರ್ವಬ್ರಹ್ಮಾಂಡವಾದ, ಸರ್ವೇಶ್ವರವಾದ, ಸರ್ವದೇವವಾದ, ಏಕತತ್ವವಾದ, ನಿರೀಶ್ವರವಾದ ಮತ್ತು ಅದೇವತಾವಾದ ಇತ್ಯಾದಿಗಳ ವ್ಯಾಪಕ ಶ್ರೇಣಿಯನ್ನು ವ್ಯಾಪಿಸಿರುವಂಥದ್ದು ಎಂದು ವಿವರಿಸಲ್ಪಟ್ಟಿದೆ.[೧]

ಅದ್ವೈತದ ತತ್ವಶಾಸ್ತ್ರೀಯ ಪದ್ಧತಿ ಹಿಂದೂ ತತ್ವಶಾಸ್ತ್ರವೇದಾಂತ ಪರಂಪರೆಯಲ್ಲಿ ಹೆಚ್ಚಾಗಿ ಬೆಳೆಯಿತು. ಅದ್ವೈತವನ್ನು ಉಪನಿಷತ್ತುಗಳಲ್ಲಿ ವಿಶೇಷವಾಗಿ ವರ್ಣಿಸಲಾಗಿದೆ ಮತ್ತು ೯ನೇ ಶತಮಾನದಲ್ಲಿ ಆದಿ ಶಂಕರರು ಇದನ್ನು ಜನಪ್ರಿಯಗೊಳಿಸಿದರು. ಹಿಂದೂ ಧರ್ಮವು ಮಧ್ಯಕಾಲೀನ ಯುಗದಲ್ಲಿ ಅಭಿವೃದ್ಧಿಗೊಂಡಂತೆ, ಅದ್ವೈತವು ಮುಖ್ಯವಾಹಿನಿ ಹಿಂದೂ ಧರ್ಮದ ಆಧಾರವಾಯಿತು. ಅದ್ವೈತವು ಆತ್ಮದ ಗುರುತನ್ನು ಬ್ರಹ್ಮನ್‍ನೊಂದಿಗೆ ಪ್ರತಿಪಾದಿಸುತ್ತದೆ. ಅದ್ವೈತವನ್ನು ಏಕತತ್ವವಾದ ಅಥವಾ ಸರ್ವೇಶ್ವರವಾದವೆಂದು ವರ್ಣಿಸಬಹುದು.

ಸ್ಪಷ್ಟ ಏಕದೇವತಾವಾದದ ರೂಪಗಳು ಅಂಗೀಕೃತ ಭಗವದ್ಗೀತೆಯಲ್ಲಿ ಉಲ್ಲೇಖಿಸಲ್ಪಟ್ಟಿವೆ. ಮಧ್ಯಕಾಲೀನ ಯುಗದ ಮುಂಚಿನ ಅವಧಿಯಲ್ಲಿ, (ಶಿವ ಅಥವಾ ವಿಷ್ಣುವಿನ ರೂಪದಲ್ಲಿ) ಒಂದೇ ಬಾಹ್ಯ ಮತ್ತು ವ್ಯಕ್ತಿಗತ ದೇವತೆಗೆ ಭಾವನಾತ್ಮಕ ಅಥವಾ ಭಾವಪರವಶ ಭಕ್ತಿಯ ರೂಪದಲ್ಲಿ ಸ್ಪಷ್ಟ ಏಕದೇವತಾವಾದ ದಕ್ಷಿಣ ಭಾರತದಲ್ಲಿ ಜನಪ್ರಿಯವಾಯಿತು. ಕೃಷ್ಣನ ಪರ ಭಾವಪರವಶ ಭಕ್ತಿಯು ಭಾರತದಾದ್ಯಂತ ಮಧ್ಯಕಾಲೀನ ಯುಗಗಳಲ್ಲಿ ಜನಪ್ರಿಯತೆ ಗಳಿಸಿತು ಮತ್ತು ವೈಷ್ಣವ ಪಂಥದ ಹುಟ್ಟಿಗೆ ಕಾರಣವಾಯಿತು. ದುರ್ಗೆಯ ಪರ ಭಾವಪರವಶ ಭಕ್ತಿಯು ಮಧ್ಯಕಾಲೀನ ಯುಗದ ಕೊನೆಯ ಅವಧಿಯಲ್ಲಿ ಮತ್ತು ಆಧುನಿಕ ಯುಗದ ಮುಂಚಿನಲ್ಲಿ ಭಾರತದ ಕೆಲವು ಭಾಗಗಳಲ್ಲಿ ಜನಪ್ರಿಯವಾಯಿತು.

ವೈಷ್ಣವ ಪಂಥ, ಶಾಕ್ತ ಪಂಥ, ಮತ್ತು ಶೈವ ಪಂಥದ ಕೆಲವು ರೂಪಗಳು ಹಿಂದೂ ಧರ್ಮದಲ್ಲಿ ವ್ಯಕ್ತಿಗತ ದೇವರ ಏಕದೇವತಾವಾದಿ ಆರಾಧನೆಯ ಅತ್ಯಂತ ಸ್ಪಷ್ಟ ರೂಪಗಳಾಗಿ ಉಳಿದಿವೆ. ಶೈವ ಪಂಥದಲ್ಲಿರುವಂತಹ ಇತರ ಹಿಂದೂಗಳು ಒಂದೇ ದೇವರ ಅಸ್ತಿತ್ವವನ್ನು ಭಾವಿಸುವತ್ತ ಪ್ರವೃತ್ತರಾಗಿದ್ದಾರೆ, ಆದರೆ ಅಗತ್ಯವಾಗಿ ದೇವರನ್ನು ವ್ಯಕ್ತಿತ್ವದ ಅಂಶಗಳೊಂದಿಗೆ ಸಂಬಂಧಿಸುವುದಿಲ್ಲ. ಬದಲಾಗಿ ಅವರು ದೇವರನ್ನು ಭಾಗಶಃ ಮಾನವ ರೂಪದಲ್ಲಿ ಮಾತ್ರ ಆರಾಧಿಸಬಹುದಾದ ನಿರಾಕಾರ ಪರಬ್ರಹ್ಮನಾಗಿ ಕಲ್ಪಿಸುತ್ತಾರೆ.

ಈಶ್ವರ ಪದವು ಸಂದರ್ಭವನ್ನು ಅವಲಂಬಿಸಿ, ಹಿಂದೂ ಧರ್ಮದಲ್ಲಿನ ಯಾವುದೇ ಏಕದೇವತಾವಾದಿ ಅಥವಾ ಏಕತತ್ವವಾದಿ ಪರಿಕಲ್ಪನೆಗಳನ್ನು ಸೂಚಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Rogers, Peter (2009), Ultimate Truth, Book 1, AuthorHouse, p. 109, ISBN 978-1-4389-7968-7