ಅಚ್ಚುಮೊಳೆಯ ಲೋಹ
ಮುದ್ರಣಕಲೆಯ ಇತಿಹಾಸವನ್ನು ಅವಲೋಕಿಸಿದರೆ ಮುದ್ರಣಕ್ಕೆ ಲೋಹದಿಂದ ಮಾಡಿದ ಅಚ್ಚಿನ ಮೊಳೆಗಳನ್ನು ಉಪಯೋಗಿಸುವ ಮೊದಲು ಕಲ್ಲು ಮತ್ತು ಮರಗಳ ಮೇಲೆ ಕೆತ್ತನೆ ಮಾಡಿ ಮುದ್ರಿಸುತ್ತಿದ್ದರೆಂಬ ವಿಷಯ ತಿಳಿಯುತ್ತದೆ. ಎರಕದ ಅಚ್ಚನ್ನು ಕಂಡುಹಿಡಿದ ಮೇಲೆ. ಈ ಕೆಲಸಕ್ಕೆ ಸೀಸ ಬಹಳ ಉಪಯುಕ್ತ ಲೋಹ ಎಂಬುದನ್ನು ಮನಗಂಡರೂ ಮೊಟ್ಟ ಮೊದಲು ಯಾವ ಲೋಹವನ್ನು ಉಪಯೋಗಿಸಿ ಮೊಳೆಗಳನ್ನು ತಯಾರಿಸಿದರು ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಬಹುಶಃ ಬಿಸ್ಮತ್ ಎಂಬ ಮೂಲ ಲೋಹವನ್ನು ಮೊದಲ ಪ್ರಯೋಗಗಳಲ್ಲಿ ಬಳಸಿರಬಹುದು.[೧]
ಮೊಳೆಯ ಲೋಹ
[ಬದಲಾಯಿಸಿ]ಮೊಳೆಯ ಲೋಹ ಕಡಿಮೆ ಶಾಖದಲ್ಲಿ ಕರಗಬೇಕು. ಕರಗಿದ ಲೋಹ ಎರಕ ಹೊಯ್ಯುವಾಗ ಯಾವ ಅಡಚಣೆಗಳಿಗೂ ಒಳಗಾಗದೆ ಸರಾಗವಾಗಿ ಹರಿಯಬೇಕು. ಲೋಹ ಅಕ್ಷರಮುಖದ ಪೂರ್ಣ ಎರಕಕ್ಕೆ ತಕ್ಕದ್ದಾಗಿರಬೇಕು. ಅಚ್ಚಿನ ಒತ್ತಡವನ್ನು ತಡೆಯುವ ಶಕ್ತಿ ಲೋಹಕ್ಕಿರಬೇಕು. ಬಹುಬೇಗ ಸವೆದು ಹೋಗಬಾರದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲೋಹವಿದ್ಯೆಯಲ್ಲಿ ಪಳಗಿದವರು ಸಂಶೋಧನೆ ನಡೆಸಿ ಸೀಸ, ತವರ ಮತ್ತು ಆಂಟಿಮೊನಿ ಉಚಿತ ಪ್ರಮಾಣದಲ್ಲಿರುವ ಮಿಶ್ರಲೋಹ ಅತ್ಯುತ್ತಮವಾದುದೆಂಬುದನ್ನು ಮನಗಂಡರು.ಸೀಸ 621º ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಬಹುಬೇಗ ತಣ್ಣಗಾಗುತ್ತದೆ. ಭೂಮಿಯಿಂದ ತೆಗೆದ ಸೀಸದ ಅದುರು ಸೀಸ ಮತ್ತು ಗಂಧಕದ ಮಿಶ್ರಣದಿಂದ ಕೂಡಿರುತ್ತದೆ. ಶುದ್ಧಿ ಮಾಡಿದ ಸೀಸ ಬಹಳ ಮೆತು. ಆದ್ದರಿಂದ ಅಕ್ಷರದ ಮುಖವನ್ನು ಸ್ಪಷ್ಟವಾಗಿ ಎರಕ ಮಾಡಲು ಯೋಗ್ಯವಾದ ಲೋಹವಲ್ಲ. ಆದ್ದರಿಂದ ಅಚ್ಚಿನ ಮೊಳೆಗೆ ಅದೊಂದೇ ಸರಿಯಾಗದು.ತವರ 449º ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಮೃದುವಾದ ಲೋಹವಾದರೂ ಸೀಸಕ್ಕಿಂತ ಹೆಚ್ಚು ಗಟ್ಟಿಯಾದ ಜಿಗುಟಾದ ಲೋಹ. ತವರವನ್ನು ಸೀಸದೊಡನೆ ಉಚಿತ ಪ್ರಮಾಣದಲ್ಲಿ ಸೇರಿಸಿದರೆ ಸೀಸ ಗಟ್ಟಿಯಾಗುವುದು ಮಾತ್ರವಲ್ಲದೆ ಒಡೆದು ಹೋಗುವ ಸ್ವಭಾವವನ್ನು ಕಳೆದುಕೊಳ್ಳುತ್ತದೆ. ಮುದ್ರಣಕಾಲದಲ್ಲಿ ಅಕ್ಷರಗಳು ಒಡೆದು ಹೋಗದಂತೆ ತಡೆಯುವ ಶಕ್ತಿಯನ್ನು ತವರ ಸೀಸಕ್ಕೆ ಕೊಡುತ್ತದೆ. ಲೋಹವನ್ನು ಕರಗಿಸುವಾಗ ತವರ ಆ ಲೋಹವನ್ನು ದ್ರವ ರೂಪಕ್ಕೆ ತರಲು ಕಾರಣವಾಗುವುದಲ್ಲದೆ ಅಕ್ಷರದ ಮುಖವನ್ನು ಅಂದವಾಗಿ ಎರಕ ಹೊಯ್ಯಲು ಸಹಾಯಕವಾಗುತ್ತದೆ.[೨]
ಲೈನೋಟೈಪ್ ಯಂತ್ರ
[ಬದಲಾಯಿಸಿ]ಆಂಟಿಮೊನಿ 1167º ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಭೂಮಿಯಿಂದ ತೆಗೆದ ಆಂಟಿಮೊನಿ ಅದುರಿನಲ್ಲಿ ಆಂಟಿಮೊನಿ ಮತ್ತು ಗಂಧಕದ ಮಿಶ್ರಣವಿರುತ್ತದೆ. ಪೆಡಸಾದ ಲೋಹವಾದರೂ ಕರಗಿ ಗಟ್ಟಿಯಾಗುವಾಗ ವಿಕಾಸಗೊಳ್ಳುವ ಗುಣವನ್ನು ಪಡೆದಿದೆ. ಉಚಿತ ಪ್ರಮಾಣದಲ್ಲಿ ಸೀಸದೊಡನೆ ಸೇರಿಸಿದರೆ ಸೀಸದ ಬಲವನ್ನು ವೃದ್ಧಿಪಡಿಸುವುದು ಮಾತ್ರವಲ್ಲದೆ ಅಕ್ಷರದ ಮುಖ ಅಂದವಾಗಿ ಎರಕವಾಗಲು ಸಹಾಯಕವಾಗುತ್ತದೆ.ಲೈನೋಟೈಪ್ ಯಂತ್ರದಲ್ಲಿ ಅಚ್ಚಿನ ಮೊಳೆ ಪಂಕ್ತಿಗಳನ್ನು ಎರಕ ಹೊಯ್ಯಲು 4% ಭಾಗ ತವರ 11 1/2% ಭಾಗ ಅಂಟಿಮೊನಿ ಮತ್ತು 84 1/2 % ಭಾಗ ಸೀಸವಿರುವ ಮಿಶ್ರಲೋಹವನ್ನು ಬಳಸುತ್ತಾರೆ. ಕರಗಿದ ಈ ಮಿಶ್ರಣ ಬಹುಬೇಗ ಗಟ್ಟಿಯಾಗುತ್ತದೆ. ಮೇಲೆ ಹೇಳಿದ್ದಕ್ಕಿಂತ ಕಡಿಮೆ ಪ್ರಮಾಣ ಆಂಟಿಮೊನಿ ಇರುವ ಮಿಶ್ರಲೋಹವನ್ನು ಉಪಯೋಗಿಸಿದರೆ ಎರಕದ ಪಂಕ್ತಿ ಬಹಳ ಮೃದುವಾಗುವುದರಿಂದ ಮುದ್ರಣ ಕಾರ್ಯಕ್ಕೆ ಯೋಗ್ಯವಾಗಿರುವುದಿಲ್ಲ. ಒಂದು ವೇಳೆ ಸಾಕಷ್ಟು ಪ್ರಮಾಣದ ತವರವಿಲ್ಲದ ಮಿಶ್ರಲೋಹವನ್ನು ಉಪಯೋಗಿಸಿದರೆ ಎರಕ ಹೊಯ್ದರೆ ಎರಕದ ಪಂಕ್ತಿ ಟೊಳ್ಳಾಗುವುದು ಮಾತ್ರವಲ್ಲದೆ ಅಕ್ಷರಗಳ ಮುಖ ಅಂದವಾಗಿ ಬರುವುದಿಲ್ಲ.
ಮಾನೋಟೈಪ್ ಯಂತ್ರ
[ಬದಲಾಯಿಸಿ]ಮಾನೋಟೈಪ್ ಯಂತ್ರದಲ್ಲಿ ಬಿಡಿ ಅಚ್ಚಿನ ಮೊಳೆಗಳನ್ನು ಎರಕ ಮಾಡಲು ಸಾಮಾನ್ಯವಾಗಿ 10% ಭಾಗ ತವರ, 16% ಭಾಗ ಆಂಟಿಮೊನಿ ಮತ್ತು 74% ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಅಂದರೆ ಲೈನೋಟೈಪ್ ಯಂತ್ರದಲ್ಲಿ ಉಪಯೋಗಿಸುವ ಲೋಹಕ್ಕಿಂತ ಗಟ್ಟಿಯಾದ ಮಿಶ್ರಲೋಹವನ್ನು, ಮಾನೋಟೈಪ್ ಯಂತ್ರದಲ್ಲಿ ಬಿಡಿ ಅಚ್ಚಿನ ಮೊಳೆಗಳನ್ನು ಎರಕ ಮಾಡಲು ಬಳಸಬೇಕು. ಸಾಮಾನ್ಯ ಕೆಲಸಕ್ಕೆ ಬೇಕಾಗುವ ಅಚ್ಚಿನ ಮೊಳೆಗಳನ್ನು ಮಾನೋಟೈಪ್ ಯಂತ್ರದಲ್ಲಿ ಎರಕ ಮಾಡಲು 6% ಭಾಗ ತವರ, 15% ಭಾಗ ಆಂಟಿಮೊನಿ, 79% ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುವುದುಂಟು. ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಅಚ್ಚು ಮಾಡಲು ಬೇಕಾದ ಅಚ್ಚಿನ ಮೊಳೆಗಳ ತಯಾರಿಕೆಗೆ 13% ಭಾಗ ತವರ, 17% ಭಾಗ ಆಂಟಿಮೊನಿ ಮತ್ತು 70% ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಹೆಚ್ಚು ಕಾಲ ಉಪಯೋಗಿಸಲು ಯೋಗ್ಯವಾದ ಅಲಂಕರಣ ಮುದ್ರಣಕ್ಕೆ ಬೇಕಾದ ಮೊಳೆಗಳನ್ನು ತಯಾರಿಸಲು 12% ಭಾಗ ತವರ, 24% ಭಾಗ ಆಂಟಿಮೊನಿ ಮತ್ತು 64% ಭಾಗ ಸೀಸದಿಂದ ಕುಡಿದ ಮಿಶ್ರಲೋಹವನ್ನು ಉಪಯೋಗಿಸಬೇಕು.
ಸ್ಟೀರಿಯೋ ಫಲಕ
[ಬದಲಾಯಿಸಿ]ಸ್ಟೀರಿಯೋ ಫಲಕಗಳನ್ನು ತಯಾರಿಸಲು 6.4% ಭಾಗ ತವರ, 13.95% ಭಾಗ ಆಂಟಿಮೊನಿ ಮತ್ತು 79.65% ಭಾಗ ಸೀಸವಿರುವ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಮಾನೋಟೈಪ್ ಯಂತ್ರಕ್ಕೆ ಉಪಯೋಗಿಸುವ 10% ಭಾಗ ತವರ, 16% ಭಾಗ ಆಂಟಿಮೊನಿ ಮತ್ತು 74% ಭಾಗ ಸೀಸವಿರುವ ಮಿಶ್ರಲೋಹವನ್ನು ಸ್ಟೀರಿಯೋ ಫಲಕಗಳನ್ನು ಮಾಡಲು ಉಪಯೋಗಿಸಬಹುದು. ಆದರೆ ಕಡಿಮೆ ಪ್ರಮಾಣದ ತವರ ಮತ್ತು ಆಂಟಿಮೊನಿ ಇರುವ ಮಿಶ್ರಲೋಹವನ್ನು ಈ ಕೆಲಸಕ್ಕೆ ಬಳಸುವುದು ಹೆಚ್ಚು ರೂಢಿಯಲ್ಲಿದೆ.ಯಂತ್ರಗಳಿಂದ ಎರಕ ಮಾಡಿ, ಜೋಡಿಸಿದ ಅಚ್ಚಿನ ಮೊಳೆಗಳನ್ನು ಯಾವುದಾದರೂ ಒಂದು ಕೆಲಸದ ಮುದ್ರಣ ಕಾರ್ಯ ಮುಗಿದ ಕೂಡಲೇ ಮೊಳೆ ಕಾಯಿಸುವ ಪಾತ್ರೆಗೆ ಸುರಿದು ಕರಗಿಸಿ ಹೊಸ ಮೊಳೆಗಳನ್ನು ತಯಾರಿಸುತ್ತಾರೆ. ಆದ್ದರಿಂದ ಯಂತ್ರಗಳಿಂದ ಎರಕ ಮಾಡಿ ಜೋಡಿಸುವ ಬಿಡಿ ಅಚ್ಚಿನ ಮೊಳೆಗಳಿಗೆ ಮತ್ತು ಎರಕದ ಪಂಕ್ತಿಗಳಿಗೆ ಹೆಚ್ಚು ಶಕ್ತಿಯುತವಾದ ಲೋಹವನ್ನು ಬಳಸುವುದಿಲ್ಲ. ಆ ಕೆಲಸಕ್ಕೆ ಸುಲಭವಾಗಿ ಕರಗಿಸಿ ಸರಾಗವಾಗಿ ಎರಕ ಮಾಡಲು ಉಚಿತವಾದ ಲೋಹವನ್ನು ಉಪಯೋಗಿಸುತ್ತಾರೆ. ಪದೇ ಪದೇ ಅದೇ ಲೋಹವನ್ನು ಅಚ್ಚಿನ ಮೊಳೆಗಳ ತಯಾರಿಕೆಗೆ ಕರಗಿಸುವಾಗ ಆಮ್ಲಜನಕದೊಡನೆ ಸಂಯೋಗವಾಗಿ ತವರ ಮತ್ತು ಆಂಟಿಮೊನಿ ಸೀಸಕ್ಕಿಂತ ಬಹು ಬೇಗ ದುರ್ಬಲವಾಗುತ್ತದೆ. ಆದ್ದರಿಂದ ಹೆಚ್ಚು ಹೆಚ್ಚು ಭಾಗ ತವರ ಮತ್ತು ಆಂಟಿಮೊನಿ ಇರುವ ಮಿಶ್ರಲೋಹವನ್ನು ಹಳೆಯ ಮಿಶ್ರ ಲೋಹಕ್ಕೆ ಬೆರೆಸಿ ಎರಕ ಮಾಡಬೇಕಾಗುತ್ತದೆ.ಕೈಯಿಂದ ಜೋಡಿಸುವ ಅಚ್ಚಿನ ಮೊಳೆಗಳಿಗೆ ಉಪಯೋಗಿಸುವ ಲೋಹ, ಯಂತ್ರಗಳಲ್ಲಿ ಜೋಡಿಸುವ ಅಚ್ಚಿನ ಮೊಳೆಗಳಿಗೆ ಉಪಯೋಗಿಸುವ ಲೋಹಕ್ಕಿಂತ ಶಕ್ತಿಯುತವಾಗಿರಬೇಕು. ಕೈಯಿಂದ ಜೋಡಿಸುವ ಅಚ್ಚಿನ ಮೊಳೆಗಳನ್ನು ದೀರ್ಘ ಕಾಲ ಬಳಸಬೇಕಾಗುವುದರಿಂದ ಈ ಮೊಳೆಗಳ ತಯಾರಿಕೆಗೆ 22% ಭಾಗ ತವರ, 27% ಭಾಗ ಆಂಟಿಮೊನಿ ಮತ್ತು 51% ಭಾಗ ಸೀಸವಿರುವ ಮಿಶ್ರಲೋಹವನ್ನು ಉಪಯೋಗಿಸಿದರೆ ಮೊಳೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಮುದ್ರಣ ಕೆಲಸದಲ್ಲಿ ಅಚ್ಚಿನ ಮೊಳೆಗಳ ಸವೆಯುವಿಕೆಯನ್ನು ತಡೆಗಟ್ಟಲು ಕೆಲವು ವೇಳೆ ಅಲ್ಪ ಪ್ರಮಾಣದ ತಾಮ್ರವನ್ನು ಮಿಶ್ರಲೋಹಕ್ಕೆ ಸೇರಿಸುವುದುಂಟು. ಸುಮಾರು 0.5% ಭಾಗದಿಂದ 1.5% ಭಾಗದವರೆಗೆ ತಾಮ್ರವನ್ನು ಮಿಶ್ರಲೋಹಕ್ಕೆ ಸೇರಿಸುತ್ತಾರೆ. ಉತ್ತಮ ದರ್ಜೆ ಮಿಶ್ರಲೋಹಕ್ಕೆ ಉಚಿತ ಪ್ರಮಾಣದಲ್ಲಿ ತಾಮ್ರವನ್ನು ಸೇರಿಸಿದರೆ ತಕ್ಕ ಫಲ ದೊರಕುವುದು. ಕಡಿಮೆ ದರ್ಜೆಯ ಮಿಶ್ರಲೋಹಕ್ಕೆ ತಾಮ್ರ ಬೆರೆಸಿದರೆ ತೊಂದರೆ ಹೆಚ್ಚು.
ಉಲ್ಲೇಖಗಳು
[ಬದಲಾಯಿಸಿ]