ವ್ಯಕ್ತನಮೂನೆ
ವ್ಯಕ್ತನಮೂನೆಯು (ಫೀನೊಟೈಪ್)[ಟಿಪ್ಪಣಿ ೧] ಜೀವಿಯೊಂದರ ಅವಲೋಕಿಸ ಬಹುದಾದ ಗುಣಗಳ ಮೊತ್ತ ಮತ್ತು ಇದು ಜೀವಿಯ ರಚನೆ, ಬೆಳವಣಿಗೆ, ಜೀವರಸಾಯನಿಕ ಅಥವಾ ದೈಹಿಕ ಕ್ರಿಯೆಗಳು, ರುತು ಸಂಬಂಧಿತ ಕ್ರಿಯೆಗಳು, ವರ್ತನೆಗಳು ಮತ್ತು ವರ್ತನೆಯ ಉಪ-ಉತ್ಪನ್ನಗಳನ್ನು (ಹಕ್ಕಿಯ ಗೂಡಿನಂತಹ) ಒಳಗೊಳ್ಳುತ್ತದೆ. ವ್ಯಕ್ತನಮೂನೆಯು ಜೀವಿಯ ವಂಶವಾಹಿಯ ಅಭಿವ್ಯಕ್ತಿ ಮತ್ತು ಪರಿಸರದ ಪ್ರಭಾವ ಮತ್ತು ಅವೆರಡರ ನಡುವಿನ ಅಂತರಕ್ರಿಯೆಯ ಪರಿಣಾಮ. ಒಂದು ಪ್ರಭೇದದ ಸಮುದಾಯದಲ್ಲಿ ಸ್ಪಷ್ಟವಾದ ವ್ಯತ್ಯಾಸಗಳುಳ್ಳ ಗುಣಗಳು ಇವೆಯೆಂದಾದರೆ ಆ ಪ್ರಭೇದವನ್ನು ಪಾಲಿಮಾರ್ಫ್ ಎಂದು ಕರೆಯಲಾಗುತ್ತದೆ
ಜೀವಿಯ ಜೀನ್ನಮೂನೆ ಅದರ ಜೀನೋಮ್ನಲ್ಲಿರುವ ಅನುವಂಶಿಕ ಸಂದೇಶಗಳು.
೧೯೧೧ರಲ್ಲಿ ವಿಲ್ಹೆಲ್ಮ್ ಜೊಹಾನಸನ್ ಜೀವಿಯ ಅನುವಂಶಿಕತೆ ಮತ್ತು ಅದು ಏನನ್ನು ಉತ್ಪಾದಿಸುತ್ತದೆ ಎಂಬುದರ ನಡುವೆ ವ್ಯತ್ಯಾಸ ಮಾಡಲು ಜೀನ್ನಮೂನೆ-ವ್ಯಕ್ತನಮೂನೆಗಳ ನಡುವೆ ವ್ಯತ್ಯಾಸದ ಚಿಂತನೆಯನ್ನು ಮುಂದಿಟ್ಟ.[೧][೨] ಈ ವ್ಯತ್ಯಾಸವು ಅಗಸ್ಟ್ ವೈಸಮನ್ ಮುಂದಿಟ್ಟ ಇಂತಹುದೇ ಸಲಹೆಯಾದ ಜೀವಾಂಕುರ ದ್ರವ್ಯ (ಜರ್ಮ್ ಪ್ಲಾಸಂ) ಮತ್ತು ದೈಹಿಕ ಜೀವಕೋಶಗಳ (ದೇಹ) ನಡುವಿನ ವ್ಯತ್ಯಾಸದ ಪ್ರಸ್ತಾಪವನ್ನು ಹೋಲುತ್ತಿತ್ತು.
ರಿಚರ್ಡ್ ಡಾವ್ಕಿನ್ಸ್ ೧೯೭೮ರಲ್ಲಿ[೩] ಮತ್ತು ನಂತದದಲ್ಲಿ ಮತ್ತೆ ತನ್ನ ಪುಸ್ತಕ ದಿ ಎಕ್ಸಟೆಂಡೆಡ್ ಫೀನೊಟೈಪ್ನಲ್ಲಿ ೧೯೮೨ರಲ್ಲಿ ಹಕ್ಕಿಗಳ ಗೂಡು ಮತ್ತು ಇತರ ಕ್ಯಾಡಿಸ್ ನೊಣಗಳ ಕೋಶಗಳಂತಹ ರಚನೆಗಳನ್ನು ಮತ್ತು ಬೀವರ್ ಅಡ್ಡಗಟ್ಟೆ [ಟಿಪ್ಪಣಿ ೨] ಮುಂತಾದವುಗಳನ್ನು “ಹಿಗ್ಗಿಸಿದ ವ್ಯಕ್ತನಮೂನೆ” ಎಂದು ಪರಿಗಣಿಸ ಬಹುದು ಎಂದು ಸೂಚಿಸುತ್ತಾರೆ.
ವ್ಯಾಖ್ಯಾನದ ಕಷ್ಟ
[ಬದಲಾಯಿಸಿ]ವ್ಯಕ್ತನಮೂನೆಯ ಬಗೆಗಿನ ವ್ಯಾಖ್ಯಾನ ನೇರ ಎಂದು ತೋರಿದಾಗ್ಯೂ ಈ ಪರಿಕಲ್ಪನೆಯ ಆಳದಲ್ಲಿ ಕೆಲವು ಸೂಕ್ಷ್ಮಗಳಿವೆ. ಈ ವ್ಯಾಖ್ಯಾನದ ಪ್ರಕಾರ ಆರ್ಎನ್ಎ ಮತ್ತು ಪ್ರೋಟೀನ್ಗಳ ಅಣುಗಳನ್ನೂ ಒಳಗೊಂಡು ಯಾವುದು ಜೀನ್ನಮೂನೆಯ ಮೇಲೆ ಆಧಾರ ಪಟ್ಟಿರುತ್ತದೆಯೊ ಅದೆಲ್ಲವೂ ವ್ಯಕ್ತನಮೂನೆ ಎಂದು ಭಾಸವಾಗುತ್ತದೆ. ಅನುವಂಶಿಕ ಪದಾರ್ಥ ಸಂಕೇತಿಸಿದ ಬಹಳಷ್ಟು ಅಣುಗಳು ಮತ್ತು ರಚನೆಗಳು ಜೀವಿಯ ಆಕೃತಿ ಅಥವಾ ರೂಪದಲ್ಲಿ ಕಾಣುವುದಿಲ್ಲ ಆದಾಗ್ಯೂ ಅವು ಅವಲೋಕಿಸ ಬಹುದಾದವು ಮತ್ತು ವ್ಯಕ್ತನಮೂನೆಯ ಭಾಗ.
ಮಾನವನ ರಕ್ತದ ಗುಂಪು ಇದಕ್ಕೊಂದು ಉದಾಹರಣೆ. ಇದು ಜೀವಿಗಳ ಮೇಲೆ ಕೇಂದ್ರೀಕೃತವಾಗುವ ಮೂಲ ಉದ್ಧೇಶದಿಂದ ಆಚೆ ಹೋಗುತ್ತದೆ ಎಂದು ಸೂಚಿತವಾಗಿದೆ. ಅಂದರೆ ವ್ಯಕ್ತನಮೂನಯ ಪರಿಕಲ್ಪನೆಗೆ ಸೂಕ್ತವಾದ ಜೈವಿಕ ಸಂಘಟನೆಯ ಹಂತವು ಜೀವಕೋಶ ಮಟ್ಟದಲ್ಲಿದೆ ಎಂದು ಅರ್ಥೈಸಬಹುದು. ಯಾವರೀತಿ ಅರ್ಥೈಸಿದಾಗಲೂ ವ್ಯಕ್ತನಮೂನೆ ಪದವು ತಾಂತ್ರಿಕ ಪದ್ಧತಿಯು ಕಾಣುವಂತೆ ಮಾಡುವ ಗುಣಗಳನ್ನು ಸಹ ಒಳಗೊಂಡಿರುತ್ತದೆ. ಈ ಚಿಂತನೆಯ ಗಮನಾರ್ಹ ವಿಸ್ತರಣೆ “ಸಾವಯವ ಅಣುಗಳು” ಅಥವಾ ಜೀವಿಗಳು ಕಿಣ್ವಗಳ ರಾಸಾಯನಿಕ ಕ್ರಿಯೆಗಳ ಮೂಲಕ ಉಂಟಾಗುವ ವಿಟಮಿನ್ಗಳಂತಹ ಚಯಾಪಚಯ ಉತ್ಪನ್ನಗಳ ಇರುವಿಕೆಯನ್ನು ಸಹ ಈ ವ್ಯಕ್ತನಮೂನೆಯ ಪಟ್ಟಿಗೆ ಸೇರಿಸ ಬಹುದು.
ವರ್ತನೆಯೂ ಅವಲೋಕಿಸ ಬಹುದಾದ ಗುಣವಾದ್ದರಿಂದ ಇನ್ನೊಂದು ವಿಸ್ತರಣೆಯು ವರ್ತನೆಯ ವ್ಯಕ್ತನಮೂನೆಗೆ ಸಂಬಂಧಿಸಿದೆ. ವರ್ತನೆಯ ವ್ಯಕ್ತನಮೂನೆಗಳು ರೋಗ ಸಹಲಕ್ಷಣಗಳ ವ್ಯಾಪ್ತಿಗೆ ಸಂಬಂಧಿಸಿದ ಕಾರಣಕ್ಕೆ ಅವುಗಳ ವೈದ್ಯಕೀಯ ಪ್ರಸ್ತತತೆ ಬಗೆಗೆ ಸಂಶೋಧನೆ ನಡೆಯುತ್ತಿದೆ.[೪][೫] ಕೆಲವೊಮ್ಮೆ “ವ್ಯಕ್ತನಮೂನೆ” ಪದವನ್ನು ತಪ್ಪಾಗಿ ವ್ಯತ್ಯಯನ ಉಂಟಾದ ಜೀವಿಯಲ್ಲಿ (ಬಹಳಷ್ಟು ಸಲ ಪ್ರಯೋಗಗಳಿಗೆ ಮಾದರಿ ಜೀವಿಯಾಗಿ ಬಳಸುವ ನಾಕ್ಓಟ್ ಇಲಿಗೆ ಸಂಬಂಧಿಸಿದಂತೆ) ಕಾಣಬರುವ ವ್ಯಕ್ತನಮೂನೆಗಳ ಬದಲಾವಣೆಗೆ ಸಂಕ್ಷಿಪ್ತವಾಗಿ ಬಳಸಲಾಗುತ್ತಿದೆ.[೬]
ವ್ಯಕ್ತನಮೂನೆಯ ವ್ಯತ್ಯಾಸ
[ಬದಲಾಯಿಸಿ]ವ್ಯಕ್ತನಮೂನೆಯ ವ್ಯತ್ಯಾಸವು (ಅನುವಂಶಿಕವಾಗಿ ದತ್ತವಾಗಬಲ್ಲ ವ್ಯತ್ಯಾಸಗಳಿಂದ ಉಂಟಾಗುವ) ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸವಾಗುವದಕ್ಕೆ ಮೂಲಭೂತ ಅಗತ್ಯವಾಗಿದೆ. ಒಟ್ಟಾರೆ ಜೀವಿಯು ನಂತರದ ಪೀಳಿಗೆಗೆ ತನ್ನ ಕೊಡುಗೆ ಕೊಡುತ್ತದೆ (ಅಥವಾ ಕೊಡುವುದಿಲ್ಲ). ಹೀಗಾಗಿ ನೈಸರ್ಗಿಕ ಆಯ್ಕೆಯು ಪರೋಕ್ಷವಾಗಿ ವ್ಯಕ್ತನಮೂನೆಗೆ ಕೊಡುಗೆ ಕೊಡುವ ಮೂಲಕ ಸಮುದಾಯದ ಅನುವಂಶಿಕ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತನಮೂನೆಯ ವ್ಯತ್ಯಾಸಗಳು ಇಲ್ಲದಿದ್ದಲ್ಲಿ ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸವೂ ಇರುವುದಿಲ್ಲ.[೭]
ಜೀನ್ನಮೂನೆ ಮತ್ತು ವ್ಯಕ್ತನಮೂನೆಗಳ ನಡುವಿನ ಸಂಬಂಧವನ್ನು ಕೆಲವೊಮ್ಮೆ ಹೀಗೆ ಸೂಚಿಸಲಾಗಿದೆ:
ಜೀನ್ನಮೂನೆ + ಪರಿಸರ → ವ್ಯಕ್ತನಮೂನೆ
ಹೆಚ್ಚು ಸೂಕ್ಷ್ಮ ಸಂಬಂಧವನ್ನು ಹೀಗೆ ತೋರಿಸ ಬಹುದು:
ಜೀನ್ನಮೂನೆ + ಪರಿಸರ + ಜೀನ್ನಮೂನೆ- ಪರಿಸರಗಳ ಅಂತರ್ಕ್ರಿಯೆ → ವ್ಯಕ್ತನಮೂನೆ
ಜೀನ್ನಮೂನೆಗಳು ಹಲವು ಸಲ ವ್ಯಕ್ತನಮೂನೆಯ ಬದಲಾವಣೆ ಮತ್ತು ಅಭಿವ್ಯಕ್ತಿಯಲ್ಲಿನ ಹೊಂದಾಣಿಕೆಯನ್ನು ತೋರುತ್ತವೆ. ಹಲವು ಜೀವಿಗಳಲ್ಲಿ ವ್ಯಕ್ತನಮೂನೆಗಳು ಬದಲಾಗುವ ಪರಿಸರದ ಸ್ಥಿತಿಗೆ ತಕ್ಕಂತೆ ಭಿನ್ನವಾಗುತ್ತವೆ. ಹಿಯರಸಿಯಂ ಉಂಬೆಲ್ಲಟಮ್ ಸಸ್ಯವು ಸ್ವೀಡನ್ನಿನಲ್ಲಿ ಎರಡು ವಾಸಸ್ಥಾನಗಳಲ್ಲಿ ಬೆಳೆಯುವುದು ಕಂಡುಬಂದಿದೆ. ಒಂದು ವಾಸಸ್ಥಾನವು ಸಮುದ್ರ ಪಕ್ಕದ ಕಡಿದಾದ ಕಲ್ಲು ಬಂಡೆಗಳದು ಮತ್ತು ಇಲ್ಲಿ ಸಸ್ಯವು ಅಗಲ ಎಲೆಗಳ ಮತ್ತು ಹಿಗ್ಗಿದ ಹೂಗೊಂಚಲಿನ ಪೊದೆಯಾಗಿ ಬೆಳೆಯುತ್ತದೆ. ಇನ್ನೊಂದು ಮರಳು ದಿಬ್ಬ ಮತ್ತು ಇಲ್ಲಿ ಸಸ್ಯವು ಕಿರಿದಾದ ಎಲೆಗಳ ಮತ್ತು ಒತ್ತಾದ ಹೂಗೊಂಚಲಿನ ಗಿಡವಾಗಿ ನೆಲದ ಮೇಲಿ ಹಬ್ಬಿ ಬೆಳೆಯುತ್ತದೆ. ಈ ವಾಸಸ್ಥಾನಗಳು ಸ್ವೀಡನ್ನಿನ ಕರಾವಳಿಯಲ್ಲಿ ಒಂದರ ನಂತರ ಒಂದು ಬರುತ್ತವೆ ಮತ್ತು ಹಿಯರಸಿಯಂ ಉಂಬೆಲ್ಲಟಮ್ನ ಬೀಜವು ಎಲ್ಲಿ ಬಿದ್ದು ಮೊಳಕೆಯೊಡೆಯುತ್ತದೆ ಎಂಬುದರ ಮೇಲೆ ಯಾವ ರೀತಿಯ ವ್ಯಕ್ತನಮೂನೆ ಬೆಳೆಯುತ್ತದೆ ಎಂಬುದು ಅವಲಂಭಿಸಿದೆ.[೮]
ವ್ಯಕ್ತನಮೂನೆಯ ಪರಿಕಲ್ಪನೆಯನ್ನು ಕೆಲವೊಮ್ಮೆ ವಂಶವಾಹಿಯ ಮಟ್ಟಕಿಂತ ಕೆಳಗೂ ಕೊಂಡಯ್ಯಬಹುದು. ಉದಾಹರಣೆಗೆ ನಿಶ್ಶಬ್ದ ವ್ಯತ್ಯಯನಗಳು ಸಂಬಂಧಿಸಿದ ಅಮಿನೊ ಆಮ್ಲ ಅನುಕ್ರಮವನ್ನು ಬದಲಾಯಿಸುವುದಿಲ್ಲ ಆದರೆ ಅವು ಗ್ವಾನಿನ್-ಸಿಸ್ಟೊಸಿನ್ ಪ್ರತ್ಯಾಮ್ಲ ಜೋಡಿಗಳ ಸಂಭವ ಪ್ರಮಾಣವನ್ನು ಏರುಪೇರು ಮಾಡಬಹುದು. ಈ ಪ್ರತ್ಯಾಮ್ಲ ಜೋಡಿಗೆ ಅಡೆನಿನ್-ತೈಮಿನ್ ಜೋಡಿಗಿಂತ ಹೆಚ್ಚಿನ ತಾಪಮಾನದ ಸ್ಥಿರತೆ ಇದೆ. ಹೆಚ್ಚಿನ ತಾಪಮಾನ ಪರಿಸರದಲ್ಲಿ ಬದುಕು ಜೀವಿಗಳಿಗೆ (ಗ್ವಾಸಿನ್-ಸೈಟೊಸಿನ್ ಹೆಚ್ಚು ಇರುವ ಮೂಲಕ) ಈ ಗುಣವು ಆಯ್ಕೆಯ ಅನುಕೂಲತೆಯಾಗ ಬಹುದು.
ಹಿಗ್ಗಿಸಿದ ವ್ಯಕ್ತನಮೂನೆ
[ಬದಲಾಯಿಸಿ]ರಿಚರ್ಡ್ ಡಾವ್ಕಿನ್ಸ್ ತನ್ನ ದಿ ಎಕ್ಸ್ಟೆಂಡಡ್ ಫೀನೊಟೈಪ್ನಲ್ಲಿ ವ್ಯಕ್ತನಮೂನೆಯ ಚಿಂತನೆಯನ್ನು ಸಾರ್ವತ್ರೀಕರಿಸಿದರು. ಈ ಚಿಂತನೆಯ ಪ್ರಕಾರ ವ್ಯಕ್ತನಮೂನೆಯು ತನ್ನ ಸ್ವಯಂ ನಕಲಾಗುವಿಕೆ ಸಾಧ್ಯತೆ ಹೆಚ್ಚಿಸುವಲ್ಲಿ ಪ್ರಭಾವ ಬೀರುವ ವಂಶವಾಹಿಯ ಎಲ್ಲ ಪರಿಣಾಮಗಳನ್ನೂ ಒಳಗೊಂಡಿದೆ. ಇವು ವಂಶವಾಹಿ ಒಳಗೊಂಡ ಜೀವಿಯ ಮೇಲಿನ, ಪರಿಸರದ ಮೇಲಿನ ಅಥವಾ ಇತರ ಜೀವಿಯ ಮೇಲಿನ ಪರಿಣಾಮಗಳನ್ನು ಸಹ ಒಳಗೊಂಡಿರ ಬಹುದು. “ಹಿಗ್ಗಿಸಿದ ವ್ಯಕ್ತನಮೂನೆ” ನುಡಿಗಟ್ಟನ್ನು ಮೊದಲು ೧೯೭೮ರಲ್ಲಿ ಟಂಕಿಸಲಾಯಿತು.[೯]
ಉದಾಹರಣೆಗೆ ಬೀವರ್ನ ಶಕ್ತಿಯುತ ಬಾಚಿಹಲ್ಲು ಹೇಗೆ ಬೀವರ್ನ ವಂಶವಾಹಿಗಳ ಅಭಿವ್ಯಕ್ತಿಯೊ ಹಾಗೆಯೇ ಬೀವರ್ನ ಅಡ್ಡಗಟ್ಟೆಯೂ ಸಹ ಬೀವರ್ ವಂಶವಾಹಿಗಳ ವ್ಯಕ್ತನಮೂನೆಯಾಗಿದೆ. ಒಂದು ಜೀವಿಯ ಮೇಲಿನ ಇನ್ನೊಂದರ ವರ್ತನೆಯ ಪರಿಣಾಮ (ಉದಾಹರಣೆಗೆ ಕೋಗಿಲೆಯ ಮರಿಯನ್ನು ಇತರ ಪ್ರಭೇದದ ಜೀವಿಗಳು ಸಾಕುವುದು) ಮತ್ತು ಅತಿಥೇಯರ ದೇಹದಲ್ಲಿರುವ ಪರಜೀವಿಗಳನ್ನು ಸಹ ಇದೇ ವರ್ಗದಲ್ಲಿ ಡಾವ್ಕಿನ್ಸ್ ಇರಿಸುತ್ತಾರೆ. ಮೊದಲನೆ ಉದಾಹರಣೆಯಲ್ಲಿ ಅವರು ಬಸವನ ಹುಳುಗಳ ಸ್ಪರ್ಶಾಂಗವನ್ನು ಆಕ್ರಮಿಸುವ ಲೆಯುಕೊಕ್ಲೋರಿಡಿಯಂ ಚಪ್ಪಟೆ ಹುಳು ಪ್ರಭೇದದ ಬೀಜಕಕೋಶ (ಸ್ಪೊರೋಸಿಸ್ಟ್)ಗಳ ಉದಾಹರಣೆ ಕೊಡುತ್ತಾರೆ. ಅವು ಬಸವನ ಹುಳದ ಚರ್ಮದ ಮೇಲೆ ಎದ್ದು ಕಾಣುವಂತೆ ಮಿಡಿಯುತ್ತವೆ.
ಈ ಬಣ್ಣ ಮತ್ತು ವರ್ತನೆಗಳೆರಡರ ಬದಲಾವಣೆ (ಇದರ ಸೋಂಕು ತಗುಲಿದ ಬಸವನ ಹುಳುಗಳು ಸಸ್ಯದ ಮೇಲ್ತುದಿಗೆ ಚಲಿಸುತ್ತವೆ) ಹುಳುಗಳು ಹಕ್ಕಿಗಳಿಗೆ ಆಹಾರವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಮತ್ತು ಪರಜೀವಿ ತನ್ನ ಕೊನೆಯ ಅತಿಥೇಯ ಹಕ್ಕಿಯನ್ನು ಸೇರಲು ಸಹಾಯ ಮಾಡುತ್ತವೆ. ಹಿಗ್ಗಿಸಿದ ವ್ಯಕ್ತನಮೂನೆಯ ಮೂರನೆಯ ಉದಾಹರಣೆ “ದೂರದಲ್ಲಿನ ಕ್ರಿಯೆ”. ಇಲ್ಲಿ ಒಂದು ಜೀವಿಯಲ್ಲಿನ ವಂಶವಾಹಿಗಳು ಇನ್ನೊಂದು ಜೀವಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಡಾವ್ಕಿನ್ಸ್ ಕೊಡುವ ಉದಾಹರಣೆಗಳು ಆರ್ಕಿಡ್ ಜೀವಿಗಳು ಆರ್ಕಿಡ್ ಜೇನಿನ ವರ್ತನೆಯನ್ನು ಬದಲಾಯಿಸುವುದು (ಪರಾಗಸ್ಫರ್ಶ ಹೆಚ್ಚುಸುವತ್ತ), ಬುಡುಬುಡಿಕೆ ಹಾವಿನ (ರ್ಯಾಟಲ್ಸ್ನೇಕ್) ವಂಶವಾಹಿಗಳು ಇತರ ಜೀವಿಗಳ ವರ್ತನೆಯ ಮೇಲೆ ದೂರಸರಿಯುವ ಪರಿಣಾಮ ಬೀರುವುದು ಮತ್ತು ಗಂಡು ನವಿಲಿನ ವಂಶವಾಹಿಗಳು ಹೆಣ್ಣು ನವಿಲಿನ ಸಂಗಾತಿಯ ಆಯ್ಕೆಯ ನಿರ್ದಾರಗಳ ಮೇಲೆ ಪರಿಣಾಮ ಬೀರುವುದು.
ನಕಲು ತಯಾರಿಸುವ “ರೆಪ್ಲಿಕೇಟರ್”ನ ಅತಿ ಸಣ್ಣ ಘಟಕ ವಂಶವಾಹಿ. ಈ ರೆಪ್ಲಿಕೇಟರ್ ನೇರವಾಗಿ ಆಯ್ಕೆಯಾಗುವುದಿಲ್ಲ ಆದರೆ ಅದು ಉಂಟುಮಾಡುವ ವ್ಯಕ್ತನಮೂನೆಯ ಪರಿಣಾಮದ ಮೇಲೆ ಆಯ್ಕೆಯಾಗುತ್ತದೆ. ಈ ಪರಿಣಾಮಗಳು ಒಟ್ಟಾಗಿಯೇ ಜೀವಿಗಳಲ್ಲಿ ಇರುತ್ತವೆ. ನಾವು ಈ ರೆಪ್ಲಿಕೇಟರ್ ಹಿಗ್ಗಿಸಿದ ವ್ಯಕ್ತನಮೂನೆಯ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಯೋಚಿಸ ಬೇಕು. ರೆಪ್ಲಿಕೇಟರ್ಗಳು ಅದನ್ನು ಹೊಂದಿದ ಜೀವಿಯ ಮೇಲೆ ಉಂಟುಮಾಡುವ ಪರಿಣಾಮಕ್ಕೇ ಸೀಮಿತವಾಗದೆ ಜಗತ್ತಿನ ಮೇಲೆ ಅವು ಬೀರುವ ಎಲ್ಲಾ ಪರಿಣಾಮಗಳನ್ನೂ ಗಮನಿಸ ಬೇಕು.[೧೦]
ಟಿಪ್ಪಣಿ
[ಬದಲಾಯಿಸಿ]- ↑ [”Phenotype”], Wikipedia Access date 2016-09-17
- ↑ ಉತ್ತರ ಅಮೆರಿಕಾಕ್ಕೆ ಸಾಮಾನ್ಯವಾಗಿ ಸೀಮೀತವಾದ ಬೀವರ್ ರೊಡೆಂಟಿಯ ಗಣಕ್ಕೆ ಸೇರಿದ್ದು, ಪರಭಕ್ಷಗಳಿಗೆ ತಡೆಯಾಗಿ ಮತ್ತು ಚಳಿಗಾಲದಲ್ಲಿ ಆಹಾರ ಸುಲಭ ಲಭ್ಯವಾಗಲು ನೀರನ್ನು ಅಡ್ಡಗಟ್ಟೆಗಳ ಮೂಲಕ ನಿಲ್ಲಿಸುತ್ತದೆ. ಇದನ್ನು ಬೀವರ್ ಅಡ್ಡಗಟ್ಟೆ ಅಥವಾ ಡ್ಯಾಮ್ ಎಂದು ಕರೆಯಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Churchill, F.B. (1974). "William Johannsen and the genotype concept". Journal of the History of Biology. 7: 5–30. doi:10.1007/BF00179291.
- ↑ Johannsen, W. (1911). "The genotype conception of heredity". American Naturalist. 45 (531): 129–159. doi:10.1086/279202. JSTOR 2455747.
- ↑ Dawkins 1978 http://onlinelibrary.wiley.com/doi/10.1111/j.1439-0310.1978.tb01823.x/abstract
- ↑ O'Brien, Gregory; Yule, William, eds. (1995). Behavioural Phenotypes. Clinics in Developmental Medicine No.138. London: Mac Keith Press. ISBN 1-898683-06-9
- ↑ O'Brien, Gregory, ed. (2002). Behavioural Phenotypes in Clinical Practice. London: Mac Keith Press. ISBN 1-898683-27-1. Retrieved 27 September 2010
- ↑ Crusio WE (May 2002). "'My mouse has no phenotype'". Genes, Brain and Behavior. 1 (2): 71. doi:10.1034/j.1601-183X.2002.10201.x. PMID 12884976. Retrieved 2009-12-29.
- ↑ Lewontin, R. C. (November 1970). "The Units of Selection" (PDF). Annual Review of Ecology and Systematics. Palo Alto, CA: Annual Reviews. 1: 1–18. doi:10.1146/annurev.es.01.110170.000245. ISSN 1545-2069.
- ↑ "Botany online: Evolution: The Modern Synthesis - Phenotypic and Genetic Variation; Ecotypes". Retrieved 2009-12-29.
- ↑ Dawkins, Richard (12 January 1978). Ethology. Wiley-Blackwell. 47 (1 January-December 1978): 61–76. doi:10.1111/j.1439-0310.1978.tb01823.x http://onlinelibrary.wiley.com/doi/10.1111/j.1439-0310.1978.tb01823.x/abstract.
- ↑ Dawkins, Richard (1982). The Extended Phenotype. Oxford University. p. 4. ISBN 0-19-288051-9.