ಬಾವಂಚಿ
ಬಾವಂಚಿ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. corylifolia
|
Binomial name | |
Psoralea corylifolia |
ಸೊರೇಲಿಯಾ ಕೋರಿಲಿಪೋಲಿಯ (Psoralea Corylifolia Linn) ಎಂದು ಕರೆಯಲ್ಪಟ್ಟ ಬಾವಂಚಿಯು ಲೆಗ್ಯುಮಿನೇಸಿ ಕುಟುಂಬದ ಪೆಪಿಲಿಯೋನೇಸಿ ಎಂಬ ಉಪ ಕುಟುಂಬಕ್ಕೆ ಸೇರಿದೆ[೧]. ಸೊರೋಲಿನ್ ಮತ್ತು ಇಸೋಸೊರೇಲಿನ್ ಇದರಲ್ಲಿರುವ ಮುಖ್ಯ ರಾಸಾಯನಿಕ ವಸ್ತುಗಳು. ಸೊರೇಲಿಯಾ ಪ್ರಭೇಧವು ವಿಶ್ವದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ವ್ಯಾಪಿಸಿದೆ. ಈ ಪ್ರಭೇಧವು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ದಕ್ಷಿಣ ಪೂರ್ವ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೀಜಗಳನ್ನು ವಾಣಿಜ್ಯಕ್ಕಾಗಿ ಸಂಗ್ರಹಿಸುತ್ತಾರೆ. ರಾಜಾಸ್ಥಾನ್, ಆಂಧ್ರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ಈ ಸಸ್ಯವನ್ನು ಬೆಳೆಸಲಾಗುತ್ತದೆ. ಇದಕ್ಕೆ ಸೂಕ್ಷ್ಮ ಜೀವಿನಿರೋಧಕ, ಭಕ್ಷನಿರೋಧಕ ಮತ್ತು ಕೀಟನಿರೋಧಕ ಗುಣಗಳಿವೆ.[೨]
ಸಸ್ಯವರ್ಣನೆ
[ಬದಲಾಯಿಸಿ]ನೇರವಾಗಿ ಬೆಳೆಯುವ ವಾರ್ಷಿಕ ಪೊದರು. ಸ್ವಾಭಾವಿಕವಾಗಿ ೩೦-೬೦ ಸೆಂ. ಮೀ. ಎತ್ತರವಾಗಿದ್ದು, ಬೇಸಾಯಕ್ಕೆ ಒಳಪಟ್ಟಾಗ ೧೬೦ ಸೆಂ. ಮೀ. ಎತ್ತರಕ್ಕೆ ಬೆಳೆಯುತ್ತದೆ. ಗಿಡಗಳಿಗೆ ಹಲವಾರು ಕವಲುಗಳಿರುತ್ತವೆ. ಕಾಂಡ ಮತ್ತು ಕವಲುಗಳು ಸ್ವಷ್ಟವಾದ ಗ್ರಂಥಿಗಳನ್ನು ಮತ್ತು ಬಿಳಿ ರೋಮಗಳನ್ನು ಹೊಂದಿದೆ. ಇದು ಸಾಧಾರಣ ಪತ್ರಗಳನ್ನು ಬಿಡುತ್ತದೆ. ಎಲೆಯ ಹೂಗೊಂಚಲು ೧೦-೩೦ ಹೂಗಳನ್ನು ಒಳಕೊಡಿದೆ. ಪುಷ್ಪಪಾತ್ರೆ ೩-೪ ಮೀ. ಮೀ. ಇದ್ದು, ಹೊರಭಾಗದಲ್ಲಿ ರೋಮಗಳಿರುತ್ತದೆ. ಹೂದಳವು ಹಳದಿ- ನೇರಳೆ ಬಣ್ಣವಾಗಿದೆ. ಅಂಡಾಶಯವು ಸಣ್ಣದಾಗಿದ್ದು, ಏಕ ಬೀಜದ ಕಾಯಿಗಳನ್ನು ಬಿಡುತ್ತದೆ. ಕಾಯಿಗಳು ಸೀಳುವುದಿಲ್ಲ. ಬೀಜವು ಸಿಪ್ಪೆಯ ಒಳಗೋಡೆಗೆ ಅಂಟಿಕೊಂಡಿರುತ್ತದೆ.
ಬಾವಂಚಿಯು ಸ್ವಕೀಯ ಪರಾಗ ಸ್ಪರ್ಷ ಹೊಂದುವ ಬೆಳೆ. ೧೭-೧೮ ದಿನಲ್ಲಿ ಮೊದಲ ಹೂಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಹೂಗಳು ಬೆಳಗಿನ ವೇಳೆ ಮತ್ತು ಸಂಜೆಯ ವೇಳೆಯಲ್ಲಿ ಅರಳುತ್ತದೆ. ಇದರ ವರ್ಣ ತಂತುಗಳ ಸಂಖ್ಯೆ ೨n=೨೦ ಮತ್ತು ೨೨.
ಬೇಸಾಯ ಕ್ರಮಗಳು
[ಬದಲಾಯಿಸಿ]- ಮಣ್ಣು
- ಮರಳುಮಿಶ್ರಿತ ಗೋಡಿನಿಂದ ಹಿಡಿದು ಹತ್ತಿ ಬೆಳೆಯುವ ಕಪ್ಪು ಮಣ್ಣಿನವರೆಗೆ ವಿವಿಧ ಮಣ್ಣುಗಳಲ್ಲಿ ಬೆಳೆಸಲಾಗುತ್ತದೆ.
- ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತವಾಗಿದ್ದೂ, ರಸಸಾರ ಹೊಂದಿರುವ ಮಣ್ಣಿನಲ್ಲಿಯೂ ಬೆಳೆಯುತ್ತದೆ.
- ಆಮ್ಲ ಮತ್ತು ಕ್ಷಾರತೆಯುಳ್ಳ ಮಣ್ಣುಗಳು ಸೂಕ್ತವಲ್ಲ.
- ಹವಾಗುಣ
- ಈ ಬೆಳೆಗೆ ಒಣ ಹವಾಗುಣ ಸೂಕ್ತವಾಗಿದೆ.
- ಸಾಮಾನ್ಯವಾಗಿ ಮುಂಗಾರಿನಲ್ಲಿ ಬೆಳೆಸಲಾಗುತ್ತದೆ.
- ಇದು ಗಡುತರ ಸಸ್ಯವಾಗಿದ್ದು, ಕಡಿಮೆಯಿಂದ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತದೆ.
ಸಸ್ಯಾಭಿವೃದ್ಧಿ
[ಬದಲಾಯಿಸಿ]ಬಾವಂಚಿಯನ್ನು ಬೀಜಗಳಿಂದ ವೃದ್ಧಿಮಾಡಲಾಗುತ್ತದೆ. ಮೊಳಕೆಯ ಪ್ರಮಾಣ ಅತೀ ಕಡಿಮೆ ಇರುತ್ತದೆ (ಶೇ. ೫-೭). ಮೊಳಕೆಯ ಪ್ರಮಾಣವನ್ನು ಹೆಚ್ಚಿಸಲು ಬೀಜಗಳನ್ನು ಶೇ. ೧ರ ಸಲ್ಪ್ಯುರಿಕ್ ಆಮ್ಲದಲ್ಲಿ ಒಂದು ನಿಮಿಷದ ಕಾಲ ಇಡಬೇಕು. ಅವುಗಳನ್ನು ಬಿತ್ತುವ ಮೊದಲು ಸಲ್ಫ್ಯೂರಿಕ್ ಆಮ್ಲ ಹೋಗುವಂತೆ ನೀರಿನಲ್ಲಿ ತೊಳೆಯಬೇಕು.
ಭೂಮಿಸಿದ್ಧತೆ
[ಬದಲಾಯಿಸಿ]ಮುಂಗಾರಿನ ಮೊದಲು ಭೂಮಿಯನ್ನು ಲಘುವಾಗಿ ಉಳುಮೆಮಾಡಬೇಕು. ನಂತರ ಎರಡು ಬಾರಿ ಕುಂಟೆ ಹೊಡೆದು, ಕಳೆ ಕೂಳೆಗಳನ್ನು ಆರಿಸಿ ಸಿದ್ಧಗೊಳಿಸಬೇಕು. ನಂತರ ನಿರ್ವಾಹಣೆಗೆ ಅನುಕೂಲವಾಗುವಂತೆ ಭೂಮಿಯನ್ನು ಸಣ್ಣ ಸಣ್ಣ ಮಡಿಗಳನ್ನು ಹಾಗೂ ನೀರು ಕಾಲುವೆಗಳನ್ನು ಮಾಡಬೇಕು.
ಬಿತ್ತನೆ
[ಬದಲಾಯಿಸಿ]ಬೀಜಗಳನ್ನು ೪೫-೬೦ ಸೆಂ. ಮೀ. ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ೩೦-೪೫ ಸೆಂ. ಮೀ. ಅಂತರವಿರುವಂತೆ ಬಿತ್ತಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ೭ಕಿ. ಗ್ರಾಂ. ಬೀಜಗಳು ಬೇಕಾಗುತ್ತದೆ.
ಗೊಬ್ಬರ
[ಬದಲಾಯಿಸಿ]ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಹೆಕ್ಟೇರಿಗೆ ಮೂಲ ಗೊಬ್ಬರವಾಗಿ ೨೦ ಟನ್ ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಪ್ರಾರಂಭಿಕ ಬೆಳವಣಿಗೆ ಮತ್ತು ಬೀಜದ ಇಳುವರಿ ಹೆಚ್ಚಾಗುತ್ತದೆ.
ನೀರಾವರಿ
[ಬದಲಾಯಿಸಿ]ಇದಕ್ಕೆ ನೀರಿನ ಅವಶ್ಯಕತೆ ಕಡಿಮೆ ಇದೆ. ಮಳೆಗಾಲ ಕಳೆದ ಮೇಲೆ(ಜೂನ್- ಸೆಪ್ಟೆಂಬರ್) ೧೫ ದಿನಗಳಿಗೊಮ್ಮೆ ನೀರನ್ನು ಕೊಡಬೇಕು. ಬೆಳೆಯ ಅವಧಿಯಲ್ಲಿ ೬-೮ ಬಾರಿ ನೀರನ್ನು ಹಾಯಿಸಿದರೆ ಸಾಕು.
ಕಳೆ ಹತೋಟಿ ಮತ್ತು ಬೇಸಾಯ
[ಬದಲಾಯಿಸಿ]ಬೆಳೆಯಿರುವ ಪ್ರದೇಶವು ಕಳೆ ರಹಿತವಾಗಿರಬೇಕು. ಬೆಳವಣಿಗೆಯ ಪ್ರಾರಂಭದಲ್ಲಿ ೨- ೩ ಬಾರಿ ಕಳೆ ತೆಗೆಯಬೇಕು.
ಕೀಟ ಮತ್ತು ರೋಗಗಳು
[ಬದಲಾಯಿಸಿ]ಇದು ಗಡುತರವಾದ ಸಸ್ಯವಾದ್ದರಿಂದ ಕೀಟ ಮತ್ತು ರೋಗಗಳ ಸಮಸ್ಯೆ ಕಡಿಮೆ. ಆದರೆ ಲೆಪೆಡಾಪ್ಟೆರ ವರ್ಗದ ಕೀಟಗಳಾದ ಎಲೆ ಸುರುಳಿ ಹುಳು (ಆರ್ಕಿಪ್ಸ್ ಮೈಕ್ಯಾಸಿಯಾನ), ಕಂಬಳಿ ಹುಳುಗಳು ಹಾನಿ ಮಾಡುತ್ತವೆ. ಈ ಕೀಟಗಳನ್ನು ಶೇ. ೦.೧೫ ರ ಪ್ರಮಾಣದ ಮಾನೊಕ್ರೋಟೋಫಾಸ್ ಸಿಂಪಡಿಸಿ ನಿಯಂತ್ರಿಸಬಹುದು. ಈ ಸಸ್ಯದಲ್ಲಿ ಕಾಣುವ ಮುಖ್ಯ ರೋಗ- ಬೂದಿ ರೋಗ. ಇದನ್ನು ನಿಯಂತ್ರಿಸಲು ನೀರಿನಲ್ಲಿ ಕರಗುವ ಗಂಧಕವನ್ನು(ಶೇ. ೦.೩) ೨-೩ ಬಾರಿ ನಿಗದಿತ ಅಂತರದಲ್ಲಿ ಸಿಂಪಡಿಸಬೇಕು.
ಕೊಯ್ಲು ಮತ್ತು ಇಳುವರಿ
[ಬದಲಾಯಿಸಿ]ಬಾವಂಚಿಯು ೭-೮ ತಿಂಗಳ ಬೆಳೆ. ಕೊಯ್ಲಿನ ಸಮಯದಲ್ಲಿ ಗಿಡದಲ್ಲಿ ಬೀಜಗಳು ನಿರಂತರವಾಗಿ ಬಲಿತು ಕೊಯ್ಲಿಗೆ ಬರುತ್ತವೆ. ಸಾಮನ್ಯವಾಗಿ ಡಿಸೆಂಬರ್ ಮಧ್ಯ ಭಾಗದಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಕಾಲದಲ್ಲಿ ೪-೫ ಬಾರಿ ಕಾಯಿಗಳನ್ನು ಬಿಡಿಸಬಹುದು. ಬೀಜಗಳು ಬಲಿತಾಗ ಕಂದು- ಕಪ್ಪು ಬಣ್ಣಕ್ಕೆ ತಿರುಗಿ ಪರಿಮಳವನ್ನು ಬೀರುತ್ತದೆ. ಪ್ರತೀ ಹೆಕ್ಟೇರ್ ಪ್ರದೇಶದ ಬೆಳೆಯಿಂದ ೨ ಟನ್ ಗಳಷ್ಟು ಒಣಗಿದ ಬೀಜಗಳ ಇರುವರಿ ದೊರೆಯುತ್ತದೆ.[೩]
ಬಾಹ್ಯಸಂಪರ್ಕಗಳು
[ಬದಲಾಯಿಸಿ]http://www.ayurvediccommunity.com/AmaraKannada.asp
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-03-04. Retrieved 2016-05-24.
- ↑ ಔಷಧೀಯ ಬೆಳೆಗಳ ಬೇಸಾಯ, ಡಾ. ಎ. ಎ. ಫರೂಕಿ, ಶ್ರೀ ಬಿ. ಎಸ್. ಶ್ರೀರಾಮು, ಡಾ. ಕೆ. ಎನ್. ಶ್ರೀನಿವಾಸಪ್ಪ, ಶ್ರೀ ಓ. ಆರ್. ಲಕ್ಷ್ಮಿಪತಯ್ಯ, ಕಾವ್ಯಾಕಲಾ ಪ್ರಕಾಶನ, ಮೊದಲ ಮುದ್ರಣ-೨೦೦೦, ಪುಟ ೧೮೪
- ↑ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ಎ. ಆರ್. ಎಂ. ಸಾಹೇಬ್, ದಿವ್ಯಚಂದ್ರ ಪ್ರಕಾಶನ, ಮುದ್ರಣ ೨೦೦೨, ಪುಟ ೧೪೧