ವಿಷಯಕ್ಕೆ ಹೋಗು

ದ್ರವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ್ರವ್ಯ



ದ್ರವ್ಯಕ್ಕೆ ನಾಲ್ಕ್ಯು ಸ್ಥಿತಿಗಳಿವೆ. ಮೇಲಿನಿಂದ ಕೆಳಕ್ಕೆ : ಸ್ಪಟಿಕ (ಘನ), ನೀರು (ದ್ರವ), ನೈಟ್ರೋಜನ್ ಡೈಆಕ್ಸೈಡ್ (ಅನಿಲ), ಮತ್ತು ಪ್ಲಾಸ್ಮಾ ಗೋಳ (ಪ್ಲಾಸ್ಮಾ) ಗಳ ಚಿತ್ರ

ದ್ರವ್ಯ ಯಾವುದರಿಂದ ಭೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ, ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ.[] ದ್ರವ್ಯವು ಅನಿಲ, ಘನ, ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ.

ಸಕಲ ಜೀವಿಗಳು, ಆಕಾಶ ಕಾಯಗಳು. ಗಾಳಿ ಮಳೆ ಮುಂತಾದ ಭೌತ ಧಾತುಗಳು ಎಲ್ಲವೂ ದ್ರವ್ಯದ ವಿವಿಧ ರೂಪಗಳು. ದ್ರವ್ಯದ ಚರಮಘಟಕಗಳೆಂದರೆ ಮೂರು ಪ್ರಾಥಮಿಕ ಕಣಗಳು: ಎಲೆಕ್ಟ್ರಾನ್ (e-), ಪ್ರೋಟಾನ್ (ಠಿ) ಮತ್ತು ನ್ಯೂಟ್ರಾನ್ (ಟಿ), ನ್ಯೂಟ್ರಾನ್ ಹಾಗೂ ಪ್ರೋಟಾನುಗಳ ವಿಭಿನ್ನ ಸಂಯೋಜನೆಗಳ ಫಲವಾಗಿ ಇಂದು ನಮಗೆ ತಿಳಿದಿರುವ ವಿವಿಧ ಪರಮಾಣ್ವಕ ಬೀಜಗಳು ಲಭ್ಯವಾಗಿವೆ. ಪ್ರತಿಯೊಂದು ಎಲೆಕ್ಟ್ರಾನ್ 1.6(10-19 ಕೂಲಂಬ್ ಧನಾವೇಶಯುತವಾಗಿದೆ. ಇದರ ರಾಶಿ ಪ್ರೋಟಾನಿನ ಸರಿಸುಮಾರು 0.0005 ರಷ್ಟು ಉಂಟು.

ದ್ರವ್ಯದ ಗುಣಲಕ್ಷಣಗಳು

[ಬದಲಾಯಿಸಿ]

ದ್ರವ್ಯ ಜಾಗವನ್ನು (ಆಕಾಶ) ವ್ಯಾಪಿಸುತ್ತದೆ. ಅದಕ್ಕೆ ಜಡತ್ವದ ಲಕ್ಷಣ ಉಂಟು. ಗುರುತ್ವಾಕರ್ಷಣದಲ್ಲಿ ದ್ರವ್ಯ ತೂಕಕ್ಕೆ ಕಾರಣವಾಗುವುದು. ಇದು ಅವಿನಾಶಿ. ದ್ರವ್ಯದ ಅಭ್ಯಾಸಕ್ಕೆ ಅದರ ವಿವಿಧ ರೂಪಗಳನ್ನು ಅನುಕೂಲಿಸುವ ರೀತಿಗಳಲ್ಲಿ ವರ್ಗೀಕರಿಸಲಾಗುತ್ತದೆ. ಇವುಗಳ ಪೈಕಿ ದ್ರವ್ಯದ ಸ್ಥಿತಿಗೆ ಅನುಗುಣವಾದ ವರ್ಗೀಕರಣವೇ ಹೆಚ್ಚು ರೂಢಿಯಲ್ಲಿರುವುದು: ಘನ, ದ್ರವ, ಅನಿಲ ಮತ್ತು ಪ್ಲಾಸ್ಮಾ. ಘನಕ್ಕೆ ಆಕಾರ, ಗಾತ್ರಗಳೆರಡೂ ಇವೆ. ಘನಗಳನ್ನು ತೆಳು ಪೊರೆಗಳಾಗಿ ಇಲ್ಲವೇ ಸಪುರ ತಂತಿಗಳಾಗಿ ರೂಪಿಸಬಹುದು. ಉದ್ದಿಷ್ಟ ಆಕಾರವನ್ನು ಘನಗಳಿಗೆ ನೀಡಬಹುದು. ದ್ರವಕ್ಕೆ ಹರಿಯುವ ಗುಣವಿದೆ. ಇದಕ್ಕೆ ಆಕಾರವಿರುವುದಿಲ್ಲ. ಇದನ್ನು ಹಿಡಿದಿಟ್ಟ ಪಾತ್ರೆಯ ಆಕಾರವನ್ನೇ ಪಡೆಯುತ್ತದೆ. ನಿರ್ದಿಷ್ಟ ಪ್ರಮಾಣದ ದ್ರವ್ಯದ ಗಾತ್ರ ಸಾಮಾನ್ಯ ಪರಿಸ್ಥಿತಿಗಳಲ್ಲಿ ಬದಲಾಗುವುದಿಲ್ಲ. ಅನಿಲಕ್ಕೆ ಆಕಾರ, ಗಾತ್ರ, ಎರಡೂ ಇರುವುದಿಲ್ಲ. ಹೀಗಾಗಿ ಅನಿಲವನ್ನು ಒತ್ತಡಕ್ಕೆ ಒಳಪಡಿಸಿ ಅಲ್ಪ ಗಾತ್ರಕ್ಕೆ ತರಬಹುದು. ಅಥವಾ ಒತ್ತಡವನ್ನು ಕಡಿಮೆ ಮಾಡಿ ಮಹಾಗಾತ್ರಕ್ಕೆ ಲಂಬಿಸಬಹುದು. ಒತ್ತಡ, ಗಾತ್ರ ಮತ್ತು ಉಷ್ಣತೆಗಳನ್ನು ಒಳಗೊಂಡ ಸೂತ್ರಗಳಿಂದ ಅನಿಲದ ವರ್ತನೆಯನ್ನು ಅರಿಯುವುದು ಸಾಧ್ಯ. ಪ್ಲಾಸ್ಮಾ ಇತ್ತೀಚಿನ ವರ್ಷಗಳಲ್ಲಿ ಹುಟ್ಟಿದ ವರ್ಗೀಕರಣ. ಅಯಾನೀಕೃತ ಅನಿಲವಿದು. ಇದಲ್ಲದೆ ಇತ್ತೀಚೆಗೆ ನ್ಯೂಟ್ರಾನ್ ತಾರೆಗಳಲ್ಲಿ ಕಂಡುಬಂದಿರುವ ದ್ರವ್ಯದ ಅತಿಸಾಂದ್ರಸ್ಥಿತಿಯನ್ನು ಐದನೆಯ ಸ್ಥಿತಿಯಾಗಿ ವರ್ಗೀಕರಿಸಿದ್ದಾರೆ. ಒಂದೇ ಸವನೆ ಕಾಸುತ್ತ ಹೋದರೆ ಘನದಿಂದ ದ್ರವವನ್ನು ಮುಂದೆ ಅನಿಲವನ್ನು ಅನಂತರ ಪ್ಲಾಸ್ಮಾವನ್ನು ಪಡೆಯುವುದು ಸಾಧ್ಯ. ಇದೇ ಕ್ರಮದಲ್ಲಿ ಸಾಮಾನ್ಯವಾಗಿ ದ್ರವ್ಯದ ಸಾಂದ್ರತೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ದ್ರವ್ಯದ ಸ್ಥಿತಿಗಳು ಈ ರೀತಿಯಾಗಿದ್ದರೆ ಅದರ ಮೂಲಸ್ವರೂಪ ಎಲ್ಲ ಸ್ಥಿತಿಗಳಲ್ಲೂ ಒಂದೇ ಆಗಿರುತ್ತದೆ; ಅಂದರೆ ಅಣುಗಳು ಮತ್ತು ಪರಮಾಣುಗಳು ಬದಲಾಗುವುದಿಲ್ಲ. ಸಾಮಾನ್ಯವಾಗಿ ೯೨ ಪರಮಾಣುಗಳು ಸೃಷ್ಟಿಯಲ್ಲಿಯ ಎಲ್ಲ ರೂಪಗಳನ್ನು ವಿವರಿಸಲು ಸಾಕಾಗುತ್ತದೆ. (ಗೊತ್ತಿರುವ ಪರಮಾಣುಗಳ ಸಂಖ್ಯೆ 115ಕ್ಕೂ ಹೆಚ್ಚು) ಈ ಪರಮಾಣುಗಳು ಮೂಲ ಕಣಗಳಾದ ಪ್ರೋಟಾನ್, ನ್ಯೂಟ್ರಾನ್ (ಇವೆರಡಕ್ಕೂ ಕೂಡಿ ಕೇಂದ್ರದಲ್ಲಿಯ ಬೀಜ ಆಗಿರುವುದು) ಮತ್ತು ಎಲೆಕ್ಟ್ರಾನುಗಳಿಂದ (ಇವು ಬೀಜದ ಸುತ್ತ ಪರಿಭ್ರಮಿಸುವವು) ಆಗಿರುತ್ತದೆ. ಈ ಮೂಲಕಣಗಳ ಸಂಖ್ಯೆ ಈಗ 40ನ್ನೂ ಮೀರಿದ್ದು ಇವು ಎಷ್ಟರಮಟ್ಟಿಗೆ ಮೂಲ(?) ಕಣಗಳು ಎನ್ನುವುದು ನಿಶ್ಚಿತವಾಗಿಲ್ಲ. ಇವುಗಳಲ್ಲಿ ಪ್ರತಿಕಣಗಳೂ (ಆ್ಯಂಟಿಪ್ರೋಟಾನ್, ಆ್ಯಂಟಿನ್ಯೂಟ್ರಾನ್, ಪಾಸಿಟ್ರಾನ್ ಇತ್ಯಾದಿ) ಇವೆ. ಇಂಥ ಪ್ರತಿಕಣಗಳು ಕೂಡಿ ಪ್ರತಿದ್ರವ್ಯವನ್ನು (ಆ್ಯಂಟಿಮ್ಯಾಟರ್) ನಿರ್ಮಿಸಬಲ್ಲವು. ಈಗ ಪ್ರತಿಹೀಲಿಯಮ್ ಪರಮಾಣುವನ್ನು ನಿರ್ಮಿಸಲಾಗಿದೆ. ಈ ಎಲ್ಲ ಮೂಲಕಣಗಳ ಮೂಲದ್ರವ್ಯ ಯಾವುದು? ಅದರ ಸ್ವರೂಪವೇನು? ಇವುಗಳಿಗೆ ಸದ್ಯ ಉತ್ತರ ಇಲ್ಲ.

ಅಜರಾಮರತ್ವ

[ಬದಲಾಯಿಸಿ]

ವಿಶ್ವದಲ್ಲಿನ ದ್ರವ್ಯ ನಿತ್ಯವಾಗಿದೆ: ಹೊಸದಾಗಿ ದ್ರವ್ಯ ಸೃಷ್ಟಿಯಾಗುವುದಿಲ್ಲ. ಅದು ನಶಿಸುವುದೂ ಇಲ್ಲ. ಅದು ತನ್ನ ರೂಪವನ್ನು ಮಾತ್ರ ಬದಲಾಯಿಸುತ್ತದೆ. ಈ ತತ್ತ್ವ ಐನ್‍ಸ್ಟೈನ್‍ನ ಸಾಪೇಕ್ಷತಾವಾದದ ಆವಿಷ್ಕಾರ (1905)ವಾದ ನಂತರ ತಿದ್ದುಪಡಿ ಆಗಬೇಕಾಯಿತು. ಇದರ ಪ್ರಕಾರ ದ್ರವ್ಯ ಶಕ್ತಿಯಾಗಿಯೂ ಶಕ್ತಿ ದ್ರವ್ಯವಾಗಿಯೂ ಪರಿವರ್ತಿತವಾಗಬಲ್ಲವು. ಪ್ರಯೋಗಗಳಲ್ಲಿ (ಕಣ + ಪ್ರತಿ ಕಣಗಳು ಹಾಗೂ ಶಕ್ತಿ. ಬೈಜಿಕ ಕ್ರಿಯೆಗಳು) ಮತ್ತು ನಕ್ಷತ್ರಗಳಲ್ಲಿ ಇದಕ್ಕೆ ಬೇಕಾದಷ್ಟು ನಿದರ್ಶನಗಳಿವೆ. ಹೀಗಾಗಿ, ಈಗ ಮೇಲಿನ ತತ್ತ್ವವನ್ನು ತಿದ್ದುಪಡಿ ಮಾಡಿ ವಿಶ್ವದಲ್ಲಿನ ಶಕ್ತಿ ಹಾಗೂ ದ್ರವ್ಯಗಳ ಮೊತ್ತ ನಿತ್ಯವಾಗಿದೆ ಎಂದು ತೀರ್ಮಾನಿಸಲಾಗಿದೆ. ಐನ್‍ಸ್ಟೈನ್ ಇನ್ನೂ ಮುಂದೆ ಹೋಗಿ ತಮ್ಮ ಸಾರ್ವತ್ರಿಕ ಸಾಪೇಕ್ಷತಾವಾದದಲ್ಲಿ ದ್ರವ್ಯವನ್ನು ಆಕಾಶದ ಗುಣಧರ್ಮವೆಂದು ಪರಿಗಣಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಕ್ವಾಂಟಮ್ ಸಿದ್ಧಾಂತದ ಆವಿಷ್ಕಾರದಿಂದ ದ್ರವ್ಯ ಮೂಲಕಣಗಳ ರೂಪದಲ್ಲಿದ್ದಾಗ ಅಲೆಯಂತೆ ಕೂಡ ವರ್ತಿಸುತ್ತದೆ ಎಂದು ತಿಳಿದುಬಂದಿದೆ. ಅದೂ ಅಲ್ಲದೆ ಶಕ್ತಿಯ ಅಲೆಗಳಾದ ಬೆಳಕಿನ ಅಲೆಗಳು ದ್ರವ್ಯಕಣಗಳಂತೆ ವರ್ತಿಸುವುದೂ ಕಂಡುಬಂದಿದೆ. ಹೀಗಾಗಿ ದ್ರವ್ಯದ ಲಕ್ಷಣಗಳು ಇವೇ, ಶಕ್ತಿಯ ಲಕ್ಷಣಗಳು ಇವೇ ಎಂದು ನಿಖರವಾಗಿ ಹೇಳುವುದು ದುಸ್ಸಾಧ್ಯವಾಗಿದೆ. ಇವೆರಡಕ್ಕೂ ಮೂಲವಾದ ಒಂದು ಚೇತನ ಇರಬಹುದು. ಆದರೂ ಸಾಮಾನ್ಯ ಜಗತ್ತಿನಲ್ಲಿ ನಾವು ದ್ರವ್ಯವನ್ನು ಉಪಯುಕ್ತವಾಗಿ ಆದರೆ ಸಾಮಾನ್ಯ ಗುಣಗಳಿಂದ ಗುರುತಿಸಬಹುದು ಮತ್ತು ಅಭ್ಯಸಿಸಬಹುದು

ಉಲ್ಲೇಖಗಳು

[ಬದಲಾಯಿಸಿ]
  1. ನವಕರ್ನಾಟಕ ವಿಜ್ಞಾನ -ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. ೨೦೧೨. p. ೩೨೪. ISBN 978-81-8467-198-8.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದ್ರವ್ಯ&oldid=1176764" ಇಂದ ಪಡೆಯಲ್ಪಟ್ಟಿದೆ