ವಿಷಯಕ್ಕೆ ಹೋಗು

ಸದಸ್ಯ:Chaithanya kudinalli/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಡುಬುಡಿಕೆ

[ಬದಲಾಯಿಸಿ]

ಮುನ್ನುಡಿ

[ಬದಲಾಯಿಸಿ]

ಜಾನಪದ ಕಲಾ ಪ್ರಕಾರಗಳಲ್ಲಿ ಬುಡುಬುಡಿಕೆಯೂ ಒಂದು. ಬುಡುಬುಡಿಕೆಯವರನ್ನು ಬೀದಿ ನೆಂಟನೆಂದೂ ಕರೆಯುತ್ತಾರೆ. 'ಬುಡುಬುಡಿಕೆ ಕಲೆ ಮರಾಠಿಗರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಕಲೆ ಎಂಬ ನಂಬಿಕೆ ಇದೆ. ಇದೊಂದು ಉದ್ಯೋಗಿ ಕಲೆ. ಶಕುನ ಹೇಳಿಕೊಂಡು ಜೀವನ ಸಾಗಿಸಿವ ಈ ಕಲಾವಿದರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ನರಸಣ್ಣ' ಎಂದು ಕರೆಯುತ್ತಾರೆ.

ಹಿನ್ನಲೆ

[ಬದಲಾಯಿಸಿ]

ಬುಡುಬುಡಿಕೆಯವರ ಉಗಮವನ್ನು ಕುರಿತಂತೆ ಸ್ವಾರಸ್ಯ ಪೂರ್ಣವಾದ ದಂತ ಕಥೆಯೊಂದಿದೆ. ಕಲಾವಿದರೆ ಹೇಳುವಂತೆ, "ಪೂರ್ವದಲ್ಲಿ ತಾರಕಾಸುರ, ಮಕರಾಸುರ ಮತ್ತು ಯುದ್ಧಮಾರಿ ಎಂಬ ಮೂರು ರಾಕ್ಷಸ ಅಣ್ಣತಮ್ಮಂದಿರು, ಇವರಿಗೆ ಒಬ್ಬಳು ತಂಗಿಯಿದ್ದಳು. ಅವಳು ಭೂಮಿಗೂ ಆಕಾಶಕ್ಕೂ ನಡುವೆ ಹೆಬ್ಬೆಟ್ಟಿನ ಮೇಲೆ ಅವರ ಪಟ್ಟಣವನ್ನು ಹಿಡಿದುಕೊಂಡಿದ್ದಳು. ತಾರಕಾಸುರ ಮತ್ತು ಮರಕಾಸುರರಿಗೆ ಮಾಲಿ ಮತ್ತು ಸುಮಾಲಿ ಎಂಬುವವರು ಹೆಂಡತಿಯರು. ಕಿರಿಯವನಿಗೆ ಮದುವೆಯಾಗಿರಲಿಲ್ಲ. ಪರಾಕ್ರಮಿಗಳಾದ ಇವರು ದೇವಾನುದೇವತೆಗಳನ್ನೆಲ್ಲಾ ಶರ ಬಂಧನದಲ್ಲಿಟ್ಟು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದರು. ತ್ರಿಮೂರ್ತಿಗಳು ಮಾತ್ರ ಇವರ ಕೈಗೆ ಸಿಕ್ಕಿರಲಿಲ್ಲ. ಇವರಿಗೆ ಇಷ್ಟೊಂದು ಬಲ ಸಾಮರ್ಥ್ಯಗಳಿದ್ದುದು ಅವರ ಹೆಂಡತಿಯರ ಪತಿವ್ರತಾ ಬಲದಿಂದ. ಒಮ್ಮೆ ನಾರದನು ತ್ರಿಮೂರ್ತಿಗಳ ಹತ್ತಿರ ಬಂದು ರಾಕ್ಷಸರನ್ನು ಹೀಗೆ ಬೆಳೆಯಲು ಬಿಟ್ಟರೆ ದೇವತೆಗಳಿಗೆ ತುಂಬಾ ಕಷ್ಟವಾಗುತ್ತದೆ. ಎಲ್ಲಿ ನೋಡಿದರೂ ಅವರ ಹಾವಳಿಯೆ, ಏನಾದರು ಮಾಡಿ ಅವರನ್ನು ನಾಶ ಮಾಡಬೇಕೆಂದು ಹೇಳಿದಾಗ ತ್ರಿಮೂರ್ತಿಗಳು ಒಂದು ಪರಿಹಾರವನ್ನು ಕಂಡುಹಿಡಿಯುವಂತೆ ನಾರದನಿಗೆ ಹೇಳುತ್ತಾರೆ. ಅದಕ್ಕೆ ನಾರದ "ಅವರ ಹೆಂಡತಿಯರ ಪತಿವ್ರತಾ ಧರ್ಮಕ್ಕೆ ಭಂಗ ತರುವಂತೆ ಮಾಡಿದರೆ ರಾಕ್ಷಸರ ಶಕ್ತಿ ಕುಂದುತ್ತದೆ" ಎಂದು ಹೇಳಿ ಶ್ರೀ ಕೃಷ್ಣನನ್ನು ಕುರಿತು, "ನೀನು ಈಗಲೇ ಹೋಗಿ ಮಾರಮ್ಮನ ಕಾಶಿ ಭಂಡಾರವನ್ನು ತಲೆಗೆ ಹಚ್ಚಿಕೊಂಡು, ಕೆಂಪು ಪೇಟ, ತಲೆಯಿಂದ ಗಡ್ಡದವರೆಗೆ ಅಡ್ಡ ಪಟ್ಟಿ, ಕಚ್ಚೆ ಪಂಚೆ, ಅಂಗಿ, ಕೋಟನ್ನು ಧರಿಸಿಕೊಂಡು, ಹೆಗಲ ಮೇಲೆ ವಿವಿಧ ಬಣ್ಣದ ವಸ್ತ್ರಗಳನ್ನು ಹಾಕಿಕೊಂಡು, ಸೊಂಟಕ್ಕೆ ಕೆಂಪು ವಸ್ತ್ರವನ್ನು ಧರಿಸಿಕೊಂಡು, ಹಣೆಗೆ ವಿಭೂತಿ, ಕುಂಕುಮ ಇಟ್ಟು, ಕೈಯಲ್ಲಿ ಬುಡುಬುಡಿಕೆಯನ್ನು ಹಿಡಿದು ಮಾಯಾ ವೇಷದಿಂದ ರಾಕ್ಷಸರ ಪಟ್ಟಣಕ್ಕೆ ಹೋಗು. ಅವರ ಹೆಂಡತಿಯರಾದ ಮಾಲಿ ಮತ್ತು ಸುಮಾಲಿಯರು ಸಂತಾನವಿಲ್ಲದೆ ಕೊರಗುತ್ತಿದ್ದಾರೆ. ನೀನು ಈ ಪಟ್ಟಣದ ಮುಂಭಾಗದಲ್ಲಿ ನಿಂತುಕೊಂಡು, ಹೊತ್ತು ಹುಟ್ಟುವುದಕ್ಕೆ ಮುಂಚೆ ಇಲ್ಲೊಂದು ಅಶ್ವತ್ಥ ವೃಕ್ಷ ಹುಟ್ಟುತ್ತದೆಯೆಂದೂ, ಅದಕ್ಕೆ ಪೂಜೆ ಪುನಸ್ಕಾರ ಮಾಡಿ ಮೂರು ಸುತ್ತು ಪ್ರದಿಕ್ಷಿಣೆ ಹಾಕಿ ತಬ್ಬಿಕೊಂಡವರಿಗೆ ಮಕ್ಕಳು ಹುಟ್ಟುತ್ತದೆಯೆಂದು ಶಕುನ ನುಡಿ" ಎಂದು ಹೇಳುತ್ತಾನೆ. ಅದರಂತೆ ಕೃಷ್ಣ ಬುಡುಬುಡಿಕೆ ವೇಷ ಧರಿಸಿ ರಾಕ್ಷಸರ ಪಟ್ಟಣಕ್ಕೆ ಹೋಗಿ ಶಕುನ ನುಡಿಯುತ್ತಾನೆ. ಇದನ್ನು ಕೇಳಿದ ಮಾಲಿ ಮತ್ತು ಸುಮಾಲಿಯರು ಶಕುನವನ್ನು ಪರೀಕ್ಷೆ ಮಾಡಲು ಅವನು ಹೇಳಿದಂತೆ ಬೆಳಗಾಗುವುದರೊಳಗಾಗಿ ಬೆಳೆದು ನಿಂತಿದ್ದ ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ ತಬ್ಬಿಕೊಂಡಿದ್ದರಿಂದ ಪಾವಿತ್ರ್ಯಕ್ಕೆ ಭಂಗವುಂಟಾಗಿ ರಾಕ್ಷಸರು ನಾಶವಾದರಂತೆ! ಅವರನ್ನೆಲ್ಲಾ ಸಂಹರಿಸಿ ಕೃಷ್ಣ ಬುಡುಬುಡಿಕೆಯ ವೇಷದಲ್ಲಿ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು "ಸ್ವಾಮಿ ಬುಡುಬುಡಿಕೆಯನ್ನು ನನಗೆ ಕೊಡಿ, ನಿಮ್ಮ ಹೆಸರು ಹೇಳಿಕೊಂಡು ಜೀವನ ನಡೆಸುತ್ತೇನೆ" ಎಂದು ಕೇಳಿದಾಗ, ಕೃಷ್ಣ ಅವನ ಇಷ್ಟದಂತೆ ವೇಷಭೂಷಣವನ್ನೆಲ್ಲಾ ಕೊಟ್ಟು, 'ನೀನು ಭೂಮಿಯಲ್ಲಿ ಸೂರ್ಯ ಚಂದ್ರರಿರುವವರೆಗೂ ಈ ವೃತ್ತಿಯನ್ನು ಸಾಗಿಸು, ನಿನ್ನ ವಂಶದವರಿಗೆ ಬುಡುಬುಡಿಕೆಯೆಂದೇ ಹೆಸರಾಗಲಿ, ಇದಕ್ಕೆ ನೀವು ತಪ್ಪಿದರೆ ನಿಮಗೆ ದರಿದ್ರಾಂಶ ಬರಲಿ' ಎಂದು ಹೇಳಿದ. ಹೀಗೆ ಶ್ರೀಕೃಷ್ಣನ ಕೊಡುಗೆಯಿಂದ ಬುಡುಬುಡಿಕೆಯ ಪರಂಪರೆ ಬೆಳೆದು ಬಂದಿತು" ಎಂಬ ಪ್ರತೀತಿ.

ಕಾರ್ಯ ವೈಖರಿ

[ಬದಲಾಯಿಸಿ]

ಕಲಾವಿದರು ಪ್ರತಿನಿತ್ಯ ಕೋಳಿ ಕೂಗುವ ಮುನ್ನ ಎದ್ದು ಕೈಕಾಲು ಮುಖ ತೊಳೆದುಕೊಂಡು, ಗಂಧದ ಕಡ್ಡಿ ಹಚ್ಚಿ, ದೇವರಿಗೆ ಕೈ ಮುಗಿದು, ವೇಷವನ್ನು ಧರಿಸಿ, ಬಗಲಿಗೆ ಜೋಳಿಗೆಯನ್ನು ತಗುಲಿ ಹಾಕಿಕೊಂಡು, ಕೈಯಲ್ಲಿ ಬುಡುಬುಡಿಕೆ ಹಿಡಿದು ಹಳ್ಳಿ ಹಳ್ಳಿಗೆ ಹೋಗುತ್ತಾರೆ. ಕೋಳಿ ಕೂಗಿದಾಗಿನಿಂದ ಹಿಡಿದು ಬಿಸಿಲು ಸುಡುವವರೆಗೆ (ಬೆಳಿಗ್ಗೆ ಸುಮಾರು ೯ ಗಂಟೆ) ನುಡಿದ ಶಕುನ ಸತ್ಯವಾಗುತ್ತದೆ ಎಂಬ ನಂಬಿಕೆ ಕಲಾವಿದರದ್ದು. ಇವರು ಮನೆ ಮನೆಯ ಬಾಗಿಲಿಗೆ ಹೋಗಿ ಬುಡುಬುಡಿಕೆ ನುಡಿಸಿಕೊಂಡು 'ಜಯವಾಗಲಿ ಸ್ವಾಮಿ, ಜಯವಾಗಲಿ ಸ್ವಾಮಿ' ಎಂದು ಶುಭವನ್ನು ಹಾರೈಸುತ್ತಾ ಶಕುನವನ್ನು ನುಡಿಸುತ್ತಾರೆ. ಅವರು ನುಡಿದದ್ದನ್ನು 'ಹಾಲಕ್ಕಿ ಶಕುನ' ಎಂದು ಹೇಳುತ್ತಾರೆ. "ಶ್ರೀ ಕೃಷ್ಣ ನುಡಿಸಿದಂತೆ ನುಡಿಯುತ್ತೇವೆ" ಎನ್ನುತ್ತಾರೆ ಕಲಾವಿದರು.

ಬುಡುಬುಡಿಕೆ ವಾದ್ಯ

[ಬದಲಾಯಿಸಿ]

ಬುಡುಬುಡಿಕೆ ಒಂದು ಚತುವಾ‍ದ್ಯ. ಅದನ್ನು 'ಕಿರು ಡಮರುಗ' ಎಂದೂ ಕರೆಯುತ್ತಾರೆ. ಮೂರು-ನಾಲ್ಕು ಅಂಗುಲ ಉದ್ದದ ಮರದ ಹೊಳಲಿನ ಎರಡು ಪಕ್ಕಗಳಿಗೂ ಹದ ಮಾಡಿದ ತೆಳು ಚರ್ಮವನ್ನು ಬಿಗಿದು ಕಟ್ಟಿ ಇದನ್ನು ರೂಪಿಸಿರುತ್ತಾರೆ. ಹೋಳಲಿನ ನಡು ಸಣ್ಣದಾಗಿರುತ್ತದೆ. ಚರ್ಮ ಬಿಗಿಯಲು ಕಟ್ಟಿದ ದಾರಗಳ ಸಂಗಮ ಮಾಡುವುದು ಇಲ್ಲೆ. ಈ ನಡುವನ್ನು ಹಿಡಿದೇ ಬುಡುಬುಡಿಕೆ ಬಾರಿಸುವುದು. ಈ ನಡುವಿಗೆ ತಲಾ ಸುಮಾರು ಮೂರಂಗುಲ ಉದ್ದುದ ಎರಡು ಗಟ್ಟಿ ದಾರಗಳನ್ನು ಕಟ್ಟಿ ಬಿಟ್ಟಿರುತ್ತಾರೆ. ಈ ದಾರಗಳ ತುದಿಯನ್ನು ಗುಂಡಾಗಿರುವಂತೆ ಗಂಟು ಹಾಕಲಾಗಿರುತ್ತದೆ. ನಡುವಿಗೆ ಸರಿಯಾಗಿ ಬಣ್ಣದ ಒಂದು ಕರವಸ್ತ್ರ ಇಳಿ ಬಿದ್ದಿರುತ್ತದೆ. ಬುಡುಬುಡಿಕೆ ಬಾರಿಸುವವನು ಈ ನಡುವನ್ನು ಹಿಡಿದು ಕೈ ಅಲ್ಲಾಡಿಸುತ್ತಿದ್ದರೆ ಮಧ್ಯೆ ಇಳಿ ಬಿಟ್ಟ ದಾರದ ಗಂಟುಗಳು ಎರಡು ಪಕ್ಕದ ಚರ್ಮಗಳಿಗೆ ಬಡಿದು ಸೊಗಸಾದ ನಾದ ಹೊರಹೊಮ್ಮಿಸುತ್ತದೆ.

ನಂಬಿಕೆ

[ಬದಲಾಯಿಸಿ]

ಗ್ರಾಮೀಣರಿಗೆ ಬುಡುಬುಡಿಕೆಯವನು ನುಡಿಯುವ ಶಕುನದ ಬಗ್ಗೆ ಅಪಾರವಾದ ನಂಬಿಕೆ. ಇವರು ಮನೆ ಬಾಗಿಲಿಗೆ ಬಂದಾಗ ಧವಸ ಧಾನ್ಯಗಳನ್ನು ಕೊಟ್ಟು ಕಳಿಸುತ್ತಾರೆ. ಬುಡುಬುಡಿಕೆಯವ ಚತುರ ಮಾತುಗಾರ, ಹಠವಾದಿ. ಹೇಗಾದರೂ ಮಾಡಿ ಕಾಳು-ಕಡ್ಡಿಗಳ ಜೊತೆಗೆ ಹಳೆಯ ಬಟ್ಟೆಗಳನ್ನು ಗಿಟ್ಟಿಸುತ್ತಾನೆ. ಮಾತಿಗೊಮ್ಮೆ ಬುಡುಬುಡಿಕೆ ನುಡಿಸುತ್ತಾ ಅವನು ಆಡುವ ಮಾತು ಬಹಳ ಚೆಂದ. ಶುಭಾಶುಭಗಳನ್ನು ಅವನು ಬಹು ಜಾಣ್ಮೆಯಿಂದ ಹೇಳುತ್ತಾನೆ. ಅಶುಭವಿದ್ದಾಗ ಅದಕ್ಕೆ ಶಾಂತಿ ಪರಿಹಾರವನ್ನು ಸೂಚಿಸುತ್ತಾನೆ. 'ಜಾವ ಕಟ್ಟುವುದು' ಬುಡುಬುಡಿಕೆಯವರ ಸಂಪ್ರದಾಯ. ಸರಿ ರಾತ್ರಿಯಲ್ಲಿ ಸ್ಮಶಾನ ಭೂಮಿ ಸಂಚರಿಸಿ ಅಲ್ಲಿ ಹಾಲಕ್ಕಿ ನುಡಿಯುವುದನ್ನು ಆಲಿಸಿ, ಅದನ್ನು ಬೆಳಗಿನ ಜಾವ ಊರ ಬೀದಿಗಳಲ್ಲಿ ಏಕಾಂಗಿಯಾಗಿ ಬುಡುಬುಡಿಕೆ ನಡೆಸುತ್ತಾ ಪ್ರಸಾರ ಮಾಡುತ್ತಾನೆ. 'ಹಾಲಕ್ಕಿ ಎನ್ನುವುದು ಶಕುನದ ಹಕ್ಕಿ, ಈ ಹಕ್ಕಿ ನುಡಿ ಬುಡುಬುಡಿಕೆಯವರಿಗೆ ಮಾತ್ರ ಅರ್ಥವಾಗುವ ಭಾಷೆಯಂತೆ! ಅದನ್ನು ಅರ್ಥಮಾಡಿಕೊಂಡು ಅವರು ಜನಕ್ಕೆ ಹೇಳುತ್ತಾರೆ. ಅದಕ್ಕೇ ಅವರ ಮಾತಿನ ಮಧ್ಯೆ ಆಗಾಗ 'ಹಾಲಕ್ಕಿ ನುಡಿತೈತೆ' ಎನ್ನುತ್ತಿರುತ್ತಾರೆ. ಅವನ ನಿರೂಪಣೆ ನಿಜಕ್ಕೂ ಒಂದು ವಿಶಿಷ್ಠ ಕಲೆ!.

ಉಲ್ಲೇಖ

[ಬದಲಾಯಿಸಿ]

ಗೊ. ರು. ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಪುಟ ಸಂಖ್ಯೆ ೧೩೦-೧೩೧