ಗೊ. ರು. ಚನ್ನಬಸಪ್ಪ

ವಿಕಿಪೀಡಿಯ ಇಂದ
Jump to navigation Jump to search
ಗೊ. ರು. ಚನ್ನಬಸಪ್ಪ
ಜನನಮೇ ೧೮, ೧೯೩೦
ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ
ವೃತ್ತಿಜಾನಪದ ತಜ್ಞರು, ಶಿಕ್ಷಕರು, ಆಡಳಿತಗಾರರು

ಗೊ. ರು. ಚನ್ನಬಸಪ್ಪ (ಮೇ ೧೮, ೧೯೩೦) ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಹೆಸರಾಗಿದ್ದಾರೆ.

ಜೀವನ[ಬದಲಾಯಿಸಿ]

ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ೧೮ನೇ ಮೇ ೧೯೩೦ರಲ್ಲಿ ಜನಿಸಿದರು. ಅವರ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ಅವರ ತಾಯಿಯವರು ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗುತ್ತಿದ್ದರಂತೆ . ರಜದ ದಿನಗಳಲ್ಲಿ ಬಾಲಕ ಚನ್ನಬಸಪ್ಪನವರೂ ಕೂಲಿಗೆ ಹೋಗುತ್ತಿದ್ದರು. ಅವರಿಗೆ ದಿನಕ್ಕೆ ಒಂದೂವರೆ ಆಣೆ ಕೂಲಿ ಸಿಗುತ್ತಿತ್ತು. "ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದು ಹೊತ್ತಿನ ಊಟ!" ಎಂದು ತಮ್ಮ ಬಾಲ್ಯವನ್ನು ಗೊ.ರು. ಚನ್ನಬಸಪ್ಪನವರು ಚಿತ್ರಿಸುತ್ತಾರೆ.

ವ್ಯಾಸಂಗ[ಬದಲಾಯಿಸಿ]

 • ಚಿಕ್ಕಮಗಳೂರು ಜಿಲ್ಲಾ ತರೀಕೆರೆ ತಾಲೂಕಿನ ಒಂದು ಚಿಕ್ಕ ಹಳ್ಳಿ-ಗೊಂಡೇದಹಳ್ಳಿ. ಗ್ರಾಮೀಣ ಪರಿಸರದಲ್ಲೇ ಬೆಳೆದ ಗೊ. ರು. ಚನ್ನಬಸಪ್ಪನವರು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲುಗೊಂಡರು. ಆ ಸಂದರ್ಭದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರು, ಗುದ್ಲೆಪ್ಪ ಹಳ್ಳಿಕೇರಿ, ಮೊದಲಾದ ನಾಡ ಅಭಿಮಾನಿಗಳನ್ನು ಇವರಿಗೆ ನಿಕಟವಾಗಿ ನೋಡಲು ಅವಕಾಶವಾಯಿತು. ಅವರ ನಡೆ-ನುಡಿಗಳು ಚನ್ನಬಸಪ್ಪನವರ ಮೇಲೆ ಅಳಿಯದ ಪ್ರಭಾವ ಬೀರಿದವು. ಇವರು ಪ್ರೌಢಶಾಲೆ ಕಲಿತದ್ದು ಬೀರೂರಿನಲ್ಲಿ.
 • ಸ್ವಾತಂತ್ರ್ಯ ಚಳವಳಿ ಭಾಗವಾಗಿ ಪ್ರತಿದಿನ ಬೆಳಗ್ಗೆ ನಡೆಯುತ್ತಿದ್ದ ಪ್ರಭಾತ್‌ಭೇರಿಯಲ್ಲಿ ಸ್ವಾತಂತ್ರ್ಯ ಗೀತೆಗಳನ್ನು ಇವರೇ ಹಾಡುತ್ತಿದ್ದರು. ಅವುಗಳಲ್ಲಿ ಒಂದು ಗೀತೆಯ ಒಂದೆರಡು ಸಾಲುಗಳು ಹೀಗಿದ್ದುವಂತೆ: "ಓ ತಮ್ಮ, ಓ ತಂಗಿ, ಓ ಏನಂತಿ? ಹಾಕಬೇಕು ಇನ್ನು ಖಾದಿ, ಹಿಡಿಬೇಕು ಹಳ್ಳಿ ಹಾದಿ, ಓ ಏನಂತಿ?" ಆ ಸಾಲುಗಳೇ ಅವರ ಬದುಕಿನ ಸೂತ್ರಗಳಾದವು.
 • ಅಂದಿನಿಂದ ಹುಟ್ಟಿದ ಹಳ್ಳಿಯ ಸೇವೆಯೇ ಅವರ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ಅವರ ರೂಢಿಯಾಯಿತು. ಈ ಎರಡನ್ನು ಇಂದಿಗೂ ಅವರು ಪರಿಪಾಲಿಸಿಕೊಂಡು ಬಂದಿದ್ದಾರೆ.

ವಿವಿದ ಜವಾಬ್ಧಾರಿ ನಿರ್ವಹಣೆ[ಬದಲಾಯಿಸಿ]

 • ೧೯೪೮ರ ವರ್ಷದಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಚನ್ನಬಸಪ್ಪನವರು ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣ ತರಬೇತಿಯನ್ನು ಪಡೆದವರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಚನ್ನಬಸಪ್ಪನವರು ಸೇವೆ ಸಲ್ಲಿಸಿದ್ದಾರೆ.
 • ಚನ್ನಬಸಪ್ಪನವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿ ಸಹಾ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
 • ಅವರ ಅಧಿಕಾರಾವಧಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಮಹತ್ವ ಪೂರ್ಣ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಚನ್ನಬಸಪ್ಪನವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಕಾರ್ಯನಿರ್ವಹಿಸಿದ್ದಾರೆ.

ಗಾಂಧೀ ಚಿಂತನ[ಬದಲಾಯಿಸಿ]

"ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ. ಆದರೆ ಗ್ರಾಮೀಣರ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು ನೆಲಕಚ್ಚಿ ಹೋಗಿವೆ. ಇದು ನಿಜಕ್ಕೂ ಒಂದು ನಿರಾಸೆಯ ಬೆಳವಣಿಗೆ. ನಮ್ಮ ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು. ಆದರೆ ಆ ನೆಲಗಟ್ಟನ್ನು ಭದ್ರಪಡಿಸುವ ಪ್ರಾಮಾಣಿಕ ಪ್ರಯತ್ನ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ವ್ಯವಸ್ಥೆಗಳಿಂದ ನಡೆಯಲಿಲ್ಲವೆಂದೇ ಅನಿಸುತ್ತದೆ. ನಮ್ಮ ಹಳ್ಳಿಗಳ ಕ್ರಿಯಾಶೀಲ ಬದುಕನ್ನು ಹಾಳುಮಾಡಿರುವ, ಅಲ್ಲಿನ ಜನರ ಪರಂಪರೆಯ ಜೀವನ ಸಂಸ್ಕೃತಿಯನ್ನು ವಿಕೃತಗೊಳಿಸಿರುವ ಒಂದು ದೊಡ್ಡ ಅನಿಷ್ಟವೆಂದರೆ ಅಲ್ಲಿ ಪ್ರವೇಶಿಸುವ ಅಪಕ್ವ ರಾಜಕೀಯ. ಈ ಕಳವಳಕಾರಿ ಬೆಳವಣಿಗೆಯ ಬಗೆಗೆ ಪ್ರಜ್ಞಾವಂತರೆಲ್ಲ ಗಂಭೀರವಾಗಿ ಆಲೋಚಿಸಬೇಕು.” ಎನ್ನುತ್ತಾರೆ ಗೊ. ರು. ಚನ್ನಬಸಪ್ಪನವರು.

ಜಾನಪದ ಸಾಹಿತ್ಯ ಸಾಧನೆ[ಬದಲಾಯಿಸಿ]

 • ಗೊ.ರು ಚನ್ನಬಸಪ್ಪನವರ ಇನಿದಾದ ದನಿಯಲ್ಲಿ ಜಾನಪದ ಸಾಹಿತ್ಯ ಸುಧೆಯನ್ನು ಸವಿಯುವುದೇ ಸೊಗಸು. ಚನ್ನಬಸಪ್ಪ ಅವರು ಹಿರಿಯ ಜಾನಪದ ತಜ್ಞರು, ಸದ್ಯದ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರು.
 • ಅವರು ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು.
 • ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು, ಮುಂತಾದ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ.
 • ೧೯೭೭ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ.
 • ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ.

ಪ್ರಮುಖ ಕೃತಿಗಳು[ಬದಲಾಯಿಸಿ]

 • ಮಹಾದೇವಿ,
 • ಸದಾಶಿವ ಶಿವಾಚಾರ್ಯ,
 • ಕರ್ನಾಟಕ ಪ್ರಗತಿಪಥ,
 • ಚೆಲುವಾಂಬಿಕೆ,
 • ಕುನಾಲ,
 • ಸಾಕ್ಷಿ ಕಲ್ಲು,
 • ಬೆಳ್ಳಕ್ಕಿ ಹಿಂಡು ಬೆದರ್ಯಾವೊ,
 • ಬಾಗೂರು ನಾಗಮ್ಮ,
 • ಗ್ರಾಮ ಗೀತೆಗಳು,
 • ವಿಭೂತಿ,
 • ಕರ್ನಾಟಕ ಜನಪದಕಲೆಗಳು ಗೊ.ರು. ಚನ್ನಬಸಪ್ಪನವರ ಪ್ರಮುಖ ಬರಹಗಳು.