ಅರಿಸಿನ ತೇಗ
ಅರಿಸಿನ ತೇಗ, ಹೆತ್ತೇಗ (ಅಣವು) | |
---|---|
Haldina cordifolia | |
Scientific classification | |
ಸಾಮ್ರಾಜ್ಯ: | |
Division: | |
ವರ್ಗ: | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | ಹಲ್ಡಿನ(Haldina) Ridsdale
|
ಪ್ರಜಾತಿ: | H. cordifolia
|
Binomial name | |
ಹಲ್ದಿನ (ಅಡಿನ) ಕಾರ್ಡಿಫೊಲಿಯ en:Haldina cordifolia (Roxb.) Ridsdale
|
ಅರಿಸಿನ ತೇಗ ರೂಬಿಯೇಸೀ ಕುಟುಂಬಕ್ಕೆ ಸೇರಿದ ಅರಣ್ಯವೃಕ್ಷ. ಯತ್ಯಾಗ, ಹೆತ್ತೇಗ, ಹೆದ್ದಿ ಎಂಬ ಹೆಸರುಗಳನ್ನೂ ಉಳ್ಳ ಈ ಮರದ ವೈಜ್ಞಾನಿಕ ಹೆಸರು ಅಡಿನ ಕಾರ್ಡಿಫೋಲಿಯ. ಒಂದು ದೊಡ್ಡ ಪ್ರಮಾಣದ ಪರ್ಣಪಾತಿ ಮರ ಎಂದೂ ಹೇಳಬಹುದು. ಮಧ್ಯಮ ಗಾತ್ರದಿಂದ ಹಿಡಿದು ಅತಿ ದೊಡ್ಡ ಗಾತ್ರದ ಮರವಾಗಿ ಬೆಳೆಯುತ್ತದೆ. ಇದು ಮುಖ್ಯವಾಗಿ ಭಾರತ ಹಾಗೂ ನೆರೆಯ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಮರ.[೧] ಚೌಗಿಲ್ಲದ ಬೆಟ್ಟದ ತಪ್ಪಲು ಪ್ರದೇಶ, ನೀರು ಬಸಿದು ಹೋಗುವಂಥ ಮೆಕ್ಕಲು ಮಣ್ಣಿನ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಫಲವತ್ತಾದ ಪ್ರದೇಶದಲ್ಲಿ ಸುಮಾರು 5 ಮೀ ಸುತ್ತಳತೆಯವರೆಗೂ ಬೆಳೆದ ನಿದರ್ಶನಗಳಿವೆ. ವರ್ಷಂಪ್ರತಿ ಎಲೆ ಉದುರುವ ಅರಣ್ಯಗಳಲ್ಲಿ (ಡೆಸಿಡ್ಯುವಸ್) ಹೆಚ್ಚಾಗಿ ಬೆಳೆಯುತ್ತದೆ. ಇದು ನುಣುಪಾದ ಕಣರಚನೆಯುಳ್ಳ (ಈವನ್‍ಗ್ರೇನ್ಡ್) ಸಾಧಾರಣ ಗಟ್ಟಿ ಜಾತಿಯ ಮರ. ಹೊಸದಾಗಿ ಕಡಿದಾಗ ಈ ಮರದ ಬಣ್ಣ ನಿಂಬೆ ಹಳದಿ. ಕ್ರಮೇಣ ಮಾಸಲು ಹಳದಿಬಣ್ಣಕ್ಕೆ ತಿರುಗುತ್ತದೆ.
ತುಳುವಿನಲ್ಲಿ ಅಣವು, ಹಿಂದಿಯಲ್ಲಿ ಕದಂಬ ಎಂದೂ ಹೆಸರು ಇದೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಸುಮರು 30 ಮೀಗಳಿಗೂ ಎತ್ತರಕ್ಕೆ ಅಗಲವಾಗಿ ಹರಡಿಕೊಂಡು ಬೆಳೆಯುವ ಮರ ಇದು. ಇದು ದೊಡ್ಡ ಹಂದರವುಳ್ಳ ಮರ. ಕಾಂಡ ನೇರವಾಗಿ ಬೆಳೆದಿರುವುದು. ಊರೆ ಬೇರುಗಳಿದ್ದು ಕಾಂಡದ ಕೆಳಭಾಗ ವಿಚಿತ್ರ ಆಕಾರ ಹೊಂದಿರುವುದು. ಹೃದಯಾಕಾರದ ಎಲೆಗಳಿದ್ದು, ತೊಗಟೆ ಬೂದು ಬಣ್ಣವಾಗಿರುತ್ತದೆ. ತೊಗಟೆ ಸುಲಿದಾಗ ಒಳಭಾಗ ತಿಳಿಗೆಂಪು ಬಣ್ಣಕ್ಕೆ ಇರುತ್ತದೆ. ಇದರ ದಾರುವು ಹಳದಿ ಬಣ್ಣದಾಗಿದ್ದು ಸಾಧಾರಣ ಗಡುಸಾಗಿರುತ್ತದೆ. ನುಣುಪಾಗಿದ್ದು ಉತ್ತಮವಾಗಿ ಹೊಳಪು ಬರುತ್ತದೆ. ಮರದ ಕೆಲಸಗಳಿಗೆ ಸುಲಭವಾಗಿದೆ.
ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಎಲೆಗಳೆಲ್ಲ ಉದುರಿಹೋಗಿ ಮೇ-ಜೂನ್ ತಿಂಗಳಿನವೆರೆಗೂ ಮರದಲ್ಲಿ ಎಲೆಗಳೇ ಇರುವುದಿಲ್ಲ. ಜೂನ್-ಆಗಸ್ಟ್ ತಿಂಗಳುಗಳಲ್ಲಿ ಹೂಗಳು ಅರಳುವವು. ಹಣ್ಣು ಬಲಿಯುವುದು ಅಕ್ಟೋಬರ್ ವೇಳೆಗೆ. ಬೀಜಗಳು ಬಲು ಸಣ್ಣ ಗಾತ್ರದವು.
ಬೇಸಾಯ
[ಬದಲಾಯಿಸಿ]ಮರ ಶುಷ್ಕಹವೆಯನ್ನು ಸಹಿಸಬಲ್ಲದು. ಎಳೆಯ ಸಸಿಗಳು ದನಕರುಗಳಿಗೂ ಮೇಕೆಗಳಿಗೂ ಜಿಂಕೆಗಳಿಗೂ ಮೆಚ್ಚಿನ ಆಹಾರವಾಗಿರುವುದರಿಂದ ಹಾನಿಗೊಳಗಾಗುತ್ತವೆ. ಸ್ವಾಭಾವಿಕ ಪುನರುತ್ಪತ್ತಿ ಇದೆ. ಬೀಜ ಸಣ್ಣಗಿರುವುದರಿಂದ ಬಿತ್ತನೆಯಿಂದ ಬೆಳೆಸುವುದು ಕಷ್ಟಸಾಧ್ಯವಾದರೂ ಒಟ್ಟುಪಾತಿಗಳಲ್ಲಿ ಬಿತ್ತಿ, ಸಸಿಗಳನ್ನು ಪಡೆದು ಬೇಕೆನಿಸಿದ ಕಡೆ ನಾಟಿ ಮಾಡುವುದು ರೂಢಿಯಲ್ಲಿರುವ ಪದ್ಧತಿ.
ಉಪಯೋಗಗಳು
[ಬದಲಾಯಿಸಿ]ಇದರ ಚೌಬೀನೆ ಗಟ್ಟಿ ಹಾಗೂ ಬಲಯುತ. ಗೃಹನಿರ್ಮಾಣದಲ್ಲಿ, ಪೀಠೋಪಕರಣಗಳ ತಯಾರಿಕೆಯಲ್ಲಿ, ಕೆತ್ತನೆ ಕೆಲಸಗಳಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
ಮರ ಕೊರೆಯಲು ಸುಲಭ, ಹದಮಾಡಲು ತುಂಬ ಯೋಗ್ಯವಾಗಿದೆ. ಮರವನ್ನು ಮನೆಯ ಮರಮುಟ್ಟು ಸಾಮಾನು, ಬಾಚಣಿಗೆ, ಕಂಡರಣೆ ಸಾಮಾನು, ಆಟದ ಸಾಮಾನು, ಬ್ಯಾಟರಿ ಸೆಪರೇಟರ್ ಮತ್ತು ಸಣ್ಣ ಪೆಟ್ಟಿಗೆಗಳು ಇತ್ಯಾದಿಗಳನ್ನು ಮಾಡಲು ಸಾಧಾರಣವಾಗಿ ಉಪಯೋಗಿಸುತ್ತಾರೆ. ಇತ್ತೀಚೆಗೆ, ನೂಲಿನ ಮತ್ತು ಬಟ್ಟೆ ಗಿರಣಿಗಳಲ್ಲಿ ಉಪಯೋಗಿಸುವ ಉರುಟಣೆಗಳನ್ನು (ಬಾಬಿನ್ಸ್) ತಯಾರಿಸಲು ವಿಶೇಷವಾಗಿ ಉಪಯೋಗಿಸುತ್ತಾರೆ. ಪಶ್ಚಿಮ ಕರಾವಳಿಯಲ್ಲಿ ಸಣ್ಣ ಸಣ್ಣ ದೋಣಿಗಳನ್ನು ತಯಾರಿಸಲು ಇವನ್ನು ಬಳಸುತ್ತಾರೆ.
ಛಾಯಾಂಕಣ
[ಬದಲಾಯಿಸಿ]-
at Ananthagiri Hills, in Rangareddy district of ಆಂಧ್ರ ಪ್ರದೇಶ, India.
-
at Ananthagiri Hills, in Rangareddy district of ಆಂಧ್ರ ಪ್ರದೇಶ, India.
-
at Ananthagiri Hills, in Rangareddy district of ಆಂಧ್ರ ಪ್ರದೇಶ, India.
-
Trunk at Udawatta Kele Sanctuary, Sri Lanka
-
Trunk at Udawatta Kele Sanctuary, Sri Lanka
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
ಉಲ್ಲೇಖಗಳು
[ಬದಲಾಯಿಸಿ]- ↑ "Adina cordifolia (Roxb.) Brandis". Plants of the World Online. Royal Botanic Gardens, Kew. Retrieved 2023-03-18.