ಆಸ್ಟ್ರಿಯ
ಆಸ್ಟ್ರಿಯ ಗಣರಾಜ್ಯ ಜರ್ಮನ್:Republik Österreich | |
---|---|
Anthem: Land der Berge, Land am Strome(ಜರ್ಮನ್) ಪರ್ವತಗಳ ನಾಡು, ನದಿಯ ತೀರದ ನಾಡು | |
Capital | ವಿಯೆನ್ನ |
Largest city | ರಾಜಧಾನಿ |
Official languages | ಜರ್ಮನ್, ಸ್ಥಳೀಯವಾಗಿ ಸ್ಲೊವೇನ್, ಕ್ರೊಯೇಷಿಯನ್ ಮತ್ತು ಹಂಗೇರಿಯನ್ ಕೂಡ |
Demonym(s) | Austrian |
Government | ಸಂಯುಕ್ತ ಸಂಸದೀಯ ಗಣರಾಜ್ಯ |
ಹೆಯಿನ್ಙ್ ಫಿಶರ್ | |
• ಚಾನ್ಸಲರ್ | ವರ್ನರ್ ಫೇಯ್ಮನ್ |
ಸ್ವಾತಂತ್ರ್ಯ | |
• ಆಸ್ಟ್ರಿಯದ ರಾಜ್ಯ ಒಪ್ಪಂದ ರೂಢಿಯಲ್ಲಿ | ಜುಲೈ ೨೭, ೧೯೫೫ |
ಅಕ್ಟೋಬರ್ ೨೬, ೧೯೫೫ (ಮುಂಚೆ: ಆಸ್ಟ್ರಿಯಾದ ಸಾಮ್ರಾಜ್ಯ: ೧೮೦೪, ಮೊದಲ ಆಸ್ಟ್ರಿಯಾದ ಗಣರಾಜ್ಯ: ೧೯೧೮) | |
• Water (%) | 1.7 |
Population | |
• 2007 estimate | 8,316,487 (93rd) |
• 2023 census | 9,104,772 |
GDP (PPP) | 2008 estimate |
• Total | $317.007 ಶತಕೋಟಿ[೧] (34th) |
• Per capita | $39,647[೧] (IMF) (8th) |
GDP (nominal) | 2008 estimate |
• Total | $371.219 billion[೧] (23rd) |
• Per capita | $44,851[೧] (IMF) (12th) |
Gini (2000) | 29.1 low |
HDI (2005) | 0,951 Error: Invalid HDI value · 14th |
Currency | ಯುರೋ (€) ² (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 43 |
Internet TLD | .at ³ |
|
ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್‍ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್‍ಲ್ಯಾಂಡ್ ಮತ್ತು ಲೈಕ್ಟೆನ್‍ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ.[೨]
ಇತಿಹಾಸ
[ಬದಲಾಯಿಸಿ]ಈಗ ಇದು ಮಧ್ಯ ಯುರೋಪಿನ ಒಂದು ಸಣ್ಣ ರಾಜ್ಯವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯದ ಕೇಂದ್ರವಾಗಿತ್ತು. ಇದರ ಆಗುಹೋಗುಗಳು ಮಧ್ಯಯುರೋಪಿನ ಇತರ ರಾಜ್ಯಗಳ ಇತಿಹಾಸದೊಂದಿಗೆ ಹೆಣೆದುಕೊಂಡಿವೆ. ಪುರಾತನ ಶಿಲಾಯುಗದಿಂದಲೂ ಇಲ್ಲಿ ಜನರು ವಾಸಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಪ್ರ.ಶ.ಪು.14ರಲ್ಲಿ ರೋಮನ್ನರು ಡ್ಯಾನ್ಯೂಬ್ ನದಿಗೆ ದಕ್ಷಿಣಕ್ಕಿರುವ ಭಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡು ನಾರಿಕಂ ಮತ್ತು ಪೆನೋನಿಯ ಎಂಬ ಎರಡು ಪ್ರಾಂತ್ಯಗಳನ್ನು ನಿರ್ಮಿಸಿದರು. ಪೆನೋನಿಯದಲ್ಲಿದ್ದ ವಿಂಡೊಬೋನ ಎಂಬ ನಗರವೇ ಇಂದಿನ ವಿಯನ್ನ. ಡ್ಯಾನ್ಯೂಬ್ ನದಿಗೆ ಉತ್ತರದಲ್ಲಿರುವ ಪ್ರಾಂತ್ಯವನ್ನು ಮಾರ್ಕೊಮ್ಯಾನಿ ಎಂಬ ಜನರು ಆಕ್ರಮಿಸಿದರು. ಮುಂದೆ ಐದಾರು ಶತಮಾನಗಳ ಅವಧಿಯಲ್ಲಿ ವ್ಯಾಂಡರು, ಗಾಥರು, ಹೂಣರು, ಲಂಬಾರ್ಡರು, ಆವಾರರು ಈ ದೇಶಕ್ಕೆ ನುಗ್ಗಿ ಬಂದು ಕೆಲಕಾಲ ಆಕ್ರಮಿಸಿ ನಿಂತರು. 8ನೆಯ ಶತಮಾನದ ಅಂತ್ಯಭಾಗದಲ್ಲಿ ಸಾಮ್ರಾಟ ಚಾರ್ಲ್ಸ್ ಮಹಾಶಯ ಆವಾರರನ್ನು ಸೋಲಿಸಿ ಈಸ್ಟ್ ಮಾರ್ಕ್ ಎಂಬ ಪ್ರಾಂತ್ಯವನ್ನು ನಿರ್ಮಿಸಿದ. ಆಸ್ಟ್ರಿಯ ಸಾಮ್ರಾಜ್ಯದ ಇತಿಹಾಸ ಇಲ್ಲಿಂದ ಪ್ರಾರಂಭವಾಗುತ್ತದೆಂದು ಅನೇಕರ ಅಭಿಪ್ರಾಯ. ಮುಂದೆ ಹಂಗರಿಯವರು ಇಲ್ಲಿಗೆ ನುಗ್ಗಿ ಭೀಕರ ಹಾವಳಿ ನಡೆಸಿದರು; ಆಸ್ಟ್ರಿಯ ಹೇಳ ಹೆಸರಿಲ್ಲದಾಗುತ್ತದೆಂಬ ಭಯ ತಲೆದೋರಿತು. ಆದರೆ 955ರಲ್ಲಿ ಆಟೊ ಮಹಾಶಯ ಅವರನ್ನು ಆಗ್ಸ್ ಬರ್ಗ್ ಕದನದಲ್ಲಿ ಸೋಲಿಸಿ ಈಸ್ಟ್ ಮಾರ್ಕ್ ಪ್ರಾಂತ್ಯವನ್ನು ಪುನರುಜ್ಜೀವನಗೊಳಿಸಿದ. 973ರಲ್ಲಿ, ಬೇಬನ್ಬರ್ಗ್ ವಂಶದ ಲಿಯೋಪಾಲ್ಡ್ ಎಂಬುವನಿಗೆ ಮಾರ್ಗ್ರೇವ್ ಅಥವಾ ಗಡಿನಾಡಿನ ಸೈನಿಕ ಮಂಡಲಾಧಿಪತಿ ಎಂಬ ಹೆಚ್ಚಿನ ಬಿರುದನ್ನು ಕೊಟ್ಟ. ಈ ಪ್ರಾಂತಾಧಿಪತಿಗಳ ಆಳ್ವಿಕೆಯಲ್ಲಿ ಈಸ್ಟ್ ಮಾರ್ಕ್ ವಿಸ್ತರಿಸಲ್ಪಟ್ಟಿತಲ್ಲದೆ ಆಂತರಿಕ ಭದ್ರತೆಯನ್ನೂ ಪಡೆಯಿತು. 12ನೆಯ ಶತಮಾನದಲ್ಲಿ ದಕ್ಷಿಣದ ಕೆಲವು ಪ್ರದೇಶಗಳನ್ನೂ ಸೇರಿಸಿ ಅದನ್ನು ಡ್ಯೂಕ್ಡಂ ಅಥವಾ ವಂಶಾನುಗತ ಶ್ರೀಮಂತಪದವಿ ಹೊಂದಿರುವವರ ರಾಜ್ಯವನ್ನಾಗಿ ಪರಿವರ್ತಿಸಲಾಯಿತು. ಹೆನ್ರಿ ಜ್ಯಾಸೊಮಿರ್ಗಾಟ್ ಎಂಬಾತ ಸಾಮಂತನಾದ. ಈ ಮನೆತನದ ಅಧಿಪತಿಗಳು ಸಮರ್ಥರಾಗಿದ್ದು, ರಾಜ್ಯವನ್ನು ವಿಸ್ತರಿಸಿದರು. ಇವರಲ್ಲಿ 6ನೆಯ ಲಿಯೊಪಾಲ್ಡ್ ಎಂಬುವನು ಮಾಗ್ಯಾರರ ಮತ್ತು ಮುಸ್ಲಿಮರ ಹಾವಳಿಯನ್ನು ತಡೆಗಟ್ಟಿದ. ಅವನ ತರುವಾಯ ಬಂದ ಫ್ರೆಡರಿಕ್ ಮಾಗ್ಯಾರರ ವಿರುದ್ಧ ನಡೆದ ಕದನದಲ್ಲಿ (1246) ಮಡಿದ. ಇಲ್ಲಿಗೆ ಬೇಬನ್ಬರ್ಗ್ ವಂಶದವರ ಆಳ್ವಿಕೆ ಕೊನೆಗಂಡಿತು.
ಕೊಂಚಕಾಲ ಆಸ್ಟ್ರಿಯದಲ್ಲಿ ಪ್ರಭುಗಳೇ ಇರಲಿಲ್ಲ. ಈ ಗೊಂದಲದಲ್ಲಿ, ಬೊಹಿಮಿಯದ ದೊರೆ ಒಟೇಕರ್ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಹ್ಯಾಬ್್ಸಬರ್ಗ್ ಚಕ್ರವರ್ತಿ 1ನೆಯ ರಡೋಲ್ಫನ ಸಾರ್ವಭೌಮತ್ವವನ್ನು ಆತ ಒಪ್ಪಲಿಲ್ಲವಾದ್ದರಿಂದ ಯುದ್ಧ ಪ್ರಾರಂಭವಾಯಿತು. ಮಾರ್ಚ್ಫೀಲ್್ಡ ಕದನದಲ್ಲಿ ಒಟೇಕರ್ ಮಡಿದ. ಆಸ್ಟ್ರಿಯ ಹ್ಯಾಬ್್ಸಬರ್ಗ್ ರಾಜಮನೆತನದ ಆಳ್ವಿಕೆಗೆ ಬಂತು. ರಡೋಲ್ಫನ ಮಗ ಆಲ್ಬರ್ಟ್ ಆಸ್ಟ್ರಿಯದ ಡ್ಯೂಕನಾದ. ಈ ಮನೆತನದವರ ಆಳ್ವಿಕೆಯಲ್ಲಿ ಆಸ್ಟ್ರಿಯದ ಇತಿಹಾಸ ಭವ್ಯವಾಗಿ 1282-1318ರವರೆಗೂ ಅವಿಚ್ಛಿನ್ನವಾಗಿ ಸಾಗಿತು. 1330ರಲ್ಲಿ ದೊರೆಯಾದ 2ನೆಯ ಆಲ್ಬರ್ಟನ ಕಾಲದಲ್ಲೇ ರಾಜ್ಯ ವಿಸ್ತರಣೆ ಪ್ರಾರಂಭವಾಯಿತು. ಕಾರಿಂಥಿಯ, ಟೈರಾಲ್ ಮುಂತಾದ ನೆರೆಯ ರಾಜ್ಯಗಳು ಆಸ್ಟ್ರಿಯಕ್ಕೆ ಸೇರಿದುವು. ಐದನೆಯ ಆಲ್ಬರ್ಟ್ ಸಿಜಸ್ಮಂಡ್ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಹಂಗರಿ ಬೊಹಿಮಿಯ ರಾಜ್ಯಗಳಿಗೂ ದೊರೆಯಾದ; ಎರಡನೆಯ ಆಲ್ಬರ್ಟ್ ಎಂಬ ಹೆಸರಿನಿಂದ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯೂ ಆದ. ಮುಂದೆ, ಆಸ್ಟ್ರಿಯದ ಹ್ಯಾಬ್್ಸಬರ್ಗ್ ರಾಜರು (1740-45ರ ಅವಧಿಯಲ್ಲಿ ಹೊರತು) 1806ರವರೆಗೂ ಪವಿತ್ರ ರೋಮನ್ ಸಾಮ್ರಾಟರೂ ಆಗಿದ್ದರು. ಹೀಗೆ ಆಸ್ಟ್ರಿಯದ ಚರಿತ್ರೆ ಆ ಸಾಮ್ರಾಜ್ಯದ ಇತಿಹಾಸದೊಂದಿಗೆ ಹೆಣೆದುಕೊಂಡಿದೆ (ಪವಿತ್ರ-ರೋಮನ್-ಸಾಮ್ರಾಜ್ಯ). ಈ ಕಾಲದಲ್ಲಿ ಆಸ್ಟ್ರಿಯದ ಐತಿಹಾಸಿಕ ಪ್ರಾಮುಖ್ಯ ಕಂಡುಬರುವುದು ಒಂದೇ ಸಮನಾಗಿ ನಡೆಯುತ್ತಿದ್ದ ಮುಸ್ಲಿಮರ ದಾಳಿಯನ್ನು ತಡೆಗಟ್ಟಿದ್ದರಲ್ಲಿ. ಇಡೀ ಯುರೋಪನ್ನೇ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಮುಸ್ಲಿಮರು ಮೇಲಿಂದ ಮೇಲೆ ಆಸ್ಟ್ರಿಯದ ಮೇಲೆ ನುಗ್ಗುತ್ತಿದ್ದರು. ಅವರ ಹಾವಳಿ ನಿಂತಿದ್ದು 1689ರಲ್ಲಿ, ಅವರು ವಿಯನ್ನ ನಗರಕ್ಕೆ ಮುತ್ತಿಗೆ ಹಾಕಿ ಪರಾಭವ ಹೊಂದಿದಮೇಲೆ. ಹೀಗೆ ಆಸ್ಟ್ರಿಯ ಆ ದಾಳಿಗೆ ತಡೆರಾಜ್ಯವಾಗಿ ನಿಂತಿದ್ದರಿಂದ ಮಧ್ಯ ಮತ್ತು ಪಶ್ಚಿಮ ಯುರೋಪಿನ ರಾಜ್ಯಗಳು ನಿರುಪಾಧಿಕವಾಗಿ ಬೆಳೆಯಲನುಕೂಲವಾಯಿತು. ಆದರೆ 17ನೆಯ ಶತಮಾನದಲ್ಲಿ ಆಸ್ಟ್ರಿಯ ಮತೀಯ ಮತ್ತು ರಾಜಕೀಯ ಗೊಂದಲಕ್ಕೆ ಸಿಕ್ಕಿ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತ ಬಂತು. 1618-48ರ ವರೆಗೆ ನಡೆದ 30 ವರ್ಷಗಳ ಯುದ್ಧದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳೆಲ್ಲ ಭಾಗವಹಿಸಿದುವು. ಜರ್ಮನಿ ಜನಶೂನ್ಯವಾಗಿ ದಟ್ಟದಾರಿದ್ರ್ಯದ ದೇಶವಾಯಿತು; ಪವಿತ್ರ ರೋಮನ್ ಸಾಮ್ರಾಜ್ಯ ಹೆಸರಿಗೆ ಮಾತ್ರ ಸಾಮ್ರಾಜ್ಯವಾಗುಳಿಯಿತು; ಆಸ್ಟ್ರಿಯದ ಪ್ರಾಮುಖ್ಯ ಕುಂದತೊಡಗಿತು. ಈ ವಿಪ್ಲವದ ಲಾಭ ಪಡೆದು ಪ್ರಗತಿ ಹೊಂದಿದ ರಾಷ್ಟ್ರ ಫ್ರಾನ್ಸ್ ಒಂದೇ. ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಬಲಗೊಂಡದ್ದರಿಂದ ಕಾಲಧರ್ಮಕ್ಕೆ ವಿರುದ್ಧವಾದ ಪವಿತ್ರ ರೋಮನ್ ಸಾಮ್ರಾಜ್ಯ ಉಳಿಯುವುದು ಸಾಧ್ಯವೇ ಇರಲಿಲ್ಲ.
ಆದರೂ 1701-14 ರವರೆಗೆ ಸ್ಪೇನ್ ವಾರಸಯುದ್ಧದ ಪರಿಣಾಮವಾಗಿ ಆಸ್ಟ್ರಿಯ, ನೆದರ್ಲೆಂಡ್ಸ್, ಮಿಲಾನ್, ನೇಪಲ್ಸ್ , ಮಾಂಟುಅ ಮತ್ತು ಸಿಸಿಲಿಗಳನ್ನು ಪಡೆಯಿತು. ರಾಷ್ಟ್ರೀಯತಾಭಾವನೆ ಬೆಳೆಯುತ್ತಿದ್ದ ಆ ಕಾಲದಲ್ಲಿ ಇದು ಉಳಿಯುವುದೂ ಸಾಧ್ಯವಿರಲಿಲ್ಲ. 18ನೆಯ ಶತಮಾನದ ಪ್ರಥಮಾರ್ಧದಲ್ಲಿ, 30 ವರ್ಷದ ಯುದ್ಧದ ಪರಿಣಾಮವಾಗಿ ಕುಂದಿದ್ದ ಜರ್ಮನಿಯಲ್ಲಿ ಪ್ರಷ್ಯರಾಜ್ಯ ತಲೆಯೆತ್ತಿ ಬಹುಬೇಗ ಬೆಳೆಯಿತು. ಈ ಮಧ್ಯೆ ಆಸ್ಟ್ರಿಯದಲ್ಲಿ ಪುತ್ರಸಂತಾನವಿಲ್ಲದೆ ದೊರೆ ಆರನೆಯ ಚಾರ್ಲ್ಸ್ ಕಾಲವಾದ (1740). ಇದಕ್ಕೆ ಮುಂಚೆ ಆತ ರಾಜ್ಯದ ಮೂಲಾಧಾರ ಶಾಸನದಲ್ಲಿ (ಪ್ರ್ಯಾಗ್ಮಾಟಿಕ್ ಸ್ಯಾಂಕ್ಷನ್) ತನ್ನ ಮಗಳು ಮೇರಿಯ ಥೆರೀಸಾ ಮುಂದಿನ ರಾಣಿಯಾಗುವುದಕ್ಕೆ ಪ್ರಮುಖ ರಾಷ್ಟ್ರಗಳ ಒಪ್ಪಿಗೆ ಪಡೆದಿದ್ದ. ಆದರೆ 6ನೆಯ ಚಾರ್ಲ್ಸ್ ಕಾಲವಾದ ಕೂಡಲೇ ಆ ಮೂಲಾಧಾರ ಶಾಸನವನ್ನು ಕಡೆಗಣಿಸಿ ಪ್ರಷ್ಯದ ದೊರೆ ಫ್ರೆಡರಿಕ್ ಆಸ್ಟ್ರಿಯಕ್ಕೆ ಸೇರಿದ ಸೈಲೀಷಿಯವನ್ನು ಆಕ್ರಮಿಸಿದ. ಯುರೋಪಿನ ಕೆಲವು ರಾಷ್ಟ್ರಗಳು ಫ್ರೆಡರಿಕ್ನ ಕಡೆ ಸೇರಿದುವು. ಆದರೂ ಎದೆಗುಂದದೆ ಮೇರಿ ಶತ್ರುಗಳನ್ನೆದುರಿಸಿದಳು. 1748ರಲ್ಲಿ ಯುದ್ಧ ನಿಂತಿತು; ಏ-ಲಾ-ಷ್ಯಾಪೆಲ್ ಒಪ್ಪಂದದ ಪ್ರಕಾರ ಸೈಲೀಷಿಯವನ್ನು ಫ್ರೆಡರಿಕ್ಗೆ ಬಿಟ್ಟುಕೊಡಬೇಕಾದರೂ ಮಿಕ್ಕ ಪ್ರಾಂತ್ಯಗಳು ಆಸ್ಟ್ರಿಯಕ್ಕೇ ಉಳಿದುವು.
18ನೆಯ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಕ್ರಾಂತಿಕಾರಕ ಘಟನೆಗಳು ಜರುಗಿದುವು. ಫ್ರೆಡರಿಕ್ ಮಹಾಶಯನ ಆಳ್ವಿಕೆಯಲ್ಲಿ ಪ್ರಷ್ಯ ಅಭಿವೃದ್ಧಿ ಹೊಂದಿ ಆಸ್ಟ್ರಿಯದ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತು. ರಾಷ್ಟೀಯತಾಭಾವನೆ ಎಲ್ಲ ದೇಶಗಳಿಗೂ ವ್ಯಾಪಿಸಿ ಸಾಮ್ರಾಜ್ಯ ಭಾವನೆ ಕ್ಷೀಣಿಸಿತು. ಫ್ರಾನ್ಸಿನ ಮಹಾಕ್ರಾಂತಿ ಉಗ್ರಸ್ವರೂಪ ತಾಳಿ, ಈ ಭಾವನೆಗೆ ಪುರಕವಾದ ಪೆಟ್ಟುಕೊಟ್ಟಿತು. ಕೊನೆಗೆ ನೆಪೋಲಿಯನ್ ಇಡೀ ಯುರೋಪನ್ನೇ ಗೆದ್ದು ರಾಜ್ಯಗಳನ್ನೆಲ್ಲ ಅಸ್ತವ್ಯಸ್ತಗೊಳಿಸಿ 1815ರಲ್ಲಿ ವಾಟರ್ ಲೂ ಕದನದಲ್ಲಿ ಪರಾಭವ ಹೊಂದಿದಾಗ ಸಾಮ್ರಾಜ್ಯತ್ವ ಅಳಿದು ರಾಷ್ಟ್ರೀಯತೆ ಸ್ಥಿರವಾಗಿ ನೆಲೆಸುವುದಕ್ಕೆ ಅನುಕೂಲವಾಯಿತು. 1806ರಲ್ಲೇ ಪವಿತ್ರ ರೋಮನ್ ಸಾಮ್ರಾಜ್ಯ ಕೊನೆಗೊಂಡಿತ್ತು. ಆಸ್ಟರ್ಲಿಟ್ಟ ಕದನದಲ್ಲಿ ನೆಪೋಲಿಯನ್ನನಿಂದ ಆಸ್ಟ್ರಿಯ ತೀವ್ರ ಸೋಲು ಅನುಭವಿಸಿತ್ತು. ನೆಪೋಲಿಯನ್ನನ ಒತ್ತಡದ ಮೇರೆಗೆ ಆಸ್ಟ್ರಿಯ ದೊರೆ 1ನೆಯ ಫ್ರಾನ್ಸಿಸ್ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯ ಸ್ಥಾನವನ್ನು ತ್ಯಜಿಸಿದ್ದನು. 19ನೆಯ ಶತಮಾನದ ಮೊದಲ ದಶಕಗಳಲ್ಲಿ ಆಸ್ಟ್ರಿಯದ ಪ್ರಧಾನಿ ಮೆಟರ್ನಿಕ್ ತನ್ನ ದೇಶದ ಪ್ರಾಧಾನ್ಯವನ್ನು ಕಾಪಾಡಲು ಬಹುವಾಗಿ ಶ್ರಮಿಸಿದ. ಆದರೆ 1848ರಲ್ಲಿ ಯುರೋಪಿನಾದ್ಯಂತ ನಡೆದ ಕ್ರಾಂತಿಯ ಪರಿಣಾಮವಾಗಿ ಆಸ್ಟ್ರಿಯ ಕ್ಷೀಣಿಸಿತು. ಅದೇ ವರ್ಷ ಮೆಟರ್ನಿಕ್ ದೇಶಾಂತರ ಹೋಗಬೇಕಾಯಿತು. ಆದರೂ ದೊರೆ ಫ್ರಾನ್ಸಿಸ್ ಜೋಸೆಫ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ನಿರಂಕುಶಪ್ರಭುವಾಗಿ ಆಳಿದ. 1859ರಲ್ಲಿ ಇಟಲಿಯೊಂದಿಗೆ ನಡೆದ ಯುದ್ಧದಲ್ಲಿ ಆಸ್ಟ್ರಿಯ ಲಾಂಬಾರ್ಡಿಯನ್ನು ಕಳೆದುಕೊಂಡಿತು. 1866ರಲ್ಲಿ ಪ್ರಷ್ಯದೊಂದಿಗೆ ಸಪ್ತವಾರಗಳ ಯುದ್ಧವಾಗಿ ವೆನೀಷಿಯವನ್ನು ಕಳೆದುಕೊಳ್ಳಬೇಕಾಯಿತು. 1867ರಲ್ಲಿ ಆಸ್ಟ್ರಿಯಕ್ಕೆ ಸೇರಿದ ರಾಜ್ಯಗಳ ಪುನರ್ವ್ಯವಸ್ಥೆ ನಡೆದು ಆಸ್ಟ್ರಿಯ-ಹಂಗರಿ ರಾಜ್ಯ ಸ್ಥಾಪನೆಯಾಯಿತು. ಇದು ಒಂದನೆಯ ಮಹಾಯುದ್ಧ ಮುಗಿಯುವವರೆಗೂ ನಡೆದುಬಂದು ಹಂಗರಿ ಪತ್ಯೇಕವಾಯಿತು.
1918ರಲ್ಲಿ ಒಂದನೆಯ ಮಹಾಯುದ್ಧ ಮುಗಿದಮೇಲೆ ಮಾಡಿದ ರಾಜ್ಯವ್ಯವಸ್ಥೆಯಲ್ಲಿ ಆಸ್ಟ್ರಿಯ ಪ್ರಜಾರಾಜ್ಯವಾಗಿ ಪರಿವರ್ತನೆಗೊಂಡಿತು. 1920ರಲ್ಲಿ ಅದು ಸಂವಿಧಾನವನ್ನು ಅಳವಡಿಸಿಕೊಂಡಿತು. ಅದರ ಎಲ್ಲೆಗಳೂ ನಿಗದಿಮಾಡಲ್ಪಟ್ಟವು. 60 ಲಕ್ಷ ಜನಸಂಖ್ಯೆ ಹೊಂದಿದ (ಅದರ ಪೈಕಿ 20 ಲಕ್ಷ ಜನ ವಿಯನ್ನದಲ್ಲೇ ಇದ್ದರು) ಸಣ್ಣ ರಾಜ್ಯವಾಗುಳಿಯಿತು. ಆರ್ಥಿಕಾಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳಿಲ್ಲ; ಆಹಾರ ಪದಾರ್ಥಗಳಿಗೆ ಕೊರತೆ, ವಾಣಿಜ್ಯ ಬೆಳೆಯಲು ಆವಶ್ಯಕವಾದ ಅನುಕೂಲತೆಗಳಿಲ್ಲ; ಹೀಗೆ ಈ ಹೊಸ ಆಸ್ಟ್ರಿಯದಲ್ಲಿ ರಾಜಕೀಯ ಕ್ಷೋಭೆ, ನಿರುದ್ಯೋಗ, ದಾರಿದ್ರ್ಯ, ದಿವಾಳಿತನ, ಹೆಚ್ಚಿದುವು. ಅಲ್ಲಿನ ರಾಜಕೀಯದಲ್ಲಿ ಮೂರು ಪರಸ್ಪರ ತೀರ ವಿರುದ್ಧ ಪಕ್ಷಗಳಾದುವು. ಈ ಪಕ್ಷಗಳು ಪ್ರತ್ಯೇಕ ಸೈನ್ಯಗಳನ್ನೂ ಹೊಂದಿದ್ದುವು. ಕೊನೆಗೆ ವಿಯನ್ನದಲ್ಲಿ 1927ರಲ್ಲಿ ದೊಂಬಿಗಳಾದುವು. 1934ರಲ್ಲಿ ಡಾಲ್ಫಸ್ ಎಂಬಾತ ಅಧಿಕಾರಯುಕ್ತ ಸರ್ಕಾರ ರಚಿಸಿದ. ಜರ್ಮನಿಯಲ್ಲಿ ಪ್ರಬಲನಾಗಿದ್ದ ಹಿಟ್ಲರ್ ಸ್ಥಳೀಯ ನಾಜಿಪಕ್ಷದ ಬೆಂಬಲದಿಂದ 1938ರಲ್ಲಿ ಆಸ್ಟ್ರಿಯವನ್ನಾಕ್ರಮಿಸಿದನು. 1940ರಲ್ಲಿ ಅದು ಜರ್ಮನಿಯಲ್ಲಿ ವಿಲೀನಗೊಂಡಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಆಸ್ಟ್ರಿಯ ಜರ್ಮನಿಯ ಒಂದು ಹೊರಪ್ರಾಂತ್ಯವಾಗುಳಿಯಿತು. 1945ರಲ್ಲಿ ಯುದ್ಧ ಮುಗಿದು ಮಿತ್ರರಾಷ್ಟ್ರಗಳು ಅದನ್ನು ಆಕ್ರಮಿಸಿಕೊಂಡಮೇಲೆ ಅಲ್ಲಿ ಒಂದು ಪ್ರಜಾಸರ್ಕಾರವನ್ನು ಸ್ಥಾಪಿಸಲಾಯಿತು. ಸಮರ್ಥನಾದ ಕಾರ್ಲ್ ರೆನ್ನರ್ ಪ್ರಧಾನಿಯಾದ. ಮೇ 1955ರಲ್ಲಿ ಸ್ವತಂತ್ರ ಪ್ರಜಾಸತ್ತಾತ್ಮಕ ಆಸ್ಟ್ರಿಯ ತಲೆ ಎತ್ತಿತು. ಅಕ್ಟೋಬರ್ 1955ರಲ್ಲಿ ಎಲ್ಲ ಮಿತ್ರರಾಷ್ಟ್ರಗಳೂ ಅಲ್ಲಿಂದ ಕಾಲ್ತೆಗೆದುವು. 1938ರಲ್ಲಿ ಕಳೆದುಕೊಂಡ ಸ್ವಾತಂತ್ರ್ಯವನ್ನು ಈಗ ಅದು ಪಡೆಯಿತು. ಒಪ್ಪಂದದ ಪ್ರಕಾರ ಕೊನೆಯವರೆಗೂ ಆಸ್ಟ್ರಿಯ ತಟಸ್ಥ ರಾಷ್ಟ್ರವಾಗಿ ಉಳಿಯಲು ಒಪ್ಪಿತು. 1955ರಲ್ಲಿಯೇ ವಿಶ್ವಸಂಸ್ಥೆಯನ್ನು ಸೇರಿತು. ಆಸ್ಟ್ರಿಯದ ತಟಸ್ಥ ನಿಲುವಿನ ಫಲವಾಗಿ 1972ರಲ್ಲಿ ಆಸ್ಟ್ರಿಯದ ಕುರ್ಟ್ವಾಲ್ಡ್ ಹೀಮ್ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾದನು. 1995ರಲ್ಲಿ ಆಸ್ಟ್ರಿಯ ಐರೋಪ್ಯ ಒಕ್ಕೂಟದ ಸದಸ್ಯದೇಶವಾಯಿತು. ಆದರೆ ಇದು ನ್ಯಾಟೊ ಸದಸ್ಯತ್ವ ಪಡೆದಿಲ್ಲ.
ಮೇಲ್ಮೈ ಲಕ್ಷಣ
[ಬದಲಾಯಿಸಿ]ವಿಸ್ತೀರ್ಣ 83,872 ಚ.ಕಿಮೀ. ಜನಸಂಖ್ಯೆ 8,356,707 (2009). ಉತ್ತರಕ್ಕೆ 46º220-49º10 (293 ಕಿಮೀ) ಹಾಗೂ ಪೂರ್ವಕ್ಕೆ 9º220-17º 100 (576 ಕಿಮೀ.) ವಿಸ್ತಾರವಿದೆ. ದೇಶದ ಗಡಿ 2,635ಕಿಮೀ ಉದ್ದವಿದೆ. ಉತ್ತರಕ್ಕೆ ಜರ್ಮನಿ ಮತ್ತು ಜೆಕ್ ಗಣರಾಜ್ಯ, ವಾಯವ್ಯಕ್ಕೆ ಸ್ಲಾವೇಕಿಯ, ಆಗ್ನೇಯಕ್ಕೆ ಹಂಗರಿ, ದಕ್ಷಿಣಕ್ಕೆ ಇಟಲಿ ಹಾಗೂ ಸ್ಲೋವೇನಿಯ, ಪೂರ್ವ ಮತ್ತು ಪಶ್ಚಿಮಕ್ಕೆ ಸ್ವಿಟ್ಜರ್ಲೆಂಡ್‍ಗಳಿವೆ. ಪರ್ವತಮಯ ದೇಶ ಪೂರ್ವ ಆಲ್ಪ್ಸ್ ನ ಬಹು ಭಾಗ ಆಸ್ಟ್ರಿಯದಲ್ಲಿದೆ. 13º ಪೂರ್ವ ರೇಖಾಂಶದ ಪೂರ್ವಭಾಗದಲ್ಲಿ ಎತ್ತರ ಕಡಿಮೆಯಾಗುತ್ತ ಬಂದು ಡ್ಯಾನ್ಯೂಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ. ಆಸ್ಟ್ರಿಯದ ಆಲ್ಪ್ಸ್ ಪರ್ವತಗಳನ್ನು ಉತ್ತರ ಆಲ್ಪ್ಸ್ ಮತ್ತು ಮಧ್ಯ ಆಲ್ಪ್ಸ್ ಎಂದು 3 ಭಾಗಗಳಾಗಿ ವಿಂಗಡಿಸಬಹುದು. ಆಲ್ಪ್ಸ್ ನಲ್ಲಿಯ ಗ್ರೊಸ್ಸಿಲಾಕ್ನರ ಶಿಖರ 3,797ಮೀ ಎತ್ತರವಿದೆ. ಮುಖ್ಯ ನದಿಯಾದ ಡ್ಯಾನ್ಯೂಬ್ನಲ್ಲಿ 350ಕಿಮೀ ಹಡಗಿನಲ್ಲಿ ಸಂಚರಿಸಬಹುದು. ಇನ್ನೆ, ಡ್ರಾವ ಮತ್ತು ಮೂರ್ ಇತರ ಮುಖ್ಯ ನದಿಗಳು. ಅಲ್ಲದೆ ಅನೇಕ ದೊಡ್ಡ ಸರೋವರಗಳೂ ಇವೆ. ಉತ್ತರ ಹಾಗೂ ಈಶಾನ್ಯದ ಕಡೆ ವಿಯನ್ನ ಮೈದಾನವನ್ನು ಸೇರುವುದು. ಪರ್ವತಗಳ ತಪ್ಪಲುಗಳು ಸಸ್ಯವರ್ಗದಿಂದ ಕೂಡಿವೆ. ಇವುಗಳಿಂದಾಗಿ ಪಶ್ಚಿಮ ಹಂಗರಿ ಭಾಗಗಳಲ್ಲಿ ಹಳ್ಳ ತಿಟ್ಟುಗಳು ವಿಪುಲ. ಅನೇಕ ಕಣಿವೆಗಳಿಂದ ಛಿದ್ರವಾಗಿರುವ ಎತ್ತರದ ಪ್ರದೇಶಗಳಲ್ಲಿ ಸುಣ್ಣಕಲ್ಲು ಹೇರಳವಾಗಿದೆ.
-
Lake Neusiedl in the Pannonian Plain
-
View of Krems at the end of Wachau valley
-
View of Hallstatt
-
Austrian rural area of Schoppernau in summer
-
View of the Großglockner from Heiligenblut
-
The plains of the Weinviertel
-
Alpine climate in the Austrian Alps
-
Semmering railway in the Eastern Alps
ಹವಾಮಾನ
[ಬದಲಾಯಿಸಿ]ಮೇಲ್ಮೈಲಕ್ಷಣದ ವೈವಿಧ್ಯ, ಸನ್ನಿವೇಶ ಇವು ಆಸ್ಟ್ರಿಯದಲ್ಲಿ ವಿವಿಧ ರೀತಿಯ ವಾಯುಗುಣಕ್ಕೆ ಕಾರಣವಾಗಿವೆ. ದಕ್ಷಿಣ ಭಾಗದಲ್ಲಿ ಮೆಡಿಟರೇನಿಯನ್ ವಾಯುಗುಣ, ಪೂರ್ವ ಭಾಗದಲ್ಲಿ ಖಂಡಾಂತರ ವಾಯುಗುಣ ಇವೆ. ಸರಾಸರಿ ಉಷ್ಣತೆ ಅತಿ ಕಡಿಮೆಯೆಂದರೆ ಜನವರಿಯಲ್ಲಿ 9º ಫ್ಯಾ. ಮತ್ತು ಅತಿ ಹೆಚ್ಚೆಂದರೆ ಜುಲೈನಲ್ಲಿ 68º ಫ್ಯಾ. ಇರುತ್ತದೆ. ಮಳೆಯ ಪ್ರಮಾಣ 75-175 ಸೆಂಮೀ. ಪಶ್ಚಿಮ ಆಸ್ಟ್ರಿಯ ವಾಯುಗುಣ ಸೌಮ್ಯ ಮತ್ತು ಹಿತಕರ. ದಕ್ಷಿಣದಿಂದ ಬೀಸುವ ಸ್ಥಳೀಯ ಫೋಹ್ನಗಾಳಿಗಳು ಹಿಮಕರಗಿಸುತ್ತವೆ.
ಸಸ್ಯ ಮತ್ತು ಪ್ರಾಣಿ ಸಂಪತ್ತು
[ಬದಲಾಯಿಸಿ]ಆಸ್ಟ್ರಿಯದ ಪುರ್ವದ ಇಳಿಜಾರುಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಅತಿ ಎತ್ತರಕ್ಕೆ ಬೆಳೆಯುತ್ತವೆ. ಎತ್ತರ ಪ್ರದೇಶಗಳಲ್ಲಿ ಮೊನಚಾದ ಹಾಗೂ ಆಲ್ಪೈನ್ ಹುಲ್ಲುಗಾವಲಿನ ಸಸ್ಯವರ್ಗವಿದೆ. ಬೀಚ್, ಬರ್ಚ್ ಮತ್ತು ಓಕ್ ಮುಂತಾದ ಎಲೆ ಉದುರುವ ಮರಗಳು ಮತ್ತು ಇತರೆ ಶಂಕು ಮರಗಳು ಬೆಳೆಯುತ್ತವೆ. ಅನೇಕ ಬಗೆಯ ವನ್ಯಮೃಗಗಳಿವೆ. ಕಾಡುಜಿಂಕೆಗಳು ವಿರಳ. ಚಿಗರಿ, ಮೊಲ, ಗ್ರೌಸ್, ಕವಜುಗ ಮತ್ತು ಫೆಸೆಂಟ್ ಹಕ್ಕಿಗಳು ಹೇರಳವಾಗಿವೆ.
ವ್ಯವಸಾಯ
[ಬದಲಾಯಿಸಿ]ದೇಶದ ಅರ್ಧ ಭಾಗದಷ್ಟು ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಸು. 1/3 ಅರಣ್ಯ ಪ್ರದೇಶಗಳಿಂದ ತುಂಬಿದೆ. ಪಶುಪಾಲನೆ ಜನರ ಮುಖ್ಯ ಕಸಬು. ಆಲ್ಪ್ಸ್ ಹಾಗೂ ಡ್ಯಾನ್ಯೂಬ್ಗಳ ನಡುವಿನ ಫಲವತ್ತಾದ ಭೂಮಿಯಲ್ಲಿ ಮೆಕ್ಕೆಜೋಳ ಮತ್ತು ಇತರ ಗಡ್ಡೆ ಬೆಳೆಗಳನ್ನು ಬೆಳೆಯುತ್ತಾರೆ. ಶೇ. 30 ರಷ್ಟು ಜನ ಆಧುನಿಕ ಕೃಷಿಯಲ್ಲಿ ತೊಡಗಿದ್ದಾರೆ. ಮುಖ್ಯ ಬೆಳೆಗಳಾದ ಗೋದಿ, ರೈ, ಓಟ್ಸ್, ಬಾರ್ಲಿ, ಆಲೂಗೆಡ್ಡೆ, ಮೆಕ್ಕೆಜೋಳ, ಸಕ್ಕರೆ ಗೆಡ್ಡೆಗಳು ಮತ್ತು ಹೈನು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪಗಳನ್ನು ಹೆಚ್ಚಾಗಿ ಉತ್ಪಾದಿಸಿ ರಫ್ತು ಮಾಡುತ್ತಾರೆ.
ಜನಾಂಗಗಳು
[ಬದಲಾಯಿಸಿ]ಆಸ್ಟ್ರಿಯದಲ್ಲಿ ಮುಖ್ಯವಾಗಿ ಡಿನಾರಿಕರು, ನಾರ್ಡಿಕರು, ಆಲ್ಪೈನರು ಮತ್ತು ಪುರ್ವಬಾಲ್ಟಿಕರು ಎಂಬ ನಾಲ್ಕು ಜನಾಂಗಗಳಿವೆ. ಡಿನಾರಿಕರು ಎತ್ತರವಾಗಿಯೂ ಕಪ್ಪಾಗಿಯೂ ನಾರ್ಡಿಕರು ತೆಳ್ಳಗೆ ಎತ್ತರವಾಗಿ ಸುಂದರವಾಗಿಯೂ ಆಲ್ಪೈನರು ಗಟ್ಟಿಮುಟ್ಟಾಗಿ ಕುಳ್ಳಾಗಿಯೂ ಪುರ್ವಬಾಲ್ಟಿಕರು ಮಧ್ಯಮ ಎತ್ತರದವರಾಗಿಯೂ ಇದ್ದಾರೆ. ಹಂಗರಿ ಗಡಿಯ ಬರ್ಗನ್ಲೆಂಡಿನಲ್ಲಿ ಕ್ರೋಚ್ ಮತ್ತು ಮಾಗ್ಯಾರರು, ಯುಗೊಸ್ಲಾವ್ ಗಡಿಯ ಸ್ಟೀರಿಯ ಮತ್ತು ಕಾರಿಂಥಿಯ ಪ್ರದೇಶಗಳಲ್ಲಿ ಸ್ಲೋವನ್ನರೂ ಇದ್ದಾರೆ. ಜೆಕೊಸ್ಲೊವಾಕ್ನಲ್ಲಿ ರುಥೇನಿಯನ್ನರು, ರೂಮೇನಿಯನ್ನರು, ಸರ್ಬಿಯನ್ನರು ಮತ್ತು ಇಟ್ಯಾಲಿಯನ್ನರು ಸ್ವಲ್ಪ ಪ್ರಮಾಣದಲ್ಲಿದ್ದಾರೆ.
ಖನಿಜ ಮತ್ತು ಕೈಗಾರಿಕೆ
[ಬದಲಾಯಿಸಿ]ಚಿನ್ನ, ಬೆಳ್ಳಿ, ಕಬ್ಬಿಣ, ಸೀಸ, ಸತು ಹಾಗೂ ತಾಮ್ರ ಇಲ್ಲಿ ದೊರಕುವ ಮುಖ್ಯ ಖನಿಜಗಳು. ಕಲ್ಲಿದ್ದಲು ಅಲ್ಪ ಪ್ರಮಾಣದಲ್ಲಿ ದೊರಕುತ್ತದೆ. ಜಲವಿದ್ಯುಚ್ಛಕ್ತಿ ಹೇರಳವಾಗಿರುವುದರಿಂದ ಕಲ್ಲಿದ್ದಲಿನ ಕೊರತೆ ಕಾಣದು. ದೇಶದ ವಿದ್ಯುಚ್ಛಕ್ತಿಯಲ್ಲಿ ಶೇ.66 ಭಾಗ ಜಲವಿದ್ಯುತ್ನಿಂದ ಪುರೈಕೆಯಾಗುತ್ತದೆ. ಮುಖ್ಯವಾದ ಕೈಗಾರಿಕೆಗಳೆಂದರೆ ಮರದ ಸಾಮಾನುಗಳನ್ನು ತಯಾರಿಸುವುದು. ಕಾಗದ, ಕಬ್ಬಿಣ ಹಾಗೂ ಉಕ್ಕಿನ ತಯಾರಿಕೆ, ಪೆಟ್ರೋಲಿಯಂ ಶುದ್ಧೀಕರಣ, ರಾಸಾಯನಿಕ ಉತ್ಪತ್ತಿ, ಗಿರಣಿಗಳು, ಚರ್ಮ ಹದಮಾಡುವುದು, ಸೆರಾಮಿಕ್ಸ್, ಗಾಜು, ವಿದ್ಯುದುಪಕರಣಗಳ ತಯಾರಿಕೆ, ರೈಲ್ವೆ ಎಂಜಿನ್ ತಯಾರಿಕೆ ಇತ್ಯಾದಿ.
ವ್ಯಾಪಾರ
[ಬದಲಾಯಿಸಿ]ಆಸ್ಟ್ರಿಯ ಈಗ ಯುರೋಪಿನ ಮುಖ್ಯ ಪ್ಯಾಪಾರ ಕೇಂದ್ರವಾಗಿದೆ. ವಿಯೆನ್ನಾ ನಗರವು ಆಧುನಿಕ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿದೆ. ಆಸ್ಟ್ರಿಯ ಕಚ್ಚಾ ಪದಾರ್ಥಗಳನ್ನು ಹೆಚ್ಚಾಗಿ ರವಾನಿಸುವುದು. ಆಮದು ವಸ್ತುಗಳಲ್ಲಿ ಆಹಾರ, ಪಾನೀಯ ಹಾಗೂ ಯಂತ್ರೋಪಕರಣಗಳು ಮುಖ್ಯ.
ಧರ್ಮ ಮತ್ತು ಭಾಷೆ
[ಬದಲಾಯಿಸಿ]ರಾಜಧಾನಿ ವಿಯನ್ನ. ರೈಲು ಹಾಗೂ ಇತರ ಸಂಚಾರ ಮಾರ್ಗಗಳ ಕೇಂದ್ರ, ಜರ್ಮನ್ ಮುಖ್ಯ ಭಾಷೆ (99%), ಸ್ಲೋವೇನಿಯನ್, ಹಂಗೇರಿಯನ್ ಕ್ರೋಚಿಯನ್ ಮತ್ತು ಬವೇರಿಯನ್ಗಳನ್ನಾಡುವವರೂ ಇದ್ದಾರೆ. ಅವರ ಸಂಖ್ಯೆ ಅಲ್ಪ. ರೋಮನ್ ಕೆಥೊಲಿಕರೇ ಹೆಚ್ಚು (90%); ಉಳಿದವರು ಪ್ರಾಟೆಸ್ಟೆಂಟರು, ಯೆಹೂದ್ಯರು, ಗ್ರೀಕರು ಮುಂತಾದವರು.
ಸಂಚಾರ
[ಬದಲಾಯಿಸಿ]ರೈಲ್ವೆ ಕೇಂದ್ರ ಹಾಗೂ ಪ್ರಾಂತೀಯ ಹೆದ್ದಾರಿಗಳು ಸರ್ಕಾರದ ಆಡಳಿತಕ್ಕೆ ಒಳಪಟ್ಟಿವೆ. ವಿಯೆನ್ನ-ಸಾಲ್ಜ್ ಬರ್ಗ್ ಹೆದ್ದಾರಿ (347ಕಿಮೀ) ಪಶ್ಚಿಮ ಜರ್ಮನಿಗೆ ಸಂಪರ್ಕ ಒದಗಿಸುತ್ತದೆ. ಡ್ಯಾನ್ಯೂಬ್ ನದಿ ಜಲಸಾರಿಗೆಗೆ ಮುಖ್ಯವಾಗಿದೆ. ರಷ್ಯದೊಡನೆ ಮಾಡಿಕೊಂಡ 1956ರ ಒಪ್ಪಂದದ ಪ್ರಕಾರ ಆಸ್ಟ್ರಿಯದ ಹಡಗುಗಳು ಕಪ್ಪು ಸಮುದ್ರದವರೆಗೂ ಪ್ರವಾಸ ಮಾಡುತ್ತವೆ. ಗ್ರಾಜ್, ಇನ್ಸ್ ಬ್ರುಕ್, ಕ್ಲಾಗೆನ್ಫರ್ಟ್, ಲಿಂಜ್, ಸಾಲ್ಜ್ ಬರ್ಗ್ ಮತ್ತು ಸ್ಕ್ವೆಚಾದ್ಗಳಲ್ಲಿ (ವಿಯನ್ನದ ಹತ್ತಿರ) ವಿಮಾನ ನಿಲ್ದಾಣಗಳಿವೆ. ಆಸ್ಟ್ರಿಯ ದೇಶದ ಸಾರಿಗೆ ಹೆಚ್ಚಾಗಿ ಇಟಲಿಯ ಟ್ರೇಸ್ಟ್ ಬಂದರಿನ ಮುಖಾಂತರವೂ ಪಶ್ಚಿಮ ಜರ್ಮನಿಯ ಹ್ಯಾಂಬರ್ಗ್ ಮತ್ತು ಬ್ರೆಮನ್ ಬಂದರುಗಳ ಮುಖಾಂತರವೂ ನಡೆಯುವುದು.
ಆಡಳಿತ ವ್ಯವಸ್ಥೆ
[ಬದಲಾಯಿಸಿ]State | Capital | Area (sq km) | Population (2023) |
---|---|---|---|
Burgenland | Eisenstadt | 3,965 | 301,250 |
Carinthia | Klagenfurt | 9,537 | 568,984 |
Lower Austria | Sankt Pölten | 19,180 | 1,718,373 |
Salzburg | Salzburg | 7,155 | 568,346 |
Styria | Graz | 16,399 | 1,265,198 |
Tyrol | Innsbruck | 12,648 | 771,304 |
Upper Austria | Linz | 11,982 | 1,428,075 |
Vienna | 415 | 1,982,097 | |
Vorarlberg | Bregenz | 2,602 | 406,395 |
ಆಸ್ಟ್ರಿಯದಲ್ಲಿ 9 ಪ್ರಾಂತ್ಯಗಳಿವೆ. ಬರ್ಗನ್ಲೆಂಡ್, ಕಾರಿಂಥಿಯ, ಕೆಳ ಆಸ್ಟ್ರಿಯ, ಸಾಲ್ಸ್ ಬರ್ಗ್, ಸ್ಟೀರಿಯ, ಟೈರೋಲ್, ಮೇಲಿನ ಆಸ್ಟ್ರಿಯ, ವಿಯನ್ನ ಮತ್ತು ವೊರಾರ್್ಲ ಬರ್ಗ್. ರಾಷ್ಟ್ರಾಧ್ಯಕ್ಷ ಜನರಿಂದ ಚುನಾಯಿಸಲ್ಪಡುತ್ತಾನೆ. ಆತನ ಅಧಿಕಾರಾವಧಿ 6 ವರ್ಷ. ಅಧ್ಯಕ್ಷ ಛಾನ್ಸಲರ್ನನ್ನು ನೇಮಿಸುತ್ತಾನೆ. ಛಾನ್ಸಲರನ ಅವಧಿ ಹೆಚ್ಚೆಂದರೆ 4 ವರ್ಷ. ಅಧ್ಯಕ್ಷನೇ ಮಂತ್ರಿಗಳನ್ನು ಆರಿಸುತ್ತಾನೆ. ಮಂತ್ರಿಮಂಡಲ ಸಂಸತ್ತಿಗೆ ವಿಧೇಯವಾಗಿರುತ್ತದೆ. ಕೇಂದ್ರಸಂಸತ್ತಿನ ಮಂಡಳ ಜನಸಂಖ್ಯೆಯ ಪ್ರಮಾಣದ ಮೇಲೆ ಪ್ರಾಂತೀಯ ಶಾಸನಸಭೆಗಳು ಚುನಾಯಿಸಿ ಕಳಿಸಿದ 63 ಸದಸ್ಯರನ್ನು ಹೊಂದಿದೆ. ಕೆಳಮನೆಯಾದ ರಾಷ್ಟ್ರೀಯ ಮಂಡಳಿ, ಜನರಿಂದ ಚುನಾಯಿಸಲ್ಪಟ್ಟ 183 ಸದಸ್ಯರನ್ನು ಹೊಂದಿದೆ.
ಪ್ರತಿ ಪ್ರಾಂತ್ಯ ಜನರಿಂದ ಚುನಾಯಿಸಲ್ಪಟ್ಟ ಒಮ್ಮನೆಯ ಶಾಸನ ಸಭೆಯನ್ನು ಪಡೆದಿದೆ. ಪ್ರಾಂತೀಯ ಸಭೆ ಚುನಾಯಿಸಿದ ಗವರ್ನರೇ ಪ್ರಾಂತ್ಯದ ಮುಖ್ಯಸ್ಥ. ನ್ಯಾಯಾಂಗ-232 ಕೋರ್ಟುಗಳನ್ನೂ 19 ಪ್ರಾಂತೀಯ ಮತ್ತು ಜಿಲ್ಲಾಕೋರ್ಟು ಗಳನ್ನೂ 4 ಉಚ್ಚ ಪ್ರಾಂತೀಯ ಕೋರ್ಟುಗಳನ್ನೂ ವಿಯನ್ನದಲ್ಲಿ ಪ್ರಧಾನ ಕೋರ್ಟನ್ನೂ ಪಡೆದಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Austria entry at The World Factbook
- Austria entry at Encyclopædia Britannica
- Austria information from the United States Department of State
- Austria Archived 2008-08-21 ವೇಬ್ಯಾಕ್ ಮೆಷಿನ್ ನಲ್ಲಿ. at UCB Libraries GovPubs
- ಆಸ್ಟ್ರಿಯ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Information on Austria Sorted by regions. Choose from 5 languages.
- Austria profile from the BBC News
- Wikimedia Atlas of Austria
- Key Development Forecasts for Austria from International Futures
- Government
- Federal Chancellery of Austria Archived 2006-08-19 ವೇಬ್ಯಾಕ್ ಮೆಷಿನ್ ನಲ್ಲಿ. official government portal
- AEIOU Austria Albums Archived 2009-03-02 ವೇಬ್ಯಾಕ್ ಮೆಷಿನ್ ನಲ್ಲಿ. (in German, English)
- Chief of State and Cabinet Members Archived 2013-09-16 ವೇಬ್ಯಾಕ್ ಮೆಷಿನ್ ನಲ್ಲಿ.
- Austrian Law Information on Austrian Law
- Trade
- Travel
- Austria.info Official homepage of the Austrian National Tourist Office
- Austria.mu Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ. Homepage of the Austrian Museums
- TourMyCountry.com Website on Austrian culture, cuisine and tourist attractions
- Europe Pictures – Austria Archived 2012-11-02 ವೇಬ್ಯಾಕ್ ಮೆಷಿನ್ ನಲ್ಲಿ.
Germany | Czech Republic | Slovakia | ||
ಸ್ವಿಟ್ಜರ್‍ಲ್ಯಾಂಡ್ Liechtenstein | Hungary | |||
Austria | ||||
ಇಟಲಿ | ಇಟಲಿ | Slovenia |
ಉಲ್ಲೇಖಗಳು
[ಬದಲಾಯಿಸಿ]