ಕಬ್ಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Saccharum officinarum
Saccharum officinarum growing in Mozambique
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
S. officinarum
Binomial name
Saccharum officinarum
ತುಂಡರಿಸಲಾದ ಕಬ್ಬು

ಕಬ್ಬು ಅತಿ ಉಪಯುಕ್ತ ಬಹುವಾರ್ಷಿಕ ದೈತ್ಯಾಕಾರದ ಹುಲ್ಲು.ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಚಾ ವಸ್ತು. ಸಿಹಿ ಪದಾರ್ಥಗಳನೇಕವಿದ್ದರೂ ಮಾನವರಿಗೆ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ. ಸಕ್ಕರೆ ಹೊಂದಿರುವ ಸಸ್ಯಗಳು ಹಲವು ಇವೆ. ಆದರೆ ಸಕ್ಕರೆಯ ಅಧಿಕ ಉತ್ಪನ್ನಕ್ಕೆ ಸಹಾಯಕವಾಗುವುದು ಕಬ್ಬು ಮತ್ತು ಸಕ್ಕರೆ ಬೀಟ್ ಗೆಡ್ಡೆಗಳು ಮಾತ್ರ. ತಾಳೆ, ತೆಂಗು ಮುಂತಾದ ಮರಗಳ ಹೊಂಬಾಳೆಗಳನ್ನು ಕಡಿದು, ರಸ ಶೇಖರಿಸಿ, ಅದರಿಂದಲೂ ಬೆಲ್ಲ ತಯಾರಿಸಲಾಗುತ್ತದೆಯಾದರೂ ಪರಿಮಾಣದಲ್ಲಿ ಅದು ಅತಿ ಸ್ವಲ್ಪ. ಪ್ರಪಂಚದ ಒಟ್ಟು ಸಕ್ಕರೆ ಉತ್ಪತ್ತಿಯ ಶೇ.67-68 ಭಾಗ ಕಬ್ಬಿನಿಂದಲೇ ಆಗುತ್ತದೆ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಸ್ಯಾಕರಮ್ ಪಂಗಡದ (ಪೋಯೇಸೀ ಕುಟುಂಬ. ಆಂಡ್ರೊಪೋಗಾನೀ ಬುಡಕಟ್ಟು) ಎತ್ತರದ ಬಹುವಾರ್ಷಿಕ ಹುಲ್ಲುಗಳ ಆರರಿಂದ ಮೂವತ್ತೇಳು ಜಾತಿಗಳ ಪೈಕಿ ಯಾವುದಾದರೂ ಒಂದು.

ಹರಡುವಿಕೆ[ಬದಲಾಯಿಸಿ]

ಭೂ ವೈವಿಧ್ಯಕ್ಕೆ ಹೊಂದಿಕೊಂಡು ಬೆಳೆಯಬಲ್ಲ ಉಷ್ಣವಲಯದ ಸಸ್ಯವೆನಿಸಿದೆ. ಸಮಭಾಜಕ ವೃತ್ತದ ಇಕ್ಕೆಡೆಗಳಲ್ಲೂ ಸು. 350 ವರೆಗಿನ ಪ್ರದೇಶದಲ್ಲಿ ಎರಡು ಗೋಳಗಳಲ್ಲೂ ನೂರಾರು ಬಗೆಯ ಕಬ್ಬನ್ನು ಬೆಳೆಯಲಾಗುತ್ತಿದೆ. ಏಷ್ಯಾದ ಬೆಚ್ಚಗಿನ ಸಮಶೀತೋಷ್ಣ ಹಾಗೂ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾದ ಇವು, ಸಕ್ಕರೆಭರಿತ, ಸ್ಥೂಲವಾದ, ಸಂಧಿಗಳಿರುವ, ನಾರುಳ್ಳ ಕಾಂಡಗಳನ್ನು ಹೊಂದಿರುತ್ತವೆ ಮತ್ತು ಎರಡರಿಂದ ಆರು ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಎಲ್ಲ ಕಬ್ಬುಜಲ್ಲೆ ಜಾತಿಗಳು ಸಂಕರಿಸಬಲ್ಲವಾಗಿವೆ ಮತ್ತು ಪ್ರಮುಖ ವಾಣಿಜ್ಯ ಕೃಷಿ ಪ್ರಭೇದಗಳು ಸಂಕೀರ್ಣವಾದ ಮಿಶ್ರತಳಿಗಳಾಗಿವೆ.

ಪ್ರಾಚೀನತೆ[ಬದಲಾಯಿಸಿ]

Map showing sugar cane India as the first sugar cane country, followed by small areas in Africa, and smaller areas in Europe
[೧]
Black-and-white photo of sugar cane standing in field
A sugar plantation on the island of Réunion in the late 19th century

ಕಬ್ಬು ಅತ್ಯಂತ ಪ್ರಾಚೀನ ಬೆಳೆ ಎನ್ನಲಾಗಿದೆ. ಅಥರ್ವಣ ವೇದದಲ್ಲಿ ಕಬ್ಬಿನ ಉಲ್ಲೇಖವಿದೆ. ಆದ್ದರಿಂದ ವೇದಗಳ ಕಾಲದಿಂದಲೂ ಅದು ಭಾರತದಲ್ಲಿ ಹೆಚ್ಚಾಗಿ ಹರಡಿತ್ತೆಂದು ವ್ಯಕ್ತವಾಗುತ್ತದೆ. ಪ್ರಸಕ್ತಶಕದ ಪ್ರಾರಂಭದ ವೇಳೆಗೆ ಭಾರತದಿಂದ ಚೀನ ಚಕ್ರವರ್ತಿಗೆ ಕಬ್ಬನ್ನು ಕಾಣಿಕೆಯಾಗಿ ಕಳುಹಿಸಲಾಯಿತೆಂದೂ ಮುಂದೆ 424ರ ವೇಳೆಗೆ ದಕ್ಷಿಣ ಚೀನದಲ್ಲಿ ಅದನ್ನು ಬೆಳೆಸಲು ಉಪಕ್ರಮಿಸಿದ ಮೇಲೆ ಕ್ರಮೇಣ ಜಾವ, ಫಿಲಿಪೀನ್ಸ್‌, ಶಾಂತಿಸಾಗರದ ದ್ವೀಪಗಳು ಮತ್ತು ಹವಾಯ್ ಪ್ರದೇಶಗಳಿಗೆ ಅದು ಹರಡಿತೆಂದೂ ತಿಳಿದುಬಂದಿದೆ. ಅಲೆಕ್ಸಾಂಡರನೊಡನೆ ದಂಡಯಾತ್ರೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ನಿಯಾರ್ಟಿಸ್ ಪ್ರ.ಶ.ಪು. 325ರಲ್ಲೇ ಕಬ್ಬು ಭಾರತದಲ್ಲಿ ಎಲ್ಲೆಲ್ಲೂ ಬೆಳೆಯುತ್ತಿತ್ತೆಂದೂ ಅದು ಎಲ್ಲರಿಗೂ ಚೆನ್ನಾಗಿ ಪರಿಚಿತವಿತ್ತೆಂದೂ ವಿವರಿಸಿದ್ದಾನೆ. 6ನೆಯ ಶತಮಾನದಲ್ಲಿ ಭಾರತದಿಂದ ಪರ್ಷಿಯಕ್ಕೂ ಅಲ್ಲಿಂದ ಅರಬ್ಬೀಯರ ಮೂಲಕ ಈಜಿಪ್ಟ್‌, ಮೊರಾಕೊ, ಸ್ಪೇನ್ ಮತ್ತು ಸಿಸಿಲಿಗೂ ಹರಡಿತು. 12ನೆಯ ಶತಮಾನದ ಮೊದಲಿನಲ್ಲಿ ಜಾಂಜಿಬಾರ್ ದೇಶದಲ್ಲಿ ಅದನ್ನು ಬೆಳೆಸಲಾಯಿತು. ಅದರ ಹೆಚ್ಚಿನ ವಿಸ್ತರಣೆಗೆ ಸ್ಪೇನಿಶರೂ ಪೋರ್ಚುಗೀಸರೂ ಕಾರಣರಾಗಿ, 15ನೆಯ ಶತಮಾನದಲ್ಲಿ ಕ್ಯಾನರಿ, ಕೇಪ್ವರ್ಡ್ ದ್ವೀಪಗಳಲ್ಲೂ ಪಶ್ಚಿಮ ಆಫ್ರಿಕದಲ್ಲೂ ಕೊಲಂಬಸನ ಎರಡನೆಯ ಪ್ರವಾಸದ ಮೂಲಕ ಅಮೆರಿಕದಲ್ಲೂ ಅದು ನೆಲೆಯೂರಿತು. ಮುಂದೆ ಕೇವಲ 1-1 1/2 ಶತಮಾನಗಳಲ್ಲೇ ಮಧ್ಯ ಮತ್ತು ದಕ್ಷಿಣ ಅಮೆರಿಕಗಳ ಬಹುತೇಕ ಭಾಗದಲ್ಲಿ ಅದರ ಬೆಳೆಸು ವಿಸ್ತರಿಸಿತು. ಇದರಿಂದ ಬ್ರೆಜಿಲ್, ಪೆರು ಮತ್ತು ಮಧ್ಯ ಅಮೆರಿಕ ಹಾಗೂ ವೆಸ್ಟ್‌ ಇಂಡೀಸಿನ ವಿವಿಧ ದ್ವೀಪಗಳಲ್ಲಿ ಅದು ಮುಖ್ಯ ಬೆಳೆಯಾಯಿತು. ಅದೇ ಶತಮಾನದ ಅಂತ್ಯದಲ್ಲಿ ಮಾರಿಷಸ್ ಮತ್ತು ಆಸ್ಟ್ರೇಲಿಯದ ವಿವಿಧ ಪ್ರದೇಶಗಳಿಗೆ ಹರಡಿತು. ಹೀಗೆ ಪ್ರಪಂಚದ ಉಷ್ಣವಲಯದ ಎಲ್ಲ ಮುಖ್ಯ ರಾಷ್ಟ್ರಗಳಲ್ಲೂ ಕಬ್ಬು ಒಂದು ಮುಖ್ಯ ಬೆಳೆಯಾಯಿತು.

ಆದರೂ ಇತ್ತೀಚಿನ ಹಲವು ಸಂಶೋಧನೆಗಳು, ಕಬ್ಬಿನ ವಿವಿಧ ಜಾತಿಗಳು ಎರಡು ಮುಖ್ಯ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಅಭಿವೃದ್ಧಿ ಹೊಂದಿ ಅಲ್ಲಿಂದ ಉಳಿದೆಡೆಗೆ ಹರಡಿರಬಹುದೆಂಬ ಊಹೆಗೆ ಎಡೆಗೊಟ್ಟಿವೆ: ಸ್ಯಾಕರಂ ಅಫಿಸಿನೇರಂ ಪ್ರಭೇದದ ದಪ್ಪಗಾತ್ರದ ಕಬ್ಬಿನ ಬಗೆಗಳು ಪಾಲಿನೇಷಿಯದಲ್ಲಿ ಇದ್ದು ಅಲ್ಲಿಂದ ಜಾವ, ಮಾರಿಷಸ್ ಮತ್ತು ಭಾರತಗಳಲ್ಲಿ ಹರಡಿರಬಹುದೆಂದೂ ಸಣ್ಣ ಕಬ್ಬು ಪ್ರಭೇದಗಳಾದ ಸಾ.ಬರ್ಬೆರಿ ಮತ್ತು ಸಾ.ಸೈನೆನ್ಸಿ ಭಾರತದಲ್ಲಿದ್ದು ಇತರ ಪ್ರದೇಶಗಳಿಗೆ ಪಸರಿಸಿರಬಹುದೆಂದೂ ಅಭಿಪ್ರಾಯಪಡಲಾಗಿದೆ.

ಪುನರುತ್ಪತ್ತಿ[ಬದಲಾಯಿಸಿ]

ಸಾಮಾನ್ಯವಾಗಿ ಕಬ್ಬನ್ನು ಕಬ್ಬು ಜಲ್ಲೆಯ ತುಂಡಿನಿಂದಲೇ ಬೆಳೆಸಿ ವೃದ್ಧಿಪಡಿಸುತ್ತಾರೆ. 19ನೆಯ ಶತಮಾನದ ಮಧ್ಯಾವಧಿಯವರೆಗೂ ಕಬ್ಬಿಗೆ ಬೀಜವಿದೆಯೆಂದು ಯಾರಿಗೂ ತಿಳಿದಿರಲಿಲ್ಲ. ಬಾರ್ಬಡಾಸಿನ ಪಾರಿಸ್ ಮತ್ತು ಆತಸ್ ಹಾಗೂ ಜಾವದ ನೋಟೋಹಾಮಿಪ್ರಾಡ್ಜೋ ಎಂಬುವರು ಕಬ್ಬಿಗೆ ಬೀಜವಿದೆಯೆಂದು ಮೊದಲು ವಿವರಿಸಿದ್ದರೂ ಯಾರೂ ಅದಕ್ಕೆ ಹೆಚ್ಚಿನ ಗಮನವೀಯಲಿಲ್ಲ. ಮುಂದೆ ಜಾವದ ಸೋಲ್ಟವೇಡೆಲ್ ಎಂಬಾತ ಬೀಜಗಳನ್ನು ಶೇಖರಿಸಿ ಹೊಸ ಕಬ್ಬುಜಾತಿಯನ್ನು ಬೆಳೆಸಿ ತೋರಿಸಿದಾಗಲೇ ಇದರಲ್ಲಿ ಜನರಿಗೆ ನಂಬಿಕೆಯಾದದ್ದು. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಕಬ್ಬಿನ ತುದಿಯಲ್ಲಿ ಸುಂದರವಾದ ನೀಳವಾದ ಗರಿಯಂತೆ ಕಂಡುಬರುವ ಸೂಲಂಗಿಯೇ ಅದರ ಪುಷ್ಪಗುಚ್ಛ. ಬೀಜ ಮತ್ತು ಹೊಸ ಕಬ್ಬು ತಳಿ ಉತ್ಪಾದನೆಗೆ ತಳಹದಿ. ಆದರೆ ಬೀಜ ಶೇಖರಿಸಿ ಬಿತ್ತುವುದು ಹೊಸ ತಳಿಗಳ ಉತ್ಪನ್ನಕ್ಕಾಗಿ ಮಾತ್ರ. ಇತ್ತೀಚೆಗೆ ವಿವಿಧ ಉತ್ತಮ ತಳಿಗಳ ನಡುವೆ ಅಡ್ಡತಳಿಯೆಬ್ಬಿಸಿ ಬೀಜೋತ್ಪಾದನೆ ಮಾಡಿ ಹೊಸ ತಳಿಗಳನ್ನು ಪಡೆಯಲಾಗುತ್ತಿದೆ. ತಂದೆ ತಾಯಿಗಳ ಗುಣಗಳೆಲ್ಲ ಪೂರ್ಣ ತಿಳಿದಿರುವುದರಿಂದ ನಮಗೆ ಆವಶ್ಯಕವಾದ ಗುಣಗಳುಳ್ಳ ಹೊಸತಳಿಗಳ ಉತ್ಪಾದನೆಗೆ ಇದು ಅನುಕೂಲ ಮಾರ್ಗ. ಆದರೆ ಬೀಜದ ಮುಖಾಂತರ ಕಬ್ಬನ್ನು ಬೆಳೆಸುವ ವಿಧಾನದಲ್ಲಿನ ಮುಖ್ಯ ಅನಾನುಕೂಲತೆಯೆಂದರೆ ಪ್ರತಿ ಬೀಜದ ಗಿಡವೂ ಬೇರೆ ಬೇರೆಯಾಗಿದ್ದು, ಅವು ಯಾವ ರೀತಿಯವು ಮತ್ತು ಅವು ಉಪಯುಕ್ತವೇ ಅಲ್ಲವೇ ಎಂಬುದನ್ನು ಮೊದಲೇ ಹೇಳಲಾಗುವುದಿಲ್ಲ. ಕಬ್ಬಿನ ಜಲ್ಲೆಯ ತುಂಡುಗಳನ್ನು ನೆಟ್ಟು ಬೆಳೆಸುವುದು ಸುಲಭ, ಈ ಮಾರ್ಗಾನುಸರಣೆಯಿಂದ ಜಾತಿಯ ವ್ಯತ್ಯಾಸವಿಲ್ಲದೆ ಗೊತ್ತಾದ ಮಿತಿಯಲ್ಲೇ ಬೆಳೆ ಕೈಸೇರುತ್ತದೆ.

ಪ್ರಭೇದಗಳು[ಬದಲಾಯಿಸಿ]

ಕಬ್ಬು ಸಾಕರಂ ಎಂಬ ಜಾತಿಗೂ ಪೋಯೇಸೀ ಅಥವಾ ಗ್ರಾಮಿನೀ ಕುಟುಂಬಕ್ಕೂ ಸೇರಿದೆ ಎಂದು ಹೇಳಲಾಗಿದೆ. ಈ ಜಾತಿಯಲ್ಲಿ ಮುಖ್ಯವಾಗಿ 5 ಪ್ರಭೇದಗಳಿವೆ. 1. ಸ್ಯಾಕರಂಅಫಿಸೀನೇರಂ-ಪಾಲಿನೇಷಿಯ ದ್ವೀಪಗಳ ಮೂಲವಾಸಿ. ದಪ್ಪುಗಾತ್ರದ ಮೃದು ಕಬ್ಬು ಇದು. 2. ಸ್ಯಾಕರಂ ಬರ್ಬೆರಿ-ಪುರಾತನಕಾಲದಿಂದಲೂ ಭಾರತದ ಗಂಗಾನದಿ ಬಯಲಿನಲ್ಲಿ ಬೆಳೆಯಲಾಗುತ್ತಿರುವ ಸಣ್ಣ ಗಾತ್ರದ ಕಬ್ಬು. ವಾತಾವರಣದ ವೈವಿಧ್ಯವನ್ನು ಕ್ರಿಮಿಕೀಟಗಳ ಉಪದ್ರವವನ್ನು ತಡೆಯಬಲ್ಲ ಶಕ್ತಿ ಇದಕ್ಕೆ ಇದೆ. ಜೌಗು ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಳುವರಿ ಕಡಿಮೆ. 3. ಸ್ಯಾಕರಂ ಸೈನೆನ್ಸಿ-ಸಾ. ಬರ್ಬೆರಿಯಂಥದೇ ಆದರೆ ಹೆಚ್ಚು ಮಂದವಾದ ಪ್ರಭೇದ. 4. ಸ್ಯಾಕರಂ ಸ್ಪಾಂಟೇನಿಯಂ-ಪಶ್ಚಿಮವಲಯಗಳಲ್ಲೆಲ್ಲ ಕಂಡುಬರುವ ಕಾಡುಜಾತಿ. ಸಮಶೀತೋಷ್ಣವಲಯಗಳ ವಾತಾವರಣದಲ್ಲಿ ಬೆಳೆಯಲು ಉತ್ತಮವಾದದ್ದು. 5.ಸಾಕರಂ ರೋಖ-ನ್ಯೂಗಿನಿ ಪ್ರದೇಶದಲ್ಲಿನ ಕಾಡುಜಾತಿ. ಇವಲ್ಲದೆ ಪ್ರಪಂಚದಾದ್ಯಂತ ವ್ಯವಸಾಯದಲ್ಲಿರುವ ಇನ್ನೂ ಅನೇಕ ತಳಿಗಳು ಇವೆ. ಇವುಗಳಲ್ಲಿ ಬಹುಪಾಲು ಅಡ್ಡ ತಳಿಯೆಬ್ಬಿಕೆಯಿಂದ ಪಡೆಯಲಾದುದು. ಇವು ಬಹುಸಂಖ್ಯಾಗುಣಿತ ವರ್ಣತಂತು (ಕ್ರೋಮೋಸೋಮು)ಗಳನ್ನು ಹೊಂದಿವೆ. ಏಕಗುಣಿತ ಕ್ರೋಮೋಸೋಮು ಗಳ ಸಂಖ್ಯೆ ಕಬ್ಬಿನ ವಿವಿಧ ಬಗೆಗಳಲ್ಲಿ 15-68ರ ವರೆಗೂ ವ್ಯತ್ಯಾಸವಾಗಬಹುದು. ಕಬ್ಬಿನ ವಿವಿಧ ತಳಿಗಳು ತಮ್ಮ ಬೆಳೆವಣಿಗೆಯ ರೀತಿ, ಎತ್ತರ, ಕಾಂಡದ ದಪ್ಪ, ಬಣ್ಣ ಸಿಪ್ಪೆಯ ಕಾಠಿಣ್ಯ, ರಸದ ಮಾದುರ್ಯ, ರಸಗೂಡಿ ಪಕ್ವಕ್ಕೆ ಬರುವ ಕಾಲ, ರೋಗನಿರೋಧಕ ಗುಣಗಳು ಇತ್ಯಾದಿ ಲಕ್ಷಣಗಳಲ್ಲಿ ವೈವಿಧ್ಯ ತೋರುತ್ತವೆ.

ಮೈಸೂರಿನಲ್ಲಿ ಬೆಳೆಯುತ್ತಿರುವ ಕಬ್ಬುಗಳನ್ನು ಹಳೆಯ ತಳಿ ಹಾಗೂ ಹೊಸ ತಳಿಗಳೆಂದು ವಿಂಗಡಿಸಬಹುದು. ಹಳೆಯ ಬಗೆಯ ಕಬ್ಬುಗಳು ಹೆಚ್ಚು ರಸದಿಂದ ತುಂಬಿದವು ಮತ್ತು ಮೆದುವಾದವು. ಇವನ್ನು ಅರೆಯುವುದು ಮತ್ತು ಅಗಿದು ತಿನ್ನುವುದು ಸುಲಭ. ಇವುಗಳಲ್ಲಿ ಮುಖ್ಯವಾದವು ರಸದಾಳಿ ಮತ್ತು ಪಟ್ಟಾಪಟ್ಟಿ ಎಂಬುವು. ರಸದಾಳಿ ಕಬ್ಬು ತುಂಬಾ ಮೆದುವಾದ ರಸಭರಿತ ಹಸಿರುಮಿಶ್ರಿತ ಹಳದಿ ಸಿಪ್ಪೆಯ ಕಬ್ಬು. 10 ತಿಂಗಳಲ್ಲಿ ಪಕ್ವವಾಗುವ ಇದು ಸಾಧಾರಣ ಇಳುವರಿಯ ಜಾತಿ. ಪಟ್ಟಾಪಟ್ಟಿ ಎನ್ನುವುದು ರಸದಾಳಿಗಿಂತ ಗಟ್ಟಿಯಾದುದು. ಅದರ ಕಾಂಡದ ಮೇಲೆ ಉದ್ದ ಪಟ್ಟಿಗಳಿವೆ. ಸು. 12 ತಿಂಗಳಲ್ಲಿ ಪಕ್ವವಾಗುವ ಇದು ಚೆನ್ನಾಗಿ ಇಳುವರಿ ಕೊಡಬಲ್ಲುದು. ಇದರ ಸಕ್ಕರೆಯ ಅಂಶವೂ ರಸದಾಳಿಗಿಂತ ಹೆಚ್ಚು. ಇವಲ್ಲದೆ ಚೇಣಿ ಅಥವಾ ಮರಕಬ್ಬು ಎಂಬ ಬಗೆಯೂ ಉಂಟು. ಚೀನ ದೇಶದಿಂದ ಬಂದುದೆಂದು ಹೇಳಲಾದ ಇದು ಉಳಿದೆರಡಕ್ಕಿಂತ ತೆಳುವಾದುದು ಗಟ್ಟಿಯಾದುದು ಆಗಿದೆ. ನೀರಿನ ಪುರೈಕೆ ಕೊಂಚ ಕಡಿಮೆಯಿರುವ ಪ್ರದೇಶಗಳಲ್ಲೂ ಕ್ಷಾರೀಯ ಭೂಮಿಗಳಲ್ಲೂ ಚೆನ್ನಾಗಿ ಬೆಳೆಯಬಲ್ಲುದು. 18ತಿಂಗಳುಗಳಲ್ಲಿ ಪಕ್ವವಾಗುತ್ತದೆ. ಇದರ ಇಳುವರಿಯೂ ಹೆಚ್ಚು. ಈಚೆಗೆ ಮಾರಿಷಸ್ ದ್ವೀಪಗಳಿಂದ ತಂದು ರೂಢಿಸಲಾದ ನಾಲ್ಕು ಬಗೆಯ ಕಬ್ಬುಗಳನ್ನು ಬೆಳೆಸುತ್ತಿದ್ದಾರೆ. ಇವೆಲ್ಲಾ ಬಹಳ ಗಟ್ಟಿ ಕಬ್ಬುಗಳಾಗಿದ್ದು, ಎತ್ತರ ಹಾಗೂ ನೇರವಾಗಿ ಬೆಳೆಯುತ್ತವೆ. ಇವುಗಳ ಇಳುವರಿಯೂ ಹೆಚ್ಚು. ಇವುಗಳಲ್ಲಿ ಬಹಳ ಮುಖ್ಯವಾದುದು ರೆಡ್ ಮಾರಿಷಸ್ ತಳಿ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯುವ ಇದು ಮೈಸೂರಿನಲ್ಲಿ ಹಲವಾರು ಸಸಿ ಕಬ್ಬುಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗೀಗ ತಳೀಕರಣ ಪ್ರಯೋಗಗಳಿಂದ ಅಭಿವೃದ್ಧಿಪಡಿಸಲಾದ ಸಸಿಕಬ್ಬುಗಳು ಬಳಕೆಗೆ ಬಂದಿರುವುದರಿಂದ ಹಳೆಯ ಬಗೆಯ ಕಬ್ಬುಗಳ ಪ್ರಾಮುಖ್ಯ ಕಡಿಮೆಯಾಗಿದೆ. ಸಸಿಕಬ್ಬುಗಳನ್ನು ಬೀಜ ಬಿತ್ತನೆಯ ಮುಖಾಂತರ ಪಡೆಯುತ್ತಾರೆ. ವಿವಿಧ ಬಗೆಯ ಕಬ್ಬುಗಳನ್ನು ಒಂದೆಡೆ ಬೆಳೆಸಿ ಅವುಗಳಲ್ಲಿ ಸೂಲಂಗಿ ಬಂದಾಗ ಅವನ್ನು ಸಹಜವಾಗಿಯೋ ಅಥವಾ ಕೈಯಿಂದ ಪರಾಗಸ್ಪರ್ಶಕ್ರಿಯೆ ನಡೆಸಿಯೋ ಬೀಜೋತ್ಪಾದನೆ ಮಾಡುತ್ತಾರೆ. ಹೀಗೆ ಉತ್ಪತ್ತಿಯಾದ ಬೀಜಗಳನ್ನು ಬಿತ್ತಿ ಅದರಿಂದ ಬರುವ ಸಸಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳಲ್ಲಿ ಯಾವುದಾದರೂ ಒಳ್ಳೆಯ ಗುಣಗಳುಳ್ಳ ಸಸಿಗಳಿದ್ದರೆ ಅವನ್ನು ಆರಿಸಿ ಬೇರೆ ಮಾಡಿ ವ್ಯವಸಾಯಕ್ಕೆ ಉಪಯೋಗಿಸುತ್ತಾರೆ. ಕೆಲವುಬಾರಿ ಎಕ್ಸ್‌ರೇ ಅಥವಾ ರಾಸಾಯನಿಕಗಳನ್ನು ಬಳಸಿ ಸಸಿಗಳಲ್ಲಿ ಒಳ್ಳೆಯ ಗುಣ ಲಕ್ಷಣಗಳು ಬರುವಂತೆ ಮಾಡಲು ಪ್ರಯತ್ನಿಸುವುದು ಉಂಟು. ಹೀಗೆ ಪಡೆದ ಕಬ್ಬುಗಳಲ್ಲಿ ಹಲವಾರು ಬಗೆಗಳಿದ್ದು ಮುಖ್ಯವಾದುವು, ಬಬ್ಬೂರು ಪಟ್ಟಿ, ಹೆಚ್.ಎಂ.544, ಹೆಚ್.ಎಂ.320, ಹೆಚ್.ಎಂ 661, ಇತ್ಯಾದಿ. ಕೊಯಮತ್ತೂರಿನ ಕಬ್ಬು ಸಂಶೋಧನ ಕೇಂದ್ರದಲ್ಲೂ ಕಬ್ಬಿನ ತಳೀಕರಣ ಪ್ರಯೋಗಗಳು ನಡೆಯುತ್ತಿದ್ದು, ಅಲ್ಲಿ ಹಲವಾರು ವಿಶ್ವವಿಖ್ಯಾತ ಕಬ್ಬಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವೆಲ್ಲಾ ತಮ್ಮ ಗಟ್ಟಿತನಕ್ಕೂ ರೋಗನಿರೋಧಕ ಶಕ್ತಿಗೂ ಹೆಚ್ಚಿನ ಪ್ರಮಾಣದ ಇಳುವರಿಗೂ ವಿವಿಧ ಭೂ ಗುಣಗಳಿಗೆ ಹೊಂದಿಕೊಳ್ಳುವ ಶಕ್ತಿಗೂ ಹೆಸರಾಗಿವೆ. ಇವುಗಳಲ್ಲಿ ಮುಖ್ಯವಾದವು ಕೊ, 213, ಕೊ.290, ಕೊ.312, ಕೊ.347, ಕೊ.331, ಕೊ.419, ಕೊ.421, ಮುಂತಾದುವು. ಬರಿಯ ಕಬ್ಬಿನ ವಿವಿಧ ತಳಿಗಳ ನಡುವೆಯಲ್ಲದೆ ಕಬ್ಬಿಗೂ ಜೋಳ, ಬಿದಿರು ಮುಂತಾದ ಜಾತಿಗಳಿಗೂ ನಡುವೆ ಅಡ್ಡತಳಿಯೆಬ್ಬಿಕೆಯ ಪ್ರಯೋಗಗಳು ನಡೆಯುತ್ತಿವೆ. ಕೊ.351, ಕೊ.352, ಕೊ.357, ಮುಂತಾದುವು ಕಬ್ಬು ಮತ್ತು ಜೋಳಗಳ ನಡುವಣ ಅಡ್ಡ ತಳಿಯೆಬ್ಬಿಕೆಯಿಂದ ಪಡೆಯಲಾದ ಕಬ್ಬಿನ ತಳಿಗಳು.

ಸಸ್ಯ ವಿವರಣೆ[ಬದಲಾಯಿಸಿ]

Sugarcane flower in Dominica.

ಕಬ್ಬಿನ ಗಿಡವನ್ನು ಕಾಂಡ, ಬೇರು, ಮತ್ತು ಎಲೆಗಳೆಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಕಾಂಡವನ್ನು ಜಲ್ಲೆಯೆಂದು ಕರೆಯುತ್ತಾರೆ. ಕಾಂಡದಲ್ಲಿ ಭೂಮಿಯ ಒಳಗಿರುವ ಕೂಳೆ ಎಂಬ ಭಾಗ ಮತ್ತು ನೆಲದ ಮೇಲೆ ನೇರವಾಗಿ ಬೆಳೆಯುವ ಭಾಗಗಳನ್ನು ಗುರುತಿಸಬಹುದು. ಎರಡು ಭಾಗಗಳಲ್ಲಿಯೂ ಅನೇಕ ಗಿಣ್ಣುಗಳನ್ನು ನೋಡಬಹುದು. ಈ ಗಿಣ್ಣುಗಳು ನೆಲದ ಮೇಲಿನ ಕಾಂಡಭಾಗದಲ್ಲಿ ದೂರದೂರವಾಗಿದ್ದು, ನಿರ್ದಿಷ್ಟ ಅಂತರವನ್ನು ಹೊಂದಿರುತ್ತವೆ. ನೆಲದೊಳಗಿನ ಭಾಗದಲ್ಲಿ ಅವುಗಳ ನಡುವಣ ಅಂತರ ಕಡಿಮೆ. ಗಿಣ್ಣುಗಳಲ್ಲಿ ಕಾಂಡವನ್ನು ಸುತ್ತುವರಿದಂತೆ ಬಿಳಿಯ ಪಟ್ಟಿ ಇದೆ. ಇದರ ಮೇಲೆಲ್ಲಾ ಅನೇಕ ಚುಕ್ಕೆಗಳಿವೆ. ಒಂದೊಂದು ಚುಕ್ಕೆಯೂ ಒಂದೊಂದು ಬೇರಿನ ಮೊಳಕೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಒಂದೊಂದು ಗಿಣ್ಣಿನಲ್ಲೂ ಒಂದೊಂದು ಕಣ್ಣು ಇದೆ. ಪರ್ಯಾಯವಾಗಿ ಜೋಡಣೆಗೊಂಡಿರುವ ಈ ಕಣ್ಣುಗಳು ವಿವಿಧ ಬಗೆಯ ಕಬ್ಬುಗಳಲ್ಲಿ ವಿವಿಧ ಆಕಾರಗಳನ್ನು ಹೊಂದಿವೆ. ಒಂದೊಂದು ಕಣ್ಣು ಒಂದೊಂದು ಕಂಕುಳು ಮೊಗ್ಗು. ಜಲ್ಲೆಯನ್ನು ತುಂಡುಗಳಾಗಿ ಕತ್ತರಿಸಿ ನೆಲದಲ್ಲಿ ನೆಟ್ಟು ಬೆಳೆಸಿದಾಗ ಬೇರಿನ ಮೊಳಕೆಗಳು ಬೇರುಗಳಾಗಿಯೂ ಕಣ್ಣು ಹೊಸ ಕಬ್ಬಿನ ಕಾಂಡವಾಗಿಯೂ ಬೆಳೆಯುತ್ತವೆ. ಕಾಂಡ ಸಾಮಾನ್ಯವಾಗಿ 3-4 ಮೀ. ಎತ್ತರ ಬೆಳೆಯುತ್ತದೆ. ವ್ಯವಸಾಯದ ರೀತಿ ಹಾಗೂ ಭೂಗುಣ ಉತ್ತಮವಾಗಿದ್ದರೆ ಸು. 9 ಮೀ. ವರೆಗೂ ಬೆಳೆಯುವುದುಂಟು. ಅದರ ಅಗಲ 1-8 ಸೆಂ.ಮೀ. ವರೆಗೂ ವ್ಯತ್ಯಾಸವಾಗುತ್ತದೆ. ಸಾಧಾರಣವಾಗಿ ಬುಡಭಾಗದಲ್ಲಿ ದಪ್ಪ ಹೆಚ್ಚು. ಮೇಲಕ್ಕೆ ಹೋದಂತೆಲ್ಲಾ ಕ್ರಮೇಣ ಸಣ್ಣದಾಗುತ್ತದೆ. ಕಾಂಡದ ಬಣ್ಣದಲ್ಲೂ ವೈವಿಧ್ಯವಿದೆ. ವಿವಿಧ ರೀತಿಯ ಹಸಿರು ಛಾಯೆ, ಹಳದಿ, ನಸುಗೆಂಪು, ಕೆಂಪು-ಇವು ಸಾಮಾನ್ಯ. ಕೆಲವು ಕಬ್ಬುಗಳಲ್ಲಿ ಉದ್ದುದ್ದನೆಯ ಪಟ್ಟಿಗಳೂ ಇವೆ. ಅಂತರ ಗಿಣ್ಣುಗಳ ಮೇಲೆಲ್ಲಾ ತೆಳುವಾದ ಮಯಣದ ಲೇಪವಿದೆ. ಸಾಮಾನ್ಯವಾಗಿ ಒಂದು ಗಿಡಕ್ಕೆ ಒಂದೇ ಪ್ರಮುಖ ಕಾಂಡವಿದೆಯಾದರೂ ಕೆಲವು ಭಾರಿ ಕೆಳಭಾಗದ ಗಿಣ್ಣುಗಳಿಂದ ಹಲವಾರು ರೆಂಬೆಗಳಂಥ ದ್ವಿತೀಯ ಮತ್ತು ತೃತೀಯ ಶ್ರೇಣಿಯ ಜಲ್ಲೆಗಳು ಬೆಳೆಯುತ್ತವೆ. ಬೇರು ತೊಡಕು ಬೇರಿನ ಸಮೂಹಕ್ಕೆ ಸೇರಿದ್ದು. ಸ್ಥೂಲವಾಗಿ ಎಲ್ಲಾ ಬೇರುಗಳು ಒಂದೇ ರೀತಿಯವಾಗಿದ್ದರೂ ಮೂರು ಬಗೆಯವನ್ನು ಗುರುತಿಸಬಹುದು. 1. ಆಳಕ್ಕೆ ಬೆಳೆಯದೆ ಮೇಲ್ಮಟ್ಟದಲ್ಲೇ ಹರಡಿ ಕವಲೊಡೆದು ಬೆಳೆಯುವ ಮೇಲ್ಪದರದ ಬೇರುಗಳು. 2. ದಪ್ಪಗಾತ್ರದ ಬಿಳಿಯ ಬಣ್ಣದ ಆನಿಕೆ ಬೇರುಗಳು-ಇವು ಕಬ್ಬು ದೃಢವಾಗಿ ಬೆಳೆದು ನಿಲ್ಲಲು ಆಸರೆ ಒದಗಿಸುತ್ತವೆ. 3. ಕಾಂಡದ ತಳಭಾಗದಿಂದ ಭೂಮಿಯೊಳಕ್ಕೆ 3-4 ಮೀ. ಆಳಕ್ಕೆ ಇಳಿದು ಬೆಳೆಯಬಲ್ಲ ಹುರಿಬೇರುಗಳು-ಇವೇ ಭೂಮಿಯಿಂದ ನೀರು ಮತ್ತು ಆಹಾರವನ್ನು ಹೀರಿಕೊಳ್ಳುವ ಬೇರುಗಳು. ಕಾಂಡದ ಎರಡೂ ಪಾರ್ಶ್ವಗಳಲ್ಲಿ ಪರ್ಯಾಯ ಜೋಡಣೆಗೊಂಡಿರುವ ನೀಳವಾದ ಕತ್ತಿಯಂಥ ಎಲೆಗಳಿವೆ. ಒಂದು ಗಿಡಕ್ಕೆ ಸಾಮಾನ್ಯವಾಗಿ 10 ಎಲೆಗಳಿರುತ್ತವೆ. ಒಂದೊಂದು ಎಲೆಯೂ 1-1.3 ಮೀ. ಉದ್ದ ಮತ್ತು 5-7 ಸೆಂ.ಮೀ. ಅಗಲ ಇದೆ. ಎಲೆಯಲ್ಲಿ ಕವಚದಂಥ ಬುಡಭಾಗವೂ ನೀಳವಾದ ಅಲಗುಭಾಗವೂ ಇವೆ. ಇವೆರಡೂ ಕೂಡುವ ಸ್ಥಳದಲ್ಲಿ ಕಿವಿಯ ಆಲೆಯಂಥ ಆರಿಕಲ್ ಮತ್ತು ಡ್ಯೂಲ್ಯಾಪ್ ಎಂಬ ಬೆಳೆವಣಿಗೆಗಳಿವೆ. ಎಲೆಯ ಅಂಚು ಬಹುಸೂಕ್ಷ್ಮವಾದ ಗರಗಸದ ಹಲ್ಲಿನಂತಿದೆ. ಎಲೆಗಳ ನಾಳವಿನ್ಯಾಸ ಸಮಾನಾಂತರ ಮಾದರಿಯದು. ಎಲೆಯ ಬುಡ ಕಾಂಡದ ಸ್ವಲ್ಪಭಾಗವನ್ನು ಸುತ್ತಿಕೊಂಡಿದೆ. ಗಿಡ ಪೂರ್ಣ ಬೆಳೆದ ಮೇಲೆ ಅದರ ತುದಿಯಿಂದ ನೀಳವಾದ ಹೂ ಗೊಂಚಲು ಹೊರಬರುತ್ತದೆ. ವಿಪುಲವಾಗಿ ಕವಲೊಡೆದ ಇದು ಸಂಕೀರ್ಣ ಪುಷ್ಪಗುಚ್ಛ ಮಾದರಿಯದು. ಇದನ್ನು ಸೂಲಂಗಿ ಎನ್ನುತ್ತಾರೆ. ಹೂಗೊಂಚಲಿನ ಮಧ್ಯೆ ಒಂದು ಮುಖ್ಯ ಕಾಂಡವೂ(ರೇಕೀಸ್) ಅದರಿಂದ ಎಲ್ಲಾ ದಿಕ್ಕುಗಳಲ್ಲಿಯೂ ಹೊರಟುಬರುವ ಕವಲು, ಉಪಕವಲುಗಳೂ ಇವೆ. ಪ್ರತಿಯೊಂದು ಉಪಕವಲಿನ ಮೇಲೂ ಜೊತೆಜೊತೆಯಾಗಿ ಜೋಡಣೆಗೊಂಡಿರುವ ಅನುಷೂಕಿಗಳಿವೆ. (ಸ್ಟೈಕ್ ಲೆಟ್ಸ್‌) ಇವುಗಳಲ್ಲಿ ಒಂದಕ್ಕೆ ತೊಟ್ಟಿಲ್ಲ. ಇನ್ನೊಂದಕ್ಕೆ ಉದ್ದನೆಯ ತೊಟ್ಟಿದೆ. ಒಂದೊಂದು ಅನುಷೂಕಿಯಲ್ಲೂ ಎರಡು ಹೂಗಳಿವೆ. ಇವುಗಳಲ್ಲಿ ಒಂದು ಬರಡು ಇನ್ನೊಂದು ಫಲವತ್ತಾದುದು ಆಗಿವೆ. ಫಲವತ್ತಾದ ಹೂವಿನಲ್ಲಿ ಮೂರು ಕೇಸರಗಳು, ಒಂದು ಉಚ್ಚ ಸ್ಥಾನದ ಏಕಕೋಶಿ ಅಂಡಾಶಯವೂ ಇವೆ. ಶಲಾಕೆ ಎರಡಾಗಿ ಕವಲೊಡೆದಿದೆಯಲ್ಲದೆ ಹಕ್ಕಿಗಳ ಗರಿಯಂತಿದೆ. ಅನುಷೂಕಿಗಳ ಬುಡದಲ್ಲಿ ಉದ್ದನೆಯ ನಯವಾದ ಬಿಳಿಯ ಬಣ್ಣದ ಕೂದಲುಗಳಿವೆ. ಅಂಡಾಶಯದಲ್ಲಿ ಒಂದೇ ಅಂಡಕವಿದೆ. ಹೂಗಳು ಸಾಮಾನ್ಯವಾಗಿ ರಾತ್ರಿ ಅಥವಾ ಬೆಳಗಿನ ಜಾವ ಅರಳುತ್ತವೆ. ಹೂಗಳು ಅರಳಿದಾಗ ಮೊದಲು ಶಲಾಕೆ ಹೊರಬರುತ್ತದೆ. ಅನಂತರ ಕೇಸರಗಳು ಪರಾಗವನ್ನು ಹೊರಚೆಲ್ಲುತ್ತವೆ. ಅಲ್ಲದೆ ಕಬ್ಬಿನಲ್ಲಿ ಅಂಡಕಗಳು ಪರಾಗವೂ ಬಹುತೇಕ ಬಂಜೆಯಾಗಿರುತ್ತವೆ. ಪರಾಗದ ಮೊಳೆಯುವ ಸಾಮರ್ಥ್ಯವೂ ಬಹಳ ಸ್ವಲ್ಪ ಸಮಯ ಮಾತ್ರವಿರುತ್ತದೆ. ತತ್ಪರಿಣಾಮವಾಗಿ ಕಬ್ಬಿನಲ್ಲಿ ಬೀಜೋತ್ಪಾದನೆ ಕಡಿಮೆ. ಬೀಜಗಳು ಉತ್ಪತ್ತಿಯಾದರೂ ಅವು ಬಹಳ ಸೂಕ್ಷ್ಮವಾದವು ಮತ್ತು ಅವುಗಳ ಮೊಳಕೆಯೊಡೆಯುವ ಸಾಮರ್ಥ್ಯ ಬಹಳ ದಿನ ಇರದು. ಇವೆಲ್ಲಾ ಕಾರಣಗಳಿಂದಾಗಿ ಕಬ್ಬಿನಲ್ಲಿ ಬೇರೆ ಬೇರೆ ತಳಿಗಳ ನಡುವೆ ಅಡ್ಡತಳಿಯೆಬ್ಬಿಕೆಯ ಪ್ರಯೋಗಗಳನ್ನು ನಡೆಸುವುದು ಬಹಳ ಕಷ್ಟ.

ವ್ಯವಸಾಯ[ಬದಲಾಯಿಸಿ]

Sugarcane plantation in Mauritius
Sugar canes harvested by women in Hòa Bình province, Vietnam.
Photo of trailer trucks filled with plant cane
Sugarcane mechanical harvest in Jaboticabal, São Paulo, ಬ್ರೆಜಿಲ್

ಕಬ್ಬನ್ನು ವರ್ಷದ ಯಾವ ಕಾಲದಲ್ಲಾದರೂ ನೆಡಬಹುದು. ಆದರೆ ಚಳಿ ಹೆಚ್ಚಾಗಿದ್ದಾಗ ನೆಟ್ಟರೆ ಮೊಳಕೆ ಹೊರಡುವುದು ನಿಧಾನ. ಭೂಮಿ ಬಹಳ ಫಲವತ್ತಾಗಿರಬೇಕು. ಗೊಬ್ಬರವನ್ನು ಚೆನ್ನಾಗಿ ಹಾಕಿ ಅಧಿಕಪ್ರಮಾಣದಲ್ಲಿ ನೀರು ಹಾಯಿಸಿದರೆ ಬಹಳ ಉತ್ತಮ. ಸುತ್ತಮುತ್ತಲಿನ ಉಷ್ಣತೆಯೂ 800 ಫಾ.ಗಿಂತ ಹೆಚ್ಚಾಗಿದ್ದರೆ ಚೆನ್ನ. ಭೂಮಿಯನ್ನು ಸಾಧ್ಯವಾದಷ್ಟು ಆಳವಾಗಿ ಉಳಬೇಕು. ಮೊದಲು 30-40 ಸೆಂ.ಮೀ. ಆಳಕ್ಕೆ ಉಳುಮೆಮಾಡುವುದು ಉತ್ತಮ. ಇದರಿಂದ ಕಬ್ಬಿನ ಬಿತ್ತನೆಯನ್ನು ಪುರ್ಣವಾಗಿ ಮುಚ್ಚಿದಂತೆ ನೆಡಲು ಮುಂದೆ ಅದಕ್ಕೆ ಸಾಕಷ್ಟು ಮಣ್ಣನ್ನು ವಾರಿ ಹಾಕಲು ಅನುಕೂಲ. ಹೀಗೆ ಸಾಲುತೆಗೆದ ಅನಂತರ ನೀರು ಬಸಿಯಲು ಕಡಗುಗಳನ್ನು ನೀರು ಕಟ್ಟಲು ಅನುಕೂಲವಾಗುವಂತೆ ಅಲ್ಲಲ್ಲಿ ನೀರು ಕಾಲುವೆಗಳನ್ನು ತೆಗೆಯಬೇಕು. ಸಾಲುಗಳಲ್ಲಿ ನೀರು ಬಿಟ್ಟು ನೀರು ನಿಂತಿರುವಾಗಲೇ ಕಬ್ಬಿನ ಬಿತ್ತನೆಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿ ಕೆಸರಿನಲ್ಲಿ ತುಳಿದುಬಿಡಬಹುದು. ಇದೇ ಸಾಮಾನ್ಯ ಬಳಕೆಯಲ್ಲಿರುವ ಪದ್ಧತಿ. ಕೆಲವೆಡೆ ಪುರ್ಣ ಕಬ್ಬನ್ನೇ ನೆಡಲಾಗುತ್ತದೆ. ಇತರೆಡೆ ಸಾಲಿನಲ್ಲಿ 10-15 ಸೆಂ.ಮೀ. ಅಂತರಕ್ಕೆ ಒಂದರಂತೆ 7-10 ಸೆಂ.ಮೀ. ಆಳದ ಗುಂಡಿಮಾಡಿ ಅದರಲ್ಲಿ 3-4 ಬಿತ್ತನೆ ನೆಡುವುದು ಉಂಟು. ಹಲವು ಪ್ರದೇಶಗಳಲ್ಲಿ ಗುಳಿ ಬಿತ್ತನೆ ಮಾಡುವ ಅಭ್ಯಾಸವಿದೆ. ಕಬ್ಬು ನೆಡುವ ಗದ್ದೆಗಳನ್ನು ಉತ್ತು ಹಸನುಗೊಳಿಸಿದ ಮೇಲೆ 1-1.3 ಮೀ. ಅಗಲದ ಮತ್ತು ಅನುಕೂಲಕ್ಕೆ ತಕ್ಕಂಥ ನೀಳದ ಮಡಿಗಳನ್ನು ಮಾಡಿ, ಅದರಲ್ಲಿ ಅಡಿಗೆ ಒಂದರಂತೆ ಗುಳಿ ತೋಡಿ, ಗುಳಿಗೊಂದರಂತೆ ಬಿತ್ತನೆ ಮಾಡುತ್ತಾರೆ. ಬಿತ್ತನೆ 2-5 ಸೆಂ.ಮೀ. ಆಳಕ್ಕಿಂತ ಹೆಚ್ಚಾಗಿರಕೂಡದು. ಬಿತ್ತನೆಯನ್ನು ಸರಿಯಾದ ರೀತಿಯಲ್ಲಿ ಇಟ್ಟು ತೇವಮಾಡಿದ ಸಾಲಿನಲ್ಲಿ ಕೈಯಿಂದ ಅಥವಾ ಕಾಲಿನಿಂದ ತುಂಡುಗಳನ್ನು ಅದುಮಬಹುದು. ಅವು ಒಂದು ಪಕ್ಕಕ್ಕೆ ಇರಬೇಕು. ರೀತಿ ಯಾವುದೇ ಇರಲಿ, ಗಿಣ್ಣಿನ ಕಣ್ಣು ಪಕ್ಕದಲ್ಲಿರುವಂತೆ ನೆಡುವುದು ಮುಖ್ಯ. ಇದರಿಂದ ಬಿತ್ತನೆಯಲ್ಲಿನ ಮೂರು ಕಣ್ಣುಗಳು ಅರಳಲು ಅನುಕೂಲವಾಗುತ್ತದೆ. ತುದಿಭಾಗದಲ್ಲಿರುವ ಮೊಗ್ಗು ಚೆನ್ನಾಗಿ ಬೆಳೆದು ಉತ್ತಮ ಕಬ್ಬಾಗುತ್ತದೆ. ತಳದಲ್ಲಿನ ಮೊಗ್ಗು ಬೆಳೆಯುವುದು ಬಹು ನಿಧಾನ. ಆದ್ದರಿಂದ ತುದಿಭಾಗದ ಕಬ್ಬು ತುಂಡುಗಳನ್ನು ಬಿತ್ತನೆಗಾಗಿ ಉಪಯೋಗಿಸಿದಲ್ಲಿ ಒಳ್ಳೆಯದು. ಹೆಚ್ಚು ಫಲವತ್ತಾದ ಭೂಮಿಯಲ್ಲಿ 4' ಅಂತರದ ಸಾಲುಗಳಲ್ಲಿಯೂ ಸಾಮಾನ್ಯ ಫಲವತ್ತಾದ ಭೂಮಿಯಲ್ಲಿ ಎರಡೂವರೆ ಅಡಿ ಅಂತರದ ಸಾಲುಗಳಲ್ಲಿಯೂ ನೆಡುವುದು ಉತ್ತಮವೆಂದು ಅನುಭವದಿಂದ ಕಂಡುಬಂದಿದೆ. ಒಂದು ಎಕರೆ ಪ್ರದೇಶಕ್ಕೆ ಉತ್ತಮವಾಗಿ ಆರಿಸಿದ 10,000 ಬಿತ್ತನೆ ತುಂಡುಗಳು ಸಾಕು. ಕಬ್ಬಿನ ತಾಕು ಕಳೆರಹಿತವಾಗಿರುವುದು ಮುಖ್ಯ. ಬಿತ್ತನೆ ನೆಟ್ಟ ಎರಡು ವಾರಗಳಲ್ಲಿ ಮೊದಲ ಕಳೆತೆಗೆಯಬೇಕು. ಮುಂದೆಯೂ ಕಳೆಯಿಲ್ಲದಂತೆ ಎಚ್ಚರವಹಿಸಬೇಕು. ಹೋತುಬಂದಿದ್ದಲ್ಲಿ ಮೊಳೆತ ಬಿತ್ತನೆಗಳನ್ನು ನೆಟ್ಟು ಸರಿಪಡಿಸಬೇಕು. 6 ವಾರಗಳ ಅನಂತರ ಕಳೆ ತೆಗೆದು ನೀರು ಕಟ್ಟಿ ಹದವಿದ್ದಾಗ ಮೊದಲ ಮೇಲುಗೊಬ್ಬರ ಒದಗಿಸಿ ಸಾಲನ್ನು ಉತ್ತು ಮಣ್ಣು ಏರಿ ಹಾಕಬೇಕು. ಇದು ಬುಡಕ್ಕೆ ದೃಢತೆ ಒದಗಿಸುವುದಲ್ಲದೆ, ಗೊಬ್ಬರವನ್ನು ಮುಚ್ಚಿ, ಕಾಂಡಕೊರೆಯುವ ಹುಳದ ಬಾಧೆಯನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಲು ಸಹಾಯಕವಾಗುತ್ತದೆ. 4 ವಾರಗಳ ಅನಂತರ ಇನ್ನೊಂದು ಸಲ ಅದೇ ರೀತಿ ಮುಂದೆ ಸೂಚಿಸಿರುವ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಒದಗಿಸಬೇಕು. ಕೊನೆಯದಾಗಿ, ಮೂರನೆಯ ಸಲ ಹೆಚ್ಚು ಪ್ರಮಾಣದಲ್ಲಿ ಸಾರಜನಕ ಗೊಬ್ಬರ ಒದಗಿಸಿ ಮಣ್ಣು ವಾರಿಹಾಕಬೇಕು. ನೀರು ಪುರೈಕೆ ಸಂಪುರ್ಣವಾಗಿರಬೇಕು. ಇಲ್ಲದಿದ್ದರೆ ಇಳುವರಿ ತಗ್ಗುತ್ತದೆ. ಅದರಲ್ಲೂ ಗೊಬ್ಬರ ಕೊಟ್ಟು, ಕೊನೆಯ ಸಲ ಮುರಿ ಮಾಡಿರುವ ಕಬ್ಬಿಗೆ ಮುಂದೆ 4-5 ತಿಂಗಳ ಕಾಲ ಹೆಚ್ಚು ನೀರಿನ ಆವಶ್ಯಕತೆ ಇದೆಯಾಗಿ ಒಣಗಲು ಬಿಡಕೂಡದು. ನೀರಿನ ಪುರೈಕೆಗೆ ಗಮನವಿತ್ತಂತೆ ಹೆಚ್ಚಿನ ನೀರು ಬಸಿಯಲು ಅನುಕೂಲವೇರ್ಪಡಿಸಿ ಕಡಗುಗಳು ಪುರ್ಣ ತೆರವಾಗಿದ್ದು, ಅಡಚಣೆಯಾಗದಂತೆ ಎಚ್ಚರವಹಿಸಬೇಕು. ಕಬ್ಬು ಬೆಳೆದಂತೆಲ್ಲಾ ತಳದ ಒಣ ತರಗನ್ನು ಕಬ್ಬಿನ ತೆಂಡೆಗೆ ಸುತ್ತಿ ಕಟ್ಟುತ್ತಾರೆ. ಇದರಿಂದ ಇಲಿಗಳ ಕಾಟ ಕಡಿಮೆಯಾಗಿ ಒಂದಕ್ಕೊಂದು ಆಸರೆಯಾಗಿ ಕಬ್ಬುಗಳು ಒರಗಿಬೀಳುವುದಿಲ್ಲ. ತಳದ ಎಲೆ ಗರಿಗಳು ಒಣಗುತ್ತಿದ್ದಂತೆಲ್ಲಾ ಅವನ್ನು ತೆಗೆದು ಕಬ್ಬು ಕಾಣುವಂತೆ ಏರ್ಪಡಿಸುವುದು ಸಾಮಾನ್ಯವಾಗಿದೆ. ನರಿ, ಇಲಿ ಮುಂತಾದುವು ಒಳಗೆ ಸೇರದಿರಲು ಇದರಿಂದ ಸಹಾಯಕವಾಗುತ್ತದೆ. ಕಬ್ಬು ತನ್ನ ಪುರ್ಣ ಬೆಳೆವಣಿಗೆಗೆ ಹೆಚ್ಚಿನ ಗೊಬ್ಬರದ ಅಂಶಗಳನ್ನು ಉಪಯೋಗಿಸುತ್ತದೆ. 40 ಟನ್ನಿನಷ್ಟು ಕಬ್ಬಿನ ಬೆಳೆ ಭೂಮಿಯಿಂದ 105 ಪೌಂಡು ನೈಟ್ರೋಜನ್À; 63 ಪೌಂಡ್ ರಂಜಕ; 315 ಪೌಂಡ್ ಪೊಟ್ಯóಷ್; 75 ಪೌಂಡು ಸುಣ್ಣ ಮತ್ತು ವಿವಿಧ ಅಂತರದ ಇತರ ಆಹಾರಾಂಶವನ್ನು ಉಪಯೋಗಿಸಿಕೊಳ್ಳುತ್ತವೆಂದು ನೋಯಿಲ್ಟೀರ್ ವಿವರಿಸಿದ್ದಾರೆ. ಸಾಮಾನ್ಯವಾಗಿ ಕಬ್ಬು ಬೆಳೆದ ಜಮೀನುಗಳಲ್ಲಿ ಅದರ ಬೇರುಗಳಿಂದಲೇ ಅರ್ಧದಿಂದ ಒಂದು ಟನ್ನು ಸಾವಯವ ವಸ್ತುಗಳು ಉತ್ಪನ್ನವಾಗುತ್ತವೆಂದು ತಿಳಿದುಬಂದಿದೆ. ತಳಭಾಗಗಳನ್ನು ಭೂಮಿಗೆ ಉತ್ತುಬಿಟ್ಟಲ್ಲಿ ಅದರಿಂದಲೇ ಸಾಕಷ್ಟು ಸಾವಯವ ವಸ್ತುಗಳು ಉತ್ಪನ್ನವಾಗುತ್ತದೆ. ಸಾಧ್ಯವಾದಲ್ಲೆಲ್ಲಾ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆಸಿ ಉತ್ತು ಬಿಡಬೇಕು. ಇದಕ್ಕೆ ದೈಂಚ, ಅಪಸಣಬು ಅಥವಾ ಸಸ್ಪೇನಿಯ ಅನುಕೂಲವಾದದ್ದು. ಬಿತ್ತನೆಗೆ ಮುಂಚೆ ಎಕರೆಗೆ 20-25 ಗಾಡಿ ಕಾಂಪೋಸ್ಟ್‌ ಗೊಬ್ಬರವನ್ನು ಚೆಲ್ಲಿ ಉತ್ತುಬಿಡಬೇಕು. ಆ ನಂತರ ಸಾಲು ತೆಗೆಯಬೇಕು. ಸೂಪರ್ ಫಾಸ್ಫೇಟ್ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಬಿತ್ತನೆ ನೆಡುವ ಮುನ್ನ ಸಾಲುಗಳಲ್ಲಿ ಹರಡಬೇಕು. ಸಾಮಾನ್ಯವಾಗಿ ಎಕರೆಗೆ 200ಪೌಂಡು ಸಾರಜನಕ, 100 ಪೌಂಡು ರಂಜಕ ಮತ್ತು 100 ಪೌಂಡು ಪೊಟ್ಯಾಷ್ ಒದಗಿಸುವುದು ಉತ್ತಮ. ಈ ಪ್ರಮಾಣ ವಿವಿಧ ಭೂ ಗುಣಗಳಿಗನುಸಾರವಾಗಿ ಮಾರ್ಪಾಡಬಹುದು.

ಕಬ್ಬಿನ ಪುರ್ಣ ಬೆಳೆವಣಿಗೆಯನ್ನು 4 ಮುಖ್ಯ ಹಂತಗಳನ್ನಾಗಿ ವಿಂಗಡಿಸಬಹುದು. 1. ಮೊಳಕೆ ಹಂತ : ಕಬ್ಬಿನ ಬಿತ್ತನೆಯಲ್ಲಿ ಸಾಧಾರಣವಾಗಿ 3 ಕಣ್ಣುಗಳಿರುತ್ತವೆ. ಬಿತ್ತನೆ ಸರಿಯಾಗಿದ್ದಲ್ಲಿ ಆ ಮೂರೂ ಮೊಳೆತು ಕಬ್ಬಾಗಿ ಬೆಳೆಯುತ್ತವೆ. ಆ ಕಣ್ಣುಗಳಲ್ಲಿ ಬೆಳೆಯುವ ಕಬ್ಬಿನ ಅಂಕುರಾಂಶವಿರುವುದರಿಂದ ಅದು ಬೆಳೆಯಲು ಸುಲಭವಾಗುತ್ತದೆ. ಬಿತ್ತನೆ ಸರಿಯಾಗಿದ್ದು, ಕಣ್ಣುಗಳು ದೃಢವಾಗಿದ್ದಲ್ಲಿ ಮೊಳಕೆ ಚೆನ್ನಾಗಿ ಹೊರಟು ಗಿಡ ಬೆಳೆಯುತ್ತದೆ. ಇದಕ್ಕೆ ಬಿತ್ತನೆಯಲ್ಲಿನ ಆಹಾರಾಂಶ ಮುಖ್ಯ. ಕಬ್ಬು ಹಳೆಯದಾಗಿ ಬಿತ್ತನೆಯ ಬಹುಭಾಗ ಬೆಂಡಾಗಿದ್ದರೆ, ಗಿಡ ದೃಢವಾಗಿ, ಆರೋಗ್ಯವಾಗಿ ಬೆಳೆಯುವುದಿಲ್ಲ. ಜಲ್ಲೆಯ ಮೇಲ್ಭಾಗ ಬಿತ್ತನೆಗೆ ಸಮಂಜಸವಾಗಿದ್ದು, ಮೊಳಕೆಯೂ ಉತ್ತಮವಾಗಿರುತ್ತವೆ. ತಳದ ಬಿತ್ತನೆ ಉಪಯೋಗಿಸಿದಲ್ಲಿ ಮೊಳಕೆ ಸರಿಯಾಗಿ ಹೊರಡುವುದಿಲ್ಲ. ಬಿತ್ತನೆಯನ್ನು ನೆಡುವಾಗ ಕಣ್ಣುಗಳೂ ಪಕ್ಕಕ್ಕಿರುವಂತೆ ಎಚ್ಚರಿಸಬೇಕು. ವಾತಾವರಣದ ವ್ಯತ್ಯಾಸ ಬೆಳೆಯಮೇಲೆ ಪ್ರಭಾವ ಬೀರುತ್ತವೆ. ಅತಿ ಶೀತ ವಾತಾವರಣವೂ ಭೂಮಿಯಲ್ಲಿ ತೇವವಿಲ್ಲದಿರುವಿಕೆಯೂ ಉತ್ತಮ ವ್ಯವಸಾಯವಿಲ್ಲದೆ ಭೂಮಿಯಲ್ಲಿ ಬೇರುಗಳಿಗೆ ಉಸಿರಾಡಲು ಅನುಕೂಲವಿಲ್ಲದಿರುವುದೂ ಆಳವಾದ ನೆಡುವಿಕೆಯೂ ಮೊಳಕೆಯನ್ನು ನಿಧಾನಗೊಳಿಸಿ ಅಡಚಣೆಯುಂಟುಮಾಡುತ್ತದೆ. 2. ತೆಂಡೆಹಂತ : ಉತ್ತಮ ಫಸಲು ದೊರಕಲು ಹೆಚ್ಚಾಗಿ ಮರಿಕಬ್ಬು ಉತ್ಪನ್ನವಾಗಬೇಕು. ಮರಿಕಬ್ಬಿನ ಉತ್ಪನ್ನವನ್ನು ತೆಂಡೆಹೊಡೆಯುವುದು ಎನ್ನುತ್ತಾರೆ. ಕಬ್ಬಿನ ಜೀವನವಿಡೀ ಸತತವಾಗಿ ಮರಿಕಬ್ಬುಗಳು ಉತ್ಪನ್ನವಾಗುತ್ತಲೇ ಇರುತ್ತವೆ. ಇವು ಭೂಮಿಯ ಒಳಗಿನ ಕಾಂಡಭಾಗದಿಂದ ಹೊರಗಾಣುತ್ತವೆ. ಮೊದಲು ಪಕ್ಕಕ್ಕೆ ಹರಡಿದಂತಿದ್ದರೂ ಮುಂದೆ ನೇರವಾಗಿ ಬೆಳೆಯುತ್ತವೆ. ಗಿಡಗಳು ಎಳೆಯ ವಯಸ್ಸಿನವಾಗಿರುವಾಗ ಈ ಹೊಸ ಕಾಂಡಗಳಿಗೆ ಬೆಳೆಯಲು ಯಾವ ತೊಡಕೂ ಇರುವುದಿಲ್ಲ. ಆದರೆ ಹೆಚ್ಚಾಗಿ ಬೆಳೆದ ಅನಂತರ ಹೊಸತಾಗಿ ಉತ್ಪನ್ನವಾಗುವ ಮರಿಕಬ್ಬುಗಳು ಸೂರ್ಯರಶ್ಮಿ ಸಾಕಾಗದೆ ನಶಿಸಬಹುದು. ಕಬ್ಬು ಮುಕ್ಕಾಲುಭಾಗ ಬೆಳೆದಿರುವಾಗ, ಹುಟ್ಟುವ ಮರಿಕಬ್ಬುಗಳು ಬಹುದಪ್ಪವಾಗಿ ಆಕರ್ಷಕವಾಗಿ ಕಂಡರೂ ಅದರಲ್ಲಿ ಸಕ್ಕರೆ ಅಂಶ ಬಹಳ ಕಡಿಮೆಯಾಗಿದ್ದು ಅವನ್ನು ನೀರುಕಬ್ಬು ಎಂದು ಕರೆಯುತ್ತಾರೆ. ಇದು ಸಕ್ಕರೆ ಉತ್ಪಾದನೆಗೆ ಅನುಕೂಲವಲ್ಲ ದಿದ್ದರೂ ಉತ್ತಮ ಬಿತ್ತನೆಯಾಗುತ್ತದೆ. ಮರಿಕಬ್ಬುಗಳು ಹೆಚ್ಚಾಗಿ ಉತ್ಪನ್ನವಾಗಲು ಅನೇಕ ಅಂಶಗಳು ಸಹಾಯಕವಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾದಲ್ಲಿ ಮರಿ ಕಬ್ಬುಗಳು ಹೆಚ್ಚುತ್ತವೆ. ಉತ್ತಮ ಗೊಬ್ಬರಗಳ ಪುರೈಕೆ ಅದರಲ್ಲೂ ರಂಜಕಾಂಶದ ಹೆಚ್ಚಳ ಹೆಚ್ಚಿನ ಮರಿ ಕಬ್ಬುಗಳು ಉತ್ಪನ್ನವಾಗುವುದಕ್ಕೆ ಸಹಾಯಕ. 3. ರಸತುಂಬುವ ಹಂತ : ಕಬ್ಬಿನ ಬೆಳೆವಣಿಗೆ ಅದರ ವಯಸ್ಸನ್ನನುಸರಿಸಿದೆ. ಪ್ರಾರಂಭದಲ್ಲಿ ಕಬ್ಬಿನ ಆಹಾರ ಉತ್ಪಾದನೆಯಲ್ಲ, ಅದರ ಬೆಳೆÀವಣಿಗೆಗಾಗಿಯೇ ಖರ್ಚಾಗುತ್ತದೆ. ಆಗ ಸಾರಜನಕಾಂಶ ಮಾತ್ರ ಹೆಚ್ಚಾಗಿದ್ದಲ್ಲಿ ಕಾಂಡಕ್ಕೆ ದೃಢತೆ ಒದಗಿ ಗಿಣ್ಣುಗಳು ದಪ್ಪನಾಗಲು ಸಹಾಯಕವಾಗುತ್ತದೆ. ಭೂಮಿಯಲ್ಲಿನ ತೇವಾಂಶ ಬೆಳೆವಣಿಗೆಗೆ ಸಹಾಯಕ. ಉಷ್ಣಾಂಶವೂ ಹೆಚ್ಚಿನ ಪ್ರಭಾವ ಬೀರುತ್ತದೆ. ಉಷ್ಣತೆ 600 ಫಾ ಗಿಂತ ಕಡಿಮೆ ಅಥವಾ 900 ಫಾ ಗಿಂತ ಹೆಚ್ಚಾಗಿದ್ದಲ್ಲಿ ಕಬ್ಬಿನ ಬೆಳೆÀವಣಿಗೆ ಕುಂಠಿತವಾಗುತ್ತದೆ. ಬಲಿತು ರಸಗೂಡುತ್ತಿದ್ದಂತೆ ಕಬ್ಬಿನ ಎಲೆಗಳಿಂದ ಉತ್ಪನ್ನವಾದ ಆಹಾರಾಂಶಗಳಲ್ಲಿ ಸ್ವಲ್ಪಭಾಗ ಹೊಸ ಅಂಗಾಂಗಳ ರಚನೆಗೂ ಸ್ವಲ್ಪ ಭಾಗ ಶಕ್ತಿರೂಪವಾಗಿ ಉಪಯುಕ್ತವಾಗಿ, ಮಿಕ್ಕಂಶವೆಲ್ಲ ಸಕ್ಕರೆಯಾಗಿ ಕಾಂಡದಲ್ಲಿ ಹೆಚ್ಚಾದಂತೆ ಕಬ್ಬು ಪಕ್ವವಾಯಿತೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯ ಅಂಶ ಗಿಣ್ಣಿನಿಂದ ಗಿಣ್ಣಿಗೆ ವ್ಯತ್ಯಾಸಹೊಂದುತ್ತದೆ. ತಳಭಾಗದ ವಯಸ್ಸಾದ ಗಿಣ್ಣುಗಳಲ್ಲಿ ಹೆಚ್ಚು ಸಕ್ಕರೆ ಶೇಖರವಾಗುತ್ತದೆ. ಮೇಲ್ಭಾಗದ ಎಳಸು ಗಿಣ್ಣುಗಳ ಮಧ್ಯೆ ಸಕ್ಕರೆ ಹೆಚ್ಚಾಗಿರುವುದಿಲ್ಲ. ಕಬ್ಬು ಪಕ್ವವಾಗಲು ಜಾತಿ, ಗೊಬ್ಬರ ಪುರೈಕೆ ನೀರು ಮತ್ತು ನಾಟಿಯ ಕಾಲಾವಧಿ ಸಹಾಯಕ. 4. ಸೂಲಂಗಿ ಹಂತ : ಕಬ್ಬಿನ ಬೆಳಸು ಕಾಂಡದ ತುಂಡುಗಳಿಂದಾಗುವುದರಿಂದ ಸೂಲಂಗಿ ಮುಖ್ಯವಲ್ಲ. ಅಲ್ಲದೆ, ಎಲ್ಲದರಲ್ಲೂ ಸೂಲಂಗಿ ಬರುವುದಿಲ್ಲ. ಸೂಲಂಗಿ ಬರುವ ಜಾತಿಗಳಲ್ಲಿ ಸೂಲಂಗಿ ಉಂಟಾದರೆ ಕಬ್ಬಿನ ಬೆಳೆವಣಿಗೆ ಪುರ್ಣ ನಿಂತಂತೆಯೇ. ಅದು ಕಾಲಮಿತಿಗೆ ಒಳಪಟ್ಟು, ಅಕ್ಟೋಬರ್-ನವೆಂಬರ್ ವೇಳೆ ಮಾತ್ರ ಹೊರಬೀಳುತ್ತದೆ. ಸೂಲಂಗಿ ಬರಲು ಕಬ್ಬಿನ ವಯಸ್ಸು ಮುಖ್ಯ.

ರೋಗಗಳು[ಬದಲಾಯಿಸಿ]

ಕಬ್ಬಿನ ಬೆಳೆಗೆ ಹಲವಾರು ಬಗೆಯ ಕೀಟಗಳು ತಗಲುತ್ತವೆ. ಇವುಗಳಲ್ಲಿ ಕಾಂಡ ಕೊರೆಯುವ ಹುಳು, ಪೈರಿಲ್ಲ ಮತ್ತು ಸುಳಿ ಅಥವಾ ತುದಿ ಕೊರೆಯುವ ಹುಳುಗಳು ಮುಖ್ಯವಾದುವು. ಕಾಂಡ ಕೊರೆಯುವ ಹುಳುಗಳಲ್ಲಿ ಹಲವಾರು ಜಾತಿಗಳಿವೆ. ಮುಖ್ಯವಾದುವು ಅರ್ಗೈರಿಯ ಸ್ಟ್ರಿಕ್ಟಿಕ್ರಾಸ್ಸಿಸ್, ಡೈಯಾಟ್ರಿಯ ಮತ್ತು ಸ್ಕಿರ್ಪೊಫೇಗ ನಿವೆಲ್ಲ ಎಂಬುವು. ಇವೆಲ್ಲ ಕಬ್ಬಿನ ಕಾಂಡವನ್ನು ಕೊರೆದು, ಮಧ್ಯ ಸುಳಿ ಒಣಗುವಂತೆ ಮಾಡಿ ಎಳೆಯ ಪೈರಿಗೆ ಅತಿ ಹೆಚ್ಚಿನ ನಷ್ಟವುಂಟುಮಾಡುತ್ತವೆ. ಸುಳಿ ಕೊರೆಯುವ ಹುಳು ಸಾಮಾನ್ಯವಾಗಿ ಕಬ್ಬಿನ ಎಳೆಯ ತುದಿಗಳನ್ನು ಕೊರೆದು ಅದರ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ. ತುದಿಯಲ್ಲಿರುವ ಎಲೆಗಳು ನಾಶವಾಗುವುದಲ್ಲದೆ ಮಧ್ಯ ಎಲೆಗಳಲ್ಲಿ ತೂತುಗಳು ಉಂಟಾಗಿ, ಉಳಿದೆಲ್ಲ ಎಲೆಗಳ ಅಂಚುಗಳಲ್ಲೂ ಕುಚ್ಚುಗಳು ಕಾಣಬರುತ್ತವೆ. ಸುಳಿ ಹಾಳಾಗುವುದರಿಂದ ಕಬ್ಬಿನ ತುದಿಯಲ್ಲಿರುವ ಮೊಗ್ಗುಗಳು ಮೊಳೆಯಲಾರಂಭಿಸುತ್ತವೆ. ಇದರಿಂದ ಕಬ್ಬಿನ ತುದಿ ಕುಚ್ಚಿನಂತೆ ಕಾಣುತ್ತದೆ. ಇವನ್ನು ನಿರ್ಮೂಲ ಮಾಡುವುದು ಕಷ್ಟವಾದರೂ ಇವುಗಳ ಮೇಲೆ ಪರಾವಲಂಬಿಯಾದ ಒಂದು ಬಗೆಯ ಕಣಜವನ್ನು ಕಬ್ಬಿನ ಗದ್ದೆಗಳಲ್ಲಿ ಬಿಟ್ಟು ಅದು ಈ ಹುಳುಗಳನ್ನು ತಿಂದು ನಾಶಪಡಿಸುವಂತೆ ಮಾಡುವ ಕ್ರಮವೂ ಇದೆ. ಪೈರಿಲ್ಲ ಹುಳುವೂ ಕಬ್ಬಿನ ಒಂದು ಮುಖ್ಯ ಕೀಟ ಪಿಡುಗೆನಿಸಿದೆ. ಇದು ಸಾಮಾನ್ಯವಾಗಿ ಎಲೆಗಳ ತಳಭಾಗದಲ್ಲಿದ್ದು ಸಸಿಗಳ ರಸವನ್ನು ಹೀರಿ ಜೀವಿಸುತ್ತದೆ. ಹೀಗೆ ಲಕ್ಷಾಂತರ ಕೀಟಗಳು ರಸ ಹೀರುವುದರಿಂದ ಎಲೆಗಳೆಲ್ಲ ಹಳದಿಯಾಗಿ ಸುಕ್ಕುಗಟ್ಟುತ್ತವೆ. ಅಲ್ಲದೆ ಕಬ್ಬಿನ ಮೈಯಿಂದ ರಸ ಜಿನುಗುವುದರಿಂದ ಅದರ ಮೇಲೆಲ್ಲ ಬೂಷ್ಟು ಬೆಳೆಯುವ ಸಂಭವವೂ ಉಂಟು. ಇದರಿಂದಾಗಿ ಕಬ್ಬುಗಳಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ರಸ ಹೀರಿದಾಗ ಕೀಟಗಳೂ ತಮ್ಮ ದೇಹದಿಂದ ಸಿಹಿರಸವನ್ನು ಜಿನುಗಿಸುತ್ತವೆ. ಇವನ್ನು ಹಲವು ಜಾತಿ ಇರುವೆಗಳು ಹೀರುತ್ತವೆ. ಅದಕ್ಕಾಗಿ ಇರುವೆಗಳು ಕೀಟದ ಮರಿಗಳನ್ನು ಕಬ್ಬಿನಿಂದ ಕಬ್ಬಿಗೆ ಕೊಂಡೊಯ್ಯುವುದುಂಟು. ಇವಲ್ಲದೆ ಕಬ್ಬಿನ ಮಿಡತೆ, ಬಿಳಿನೊಣ, ಗೆದ್ದಲು, ನುಸಿ ಮುಂತಾದ ಕೀಟಗಳೂ ಗಣನೀಯ ಪ್ರಮಾಣದಲ್ಲಿ ಕಬ್ಬಿನ ಬೆಳೆಯನ್ನು ನಷ್ಟಗೊಳಿಸುವುದುಂಟು. ಬರಿಯ ಕೀಟಗಳಲ್ಲದೆ ಇಲಿ, ನರಿ, ಆನೆ, ಹಂದಿ ಮುಂತಾದುವೂ ಕಬ್ಬಿನ ಬೆಳೆಯ ಪ್ರಮುಖ ಶತ್ರುಗಳೆನಿಸಿವೆ. ಕಬ್ಬಿಗೆ ಹಲವು ಬೂಷ್ಟು ರೋಗಗಳೂ ತಗಲುತ್ತವೆ. ಮುಖ್ಯವಾದುವು ತುಕ್ಕುರೋಗ (ರಸ್ಟ್‌), ಕಾಡಿಗೆರೋಗ (ಸ್ಮಟ್), ಕೆಂಪುಕೊಳೆರೋಗ (ರೆಡ್ ರಾಟ್), ಬಾಡುವ ರೋಗ (ವಿಲ್ಟ್‌), ಕಂದುಚುಕ್ಕೆರೋಗ, ಕಪ್ಪುಕೊಳೆರೋಗ ಮುಂತಾದುವು. ತುಕ್ಕುರೋಗ ಬಂದಾಗ ಎಲೆಗಳ ಮೇಲೆ ಕಿತ್ತಳೆವರ್ಣದ ಚುಕ್ಕೆಗಳು ಮೂಡುತ್ತವೆ. ಈ ಚುಕ್ಕೆಗಳು ಎಲೆಯನ್ನು ಪುರ್ಣ ಆವರಿಸಿರುವುದರಿಂದ ಎರಡು ಕಡೆಯಲ್ಲೂ ಎದ್ದುಕಾಣುತ್ತವೆ. ಕಾಡಿಗೆರೋಗ (ಸ್ಮಟ್) ಹೊಂದಿರುವ ಕಬ್ಬಿನ ತುದಿಯಿಂದ ನೀಳವಾಗಿ ಕೆಳಬಾಗಿರುವ ಚಾಟಿಯಂಥ ಅಚ್ಚಕಪ್ಪು ಬೆಳೆವಣಿಗೆ ಕಂಡು ಬರುತ್ತದೆ. ಇದು ಎಲೆಯಲ್ಲಿ ರೋಗದಿಂದ ಉಂಟಾದ ಮಾರ್ಪಾಟು. ಪ್ರಾರಂಭದಲ್ಲಿ ಅದರ ಸುತ್ತ ಬಿಳಿಯ ಬಣ್ಣದ ಪೊರೆಯೊಂದಿದ್ದು, ಅದು ಬೆಳೆದಂತೆಲ್ಲ ಆ ಪೊರೆ ಸೀಳಿ ಕಪ್ಪು ಪುಡಿಯಂಥ ಬೀಜಾಣುಗಳು ಹೊರಬರುತ್ತವೆ. ಕೆಂಪುಕೊಳೆರೋಗದಿಂದ ಕಬ್ಬಿನ ತುದಿಯಲ್ಲಿನ ಎಲೆಗಳಲ್ಲಿ 2 ಅಥವಾ 4ನೆಯ ಎಲೆ ಇದ್ದಕ್ಕಿದ್ದಂತೆ ಮಾಸಲು ಹಳದಿ ಬಣ್ಣಕ್ಕೆ ತಿರುಗಿ ಬಾಡಲಾರಂಭಿಸುತ್ತದೆ. ಆದರೆ ಅವುಗಳ ಮಧ್ಯಭಾಗ ಮಾತ್ರ ಅಚ್ಚಹಸಿರಾಗಿಯೇ ಉಳಿಯಬಹುದು. ರೋಗಪೀಡಿತ ಕಬ್ಬನ್ನು ಸೀಳಿನೋಡಿದಲ್ಲಿ ತಳದ ಗಿಣ್ಣುಗಳ ಬಳಿ ಕೆಂಪು ಬಣ್ಣವಿದ್ದು ಕಬ್ಬಿನಿಂದ ಕೊಳೆತ ಹುಳಿವಾಸನೆ ಬರುತ್ತಿರುತ್ತದೆ. ಹೀಗಾದಾಗ ನರಿ ಹೂಸಿದೆ ಎಂದು ಹೇಳುವುದು ಹಳ್ಳಿಗರಲ್ಲಿ ವಾಡಿಕೆ. ಬಾಡುವ ರೋಗದಲ್ಲೂ ಕಬ್ಬಿನ ಮಧ್ಯೆ ಕೆಂಪು ವರ್ಣವಾಗುತ್ತದೆ. ಆದರೆ ರೋಗ ಹರಡಿ ಬಹುಬೇಗ ಕಬ್ಬಿನ ಒಳಭಾಗವೆಲ್ಲ ಪುರ್ಣ ಕೆಂಪಾಗಿ, ಮುಂದೆ ಟೊಳ್ಳಾಗುತ್ತದೆ. ಕಬ್ಬು ಇದರಿಂದ ಹಗುರವಾಗುತ್ತದೆ. ಕಂದುಚುಕ್ಕೆರೋಗ ಎಲೆಯ ಅಲಗುಗಳಲ್ಲಿ ಮಾತ್ರ ಕಂಡುಬರುತ್ತದೆ. ಪ್ರಾರಂಭದಲ್ಲಿ ಸುಮಾರು 1/8" ನೀಳವಾಗಿದ್ದು ಎಲೆಯ ಇಕ್ಕಡೆಗಳಲ್ಲೂ ಕೆಂಪಗೆ ಕಾಣುವಂತಿರುತ್ತದೆ. ಮುಂದೆ ಅದು ಅಗಲವಾಗಿ ಬೆಳೆದು, ಮಧ್ಯಭಾಗ ಕಂದುಬಣ್ಣವಾಗಿ, ಸುತ್ತಲೂ ಹಳದಿಯಾಗುತ್ತದೆ. ಕಂದುಭಾಗ ಮುಂದೆ ಪುರ್ಣ ಒಣಗುತ್ತದೆ. ಕಪ್ಪುಕೊಳೆರೋಗದಿಂದ ಹೆಚ್ಚಿನ ನಷ್ಟವಾಗುವುದಿಲ್ಲ. ಕಬ್ಬುಗಳಿಗೆ ಗಾಯವಾದಾಗ ಅಥವಾ ಕಬ್ಬುಗಳನ್ನು ಕಡಿದು ತೆಗೆದಾಗ, ಗಾಯವಾದೆಡೆ ಅಥವಾ ಕಡಿದು ಬಿಟ್ಟೆಡೆಯಲ್ಲಿ ಕಪ್ಪು ಬೂಷ್ಟು ಬೆಳೆದು ಆ ಭಾಗವನ್ನು ಕೊಳೆಯುವಂತೆ ಮಾಡುತ್ತದೆ. ಕಬ್ಬಿಗೆ ಇನ್ನೂ ಹಲವು ರೋಗಗಳು ತಗಲುವುದುಂಟು. ಆದರೆ ಅವು ಯಾವ ರೀತಿಯಲ್ಲೂ ಹೆಚ್ಚಿನ ನಷ್ಟ ಮಾಡುವುದಿಲ್ಲ. ಗೋಂದುರೋಗ ಎಲೆಯ ರೋಗವಾಗಿ, ಪ್ರಾರಂಭವಾಗಿ ಹಾಗೇ ಬಿಟ್ಟಲ್ಲಿ ಕಬ್ಬಿನ ಜಲ್ಲೆಗೂ ಹರಡುತ್ತದೆ. ಮೊದಲು ಎಲೆಗಳ ಮೇಲೆ ಹಳದಿ ಪಟ್ಟಿಗಳು ಕಾಣಿಸಿಕೊಂಡು, ಅದರ ಮಧ್ಯೆ ಕೆಂಪು ಚುಕ್ಕೆಗಳು ಮೂಡುತ್ತವೆ. ಕೆಂಪುಪಟ್ಟಿರೋಗ ಕೂಡ ಎಲೆಯ ರೋಗವೇ. ಆದರೆ ಹಲವು ತಳಿಗಳಲ್ಲಿ ಅದು ಕಾಂಡಕ್ಕೂ ಬೇಗ ಹರಡಿ, ಅದರ ತುದಿ ಸುಲಭವಾಗಿ ಕೊಳೆತು ನಾರುತ್ತದೆ. ಎಲೆಯ ತಳಭಾಗದಲ್ಲಿ ನರಗಳ ಮಧ್ಯೆ ಕೆಂಪುಪಟ್ಟೆಯುಂಟಾಗಿ ಎದ್ದುಕಾಣುತ್ತದೆ. ಮೊಸಾಯಿಕ್ ರೋಗದಲ್ಲಿ ಎಲೆಗಳ ಮೇಲೆಲ್ಲ ತಿಳಿಹಸಿರು ಅಥವಾ ಹಳದಿ ಮಚ್ಚೆಗಳಿರುತ್ತವೆ. ಇದು ತಗಲಿದಲ್ಲಿ ಕಬ್ಬು ಗಿಡ್ಡವಾಗಿ ತೆಳುವಾಗಿ ಬೆಳೆದು ಸಣ್ಣಗೆ ನುಲಿದಂತಾಗಿ ಜಡೆಕಟ್ಟಿದಂತಿರುತ್ತದೆ. ತುದಿಯ ಬೆಳೆವಣಿಗೆ ಪುರ್ಣ ನಿಂತು ಹೋಗುವುದರಿಂದ ಮೊಗ್ಗುಗಳು ಅಡ್ಡ ಬೆಳೆದು ನೀಳವಾಗುತ್ತವೆ. ಕೀಟ ಹಾಗೂ ಬೂಷ್ಟು ರೋಗವನ್ನು ಅದರ ನಿವಾರಣೆಗೆ ಅನುಕೂಲವಾಗುವ ಔಷಧಗಳ ಬಳಕೆಯಿಂದಲೂ ರೋಗರಹಿತ ಹಾಗೂ ರೋಗನಿರೋಧಕ ಶಕ್ತಿಯುತ ತಳಿಗಳ ಬಳಕೆಯಿಂದಲೂ ನಿವಾರಿಸಬಹುದು.

ಕಟಾವು[ಬದಲಾಯಿಸಿ]

ಕಬ್ಬು ಕಟಾವಿಗೆ ಸಿದ್ಧವಾಗಲು ಅದರಲ್ಲಿನ ಸಕ್ಕರೆ ಅಂಶವೇ ಮುಖ್ಯ. ಕಬ್ಬು ಬೆಳೆಯುವುದೆಂದರೆ ಅದರಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತಿದೆಯೆಂದರ್ಥ. ಸಾಮಾನ್ಯವಾಗಿ ಕಬ್ಬು ಪುರ್ಣ ಬೆಳೆಯಲು 13-14 ತಿಂಗಳ ಅವಧಿ ಸಾಕೆಂದು ಹೇಳಬಹುದು. ಮಾಗಿದ ಕೊ.419 ತಳಿಯ ರಸದಲ್ಲಿನ ವಿವಿಧಾಂಶ ಈ ಕೆಳಗಿನಂತಿದೆ. 1. ನೀರು ಶೇ.77.9 ಭಾಗ 2. ಸುಕ್ರೋಸ್ ಶೇ.20.2 ಭಾಗ 3. ಗ್ಲೂಕೋಸ್ ಶೇ.0.57 ಭಾಗ 4. ಇತರ ಸಾವಯವ ಮತ್ತು ನಿರವಯವ ವಸ್ತುಗಳು ಶೇ. 1.29 ಭಾಗ ಇದರಲ್ಲಿ ಸುಕ್ರೋಸ್ ಮುಖ್ಯವಾದುದು. ಇದೇ ಸಕ್ಕರೆ ಮತ್ತು ಬೆಲ್ಲ ಉತ್ಪನ್ನಕ್ಕೆ ಕಾರಣ. ಗ್ಲೂಕೋಸ್ ಅಂಶವನ್ನೂ ಸಕ್ಕರೆಯೆಂದೇ ಪರಿಗಣಿಸಲಾಗಿದ್ದರೂ ಅದು ಅಪರಿಪೂರ್ಣ ಸಕ್ಕರೆ ಅಂಶ. ಪುರ್ಣ ಮಾಗಿದ ಕಬ್ಬಿನಲ್ಲಿ ಸಾಮಾನ್ಯವಾಗಿ ಶೇ. 22 ಭಾಗದಷ್ಟು ಘನವಸ್ತುಗಳಿರುತ್ತವೆ. ಅದರಲ್ಲಿ ಸುಕ್ರೋಸ್ ಅಂಶವೇ ಅತಿಹೆಚ್ಚು. ಸುಕ್ರೋಸ್ ಸ್ವಲ್ಪ ಕಾಲ ಮಾತ್ರ ಕಬ್ಬಿನಲ್ಲಿ ಅತಿಯಾಗಿ ಶೇಖರವಾಗುತ್ತದೆ. ಮುಂದೆ ಸೂಲಂಗಿ ಹೊರಟರೂ ಬೇಸಗೆಯ ದಗೆ ಹೆಚ್ಚಾದರೂ ಅದರ ಪರಿಮಾಣ ಕಡಿಮೆಯಾಗತೊಡಗುತ್ತದೆ. ಕಬ್ಬು ಕಟಾವಿಗೆ ಸಿದ್ಧವಾಗಿದೆಯೆಂದು ನಿರ್ಧರಿಸಿದ ಅನಂತರ 10-15 ದಿನ ಅದಕ್ಕೆ ನೀರು ಒದಗಿಸಬಾರದು. ಕಟಾವು ಮಾಡುವಾಗ ಹರಿತವಾದ ಮಚ್ಚುಗಳಿಂದ ನೆರಿಮಟ್ಟಕ್ಕೆ ಕಬ್ಬುಗಳನ್ನು ಕಡಿದು ತೆಗೆಯಬೇಕು. ಕಡಿದ ಕಬ್ಬನ್ನು ಪುರ್ಣವಾಗಿ ಅದೇ ಮಚ್ಚಿನಿಂದ ಸವರಿ, ಎಲ್ಲ ಎಲೆಗಳನ್ನೂ ತೆಗೆದು, ತುದಿಯ ಅಪಕ್ವ ಭಾಗವನ್ನು ಕತ್ತರಿಸಿ ಬೇರ್ಪಡಿಸಬೇಕು. ಕಬ್ಬಿನ ತಳ ಭಾಗದಲ್ಲಿ ಅಂಟಿರಬಹುದಾದ ಮಣ್ಣನ್ನೂ ಬೆಳೆದಿರಬಹುದಾದ ಬೇರುಗಳನ್ನೂ ಪುರ್ಣವಾಗಿ ಸವರಿ ತೆಗೆದು ಜಲ್ಲೆಯನ್ನು ಸಾಗಿಸಲು ಅನುಕೂಲವಾಗುವಂತೆ ತುಂಡರಿಸಿ ಹೊರೆ ಕಟ್ಟಬೇಕು. ಕಟಾವಾದ ಕಬ್ಬನ್ನು ದೀರ್ಘಕಾಲ ಶೇಖರಿಸಿಡಬಾರದು. ಹಾಗಾದಲ್ಲಿ ಅದರಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ; 24 ಗಂಟೆಗಳೊಳಗಾಗಿ ಅದನ್ನು ಗಾಣಕ್ಕೆ ಕೊಟ್ಟುಬಿಡಬೇಕು. ಕಬ್ಬಿನಿಂದ ಬೆಲ್ಲ, ಸಕ್ಕರೆಗಳನ್ನು ತಯಾರಿಸುವುದರ ಜೊತೆಗೆ ಕಾಕಂಬಿಯಿಂದ ಮದ್ಯವನ್ನೂ ತರಗಿನಿಂದ ಉತ್ತಮ ಗೊಬ್ಬರವನ್ನೂ ಸಿಪ್ಪೆಯಿಂದ ಕಾಗದ ಮತ್ತು ಮೇಣವನ್ನೂ ಉಳಿಕೆಗಳಿಂದ ಮೇವನ್ನೂ ತಯಾರಿಸುತ್ತಾರೆ

ಪೌಷ್ಟಿಕಾಂಶಗಳು[ಬದಲಾಯಿಸಿ]

ಕಬ್ಬಿನ ರಸದಲ್ಲಿ ಹಲವಾರು ಪೌಷ್ಟಿಕಾಂಶಗಳಿದ್ದು ಅವುಗಳು ಈ ರೀತಿಯಾಗಿವೆ.

Cane juice[೨]
Freshly squeezed sugarcane juice.
Nutritional value per serving
Serving size 28.35 grams
ಆಹಾರ ಚೈತನ್ಯ 111.13 kJ (26.56 kcal)
ಶರ್ಕರ ಪಿಷ್ಟ 27.51 g
- ಸಕ್ಕರೆ 26.98 g
Protein 0.27 g
ಕ್ಯಾಲ್ಸಿಯಂ 11.23 mg (1%)
ಕಬ್ಬಿಣ ಸತ್ವ 0.37 mg (3%)
ಪೊಟಾಸಿಯಂ 41.96 mg (1%)
ಸೋಡಿಯಂ 17.01 mg (1%)
Nutrient Information from ESHA Research
Percentages are roughly approximated
using US recommendations for adults.
Source: USDA Nutrient Database

ಜಗತ್ತಿನ ಕಬ್ಬು ಉತ್ಪಾದನೆ[ಬದಲಾಯಿಸಿ]

೨೦೧೨ ರ ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಹೆಚ್ಚು ಕೃಷಿ ಮಾಡುವ ಬೆಳೆ- ಕಬ್ಬು. ಜಗತ್ತಿನಲ್ಲಿ ೨೦೧೨ ರ ಅಂಕಿ ಅಂಶಗಳಂತೆ ೯೦ ದೇಶಗಳಲ್ಲಿ ಸುಮಾರು ೨೬ ದಶಲಕ್ಷ ಹೆಕ್ಟೇರುಗಳಲ್ಲಿ ಕಬ್ಬನ್ನು ಬೆಳಯಲಾಗುವುದು ಮತ್ತು ಸುಮಾರು ೧.೮೩ ಬಿಲಿಯನ್ ಟನ್ ಸಕ್ಕರೆ ಉತ್ಪಾದನೆ ಆಗುವುದು. ಬ್ರೆಜಿಲ್ ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೆಯ ಸ್ಥಾನದಲ್ಲಿದೆ. ನಂತರದ ದೇಶಗಳು , ಚೀನಾ, ಥಾಯ್ ಲೆಂಡ್, ಪಾಕಿಸ್ಥಾನ, ಮೆಕ್ಸಿಕೊಗಳಾಗಿವೆ. ಬ್ರೆಜಿಲ್ ಸಕ್ಕರೆ ಉತ್ಪಾದನೆ ಜೊತೆಗೆ ಸಕ್ಕರೆ ಉತ್ಪಾದನೆ ಮಾಡುವಾಗ ಸಿಗುವ ಕಬ್ಬಿನ ಕಾಕಂಬಿಯಿಂದ ಹೇರಳವಾಗಿ ಎಥನಾಲ್ ಗ್ಯಾಸ್‘ನ್ನುಎಥನಾಲ್ ಗ್ಯಾಸ್‘ನ್ನು ಉತ್ಪಾದಿಸುತ್ತದೆ. ಅದನ್ನು ಪೆಟ್ರೋಲ್ ಬದಲಿಗೆ ಉಪಯೋಗಿಸಬಹುದು. ಪೆಟ್ರೋಲಿಗಿಂತ ಅಗ್ಗವಾಗಿರುತ್ತದೆ. ವಿದೇಶಿ ವಿನಿಮಯವೂ ಉಳಿಯುವುದು. ಭಾರತ, ಪಾಕಿಸ್ತಾನ, ಇಂಡೋಚೀನ, ಚೀನ, ಜಪಾನ್, ಫಾರ್ಮೋಸ, ಫಿಲಿಪೀನ್ಸ್‌ ಮತ್ತು ಜಾವಗಳಲ್ಲೂ ಮೆಡಿಟರೇನಿಯನ್ ಸಮುದ್ರತೀರ ಪ್ರದೇಶಗಳಲ್ಲೂ ಲೂಯಿಸಿಯಾನ, ಫ್ಲಾರಿಡ, ಜಾರ್ಜಿಯ, ಕ್ಯೂಬ, ಮೆಕ್ಸಿಕೊ ಮುಂತಾದ ಪ್ರದೇಶಗಳಲ್ಲೂ ಬಾರ್ಬಡಾಸ್, ಟ್ರೆನಿಡಾಡ್, ಜಮೈಕ ದ್ವೀಪಗಳಲ್ಲೂ ಪೆರು, ಕೊಲಂಬಿಯ, ವೆನಿಜೇ಼್ವಲ, ಬ್ರಿಟಿಷ್ ಗಯಾನ, ಡಚ್, ಗಯಾನ, ಎಕ್ವಡಾರ್, ಬೊಲೀವಿಯ, ಬ್ರೆಜಿಲ್, ಅರ್ಜೆಂಟೀನ ಮತ್ತು ಪರಾಗ್ವೆ ರಾಷ್ಟ್ರಗಳಲ್ಲೂ ಹಾಂಡುರಾಸ್, ಗ್ವಾಟಿಮಾಲ, ನಿಕರಾಗುವ, ಪನಾಮ ಮತ್ತು ಕಾಸ್ಟರೀಕ ರಾಜ್ಯಗಳಲ್ಲೂ ಮೆಡೀರ, ಅಂಗೋರ, ಕ್ಯಾನರಿ ದ್ವೀಪಗಳು, ಈಜಿಪ್ಟ್‌ ಮಾಜ಼ಂಬಿಕ್ ಮಾರಿಷಸ್ ದೇಶಗಳಲ್ಲೂ ಆಸ್ಟ್ರೇಲಿಯ ಖಂಡದ ಪೂರ್ವತೀರ ಮತ್ತು ತಾಹಿತಿ ದ್ವೀಪಗಳಲ್ಲೂ ಹೆಚ್ಚಾಗಿ ಕಬ್ಬನ್ನು ಬೆಳೆಸುತ್ತಾರೆ. ಜಗತ್ತಿನ ಕಬ್ಬಿನ ಬೆಳೆ ಈ ರೀತಿಯಾಗಿದೆ.

ಹೆಚ್ಚು ಕಬ್ಬು ಉತ್ಪಾದಕ ೧೦ ರಾಷ್ಟ್ರಗಳು — 2015
ದೇಶ ಉತ್ಪಾದನೆ
(ಸಾವಿರ ಮೆಟ್ರಿಕ ಟನ್ನುಗಳಲ್ಲಿ, TMT)
 Brazil 739 267
 ಭಾರತ 341 200
 ಚೀನಾ ಚೀನಾ *125 536
ಥೈಲ್ಯಾಂಡ್ಥೈಲ್ಯಾಂಡ್ ಥಾಯ್ಲೆಂಡ್ 100 096
 ಪಾಕಿಸ್ತಾನ ಪಾಕಿಸ್ತಾನ 63 750
 ಮೆಕ್ಸಿಕೋ ಮೆಕ್ಸಿಕೊ 61 182
 ಕೊಲೊಂಬಿಯ ಕೊಲಂಬಿಯ 34 876
ಇಂಡೋನೇಷ್ಯಾಇಂಡೋನೇಷ್ಯಾ ಇಂಡೋನೇಷ್ಯಾ *33 700
ಫಿಲಿಪ್ಪೀನ್ಸ್ಫಿಲಿಪ್ಪೀನ್ಸ್ ಫಿಲಿಪೈನ್ಸ್ 31 874
 ಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕ ಸಂಯುಕ್ತ ಸಂಸ್ಥಾನ 27 906
 ಜಗತ್ತು 1 877 105
P = official figure, F = FAO estimate, * = Unofficial/Semi-official/mirror data, C = Calculated figure
A = Aggregate (may include official, semi-official or estimates);

Source: Food And Agricultural Organization of United Nations: Economic And Social Department: The Statistical Division

ಭಾರತದಲ್ಲಿ ಕಬ್ಬು[ಬದಲಾಯಿಸಿ]

  • ಭಾರತದಲ್ಲಿ ಇತ್ತೀಚೆಗೆ ಈ ಎಥೆನಾಲ್ ಉತ್ಪಾದನೆಗೆ ಗಮನ ಹರಿಸಲಾಗುತ್ತಿದೆ. ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತು ಕಬ್ಬಿನ ಕೃಷಿಯ ವಿಸ್ತೀರ್ಣ ಈ ಕೆಳಕಂಡಂತೆ ಇದೆ.
  • 2013-14 ಉತ್ಪಾದನೆ ;;
ಕ್ರಮ ಸಂಖ್ಯೆ- ರಾಜ್ಯ - ಉತ್ಪಾದನೆ ಸಾವಿರ ಟನ್ ಗಳಲ್ಲಿ-- ಕೃಷಿ ಪ್ರದೇಶ ಸಾವಿರ ಹೆಕ್ಟೇರ್ ನಲ್ಲಿ
1) ಉತ್ತರಪ್ರದೇಶ- 136129 2172
* 2) ಮಹಾರಾಷ್ಟ್ರ -- 72404 936
* 3) ಕರ್ನಾಟಕ 34,666 410
* 4) ತಮಿಳುನಾಡು 24,792 231.7
* 5) ಬಿಹಾರ 15,065 266.6
* 6) ಆಂಧ್ರ ಪ್ರದೇಶ 14,898 191
* 7) ಗುಜರಾತ್ 11,700 180
* 8) ಹರಿಯಾಣ -- 9490 130
* 9) ಉತ್ತರಾಖಂಡ್-- 7466 122
* 10) ಪಂಜಾಬ್ -- 6720 96
* 11) ಮಧ್ಯ ಪ್ರದೇಶ - 3250 77
* 12) ಪಶ್ಚಿಮ ಬಂಗಾಳ - 2100 77
* 13) ಅಸ್ಸಾಂ- 1060 29
* 14) ಒಡಿಶಾ - 818 73.1
* 15) ಜಾರ್ಕಂಡ್ - 499 7.1
* 16) ರಾಜಸ್ಥಾನ 343 5.1
* 17) ಕೇರಳ - 51 0.5
* 18) ಛತ್ತೀಸ್ Uಡ - 31 11.2
* 19) ಹಿಮಾಚಲ ಪ್ರದೇಶ - 26 1.8
* 20) ಇತರೆ ಪ್ರದೇಶ - 926 21.7
೦೦ ಒಟ್ಟು 3,41,773 ಸಾವಿರ ಟನ್‌ಗಳು ; 4921 ಸಾವಿರ ಹೆಕ್ಟೇರುಗಳು

2014-15ರಲ್ಲಿ ಸಕ್ಕರೆ ಉತ್ಪಾದನೆ[ಬದಲಾಯಿಸಿ]

೧೯೦೫ ರಲ್ಲಿ ಭಾರತದಲ್ಲಿ ಕಬ್ಬು ಅರೆಯುವ ಗಾಣ-ಬೆಲ್ಲ ತಯಾರಕೆ; ಎತ್ತಿನ ಬದಲಿಗೆ ಕೋಣನನ್ನು ಕಟ್ಟುತ್ತಾರೆ
  • ದೇಶದಲ್ಲಿ ಸಕ್ಕರೆ ಉತ್ಪಾದನೆಯು ಅಕ್ಟೋಬರ್‌–ಫೆಬ್ರುವರಿ ಅವಧಿಯಲ್ಲಿ ಶೇ. 14 ರಷ್ಟು ಹೆಚ್ಚಾಗಿದ್ದು, 194 ಲಕ್ಷ ಟನ್‌­ಗಳಷ್ಟಾಗಿದೆ. 2014–15 ನೇ ಮಾರುಕಟ್ಟೆ ವರ್ಷದಲ್ಲಿ ಮೊದಲ ಐದು ತಿಂಗಳ (ಅಕ್ಟೋಬರ್‌–ಫೆಬ್ರುವರಿ) ಸಕ್ಕರೆ ಉತ್ಪಾದನೆ ಅಂಕಿ–ಅಂಶವನ್ನು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಐ) ಮಂಗಳವಾರ ಬಿಡುಗಡೆ ಮಾಡಿದೆ.
  • ಫೆಬ್ರುವರಿ 28 ರವರೆಗೆ ದೇಶದಲ್ಲಿ 511 ಸಕ್ಕರೆ ಕಾರ್ಖಾನೆಗಳು ಒಟ್ಟಾರೆ 194 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 455 ಸಕ್ಕರೆ ಕಾರ್ಖಾನೆ­ಗಳು ಒಟ್ಟು 170 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಿದ್ದವು ಎಂದು ತಿಳಿಸಿದೆ. 2014–15 ರಲ್ಲಿ ಒಟ್ಟಾರೆ 260 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಲಿದೆ ಎಂದು ಐಎಸ್‌ಎಂಐ ಅಂದಾಜು ಮಾಡಿದೆ. ಕಳೆದ ಮಾರುಕಟ್ಟೆ ವರ್ಷ­ದಲ್ಲಿ 243 ಲಕ್ಷ ಟನ್‌ ಉತ್ಪಾದಿಸ­ಲಾಗಿತ್ತು. ದೇಶಿ ಬೇಡಿಕೆ ವರ್ಷಕ್ಕೆ 248 ಲಕ್ಷ ಟನ್‌ಗಳಷ್ಟಿದೆ.
  • ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾದ ಮಹಾ­ರಾಷ್ಟ್ರ ಐದು ತಿಂಗಳಿನಲ್ಲಿ 74 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿದೆ.
  • ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ 30 ಲಕ್ಷ ಟನ್‌ಗಳಿಂದ 32.80 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.
  • ಕಬ್ಬು ಬಾಕಿ ಏರಿಕೆ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರರಿಗೆ ನೀಡಬೇಕಿರುವ ಬಾಕಿ ರೂ.14,500 ಕೋಟಿಗಳಷ್ಟಿದೆ. ಸಕ್ಕರೆ ಬೆಲೆ ಕಳೆದ ವರ್ಷಕ್ಕಿಂತಲೂ ಕಡಿಮೆ ಇದ್ದು, ಕಬ್ಬಿನ ದರ ಹೆಚ್ಚಿದೆ. ಇದರಿಂದಾಗಿ ಬಾಕಿ ಪಾವತಿ ಮೊತ್ತ ಇನ್ನಷ್ಟು ಏರಿಕೆ­ಯಾಗುವ ಸಾಧ್ಯತೆ ಇದೆ ಎಂದು ಐಎಸ್‌ಎಂಐ ಹೇಳಿದೆ. 14 ಲಕ್ಷ ಟನ್‌ಗಳಷ್ಟು ಕೆಂಪು ಸಕ್ಕರೆ ರಫ್ತು ಮಾಡಲು ಸರ್ಕಾರ ಒಂದು ಟನ್‌ಗೆ ರೂ. 4 ಸಾವಿರ ಸಬ್ಸಿಡಿ ನೀಡಬೇಕಿದೆ ಎಂದು ತಿಳಿಸಿದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Watson, Andrew. Agricultural innovation in the early Islamic world. Cambridge University Press. p. 26–7.
  2. "Cane Juice Nutrition Information". WH Foods. 2011. Archived from the original on 2012-08-04. Retrieved 2015-12-31.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಮಾಹಿತಿ ಕೇಂದ್ರ ಕೃಷಿಸಚಿವಾಲಯ - ಕಬ್ಬು ; ಪ್ರಜಾವಾಣಿ ವರದಿ ೧೫-೧೨-೨೦೧೩
  • ಇಂಗೀಷ್ ತಾಣ -ಕಬ್ಬು
  • ೧.ಕಬ್ಬು/ಸುಗರ್ಕೇನ್- [೧]
  • ೨.2014–15ರಲ್ಲಿ ಸಕ್ಕರೆ ಉತ್ಪಾದನೆ -.prajavani-04/-3/2015

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Industry organizations:

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಬ್ಬು&oldid=1215790" ಇಂದ ಪಡೆಯಲ್ಪಟ್ಟಿದೆ