ವೇದ
ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು.
ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು - ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು, ಋಗ್ವೇದದ ಕಾಲ ಕ್ರಿ.ಪೂ ೧೫೦೦ಕ್ಕಿಂತ ಹಿಂದೆ ಇದ್ದಿರಬಹುದು. ವೇದ ವಾಙ್ಮಯ ಪ್ರಭಾವವು ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಬೆಳವಣಿಗೆಯಲ್ಲಿ ಪ್ರಮುಖವಾದುದು.
ಉಪನಿಷತ್ತುಗಳನ್ನು ವೇದಾಂತ ಎನ್ನುತ್ತಾರೆ.
ಉಗಮ [ಬದಲಾಯಿಸಿ]
ಹಿಂದೂ ಸಂಪ್ರದಾಯದಂತೆ ವೇದಗಳು ಅಪೌರುಷೇಯವಾದವು, ಎಂದೆಂದಿಗೂ ಅಸ್ತಿತ್ವದಲ್ಲಿ ಇದ್ದಿರುವಂಥವು. ಹೀಗೆ ಅವು ಹಿಂದೂ ಶ್ರುತಿ ಪಠ್ಯಗಳ ಗುಂಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿಂದ ಬಹಳಷ್ಟು ಸಿದ್ಧಾಂತಗಳನ್ನು ಕಂಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದಿವೆ ಎಂದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದಂತೆ ವೇದಗಳ ಸಂಕಲನ ಸುಮಾರು ಕ್ರಿ.ಪೂ ೧೮೦೦ ಕ್ಕೆ ಪ್ರಾರಂಭವಾಗಿ ಕ್ರಿ.ಪೂ ೮೦೦ ರ ವರೆಗೆ ಎಂದು.
ಸಾಂಪ್ರದಾಯಿಕವಾಗಿ, ಋಗ್ವೇದ ಸಂಹಿತೆಯ ಸಂಕಲನ ವೇದವ್ಯಾಸರ ಸೂಚನೆಯಂತೆ ಪೈಲ ಮಹರ್ಷಿಗಳಿಂದ ನಡೆಯಿತಂತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮಂತ್ರಗಳ ಸಂಕಲನ ಯಜುರ್ವೇದ ಸಂಹಿತೆಯಾಗಿ ಬೆಳೆಯಿತು. ಸಂಗೀತಕ್ಕೆ ಹೊಂದುವಂತೆ ಬರೆಯಲಾದ ಅನೇಕ ಮಂತ್ರಗಳ ಸಂಕಲನ ಸಾಮವೇದ - ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.
ಭಾಗಗಳು [ಬದಲಾಯಿಸಿ]
ಪ್ರತಿ ವೇದವನ್ನೂ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು:
- ಸಂಹಿತೆ - ಮಂತ್ರಗಳನ್ನು ಒಳಗೊಂಡ ಭಾಗ
- ಬ್ರಾಹ್ಮಣ - ಧಾರ್ಮಿಕ ಆಚರಣೆಗಳನ್ನು ಕುರಿತ ಭಾಗ
- ಆರಣ್ಯಕ - ಧ್ಯಾನಕ್ಕೆ ಸಂಬಂಧಪಟ್ಟದ್ದು
- ಉಪನಿಷತ್ - ತಾತ್ವಿಕ ಮತ್ತು ಅಧ್ಯಾತ್ಮಿಕ ಭಾಗ. ಉಪನಿಷತ್ತುಗಳು ವೈದಿಕ ತತ್ವಶಾಸ್ತ್ರದ ಮುಖ್ಯ ಪಠ್ಯಗಳು.
ಕೆಳಗಿನ ಲೇಖನಗಳನ್ನೂ ನೋಡಿ [ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |