ವಿಷಯಕ್ಕೆ ಹೋಗು

ಭೂಫಲಕ ಸಿದ್ಧಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾಗತಿಕ ಭೂಫಲಕಗಳನ್ನು ಇಪ್ಪನೆಯ ಶತಮಾನದ ಎರಡನೆಯ ಭಾಗದಲ್ಲಿ ನಕಾಶಿಸಲಾಯಿತು

ಭೂಫಲಕ ಸಿದ್ಧಾಂತವು (ಪ್ಲೇಟ್ ಟೆಕ್ಟೋನಿಕ್ಸ್)[ಟಿಪ್ಪಣಿ ೧] ದೊಡ್ಡ ಮಟ್ಟದ ಭೂಪ್ರದೇಶಗಳ (ಶಿಲಾಗೋಳ ಅಥವಾ ಲಿಥೊಸ್ಪಿಯರ್) ಚಲನೆಯನ್ನು ವಿವರಿಸುವ ವೈಜ್ಞಾನಿಕ ಸಿದ್ಧಾಂತ. ಇದರ ಸೈದ್ಧಾಂತಿಕ ಮಾದರಿಗಳು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿದ ಖಂಡಗಳ ಅಲೆತದ ಆಧಾರದ ಮೇಲೆ ರೂಪಗೊಂಡಿವೆ. ಭೂವಿಜ್ಞಾನಿಗಳು ಸಾಗರ ತಳದ ಹರಡುವಿಕೆಯ ತಡವಾದ ೧೯೫೦ರ ದಶಕ ಮತ್ತು ಆರಂಭಿಕ ೧೯೬೦ರ ದಶಕಗಳ ನಡುವೆ ಸಿದ್ಧವಾದ ಮೇಲೆ ಈ ಸಿದ್ಧಾಂತವನ್ನು ಒಪ್ಪಿಕೊಂಡರು.

ಭೂಮಿಯ ಗಡುಸು ಹೊರ ಕವಚವಾದ (ಭೂಚಿಪ್ಪು ಅಥವಾ ಕ್ರಸ್ಟ್ ಮತ್ತು ನಡುಗೋಳ ಅಥವಾ ಮ್ಯಾಂಟಲ್) ಶಿಲಾಗೋಳವನ್ನು ಅನೇಕ ಭೂಪಲಕಗಳಾಗಿ ವಿಭಜಿಸಲಾಗಿದೆ. ಭೂಮಿಯ ಶಿಲಾಗೋಳವನ್ನು ಏಳು ಅಥವಾ ಎಂಟು (ನೀವು ಭೂಪಲಕವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂಬುದರ ಆಧಾರದ ಮೇಲೆ) ದೊಡ್ಡ ಭೂಪಲಕಗಳು ಮತ್ತು ಅನೇಕ ಸಣ್ಣ ಭೂಪಲಕಗಳಾಗಿ ವಿಭಜಿಸಲಾಗಿದೆ. ಈ ಫಲಕಗಳು ಸೇರುವಲ್ಲಿನ ಸಾಕ್ಷೇಪಿಕ ಚಲನೆಯ ಆಧಾರದ ಮೇಲೆ ಗಡಿಗಳನ್ನು ಏಕದಿಕ್ಕು, ಭಿನ್ನದಿಕ್ಕು ಮತ್ತು ರೂಪಾಂತರ ಗಡಿಗಳೆಂದು ವರ್ಗಗಳನ್ನಾಗಿ ಮಾಡಲಾಗಿದೆ. ಭೂಕಂಪ, ಜ್ವಾಲಾಮುಖಿ ಚಟುವಟಿಕೆ, ಬೆಟ್ಟಗಳ ಉಗಮ, ಸಾಗರ ಕಂದಕಗಳು ಈ ಗಡಿಗಳಲ್ಲಿ ಉಂಟಾಗುತ್ತವೆ. ಮಾದರಿ ಪಲಕಗಳ ಚಲನೆಯು ವಾರ್ಷಿಕವಾಗಿ ಸೊನ್ನೆಯಿಂದ ೧೦೦ ಮಿಮೀಗಳ ವರೆಗೂ ಇರುತ್ತದೆ.[]

ಭೂಪಲಕಗಳು ಸಾಗರ ಶಿಲಾಗೋಳಗಳು ಮತ್ತು ಹೆಚ್ಚು ದಪ್ಪವಾದ ಖಂಡ ಶಿಲಾಗೋಳಗಳನ್ನು ಹೊಂದಿದ್ದು ಅವು ಬೇರೆ ಬೇರೆ ರೀತಿಯ ಭೂಚಿಪ್ಪನ್ನು ಹೊಂದಿವೆ. ಏಕದಿಕ್ಕು ಗಡಿಗಳಲ್ಲಿ ತಳಸೇರುವಿಕೆಯು (ಸಬ್ಡಕ್ಶನ್) ಫಲಕವನ್ನು ನಡುಗೋಳದ (ಮ್ಯಾಂಟಲ್) ಒಳಗೆ ಸೇರಿಸುತ್ತದೆ. ಈ ರೀತಿಯಲ್ಲಿ ಕಳೆದು ಹೋದ ಭಾಗವು ಭಿನ್ನದಿಕ್ಕಿನ ಗಡಿಯಲ್ಲಿನ ಸಾಗರ ತಳದಲ್ಲಿ ಹೊಸ ನಡುಗೋಳದ ರೂಪಗೊಳ್ಳುವಿಕೆ ಮೂಲಕ ಸರಿಸುಮಾರು ಸಮತೋಲನ ಸಾಧಿಸು ಮೂಲಕ ಭೂಮಿಯ ಮೇಲ್ಮೈನ ವಿಸ್ತೀರ್ಣ ಬದಲಾಗುವುದಿಲ್ಲ. ಹಿಂದಿನ ಸಿದ್ಧಾಂತಗಳು (ಇವಕ್ಕೆ ಇನ್ನೂ ಬೆಂಬಲಿಗರಿದ್ದಾರೆ) ಭೂಮಿಯ ಮೇಲ್ಮೈ ನಿಧಾನವಾಗಿ ಕುಗ್ಗುತ್ತಿದೆ ಅಥವಾ ಹಿಗ್ಗುತ್ತಿದೆ ಎನ್ನುತ್ತಿದ್ದವು.[]

ಭೂಪಲಕಗಳ ಚಲನೆಗೆ ಭೂಮಿಯ ಶಿಲಾಗೋಳವು ಅದರ ಕೆಳಗಿರುವ ಅಸ್ತೆನೊಗೋಳಕ್ಕಿಂತ ಹೆಚ್ಚು ಶಕ್ತಿಯನ್ನು ಪಡೆದಿರುವ ಕಾರಣಕ್ಕೆ ಉಂಟಾಗುತ್ತದೆ. ಪಕ್ಕದ ಸಾಂದ್ರತೆಯ ವ್ಯತ್ಯಾಸದ ಕಾರಣಕ್ಕೆ ಭೂಮಿಯ ನಡುಗೋಳ ನಿಧಾನವಾಗಿ ತೆವಳುತ್ತದೆ. ಭೂಪಲಕಗಳ ಚಲನೆಗೆ ಸಾಗರ ತಳದಲ್ಲಿ ಹೊಸ ದಿಂಡಗಳ ರೂಪಗೊಳ್ಳುವಿಕೆಯ ಮೂಲಕ ಸಾಗರ ತಳದ ಹರಡುವಿಕೆ ಮತ್ತು ತಳಸೇರುವಿಕೆಯ ಪ್ರದೇಶದಲ್ಲಿ ನಡುಗೋಳವು ಒಳಹೋಗುವುದು ಇವೆರಡೂ ಜಂಟಿಯಾಗಿ ಕಾರಣವೆಂದು ಭಾವಿಸಲಾಗಿದೆ. ಅಲ್ಲದೆ ಚಂದ್ರ ಮತ್ತು ಸೂರ್ಯರ ಕಾರಣಕ್ಕಾಗುವ ಉಬ್ಬರವಿಳಿತದ ಎಳೆತದ ಶಕ್ತಿಯೂ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಈ ಶಕ್ತಿಗಳ ಪಾಲು ಅಥವಾ ಇವುಗಳ ನಡುವಿನ ಸಂಬಂಧದ ಬಗೆಗೆ ಸ್ಪಷ್ಟವಿಲ್ಲ ಮತ್ತು ಈ ಬಗೆಗೆ ಚರ್ಚೆಗಳು ನಡೆಯುತ್ತಿವೆ.

ಪ್ರಮುಖ ಸೂತ್ರಗಳು

[ಬದಲಾಯಿಸಿ]

ಭೂಮಿಯ ಹೊರ ಪದರವನ್ನು ಶಿಲಾಗೋಳ ಮತ್ತು ಅಸ್ತೆನೊಗೋಳ ಎಂದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಇದನ್ನು ಅವುಗಳ ಯಾಂತ್ರಿಕ ಗುಣಗಳು ಮತ್ತು ಬಿಸುಪನ್ನು ಹಂಚುವ ರೀತಿಯ ಆಧಾರದ ಮೇಲೆ ಮಾಡಲಾಗಿದೆ. ಶಿಲಾಗೋಳವು ತಣ್ಣಗಿನ ಮತ್ತು ಗಡುಸಾದುದಾದರೆ ಅಸ್ತೆನೆಗೋಳವು ಬಿಸಿಯಾದ ಮತ್ತು ಹರಿಯಬಲ್ಲ ದ್ರವವಾಗಿರುತ್ತದೆ. ಶಿಲಾಗೋಳವು ವಹನದ (ವಾಸ್ತವದ ಪದಾರ್ಥಗಳ ಚಲನೆಯಿಲ್ಲದೆ ಬಿಸುಪಿನ ಹರಿಯುವಿಕೆ) ಮೂಲಕ ಬಿಸುವ ಹರಿಸಿದರೆ ಮತ್ತು ಅಸ್ತೆನೊಗೋಳವು ಸಂವಹನದ (ಅನಿಲ ಯಾ ದ್ರವದ ಚಲನೆಯ ಮೂಲಕ ತಾಪಮಾನ ವ್ಯತ್ಯಾಸ ಉಂಟಾಗುವುದು) ಮೂಲಕವೂ ಸಹ ಬಿಸುಪನ್ನು ಹರಿಸುತ್ತದೆ. ಈ ವಿಭಜನೆಯನ್ನು ಈ ಪದರಗಳ ರಸಾಯನಿಕ ವಿಭಜನೆಯಾದ ನಡುಗೋಳ (ಮ್ಯಾಂಟಲ್) ಮತ್ತು ಭೂಚಿಪ್ಪುಗಳ (ಕ್ರಸ್ಟ್) ನಡುವಿನ ವಿಭಜನೆಯೊಂದಿಗೆ ಗೊಂದಲ ಮಾಡಿಕೊಳ್ಳ ಕೂಡದು. ನಡುಗೋಳವು ಅಸ್ತೆನೊಗೋಳ ಮತ್ತು ಶಿಲಾಗೋಳದ ಒಂದು ಭಾಗವನ್ನೂ ಒಳಗೊಂಡಿರುತ್ತದೆ. ನಡುಗೋಳ ಒಂದು ವಿಭಜನೆಯು ಅದರ ತಾಪಮಾನ ಒತ್ತಡಗಳ ಆಧಾರದ ಮೇಲೆ ಬೇರೆ ಬೇರೆ ಕಾಲಗಳಲ್ಲಿ ಅಸ್ತೆನೊಗೋಳ ಅಥವಾ ಶಿಲಾಗೋಳಗಳವಾಗಿ ಪರಿಗಣಿತವಾಗ ಬಹುದು.

ಭೂಫಲಕ ಸಿದ್ಧಾಂತದ ಪ್ರಮುಖ ಸೂತ್ರವು ಶಿಲಾಗೋಳವು ಹಲವು ಭಿನ್ನ ಫಲಕಗಳಾಗಿ ಬಿಡಿಯಾಗಿದೆ ಮತ್ತು ಈ ಫಲಕಗಳು ದ್ರವರೀತಿಯ ಮೃದುವಾದ ಅಸ್ತೆನೊಗೋಳದ ಮೇಲೆ ಜಾರುತ್ತವೆ ಎನ್ನುತ್ತದೆ. ಮಾದರಿಯ ಫಲಕ ಚಲನೆಯು ೧೦-೪೦ ಮಿಮೀ/ವರುಷಕ್ಕೆ (ಮಧ್ಯ ಅಟ್ಲಾಂಟಿಕ್ ದಿಂಡು ಬೆರಳಿನ ಉಗುರು ಬೆಳೆಯುವ ವೇಗದಲ್ಲಿ ಚಲಿಸುತ್ತದೆ) ಯಿಂದ ಸುಮಾರು ೧೬೦ ಮಿಮೀ/ವರುಷಕ್ಕೆ (ನಜ್ಕ ಫಲಕವು ಕೂದಲು ಬೆಳೆಯುವ ವೇಗದಲ್ಲಿ ಚಲಿಸುತ್ತದೆ) ವರೆಗೂ ಇದೆ.[][] ಈ ಚಲನೆಯನ್ನು ನಿರ್ದೇಶಿಸುವ ಶಕ್ತಿಗಳ ಬಗೆಗೆ ಕೆಳಗೆ ಚರ್ಚಿಸಲಾಗಿದೆ.

. ಎರಡು ರೀತಿಯ ಭೂಚಿಪ್ಪುಗಳಿದ್ದು ಅವು ಸಾಗರ ಭೂಚಿಪ್ಪು (ಹಳೆಯ ಪಠ್ಯಗಳು ಇದನ್ನು ಸಿಮ ಎಂದು ಕರೆಯುತ್ತವೆ.) ಮತ್ತು ಖಂಡ ಚಿಪ್ಪು (ಹಳೆಯ ಸಿಯಾಲ್). ಶಿಲಾಗೋಳದ ಭೂಫಲಕಗಳ ನಡುಬಾಗದ ಮೇಲೆ ಒಂದು ಅಥವಾ ಎರಡೂ ಬಗೆಯ ಭೂಚಿಪ್ಪುಗಳು ಇರುತ್ತವೆ. ಮಾದರಿ ಸಾಗರ ಶಿಲಾಗೋಳದ ದಪ್ಪವು ೧೦೦ ಕಿಮೀ[]: page 5 ಮತ್ತು ಈ ದಪ್ಪವು ಆದರ ವಯಸ್ಸಿಗೂ ಸಂಬಂಧಿಸಿದೆ. ಇದು ಪಕ್ಕದ ನಡುಗೋಳವನ್ನು ತಣ್ಣಗೆ ಮಾಡಿ ಸೇರಿಸಿಕೊಳ್ಳುತ್ತದೆ. ಇದು ಸಾಗರ ಮಧ್ಯದ ದಿಂಡುಗಳಲ್ಲಿ ರೂಪಿತವಾಗಿ ಹೊರಗೆ ಹರಡುವ ಕಾರಣಕ್ಕೆ ಇದರ ದಪ್ಪವು ಈ ಅದು ರೂಪಗೊಂಡ ಸಾಗರ-ಮಧ್ಯದ ದಿಂಡುಗಳಿಂದ ಇರುವ ದೂರವನ್ನೂ ಅವಲಂಭಿಸಿದೆ. ತಳಸೇರುವಿಕೆಯ ಪ್ರದೇಶದವರೆಗಿನ ಮಾದರಿ ಹಾದಿಯಲ್ಲಿ ಕ್ರಮಿಸಿದಲ್ಲಿ ಈ ದಪ್ಪವು ಸಾಗರದ ದಿಂಡುಗಳ ಹತ್ತಿರ ೬ ಕಿಮೀನಿಂದ ತಳಸೇರಿವಿಕೆಯ ಪ್ರದೇಶದಲ್ಲಿ ಅತಿಹೆಚ್ಚು ೧೦೦ ಕಿಮೀಗೂ ಹೆಚ್ಚು ಇರುತ್ತದೆ. ತಳಸೇರುವಿಕೆಯ ದೂರವು ಕಡಿಮೆ ಹೆಚ್ಚು ಆದಾಗ ಈ ದಪ್ಪದಲ್ಲಿಯೂ ವ್ಯತ್ಯಾಸವಾಗುತ್ತದೆ.[] ಖಂಡ ಶಿಲಾಗೋಳ ಮಾದರಿಯು ಸುಮಾರು ೨೦೦ ಕಿಮೀ ಇದ್ದು ತಗ್ಗು ಪ್ರದೇಶ, ಬೆಟ್ಟಗಳ ಪ್ರದೇಶ ಮತ್ತು ಕ್ರೇಟಾನ್‌ಗಳ (ಪ್ರಾಚೀನ ಸ್ಥಿರ ಪ್ರದೇಶ) ಒಳಗಡೆ ಈ ದಪ್ಪ ಬೇರೆಬೇರೆಯಾಗಿರುತ್ತದೆ. ಹೀಗೆ ಖಂಡಗಳ ಭೂಚಿಪ್ಪು ಸಾಗರ ಭೂಚಿಪ್ಪಿಗಿಂತ ಸಾಕ್ಷೇಪಿಕವಾಗಿ ಹೆಚ್ಚು ದಪ್ಪವಿರುತ್ತದೆ.[]: page 3

ಎರಡು ಫಲಕಗಳು ಸೇರುವ ಸ್ಥಳವನ್ನು ಫಲಕ ಗಡಿ ಎಂದು ಕರೆಯಲಾಗುತ್ತದೆ. ಈ ಫಲಕ ಗಡಿಗಳು ಭೂಕಂಪ, ಬೆಟ್ಟಗಳು, ಅಗ್ನಿಪರ್ವತಗಳು, ಸಾಗರ-ಮಧ್ಯದ ದಿಂಡುಗಳು, ಸಾಗರ ಕಂದಕಗಳೊಂದಿಗೆ ಗುರುತಿಸಿಕೊಳ್ಳುತ್ತವೆ. ಬಹುಸಂಖ್ಯಾತ ಇಂದಿನ ಚಟುವಟಿಕೆಯುತ ಅಗ್ನಿಪರ್ವತಗಳು ಈ ಫಲಕ ಗಡಿಗಳಲ್ಲಿಯೇ ಇವೆ. ಶಾಂತಸಾಗರ ಫಲಕದ ಬೆಂಕಿಯ ಉಂಗುರ (ಶಾಂತಸಾಗರದಲ್ಲಿರುವ ಒಂದು ಕುದುರೆ ಲಾಳ ಆಕಾರದ ಪ್ರದೇಶ) ಇದಕ್ಕೆ ಉದಾಹರಣೆ. ಅಲ್ಲದೆ ಫಲಕಗಳ ನಡುವಿನಲ್ಲಿಯೂ ಕೆಲವು ಅಗ್ನಿಪರ್ವತಗಳಿವೆ ಮತ್ತು ಇದಕ್ಕೆ ಕಾರಣವಾಗಿ ಫಲಕದ ವಿರೂಪದಿಂದ ನಡುಗೋಳದ ಗರಿಗಳವರೆಗೆ (ಅಥವಾ ಮ್ಯಾಂಟಲ್ ಪ್ಯೂಮ್‌ಗಳು ಫಲಕಗಳ ನಡುವಿನ ಅಗ್ನಿಪರ್ವತಗಳಿಗೆ ಕಾರಣವಾದ ಮೆಕಾನಿಸಂ) ಕಾರಣಗಳನ್ನು ಕೊಡಲಾಗಿದೆ.[] ಭೂಪಲಕಗಳು ಖಂಡ ಭೂಚಿಪ್ಪು ಅಥವಾ ಸಾಗರ ಭೂಚಿಪ್ಪನ್ನು ಒಳಗೊಳ್ಳ ಬಹುದು ಬಹಳಷ್ಟು ಸಲ ಎರಡನ್ನೂ ಒಳಗೊಳ್ಳುತ್ತವೆ. ಉದಾಹರಣೆಗೆ ಆಫ್ರಿಕಾದ ಫಲಕ ಆಫ್ರಿಕಾ ಖಂಡದ ಭೂಮಿ ಮತ್ತು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರ ಭಾಗವನ್ನು ಒಳಗೊಂಡಿದೆ.

ಗಡಿಯ ನಮೂನೆಗಳು

[ಬದಲಾಯಿಸಿ]
ಮೂರು ನಮೂನೆಯ ಫಲಕ ಗಡಿಗಳು

ಫಲಕದ ಗಡಿಗಳನ್ನು ಆ ಫಲಕಗಳು ಹೇಗೆ ಸರಿಯುತ್ತವೆ ಎಂಬುದ ಆಧಾರದ ಮೇಲೆ ಮೂರು ನಮೂನೆಗಳನ್ನು ಗುರುತಿಸಲಾಗಿದೆ.[] ನಾಲ್ಕನೆಯದು ಮಿಶ್ರ ಸ್ವರೂಪ. ಇವು ಭಿನ್ನದಿಕ್ಕಿನ ಗಡಿ, ಏಕದಿಕ್ಕಿನ ಗಡಿ ಮತ್ತು ರೂಪಾಂತರ ಗಡಿ. ನಾಲ್ಕನೆಯದರಲ್ಲಿ ಈ ಗಡಿಯು ಸ್ಪಷ್ಟವಾಗಿ ಕಾಣಬರುವುದಿಲ್ಲ ಮತ್ತು ಫಲಕಗಳ ನಡುವಿನ ಪರಸ್ಪರ ಕ್ರಿಯೆಯ ಬಗೆಗೂ ಸ್ಪಷ್ಟವಿರುವುದಿಲ್ಲ.

ಭಿನ್ನದಿಕ್ಕಿನ ಗಡಿ: ಫಲಕಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ ಮತ್ತು ನಡುಗೋಳದಿಂದ ಬಂದ ದ್ರವ ಶಿಲೆಯಿಂದ ಹೊಸ ಭೂಚಿಪ್ಪು ರೂಪಗೊಳ್ಳುತ್ತದೆ. ಇದಕ್ಕೆ ಮಧ್ಯ ಅಟ್ಲಾಂಟಿಕ್ ದಿಂಡು ಒಂದು ಉದಾಹರಣೆ. ಆರ್ಕಿಟಿಕ್ ಸಾಗರದಿಂದ ಬಹುತೇಕ ಆಫ್ರಿಕಾದ ದಕ್ಷಿಣ ತುದಿಯವರೆಗೂ ಇರುವ ಇದು ಜಾಗತಿಕ ಸಾಗರ ಮಧ್ಯ ದಿಂಡಿನ ವ್ಯವಸ್ಥೆಯ ಒಂದು ಭಾಗ. ಮಧ್ಯ ಅಟ್ಲಾಂಟಿಕ್ ‌ದಿಂಡಿನ ಹರಡುವಿಕೆಯ ದರ ೨.೫ ಸೆಂಮೀ/ವರುಷ. ಆದರೆ ಒಂದು ದಶಲಕ್ಷ ವರುಷಗಳಲ್ಲಿ ಇದು ೨೫ ಕಿಮೀ ಆಗಬಲ್ಲದು. ಆದರೆ ನೂರರಿಂದ ಇನ್ನೂರು ದಶಲಕ್ಷ ವರುಷಗಳಲ್ಲಿ ಸಣ್ಣ ನೀರಿನ ಪ್ರದೇಶವೊಂದು ಸಾಗರದಷ್ಟು ವಿಶಾಲವಾಗಿ ಹಿಗ್ಗ ಬಲ್ಲದು. ಈ ದಿಂಡು ಐಸ್‌ಲ್ಯಾಂಡಿನ ನಡುವೆ ಹಾಯ್ದು ಅಧ್ಯಯನಕ್ಕೆ ವೇದಿಕೆಯಾಗಿದೆ. ಈ ದಿಂಡು ಐಸ್‌ಲ್ಯಾಂಡನ್ನು ಬೇರೆ ಬೇರೆ ಭಾಗಗಳಾಗಿ ಸೀಳುತ್ತಿದೆ. ಅಲ್ಲಿನ ಕ್ರಾಪ್ಲಾ ಜ್ವಾಲಾಮುಖಿಯ ಸುತ್ತ ಈ ಬೆಳವಣಿಗೆಗಳನ್ನು ಅವಲೋಕಿಸುವುದು ಸುಲಭ. ಭೂಮಿಯು ೧-೨ ಮೀ ಎತ್ತರಕ್ಕೆ ಏರುತ್ತದೆ ಮತ್ತು ಅನಾಮತ್ತಾಗಿ ಮತ್ತೆ ಕುಸಿದು ಇನ್ನೊಂದು ಏರುವಿಕೆಯನ್ನು ಸೂಚಿಸುತ್ತದೆ. ಇಲ್ಲಿನ ಬಿರುಕು ೧೯೭೫ ಮತ್ತು ೧೯೮೪ರ ನಡುವೆ ಏಳು ಮೀಟರ್‌ನಷ್ಟಾಗಿದೆ.[ಟಿಪ್ಪಣಿ ೨]

ಏಕದಿಕ್ಕಿನ ಗಡಿ: ಭೂಮಿಯ ಗಾತ್ರವು ಬಹುತೇಕ ಒಂದೇ ರೀತಿಯದಾಗಿರ ಬೇಕಾದಲ್ಲಿ ಭೂಚಿಪ್ಪಿನ ನಾಶವೂ ಆಗಬೇಕು. ಇದು ಒಂದೇ ದಿಕ್ಕಿನೆಡೆ ಚಲಿಸುವ ಫಲಕಗಳಲ್ಲಿ ಒಂದು ಇನ್ನೊಂದರ ಕೆಳಗೆ ನುಸಿಯುವ ಮೂಲಕ ಆಗುತ್ತದೆ.ಶಾಂತಸಾಗರದ ತಳದಲ್ಲಿ ಸಾವಿರಾರು ಕಿಲೋಮೀಟರ್ ಉದ್ದದ ೮ ರಿಂದ ೧೦ ಕೀಲೋಮೀಟರ್ ಆಳದ ಕಂದಕ ಕಂಡುಬರುತ್ತದೆ. ಇದು ತಳಸೇರುವಿಕೆ ಎಂದು ಕರೆಯಲಾದ ಒಂದು ಫಲಕದ ಕೆಳಗೆ ಇನ್ನೊಂದು ನುಸಿದ ಕಾರಣಕ್ಕೆ ಆದುದು. ಇಂತಹ ತಳಸೇರುವಿಕೆಯ ಕಾರಣಕ್ಕೆ ಭೂಕಂಪಗಳೂ ಆಗುತ್ತವೆ. ಹಿಮಾಲಯವು ಭೂಫಲಕಗಳ ಚಲನೆಯ ಪ್ರಭಾವವನ್ನು ತುಂಬಾ ಗಾಢವಾಗಿ ತೋರಿಸಿಕೊಡುತ್ತದೆ. ಎರಡು ಖಂಡಗಳು ಡೀಕೊಂಡು ಎರಡೂ ತಳಸೇರದೆ ಇರುವುದರ ಪರಿಣಾಮ ಹಿಮಾಲಯಗಳು ಮತ್ತು ಟಿಬೆಟ್ ಪ್ರದೇಶ ಉಂಟಾಗಿವೆ.[ಟಿಪ್ಪಣಿ ೨]

ರೂಪಾಂತರ ಗಡಿ: ಈ ಗಡಿಗಳಲ್ಲಿ ಫಲಕಗಳು ಒಂದು ಇನ್ನೊಂದನ್ನು ದಾಟುತ್ತವೆ ಮತ್ತು ರೂಪಾಂತರ-ಸ್ತರಭಂಗ (ಫಾಲ್ಟ್) ಗಡಿಯನ್ನು ನೀಡುತ್ತವೆ. ಸಾಮಾನ್ಯವಾಗಿ ಇವು ಸಾಗರ ತಳದಲ್ಲಿರುತ್ತವೆ. ಕ್ಯಾಲಿಫೋರ್ನಿಯಾದ ಸ್ಯಾನ್ ಅಂಡ್ರಿಯಾಸ್ ಸ್ತರಭಂಗದಂತೆ ಕೆಲವು ಮಾತ್ರ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಚಟುವಟಿಕೆಯಿಂದಿರುವ ದಿಂಡಿನ ಪರಿಣಾಮವನ್ನು ಅಂಕುಡೊಂಕಾದ ಫಲಕದ ತುದಿಯನ್ನು ಕೊಡುವ ಮೂಲಕ ಕಡಿಮೆ ಮಾಡುತ್ತವೆ. ಇವು ಸಾಮಾನ್ಯವಾಗಿ ಆಳವಲ್ಲದ ಭೂಕಂಪಗಳಿಗೆ ಕಾರಣವಾಗುತ್ತವೆ.[ಟಿಪ್ಪಣಿ ೨]

ಭೂಫಲಕಗಳು ಮತ್ತು ಅವುಗಳ ಚಲನೆಯನ್ನು ತೋರುವ ವಿವರವಾದ ನಕಾಶೆ

ಫಲಕಗಳನ್ನು ಚಲಿಸುವಂತೆ ಮಾಡುವ ಶಕ್ತಿಗಳು

[ಬದಲಾಯಿಸಿ]
  • ನಡುಗೋಳದ ಬಲದ ಆಧಾರದ ಚಲನಾ ಶಕ್ತಿ:ಇಪ್ಪತ್ತನೆಯ ಶತಮಾನದ ಮೊದಲ ಕಾಲು ಭಾಗದಲ್ಲಿ ಭೂಫಲಕಗಳನ್ನು ಚಲಾಯಿಸುವ ಶಕ್ತಿಯು ಅಸ್ತೆನೊಗೋಳದ ಮೂಲಕ ದೊಡ್ಡ ಮಟ್ಟದ ತಾಪಮಾನ ಶಕ್ತಿಯು ನಡುಗೋಳಕ್ಕೆ ವರ್ಗಾಗವಣೆಯಾಗುವ ಮೂಲಕ ಬರುತ್ತದೆ ಎಂಬ ಸಿದ್ಧಾಂತ ಮಂಡನೆಯಾಯಿತು. ೧೯೩೦ರ ದಶಕದಲ್ಲಿ ಆರ್ಥರ್ ಹೋಮ್ಸ್[] ಮತ್ತು ಇತರರು ಪ್ರತಿಪಾದಿಸಿದ ಈ ಸಿದ್ಧಾಂತವನ್ನು ತಕ್ಷಣದಲ್ಲಿಯೇ ಅಲ್‌ಫ್ರೆಡ್ ವೆಜೆನರ್ ಪ್ರತಿಪಾದಿಸಿದ ಖಂಡಗಳ ಅಲೆತಕ್ಕೆ ಕಾರಣವಾಗಿ ಗುರುತಿಸಲಾಯಿತು. ಆದರೆ ಬೇರೂರಿದ ಸ್ಥಿರ ಭೂಮಿಯ ಪರಿಕಲ್ಪನೆಯನ್ನು ಪಕ್ಕಕ್ಕೆ ಸರಿಸಲು ಇದರಿಂದ ಸಾಧ್ಯವಾಗಲಿಲ್ಲ. ಬಹಳಷ್ಟು ಭೂವಿಜ್ಞಾನಿಗಳು ೧೯೬೦ರ ದಶಕದ ಸಾಗರ ತಳ ಹರಡುವಿಕೆ ಸಿದ್ಧವಾಗುವವರೆಗೂ ಸ್ಥಿರ ಭೂಮಿ ಪರಿಕಲ್ಪನೆಯನ್ನು ಬಿಟ್ಟುಕೊಡಲಿಲ್ಲ.

ಭೂಚಿಪ್ಪಿನ ತಾಪಮಾನ ವರ್ಗಾವಣೆ ನೇರವಾಗಿ ಮತ್ತು ಪರೋಕ್ಷವಾಗಿ ಫಲಕಗಳ ಚಲನೆಗೆ ಸಂಬಂಧಿಸಿದೆ. ಫಲಕಗಳು ಚಲಿಸಲು ಒಂದಲ್ಲ ಒಂದು ರೀತಿಯಲ್ಲಿ ತಾಪಮಾನ ವರ್ಗಾವಣೆ ಆಗಬೇಕಾದ್ದು ಅಗತ್ಯ. ಇತ್ತೀಚಿನ 3ಡಿ ಸೀಸಿಮಿಕ್ ಟೊಮೊಗ್ರಾಫಿಯು ಊಹಿಸಿದಂತೆ ದೊಡ್ಡ ಮಟ್ಟದ ಕನ್‌ವೆಕ್ಶನ್ ಸೆಲ್‌ಗಳನ್ನು (ಈ ಸೆಲ್‌ಗಳು ಸಾಂದ್ರತೆ ವ್ಯತ್ಯಾಸವಾದಾಗ ಕಾಣಬರುತ್ತವೆ) ಪತ್ತೆಮಾಡಿಲ್ಲ. ಹೀಗಾಗಿ ಬದಲಿ ವಿವರಣೆಗಳನ್ನು ಹುಡುಕಲಾಗುತ್ತಿದೆ. ಕನ್‌ವೆಕ್ಶನ್ ಸೆಲ್‌ಗಳಿಗೆ ಬದಲೀ ವಿವರಣೆಯನ್ನು ಪ್ಲೂಮ್ ಟೆಕ್ಟೊನಿಕ್ಸ್ ಕೊಡುತ್ತದೆ.

  • ಚಲನೆಗೆ ಕಾರಣವಾಗುವ ಗುರುತ್ವ ಶಕ್ತಿಗಳು: ಇದರಲ್ಲಿ ಮೊದಲನೆಯದು ಹರಡುವ ದಿಂಡಿನಿಂದ ಗುರುತ್ವದ ಕಾರಣಕ್ಕೆ ದೂರಸರಿಯುವುದು ಮತ್ತು ಎರಡನೆಯದು ಹಲಗೆ ಎಳೆತ (ಸ್ಲಾಬ್ ಪುಲ್). ಬಹಳಷ್ಟು ಲೇಖಕರು ಫಲಕ ಚಲನೆಯು ಎತ್ತರದ ಸಾಗರ ದಿಂಡಿನಿಂದ ಆಗುತ್ತದೆ ಎಂದು ಭಾವಿಸುತ್ತಾರೆ.[] ಸಾಗರದ ಶಿಲಾಗೋಳ ಬಿಸಿಯಾದ ನಡುಗೋಳದ ಪದಾರ್ಥದಿಂದ ಹರಡುವ ದಿಂಡುಗಳಲ್ಲಿ ರೂಪಗೊಂಡ ನಂತರ ತಣ್ಣಗಾಗುತ್ತದೆ. ಹೀಗೆ ತಣ್ಣಗಾದ ಶಿಲಾಗೋಳ ಬಿಸಿಯಾದ ಹೊಸ ಪದಾರ್ಥಕ್ಕಿಂತ ಹೆಚ್ಚು ಸಾಂದ್ರವಾಗಿರುತ್ತದೆ. ಹೀಗಾಗಿ ಹೆಚ್ಚು ದಪ್ಪವಾದ ಅದು ಶಿಲಾಗೋಳದೊಳಗೆ ಸೇರಿಕೊಳ್ಳುತ್ತದೆ. ಪರಿಣಾವು ತುಸು ಮಟ್ಟಿಗೆ ಪಕ್ಕಕೆ ವಾಲುತ್ತದೆ ಮತ್ತು ದಿಂಡಿನಿಂದ ದೂರವಾಗುತ್ತದೆ. ಇದನ್ನು ಕೆಲವೊಮ್ಮೆ “ದಿಂಡಿನ ನೂಕುವಿಕೆ” ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಸಮತಲದ ಒತ್ತಡ, ಎಳೆತ ಯಾವುದೂ ಇರುವುದಿಲ್ಲ. ಇದನ್ನು ಗುರುತ್ವದ ಸರಿಯುವಿಕೆ ಎಂದು ಕರೆಯುವುದೇ ಸೂಕ್ತ. ಗುರುತ್ವದ ಎರಡನೆಯ ಶಕ್ತಿಯ ಉತ್ಪನ್ನ ಮಾಡುವ ಇನ್ನೊಂದು ಒಳ ನುಸಿಯುವ ಶಿಲಾಗೋಳವು ಬಾಗಿದಲ್ಲಿನ ಊದಿಕೊಳ್ಳುವಿಕೆ. ಇದು ಸಾಗರ ದಿಂಡು, ನಡುಗೋಳದ ಪ್ಲುಮ್‌ಗಳು ಮತ್ತು ಬಿಸಿ ಬಿಂಧುಗಳಂತಹ (ಹಾಟ್‌ ಸ್ಪಾಟ್‌) ಸ್ಥಳದ ಸ್ವರೂಪದಲ್ಲಿ ಬದಲಾವಣೆ ತರುತ್ತದೆ.

ಹಲಗೆ ಎಳೆತ-(ಸ್ಲಾಬ್ ಪುಲ್) ಇಂದಿನ ವೈಜ್ಞಾನಿಕ ನಿಲುವು ಶಿಲಾಗೋಳದ ಅಡಿಯಲ್ಲಿ ಘರ್ಷಣೆಯ ಮೂಲಕ ಚಲನೆಗೆ ಕಾರಣವಾಗುವಷ್ಟು ಅಸ್ತೆನೊಗೋಳವು ಸಮರ್ಥವಲ್ಲ ಎಂದು ಸೂಚಿಸುತ್ತದೆ. ಹೀಗಾಗಿ ಹಲಗೆ ಎಳೆತವು ಫಲಕಗಳ ಮೇಲೆ ಪ್ರಭಾವ ಬೀರುವ ದೊಡ್ಡ ಶಕ್ತಿ ಎಂದು ಭಾವಿಸಲಾಗಿದೆ. ಪಲಕಗಳ ಚಲನೆಯು ತಣ್ಣನೆಯ, ಹೆಚ್ಚಿನ ಸಾಂದ್ರತೆಯ ಫಲಕಗಳ ಭಾರವು ನಡುಗೋಳದಲ್ಲಿ ಮುಳುಗುವುದರಿಂದ ಉಂಟಾಗುತ್ತದೆ.[೧೦] ಇತ್ತೀಚಿನ ಮಾದರಿಗಳು ಕಂದರದ ಸೆಳೆಯುವಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ತಳಸೇರುವಿಕೆಯೆ ಕಾರಣವೆನ್ನಲು ಕೆಲವು ಸಮಸ್ಯೆಗಳಿವೆ. ಉದಾಹರಣೆಗೆ ಉತ್ತರ ಅಮೆರಿಕದ ಫಲಕ ಹಾಗೆಯೇ ಆಫ್ರಿಕಾ, ಯುರೇಶಿಯಾ ಮತ್ತು ಅಂಟಾರ್ಕಿಟಿಕಾದ ಫಲಕಗಳು ತಳಸೇರದೇ ಚಲಿಸುತ್ತವೆ. ಇದನ್ನು ವಿವರಿಸುವುದು ಈ ಚಿಂತನೆಯಿಂದ ಸಾಧ್ಯವಾಗುವುದಿಲ್ಲ.

  • ಭೂಮಿಯ ತಿರುಗುವಿಕೆ ಕಾರಣಕ್ಕೆ ಉಂಟಾಗುವ ಚಲನೆ[ಟಿಪ್ಪಣಿ ೩]: ವೆಜೆನರ್ ಉಬ್ಬರವಿಳಿತದ ಶಕ್ತಿ ಮತ್ತು ಭೂಮಿಯ ಕಕ್ಷೆಯ ಸುತ್ತು ತಿರುಗುವ ಶಕ್ತಿಯನ್ನು ಖಂಡಗಳ ಅಲೆತಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ ಎಂದು ಹೇಳಿದ. ಸಾಗರದ ಚಿಪ್ಪನೊಳಗೆ ದಾರಿಮಾಡಿಕೊಂಡು ಹೋಗುವ ಚಲನೆಗೆ ಈ ಶಕ್ತಿಗಳು ಸಾಕಾಗುವುದಿಲ್ಲ ಎಂದು ಭಾವಿಸಲಾಯಿತು.[೧೧] ಹೀಗಾಗಿ ತನ್ನ ಕೃತಿಯ ೧೯೨೯ರ ಕೊನೆಯ ಆವೃತ್ತಿಯಲ್ಲಿ ವರ್ಗಾಯಿಸಲಾದ ಬಿಸುಪು ಈ ಶಕ್ತಿಯನ್ನು ಒದಗಿಸುತ್ತದೆ ಎಂದು ಸೂಚಿಸಿದ.

ಆದರೆ ಭೂಫಲಕಗಳ ಸಿದ್ಧಾಂತವು ಹುಟ್ಟಿದ ನಂತರ (ಸಾಗರದ ತಳ ಹರುಡುವಿಕೆಯ ಸಿದ್ಧವಾದ ನಂತರ ಇದಕ್ಕೆ ಒಪ್ಪಿಗೆ ಸೂಚಿತವಾಯಿತು) ಸಾಗರದ ಚಿಪ್ಪು ಮತ್ತು ಖಂಡಗಳ ಚಲನೆಯನ್ನು ಮರುಪರಿಶೀಲನೆ ಮಾಡಬೇಕಿದೆ.

  1. ಚಂದ್ರ ಮತ್ತು ಸೂರ್ಯರು ಭೂಮಿಯ ಚಿಪ್ಪಿನ ಮೇಲೆ ಬೀರುವ ಗುರುತ್ವಾಕರ್ಷಣದ ಪರಿಣಾಮವಾಗಿ ಉಂಟಾಗುವ ಉಬ್ಬರವಿಳಿತ ಶಕ್ತಿ.[೧೨]
  2. ಭೂಮಿಯ ಸಾಗರಗಳು ಗುರುತ್ವ ಬಲ ಮತ್ತು ಭೂಮಿಯ ಭ್ರಮಣದ ಕಾರಣಕ್ಕೆ ಪಡೆಯವ ಆಕಾರದಲ್ಲಿ ಭೂಮಿಯ ಚಿಪ್ಪಿನ ಮೇಲೆ ಧ್ರುವ ಪರಿಭ್ರಮಣದಿಂದ ಉಂಟಾಗುವ ಸಣ್ಣಮಟ್ಟದ ಚಲನೆಯ ಪರಿಣಾದಿಂದಾಗುವ ವಿರೂಪ.
  3. ಭೂಚಿಪ್ಪಿನ ಮೇಲೆ ಭೂಮಿಯ ಭ್ರಮಣದಿಂದ ಉಂಟಾಗುವ ಸಣ್ಣ ಮಟ್ಟದ ಓಲಾಟ ಮತ್ತು ಗಿರಕಿಯ ಕಾರಣಕ್ಕೆ ಉಂಟಾಗುವ ವಿರೂಪ.

ಫಲಕಗಳ ಚಲನೆ ಈ ಎಲ್ಲಾ ಶಕ್ತಿಗಳ ಒಟ್ಟು ಪರಿಣಾಮ ಆದರೆ ಇಲ್ಲಿನ ಯಾವ ಶಕ್ತಿಯ ಕೊಡುಗೆ ಎಷ್ಟು ಎಂಬುದರ ಬಗೆಗೆ ಅರಿವು ಇಲ್ಲ. ತಳಸೇರುವಿಕೆಗೆ ಒಳಗಾಗುವ (ಹಲಗೆ ಎಳೆತ) ಫಲಕಗಳ ಸಾಕ್ಷೇಪಿಕ ವೇಗ ಹೆಚ್ಚು. ಹೀಗಾಗಿ ತಳಸೇರುವಿಕೆಗೆ ಒಳಗಾಗುವ ಫಲಕಗಳ ಒಳಗೆ ಎಳೆದುಕೊಳ್ಳುವ ಶಕ್ತಿಯೇ ಚಲನೆಗೆ ಕಾರಣ ಎನ್ನಲಾಗುತ್ತಿದೆ.

ಸಿದ್ಧಾಂತ ಬೆಳೆದು ಬಂದ ಬಗೆ

[ಬದಲಾಯಿಸಿ]

೧೯೧೨ರಲ್ಲಿ ಅಲ್‌ಫ್ರೆಡ್ ವೆಜೆನರ್ ಖಂಡಗಳ ಅಲೆತ ಬಗೆಗಿನ ತನ್ನ ಊಹನ (ಹೈಪೊಥೀಸಸ್) ಮಂಡನೆಗೆ ಮುಂಚೆಯೇ ಹಲವರು ದಕ್ಷಿಣದ ಖಂಡಗಳು (ವಿಶೇಷವಾಗಿ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ) ಒಂದಕ್ಕೊಂದನ್ನು ಹೊಂದಿಸ ಬಹುದು ಎಂದು ಗುರುತಿಸಿದ್ದರು. ಹೀಗೆ ಗುರುತಿಸವರ ಪಟ್ಟಿಯು ೧೫೯೬ರಲ್ಲಿ ಹೇಳಿದ ಡಚ್ ನಕಾಶೆ ತಯಾರಕ ಅಬ್ರಹಾಂ ಓರ್ಟೆಲಿಯಸ್‌ನ ಚಿಂತನೆ ಇಂದು ತಿಳಿದಂತೆ ಅತ್ಯಂತ ಹಿಂದಿನದು. ವಿರೋಧಗಳ ನಡುವೆಯೂ ಖಂಡಗಳ ಅಲೆತ ಊಹನ ೧೯೨೦, ೧೯೩೦ ಮತ್ತು ೧೯೪೦ರ ದಶಕಗಳಲ್ಲಿ “ಚಲನ”ವಾದಿಗಳು ಮತ್ತು “ಸ್ಥಿರ”ವಾದಿಗಳ ನಡುವೆ ಆಸಕ್ತಿದಾಯಕ ಚರ್ಚೆಗೆ ದಾರಿ ಮಾಡಿಕೊಟ್ಟಿತು. “ಚಲನ”ವಾದಿಗಳು ಫಲಕಗಳ ಚಲನೆಗೆ ಬಿಸುಪಿನ ವರ್ಗಾವಣೆ ಶಕ್ತಿಯಾಗಿ ಬಳಕೆಯಾಗುತ್ತದೆ ಎಂದು ಹೇಳಿದುದು ಈ ಸಿದ್ಧಾಂತದ ಒಂದು ಪ್ರಮುಖ ಹಂತವನ್ನು ಸೂಚಿಸುತ್ತದೆ.

ಸಿದ್ಧಾಂತದ ಪರವಾದ ಮೊದಲ ಪುರಾವೆ ಕಲ್ಲುಗಳ ಪ್ರಾಚೀನಕಾಂತತ್ವದಿಂದ ಬಂದಿತು. ಹತ್ತೊಂಬತ್ತನೆಯ ಶತಮಾನದ ಮಧ್ಯದಿಂದಲೇ ಬೇರೆ ಬೇರೆ ಕಾಲಮಾನದಲ್ಲಿ ಕಾಂತತ್ವದ ಕ್ಷೇತ್ರಗಳು ಗಣನೀಯವಾಗಿ ಭಿನ್ನವಾಗಿರುವುದನ್ನು ಗಮನಿಸಿದ್ದರು. ಕಲ್ಲುಗಳು ಅವು ರೂಪಗೊಳ್ಳುತ್ತಿದ್ದ ಸಮಯದಲ್ಲಿನ ಕಾಂತತ್ವದ ದಿಕ್ಕನ್ನು ಉಳಿಸಿಕೊಳ್ಳುತ್ತವೆ. ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾಂಚೀನ ಕಾಂತತ್ವದಲ್ಲಿ ಆಗುವ ಬದಲಾವಣೆಗಳಿಗೆ ಭೂಮಿಯ ಕಾಂತತ್ವದಲ್ಲಿ ತಿರುವುಮರುವಾಗುವುದು ಅಥವಾ ಭೂಮಿಯ ಧ್ರುವಗಳು ಬದಲಾಗುವುದು ಕಾರಣ ಎಂದು ಭಾವಿಸಲಾಗುತ್ತಿತ್ತು. ನಂತರದಲ್ಲಿ ಕೆಲವರು ಕಾಂತತ್ವದಲ್ಲಿನ ಈ ಬದಲಾವಣೆಯು ಖಂಡಗಳ ಅಲೆತ ಸಾಕ್ಷಿ ಎಂದು ಸಾಧಿಸಿದರು.ಈ ಬಗೆಗಿನ ಎರಡನೆಯ ಪುರಾವೆಯು ಸಾಗರದ ಆಳಗಳ ಮಾಪನ ಮತ್ತು ಸಾಗರದ ಭೂಚಿಪ್ಪಿನ ಸ್ವರೂಪ ಮತ್ತು ಕಾಂತತ್ವಗಳ ಅಧ್ಯಯನದ ಪರಿಣಾಮವಾಗಿ ಬಂದಿತು. ಇವು ಸಾಗರದ ತಳದ ಹಿಗ್ಗುವಿಕೆ ಮತ್ತು ಕಾಂತತ್ವದ ಹಿಂದುಮುಂದಾಗುವಿಕೆಯ ಬಗೆಗೆ ಸಾಕ್ಷಿಗಳಾಗಿದ್ದವು.

ಖಂಡಗಳ ಅಲೆತ

[ಬದಲಾಯಿಸಿ]

ಪ್ರಮುಖ ಲೇಖನ: ಖಂಡಗಳ ಅಲೆತ

ಹತ್ತೊಂಬತ್ತು ಮತ್ತು ಇಪತ್ತನೆಯ ಶತಮಾನದ ಭೂಶಾಸ್ತ್ರಜ್ಞರು ಭೂಮಿಯ ಪ್ರಮುಖ ವೈಲಕ್ಷಣಗಳು ಸ್ಥಿರವಾದವೆಂದೂ ಲಂಬ ರೀತಿಯ ಭೂಚಿಪ್ಪಿನ ಚಲನೆಯು ಜಿಯೊಸಿಂಕ್ಲಿನಲ್ ಸಿದ್ಧಾಂತದ ಪ್ರಕಾರ ಆಗುತ್ತದೆ ಎಂದು ಭಾವಿಸುತ್ತಿದ್ದರು. ಈ ಸಿದ್ಧಾಂತದ ಪ್ರಕಾರ ಅಗ್ನಿಪರ್ವತದ ಸಿಡಿತ ಮತ್ತು ಭೂಮಿಯೊಳಗಿನ ದ್ರವಶಿಲೆಯು ಮೇಲ್ಬಂದು ಕಲ್ಲಾಗಿ ಮೇಲತ್ತಲ್ಪಟ್ಟು ಬೆಟ್ಟಗಳಾಗುತ್ತವೆ ಎನ್ನುತ್ತಲಿತ್ತು. ಸಾಮಾನ್ಯವಾಗಿ ಇದನ್ನು ಭೂಮಿಯ ಕಡಿಮೆ ವಯಸ್ಸು ಹಾಗೂ ಕಡಿಮೆಯಾಗುತ್ತಿರುವ ಭೂತಾಪಮಾನದ ಹಿನ್ನೆಲೆಯಲ್ಲಿ ಅರ್ಥೈಸಲಾಗುತ್ತಿತ್ತು. ೧೮೯೫ರ ವಿಕರಣಪಟುತ್ವದ ಕಂಡುಹಿಡಿಯುವಿಕೆ ಮತ್ತು ಅದರೊಂದಿಗೆ ಅವುಗಳ ಬಿಸಿಯಾದಾಗಿನ ಗುಣಗಳ ಅಧ್ಯಯನದ ಪರಿಣಾಮವಾಗಿ ಭೂಮಿಯ ವಯಸ್ಸಿನ ಅಂದಾಜಿನಲ್ಲಿ ಏರುಪೇರಾಯಿತು.[೧೩] ಭೂಮಿಯು ಕಪ್ಪುಕಾಯದಂತೆ ಕಿರಣಗಳನ್ನು ಸೂಸುತ್ತದೆ ಎನ್ನುವ ಊಹೆಯೊಂದಿಗೆ ಭೂಮಿಯ ತಣ್ಣಗಾಗುವ ದರದ ಅಂದಾಜು ಮಾಡಲಾಗಿತ್ತು.[೧೪] ಈ ಅಂದಾಜುಗಳು ಭೂಮಿಯು ಕೆಂಪಾಗಿ ಕಾದುದು ಎಂಬುದರಿಂದ ಆರಂಭಿಸಿದಾಗಲೂ ಇಂದಿನ ತಾಪಮಾನಕ್ಕೆ ಬರಲು ಕೆಲವು ಕೋಟಿ ವರುಷಗಳೇ ಬೇಕಾಗುತ್ತವೆ ಎಂದು ಅಂದಾಜಿಸಲಾಯಿತು. ಈ ಹೊಸ ತಾಪಮಾನದ ಅಧ್ಯಯನ ಆಕರಗಳ ಅರಿವಿನೊಂದಿಗೆ ವಿಜ್ಞಾನಿಗಳು ಭೂಮಿಯ ವಯಸ್ಸು ತೀರ ದೊಡ್ಡದೆಂತಲೂ ಮತ್ತು ಅದರ ತಿರುಳು ದ್ರವಾಗಿರವಷ್ಟು ತಾಪಮಾನ ಹೊಂದಿದೆ ಎಂದು ಅರಿತರು.

೧೦೧೨ರಲ್ಲಿ ತನ್ನ ಲೇಖನದಲ್ಲಿ ಖಂಡಗಳ ಅಲೆತ ಪ್ರಸ್ತಾಪಿಸಿದ ಅಲ್‌ಫ್ರೆಡ್ ವೆಜೆನರ್ ೧೯೧೫ರಲ್ಲಿ ತನ್ನ ಮೊದಲ ಕೃತಿಯಲ್ಲಿ ಈ ಬಗೆಗೆ ವಿವರವಾಗಿ ಚರ್ಚಿಸಿದ. ಈ ಕೃತಿಯಲ್ಲಿ (ಕೊನೆಯ ಮರುಮುದ್ರಣ ೧೮೩೬) ದಕ್ಷಿಣ ಅಮೆರಿಕ ಪೂರ್ವ ಕರಾವಳಿ ಮತ್ತು ಆಫ್ರಿಕಾದ ಪಶ್ಚಿಮ ಕರಾವಳಿಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳುತ್ತವೆ ಎಂಬುದರ ಬಗೆಗೆ ಗಮನ ಸೆಳೆದ (ಈ ಚಿಂತನೆಯನ್ನು ವೆಜೆನರ್‌ಗೂ ಮುಂಚೆ ಮಂಡಿಸಿದವರಲ್ಲಿ ಕೆಲವರು ಅಬ್ರಹಾಮ್ ಆರ್ಟೆಲಿಯಸ್, ಆಂಟನಿಯೋ ಸ್ನಿಡೆರ್ ಪೆಲ್ಲಿಗ್ರಿನಿ, ಎಡುರ್ಡ್ ಸುಯೆಸ್. ರಾಬರ್ಟ್ ಮೊಂಟಾವೊನಿ ಮತ್ತು ಪ್ರಾಂಕ್ ಬುರ್ಸೆಲಿ ಟೇಲರ್). ತನ್ನ ಸರಳ ಅವಲೋಕನಕ್ಕೆ ಪಳಿಯುಳಿಕೆಗಳು, ಸ್ಥಳದ ಸ್ವರೂಪ ಮತ್ತು ವಾತಾವರಣದ ಪುರಾವೆಗಳನ್ನು ಒದಗಿಸಿದವರಲ್ಲಿ ವೆಜೆನರ್ ಮೊದಲಿಗ. ಮುಂದೆ ಅಲೆಕ್ಸ್ ಡು ಟಾಯಿಟ್ ಇದಕ್ಕೆ ಇನ್ನಷ್ಟು ಪುರಾವೆಗಳನ್ನು ಸೇರಿಸಿದ. ದಕ್ಷಿಣ ಅಮೆರಿಕದ ಪೂರ್ವ ಕರಾವಳಿ ಮತ್ತು ಆಫ್ರಿಕಾದ ಪಶ್ಚಿಮ ಕರಾವಳಿಗಳಲ್ಲಿನ ಕಲ್ಲಿನ ರೂಪಗೊಳ್ಳುವಿಕೆಗಳೂ ಹೊಂದಿಕೊಳ್ಳುತ್ತಿರುವುದು ಸಹ ಪುರಾವೆಯಾಯಿತು. ಕೆಲವು ಕಲ್ಲುಗಳಲ್ಲಿ ಏಕರೂಪತೆ ಉದಾಹರಣೆಗೆ ಸ್ಕಾಟ್‌ಲ್ಯಾಂಡ್ ಮತ್ತು ಐರ್ಲೆಂಡ್‌ನಲ್ಲಿ ಕಂಡುಬರುವ ಕಲ್ಲುಗಳು ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಮತ್ತು ನ್ಯೂ ಬ್ರನ್ಸ್‌ವಿಕ್‌ನಲ್ಲಿಯೂ ಕಂಡುಬರುವುದು. ಇಂದು ಅಳಿದ ಸಸ್ಯಗಳ ಮತ್ತು ಪ್ರಾಣಿಗಳ ಪಳಿಯುಳಿಕೆಗಳೂ ಹಲವು ಖಂಡಗಳಲ್ಲಿ ಕಂಡುಬಂದು ಅವುಗಳು ಒಮ್ಮೆ ಸೇರಿದ್ದವು ಎಂದು ಸೂಚಿಸುತ್ತಿದ್ದವು. ಆದಾಗ್ಯೂ ಇದು ಬಹುಸಂಖ್ಯಾತ ಭೂಶಾಸ್ತ್ರಜ್ಞರಿಗೆ ಬಹುಕಾಲ ಒಪ್ಪಿಗೆಯಾಗಲಿಲ್ಲ.

ನಂತರದ ಬೆಳವಣಿಗೆಗಳು

[ಬದಲಾಯಿಸಿ]
೧೯೬೩-೧೯೯೮ರ ನಡುವಿನ ಜಾಗತಿಕ ಭೂಕಂಪಗಳ ಅಧಿಕೇಂದ್ರಗಳು

ಇಪ್ಪತನೆಯ ಶತಮಾನದಲ್ಲಿ ಭೂಕಂಪಕ್ಕೆ ಸಂಬಂಧಿಸಿದಂತೆ ಭೂಕಂಪಲೇಖಿಯಂತಹ ಹಲವು ಉಪಕರಣಗಳನ್ನು ಬಳಸತೊಡಗಿ ಭೂಕಂಪಗಳ ಪ್ರದೇಶಗಳನ್ನು ಗುರುತಿಸುವಂತಾಯಿತು. ಇದರ ಪರಿಣಾಮವಾಗಿ ವಿಜ್ಞಾನಿಗಳು ಭೂಕಂಪಗಳು ನಿರ್ದಿಷ್ಟ ಪ್ರದೇಶಗಳಲ್ಲಿ ವಿಶೇಷವಾಗಿ ಸಾಗರದ ಕಂದರಗಳು ಮತ್ತು ದಿಂಡುಗಳ ಗುಂಟ ಅಥವಾ ಉದ್ದಕ್ಕೂ ಇರುವುದು ಪತ್ತೆಯಾಯಿತು. ಈ ಪ್ರದೇಶಗಳನ್ನು ಜಪಾನಿನ ಕಿಯೊ ವಾಡಟಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಹುಗೋ ಬೇನಿಯೊಫ್ ಮೊದಲು ಗುರುತಿಸಿದ ಕಾರಣಕ್ಕೆ ಇವನ್ನು ವಾಡಟಿ-ಬೇನಿಯೊಫ್ ಪ್ರದೇಶ ಎಂದು (ಕೆಲವೊಮ್ಮೆ ಬೇನಿಯೊಫ್ ಪ್ರದೇಶವೆಂದು) ಕರೆಯಲಾಗಿದೆ. ೧೯೬೦ರ ದಶಕದಲ್ಲಿ ೧೯೬೩ರ ಭೂಮಿಯ ಮೇಲಿನ ಅಣ್ವಾಸ್ತ್ರಗಳ ಪರೀಕ್ಷೆ ಒಪ್ಪಂದ ಜಾರಿಯ ಮೇಲ್ವಿಚಾರಣೆಗಾಗಿ ವರ್ಲ್ಡ್‌ವೈಡ್ ಸ್ಟಾಂಡರ್ಡೈಜಿಡ್ ಸೀಸ್ಮೊಗ್ರಾಫ್ ನೆಟ್‌ವರ್ಕ್ ಸ್ಥಾಪಿಸಿದ ಮೇಲೆ ಜಾಗತಿಕ ಭೂಕಂಪಗಳ ಅಧ್ಯಯನ ಹೆಚ್ಚು ಮುಂದುವರೆಯಿತು.[೧೫] ಈ ನೆಟ್‌ವರ್ಕನ ಉಪಕರಣಗಳು ಜಾಗತಿಕ ಭೂಕಂಪದ ಮಾಹಿತಿಯನ್ನು ನಿಖರವಾಗಿ ನಕಾಶಿಸಲು ಅವಕಾಶ ಮಾಡಿಕೊಟ್ಟವು.

ಇದೇ ಸಮಯದಲ್ಲಿ ಧ್ರುವದ ಬದಲಾವಣೆ ಬಗೆಗೆ ಚರ್ಚೆಗಳು ನಡೆಯತೊಡಗಿದವು. ಖಂಡಗಳ ಅಲೆತದ ಆರಂಭಿಕ ಚರ್ಚೆಗಳಲ್ಲಿ ವಿಜ್ಞಾನಿಗಳು ಧ್ರುವದ ಚಲನೆಯು ಖಂಡಗಳು ಹಲವು ಭಿನ್ನರೀತಿಯ ವಾತಾವರಣಗಳಿಗೆ ಒಡ್ಡಿಕೊಂಡ ಕಾರಣಕ್ಕೆ ಆಯಿತು ಎಂದು ವಾದಿಸಿದ್ದರು. ಅಲ್ಲದೆ ಪ್ರಾಚೀನ ಕಾಂತತ್ವವು ಈ ಕಾಲಮಾನದಲ್ಲಿ ಧ್ರುವ ಕಾಂತತ್ವ ಬದಲಾಯಿತೆಂದು ದತ್ತಾಂಶಗಳು ತೋರಿಸುತ್ತಿದ್ದವು. ವಿರುದ್ಧ ರೀತಿಯ ತರ್ಕಮಾಡಿ ಸಾಕ್ಷೇಪಿಕವಾಗಿ ಧ್ರುವಗಳು ಸ್ಥಿರವಾಗಿದ್ದವು ಆದರೆ ಖಂಡಗಳು ಸ್ಥಾನ ಬದಲಿಸಿದವು ಎಂದು ಭಾವಿಸಲಾಯಿತು. ಕೇಯಿತ್ ರುನ್‌ಕಾರ್ನ್‌ನ ೧೯೫೬ರ[೧೬] ಪ್ರಬಂಧದಲ್ಲಿ ಮೊದಲ ಬಾರಿಗೆ ಧ್ರುವ ಕಾಂತತ್ವದ ಬದಲಾವಣೆಗಳನ್ನು ಖಂಡಗಳ ಚಲನೆಗೆ ಸಾಕ್ಷಿಯಾಗಿ ಬಳಸಿಕೊಳ್ಳಲಾಯಿತು. ಅವನ ನಂತರದ ಪ್ರಬಂಧಗಳಲ್ಲಿ ಹಾಗೂ ‌ಅವನ ಶಿಷ್ಯಂದಿರಾದ ಟೆಡ್‌ ಇರ್ವಿಂಗ್ ಮತ್ತು ಕೆನ್ ಕ್ರೀರ್‌ರಲ್ಲಿ ಈ ಪ್ರವೃತ್ತಿ ಮುಂದುವರೆಯಿತು.

ಸಾಗರದ ತಳದ ಬಗೆಗಿನ ದತ್ತಾಂಶಗಳು ಕೆಲವು ಲಕ್ಷಣಗಳನ್ನು ತೋರಿದವು. ಈ ದತ್ತಾಂಶದ ಪ್ರಮುಖ ಪಲಿತಾಂಶವೆಂದರೆ ಜಗತ್ತಿನಾದ್ಯಂತ ಸಾಗರ ಮಧ್ಯದ ದಿಂಡುಗಳ ವ್ಯವಸ್ಥೆಯೊಂದನ್ನು ಗುರುತಿಸಲಾಯಿತು. ಈ ವ್ಯವಸ್ಥೆಯಲ್ಲಿ ಹೊಸ ಸಾಗರ ತಳ ರೂಪಗೊಳ್ಳುವುದು ಗಮನಕ್ಕೆ ಬಂತು. ಇದನ್ನು ಬ್ರೂಸ್ ಹೀಜೆನ್‌ನ (೧೯೬೦)[೧೭] ಪ್ರಬಂಧದಲ್ಲಿ ವಿವರಿಸಲಾಯಿತು ಮತ್ತು ಇದು ಚಿಂತನೆಯ ಕ್ರಾಂತಿಯನ್ನೇ ಹುಟ್ಟು ಹಾಕಿತು. ಸಾಗರ ತಳದಲ್ಲಿ ದಿಂಡಗಳ ಉದಕ್ಕೂ ಹೊಸ ಭೂಚಿಪ್ಪು ಸತತವಾಗಿ ರೂಪಗೊಳ್ಳುತ್ತಿರುತ್ತದೆ. ಇದನ್ನು ವಿವರಿಸಲು ಹೀಜೆನ್ “ಹಿಗ್ಗುವ ಭೂಮಿ” ಊಹನಕ್ಕೆ ಮೊರೆ ಹೋದ. ಈ ಸಾಗರ ತಳ ಹಿಗ್ಗುವಿಕೆಯ ನಡುವೆಯೂ ಏಕೆ ಭೂಮಿಯ ಗಾತ್ರ ಬದಲಾಗುವುದಿಲ್ಲ ಎಂಬ ಪ್ರಶ್ನೆ ಮುನ್ನೆಲೆಗೆ ಬಂತು. ಇದಕ್ಕಾಗಲೇ ಹೆಚ್ಚುವರಿ ಭೂಚಿಪ್ಪು “ತಳಸೇರಿವಿಕೆ” (ಸಬ್ಡಕ್ಶನ್) ನಡೆದಿದೆ ಎನ್ನಲಾದ ಸಾಗರದ ಕಂದಕಗಳಲ್ಲಿ ಮಾಯವಾಗುತ್ತದೆ ಎಂದು ಆರ್ಥರ್ ಹೋಮ್ಸ್, ವೆನ್‌ಇಂಗ್-ಮೆಯಿನ್ಸಜ್, ಕೋಟ್ಸ್ ಮುಂತಾದ ಹಲವು ವಿಜ್ಞಾನಿಗಳು ನಲ್ವತ್ತರ ಮತ್ತು ಐವತ್ತರ ದಶಕಗಳಲ್ಲಿ ಉತ್ತರ ಕೊಟ್ಟಿದ್ದರು. ಹ್ಯಾರಿ ಹ್ಯಾಮಂಡ್ ಹೆಸ್ ಮತ್ತು ರಾಬರ್ಟ್ ಎಸ್. ಡೈಟ್ಜ್‌ ಸಹ ಹೋಮ್ಸ್ ಮತ್ತು ಇತರರಂತೆ ಯೋಚಿಸುತ್ತಾ ಯಾವುದು ಹಿಗ್ಗುತ್ತದೆಯೋ ಅದು ಇನ್ನೊಂದೆಡೆ ಕುಗ್ಗ ಬೇಕು ಎಂದು ತರ್ಕಿಸಿದರು. ಹೆಸ್ ತೆಗೆದುಕೊಂಡ ಪ್ರಮುಖ ಹೆಜ್ಜೆಯೆಂದರೆ ತಾಪಮಾನವು (ಕನ್ವೆಕ್ಶನ್ ಕರೆಂಟ್) ಈ ಚಲನೆಗೆ ಶಕ್ತಿ ಒದಗಿಸುತ್ತದೆ ಎಂಬುವ ನಿಲುವು. ಈ ಚಲನೆ ಸಿದ್ಧಾಂತವು ಏಕಕಾಲಕ್ಕೆ ಹಲವು ಅವಲೋಕಿತ ಅಂಶಗಳನ್ನು- ಸಾಗರ ತಳದ ಹಿಗ್ಗುವಿಕೆಯ ನಡುವೆಯೂ ಭೂಮಿಯ ಗಾತ್ರ ಏಕೆ ಹೆಚ್ಚಾಗುವುದಿಲ್ಲ, ಸಾಗರ ತಳದಲ್ಲಿ ಏಕೆ ಮೆಕ್ಕಲು ಮಣ್ಣಿನ ಸಂಗ್ರಹ ಕಂಡುಬರುವುದಿಲ್ಲ ಮತ್ತು ಸಾಗರದ ಕಲ್ಲುಗಳಿಗೆ ಏಕೆ ಖಂಡಗಳ ಮೇಲಿನ ಕಲ್ಲುಗಳಿಗಿಂತ ಕಡಿಮೆ ವಯಸ್ಸಿದೆ ಎಂಬುದನ್ನು ವಿವರಿಸುತ್ತಿತ್ತು.

ಸಾಗರ ತಳದ ಕಾಂತತ್ವ ಪಟ್ಟಿ

ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಜಲಾಂತರ್ಗಾಮಿ ನೌಕೆ ಅಥವಾ ಸಬ್‌ಮೆರಿನ್‌ಗಳನ್ನು ಗುರುತಿಸಲು ಕಾಂತತ್ವಮಾಪಕಗಳಂತಹ (ಮ್ಯಾಗ್ನಟೊಮೀಟರ್) ಕಾಂತತ್ವ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆ ನಂತರ ಈ ಪದ್ಧತಿಯನ್ನು ವಿಕ್ಟರ್ ವ್ಯಾಕಿಯರ್‌ನಂತಹ ವಿಜ್ಞಾನಿಗಳು ಸಾಗರ ತಳದ ಕಾಂತತ್ವದಲ್ಲಿನ ಬದಲಾವಣೆಗಳನ್ನು ಗುರುತಿಸಲು ಬಳಸತೊಡಗಿದರು. ಸಾಗರ ತಳದಲ್ಲಿನ ಅಗ್ನಿಶಿಲೆ ಬಸಾಲ್ಟ್‌ನಲ್ಲಿ ಕಬ್ಬಿಣ ಹೆಚ್ಚಾಗಿದ್ದುದು ಇದಕ್ಕೆ ಸಹಾಯಕವಾಗಿತ್ತು. ೧೯೫೦ರ ದಶಕದಲ್ಲಿ ಹೀಗೆ ಗುರುತಿಸಿದ ಕಾಂತತ್ವವು ನಿರ್ದಿಷ್ಟ ವಿನ್ಯಾಸವನ್ನು ಸೂಚಿಸುತ್ತಿತ್ತು. ಸಾಗರ ತಳದ ಕಾಂತತ್ವವನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿದಾಗ ಜಿಬ್ರಾ ಪಟ್ಟಿಯಂತೆ ಪಟ್ಟಿಗಳು ಒಂದು ಪಟ್ಟಿಯು ಸಾಮಾನ್ಯ ದ್ರುವೀಯತೆ ತೋರಿದರೆ ನಂತರದ ಪಟ್ಟಿಯು ವಿರುದ್ಧ ದ್ರುವೀತೆಯನ್ನು ತೋರುತ್ತಿತ್ತು. ಹೀಜನ್, ಹೆಸ್ ಮತ್ತು ಡೈಟ್ಜ್ ೧೯೬೦ರ ದಶಕದ ಆರಂಭದಲ್ಲಿ ಸಾಗರ ಮಧ್ಯದ ದಿಂಡುಗಳು ಬಲಹೀನ ಪ್ರದೇಶಗಳೆಂತಲೂ ಮತ್ತು ಈ ದಿಂಡುಗಳ ಉದ್ದಕ್ಕೂ ಭೂಮಿಯ ಚಿಪ್ಪು ಹಿಸಿದು ಭೂಮಿಯ ಒಳಗಿನ ಶಿಲಾದ್ರವ ಅಥವಾ ಮ್ಯಾಗ್ಮ ಹೊರಬಂದು ಹೊಸ ಸಾಗರ ತಳ ನಿರ್ಮಾಣವಾಗುತ್ತದೆ ಎಂದು ಸಿದ್ಧಾಂತವನ್ನು ರೂಪಿಸಿದರು. ಹಲವು ದಶಲಕ್ಷ ವರುಷಗಳು ಮುಂದುವರೆದ ಈ ಹೊಸ ಸಾಗರ ತಳ ರೂಪಗೊಳ್ಳುವ ಈ ಪ್ರಕ್ರಿಯೆ ೫೦೦೦೦ ಕಿಮೀ ಉದ್ದದ ಸಾಗರ ಮಧ್ಯದ ದಿಂಡುಗಳ ವ್ಯವಸ್ಥೆಯ ಉದ್ದಕ್ಕೂ ಕಾಣಬರುತ್ತದೆ. “ಜಿಬ್ರಾ ವಿನ್ಯಾಸದ” ಕಾಂತತ್ವ ಪಟ್ಟಿಯನ್ನು ಪ್ರಕಟಿಸದ ನಾಲ್ಕು ವರುಷಗಳಲ್ಲಿಯೇ ಈ ವಿನ್ಯಾಸಕ್ಕೂ ಸಾಗರದ ತಳದ ಹಿಗ್ಗುವಿಕೆಗೂ ಸಂಬಂಧವನ್ನು ಗುರುತಿಸಲಾಯಿತು.

ಸಿದ್ಧಾಂತದ ಹೆಚ್ಚುವರಿ ವಿವರಗಳು

[ಬದಲಾಯಿಸಿ]

ಇವೆಲ್ಲ ಮೇಲಿನ ಬೆಳವಣಿಗೆಗಳ ನಂತರ ಭೂಪಲಕ ಸಿದ್ಧಾಂತವು (ಮೊದಲು ಇದನ್ನು ಮೊದಲು ಇದನ್ನು ನ್ಯೂ ಗ್ಲೋಬಲ್ ಟೆಕ್ಟೋನಿಕ್ಸ್ ಎಂದು ಕರೆಯಲಾಗಿತ್ತು) ಮತ್ತು ಈ ಬಗೆಗೆ ಹಲವು ಪ್ರಬಂಧಗಳನ್ನು ಮಂಡಿಸಲಾಯಿತು. ಇವುಗಳಲ್ಲಿ ಸಿದ್ಧಾಂತಕ್ಕೆ ಹೆಚ್ಚು ಪುಷ್ಛಿ ನೀಡಿದ ತಕ್ಷಣದ ಕೆಲವು ವಿವರಗಳು ಹೀಗಿವೆ:

  • ೧೯೬೫ರಲ್ಲಿ ಮೊದಲಿನಿಂದಲೂ ಸಾಗರ ತಳ ಹರಡುವಿಕೆ ಮತ್ತು ಖಂಡಗಳ ಅಲೆತ ಊಹನವನ್ನು ಬೆಂಬಲಿಸುತ್ತಿದ್ದ ಟುಜೊ ವಿಲ್ಸನ್[೧೮] ರೂಪಾಂತರ ಸ್ತರಭಂಗ ಮಾದರಿಯನ್ನು ಸೇರಿಸುವ ಮೂಲಕ ಫಲಕಗಳ ಚಲನೆಯ ಜಾಗತಿಕ ಮಟ್ಟದಲ್ಲಿನ ಅಗತ್ಯಗಳನ್ನು ಪೂರೈಸಿದ.[೧೯]
  • ೧೯೬೫ರ ಲಂಡನ್‌ನ ರಾಯಲ್ ಸೊಸೈಟಿಯಲ್ಲಿನ ವಿಚಾರ ಸಂಕಿರಣವನ್ನು ವಿಜ್ಞಾನಿಗಳು ಭೂಫಲಕ ಸಿದ್ಧಾಂತವನ್ನು ಅಧಿಕೃತವಾಗಿ ಸ್ವೀಕರಿಸುವುದರ ಆರಂಭ ಎಂದು ಗುರುತಿಸ ಬಹುದು. ಈ ವಿಚಾರ ಸಂಕಿರಣದಲ್ಲಿ ಎಡ್ವರ್ಡ್ ಬುಲ್ಲರ್ಡ್ ಮತ್ತು ಸಹಕೆಲಸಗಾರರು ಅಟ್ಲಾಟಿಂಕ್‌ನ ಎರಡು ಬದಿಯ ಖಂಡಗಳು ಸಾಗರವನ್ನು ಮುಚ್ಚಿ ಹೇಗೆ ಸೇರಿಕೊಳ್ಳುತ್ತವೆ ಎಂದು ಕಂಪ್ಯೂಟರ್ ಎಣಿಕೆಯ ಮೂಲಕ ತೋರಿಸಿಕೊಡುತ್ತಾರೆ. ಇದು “ಬುಲ್ಲರ್ಡ್ ಫಿಟ್” ಎಂದು ಹೆಸರು ವಾಸಿಯಾಗುತ್ತದೆ.
  • ೧೯೬೬ರಲ್ಲಿ ವಿಲ್ಸನ್ ಹಿಂದಿನ ಭೂಫಲಕಗಳ ಮರುಜೋಡಣೆಯನ್ನು ಉಲ್ಲೇಖಿಸುತ್ತಾ ಇಂದು “ವಿಲ್ಸನ್ ಸೈಕಲ್” ಎಂದು ಹೆಸರಾದ ಪರಿಕಲ್ಪನೆಯನ್ನು ಮುಂದಿಟ್ಟರು.[೨೦]
  • ೧೯೬೭ರಲ್ಲಿ ಅಮೆರಿಕದ ಜಿಯೊಫಿಸಿಕಲ್ ಯುನಿಯನ್ ಸಭೆಯಲ್ಲಿ ಡಬ್ಲು, ಜಾಸನ್ ಮೊರಗನ್ ಭೂಮೇಲ್ಮೈನ ಹನ್ನೆರಡು ಗಡುಸಾದ ಫಲಕಗಳನ್ನು ಹೊಂದಿದೆ ಮತ್ತು ಒಂದಕ್ಕೊಂದು ಸಾಕ್ಷೇಪಿಕವಾಗಿ ಚಲಿಸುತ್ತವೆ ಎಂಬ ಪ್ರಸ್ತಾಪನೆಯನ್ನು ಮುಂದಿಟ್ಟ.[೨೧]
  • ಎರಡು ತಿಂಗಳ ನಂತರ ಕ್ಸೇವಿಯರ್ ಲಿ ಪೆಚೊನ್ ಆರು ಪ್ರಮುಖ ಫಲಕಗಳ ಪೂರ್ಣ ಮಾದರಿ ಮತ್ತು ಅವುಗಳ ಸಾಕ್ಷೇಪಿಕ ಚಲನೆಯನ್ನು ಗುರುತಿಸಿದ ಪ್ರಬಂಧದ ನಂತರ ಭೂಫಲಕಗಳ ಸಿದ್ಧಾಂತ ಪೂರ್ಣವಾಗಿ ವಿಜ್ಞಾನಿಗಳ ಒಪ್ಪಿಗೆ ಪಡೆಯಿತು.[೨೨]
  • ಇದೇ ವರುಷದಲ್ಲಿ ಮೆಕೆನ್ಜಿ ಮತ್ತು ಪಾರ್ಕರ್ ಸ್ವತಂತ್ರವಾಗಿ ಭೂಫಲಕ ಚಲನೆಗಳನ್ನು ಗುರುತಿಸಲು ಮಾರ್ಗನ್‌ನ ಮಾದರಿಯನ್ನು ಹೋಲುವ ಮಾದರಿಯನ್ನು ಮಂಡಿಸಿದರು.[೨೩]

ಸದ್ಯದ ಭೂಫಲಕಗಳು

[ಬದಲಾಯಿಸಿ]

ಪ್ರಮುಖ ಭೂಪಲಕಗಳು ಆಫ್ರಿಕಾ, ಅಂಟಾರ್ಕಿಟಿಕ, ಯುರೇಶಿಯ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಪಿಕ್ ಮತ್ತು ಇಂಡೊ-ಆಸ್ಟ್ರೇಲಿಯನ್ ಭೂಪಲಕಗಳು.ಕೆಲವೊಮ್ಮೆ ಇಂಡೊ-ಆಸ್ಟ್ರೇಲಿಯನ್ ಭೂಪಲಕವನ್ನು ಭಾರತೀಯ ಮತ್ತು ಆಸ್ಟ್ರೇಲಿಯ ಭೂಪಲಕಗಳಾಗಿ ವಿಭಜಿಸಲಾಗುತ್ತದೆ. ಹಲವು ಸಣ್ಣ ಭೂಪಲಕಗಳಿದ್ದು ಅವುಗಳಲ್ಲಿ ವಿಶಾಲವಾದ ಏಳು ಅರೇಬಿಯ, ಕ್ಯಾರಿಬಿಯನ್, ಜುವಾನ್ ಡಿ ಫುಕ, ಕೊಕೊಸ್, ನಜ್ಕ, ಪಿಲಿಪೈನ್ಸ್ ಸಮುದ್ರ ಮತ್ತು ಸ್ಕೊಟಿಯ ಭೂಫಲಕಗಳು.

ಟಿಪ್ಪಣಿಗಳು

[ಬದಲಾಯಿಸಿ]
  1. ಇಂಗ್ಲೀಶ್ ವಿಕಿಪೀಡಿಯ “Plate tectonics”ನ ಸಂಗ್ರಹಾನುವಾದ (access date 2016-08-14)
  2. ೨.೦ ೨.೧ ೨.೨ “Understanding plate motions”, USGSaccess date 2016-08-09
  3. ಮೂಲದಲ್ಲಿ ಈ ಭಾಗಕ್ಕೆ ನಂಬಲರ್ಹ ಉಲ್ಲೇಖಗಳ ಕೊರತೆ ಇದೆ ಎಂದು ಟಿಪ್ಪಣಿ ಮಾಡಲಾಗಿದೆ


ಉಲ್ಲೇಖಗಳು

[ಬದಲಾಯಿಸಿ]
  1. Read, Herbert Harold; Watson, Janet (1975). Introduction to Geology. New York: Halsted. pp. 13–15. ISBN 978-0-470-71165-1. OCLC 317775677.
  2. Scalera, G. & Lavecchia, G. (2006). (Article) "Frontiers in earth sciences: new ideas and interpretation". Annals of Geophysics. 49 (1). doi:10.4401/ag-4406 (inactive 2015-01-09).
  3. Zhen Shao, Huang (1997).(Article) "Speed of the Continental Plates". The Physics Factbook.
  4. Hancock, Paul L.; Skinner, Brian J.; Dineley, David L. (2000). The Oxford Companion to The Earth. Oxford University Press. ISBN 0-19-854039-6.
  5. ೫.೦ ೫.೧ ೫.೨ Turcotte, D.L.; Schubert, G. (2002). "Plate Tectonics". Geodynamics (2 ed.). Cambridge University Press. pp. 1–21. ISBN 0-521-66186-2.
  6. Foulger, Gillian R. (2010). Plates vs Plumes: A Geological Controversy. Wiley-Blackwell. ISBN 978-1-4051-6148-0.
  7. Meissner, Rolf (2002). The Little Book of Planet Earth. New York: Copernicus Books. p. 202. ISBN 978-0-387-95258-1. Page 100
  8. Holmes, Arthur (1931). "Radioactivity and Earth Movements" (PDF). Transactions of the Geological Society of Glasgow. Geological Society of Glasgow: 559–606.
  9. Spence, William (1987).(Article) "Slab pull and the seismotectonics of subducting lithosphere" (PDF). Reviews of Geophysics. 25 (1): 55–69. Bibcode:1987RvGeo..25...55S. doi:10.1029/RG025i001p00055.
  10. Conrad, Clinton P.; Lithgow-Bertelloni, Carolina (2002). "How Mantle Slabs Drive Plate Tectonics". Science. 298 (5591): 207–9. Bibcode:2002Sci...298..207C. doi:10.1126/science.1074161. PMID 12364804. Archived from the original on September 20, 2009.
  11. "Alfred Wegener (1880-1930)". University of California Museum of Paleontology.
  12. Neith, Katie (April 15, 2011). "Caltech Researchers Use GPS Data to Model Effects of Tidal Loads on Earth's Surface". Caltech. Retrieved August 15, 2012
  13. Joly, John (1909). Radioactivity and Geology: An Account of the Influence of Radioactive Energy on Terrestrial History. London: Archibald Constable. p. 36. ISBN 1-4021-3577-7.
  14. Thomson, W (1863).(Article) "On the secular cooling of the earth". Philosophical Magazine. 4 (25): 1–14. doi:10.1080/14786446308643410 (inactive 2015-01-09).
  15. Stein, Seth; Wysession, Michael (2009). An Introduction to Seismology, Earthquakes, and Earth Structure. Chichester: John Wiley & Sons. ISBN 978-1-4443-1131-0.
  16. Runcorn, S.K. (1956). (Article) "Paleomagnetic comparisons between Europe and North America". Proceedings, Geological Association of Canada. 8 (1088): 7785. Bibcode:1965RSPTA.258....1R. doi:10.1098/rsta.1965.0016
  17. Heezen, B. (1960). Z (Article) "The rift in the ocean floor". Scientific American. 203 (4): 98–110. doi:10.1038/scientificamerican1060-98.
  18. Wilson, J.T. (8 June 1963) (Article). "Hypothesis on the Earth's behaviour". Nature. 198 (4884): 849–865. Bibcode:1963Natur.198..925T. doi:10.1038/198925a0.
  19. Wilson, J. Tuzo (July 1965). (Article) "A new class of faults and their bearing on continental drift" (PDF). Nature. 207 (4995): 343–347. Bibcode:1965Natur.207..343W. doi:10.1038/207343a0. Archived from the original (PDF) on August 6, 2010.
  20. Wilson, J. Tuzo (13 August 1966). (Article) "Did the Atlantic close and then re-open?" (PDF). Nature. 211 (5050): 676–681. Bibcode:1966Natur.211..676W. doi:10.1038/211676a0.
  21. Morgan, W. Jason (1968). (Article) "Rises, Trenches, Great Faults, and Crustal Blocks" (PDF). Journal of Geophysical Research. 73 (6): 1959–1982. Bibcode:1968JGR....73.1959M. doi:10.1029/JB073i006p01959.
  22. Le Pichon, Xavier (15 June 1968). (Article) "Sea-floor spreading and continental drift". Journal of Geophysical Research. 73 (12): 3661–3697. Bibcode:1968JGR....73.3661L. doi:10.1029/JB073i012p03661.
  23. Mc Kenzie, D.; Parker, R.L. (1967). (Article) "The North Pacific: an example of tectonics on a sphere". Nature. 216 (5122): 1276–1280. Bibcode:1967Natur.216.1276M. doi:10.1038/2161276a0.