ಜೋಸಯಾ ವಿಲಾರ್ಡ್ ಗಿಬ್ಸ್
ಜೋಸಯಾ ವಿಲಾರ್ಡ್ ಗಿಬ್ಸ್ ( 1839-1903) ಅಮೆರಿಕದ ಭೌತವಿಜ್ಞಾನಿ.
ಬದುಕು
[ಬದಲಾಯಿಸಿ]ಅಮೆರಿಕದ ಕನೆಕ್ಟಿಕಟ್ ಪ್ರಾಂತದ ನ್ಯೂ ಹೇವನ್ ಎಂಬಲ್ಲಿ 11 ಫೆಬ್ರವರಿ 1839ರಂದು ಜನಿಸಿದ. 1858ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಬಿ.ಎಸ್. ಪದವಿಯನ್ನೂ 1863ರಲ್ಲಿ ಅದೇ ವಿಶ್ವವಿದ್ಯಾಲಯದ ಪಿಎಚ್.ಡಿ.ಪದವಿಯನ್ನೂ ಪಡೆದು 1869ರ ವರೆಗೆ ಸ್ನಾತಕೋತ್ತರ ಅಭ್ಯಾಸಗಳನ್ನು ಯುರೋಪಿನಲ್ಲಿ ಮಾಡಿದ. ಯುರೋಪಿನಿಂದ ಹಿಂತಿರುಗಿದ ಬಳಿಕ 1871ರಿಂದ ತನ್ನ ಕೊನೆಯ ದಿನದ ವರೆಗೂ ಯೇಲ್ ವಿಶ್ವವಿದ್ಯಾಲಯದಲ್ಲಿ ಗಣಿತೀಯ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ.
ಗಿಬ್ಸ್ ನ ಮರಣಾನಂತರ ಯೇಲ್ ವಿಶ್ವವಿದ್ಯಾಲಯ ಆತನ ಬರಹಗಳನ್ನು ಸಂಕಲಿಸಿ 1928ರಲ್ಲಿ ಎರಡು ಸಂಪುಟಗಳಾಗಿ ಪ್ರಕಟಿಸಿತು. ಈ ಸಂಪುಟ ಅನೇಕ ಪ್ರಸಿದ್ಧ ವಿಜ್ಞಾನಿಗಳ ಲೇಖನಗಳಿಂದ ಕೂಡಿದೆ. ಜೆ. ವಿಲಾರ್ಡ್ ಗಿಬ್ಸ್ ನ ವೈಜ್ಞಾನಿಕ ಬರೆಹಗಳನ್ನು ಕುರಿತು ವ್ಯಾಖ್ಯಾನ ಎಂಬ ಸನ್ಮಾನ ವಿಶ್ಲೇಷಣ ಗ್ರಂಥ 1936ರಲ್ಲಿ ಎರಡು ಸಂಪುಟಗಳಾಗಿ ಪ್ರಕಟವಾಯಿತು. ಗಿಬ್ಸ್ ನ ಶಿಷ್ಯರಲ್ಲೊಬ್ಬನಾದ ಎಲ್. ಪಿ. ವ್ಹೀಲರ್ ಎಂಬಾತ ಬರೆದ ಜೋಸಯಾ ವಿಲಾರ್ಡ್ ಗಿಬ್ಸ್-ಮಹಾಪ್ರಜ್ಞೆಯೊಂದರ ಚರಿತ್ರೆ ಎಂಬ ಪುಸ್ತಕ 1852ರಲ್ಲಿ ಪ್ರಕಟವಾಯಿತು.
ಸಾಧನೆ
[ಬದಲಾಯಿಸಿ]1873-78ರ ಅವಧಿಯಲ್ಲಿ ರಸಾಯನವಿಜ್ಞಾನದ ಅಧ್ಯಯನದಲ್ಲಿ ಉಷ್ಣಗತಿವಿಜ್ಞಾನದ (ಥರ್ಮೋಡೈನಮಿಕ್ಸ್) ಉಪಯೋಗದ ಬಗ್ಗೆ ಮೂರು ಲೇಖನಗಳನ್ನು ಪ್ರಕಟಿಸಿದ. ಈ ಸಂಶೋಧನರಂಗದಲ್ಲಿ ಅವನ ಮೊದಲ ಲೇಖನವಾದ ದ್ರವಾನಿಲಗಳ ಉಷ್ಣಗತಿಶಾಸ್ತ್ರದಲ್ಲಿ ರೇಖಾಪದ್ಧತಿಗಳು 1873ರಲ್ಲಿ ಪ್ರಕಟವಾಗಿ ಉಷ್ಣಗತಿಶಾಸ್ತ್ರ ಮತ್ತು ಭೌತರಸಾಯನವಿಜ್ಞಾನಗಳ ಅಧ್ಯಯನದಲ್ಲಿ ಪ್ರಾವಸ್ಥಾ ಸೂತ್ರವಿಧಿ(ಫೇಸ್ ರೂಲ್) ಎಂಬ ಹೊಸ ಅಧ್ಯಾಯಕ್ಕೆ ಆರಂಭವಾಯಿತು. ಈ ಲೇಖನಮಾಲಿಕೆಯಲ್ಲಿ ಅತಿ ಮುಖ್ಯವಾದ ಮತ್ತು ಅವನಿಗೆ ಬಹು ಕೀರ್ತಿ ತಂದ ಲೇಖನವೆಂದರೆ ವಿಷಮ ವಸ್ತುಗಳ ನಡುವಣ ಸಮತೋಲ. ಇದು 1876-78ರ ಅವಧಿಯಲ್ಲಿ ಹಲವು ಭಾಗಗಳಾಗಿ ಪ್ರಕಟವಾಯಿತು. ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಸಂಸ್ಥೆಯು 1880ರಲ್ಲಿ ರುಮ್ ಫೋರ್ಡ್ ಪದಕವನ್ನಿತ್ತು ಸನ್ಮಾನಿಸಿತು[೧].
ಗಣಿತ ಮತ್ತು ಭೌತವಿಜ್ಞಾನಗಳಲ್ಲಿ ಈಗ ಒಂದು ಅತ್ಯವಶ್ಯ ಭಾಗವೆನಿಸಿರುವ ಸದಿಶವಿಶ್ಲೇಷಣೆಯ (ವೆಕ್ಟರ್ ಅನಾಲಿಸಿಸ್) ಅಭ್ಯಾಸಕ್ಕೆ 1881ರಲ್ಲಿ ಅಡಿಗಲ್ಲು ಹಾಕಿ ಅದನ್ನು ಗ್ರಹ, ಧೂಮಕೇತುಗಳ ಕಕ್ಷೆಗಳನ್ನು ಕಂಡುಹಿಡಿಯುವುದಕ್ಕೂ ಹರಳುಗಳ ರಚನೆಗಳನ್ನು ತಿಳಿಯುವುದಕ್ಕೂ ಗಿಬ್ಸ್ ಉಪಯೋಗಿಸಿದ[೨]. 1902ರಲ್ಲಿ ಪ್ರಕಟವಾದ ಅವನ ಕೊನೆ ಲೇಖನದ ಹೆಸರು ಸಂಖ್ಯಾಕಲನಶಾಸ್ತ್ರದ (ಸ್ಟ್ಯಾಟಿಸ್ಟಿಕ್ಸ್) ಮೂಲ ನಿಯಮಗಳು. ಇದು ಸಂಖ್ಯಾಕಲನಶಾಸ್ತ್ರದ ಬೆಳೆವಣಿಗೆಗೆ ಬಹು ನೆರವು ನೀಡಿತು. ಭೌತರಸಾಯನವಿಜ್ಞಾನದ ಆರಂಭಕ್ಕೆ ಕಾರಣನಾದ ಮಹಾವಿಜ್ಞಾನಿಯೆಂದೂ ಉಷ್ಣಗತಿಶಾಸ್ತ್ರದ ಎರಡನೆಯ ನಿಯಮವನ್ನು ರಾಸಾಯನಿಕ, ವಿದ್ಯುತ್ ಮತ್ತು ಉಷ್ಣಶಕ್ತಿಗಳಿಗೆ ಅಳವಡಿಸಿ ಅವುಗಳಿಂದ ಪಡೆಯಬಲ್ಲ ಉಪಯುಕ್ತ ಕ್ರಿಯಾಶಕ್ತಿಗಳ ಬಗ್ಗೆ ಸಂಶೋಧನೆ ನಡೆಸಿದ ಮೊದಲಿಗನೆಂದೂ ಗಿಬ್ಸ್ ನನ್ನು ಗೌರವಿಸಿ ರಾಯಲ್ ಸೊಸೈಟಿ 1901ರಲ್ಲಿ ಕಾಪ್ಲೇ ಪದಕವನ್ನಿತ್ತು ಸನ್ಮಾನಿಸಿತು[೩]. ಗಿಬ್ಸ್ ನ ಸಂಶೋಧನೆಗಳು ಉಷ್ಣಗತಿಶಾಸ್ತ್ರದ ಅಧ್ಯಯನದಲ್ಲಿ ಅವನ ಹೆಸರು ಸ್ಥಿರವಾಗಿ ನಿಲ್ಲುವಂತೆ ಮಾಡಿವೆ. ಅವನ ಹೆಸರು ಪಡೆದಿರುವ ಗಿಬ್ಸ್-ಡೂಹೆಮ್ ಮತ್ತು ಗಿಬ್ಸ್-ಹೆಲ್ಮಹಾಲ್ಟ್ಸ್ ಸಮೀಕರಣಗಳು ಅವನ ಸಂಶೋಧನೆಗಳ ಮೌಲ್ಯಕ್ಕೆ ಸಾಕ್ಷಿಯಾಗಿವೆ.
ಉಲ್ಲೇಖ
[ಬದಲಾಯಿಸಿ]- ↑ https://docs.google.com/spreadsheets/d/1dsunM9ukGLgaW3HdG9cvJ_QKd7pWjGI0qi_fCb1ROD4/pubhtml?gid=534642132&single=true
- ↑ "ಆರ್ಕೈವ್ ನಕಲು". Archived from the original on 2021-06-14. Retrieved 2017-01-29.
- ↑ https://docs.google.com/spreadsheets/d/1dsunM9ukGLgaW3HdG9cvJ_QKd7pWjGI0qi_fCb1ROD4/pubhtml?gid=1336391689&single=true
ಬಾಹ್ಯ ಸಂಪರ್ಕ
[ಬದಲಾಯಿಸಿ]- http://www.chemeurope.com/en/encyclopedia/Josiah_Willard_Gibbs.html
- "Josiah Willard Gibbs Archived 2015-05-01 ವೇಬ್ಯಾಕ್ ಮೆಷಿನ್ ನಲ್ಲಿ.", in Selected Papers of Great American Scientists, American Institute of Physics, (2003 [1976])
- ಜೋಸಯಾ ವಿಲಾರ್ಡ್ ಗಿಬ್ಸ್ at the Mathematics Genealogy Project
- "Gibbs" by Muriel Rukeyser
- Reflections on Gibbs: From Statistical Physics to the Amistad by Leo Kadanoff, Prof.