ವಿಷಯಕ್ಕೆ ಹೋಗು

ಉಲ್ಕಾಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಲ್ಕೆ

ಉಲ್ಕಾಕಲ್ಪವು ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುವ ಒಂದು ಚಿಕ್ಕ ಕಲ್ಲಿನ ಅಥವಾ ಲೋಹೀಯ ಕಾಯ. ಉಲ್ಕಾಕಲ್ಪಗಳು ಗಮನಾರ್ಹವಾಗಿ ಕ್ಷುದ್ರಗ್ರಹಗಳಿಗಿಂತ ಚಿಕ್ಕದಾಗಿರುತ್ತವೆ, ಮತ್ತು ಗಾತ್ರದಲ್ಲಿ ಚಿಕ್ಕ ಕಣಗಳಿಂದ ೧ ಮೀಟರ್ ಅಗಲದ ವಸ್ತುಗಳವರೆಗಿನ ವ್ಯಾಪ್ತಿಯಲ್ಲಿರುತ್ತವೆ. ಬಾಹ್ಯಾಕಾಶ ಭಗ್ನಾವಶೇಷಗಳಿಂದ ಗೋಚರಿಸುವ ಬೆಳಕಿನ ಗೆರೆಯು ಅದು ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸಿದಾಗ ಉಂಟಾದ ಶಾಖದ ಪರಿಣಾಮವಾಗಿದೆ, ಮತ್ತು ಅದರ ಹಿನ್ನೆಲೆಯಲ್ಲಿ ಅದು ಚೆಲ್ಲುವ ಪ್ರಜ್ವಲಿಸುವ ಕಣಗಳ ಜಾಡನ್ನು ಉಲ್ಕೆ ಎಂದು ಕರೆಯಲಾಗುತ್ತದೆ.

From a meteoroid to a meteor and meteorite.
Animated illustration of different phases as a meteoroid enters the atmosphere to become visible as a meteor and impact the Earth's surface as a meteorite.

ಉಲ್ಕೆಯು ವಸ್ತುವಿನ ಒಂದು ಕಣ,ಭೂಮಿಯ ವಾಯುಮಂಡಲವನ್ನು ಸೆಕೆಂಡಿಗೆ ೧೧-೭೨ಕಿ.ಮೀ ವೇಗದಿಂದ ಪ್ರವೇಶಿಸಿದಾಗ ಕಾಣುವ ದೃಶ್ಯ(ಮೀಟಿಯರ್).ಕಣದ ಹೆಸರು ಉಲ್ಕಾಕಲ್ಪ(ಮೀಟಿಯೊರಾಯಿಡ್).ರೂಢಿಯ ಮಾತಿನಲ್ಲಿ ಉಲ್ಕೆಗಳನ್ನು ಬೀಳುವ ನಕ್ಷತ್ರ ಎಂಬುದಾಗಿ ಜನಸಾಮಾನ್ಯರು ವರ್ಣಿಸುತ್ತಾರೆ.ವಾಸ್ತವಿಕವಾಗಿ ಈ ಕಾಯಗಳಿಗೂ ನಕ್ಷತ್ರಗಳಿಗೂ ಯಾವ ಸಂಬಂಧವೂ ಇಲ್ಲ.ರಾತ್ರಿಯ ಆಕಾಶದಲ್ಲಿ ಕಾಣಿಸುಕೊಳ್ಳುವ ಉಲ್ಕೆಗಳ ಪೈಕಿ ಸಾಸಿವೆ ಕಾಳಿಗಿಂತ ಹೆಚ್ಚು ಗಾತ್ರದ ಘನಕಾಯಗಳು ತೀರ ವಿರಳ.ಅಷ್ಟು ಪುಟ್ಟವಾದರೂ ಅವು ದೊಡ್ಡ ಗ್ರಹಗಳಂತೆಯೇ ನಿರ್ದಿಷ್ಟ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಸಂಚರಿಸುತ್ತಿರುತ್ತವೆ.ಇವೇ ಉಲ್ಕಾಕಲ್ಪಗಳು.ಇವುಗಳಿಗೆ ಸಾಮಾನ್ಯವಾಗಿ ಭೂಸಂಪರ್ಕವಿಲ್ಲ.ಭೂಮಿ ಕೂಡ ನಿರಂತರ ಸೂರ್ಯಪರಿಭ್ರಮಣ ಮಾಡುತ್ತಿರುವುದರಿಂದ ಚರ ಉಲ್ಕಾಕಲ್ಪಗಳು ವೇಗವಾಗಿ ಭೂವಾಯುಮಂಡಲಕ್ಕೆ ಡಿಕ್ಕಿ ಹೊಡೆಯುವ ಆಕಸ್ಮಿಕಗಳಿಗೆ ಕೊರತೆಯಿಲ್ಲ.ಈ ಆಕಸ್ಮಿಕಗಳ ಫಲವೇ ಪ್ರಜ್ವಲಿಸುವ ಉಲ್ಕೆಗಳು.

ಸೌರಮಂಡಲದಲ್ಲಿ

[ಬದಲಾಯಿಸಿ]
Ionization trail of a Perseid meteor seen against the constellation Corona Borealis with its ring of stars

ಸೆಕೆಂಡ್ ಒಂದಕ್ಕೆ 60-70 ಕಿ.ಮೀ.ಗಳಷ್ಟು ಅಧಿಕ ಸಾಪೇಕ್ಷ ವೇಗಗಳಿಂದ ಉಲ್ಕಾಕಲ್ಪಗಳು ವಾಯುಮಂಡಲವನ್ನು ಭೇದಿಸಬಲ್ಲವು. ಇಂಥ ಸಂಘಟನೆಯ (ಇಂಪ್ಯಾಕ್ಟ್) ಪ್ರಥಮ ಪರಿಣಾಮಗಳು ಗೋಚರಕ್ಕೆ ಬರುವಾಗ ಸಾಧಾರಣ ಉಲ್ಕೆಯೊಂದು ಭೂಮಿಯ ಮೇಲ್ಮೈಯಿಂದ 100-130 ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಅಲ್ಲಿ ವಾಯುಮಂಡಲ ಭೂ ಮೇಲ್ಮೈ ಬಳಿಗಿಂತ ಹತ್ತಾರು ಕೋಟಿ ಪಾಲು ವಿರಳವಾಗಿರುವುದಾದರೂ ವಾಯುವಿನ ಅಣುಗಳು ಆಗಲೇ ಸಾಕಷ್ಟು ಸಂಖ್ಯೆಯಲ್ಲಿ ಉಲ್ಕಾಕಲ್ಪಕ್ಕೆ ಬಡಿಯುತ್ತಿರುವುವು. ತತ್ಫಲವಾಗಿ ಉಲ್ಕಾಕಲ್ಪದ ಸ್ಫಟಿಕಜಾಲದೊಳಗಿನ (ಕ್ರಿಸ್ಟರ್ ಲ್ಯಾಟ್ಟಿಸ್) ಪರಮಾಣುಗಳು ಹೆಚ್ಚು ಹೆಚ್ಚು ರಭಸದಿಂದ ಕಂಪಿಸತೊಡಗಿ ಬಲುಬೇಗನೆ ಆ ಕಲ್ಪ ಕುದಿಯುವ ಉಷ್ಣತೆಯನ್ನು ಮುಟ್ಟುವುದು. ಬಳಿಕ ಅದರ ಆವಿಗೂ ಗಾಳಿಗೂ ನಡೆಯುವ ಸಂಘಟನೆಯಲ್ಲಿ ಇವೆರಡರ ದ್ರವ್ಯಗಳ ಕೋಟ್ಯಾನುಕೋಟಿ ಅಣು ಪರಮಾಣುಗಳೂ ಉದ್ರಿಕ್ತಸ್ಥಿತಿಗಳಿಗೆ (ಎಕ್ಸೈಟೆಡ್ ಸ್ಟೇಟ್ಸ್) ತಲುಪಿ ಅವು ಎಲೆಕ್ಟ್ರಾನ್ ಮತ್ತು ಧನ ಅಯಾನುಗಳಾಗಿ ಛಿದ್ರಗೊಳ್ಳುತ್ತವೆ. ಉಲ್ಕೆಗಳು ಪ್ರಜ್ಜ್ವಲಿಸಲು ಪ್ರಧಾನ ಕಾರಣ ಉದ್ರಿಕ್ತ ಸ್ಥಿತಿಗಳಲ್ಲಿರುವ ಅಣು ಪರಮಾಣುಗಳು. ಮಾಮೂಲು ಸ್ಥಿತಿಗೆ ಹಿಂತಿರುಗುವಾಗ ಮತ್ತು ಪ್ರತ್ಯೇಕಗೊಂಡ ಎಲೆಕ್ಟ್ರಾನ್ ಮತ್ತು ಅಯಾನುಗಳು ಅಣುಪರಮಾಣುಗಳಾಗಿ ಪುನಸ್ಸಂಯೋಗಗೊಳ್ಳುವ ಸಾಧ್ಯತೆಯಿರುವುದರಿಂದ ಅನೇಕ ವೇಳೆ ಉಲ್ಕಾಕಲ್ಪವೊಂದರ ಸಾಗಣೆಯ ಬಳಿಕವೂ ಕೆಲಕ್ಷಣಗಳವರೆಗೆ ಅದರ ಮಾರ್ಗರೇಖೆ ನಸುಪ್ರಕಾಶವನ್ನು ಸೂಸುವುದುಂಟು. ಉಲ್ಕೆಗಳ ಹಾದಿಯಲ್ಲಿ ರೂಪಗೊಳ್ಳುವ ಎಲೆಕ್ಟ್ರಾನ್-ಅಯಾನ್ ವ್ಯೂಹಗಳು ಸೆಕೆಂಡಿಗೆ ಆರೆಂಟು ಕೋಟಿ ಆವರ್ತಸಂಖ್ಯೆಯ ವಿದ್ಯುತ್ಕಾಂತೀಯ ತರಂಗಗಳನ್ನು (ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್) ಚೆನ್ನಾಗಿ ಪ್ರತಿಫಲಿಸಬಲ್ಲವು. ಇದರಿಂದ ರಾಡಾರ್ ಟೆಲಿಸ್ಕೋಪುಗಳು ಕೇವಲ ರಾತ್ರಿವೇಳೆಯಲ್ಲಷ್ಟೆ ಅಲ್ಲದೆ ನಡುಹಗಲಿನಲ್ಲೂ ಉಲ್ಕೆಗಳ ಸಾಗಣೆಯನ್ನು ಗುರುತಿಸುತ್ತವೆ. ಇಂದು ಉಲ್ಕೆಗಳ ಅಧ್ಯಯನದಲ್ಲಿ ಬಳಕೆಯಾಗುತ್ತಿರುವ ಉಪಕರಣಗಳ ಪೈಕಿ ರಾಡಾರಿಗೆ ಅಗ್ರಸ್ಥಾನವುಂಟು.

ಭೂ ವಾತಾವರಣದೊಂದಿಗೆ ಘರ್ಷಣೆ

[ಬದಲಾಯಿಸಿ]

ಸಾಧಾರಣ ಉಲ್ಕಾಕಲ್ಪಗಳು ಭೂ ಮೇಲ್ಮೈನಿಂದ ಅರುವತ್ತು ಎಪ್ಪತ್ತು ಕಿಲೋ ಮೀಟರ್ ಎತ್ತರವನ್ನು ತಲುಪುವಷ್ಟರಲ್ಲಿ ದೂಳು ಮಿಶ್ರಿತವಾದ ಆವಿಯ ರೂಪಕ್ಕೆ ಸಂಪೂರ್ಣವಾಗಿ ಪರಿವರ್ತನೆಗೊಂಡು ವಾಯುಮಂಡಲದೊಂದಿಗೆ ಬೆರೆತುಹೋಗುತ್ತವೆ. ಆದರೆ ಅಧಿಕ ದ್ರವ್ಯರಾಶಿ ಇರುವ ಅಗ್ನಿಗೋಳಗಳೆಂಬ (ಬೋಲೈಡ್ಸ್, ಫೈರ್ ಬಾಲ್ಸ್) ಹೆಸರಿನ ಉಲ್ಕಾಕಲ್ಪಗಳು ಕೆಲವೊಮ್ಮೆ ತುಸು ದಟ್ಟವೇ ಆಗಿರುವ ಇನ್ನೂ ತಗ್ಗಿನ ವಾಯುಸ್ತರಗಳನ್ನು ಕೂಡ ಪ್ರವೇಶಿಸುವುದುಂಟು. ಈ ಸ್ತರಗಳಲ್ಲಿ ಉಲ್ಕಾಕಲ್ಪಗಳ ಚಲನೆಗೆ ಪ್ರಚಂಡ ಪ್ರತಿರೋಧವಿದ್ದು ಅಲ್ಲಿ ಅಗ್ನಿಗೋಳಗಳು ತಮ್ಮ ವೇಗವನ್ನು ಅತಿ ತ್ವರೆಯಿಂದ ಕಳೆದುಕೊಳ್ಳತೊಡಗುವುವು. 50 ಕಿ.ಮೀ ಗಿಂತ ತಗ್ಗಿನಲ್ಲಿ ಅತಿಶಬ್ದಾತೀತ ವೇಗದಿಂದ (ಹೈಪರ್ಸಾನಿಕ್ ಸ್ಪೀಡ್-ಶಬ್ದವೇಗದ ಐದರಷ್ಟಕ್ಕಿಂತ ಹೆಚ್ಚಾದ ವೇಗಗಳಿಗೆ ಈ ಹೆಸರುಂಟು) ಚಲಿಸುವ ಅಗ್ನಿಗೋಳ ತನ್ನ ಹಾದಿಯಲ್ಲಿನ ವಾಯುರಾಶಿಯನ್ನು ಕ್ಷಿಪ್ರವಾದ ಉಷ್ಣಾಪರಕ ಸಂಕೋಚನೆಗೆ (ಏಡಿಯಾಬ್ಯಾಟಿಕ್ ಕಂಪ್ರೆಶನ್) ಗುರಿಪಡಿಸಿ ಧಕ್ಕೆಯ ಅಲೆಯೆಂದು (ಷಾಕ್ ವೇವ್) ಕರೆಯಲಾಗುವ ಒಂದು ಬಗೆ ವಿಚ್ಛಿನ್ನತೆಯನ್ನು (ಡಿಸ್ಕಂಟಿನ್ಯುಟಿ) ವಾಯುಮಂಡಲದಲ್ಲಿ ಏರ್ಪಡಿಸುತ್ತದೆ. ಇದರಿಂದಾಗಿ ಅಗ್ನಿಗೋಳಗಳ ಉಜ್ಜ್ವಲ ಪ್ರಕಾಶ ಹಾಗೂ ಅತ್ಯಧಿಕ ಉಷ್ಣತೆಗಳ ಜೊತೆಗೆ ಅನೇಕ ವೇಳೆ ಗುಡುಗಿನಂಥ ಶಬ್ದಗಳೂ ಉತ್ಪನ್ನವಾಗುತ್ತವೆ. ಇಷ್ಟೆಲ್ಲ ಆದರೂ ಇನ್ನೂ ವಾಯುಮಂಡಲದಲ್ಲಿರುವಾಗಲೇ ಬಹಳಷ್ಟು ಅಗ್ನಿಗೋಳಗಳು ಸಂಪೂರ್ಣವಾಗಿ ಕುದಿದು ಆವಿ, ಧೂಮಗಳ ರೂಪದಲ್ಲಿ ನಾಶವಾಗುವುವು. ಛಿದ್ರವಾದರೂ ಪೂರ್ಣವಾಗಿ ದೂಳೀಪಟವಾಗದೆ ಭೂ ಮೇಲ್ಮೈವರೆಗೆ ಪಯಣಿಸುವ ಸಾಮಥ್ರ್ಯ ಭಾರೀ ತೂಕವನ್ನುಳ್ಳ ಎಲ್ಲೋ ಕೆಲವು ಅಗ್ನಿಗೋಳಗಳಿಗೆ ಮಾತ್ರ ಉಂಟು. ಭೂ ಮೇಲ್ಮೈಯನ್ನು ಮುಟ್ಟಿದ ತರುವಾಯ ಇಂಥ ಬೃಹದಗ್ನಿಗೋಳಗಳ ಅವಶೇಷಗಳೂ ಉಲ್ಕಾಪಿಂಡಗಳೆನಿಸಿಕೊಳ್ಳುತ್ತವೆ. (ಮೀಟಿಯೊರೈಟ್ಸ್). ಉಲ್ಕಾಪಿಂಡಗಳಲ್ಲಿ ಕೊನೆಗಾಣುವ ಉಲ್ಕಾಕಲ್ಪಗಳು ವಾಯುಮಂಡಲವನ್ನು ಪ್ರವೇಶಿಸುವ ಮುನ್ನ ನೂರಾರು ಕಿಲೋಗ್ರಾಮುಗಳಿಂದ ಹಿಡಿದು ನೂರಾರು ಟನ್ನುಗಳಿಗೂ ಮೀರಿದ ತೂಕವನ್ನು ಪಡೆದಿರಬಹುದು. ಅವುಗಳ ಗಾತ್ರ ವೈವಿಧ್ಯ ಒಂದೆರಡು ಘನಮೀಟರುಗಳಿಂದ ಹಿಡಿದು ನೂರಾರು ಘನಮೀಟರುಗಳ ವರೆಗೆ ಇರಬಹುದು. ಉಲ್ಕಾಕಲ್ಪಗಳ ಗಾತ್ರಶ್ರೇಣಿಯ ಇನ್ನೊಂದು ತುದಿಯಲ್ಲಾದರೋ 0.1 ಮಿಲಿಮೀಟರಿಗಿಂತ ಕಡಿಮೆ ವ್ಯಾಸವನ್ನು 0.0001 ಮಿಲಿಗ್ರಾಮಿಗಿಂತ ಕಡಿಮೆ ತೂಕವನ್ನೂ ಹೊಂದಿರುವ ಸೂಕ್ಷಕಣಗಳೂ ಕಂಡುಬರುತ್ತವೆ. ಇಂಥ ದೂಳಿ ಉಲ್ಕಾಕಲ್ಪಗಳು ವಾಯುವಿನ ಅಣುಗಳ ಸಂಘಟನೆಗೆ ಸಿಕ್ಕಿ ತಮ್ಮ ವೇಗವನ್ನು ಕಳೆದುಕೊಳ್ಳುವಾಗ ಬೆಳಗುವುದು ಸಹ ಇಲ್ಲ. ಬಾಹ್ಯಂತರಿಕ್ಷದಲ್ಲಿ ದೂಳಿ ಉಲ್ಕಾಕಲ್ಪಗಳ ಸಂಚಾರವಿರುವುದಕ್ಕೆ ಪ್ರತ್ಯಕ್ಷವಾದ ಪ್ರಥಮ ರುಜುವಾತು ದೊರೆತದ್ದು ಅಂತರಿಕ್ಷಗಾಮಿ ರಾಕೆಟ್ಟುಗಳ ಮುಖಾಂತರವೇ. ಅದೇ ಸೂರ್ಯಾಸ್ಥಮಯದ ಬಳಿಕ ಹಾಗೂ ಸೂರ್ಯೋದಯಕ್ಕೆ ಪೂರ್ವಭಾವಿಯಾಗಿ ಆಕಾಶದಲ್ಲಿ ಕಂಡುಬರುವ ತ್ರಿಕೋಣಾಕಾರದ ರಾಶಿ ಚಕ್ರ ಪ್ರಭೆ (ಜೋóಡಿಯಾಕಲ್ ಲೈಟ್). ಭಾರಿ ಭಾರಿ ಪರ್ವತಗಳ ಉನ್ನತ ಶಿಖರಗಳ ಮೇಲೆ ಸಂಗ್ರಹವಾಗುವ ದೂಳಿದ್ರವ್ಯ ಮುಂತಾದ ಪರೋಕ್ಷ ಆಧಾರಗಳಿಂದ ರಾಕೆಟ್ ಪ್ರಯೋಗಗಳಿಗೆ ಮುಂಚೆಯೇ ಖಗೋಲ ವಿಜ್ಞಾನಿಗಳೂ ದೂಳಿ ಉಲ್ಕಾಕಲ್ಪನೆಗಳ ಇರುವಿನ ಬಗ್ಗೆ ಅರಿತಿದ್ದರು. ದೂಳಿ ಉಲ್ಕಾಕಲ್ಪಗಳು ವಾಯುಮಂಡಲದ ಮೂಲಕ ಹಾಯ್ದು ಭೂಮಿಯ ಮೇಲ್ಮೈಗೆ ಇಳಿಯಲು ಹಲವಾರು ದಿವಸಗಳ ಅವಧಿಯನ್ನು ತೆಗೆದುಕೊಳ್ಳಬಹುದು. ಪ್ರಜ್ಜ್ವಲಿಸುವ ಉಲ್ಕಾಕಲ್ಪಗಳ ಬಾಷ್ಪೀಕರಣದಿಂದ (ವೇಪರೈಸೇóಷನ್) ಉತ್ಪನ್ನವಾಗುವ ದೂಳಿನ ಕಣಗಳು ಸಹ ಇದೇ ರೀತಿ ವಾಯುಮಂಡಲದಲ್ಲಿ ಬಲು ಕಾಲ ತೇಲಾಡುತ್ತಿರುತ್ತವೆ. ವಾತವರಣದಲ್ಲಿರುವ ನೀರಾವಿ ಇಂಥ ಉಲ್ಕಾಕಲ್ಪಗಳ ಮೇಲೆ ಸುಲಭವಾಗಿ ದ್ರವೀಕೃತವಾಗಬಲ್ಲುದು. ಆದ್ದರಿಂದ ಭೂಮಿಯ ಗತ ಇತಿಹಾಸದಲ್ಲೂ ಇಂದೂ ಈ ನಮ್ಮ ಗ್ರಹದ ಮೇಲೆ ಮಳೆ ಉಂಟಾಗುತ್ತಿರುವ ಪರಿಸ್ಥಿತಿಗೆ ಉಲ್ಕಾಕಲ್ಪಗಳ ಸಲ್ಲಿಕೆ ಗಮನಾರ್ಹವಾಗಿರುವ ಸಾಧ್ಯತೆಯುಂಟು.

ಸೃಷ್ಠಿ

[ಬದಲಾಯಿಸಿ]

ಉಲ್ಕಾಕಲ್ಪಗಳ ಸೃಷ್ಟಿ ರಹಸ್ಯಕ್ಕೆ ಸೌರವ್ಯೂಹದಲ್ಲಿ ಬೇರೆ ಎರಡು ವರ್ಗಗಳಿಗೆ ಸೇರಿದ ಕಾಯಗಳೊಂದಿಗೆ ನಿಕಟಸಂಬಂಧ ಇರುವಂತೆ ಕಂಡುಬರುವುದು-ಕ್ಷುದ್ರ ಗ್ರಹಗಳು ಮತ್ತು ಧೂಮಕೇತುಗಳು. (ಆಸ್ಟಿರಾಯ್ಡ್ ಅಂಡ್ ಕಾಮೆಟ್ಸ್) ಕ್ಷುದ್ರಗ್ರಹಗಳು ದೃಢವಾದ ಘನಕಾಯಗಳು. ಅವು ಸಾಮಾನ್ಯವಾಗಿ ಮಂಗಳ ಮತ್ತು ಗುರು ಕಕ್ಷೆಗಳ ನಡುವೆ ಸೂರ್ಯಪರಿಭ್ರಮಣ ಮೂಡುತ್ತವೆ. ಈ ಕ್ಷುದ್ರಗ್ರಹಗಳ ನಡುವೆ ಪದೇ ಪದೇ ಸಂಭವಿಸಬಹುದಾದ ಸಂಘಟನೆಗಳಿಂದ ಅವು ಇನ್ನೂ ಕಿರಿದಾದ ಕಾಯಗಳಾಗಿ ಬಡೆಯುತ್ತ ಹೋಗಬಹುದು. ಉಲ್ಕಾಕಲ್ಪಗಳ ಪೈಕಿ ದೃಢರಚನೆಯ ಲಕ್ಷಣಗಳನ್ನುಳವು ಇಂಥ ಅವ್ಯಾಹತ ವಿಭಜನೆಗಳಿಂದ ಜನಿಸಿರುವ ಅತ್ಯಂತ ಕಿರಿಯ ಕ್ಷುದ್ರಗ್ರಹಗಳಿರಬಹುದು. ವಿಶಿಷ್ಟವಾಗಿ ಉಲ್ಕಾಪಾತಗಳಲ್ಲಿ ಪರ್ಯವಸಾನ ಹೊಂದುವ ಉಲ್ಕಾಕಲ್ಪಗಳನ್ನು ಈ ಎಣಿಕೆಯಲ್ಲಿ ಕಿರು ಕ್ಷುದ್ರಗ್ರಹಗಳೆಂದು ಪರಿಗಣಿಸಲು ಅಡ್ಡಿ ಇಲ್ಲ; ಉಳಿದ ಉಲ್ಕಾಕಲ್ಪಗಳ ಪೈಕಿಯೂ ಈ ಬಳಗಕ್ಕೆ ಸೇರುವಂಥವು ಸಾಕಷ್ಟಿರಬಹುದು. ಕಿರುಕ್ಷುದ್ರಗ್ರಹಗಳ ತಂಡಕ್ಕಿಂತಲೂ ಅಧಿಕ ಸಂಖ್ಯಾತವಾದ ಉಲ್ಕಾಕಲ್ಪಗಳ ಇನ್ನೊಂದು ವಂಶಕ್ಕೆ ಧೂಮಕೇತುಗಳೊಡನೆ ಬಾಂಧವ್ಯ ಇದೆ. ಧೂಮಕೇತುಗಳು ತಮ್ಮ ಕಕ್ಷಾಸಂಚಾರದಲ್ಲಿ ಸೂರ್ಯನಿಗೆ ಸಾಕಷ್ಟು ಸಮೀಪವಾಗಿ ಹಾದುಹೋದಾಗಲೆಲ್ಲ ಅಸಮನ ಗುರುತ್ವಾಕರ್ಷಣೆ ಅಧಿಕ ಉಷ್ಣತೆ ಮುಂತಾದ ಕೆಲವು ಭೌತ ಸನ್ನಿವೇಶಗಳ ಫಲಿತಾಂಶವಾಗಿ ಈ ಆಕಾಶಕಾಯಗಳಿಗೆ ಸೇರಿದ ಒಂದಷ್ಟು ದ್ರವ್ಯಭಾಗ ಇವುಗಳ ಆಂತರಿಕ ಸಂಸಕ್ತಿಯನ್ನು (ಕೊಹಿಶನ್) ಭೇದಿಸಿಕೊಂಡು ಬಾಹ್ಯಾಂತರಿಕ್ಷದಲ್ಲಿ ಚದರಿಹೋಗುವುದು. ಹೀಗೆ ಚದರುವ ದ್ರವ್ಯದಲ್ಲಿ ಅನಿಲಗಳಂಥ ಸೂಕ್ಷ್ಮ ಕಣ ಸಮುದಾಯಗಳಷ್ಟೇ ಅಲ್ಲದೆ ಚಿಕ್ಕ ಘನಕಾಯಗಳೂ ಇರಬಹುದು. ದೃಢರಚನೆಯಿಲ್ಲದ ಈ ಚಿಕ್ಕ ಘನಕಾಯಗಳೇ ಉಲ್ಕಾಕಲ್ಪಗಳ ಎರಡನೆಯ ಬಳಗದ ಘಟಕಗಳು.

ಉಲ್ಕಾಪಿಂಡಗಳು

[ಬದಲಾಯಿಸಿ]

ಮೊದಲನೆಯ ಬಳಗದ ಉಲ್ಕಾಕಲ್ಪಗಳಲ್ಲಿ ಪ್ರಧಾನವಾದವು ಉಲ್ಕಾಪಿಂಡಗಳು. ಉಲ್ಕಾಪಿಂಡವೆಂದ ಮಾತ್ರಕ್ಕೆ ಆಕಾಶದಿಂದ ಉಲ್ಕಾಕಲ್ಪವೊಂದು ಅವಿಭಕ್ತವಾಗಿ ಬಿದ್ದು ಭೂಮೇಲ್ಮೈಯಲ್ಲಿ ಬಂಡೆಯಂತೆ ಉಳಿದುಕೊಳ್ಳಬೇಕೆಂದೇನಿಲ್ಲ. ವಾಯುಮಂಡಲದಲ್ಲಿ ಉಲ್ಕಾಕಲ್ಪಗಳು ಬಹುಮಟ್ಟಿಗೆ ನಶಿಸಿಹೋಗುತ್ತವೆ. ಹಾಗೂ ಅನೇಕವೇಳೆ ಛಿದ್ರಗೊಳ್ಳುತ್ತವೆ. ಅಲ್ಲದೆ ಕೆಲವು ವೇಳೆ ಉಲ್ಕಾಕಲ್ಪವೊಂದು ಸೆಕೆಂಡಿಗೆ ನಾಲ್ಕಾರು ಕಿಲೋಮೀಟರುಗಳಷ್ಟು ಅಧಿಕ ವೇಗದಿಂದ ಭೂಮೇಲ್ಮೈಯನ್ನು ಅಪ್ಪಳಿಸಬಹುದು. ಹಾಗಾದಲ್ಲಿ ಅದರ (ಹಾಗೂ ಅದು ತಾಗಿದ ಮಣ್ಣಿನ) ಬಹಳಷ್ಟು ಬಾಗವೆಲ್ಲ ಹಠಾತ್ತನೆ ಬಾಷ್ಪೀಕೃತವಾಗಿ ಆಸ್ಫೋಟಕವೇಗದಿಂದ ಎಲ್ಲೆಡೆಗಳಿಗೂ ಚದುರಿಹೋಗುವುದು. ಇಂಥ ಆಸ್ಫೋಟನೆಗಳ ಫಲವಾಗಿ ಭೂಮಿಯ ಮೇಲೆ ದೊಡ್ಡ ದೊಡ್ಡ ಕುಳಿಗಳು (ಕ್ರೇಟರ್ಸ್) ಏರ್ಪಡಬಹುದು. ಈಶಾನ್ಯ ಅರಿಜೋನದಲ್ಲಿರುವ (ಉತ್ತರ ಅಮೆರಿಕ) ವರ್ತುಲಾಕಾರದ ಭಾರಿ ಕುಳಿಯೊಂದು ಸುಮಾರು ಹತ್ತು ಸಹಸ್ರ ವರ್ಷಗಳ ಹಿಂದೆ ಈ ರೀತಿಯಲ್ಲಿ ಜನಿಸಿರಬೇಕೆಂದು ನಂಬಲಾಗಿದೆ. ಅದರ ವ್ಯಾಸ ಒಂದೂಕಾಲು ಕಿಲೊಮೀಟರುಗಳು ಮತ್ತು ಅಂಚಿನಿಂದ ತಳಭಾಗಕ್ಕಿರುವ ಆಳ 175 ಮೀಟರುಗಳು. ಕುಳಿಯ ಅಂಚು ನೆರೆಯ ಪ್ರದೇಶದ ಸರಾಸರಿ ಭೂಮಟ್ಟದಿಂದ ಸುಮಾರು 40 ಮೀಟರುಗಳಷ್ಟು ಎತ್ತರದಲ್ಲಿದೆ. ಕುಳಿ ಹೊಸದಾಗಿ ಉತ್ಪನ್ನವಾದಾಗ ಪರಿಮಾಣಗಳು ಇನ್ನೂ ಅಧಿಕವಾಗಿದ್ದಿರವುದರಲ್ಲಿ ಸಂಶಯವಿಲ್ಲ. ಇಂಥ ಕುಳಿಗೆ ಕಾರಣಭೂತವಾದ ಉಲ್ಕಾಕಲ್ಪ ಲಕ್ಷಾಂತರ ಟನ್ನುಗಳಷ್ಟು ತೂಕದ್ದೂ ಲಕ್ಷಾಂತರ ಘನಮೀಟರುಗಳಷ್ಟು ಗಾತ್ರದ್ದೂ ಆಗಿತ್ತೆಂದು ಅಂದಾಜು ಮಾಡಲಾಗಿದೆ. ಅದೇ ಅರಿಜೋನ ಕುಳಿಯ ನೆರೆಯಲ್ಲಿ ದೊರಕಿರುವ ಉಲ್ಕಾದ್ರವ್ಯವೆಲ್ಲ ಚಿಕ್ಕ ಚಿಕ್ಕಚೂರುಗಳ ರೂಪದಲ್ಲಿದೆ. ಅವುಗಳ ಪೈಕಿ 600 ಕಿಲೋಗ್ರಾಂ ತೂಕದ್ದೇ ಅತಿ ದೊಡ್ಡದು. ಉಳಿದ ಉಲ್ಕಾದ್ರವ್ಯದ ಭಾರಿ ಬಂಡೆಯೊಂದು ಕುಳಿಯ ನೆಲದೊಳಗಡೆ ಹುದುಗಿದೆಯೆಂದು ಭಾವಿಸಲು ಸಾಕಷ್ಟು ಆಧಾರಗಳೇನಿಲ್ಲ.

ಇತಿಹಾಸದಲ್ಲಿ

[ಬದಲಾಯಿಸಿ]

ತಮ್ಮ ಮೂಲಗಾತ್ರಕ್ಕೆ ಹೋಲಿಸಿದಾಗ ಸಾಕಷ್ಟು ದೊಡ್ಡ ಅವಶೇಷಗಳನ್ನು ಭೂಮಿಯ ಮೇಲೆ ಉಳಿಸುವ ಉಲ್ಕಾಕಲ್ಪಗಳು ಸೆಕೆಂಡಿಗೆ ಒಂದು ಕಿಲೋಮೀಟರಿಗಿಂತ ಕಡಿಮೆ ಸಾಪೇಕ್ಷ ವೇಗಗಳಿಂದ ಭೂ ಮೇಲ್ಮೈಗೆ ತಾಕುತ್ತವೆ. ನೂರಾರು ಟನ್ ತೂಕದ ಈ ಬಗೆಯ ಉಲ್ಕಾಕಲ್ಪವೊಂದರ ಅವಶೇಷಗಳು ಸಿಖೋತ್-ಆಲಿನ್ ಪರ್ವತಗಳ (ಆಗ್ನೇಯ ಸೈಬೀರಿಯ, ಸೋವಿಯತ್ ರಷ್ಯ) ಪಡುವಣ ಚಾಚಿನ ಪ್ರದೇಶದಲ್ಲಿ (1947 ಫೆಬ್ರವರಿ 12ರಂದು ಬೆಳಗ್ಗೆ ಹತ್ತೂವರೆ ಗಂಟೆ ಹೊತ್ತಿಗೆ ಬಿದ್ದುವು (ಆಕಾಶದಲ್ಲಿ ಈ ಉಲ್ಕಾಪಿಂಡಕ್ಕೆ ಸಂಬಂಧಿಸಿದ ಅಗ್ನಿಗೋಳದ ಪ್ರಕಾಶ ಸೂರ್ಯನನ್ನೇ ಮೀರಿಸಿತ್ತು. ಆ ಸ್ಥಳದಲ್ಲಿ ದೊರೆತ ಅಧಿಕ ಸಂಖ್ಯೆಯ ಉಲ್ಕಾವಶೇಷಗಳ ಪೈಕಿ ಅತಿ ದೊಡ್ಡದು ಒಂದೂಮುಕ್ಕಾಲು ಟನ್ ತೂಗುತ್ತದೆ. ದಾಖಲೆಯಲ್ಲಿರುವ ಬಿಡಿ ಉಲ್ಕಾವಶೇಷಗಳ ಪೈಕಿ ಅತಿ ದೊಡ್ಡದು ನೈಋತ್ಯ ಆಫ್ರಿಕದ ಗ್ರೂಚ್ ಫಾಂಟಿನ್ ಜಿಲ್ಲೆಯಲ್ಲಿ (ಭಾಗಶಃ ನೆಲದಲ್ಲಿ ಹುದುಗಿಕೊಂಡು) ಬಿದ್ದಿದೆ: ಪಶ್ಚಿಮ ಹೋಬಾ ಎಂಬ ಹೆಸರಿನ ಈ ಉಲ್ಕಾಪಿಂಡದ ಅಂದಾಜು ತೂಕ ಐವತ್ತು ಟನ್ನುಗಳು. ಗ್ರೀನ್‍ಲೆಂಡಿನಲ್ಲಿ ಬಿದ್ದಿದ್ದ 31 ಟನ್ ತೂಕದ ಎರಡನೆಯ ಅತಿ ದೊಡ್ಡ ಉಲ್ಕಾಪಾತವನ್ನು ಇಂದು ಅಮೇರಿಕನ್ ಮ್ಯೂಸಿಯಂ-ಹೇಡೆನ್ ಪ್ಲಾನೆಟೇರಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ; ಅದರ ಹೆಸರು ಆಹ್ನಿಗಿಟೋ. ಹೋಬಾ ಮತ್ತು ಅಹ್ನಿಗಿಟೋಗಳು ಭೂಮಿಗೆ ಯಾವಾಗ ಬಿದ್ದುವೆಂಬ ಬಗ್ಗೆ ದಾಖಲೆಗಳಿಲ್ಲ.

ವರ್ಗೀಕರಣ

[ಬದಲಾಯಿಸಿ]

ಉಲ್ಕಾಪಿಂಡಗಳ ಪೈಕಿ ಮುಖ್ಯವಾಗಿ ಆಯೋಲ್ಕಗಳು ಮತ್ತು ಶಿಲೋಲ್ಕಗಳು ಎಂಬ ಎರಡು ವರ್ಗಗಳನ್ನು ಗುರುತಿಸಬಹುದು. (ಇವೆರಡು ವರ್ಗಗಳ ದ್ರವ್ಯಗಳು ಮಿಶ್ರಿತವಾಗಿರುವ ಉಲ್ಕಾಪಿಂಡ ಸಹ ಉಂಟು. ಅಯೋಲ್ಕಗಳ ದ್ರವ್ಯವೆಲ್ಲ ಬಲುಮಟ್ಟಿಗೆ ಕಬ್ಬಿಣ (80%-0-% ಭಾಗ) ಮತ್ತು ನಿಕಲ್ (5%-20% ಭಾಗ) ಲೋಹಗಳ ಮಿಶ್ರಣವಾಗಿರುತ್ತದೆ. ಮೇಲೆ ಉಲ್ಲೇಖಿಸಿರುವ ಉಲ್ಕಾಪಿಂಡಗಳೆಲ್ಲವೂ ಈ ವರ್ಗಕ್ಕೆ ಸೇರಿದವು; ಅವುಗಳ ಸಾಂದ್ರತೆ ಘನಸೆಂಟಿಮೀಟರಿಗೆ 8-9 ಗ್ರಾಂಗಳಷ್ಟು, ಶಿಲೋಲ್ಕಗಳಾದರೋ ಆಮ್ಲಜನಕ. ಸಿಲಿಕಾನ್, ಮೆಗ್ನೀಸಿಯಂ, ಕಬ್ಬಿಣ, ಅಲ್ಯುಮಿನಿಯಂ, ಕ್ಯಾಲ್ಸಿಯಂ, ಸೋಡಿಯಂ ಮುಂತಾದ ಧಾತುಗಳನ್ನೊಳಗೊಂಡಿದ್ದು ಸ್ಥೂಲವಾಗಿ ಭೂಮಿಯ ಮೇಲಿರುವ ಕಲ್ಲುಗಳನ್ನು ಹೋಲುತ್ತವೆ; ಇವುಗಳ ಸಾಂದ್ರತೆ ಘನಸೆಂಟಿಮೀಟರಿಗೆ ಗ್ರಾಂಗಳಷ್ಟು ಮಾತ್ರ. 1948ರ ಫೆಬ್ರವರಿ 18ರಂದು ನೆಬ್ರಾಸ್ಕದಲ್ಲಿ ಬಿದ್ದ ಒಂದು ಟನ್ ತೂಕದ ಭಾರಿ ಶಿಲೋಲ್ಕವನ್ನು ನವ ಮೆಕ್ಸಿಕೋ ವಿಶ್ವವಿದ್ಯಾನಿಲಯದಲ್ಲಿ ಸಂಗ್ರಹಿಸಿಡಲಾಗಿದೆ. ಉಲ್ಕಾಪಿಂಡಗಳಲ್ಲಿ ಗೋಚರಿಸುವಂಥ ಆಂತರಿಕ ರಚನಾ ವಿನ್ಯಾಸಗಳು ಅದೇ ರಾಸಾಯನಿಕ ಘಟಕಗಳೂ ಭೂಮೇಲ್ಮೈ ಬಳಿ ರೂಪಿಸಲು ಶಕ್ಯವಿರುವ ಘನಕಾಯಗಳಲ್ಲಿ ಕಂಡುಬಾರದೆ ಇರುವುದರಿಂದ ಅಯೋಲ್ಕ ಶಿಲೋಲ್ಕಗಳಿಗೂ ಭೂಮಿಯ ಮೇಲಿರುವ ಸ್ಥಳೀಯ ಶಿಲೆಗಳಗೂ ಭೇಧ ಗುರುತಿಸಲು ಸಾಧ್ಯವಾಗುವುದು. ಉಲ್ಕಾಕಲ್ಲುಗಳು ಪ್ರಾಯಶಃ ಭೂಮೇಲ್ಮೈಯಲ್ಲಿರುವುದಕ್ಕಿಂತ ದುರ್ಬಲವಾದ ಗುರುತ್ವಕ್ಷೇತ್ರದಲ್ಲಿ ರೂಪು ತಳೆದಿರಬೇಕೆಂದು ಈ ಸಂಬಂಧದಲ್ಲಿ ಕೆಲವು ವಿಜ್ಞಾನಿಗಳ ಊಹೆಯಾಗಿದೆ. ಅನೇಕ ಶಿಲೋಲ್ಕಗಳು ಕಾಂಡ್ರ್ಯೂಲುಗಳೆಂಬ ವಿವಿಧ ಖನಿಜಾಂಶಗಳನ್ನೊಳಗೊಂಡ ಪುಟ್ಟ ಪುಟ್ಟ ಗೋಳಾಕೃತಿಯ ಘಟಕಗಳಿಂದ ರಚಿತವಾಗಿವೆ. ಇಂಥ ಶಿಲೋಲ್ಕಗಳಿಗೆ ಕಾಂಡ್ರೈಟುಗಳೆಂದು ಹೆಸರು. ಕಾಂಡ್ರೈಟುಗಳ ಪೈಕಿ ಐಂಗಾಲಕ ಉಲ್ಕಾಶಿಲೆಗಳೆಂಬ (ಕಾರ್ಬನೇಶಿಯಸ್ ಮೀಟಿಯೊರೈಟ್ಸ್) ಒಂದು ಚಿಕ್ಕ ಉಪವರ್ಗವುಂಟು. ಇವುಗಳಲ್ಲಿ ಜೀವರಾಸಾಯನಿಕ ರಚನೆಗಳಿಗೆ ಮೂಲಭೂತವಾದ ಕೆಲವು ಇಂಗಾಲಯುತ ಬೃಹದಣುಗಳೂ ಪತ್ತೆಯಾಗಿರುವುದರಿಂದ ಐಂಗಾಲಿಕ ಉಲ್ಕಾಶಿಲೆಗಳೂ ವೈಜ್ಞಾನಿಕ ಕುತೂಹಲವನ್ನು ಕೆರಳಿಸಿವೆ. (ಅರ್ಧ ಕಿಲೋಗ್ರಾಂ ಅವಶೇಷ ತೂಕವಿದ್ದ ಒಂದು ಐಂಗಾಲಿಕ ಉಲ್ಕಾಶಿಲೆ ಭಾರತದ ಹರಿಪುರದಲ್ಲಿ 1921ರ ಜನವರಿ 17ರಂದು ಬಿತ್ತು.) ಅನುಕೂಲ ಸನ್ನಿವೇಶಗಳು ದೊರೆತೊಡನೆ ಜೀವವನ್ನು ಅಂಕುರಗೊಳಿಸುವಂಥ ಜೀವರಾಸಾಯನಿಕ ಅಣುಸಮುದಾಯಗಳ ಹಂಚಿಕೆ ವಿಶ್ವದಲ್ಲಿ ಸಾಕಷ್ಟು ವ್ಯಾಪಕವಾಗಿರಬಹುದಾದ ಸಾಧ್ಯತೆಯನ್ನು ಈ ಐಂಗಾಲಿಕಗಳು ಸೂಚಿಸಿವೆ. ಇಂದಿಗೂ ರಹಸ್ಯಮಯವಾಗಿ ಉಳಿದುಕೊಂಡಿರುವ ಸಹಸ್ರಾರು ಟನ್ ಮೂಲ ತೂಕದ ಒಂದು ಭಾರಿ ಉಲ್ಕಾಕಲ್ಪ ತುಂಗಷ್ಕ ನದಿಯ (ಮಧ್ಯ ಸೈಬೀರಿಯ, ರಷ್ಯ) ಅರಣ್ಯ ಪ್ರದೇಶದಲ್ಲಿ 1908ರ ಜೂನ್ 30ರಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ಬಿತ್ತು. ಅದು ಬಿದ್ದ ಸ್ಥಳ ಅದೃಷ್ಟವಶಾತ್ ನಿರ್ಜನವಾಗಿದ್ದರೂ ಹಗಲಿನಲ್ಲೇ ಗುಡುಗುತ್ತ ಕಾಣಿಸಿಕೊಂಡ ಅಗ್ನಿಗೋಳದ ಉಜ್ಜ್ವಲ ಪ್ರಕಾಶದಿಂದಲೂ ಅದು ಭೂಮಿಗೆ ಬಡಿದಾಗ ಉಂಟಾದ ಧಕ್ಕೆಯಿಂದಲೂ ನೂರಾರು ಕಿಲೊಮೀಟರ್ ದೂರದಲ್ಲಿ ವಾಸವಾಗಿದ್ದ ಸೈಬೀರಿಯದ ರೈತರು ತಲ್ಲಣಿಸಿಹೋದರು. ಜನರ ಅಂಧಶ್ರದ್ಧೆಯ ಫಲವಾಗಿ ಈ ಘಟನೆಯ ಬಗ್ಗೆ ಕೂಡಲೇ ಯಾವ ಸ್ಥಳ ಪರೀಕ್ಷೆಗಳೂ ನಡೆಯಲಿಲ್ಲ. 1927ರ ತರುವಾಯ ಈ ಉಲ್ಕಾಕಲ್ಪ ಬಿದ್ದ ಪ್ರವೇಶವನ್ನು ಅಮೂಲಾಗ್ರವಾಗಿ ಶೋಧಿಸಿದ ವಿಜ್ಞಾನಿಗಳಿಗೆ ಮಣ್ಣಿನಲ್ಲಿ ಬೆರೆತ ಉಲ್ಕಾದೂಳಿಯ ವಿನಾ ಬೇರಾವ ವಿಶೇಷಗಳೂ ದೊರಕಲಿಲ್ಲ. ಬಿದ್ದ ಉಲ್ಕಾಕಲ್ಪ ಕೂಡಲೇ ಸಂಪೂರ್ಣವಾಗಿ ಬಾಷ್ಪೀಕೃತವಾಗಿರಬೇಕೆಂದು ಇದರಿಂದ ವ್ಯಕ್ತವಾಗುವುದು. ಅಯೋಲ್ಕ ಶಿಲೋಲ್ಕಗಳಂಥ ದೃಢರಚನೆಯ ಘನಕಾಯಗಳ ಸಂಬಂಧದಲ್ಲಿ ಈ ಬಗೆಯ ಸಂಪೂರ್ಣ ಬಾಷ್ಪೀಕರಣದ ಸಾಧ್ಯತೆ ಸಂದೇಹಾಸ್ಪದವೆಂದು ಕೆಲವರ ಅಭಿಮತ; ಬದಲು ತುಂಗಷ್ಕ ಉಲ್ಕಾಕಲ್ಪ ನಿಜಕ್ಕೂ ಒಂದು ಪುಟ್ಟ ಧೂಮಕೇತುವೇ ಆಗಿರಬಹುದು. ನೀರು, ಅಮೋನಿಯ, ಮೀಥೇನ್ ಮುಂತಾದ ದ್ರವ್ಯಗಳ ಮಂಜುಗಡ್ಡೆಗಳಿಂದ ರಚಿತವಾಗಿರುವ ಧೂಮಕೇತು ಭೂಮಿಯೊಂದಿಗೆ ಸಂಘಟಿಸಿದಾಗ ಪೂರ್ಣವಾಗಿ ಬಾಷ್ಪೀಕೃತವಾಗಿ ಹೋಗುವುದು ಹೆಚ್ಚು ಸಂಭವನೀಯ. ಈ ವಾದ ನಿಜ ಸ್ಥಿತಿಯನ್ನು ಪ್ರತಿಬಿಂಬಿಸುವುದಾದರೆ ತುಂಗಷ್ಕ ಉಲ್ಕಾಕಲ್ಪವನ್ನು ಕಿರು ಕ್ಷುದ್ರ ಗ್ರಹಗಳ ಬಳಗಕ್ಕೆ ಸೇರಿಸುವಂತಿಲ್ಲ.

ಉಲ್ಕಾವೃಷ್ಟಿಗಳು ಮತ್ತು ಅನಿರ್ದಿಷ್ಟ ಉಲ್ಕೆಗಳು

[ಬದಲಾಯಿಸಿ]
Meteoroid embedded in aerogel. The meteoroid is 10 µm in diameter and its track is 1.5 mm long.
2008 TC3 meteorite fragments found on February 28, 2009, in the Nubian Desert, Sudan

ಧೂಮಕೇತು ಸಂಬಂಧವಾದ ಎರಡನೆಯ ಬಳಗದ ಉಲ್ಕಾಕಲ್ಪಗಳು ಪ್ರಾರಂಭದಲ್ಲಿ ತಮ್ಮ ತಮ್ಮ ಮಾತೃಧೂಮಕೇತುಗಳ ನೆರೆಯಲ್ಲೇ ಚಲಿಸುವುವು. ಈ ರೀತಿ ಧೂಮಕೇತುವೊಂದರಿಂದ ಪ್ರತ್ಯೇಕಗೊಂಡ ಅಪಾರ ಸಂಖ್ಯೆಯ ಉಲ್ಕಾಕಲ್ಪಗಳು ಆ ಧೂಮಕೇತುವಿನ ಕಕ್ಷೆಯ ಅಕ್ಕಪಕ್ಕಗಳಲ್ಲಿ ಕೆಲಕಾಲ ಗುಂಪಾಗಿ ಸೂರ್ಯಪರಿಭ್ರಮಣೆ ಮಾಡಬಹುದು. ಆದರೆ ಬಿಡಿಕಾಯಗಳು ಸೂರ್ಯನಿಂದ ಬೇರೆ ಬೇರೆ ದೂರಗಳಲ್ಲಿ ಬೇರೆ ಬೇರೆ ಕೋನವೇಗಗಳಿಂದ (ಆಂಗ್ಯುಲರ್ ವೆಲಾಸಿಟೀಸ್) ಚಲಿಸಬೇಕಾಗುವುದು. ಆದ್ದರಿಂದ ಮೊದಲಲ್ಲಿ ಹೆಚ್ಚು ಕಡಿಮೆ ಒಟ್ಟಾಗಿ ಚಲಿಸುತ್ತಿದ್ದ ಉಲ್ಕಾಕಲ್ಪಗಳು ಕ್ರಮೇಣ ಅವುಗಳ ಸರಾಸರಿ ಕಕ್ಷೆಯ ಎಲ್ಲ ಪ್ರದೇಶಗಳಿಗೂ ಏಕರೂಪವಾಗಿ ಹರಡಿಕೊಳ್ಳುತ್ತವೆ. ಅತ್ತ ಮಾತೃಧೂಮಕೇತುವಾದರೋ ತನ್ನ ಕಕ್ಷಾಸಂಚಾರದಲ್ಲಿ ಸೂರ್ಯನ ಬಳಿ ಹಾದುಹೋದ ಒಂದೊಂದು ಸಲವೂ ಸ್ವಲ್ಪ ಕ್ಷಯಿಸಿ ಕೆಲವು ನೂರು ಪ್ರದಕ್ಷಿಣೆಗಳು ಮುಗಿಯುವ ವೇಳೆಗೆ ನಿರ್ನಾಮವಾಗಿ ಹೋಗಬಹುದು. ಅನಂತರ ಅದರ ಕಕ್ಷೆಯ ಅಚೀಚೆಯಲ್ಲಿ ಬಿಡಿ ಉಲ್ಕಾಕಲ್ಪಗಳಷ್ಟೇ ಸಂಚರಿಸತೊಡಗುವುವು. ಹೀಗೆ ಅವುಗಳ ಜೀವಿತ ಕಾಲದಲ್ಲೂ ಆ ತರುವಾಯವೂ ಪರಸ್ಪರ ಅತಿ ಸನ್ನಿಹಿತವಾಗಿ ಕಕ್ಷೆಗಳಲ್ಲಿ ಸೂರ್ಯಪರಿಭ್ರಮಣೆ ಮಾಡುವ ಅಪಾರ ಸಂಖ್ಯೆಯ ಉಲ್ಕಾಕಲ್ಪಗಳಿಗೆ ಧೂಮಕೇತುಗಳು ಜನ್ಮ ನೀಡುತ್ತವೆ. ಇಂಥ ಸಹಚರ ಉಲ್ಕಾಕಲ್ಪಗಳ ಮೇಳಗಳಿಗೆ ಉಲ್ಕಾಪ್ರವಾಹಗಳೆಂದು (ಮೀಟಿಯರ್ ಸ್ಟ್ರೀಂ) ಹೆಸರು. ಉಲ್ಕಾಪ್ರವಾಹವೊಂದರಲ್ಲಿ ಇನ್ನೂ ಒಟ್ಟೊಟ್ಟಾಗಿ ಚಲಿಸುತ್ತಿರುವ ಉಲ್ಕಾಕಲ್ಪಗಳ ದಟ್ಟವಾದ ಗುಂಪುಗಳಿದ್ದರೆ ಅಂಥ ಗುಂಪುಗಳಿಗೆ ಉಲ್ಕಾವಳಿಗಳೆಂದು (ಮೀಟಿಯರ್ ಸ್ವಾರ್ಮ್) ಹೆಸರು. ಈಗತಾನೆ ತಿಳಿಸಿರುವಂತೆ ಉಲ್ಕಾವಳಿಗಳೂ ಕ್ರಮೇಣ ಉಲ್ಕಾಪ್ರವಾಹದುದ್ದಕ್ಕೂ ಹರಡಿ ಮಾಯವಾಗುತ್ತವೆ. ಇದಕ್ಕಿಂತಲೂ ದೀರ್ಘತರ ಕಾಲಾವಧಿಗಳಲ್ಲಿ ದೊಡ್ಡ ದೊಡ್ಡ ಗ್ರಹಗಳ ಅನಿರ್ದಿಷ್ಟ ಗುರುತ್ವಾಕರ್ಷಣೆಯ ಫಲವಾಗಿ ಉಲ್ಕಾಪ್ರವಾಹದ ಅಡ್ಡವಿಸ್ತಾರ ಸಹ ಹೆಚ್ಚಾಗುತ್ತ ಬಂದು ಪ್ರವಾಹದಲ್ಲಿದ್ದ ಉಲ್ಕಾಕಲ್ಪಗಳು ಕೊನೆಗೆ ಚದುರಿಹೋಗಬಹುದು. ಆಕಾಶದಲ್ಲಿ ಅಲ್ಲೊಂದು ಇಲ್ಲೊಂದರಂತೆ ಕಾಣಿಸಿಕೊಳ್ಳುವ ಅನಿರ್ದಿಷ್ಟ ಉಲ್ಕೆಗಳು (ಸ್ಪರೇಡಿಕ್ ಮೀಟಿಯರ್ಸ್) ಹೀಗೆ ಚಲ್ಲಾಪಿಲ್ಲಿಯಾದ ಉಲ್ಕಾಕಲ್ಪಗಳನ್ನು ಪ್ರತಿನಿಧಿಸುತ್ತವೆ.

ಉಲ್ಕಾವೃಷ್ಟಿ

[ಬದಲಾಯಿಸಿ]

ತನ್ನ ವಾರ್ಷಿಕ ಚಲನೆಯಲ್ಲಿ ಭೂಮಿ ಆಗಾಗ್ಗೆ ಕೆಲವು ಉಲ್ಕಾಪ್ರವಾಹ ಉಲ್ಕಾವಳಿಗಳ ಮುಖಾಂತರ ಹಾದು ಹೋಗುತ್ತವೆ. ಅಂಥ ಒಂದೊಂದು ಸಂದರ್ಭದಲ್ಲೂ (ಸಾಮಾನ್ಯವಾಗಿ ಕೆಲವು ದಿವಸಗಳ ಅವಧಿಯಲ್ಲಿ) ಆಯಾ ಉಲ್ಕಾಪ್ರವಾಹ ಉಲ್ಕಾವಳಿಗೆ ಸೇರಿದ ಕೋಟ್ಯನುಕೋಟಿ ಉಲ್ಕಾಕಲ್ಪಗಳು ವಾತಾವರಣದೊಂದಿಗೆ ಸಂಘಟಿಸುವುದರಿಂದ ಅಲ್ಲಿ ಎಂದಿನ ಸರಾಸರಿಗಿಂತ ಹಲವಾರು ಪಾಲು ಅಧಿಕವಾದ ದರಗಳಲ್ಲಿ ಉಲ್ಕೆಗಳುಂಟಾಗುತ್ತವೆ. ಇಂಥ ಘಟನೆಗಳಿಗೆ ಉಲ್ಕಾವೃಷ್ಟಿಗಳೆಂದು (ಮೀಟಿಯರ್ ಶವರ್ಸ್) ಹೆಸರು. ಪ್ರವಾಹದಲ್ಲಿ ಭೂಮಿಯ ಬಳಿಗೆ ಆಗಮಿಸುವ ಉಲ್ಕಾಕಲ್ಪಗಳೆಲ್ಲವೂ ಬಲುಮಟ್ಟಿಗೆ ಪರಸ್ಪರ ಸಮಾನಾಂತರವಾಗಿ ಚಲಿಸುತ್ತಿರುವುದರಿಂದ ವಾಯುಮಂಡಲದಲ್ಲಿ ಅವು ಬೆಳಗಿದಾಗ ಪ್ರಕಾಶಕ್ಕೆ ಬರುವ ಮಾರ್ಗರೇಖೆಗಳೂ ಸಮಾನಾಂತರವಾಗಿರುವುವು. ಈ ಮಾರ್ಗರೇಖೆಗಳ ದೃಗ್ವಿಕ್ಷೇಪಗಳೆಲ್ಲವೂ (ಪರ್ಸ್‍ಪೆಕ್ಟಿವ್ ಪರೊಜೆಕ್ಷನ್ಸ್) ಆಗಸದಲ್ಲಿ ಒಂದೆಡೆಯಿಂದಲೇ ಅಪಗಮಿಸಿ ಬಂದಂತೆ (ಡೈವರ್ಜ್) ನಮಗೆ ಕಾಣಿಸಿಕೊಳ್ಳುತ್ತವೆ. (ರೈಲುಕಂಬಿಗಳು ದೂರದಲ್ಲಿ ಕೂಡಿಕೊಳ್ಳುವಂತೆ ಕಾಣುವುದೂ ಇಂಥದೆ ಒಂದು ದೃಗ್ವಿಕ್ಷೇಪಜನ್ಯ ಭ್ರಾಂತಿ). ಈ ರೀತಿ ಪ್ರತಿ ಉಲ್ಕಾವೃಷ್ಟಿಗೂ ಒಂದು ಅಪಗಮನನಾಭಿ ಅಥವಾ ಮೂಲಬಿಂದುವಿರುತ್ತದೆ. ಅದರ ಹೆಸರು ಕಾಂತಿನೇಮಿ (ರೇಡಿಯೆಂಟ್). ಉದಾಹರಣೆಗೆ ವರ್ಷವರ್ಷವೂ ಹೆಚ್ಚು ಕಡಿಮೆ ಖಚಿತವಾಗಿ ಆಗಸ್ಟ್ ತಿಂಗಳ ಎರಡನೆಯ ವಾರದಲ್ಲಿ ಕಾಣಿಸಿಕೊಳ್ಳುವ ಪರ್‍ಸೀಡ್ ಉಲ್ಕಾವೃಷ್ಟಿಯ ಕಾಂತಿನೇಮಿ ಗ್ಯಾಮಪರ್ಸೀ ಎಂಬ ನಕ್ಷತ್ರದ ದಿಸೆಯಲ್ಲಿದೆ. ಅಕ್ಟೋಬರ್ ತಿಂಗಳ ಮೂರನೆಯ ವಾರಾಂತ್ಯ ನಾಲ್ಕನೆಯ ವಾರದ ಆದಿಯಲ್ಲಿ ಕಾಣಿಸುವ ಓರೈಯನಿಡ್ ವೃಷ್ಟಿಯದು ಆದ್ರ್ರಾ (ಬೆಟೆಲ್ ಜೂಸ್) ನಕ್ಷತ್ರದ ನೇರದಲ್ಲಿದೆ; ಮತ್ತು ಡಿಸೆಂಬರ್ ಎರಡನೆಯ ವಾರಾಂತ್ಯ ಮೂರನೆಯ ವಾರದ ಆದಿಯಲ್ಲಿ ಗೋಚರಿಸುವ ಜೆಮಿನಿಡ್ ವೃಷ್ಟಿಯದು ಪುನರ್ವಸು ಕ್ಯಾಸ್ಟರ್ ತಾರೆಯ ನೇರದಲ್ಲಿದೆ. ಪಕ್ವಕಾಲದಲ್ಲಿ ನೋಡಿದಾಗ ಈ ವೃಷ್ಟಿಗಳು ಒಂದೆರಡು ಮಿನಿಟುಗಳಿಗೊಂದರಂತೆ ಉಲ್ಕೆಗಳ ಮಳೆ ಸುರಿಸುತ್ತವೆ. ವೀಕ್ಷಣ ಸ್ಥಳದಲ್ಲಿ ಉಲ್ಕಾವೃಷ್ಟಿಯೊಂದು ಗೋಚರಿಸಬೇಕಿದ್ದರೆ ಅದರ ಕಾಂತಿನೇಮಿ ಕ್ಷಿತಿಜದ ಮೇಲಿದ್ದಾಗಲೆಲ್ಲ ಉಲ್ಕಾವೃಷ್ಟಿ ಪ್ರಾರಂಭವಾಗಿರಲೇಬೇಕೆಂಬ ನಿಯಮವಾಗಲೀ ಪ್ರಾರಂಭವಾಗಿದ್ದಲ್ಲಿ ಗೋಚರಿಸುವ ಉಲ್ಕೆಗಳಲ್ಲಿ ನೇಮಿಯ ಸಮೀಪದಲ್ಲೇ ಉದ್ಭವಿಸಬೇಕೆಂಬ ನಿಯಮವಾಗಲೀ ಇಲ್ಲ; ವೃಷ್ಟಿಯ ಉಲ್ಕೆಗಳು ಆಕಾಶದಲ್ಲಿ ಎಲ್ಲಿಬೇಕಾದರೂ ಬೆಳಗಾಗಬಹುದು. ನಿರ್ದಿಷ್ಟ ಉದ್ದೇಶವಿಲ್ಲದೆ ಆಕಾಶದತ್ತ ನೋಡುವ ವೀಕ್ಷಕರ ಗಮನವನ್ನು ಸೆಳೆಯಬೇಕಿದ್ದಲ್ಲಿ ಅವರ ದೃಷ್ಟಿರೇಖೆಗಳ ಆಚೀಚೆ ಪಾಶ್ರ್ವಗಳಲ್ಲಿ ಉದ್ಭವಿಸುವ ಉಲ್ಕೆಗಳು ಸಾಮಾನ್ಯವಾಗಿ ಮೂರನೆಯ ಕಾಂತಿಯ ಕ್ಷೇತ್ರಗಳಿಗಿಂತ (ಥರ್ಡ್ ಮ್ಯಾಗ್ನಿಟ್ಯೂಡ್ಸ್‍ಸ್ಟಾರ್ಸ್) ಹೆಚ್ಚು ಕಾಂತಿಯುತವಾಗಿರಬೇಕಾಗುವುದು. ಉಲ್ಕಾವೃಷ್ಟಿರಹಿತ ಅಮಾವಾಸ್ಯೆ ರಾತ್ರಿಯ ಹತ್ತು ಗಂಟೆಗಳ ಅವಧಿಯಲ್ಲಿ ಉಪಕರಣಗಳ ನೆರವಿಲ್ಲದೆ ವೀಕ್ಷಕನೊಬ್ಬ 60-70 ಇಂಥ ಉಲ್ಕೆಗಳನ್ನು ಗುರುತಿಸಬಲ್ಲ, ಅವುಗಳಲ್ಲಿ ಬಹುವೆಲ್ಲ ನಡುರಾತ್ರಿಯ ತರುವಾಯವೇ ಕಾಣಿಸಿಕೊಳ್ಳುತ್ತವೆ. ಆದರೆ ಇಡೀ ವಾಯುಮಂಡಲದ ವ್ಯಾಪ್ತಿಯೊಳಗೆ ಇದೇ ಅವಧಿಯಲ್ಲಿ ಇಷ್ಟೇ ಕಾಂತಿಯನ್ನುಳ್ಳ ಸುಮಾರು ಒಂದುಕೋಟಿ ಉಲ್ಕಾಕಲ್ಪಗಳು ಜ್ವಲಿಸಿ ಹೋಗಿರುತ್ತದೆ. ಅವುಗಳ ಪೈಕಿ ಐದಾರು ಉಲ್ಕಾಪಿಂಡಗಳಿರಬಹುದು. ದೃಷ್ಟಿ ರೇಖೆಗಳನ್ನು ಹೆಚ್ಚು ಕಡಿಮೆ ಸಂಧಿಸುವ ಉಲ್ಕೆಗಳು ಇವಕ್ಕಿಂತ ಹತ್ತಿಪ್ಪತ್ತು ಪಾಲು ಕ್ಷೀಣವಾಗಿ ಬೆಳಗಿದರೂ ವೀಕ್ಷಕರ ಗೋಚರಕ್ಕೆ ಬರುತ್ತವೆ; ದೂರದರ್ಶಕಗಳಲ್ಲಿ ಇನ್ನೂ ನೂರಾರು ಪಾಲು ಕಾಂತಿಹೀನವಾದ ಉಲ್ಕೆಗಳು ಸಹ ಕಾಣಿಸಿಕೊಳ್ಳಬಲ್ಲವು. ಈ ರೀತಿ ವಾಯುಮಂಡಲದಲ್ಲಿ ಬೆಳಗುವ ಉಲ್ಕಾಕಲ್ಪಗಳು ದಿನಂಪ್ರತಿ ಇಪ್ಪತ್ತು ಟನ್ ಹೊಸದ್ರವ್ಯವನ್ನು ಭೂಮಿಗೆ ಚೆಲ್ಲುತ್ತಿವೆ. ಬೆಳಗಾದರೆ ಆಗಮಿಸುವ ದೂಳಿ ಉಲ್ಕಾಕಲ್ಪಗಳಾದರೋ ಭೂಮಿಯ ತೂಕವನ್ನು ವರ್ಷಕ್ಕೆ ೧೫೦೦೦ ಟನ್ನುಗಳಂತೆ ಹೆಚ್ಚಿಸುತ್ತಿವೆಯೆಂದು ಅಂದಾಜು ಮಾಡಲಾಗಿದೆ.[] ಇವೆಲ್ಲವುಗಳ ಮೊತ್ತವಾಗಿ ಭೂಮಿತ್ರ್ರಿಜ್ಯ 109 ವರ್ಷಗಳಲ್ಲಿ ಸುಮಾರು ಒಂದು ಅಂಗುಲದಷ್ಟು ಹೆಚ್ಚಾಗುವುದು. ಭೂಮಿಯ ಕಕ್ಷಾವೇಗ 106 ವರ್ಷಗಳಲ್ಲಿ ಸುಮಾರು 10-3ಸೆಕೆಂಡ್ ಕಡಿಮೆಯಾಗುವುದು. ಈ ಅಂಕಿ ಅಂಶಗಳು ಭೂಮಿಯ ಅಗಾಧ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತವಷ್ಟೇ ವಿನಾ ಅಂತರಿಕ್ಷವಾಹನಗಳ ಚಲನೆಗೆ ತೀವ್ರ ಆತಂಕವನ್ನೊಡ್ಡುವಷ್ಟು ದಟ್ಟವಾದ ಉಲ್ಕಾಕಲ್ಪಗಳ ಸಂದಣಿಯೇನೂ ಬಾಹ್ಯಾಕಾಶದಲ್ಲಿಲ್ಲ. ಇಂದಿನ ಆಂತರಿಕ್ಷ ನೌಕೆಗಳು ಚಿಕ್ಕ ಪಟ್ಟ ಉಲ್ಕಾಕಲ್ಪಗಳಿಂದ ಖಗೋಲಯಾಂತರಿಕವನ್ನು ಸಮರ್ಪಕವಾಗಿ ರಕ್ಷಿಸಬಲ್ಲವು. ಸಾಕಷ್ಟು ದೊಡ್ಡ ಉಲ್ಕಾಕಲ್ಪಗಳಿಂದ ಅಪೂರ್ವವಾಗಿ ಸಂಭವಿಸಬಹುದಾದ ಹಾನಿಗಳನ್ನು ಸರಿಪಡಿಸುವ ಏರ್ಪಾಡುಗಳ ಬಗ್ಗೆ ಚಿಂತನೆ ಅಂತರಿಕ್ಷ ನಿಲ್ದಾಣಗಳಂಥ (ಸ್ಪೇಸ್ ಸ್ಟೇಶನ್ಸ್) ದೀರ್ಘಾವಧಿ ಯೋಜನೆಗಳಲ್ಲಿ ಮಾತ್ರವೇ ಅವಶ್ಯವಾಗುವುದು.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: