ಉತ್ತರಾಯಣ
೧.ಭೂಮಿಯ ಉತ್ತರ ಗೋಲಾರ್ಧದ ಅತಿ ಉದ್ದದ ದಿನ ಹಾಗೂ ಅತಿ ಸಣ್ಣ ರಾತ್ರಿ ಅಥವಾ ದಕ್ಷಿಣ ಗೋಲಾರ್ಧದ ಅತಿ ಚಿಕ್ಕ ದಿನ ಹಾಗೂ ಅತಿ ಉದ್ದದ ರಾತ್ರಿ ಪ್ರಮಾಣದ ಕಾಲವನ್ನು ಹೊಂದಿದ ದಿನ. ಭೂಮಿಯ ಮಕರಸಂಕ್ರಾಂತಿವೃತ್ತದ ಮೇಲೆ ಸೂರ್ಯನು ನೇರವಾಗಿ ಪ್ರಕಾಶಿಸಲಾರಂಭಿಸುವ ಕಾಲ; ಪ್ರತಿ ವರ್ಷ ಡಿಸೆಂಬರ್ ೨೨ರ ಸುಮಾರಿಗೆ ಉತ್ತರಾಯಣವಾಗುತ್ತದೆ. (ಬಲಗಡೆಯ ಚಿತ್ರ ಇದಕ್ಕೆ ವಿರುದ್ಧವಾದ ಜೂನ್ ೨೨ ರ ದಕ್ಷಿಣಾಯನವನ್ನು ತೋರುತ್ತಿದೆ.) ೨.ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಸಂವತ್ಸರ(ವರ್ಷ)ವನ್ನು ಸೂರ್ಯನ ಸಂಚಲನವನ್ನು ಅನುಸರಿಸಿ,ಎರಡು ಅಯನಗಳಾಗಿ ವಿಂಗಡಿಸಲಾಗಿದೆ.(೧)ಉತ್ತರಾಯಣ.(೨)ದಕ್ಷಿಣಾಯನ. ಸೂರ್ಯನು ಉತ್ತರಧ್ರುವರೇಖೆಯಲ್ಲಿ ಕಾಣಿಸುವ ಕಾಲ-ಉತ್ತರಾಯಣ. ಇದು ಹಿಂದೆ ಮಕರಸಂಕ್ರಾಂತಿಯಿಂದ ಕಟಕಸಂಕ್ರಾಂತಿಯವರೆಗೆ ಅಥವಾ ಸಾಮಾನ್ಯವಾಗಿ ಪುಷ್ಯಮಾಸದಿಂದ ಆಷಾಢಮಾಸದವರೆಗೆ ೬ ತಿಂಗಳ ಕಾಲದ ಅವಧಿಗೆ ಹೊಂದುತ್ತಿತ್ತು. ಆದರೆ, ಭೂಮಿಯ ಧ್ರುವಚಲನೆ ಅಥವಾ ವಕ್ರಾಯನದ ಪರಿಣಾಮವಾಗಿ, ಉತ್ತರಾಯಣವೂ, ಸೂರ್ಯನ ಮಕರ ಸಂಕ್ರಮಣವೂ ಈಗ ಬೇರೆ ಬೇರೆ ದಿನಗಳಂದು ನಡೆಯುತ್ತವೆ. ಆದರೂ, ಉತ್ತರಾಯಣ ಪುಣ್ಯಕಾಲವನ್ನು ಈ ಹಿಂದಿನಂತೆಯೇ ಮಕರ ಸಂಕ್ರಾಂತಿಯಂದೇ ಆಚರಿಸಲಾಗುತ್ತಿದೆ. ಉತ್ತರಾಯಣದ ೬ ತಿಂಗಳ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆಂದೂ,ಈ ಕಾಲದಲ್ಲಿ ಸಾಯುವವರು ನೇರ ಸ್ವರ್ಗಕ್ಕೆ ಹೋಗುತ್ತಾರೆಂದೂ ನಂಬಿಕೆ ಇದೆ. ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯ ಮೇಲೆ ಮಲಗಿದ್ದಾಗಲೂ,'ಇಚ್ಛಾಮರಣ'ದ ವರವನ್ನು ಪಡೆದಿದ್ದ ಕಾರಣ ಉತ್ತರಾಯಣ ಪುಣ್ಯಕಾಲ ಬರುವವರೆಗೂ ಕಾದಿದ್ದು, ಉತ್ತರಾಯಣ ಪುಣ್ಯಕಾಲ ಬಂದ ನಂತರ ದೇಹತ್ಯಾಗ ಮಾಡಿದನೆಂಬ ವಿಚಾರ ಕಾಣಸಿಗುತ್ತದೆ.
ಹಿಂದೂ ಪಂಚಾಂಗ ಮತ್ತು ನಂಬಿಕೆಗಳಲ್ಲಿ
[ಬದಲಾಯಿಸಿ]ಮಕರ ಮೊದಲಾಗಿ ಆರು ರಾಶಿಗಳಲ್ಲಿ ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುವ ಕಾಲ. ಪ್ರಾಚೀನ ಸಂಪ್ರದಾಯದ ಪ್ರಕಾರ ಇದು ಸಾಮಾನ್ಯವಾಗಿ ಜನವರಿ 13 ಅಥವಾ 14ನೆಯ ದಿವಸ ತೊಡಗಿ ಜುಲೈ 16 ಅಥವಾ 17ನೆಯ ದಿವಸ ಕೊನೆಗೊಳ್ಳುತ್ತಿತ್ತು. ಚಾಂದ್ರಮಾನದಲ್ಲಾದರೋ ಉತ್ತರಾಯಣಾರಂಭ ಪುಷ್ಯಮಾಸದಲ್ಲಿ ಮತ್ತು ಅಂತ್ಯ ಆಷಾಢಮಾಸದಲ್ಲಿ. ಶಿಶಿರ, ವಸಂತ, ಗ್ರೀಷ್ಮ ಋತುಗಳು ಉತ್ತರಾಯಣ ಕಾಲದಲ್ಲಿ ಬರುತ್ತವೆ. ಇವು ನಿರಯನ ಉತ್ತರಾಯಣದ ಪ್ರಾರಂಭ ಮತ್ತು ಮುಗಿಯುವ ಕಾಲಗಳು. ಅಯನಾಂಶದ ಕಾರಣದಿಂದ ಇದು ಕಾಲಕಾಲಕ್ಕೆ ಬದಲಾಗುತ್ತದೆ. ಆದರೂ ಸಾಯನ ಉತ್ತರಾಯಣಕಾಲ ಕರ್ಮಾಚರಣೆಗೆ ಗ್ರಾಹ್ಯವಾಗಿರುವುದಿಲ್ಲ. ಒಮ್ಮೆ ಉತ್ತರಾಯಣ ಪ್ರಾರಂಭಕಾಲ ಮಾಘಶುಕ್ಲ ಸಪ್ತಮೀ ದಿವಸ ಇದ್ದ ಕಾರಣದಿಂದ ಅಂದು ಅದರ ದ್ಯೋತಕವಾಗಿ ಸೂರ್ಯಮಂಡಲದಿಂದ ಕೂಡಿದ ರಥದಲ್ಲಿ ಭಗವಂತನನ್ನು ಸೂರ್ಯೋದಯ ಕಾಲಕ್ಕೆ ಸರಿಯಾಗಿ ರಥಾರೋಹಣ ಮಾಡಿಸುವುದು ಇಂದಿಗೂ ಆಚರಣೆಯಲ್ಲಿದೆ. ಉತ್ತರಾಯಣ ಆರಂಭ ಕಾಲದಲ್ಲಿ ವೈದಿಕರು ಸ್ನಾನ, ತರ್ಪಣ ಮೊದಲಾದುವನ್ನು ಮಾಡುವುದಿದೆ. ಸೂರ್ಯ ಅಸ್ತನಾಗುವುದಕ್ಕೆ ಸ್ವಲ್ಪಕಾಲ ಮೊದಲು ಮಕರರಾಶಿಯನ್ನು ಪ್ರವೇಶಿಸಿದರೆ ಆ ದಿವಸದಲ್ಲೂ ಸಾಯಂಕಾಲಾನಂತರ ಪ್ರವೇಶಿಸಿದರೆ ಮಾರನೆಯ ದಿವಸದ ಹಗಲಿನಲ್ಲೂ ಮಕರ ಸಂಕ್ರಮಣ ಪುಣ್ಯಕಾಲವಾಗುತ್ತದೆ. ಇದರ ಅವಧಿ ಪ್ರವೇಶಕಾಲದಿಂದ ಮುಂದೆ ಎಂಟು ಗಂಟೆಗಳವರೆಗೆ. ಕೆಲವರು ಹನ್ನೆರಡು ಗಂಟೆ ಕಾಲದವರೆಗೂ ಇರುತ್ತದೆಂದೂ ಅಭಿಪ್ರಾಯಪಡುತ್ತಾರೆ. ಇದನ್ನು ಮಕರಸಂಕ್ರಾಂತಿ ಎಂದೂ ಕರೆಯುತ್ತಾರೆ. ಈ ದಿವಸ ತಿಲದಾನ ಮಾಡುವುದು ವಿಶೇಷ. ಅದಕ್ಕಾಗಿಯೇ ಇಂದಿಗೂ ಮಕರಸಂಕ್ರಾಂತಿಯಂದು ಎಳ್ಳಿಗೆ ಬೆಲ್ಲ ಮೊದಲಾದವನ್ನು ಕೂಡಿಸಿ ಎಲ್ಲರಿಗೂ ತಿನ್ನಲು ಕೊಡುತ್ತಾರೆ. ಇಷ್ಟೇ ಅಲ್ಲ. ಸಂಕ್ರಾಂತಿ ಪೀಡಾಪರಿಹಾರಕ್ಕಾಗಿ ಸಂಜೆ ಮಕ್ಕಳನ್ನು ಹಸೆಮಣೆಯಮೇಲೆ ಕುಳ್ಳಿರಿಸಿ ಎಲಚಿಹಣ್ಣಿನೊಡನೆ ಎಳ್ಳನ್ನು ತಲೆಯಮೇಲೆ ಸುರಿಯುತ್ತಾರೆ. ಕೆಲವು ಪ್ರದೇಶಗಳಲ್ಲಿ, ಹಸುಗಳನ್ನು ತೊಳೆದು ಬಣ್ಣ ಮೊದಲಾದುವುಗಳಿಂದ ಶೃಂಗರಿಸಿ ಕಿಚ್ಚು ಹಾಯಿಸುತ್ತಾರೆ. ಸಂಕ್ರಾಂತಿ ಎಂಬುದು ಒಂದು ದೇವತೆ. ಅದಕ್ಕೆ ಎಂಟು ಬಾಹುಗಳೂ ನಾಲ್ಕು ತಲೆಗಳೂ ಇವೆಯೆಂದು ಪ್ರತೀತಿ. (ಕೆಲವರು ಮೂರು ತಲೆಗಳೆಂದೂ ಮತ್ತೆ ಕೆಲವರು ಎರಡು ತಲೆಗಳೆಂದೂ ಹೇಳುತ್ತಾರೆ.) ಈ ದೇವತೆ ಬೃಹದಾಕಾರದಿಂದ ಕೂಡಿ ನೋಡಲು ಭಯಂಕರಳಾಗಿರುತ್ತಾಳೆ. ಇವಳು ಪ್ರಪಂಚದ ಯಾವ ಭಾಗದಲ್ಲಿ ಸಂಕ್ರಾಂತಿಯಂದು ಗೋಚರಿಸುತ್ತಾಳೋ ಆ ಭಾಗಕ್ಕೆ ತೊಂದರೆಯೆಂದೂ ಇವಳ ವಾಹನ ಇವಳು ಧರಿಸಿರುವ ಪದಾರ್ಥಗಳಿಂದ ಎಲ್ಲಕ್ಕೂ ಹಾನಿಯುಂಟಾಗುತ್ತದೆಂದೂ ಶಾಸ್ತ್ರ ಹೇಳುತ್ತದೆ. ಈ ಫಲಗಳನ್ನು ಯುಗಾದಿಯ ದಿನದಂದು ಕೇಳಿ ತಿಳಿದುಕೊಳ್ಳುವ ರೂಢಿ ಇದೆ. ಉತ್ತರಾಯಣದ ಆರು ತಿಂಗಳ ಅವಧಿಯನ್ನು ದೇವತೆಗಳಿಗೆ ಒಂದು ಹಗಲಿಗೆ ಸಮಾನವೆಂದು ಜ್ಯೋತಿಶ್ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಮದುವೆ, ಮುಂಜಿ, ದೇವಪ್ರತಿಷ್ಠೆ ಮೊದಲಾದ ಕಾರ್ಯಗಳನ್ನು ವಿಶೇಷವಾಗಿ ಮಾಡಲು ಈ ಅವಧಿ ಪ್ರಶಸ್ತ ಈ ಕಾಲವನ್ನು ಅಗ್ನಿ, ಜ್ಯೋತಿಸ್ಸು, ಅಹಸ್ಸು, ಶುಕ್ಲ ಎಂದೂ ಇದರಲ್ಲಿ ಮೃತರಾದ ಯೋಗಿಗಳಿಗೆ ಪುನರಾವೃತ್ತಿ ಇಲ್ಲವೆಂದೂ ಶ್ರೀ ಭಗವದ್ಗೀತೆ ಸಾರುತ್ತಿದೆ. ಇದಕ್ಕಾಗಿಯೇ ಭೀಷ್ಮ ಯುದ್ಧದಲ್ಲಿ ಬಾಣಗಳಿಗೆ ತುತ್ತಾಗಿಬಿದ್ದರೂ ಇಚ್ಛಾಮರಣಿಯಾದ ಕಾರಣ ಪ್ರಾಣೋತ್ಕ್ರಮಣಕ್ಕಾಗಿ ಉತ್ತರಾಯಣವನ್ನೇ ನಿರೀಕ್ಷಿಸುತ್ತ ಅರ್ಜುನಕೃತ ಶರಶಯ್ಯೆಯಲ್ಲಿ ಮಲಗಿದ್ದನೆಂದು ಮಹಾಭಾರತದಲ್ಲಿದೆ.
ಖಗೋಳಶಾಸ್ತ್ರದಲ್ಲಿ
[ಬದಲಾಯಿಸಿ]ನಮಗೆ ಭಾಸವಾಗುವಂತೆ ಸೂರ್ಯ ನಮ್ಮ ಸುತ್ತಲೂ ಕ್ರಾಂತಿವೃತ್ತದ (ನೋಡಿ) ಮೇಲೆ ಒಂದು ಪರಿಭ್ರಮಣೆಯನ್ನು 365.2422 ದಿವಸಗಳಲ್ಲಿ (=1ವರ್ಷ) ಮುಗಿಸುತ್ತದೆ. ಈ ವಾರ್ಷಿಕ ಚಲನೆಯಲ್ಲಿ ಎರಡು ಸ್ಪಷ್ಟ ವಿಧಗಳಿವೆ : ಡಿಸೆಂಬರ್ 22ರಿಂದ ಜೂನ್ 21ರ ವರೆಗೆ ಉತ್ತರಾಭಿಮುಖ ಚಲನೆ, ಇದು ಉತ್ತರಾಯಣ; ಜೂನ್ 21ರಿಂದ ಡಿಸೆಂಬರ್ 22ರ ವರೆಗೆ ದಕ್ಷಿಣಾಭಿಮುಖ ಚಲನೆ, ಇದು ದಕ್ಷಿಣಾಯನ. ಡಿ. 22 ಮತ್ತು ಜೂ. 21 ಚಲನದಿಕ್ಕು ಪಲ್ಲಟವಾಗುವ ದಿವಸಗಳು. ಇವುಗಳಿಗೆ ಕ್ರಮವಾಗಿ ಉತ್ತರಾಯಣಾರಂಭ ದಿವಸ ಮತ್ತು ದಕ್ಷಿಣಾಯನಾರಂಭ ದಿವಸ ಎಂಬ ಹೆಸರುಗಳಿವೆ. ಕ್ರಾಂತಿವೃತ್ತದ ಮೇಲೆ ಸೂರ್ಯನ ಆ ದಿವಸಗಳ ಸ್ಥಾನಗಳನ್ನು ಗುರುತಿಸುವ ಬಿಂದುಗಳ ಹೆಸರು ಅಯನ ಸಂಕ್ರಾಂತಿಗಳು (ನೋಡಿ). ಇಂದಿಗೂ ವಾಡಿಕೆಯಲ್ಲಿ ಜನವರಿ 14ನ್ನು ಉತ್ತರಾಯಣ ಪುಣ್ಯಕಾಲ ಎಂದು ಅಚರಿಸುವುದಿದೆ. ಅದರೆ ವಾಸ್ತವಿಕವಾಗಿ ಇದು ಡಿಸೆಂಬರ್ 22ರಂದೇ ಸಂಭವಿಸಿರುವುದು. ಆಚರಣೆಗೂ ತತ್ಸಂಬಂಧ ಆಕಾಶಘಟನೆಗೂ ಇರುವ ಈ ದೀರ್ಘವ್ಯತ್ಯಾಸದ ಕಾರಣ ಅಯನಾಂಶ (ನೋಡಿ). ಒಂದು ಕಾಲದಲ್ಲಿ ಜನವರಿ 14ರಂದು ಸೂರ್ಯ (ಕ್ರಾಂತಿವೃತ್ತದ ಮೇಲೆ) ಇದ್ದ ಬಿಂದು ಒಂದು ಸಂಕ್ರಾಂತಿಬಿಂದುವೂ ಆಗಿತ್ತು. ಅಂದು ಆಚರಣೆ ಆಕಾಶಘಟನೆಯೊಂದಿಗೆ ಎರಕಗೊಂಡಿತ್ತು. ಅದರೆ ವಿಷುವದ್ಬಿಂದುಗಳು ಪ್ರದಕ್ಷಿಣ ದಿಶೆಯಲ್ಲಿ (ಇದು ಸೂರ್ಯನ ಚಲನೆಯ ದಿಕ್ಕಿನ ವಿರುದ್ಧವಾಗುವುದು) ಕ್ರಾಂತಿವೃತ್ತದ ಮೇಲೆ ಮಂದಗತಿಯಿಂದ ಸರಿಯುವುದರಿಂದ ಅದೇ ದಿಶೆಯಲ್ಲಿ ಮತ್ತು ಗತಿಯಲ್ಲಿ ಸಂಕ್ರಾಂತಿ ಬಿಂದುಗಳೂ ಸರಿಯುತ್ತವೆ. ಹೀಗಾಗಿ ಜನವರಿ 14ರಂದು ಸಂಭವಿಸುತ್ತಿದ್ದ ಉತ್ತರಾಯಣ ಘಟನೆ ಇಂದು ಡಿಸೆಂಬರ್ 22ರಂದೇ ಸಂಭವಿಸುತ್ತದೆ. ಎಂದರೆ ಇಂದಿನ ಆಚರಣೆ ವಾಸ್ತವಿಕತೆಯಿಂದ ದೂರವಾಗಿದೆ ಎಂದಾಯಿತು. ಸೂರ್ಯನ ಉತ್ತರ-ದಕ್ಷಿಣ ಆಂದೋಲನ ಚಲನೆಯನ್ನು ಒಂದು ಸುಲಭ ಪ್ರಯೋಗದಿಂದ ತಿಳಿಯಲು ಸಾಧ್ಯ. ಪ್ರತಿದಿವಸ ಸೂರ್ಯೋದಯ ಸೂರ್ಯಸ್ತಮಾನ ಬಿಂದುಗಳನ್ನು ಒಂದು ನಿಶ್ಚಿತ ಸ್ಥಳದಲ್ಲಿ ನಿಂತು ಗುರುತಿಸಬೇಕು. ಡಿಸೆಂಬರ್ 22ರಂದು ಈ ವೀಕ್ಷಣೆಯನ್ನು ಪ್ರಾರಂಭಿಸುತ್ತೇವೆ ಎಂದು ಭಾವಿಸೋಣ. ಉದಯಾಸ್ತಬಿಂದುಗಳು ಜೂನ್ 21ರವರೆಗೆ ಉತ್ತರದೆಡೆಗೆ ಸರಿಯುವುದನ್ನೂ ಮುಂದೆ ಡಿಸೆಂಬರ್ 22ರ ವರೆಗೆ ದಕ್ಷಿಣದೆಡೆಗೆ ಸರಿಯುವುದನ್ನೂ ಕಾಣುತ್ತೇವೆ. ಡಿ. 22ರ ಬಿಂದುಗಳಿಗಿಂತ ದಕ್ಷಿಣಕ್ಕೂ ಜೂ. 21ರ ಬಿಂದುಗಳಿಗಿಂತ ಉತ್ತರಕ್ಕೂ ಸೂರ್ಯ ಎಂದೂ ಹೋಗುವುದಿಲ್ಲ.