ಇನ್ಸುಲಿನ್
ಇನ್ಸುಲಿನ್ : ಇನ್ಸುಲಿನ್ ಲ್ಯಾಟಿನ್ ಮೂಲದ ಪದ. ಇನ್ಸುಲಾ ಎಂಬ ಪದದಿಂದ ಇನ್ಸುಲಿನ್ ಹುಟ್ಟಿಕೊಂಡಿತು. ಇನ್ಸುಲಾ ಎಂದರೆ ಐಲ್ಯಾಂಡ್ ಎಂಬ ಅರ್ಥ.[೧] ಮಾಂಸಲಿ(ಮಾಂಸಖಂಡ)ಯಲ್ಲಿ (ಪ್ಯಾಂಕ್ರಿಯಾಸ್, ಮೇದೋಜೀರಕಾಂಗ) ಇರುವ ಕೆಲವು ವಿಶೇಷ ಜೀವಕಣ ತಂಡಗಳಲ್ಲಿ ಹುಟ್ಟಿ ನೇರವಾಗಿ ರಕ್ತಕ್ಕೆ ಸೇರುವ ಒಳಸುರಿವ (ಎಂಡೊಕ್ರೈನ್) ರಸ. ಮೈಯಲ್ಲಿ ಸಕ್ಕರೆ, ಹಿಟ್ಟುಗಳ ಬಳಕೆಯನ್ನು ಹತೋಟಿಗೊಳಿಸುವುದು ಇದರ ಮುಖ್ಯ ಕೆಲಸ. ಒಂದು ಆರೋಗ್ಯವಂತ ಜೀವಿಯಲ್ಲಿ ಆಹಾರದ ಸೇವನೆ ವಿಸರ್ಜನೆಗಳ ಪ್ರಮಾಣವೆಷ್ಟೇ ಇದ್ದರೂ ರಕ್ತದಲ್ಲಿ ಸಕ್ಕರೆಯ ಮಟ್ಟ ಮಾತ್ರ ಸ್ಥಿರವಾಗಿಯೇ ಇರುವುದು. ಈ ಮಟ್ಟವನ್ನು ಏರಿಸಿದಾಗ ಮಾಂಸಲಿಯಲ್ಲಿರುವ ಲ್ಯಾಂಗರ್‍ಹಾನ್ಸನ ದೀವುಗಳು (ಐಲೆಟ್ಸ್) ಇನ್ಸುಲಿನ್ ಸುರಿಕೆಯನ್ನು ಏರಿಸುತ್ತವೆ. ಇದರಿಂದ ಸಕ್ಕರೆಯ ಉತ್ಕರ್ಷಣವಾಗಿ ಲಭಿಸುವ ಶಕ್ತಿ ಅಂಗಗಳ ಚಟುವಟಿಕೆಗಳಿಗೆ ದೊರೆಯುವುದು. ಸಿಹಿಮೂತ್ರ ರೋಗಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪನ್ನವಾಗದಿರುವುದರಿಂದ ಸೇವಿಸಿದ ಸಕ್ಕರೆ ಶಕ್ತಿಯಾಗಿ ಮಾರ್ಪಡುವುದರ ಬದಲು ರಕ್ತದಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತದೆ; ಬಳಸಲಾಗದ ಈ ಸಕ್ಕರೆ ಮೂತ್ರದಲ್ಲಿ ಹೊರಬೀಳುತ್ತದೆ.
ಸಿಹಿಮೂತ್ರ ರೋಗಿಗಳಲ್ಲಿ ಇಲ್ಲದ ಅಥವಾ ಕೊರತೆಯಾದ ಇನ್ಸುಲಿನ್ನನ್ನು ಪೂರೈಸಲು ಸಾಮಾನ್ಯವಾಗಿ ದನ, ಹಂದಿ ಇವುಗಳ ಮಾಂಸಲಿಯಿಂದ ತೆಗೆದ ಇನ್ಸುಲಿನ್ ನೆರವಾಗುತ್ತದೆ. ಆದರೂ ಸಿಹಿಮೂತ್ರ ರೋಗಕ್ಕೆ ಇದೊಂದೇ ಮದ್ದು ಎನ್ನುವಂತಿಲ್ಲ. ಈ ರೋಗ ಇಲ್ಲದಿದ್ದರೂ ಬೇರೆ ರೋಗಿಗಳಿಗೆ ಪುಷ್ಟಿಗೂಡಿಸಲೂ ಹಸಿವನ್ನು ಹೆಚ್ಚಿಸಲೂ ಇನ್ಸುಲಿನ್ನನ್ನು ಕೊಡಬಹುದು. ಇಚ್ಚಿತ್ತ (ಸ್ಕಿಜೊಫ್ರೆನಿಯ) ರೋಗಿಗಳ ಚಿಕಿತ್ಸೆಯಾಗಿ ಸೆಳವು, ಮಯಕ(ಅಮಲು) ಬರಿಸಲು ಇನ್ಸುಲಿನ್ ಬಳಕೆಯಲ್ಲಿತ್ತು. ಮದ್ಯಪಾನದ ಅಮಲನ್ನು ಬೇಗನೆ ಇಳಿಸಲು ಇನ್ಸುಲಿನ್ನಿನೊಂದಿಗೆ ದ್ರಾಕ್ಷಿ ಸಕ್ಕರೆ (ಗ್ಲೂಕೋಸ್) ಸೇರಿಸಿಕೊಡುವುದು ರೂಢಿಯಲ್ಲಿದೆ.[೨]. [೩]
ಮಾಂಸಲಿ ಒಂದು ಬಿಡಿ ಅಂಗವಾಗಿರುವ ಸಸ್ತನಿಗಳಿವೆ. ಅವುಗಳಲ್ಲಿ ಲ್ಯಾಂಗರ್ ಹ್ಯಾನ್ಸ್ ವಿವರಿಸಿದ (1869) ದೀವುಗಳೆಂದಿರುವ (ಐಲೆಟ್ಸ್) ಬೀಟ ಜೀವಕಣಗಳ ತಂಡಗಳಲ್ಲಿ ಇನ್ಸುಲಿನ್ ಸುರಿಸುವವೂ ಇವೆ. ಕೊಬ್ಬು, ಪ್ರೋಟೀನು, ಹಿಟ್ಟು ಸಕ್ಕರೆಗಳನ್ನು ಕರುಳಿನಲ್ಲೇ ಅರಗಿಸುವ ಮಾಂಸಲಿಯ ಹೊರಸುರಿದ (ಎಕ್ಸೊಕ್ರೈನ್) ರಸವನ್ನು ಸಾಗುನಾಳದ (ಡಕ್ಟ್) ಮೂಲಕ ಸಣ್ಣ ಕರುಳೊಳಕ್ಕೆ ಸುರಿಸುವ ಜೀವಕಣಗಳೇ ಮಾಂಸಲಿ ಗ್ರಂಥಿಯ ತುಂಬ, ಇನ್ನೂ ದೊಡ್ಡ ತಂಡಗಳಾದ ಗ್ರಂಥಿನರಗಳಲ್ಲಿ (ಅಸಿನೈ) ಇರುವುವು. ಕೆಲವು ಜೀವಿಗಳಿಗೆ ಮಾಂಸಲಿ ಅಂಗ ಇಲ್ಲವಾದರೂ ಕರುಳಿನ ಮುಸುಪರೆಗಳ ನಡುವೆ ಅಲ್ಲಲ್ಲಿ ದೀವುಗಳಂತೆ ಜೀವಕಣ ಗುಂಪುಗಳಾಗಿ ಹರಡಿರುತ್ತವೆ.
ಚರಿತ್ರೆ
[ಬದಲಾಯಿಸಿ]ಮಾಂಸಲಿ ಕೆಲಸಗೆಟ್ಟಿದ್ದರಿಂದ ಸಿಹಿಮೂತ್ರ ಬರಬಹುದೆಂದು ತಾಮಸ್ ಕಾಲಿ ಊಹಿಸಿದ್ದುದನ್ನು (1788). ಅದರ ಮುಂದಿನ ಶತಮಾನದಲ್ಲಿ ಲ್ಯಾಸಿರೂ ಸಮರ್ಥಿಸಿದ. ಮಾಂಸಲಿಯ ಒಂದು ಒಳಸುರಿವ ರಸದಿಂದ ಸಿಹಿಮೂತ್ರ ತಪ್ಪುವುದೆಂದು ಲೇಸಿನ್ ಸೂಚಿಸಿದ್ದನ್ನು ತಿಳಿದು ನಾಯಿಯ ಮಾಂಸಲಿಯನ್ನು ಕೊಯ್ದು ತೆಗೆದುಹಾಕಿದರೆ, ಅದು ಸಿಹಿಮೂತ್ರವನ್ನು ವಿಪರೀತವಾಗಿ ಸುರಿಸುತ್ತ ಕೊನೆಗೆ ಸಾಯುವುದನ್ನು ಜೆ. ಫಾನ್ ಮೇರಿಂಗ್, ಮಿಂಕೋವ್ಸ್‍ಕಿ ಆಸ್ಕರ್ (1889) ಮಾಡಿ ತೋರಿಸಿದರು. ಸಕ್ಕರೆ, ಹಿಟ್ಟುಗಳನ್ನು ರಕ್ತಗತವಾಗಿಸಿ ಮೈ ಶಕ್ತಿಗೂ ಬೆಳೆವಣಿಗೆಗೂ ಬಳಸುವ ಜೀವವಸ್ತುಕರಣ (ಮೆಟಬಾಲಿಸಂ) ಕೆಲಸವನ್ನು ಹತೋಟಿಗೊಳಿಸುವ ಯಾವುದೋ ಒಂದು ಚೋದನಿಕ (ಹಾರ್ಮೋನ್) ಇದರಲ್ಲಿ ಸುರಿಯುತ್ತಿರಬೇಕೆಂದು ಊಹಿಸಲು ಹೆಚ್ಚು ಕಾಲ ಹಿಡಿಯಲಿಲ್ಲ. ಮಾಂಸಲಿಯಲ್ಲಿ ಒಂದು ಒಳಸುರಿವ ರಸ ಇರಬಹುದೆಂದು ಊಹಿಸಿ ಅದಕ್ಕೆ ಇನ್ಸುಲಿನ್ ಎಂದು ಹೆಸರಿತ್ತವನು ಎಡಿನ್‍ಬರೋದ ಷಾರ್ಪಿ ಷೇಫರ್ (1910). ಈ ರಸವನ್ನು ಸಾರಕವಾಗಿ (ಎಕ್ಸ್‍ಟ್ರಾಕ್ಟ್) ಹೊರತೆಗೆಯಲು ಮಾಡಿದ 20-30 ವರ್ಷಗಳ ಯತ್ನಗಳಾವೂ ಕೈಗೂಡಲಿಲ್ಲ. ಮಾಂಸಲಿ ಗ್ರಂಥಿಯ ಬಲವಾದ ಪ್ರೋಟೀನುಲಯಕ (ಪ್ರೋಟಿಯೊ ಲಿಟಿಕ್) ಅರಗಿಸುವ ರಸದಿಂದ ಇದರಲ್ಲಿನ ಇನ್ಸುಲಿನ್ ಹಾಳಾಗಿ ಒಡೆಯುತ್ತಿತ್ತು. ಕೊನೆಗೆ ಕೆನಡಾದ ಜೆ.ಜೆ.ಆರ್. ಮೆಕ್ಲಿಯಾಡನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಫ್ರೆಡರಿಕ್ ಜೆ. ಬ್ಯಾಂಟಿಂಗ್. (ನೋಡಿ- ಬ್ಯಾಂಟಿಂಗ್,-ಫ್ರೆಡ್ರಿಕ್-ಗ್ರಾಂಟ್) ಚಾರಲ್ಸ್ ಎಚ್. ಬೆಸ್ಟ್ (ನೋಡಿ- ಬೆಸ್ಟ್,-ಚಾಲ್ರ್ಸ್-ಹರ್ಬರ್ಟ್) ಇಬ್ಬರೂ ಕೂಡಿ ಮೊದಲು ನಾಯಿಯಲ್ಲಿ ಮಾಂಸಲಿಯ ಅರಗಿಸುವ ರಸದ ಸಾಗುನಾಳವನ್ನು ಕಟ್ಟಿ ಬಿಗಿದು ಗ್ರಂಥಿಯನ್ನೇ ಹಾಳುಗೆಡಿಸಿ, ಆಮೇಲೆ ಗ್ರಂಥಿಯ ಸಾರವಿಳಿಸಿದಾಗ ಇನ್ಸುಲಿನ್ ರಸವಾಗಿ ಕೈಗೆ ಸಿಕ್ಕಿತು (1921). ಈ ವಿಧಾನದ ಶೋಧನೆ ಕಳೆದ ಶತಮಾನದ ಮಹಾವೈದ್ಯ ಶೋಧನೆಗಳಲ್ಲಿ ಒಂದು ಮೈಲಿಗಲ್ಲು.[೪]
ಮಾಂಸಲಿಯಲ್ಲಿ ಇನ್ಸುಲಿನ್ ಇರುವುದು ಈ ಪ್ರಯೋಗದಿಂದ ಖಚಿತವಾಯಿತು. ಆದರೆ ಅದನ್ನು ಚೊಕ್ಕ ರೂಪದಲ್ಲಿ ರೋಗಿಗಳ ಬಳಕೆಗಾಗಿ ಹೇರಳವಾಗಿ ಸಾರ ತೆಗೆವ ವಿಧಾನ ಗೊತ್ತಿರಲಿಲ್ಲ. ಮಾಂಸಲಿಯನ್ನು ಮದ್ಯಸಾರದಲ್ಲಿ ಕದಡಿದರೆ, ಬೇಡದ ಕಸರೆ ವಸ್ತುಗಳನ್ನು ಬಿಟ್ಟು ಇನ್ಸುಲಿನ್ ಮಾತ್ರ ಕರಗುತ್ತದೆ. ಹೀಗೆ ಮದ್ಯಸಾರದಲ್ಲಿ ಕರಗಿಸಿ ತೆಗೆದ ಕಚ್ಚಾ ಇನ್ಸುಲಿನ್ನನ್ನು ಸಿಹಿಮೂತ್ರ ರೋಗಿ ಆಗಿದ್ದ 14 ವರ್ಷಗಳ ಹುಡುಗ ಲಿಯೊನಾರ್ಡ್ ತಾಂಪ್ಸನ್ನನಿಗೆ 1922ರ ಜನವರಿ 11 ರಂದು ಮೊಟ್ಟಮೊದಲು ಚುಚ್ಚಿದರು. ಮೂತ್ರಸಕ್ಕರೆ, ರಕ್ತಸಕ್ಕರೆ ಇಳಿಯುತ್ತ ಬಂದುವು. 23ನೆಯ ತೇದಿಯಿಂದ ದಿನವೂ ಚುಚ್ಚುತ್ತ ಬಂದರು. ಹುಡುಗ ಬಲು ಗೆಲುವಾದ; ಬಲ ಬಂದಿತೆಂದ; ಚೆನ್ನಾಗಿ ಮೈ ತುಂಬಿಕೊಂಡಂತೆ ಕಂಡ. ಕೆಲವೇ ತಿಂಗಳಲ್ಲಿ ಸಾಯಲಿದ್ದವನನ್ನು ಬದುಕಿಸಿದ ಪವಾಡವದು. ಇದರಿಂದ ಟೊರೊಂಟೋ ನಗರ ಸಿಹಿಮೂತ್ರ ರೋಗಿಗಳ ಜಾತ್ರೆ ಸ್ಥಳವಾಯಿತು. ಸಿಹಿಮೂತ್ರ ರೋಗಿಗಳಿಗೆ ಅಂದಿನಿಂದ ಎಲ್ಲರಂತೆ ಬದುಕಿ ಬಾಳುವ ಕನಸು ನನಸಾಯಿತು. ಈ ಇನ್ಸುಲಿನ್ ಚುಚ್ಚಿದ ಕಡೆ ಊದಿಕೊಂಡು ಉರಿಯುತ್ತಿತ್ತು.
ಬಲವಾದ ಇರ್ತಡೆಗೂಡಿದ (ಬಫರ್ಡ್) ದ್ರಾವಣದಲ್ಲಿರುವ ಕಚ್ಚಾ ಸಾರಕಗಳಲ್ಲಿ ಸಾರವಿಳಿಸಿದ ಕ್ಷಾರವನ್ನು ಹಾಕಿ, ಹರಳು ರೂಪದ ಇನ್ಸುಲಿನ್ ಪಡೆದವನು (1926) ಅಮೆರಿಕದ ಜೆ.ಜೆ. ಅಬೆಲ್. (ನೋಡಿ- ಅಬೆಲ್,-ಜಾನ್-ಜೇಕಬ್) ಅಲ್ಲಿನ ತನಕ ಪ್ರೋಟೀನುಗಳನ್ನು ಹರಳಿನ ರೂಪದಲ್ಲಿ ಕಂಡವರೇ ಇರಲಿಲ್ಲ. ಆದ್ದರಿಂದ ಇದು ಅಪ್ಪಟ ಇನ್ಸುಲಿನ್ ಅಲ್ಲವೆಂಬ ಅನುಮಾನ ಕೆಲಕಾಲ ಇತ್ತು. ಇನ್ಸುಲಲಿನ್ ಜೊತೆಗೆ ಸುಮಾರು 0.4% ಕ್ಯಾಡ್ಮಿಯಂ, ನಿಕ್ಕಲ್, ಸುಣ್ಣ, ಕೋಬಾಲ್ಟ್ ಇಲ್ಲವೇ ಸತು (ಜಿಂಕ್) ಸಂಯೋಗವಾಗಿದ್ದಲ್ಲಿ ಹರಳುಗಳಾಗುವುದು ಸುಲಭವೆಂದೂ ಅಬೆಲ್ ತಯಾರಿಸಿದ್ದರಲ್ಲಿ ಸತು ಇರುವುದೆಂದೂ ಡಿ.ಎ. ಸ್ಕಾಟ್ (1934) ತೋರಿಸಿಕೊಟ್ಟ. ಸ್ಫಟಿಕಶಾಸ್ತ್ರದಂತೆ (ಕ್ರಿಸ್ಟಲ್ಲೋಗ್ರಫಿ), ಈ ಭಾರದ ಲೋಹಗಳು ಇನ್ಸುಲಿನ್ನಿನ ಹರಳುಗಳಲ್ಲಿ ಕಸವಾಗಿರದೆ, ಹರಳಿನ ರಾಸಾಯನಿಕ ರಚನೆಯ ಒಂದು ಭಾಗವಾಗಿದೆ. ಮುಂದೆ ಇದೇ ಮದ್ಯಸಾರದಲ್ಲಿ ತೆಗೆದ ಸಾರಕವನ್ನು ಭಾಗಾಂಶವಾಗಿ ಗಟ್ಟಿಬೀಳುವಂತೆ (ಪ್ರೆಸಿಪಿಟೇಟ್) ಮಾಡಿಯೋ ಪಿಕ್ರಿಕ್ ಆಮ್ಲದಲ್ಲಿ ಹಾಕಿದ ಮೇಲೆ ಹೈಡ್ರೊಕ್ಲೋರಿಕ್ ಆಮ್ಲ ಬೆರೆತ ಮದ್ಯಸಾರದಲ್ಲಿ ಸಾರಕವಾಗಿ ತೆಗೆದಾಗಲೋ ಇನ್ನೂ ಚೊಕ್ಕರೂಪದಲ್ಲಿ ಇನ್ಸುಲಿನ್ ಹೈಡ್ರೊಕ್ಲೋರೈಡು ಲವಣವಾಗಿ ದೊರೆಯಿತು. ಪ್ರೋಟೀನುಲಯಕ ರಸದಿಂದ ಹಾಳಾಗುವುದನ್ನು ಹೈಡ್ರೊಕ್ಲೋರಿಕ್ ಆಮ್ಲ ತಡೆಯುತ್ತದೆ.
ವಿಷಮಜ್ವರದ ಚಿಕಿತ್ಸೆಯಲ್ಲಿ ಸಲ್ಫೋನೇಮೈಡು ತೆರನ ಮದ್ದುಗಳನ್ನು ನುಂಗಿಸಿದಾಗ ರಕ್ತದ ಸಕ್ಕರೆ ಇಳಿವುದನ್ನು ಜಾನ್ಬಾನ್ ಮತ್ತು ಸಂಗಡಿಗರು (1942) ಕಂಡುಕೊಂಡರು.
ಇನ್ಸುಲಿನ್ನಿಗೆ ಪರ್‍ಫಾರ್ಮಿಕ್ ಆಮ್ಲದಿಂದ ಆಕ್ಸಿಜನ್ ಕೂಡಿಸಿ ಅದರಲ್ಲಿನ ಅಮೈನೋ ಆಮ್ಲಗಳ ಜೋಡಣೆಯ ಕ್ರಮವನ್ನೂ ಸಿಸ್ಟಿಯೀನಿನ ಡೈ ಸಲ್ಫೈಡ್ ಸೇತುಗಳು ಇರುವುದನ್ನೂ ಕೇಂಬ್ರಿಜ್ ವಿಶ್ವವಿದ್ಯಾಲಯದ ಫ್ರೆಡರಿಕ್ ಸ್ಯಾಂಗರ್ (1960) 1945 ರಿಂದ 1955ರ ತನಕ ಕಷ್ಟಪಟ್ಟು ದುಡಿದು ನಿರ್ಧರಿಸಿದ. ಡೈಸಲ್ಫೈಡ್ ಕೂಡಿಕೆಗಳ (ಡೈಸಲ್ಫೈಡ್ ಲಿಂಕೇಜಸ್) ಅಮೈನೋ ಆಮ್ಲಗಳ ಎರಡು ಸರಪಣಿಗಳು ಇನ್ಸುಲಿನ್ನಿನಲ್ಲಿವೆ. ಇವಕ್ಕೆ ಎ ಮತ್ತು ಬಿ ಭಾಗಾಂಶ ಸರಪಣಿಗಳೆಂದು ಹೆಸರಿಟ್ಟ: ಎ ಭಾಗಾಂಶ, ಗ್ಲೈಸೀನಿಂದ ಮೊದಲಾಗುವ 21 ಅಮೈನೋ ಆಮ್ಲಗಳಿರುವ ಆಮ್ಲಗುಣದ ಸರಪಣಿ; ಬಿ ಭಾಗಾಂಶ, ಅಲನೀನ್ ಕೊನೆಯಲ್ಲಿರುವ 30 ಅಮೈನೋ ಆಮ್ಲಗಳಿರುವ ದೊಡ್ಡ ಸರಪಣಿ. ಈ ಯತ್ನಗಳ ಫಲವಾಗಿ ಅಮೆರಿಕದ ಪಿಟ್ಸ್‍ಬರ್ಗ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಪಿ. ಜಿ. ಕಾಟ್ಸೊಯನ್ನಿಸ್ ಮತ್ತು ಸಂಗಡಿಗರು ಒಂದೊಂದೇ ಅಮೈನೋ ಆಮ್ಲವನ್ನು ಜೋಡಿಸುತ್ತ ಇನ್ಸುಲಿನ್ನಿನ ಎ. ಬಿ. ಭಾಗಾಂಶ ಸರಪಣಿ ಹಲಪೆಪ್ಟೈಡುಗಳು ಎರಡನ್ನೂ ಕೃತಕವಾಗಿ ತಯಾರಿಸಿದರು (1963). ಕೃತಕವಾಗಿ ಹಾಗೆ ತಯಾರಾದ ಎರಡು ಹಲ ಪೆಪ್ಟೈಡುಗಳನ್ನೂ ಒಂದುಗೂಡಿಸಿ ಪ್ರಾಣಿಯಲ್ಲಿ 15% ರಷ್ಟು ಪಟುವಾಗಿರುವ ಕುರಿಯ ಇನ್ಸುಲಿನ್ನನ್ನು ತಯಾರಿಸಿದರು. ಆದರೆ ಹೀಗೆ ಕೃತಕವಾಗಿ ತಯಾರಾಗಿ ಬರುವ ಪ್ರಮಾಣ ತೀರ ಸ್ವಲ್ಪ. ಇವರೇ ಅಲ್ಲದೆ ಕೃತಕ ತಯಾರಿಕೆಗೆ ಕಾರಣರಾದ ಇತರರು ಚೀನದ ಕುಂಗ್ ಮತ್ತು ಸಂಗಡಿಗರು, ಅಮೆರಿಕದ ಮಾಗ್ರ್ಲಿನ್, ಮೇರಿ ಫೀಲ್ಡ್, ಜರ್ಮನಿಯ ಸಾನ್ ಮತ್ತು ಸಂಗಡಿಗರು.
ಮೈಯಲ್ಲಿ ಪ್ರಭಾವ
[ಬದಲಾಯಿಸಿ]ಇನ್ಸುಲಿನ್ನಿನ ನಿಜಗೆಲಸದ ವಿಚಾರ ಪೂರ್ತಿಯಾಗಿ ಇನ್ನೂ ಗೊತ್ತಾಗಿಲ್ಲ. ಸಂಮಿಶ್ರ ಸಕ್ಕರೆಯಾದ ಮಿಗದಿಟ್ಟು (ಗ್ಲೈಕೊಜನ್), ಪ್ರೋಟೀನು, ಕೊಬ್ಬುಗಳನ್ನು ಸವೆದುಹೋಗಿರುವ ಅಂಗಾಂಶಗಳಾಗಿ, (ಟಿಷ್ಯೂಸ್) ಬದಲಿಸಲು ನೆರವಾಗಿ, ಸಕ್ಕರೆಯನ್ನು ಉರಿಸುವುದರಿಂದ ಮೈಗೆ ಶಕ್ತಿಯನ್ನು ಒದಗಿಸಿ, ಪ್ರೋಟೀನು ಕೊಬ್ಬುಗಳು ಒಡೆದು ವಿಪರೀತವಾಗಿ ಈಲಿಯಲ್ಲಿ ತಯಾರಾಗುವುದನ್ನು ಇನ್ಸುಲಿನ್ ತಡೆಯುತ್ತದೆ; ಪೊಟ್ಯಾಸಿಯಂ, ರಂಜಕಗಳ ಜೀವವಸ್ತುಕರಣದ ಹತೋಟಿಗೆ ನೆರವಾಗುವುದು.
ಈ ಕ್ರಮಗತಿಗಳ ಮೇಲಿನ ಇನ್ನಿತರ ಕೆಲವು ಚೋದನಿಕಗಳ ಕುಗ್ಗಿಸುವ ಪ್ರಭಾವಗಳನ್ನು ಇನ್ಸುಲಿನ್ ಎದುರಿಸುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಜೀವಕಣಗಳು ದ್ರಾಕ್ಷಿಸಕ್ಕರೆಯನ್ನು ಸಾಕಷ್ಟು ಒಳಸೇರಿಸಿಕೊಂಡು ಬಳಸಲು ನೆರವಾಗುವುವು.
ಮಾಂಸಲಿಯ ದೀವುಗಳ ಬೀಟ ಜೀವಕಣಗಳಲ್ಲಿ ಇನ್ಸುಲಿನ್ ತಯಾರಾಗಿ, ಮಾಂಸಲಿಯ ಧಮನಿಗಳಲ್ಲಿ ದ್ರಾಕ್ಷಿಸಕ್ಕರೆಯ ಮಟ್ಟ ಏರಿದಾಗ, ಇನ್ಸುಲಿನ್ ರಕ್ತದೊಳಕ್ಕೆ ಸೇರುತ್ತದೆ. ಮುಂದಣ ತೆಮಡಿಕ (ಆಂಟೀರಿಯರ್ ಪಿಟ್ಯುಟಿರಿ) ಗ್ರಂಥಿಯಿಂದ ಸುರಿವ ಸಿಹಿಮೂತ್ರಜನಿಕ (ಡಯಬೆಟೋಜನಿಕ್) ರಸದ ಅಂಶ ಬೀಟ ಜೀವಕಣಗಳನ್ನು ಬರಿದು ಮಾಡುವುದೆಂಬ ಅಭಿಪ್ರಾಯವೂ ಇದೆ. ರಕ್ತದಲ್ಲಿ ಸೇರಿದ ಇನ್ಸುಲಿನ್ ಈಲಿಗೆ ಹೋದಾಗ ಅದರ ಒಂದು ಪಾಲನ್ನು ಇನ್ಸುಲಿನ್‍ದೊಳೆ (ಇನ್ಸುಲಿನೇಸ್) ಬಿಡಿಯಾಗಿರುವ ಎ ಮತ್ತು ಬಿ ಭಾಗಾಂಶ ಸರಪಣಿಗಳಾಗಿ ಒಡೆದುಹಾಕುವುದು. ಇನ್ನೊಂದು ಪಾಲು ಪ್ರೋಟಿನಿನೊಂದಿಗೆ ಅಂಟಿಕೊಳ್ಳುತ್ತದೆ. ಇಲ್ಲಿಂದ ರಕ್ತದ ಮೂಲಕ ಮೈಯೆಲ್ಲ ಹರಡಿದ ಇನ್ಸುಲಿನ್ ಹಲವಾರು ಇನ್ಸುಲಿನ್ ರೋಧಕಗಳಿಗೆ ಸಿಕ್ಕಿ ಬಲಿಯಾಗುವುದು. ಇಂಥ ರೋಧಕಗಳಲ್ಲಿ, ಮುಂದಣ ತೆಮಡಿಕದ ಅಲ್ಲದೆ ಅಡ್ರಿನಲ್ ರಗಟೆಯ ಚೋದನಿಕಗಳು (ಕಾರ್ಟಿಕಲ್ ಹಾರ್ಮೋನ್ಸ್) ಮುಖ್ಯವಾದವು. ಕೊನೆಗೆ ಜೀವಕಣಗಳನ್ನು ಇನ್ಸುಲಿನ್ ತಲಪಬೇಕು. ಸಿಹಿಮೂತ್ರ ರೋಗದಲ್ಲಿ ಲೋಮನಾಳಗಳ ಒಳರಚನೆ ಕೆಟ್ಟಿರುವುದರಿಂದ ಜೀವಕಣಗಳನ್ನು ಇನ್ಸುಲಿನ್ ಸಾಕಷ್ಟು ತಲುಪದೆಂಬ ಅಭಿಪ್ರಾಯವಿದೆ. ಆರೋಗ್ಯದ ಮಾಂಸಲಿ ಒಂದರ ಬೀಟ ಜೀವಕಣಗಳಲ್ಲಿರುವ ಹರಳುಗಳಲ್ಲಿ ಒಟ್ಟು 200 ಏಕಮಾನಗಳಷ್ಟು (ಯೂನಿಟ್ಸ್) ಇನ್ಸುಲಿನ್ ಇರುತ್ತದೆ. ಆದರೆ ಮಾಂಸಲಿ ಗ್ರಂಥಿ ಪೂರ್ತಿ ಇಲ್ಲವಾದರೆ, ಒಬ್ಬನಿಗೆ ದಿನಕ್ಕೆ 30-40 ಏಕಮಾನಗಳಷ್ಟು ಸಾಕಾಗುತ್ತದೆ.
ಮಾಂಸಲಿಯನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದಾಗ, ಸಿಹಿಮೂತ್ರ ರೋಗದಿಂದ ದೀವುಗಳು ಹಾಳಾಗಿದ್ದಾಗ, ರಕ್ತದಲ್ಲಿ ಇನ್ಸುಲಿನ್ ಇಲ್ಲದಂತಾಗಿ, ದ್ರಾಕ್ಷಿ ಸಕ್ಕರೆ ಜೀವಕಣಗಳ ಬಳಕೆಗೆ ಸಿಗದಂತೆ ಆದಾಗ. ಈಲಿಯಲ್ಲಿ ಬೇಗಬೇಗನೆ ಸಕ್ಕರೆ ತಯಾರಾಗಿ ರಕ್ತಕ್ಕೆ ಸೇರುತ್ತದೆ. ರಕ್ತದಲ್ಲಿ ದ್ರಾಕ್ಷಿಸಕ್ಕರೆ ಪ್ರಮಾಣ ಬಹಳ ಹೆಚ್ಚಿಕೊಂಡು (ಸಕ್ಕರೆರಕ್ತವೇರಿಕೆ, ಹೈಪರ್‍ಗ್ಲೈಸೀಮಿಯ) ಮೂತ್ರದಲ್ಲೂ ಸಕ್ಕರೆ ಹೊರಬೀಳುತ್ತದೆ (ಸಕ್ಕರೆಮೂತ್ರ, ಗ್ಲೈಕೊಸೂರಿಯ). ಹೀಗೇ ಮುಂದುವರಿದರೆ, ಕೊಬ್ಬಿನ ಆಮ್ಲಗಳ ತಯಾರಿಕೆ ಬೇಕಿರುವುದಕ್ಕಿಂತಲೂ ಮಿಗಿಲಾಗಿ ಮಿತಿ ಮೀರಿ ಕೀಟೋನು ವಸ್ತುಗಳು (ಅಸಿಟೋನ್, ಬೀಟ ಹೈಡ್ರಾಕ್ಸಿಬೆಣ್ಣೆಯಾಮ್ಲ) ರಕ್ತ, ಅಂಗಾಂಶ, ಮೂತ್ರಗಳಲ್ಲೂ ಕಾಣಿಸಿಕೊಳ್ಳುತ್ತದೆ. ಕೊಬ್ಬಿನ ಆಮ್ಲಗಳು, ಕೆಲವೇಳೆ ಅಮೈನೊ ಆಮ್ಲಗಳೂ ಅರೆಬರೆಯಾಗಿ ಆಕ್ಸಿಜನ್ ಕೂಡುವುದರಿಂದ ಕೊಬ್ಬು, ಪ್ರೋಟೀನುಗಳಿಂದ ಈ ಕೀಟೋನು ವಸ್ತುಗಳು ತಯಾರಾಗುತ್ತವೆ. ಕೀಟೋನು ಮೂತ್ರ (ಕೀಟೋನೂರಿಯ) ಕಂಡಿತೆಂದರೆ ಪ್ರಾಣಕ್ಕೆ ಬಲು ಅಪಾಯಕರ. ಮೈಯಲ್ಲಿರುವ ಆಹಾರ ವಸ್ತುಗಳೆಲ್ಲ ಹೀಗೆ ಮುಗಿದು ಇನ್ನಿಲ್ಲದಂತಾಗಿ, ಕೀಟೋನು ವಸ್ತುಗಳಿಂದ ಬಹುಮಟ್ಟಿಗೆ ವಿಷವೇರಿ ಆಮ್ಲವಿಷತೆ (ಅಸಿಡೋಸಿಸ್) ಆಗಿ, ಮಯಕದಿಂದ (ಕೋಮ) ಕೊನೆಗೆ ರೋಗಿ ಸಾಯುವನು. ಚರ್ಮದಡಿಯೋ ರಕ್ತನಾಳದೊಳಕ್ಕೋ ಇನ್ಸುಲಿನ್ನನ್ನು ಕೂಡಲೇ ಚುಚ್ಚಿಹೊಗಿಸಿದಲ್ಲಿ ಈ ರೋಗ ಲಕ್ಷಣಗಳೆಲ್ಲ ಕಳೆಯುತ್ತವೆ. ಇನ್ಸುಲಿನ್ನನ್ನು ಹೊಟ್ಟೆಗೆ ಕೊಟ್ಟರೆ ಕರುಳಲ್ಲಿನ ಅರಗಿಸುವ ರಸಗಳಿಂದ ಇನ್ಸುಲಿನ್ ಹಾಳಾಗುತ್ತದೆ. ಚುಚ್ಚಿದ ಇನ್ಸುಲಿನ್ನಿನ ಪ್ರಭಾವ ಕೂಡ ಕೆಲವೇ ತಾಸುಗಳಿರುತ್ತದೆ. ಇದಕ್ಕಾಗಿ ಮೇಲಿಂದ ಮೇಲೆ ಚುಚ್ಚುತ್ತಲೇ ಇರಬೇಕು. ನಿಧಾನವಾಗಿ ವರ್ತಿಸುವ ಹಲವಾರು ಬಗೆಗಳ ಇನ್ಸುಲಿನ್ ಸಂಯುಕ್ತಗಳು ತಯಾರಾಗಿ ಮಾರಾಟವಾಗಿ ಬಳಕೆಯಲ್ಲಿವೆ.
ಪ್ರಾಣಿಜನ್ಯ (ಹಂದಿ, ಹಸು) ಇನ್ಸುಲಿನ್‍ಗೆ ಬದಲಾಗಿ, ಡಿಎನ್‍ಎಯ ಪುನರ್‍ಹೊಂದಾಣಿಕೆಯ (ರಿಕಾಂಬಿನೆಂಟ್) ತಾಂತ್ರಿಕತೆ ಬಳಸಿ ಸಿದ್ಧಪಡಿಸಿದ ಇನ್ಸುಲಿನ್‍ಗಳು (ಮಾನವ ಇನ್ಸುಲಿನ್) ಇಂದು ಜನಪ್ರಿಯವಾಗಿವೆ. ಆ ತಾಂತ್ರಿಕತೆಯಿಂದ ಇನ್ಸುಲಿನ್ನ್‍ನ್ನು ಹೆಚ್ಚು ಪ್ರಮಾಣದಲ್ಲಿ ಸಿದ್ಧಪಡಿಸಬಹುದಾಗಿದೆ.
ಇನ್ಸುಲಿನ್ ಆಮ್ಲವಾಗಿ ವರ್ತಿಸುವುದರಿಂದ ಪ್ರೋಟಮೀನುಗಳು, ಗ್ಲೋಬಿನ್ನೊಂದಿಗೆ ಸೇರಿಸಿದಾಗ ಲವಣಗಳಾಗಿ ತಯಾರಾಗಿವೆ. ಇವು ನೀರಲ್ಲಿ ಅಷ್ಟಾಗಿ ಕರಗದ್ದರಿಂದ ಅಪ್ಪಟ ಇನ್ಸುಲಿನ್ನಿಗಿಂತಲೂ ಹೆಚ್ಚು ಕಾಲ ಪ್ರಭಾವ ತೋರುತ್ತವೆ. ಸತು ಸಂಯೋಗ ಆದರಂತು ಇನ್ನೂ ಹೆಚ್ಚು ಹೊತ್ತು ಇದರ ಪ್ರಭಾವ ಮುಂದುವರಿಯುತ್ತದೆ.
ಇನ್ಸುಲಿನ್ ಬಗೆ
[ಬದಲಾಯಿಸಿ]ಸಾಮಾನ್ಯ ಬಳಕೆಯಲ್ಲಿ ಮುಖ್ಯವಾಗಿ ಮೂರು ಬಗೆಗಳ ಇನ್ಸುಲಿನ್ನುಗಳಿವೆ. ನಾಲ್ಕಾರು ತಾಸುಗಳ ಪ್ರಭಾವದ ಕರಗುವ, ಸರಳ, ಸಾಧಾರಣ ಇನ್ಸುಲಿನ್; 18-24 ತಾಸುಗಳ ಕಾಲ ಇನ್ನೂ ನಿಧಾನವಾಗಿ ವರ್ತಿಸುವ ಪ್ರೋಟಮೀನ್ ಸತು ಇನ್ಸುಲಿನ್; ಇವೆರಡರ ನಡುವೆ 12-16 ತಾಸುಗಳಿರುವ ಗ್ಲೋಬಿನ್ ಇನ್ಸುಲಿನ್. ಮೊದಲಿನ ಎರಡನ್ನು ಒಟ್ಟಾಗಿ ಸೇರಿಸಿಕೊಟ್ಟರೆ, ಕೂಡಲೇ ಅಲ್ಲದೆ ನಿಧಾನದ ಪ್ರಭಾವ ಎರಡನ್ನೂ ತೋರುವುದು. ಅಲ್ಲದೆ ಲೆಂಟೆ ಇನ್ಸುಲಿನ್‍ಗಳು ತಯಾರಾಗಿ ಬಂದು ಬಳಕೆಯಲ್ಲಿವೆ. ಇವುಗಳ ಹೆಚ್ಚಳಿಕೆ ಇನ್ಸುಲಿನ್ನಿಗೆ ಮತ್ತಾವ ಹೊರ ಪ್ರೋಟೀನು ವಸ್ತುವನ್ನೂ ಸೇರಿಸದಿರುವುದರಲ್ಲಿದೆ. ಇವಲ್ಲೂ ಕೂಡಲೇ ವರ್ತಿಸುವ ಮತ್ತು ನಿಧಾನವಾಗಿ ವರ್ತಿಸುವ ಎಂಬ ಎರಡು ಬಗೆಗಳಿವೆ. ಇವನ್ನು ಒಂದಕ್ಕೊಂದು ಸೇರಿಸುವ ಪ್ರಮಾಣಗಳನ್ನು ಹೆಚ್ಚುಕಡಿಮೆ ಮಾಡುವುದರಿಂದ ರೋಗಿಗೆ ಬೇಕಿರುವಷ್ಟು ಹೊತ್ತು ವರ್ತಿಸುವ ಸಂಯುಕ್ತವನ್ನು ಪಡೆಯಬಹುದು.
ಸಾಮಾನ್ಯವಾಗಿ ಆರೋಗ್ಯವಂತರ ರಕ್ತದಲ್ಲಿರುವ ದ್ರಾಕ್ಷಿಸಕ್ಕರೆಯ ಮಟ್ಟ 0.16% (100 ಮಿಲಿಲೀಟರು ರಕ್ತದಲ್ಲಿ 100 ಮಿಲಿಗ್ರಾಂ) ಇದ್ದುದು ಇನ್ಸುಲಿನ್ನನ್ನು ಚುಚ್ಚಿದಾಗ ಕೂಡಲೆ ಇಳಿದುಹೋಗುವುದು. ರಕ್ತದಲ್ಲಿನ ದ್ರಾಕ್ಷಿಸಕ್ಕರೆಯ ಮಟ್ಟ 0.04%-0.05ಗೆ ಇಳಿದರೆ ಕೆಲವು ವಿಚಿತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮನಸ್ಸು ಚಂಚಲವಾಗಿ, ಮಿದುಳು ಚೋದಗೊಂಡು ಕೊನೆಗೆ ಸೆಳವುಗಳಾಗುತ್ತವೆ. ಮಯಕ ಬಂದು ಮೈಕಾವು ಇಳಿದು ರೋಗಿ ತಣ್ಣಗಾಗುತ್ತಾನೆ. ರಕ್ತದಲ್ಲಿನ ಸಕ್ಕರೆಯ ಮಟ್ಟದ ಕುಸಿತದಿಂದಲೇ ಹೀಗೆಲ್ಲ ಆಗುವುದೆಂದು ತೋರಿಸಬಹುದು. ಒಂದಿಷ್ಟು ಕಬ್ಬುಸಕ್ಕರೆಯನ್ನು (ಸುಕ್ರೋಸ್) ನುಂಗಿಸಿಯೋ ದ್ರಾಕ್ಷಿಸಕ್ಕರೆಯನ್ನು ರಕ್ತನಾಳದಲ್ಲಿ ಚುಚ್ಚಿಹೊಗಿಸಿಯೋ ಎಂದಿನಂತಾಗಿಸಬಹುದು. ಎಲ್ಲಕ್ಕಿಂತಲೂ ಬಲವಾದದ್ದು ದ್ರಾಕ್ಷಿಸಕ್ಕರೆ.
ರಕ್ತದಲ್ಲಿರುವ ಸಕ್ಕರೆಯನ್ನು ಇಳಿಸುವ (ಹೈಪೊಗ್ಲೈಸೀಮಿಕ್) ಮತ್ತು ಬಾಯಿ ಮೂಲಕ ಸೇವಿಸುವ ಬಗೆಬಗೆಯ ಮದ್ದುಗಳು ಇರುವುವಾದರೂ ಇನ್ಸುಲಿನ್ನಿಗೆ ಬದಲಿ ಮದ್ದನ್ನು ಇನ್ನೂ ಯಾರೂ ಕಂಡುಹಿಡಿದಿಲ್ಲ. ಈ ಮದ್ದುಗಳಲ್ಲಿ ಕೆಲವು ಗ್ವಾನಿಡೀನಿಗೆ ಸಂಬಂಧಿಸಿರುವುದರಿಂದ ಈಲಿಯನ್ನು ಕೆಡಿಸುತ್ತವೆ. ರಾಸಾಯನಿಕ ರಚನೆಯಲ್ಲಿ ಸಲ್ಛೋನೇಮೈಡುಗಳನ್ನು ಹೋಲುವ ಮದ್ದುಗಳಲ್ಲಿ ಒಂದಾದ ಟೋಲ್ಬುಟೇ ಮೈಡನ್ನು ಸಿಹಿಮೂತ್ರ ರೋಗ ಅಷ್ಟಾಗಿ ಜೋರಾಗಿಲ್ಲದವರಿಗೆ ಕೊಡಬಹುದು. ಮೈಗೆ ಇದು ಹೊರ ವಸ್ತುವಾದ್ದರಿಂದ ವರ್ಷಗಟ್ಟಲೆ ಇದನ್ನು ಸೇವಿಸುವಾಗ ಕೆಡುಕಾಗದಂತೆ ಹುಷಾರಾಗಿರಬೇಕು. ಬಾಯಲ್ಲಿ ಸೇವಿಸುವ ಈ ಮದ್ದುಗಳನ್ನು ಬಳಸಬೇಕಾದರೆ ರೋಗಿಯ ಮಾಂಸಲಿಯಲ್ಲಿಕ ತುಸುವಾದರೂ ಇನ್ಸುಲಿನ್ ಸುರಿಯುತ್ತಿರಬೇಕು. ಇಲ್ಲವೇ ಜೊತೆಗೆ ಇನ್ಸುಲಿನ್ ಚುಚ್ಚುತ್ತಿರಬೇಕು. ಮಕ್ಕಳಲ್ಲಿ ಸಿಹಿಮೂತ್ರವಿದ್ದರೂ ದೊಡ್ಡವರಲ್ಲಿ ಆಮ್ಲವಿಷತೆಯೋ ಮಯಕವೋ ಆಗಿದ್ದರೂ, ಈ ಮದ್ದಿನ ಮಾತ್ರೆಗಳು ಕೆಲಸಕ್ಕೆ ಬಾರವು. ಕೇವಲ ಆಹಾರ ಪಥ್ಯಗಳಿಂದ ಮೂತ್ರ ಸಕ್ಕರೆ ತಗ್ಗಬಹುದಾದ. 10 ವರ್ಷಗಳಿಂದೀಚೆಗೆ ರೋಗ ಇರುವುದು ತೋರಿರುವ, ವಯಸ್ಸಾದ ರೋಗಿಗಳಿಗೆ ಮಾತ್ರ ಮಾತ್ರೆಗಳ ಮದ್ದು ಒಳ್ಳೆಯದು.
ಮತ್ತೆ ಮತ್ತೆ ತೆಗೆದು ಚುಚ್ಚಲು ಅನುವಾಗುವ ದ್ರಾವಣವಾಗಿ ಇನ್ಸುಲಿನ್ ಸಣ್ಣ ಸೀಸೆಗಳಲ್ಲಿ ದೊರೆಯುವುದು. ಇದು ಜೀವಿಮಡಿ (ಸ್ಟರೈಲ್) ಆಗಿರುವುದಲ್ಲದೆ ಆಮ್ಲದಲ್ಲಿ ಇರುವುದರಿಂದ ಕೆಡದಂತಿರುವುದು. ಈ ಚುಚ್ಚುಗೆಯ ದ್ರಾವಣದ ಒಂದು ಮಿಲಿಲೀಟರಲ್ಲಿ 20, 40 ಇಲ್ಲವೇ 80 ಇನ್ಸುಲಿನ್ ಏಕಮಾನಗಳಿರುತ್ತವೆ. ಈ ಒಂದಕ್ಕೊಂದು ಅದಲುಬದಲಾದರೆ ಬಲು ತೊಂದರೆ ಅಗುವುದರಿಂದ ಇವುಗಳ ಮೇಲೆ ಗೊತ್ತಾದ ಬಣ್ಣಗಳನ್ನು ಎದ್ದುಕಾಣುವಂತೆ ಅಚ್ಚುಹಾಕಿರುತ್ತದೆ.
ಇನ್ಸುಲಿನ್ ಬಳಕೆ
[ಬದಲಾಯಿಸಿ]ಇನ್ಸುಲಿನ್ನಿನ ಪ್ರಮಾಣ, ಬಲಗಳನ್ನು ಕಂಡುಕೊಳ್ಳಲು ಜೀವವೈಜ್ಞಾನಿಕ ವಿಧಾನಗಳಿವೆ. ಮೊಲಗಳಿಗೆ ಇನ್ಸುಲಿನ್ ಚುಚ್ಚಿ. ಆದರೆ ರಕ್ತದಲ್ಲಿನ ಸಕ್ಕರೆ ಇಳಿದ ರೀತಿಯನ್ನು ಗುರುತಿಸುವುದರಿಂದ ನಿರ್ಧರಿಸಬಹುದು. ಇನ್ಸುಲಿನ್ನನ್ನು ತೂಕಕ್ಕಿಂತಲೂ ಏಕಮಾನಗಳಲ್ಲಿ ಅಳೆವುದೇ ರೂಢಿ. ಅನುಕೂಲ. ನಾಲ್ಕೈದು ತಾಸುಗಳು ಬರಿಯ ಹೊಟ್ಟೆಯಲ್ಲಿರುವ 2 ಕಿಲೊಗ್ರಾಂಗಳ ತೂಕದ ಮೊಲಕ್ಕೆ ಚರ್ಮದಡಿ ಚುಚ್ಚಿದರೆ ಅದರ ರಕ್ತದಲ್ಲಿನ ಸಕ್ಕರೆಯನ್ನು ಐದು ತಾಸುಗಳ ಹೊತ್ತು ಸೆಳವು ಬರಿಸುತ್ತಿರುವ ಮಟ್ಟದಲ್ಲಿ (0.45%) ಇರಿಸಲು ಬೇಕಾಗುವಷ್ಟು ಇನ್ಸುಲಿನ್ ಒಂದು ಏಕಮಾನ. ಒಂದು ಮಿಲಿಗ್ರಾಂ ತೂಕದಲ್ಲಿ 24 ಏಕಮಾನಗಳಿರುತ್ತವೆ. ಪ್ರಪಂಚದಲ್ಲಿ ಎಲ್ಲ ನಾಡುಗಳಲ್ಲೂ ಒಂದೇ ಅಳತೆ ಇರಬೇಕೆಂದೂ ಈ ಅಂತರರಾಷ್ಟ್ರೀಯ ಏಕಮಾನವನ್ನು ನಿರ್ಧರಿಸಿ ಒಣಗಿಸಿದ ಅಚ್ಚ ಇನ್ಸುಲಿನ್ನನ್ನು ಲಂಡನ್, ಪ್ಯಾರಿಸ್ ಇತ್ಯಾದಿ ಕೆಲೆವೆಡೆಗಳಲ್ಲಿ ಜೋಪಾನವಾಗಿ ಇರಿಸಿದ್ದಾರೆ. ಇನ್ನೂ ಚೊಕ್ಕವಾದ ಇನ್ಸುಲಿನ್ ದೊರೆತಾಗ ಕಚ್ಚಾ ಇನ್ಸುಲಿನ್ ಬದಲಾಗಿ ಇರಿಸಲಾಯಿತು. ತನಿಖೆಯ ಪ್ರಯೋಗಾಲಯಗಳವರು(ಟೆಸ್ಟಿಂಗ್ ಲ್ಯಾಬೊರೇಟರೀಸ್) ತಮ್ಮದೇ ಶಿಷ್ಟಮಾನಗಳನ್ನು (ಸ್ಟ್ಯಾಂಡರ್ಡ್ ಯೂನಿಟ್ಸ್) ಇಟ್ಟುಕೊಂಡಿದ್ದು ಆಗಿಂದಾಗ್ಗೆ ಅಂತರರಾಷ್ಟ್ರೀಯ ಮಾನದೊಂದಿಗೆ ತಾಳೆನೋಡಿಕೊಳ್ಳುವರು ಸಿಹಿಮೂತ್ರ ರೋಗಿಗಳು ಪ್ರಪಂಚದಲ್ಲಿ ಎಲ್ಲಿ ಹೋದರೂ ಒಂದೇ ಪ್ರಮಾಣದ ಇನ್ಸುಲಿನ್ ದೊರೆವಂತಾಗುವುದೇ ಇದರ ಮುಖ್ಯ ಉದ್ದೇಶ.
ರಾಸಾಯನಿಕ ರಚನೆ
[ಬದಲಾಯಿಸಿ]ಇನ್ಸುಲಿನ್ನಿನ ಮಹತ್ತಮ ಅಣುತೂಕ ಸುಮಾರು 5,700. ಕ್ಷಾರಾಮ್ಲಾಂಕ (ಠಿಊ) 5-4ರಲ್ಲಿ ಇನ್ಸುಲಿನ್ ಸಮವಿದ್ಯುತ್ತಿನಲ್ಲಿ (ಐಸೊ ಎಲೆಕ್ಟ್ರಿಕ್) ಇರುವುದು. ಇನ್ಸುಲಿನ್ ಆಮ್ಲವಾಗಿರುವುದರಿಂದ ಕ್ಷಾರಗಳೊಂದಿಗೆ ಸಂಯೋಗವಾಗಿ ಲವಣಗಳಾಗುತ್ತವೆ. ಇನ್ಸುಲಿನ್ ಅಣುವಿಗೂ ಅದರ ಅಣ್ವಂಶಗಳಿಗೂ ಅದರ ನಿಜಗೆಲಸಕ್ಕೂ ಸಂಬಂಧ ಕಲ್ಪಿಸುವ ಯತ್ನಗಳಾಗಿವೆ. ಇದಕ್ಕಾಗಿ ಪ್ರೋಟೀನಾಗಿರುವ ಇನ್ಸುಲಿನ್ ಬಲುಚೊಕ್ಕ ರೂಪದಲ್ಲಿ ಇರಬೇಕು. ಕೇವಲ ಹರಳಿನ ರೂಪದಲ್ಲಿ ಇದ್ದ ಮಾತ್ರಕ್ಕೆ ಚೊಕ್ಕವಾಗಿದೆ ಎನ್ನುವಂತಿಲ್ಲ. ಇದಕ್ಕಾಗಿ ಅದನ್ನು ಕಟ್ಟುನಿಟ್ಟಾದ ಭೌತರಸಾಯನಿಕ, ರಾಸಾಯನಿಕ, ಜೀವವೈಜ್ಞಾನಿಕ ತನಿಖೆಗಳಿಗೆ ಒಳಪಡಿಸಬೇಕು. ರಕ್ತದಲ್ಲಿ ಇನ್ಸುಲಿನ್ ಒಂದು ಪಾಲು ಪ್ರೋಟೀನಿಗೆ ಅಂಟಿಕೊಂಡು ಇರುವುದು. ಪ್ರೋಟೀನಾಗಿರುವ ಇನ್ಸುಲಿನ್ನಿನ ನಿಜಗೆಲಸಕ್ಕೆ ಎರಡು ಹಲಪೆಪ್ಟೈಡು ಸರಪಳಿಗಳು ಇದ್ದೇ ತೀರಬೇಕು. ಎ ಭಾಗಾಂಶದ ಸರಪಣಿಯಲ್ಲಿ ಗ್ಲೈಸೀನಿಂದ ಆರಂಭವಾಗಿ 21 ಅಮೈನೋ ಆಮ್ಲಗಳಿವೆ. ಬಿ ಭಾಗಾಂಶದ ಸರಪಳಿ ಫಿನೈಲ್ ಅಲನೀನಿಂದ ಮೊದಲಾಗಿ 30 ಅಮೈನೋ ಆಮ್ಲಗಳಿವೆ. ಎರಡು ಡೈಸಲ್ಛೈಡ್ ಕೂಡಿಕೆಗಳು ಇರುವುದೊಂದು ವಿಶೇಷ. ಈ ಕೂಡಿಕೆಗಳು ಒಡೆದರೆ ಇನ್ಸುಲಿನ್ ಕೆಲಸ ಕೆಡುತ್ತದೆ. ಆದರೂ ಇನ್ಸುಲಿನ್ನಿನಲ್ಲಿರುವ ಎಷ್ಟೋ ಅಮೈನೋ ಆಮ್ಲಗಳು ಬೇಕೇಬೇಕಿರುವಂತೆ ಕಾಣವುದು. ಎ ಭಾಗಾಂಶದ ಸರಪಳಿಯ ಡೈಸಲ್ಛೈಡ್ ಸುತ್ತಿನಲ್ಲಿರುವ ಅಮೈನೊ ಆಮ್ಲಗಳು ಒಂದೊಂದು ಪ್ರಾಣಿಯಲ್ಲೂ ಬೇರೆ ಬೇರೆ ಇರುವುದೇ ಇದರ ಉದಾಹರಣೆ. ಹಾಗೆ ಬಿ ಭಾಗಾಂಶದ ಸರಪಣಿಯ ಕೊನೆಯಲ್ಲಿರುವ ಅಲನೀನನ್ನು ತೆಗೆದರೂ ಇನ್ಸುಲಿನ್ ಪ್ರಭಾವ ಏನೂ ವ್ಯತ್ಯಾಸವಾಗದು. ಕೊನೆಯ ಎಂಟು ಅಮೈನೋ ಆಮ್ಲಗಳನ್ನು ತೆಗೆದುಹಾಕಿದರೆ, ಕೇವಲ 15% ರಷ್ಟು ಪ್ರಭಾವ ಕುಗ್ಗುತ್ತದೆ. ಆದರೆ ಕರುಳಲ್ಲಿ ಸುರಿಬೀಳುವ (ಟ್ರಿಪ್ಸಿನ್) ತೆರೆನ ರಸದಿಂದ ಇನ್ಸುಲಿನ್ನಿನ ಅಮೈನೋ ಆಮ್ಲಗಳ ಒಂದೆರಡು ಕೊಂಡಿಗಳು ಕಳಚಿದರೂ ಇನ್ಸುಲಿನ್ ಪ್ರಭಾವ ಪೂರ್ತಿ ಕಳೆಯುತ್ತದೆ. ಒಡೆದು ಬಿದ್ದ ಭಾಗಾಂಶಗಳು ರಕ್ತ ಸಕ್ಕರೆಯ ಮಟ್ಟ ಇಳಿಸವು. ಉಳಿದ ಪ್ರೋಟೀನುಗಳಲ್ಲಿ ಇರುವ ಹಾಗೆ, ಇಲ್ಲಿ ಮುಖ್ಯವಾಗಿ `ಚಟುವಟಿಕೆಯ ಕೇಂದ್ರ ಯಾವ ಅಮೈನೋ ಆಮ್ಲದಲ್ಲಿ ಇದೆಯೆಂದು ಗೊತ್ತಾಗಿಲ್ಲ. ಇನ್ಸುಲಿನ್ ಅಣುವಿನಲ್ಲಿ ಇತರ ಅಮೈನೋ ಆಮ್ಲಗಳೊಂದಿಗೆ ಮುಖ್ಯವಾಗಿ ಟೈರೋಸೀನ್, ಸಿಸ್ಟೀನ್, ಗ್ಲುಟೇಮಿಕ್ ಆಮ್ಲ. ಲ್ಯೂಸೀನ್, ಅರ್ಜಿನೀನ್, ಲೈಸೀನುಗಳಿರುವುವು. ಟ್ರಿಪ್ಟೊಫೇನ್ ಇಲ್ಲ. ಇವಲ್ಲಿ ಮೊದಲ ಮೂರರ ವಿಶಿಷ್ಟ ಜೋಡಣೆಯೇ ಇದರ ಪ್ರಭಾವಕ್ಕೆ ಮುಖ್ಯ ಕಾರಣ
ಬೇರೆ ಬೇರೆ ಪ್ರಾಣಿಗಳ ಇನ್ಸುಲಿನ್ ಅಣುವಿನ ರಚನೆಯಲ್ಲಿ ಎ ಭಾಗಾಂಶ ಸರಪಣಿಯಲ್ಲಿ ಮೂರು (8, 9, 10) ಅಮೈನೋ ಆಮ್ಲಗಳೂ ಬಿ ಭಾಗಾಂಶ ಸರಪಣಿಯಲ್ಲಿ ಕೊನೆಯ (30) ಅಮೈನೊ ಆಮ್ಲವೂ ಬೇರೆ ಬೇರೆ ಆಗಿರುವುವು.
ಎ-8 ಎ-9 ಎ-10 ಬಿ-30
ಮಾನವ ತ್ರಿಯೊ ಸೆರೀ ಐಲ್ಯೂ ತ್ರಿಯೊ
ಹಂದಿ ತ್ರಿಯೊ ಸೆರೀ ಐಲ್ಯೂ ಅಲ
ದನ ಅಲ ಸೆರೀ ವ್ಯಾ ಅಲ
ಕುರಿ ಅಲ ಗ್ಲೂ ವ್ಯಾ ಅಲ
ಕುದುರೆ ತ್ರಿಯೊ U್ವ್ಲೈ ಐಲ್ಯೂ ಅಲ
ತಿಮಿಂಗಿಲ ತ್ರಿಯೊ ಸೆರೀ ಐಲ್ಯೂ ಅಲ
ನಾಯಿ ತ್ರಿಯೊ ಸೆರೀ ಐಲ್ಯೂ ಅಲ
ಮೊಲ ತ್ರಿಯೊ ಸೆರೀ ಐಲ್ಯೂ ಸೆರೀ
ಕಾಡ್ ಮೀನಿಯಲ್ಲಿ ತಯಾರಾಗುವ ಇನ್ಸುಲಿನ್ನಿಗೂ ಇದೇ ಪ್ರಭಾವ ಇದ್ದರೂ ಅದರ ರಚನೆಯೇ ಬೇರೆ. ಆದ್ದರಿಂದ ಇನ್ಸುಲಿನ್ ಪ್ರಭಾವ ಪೂರ್ತಿ ಚೆನ್ನಾಗಿರಲು ಅದರ ಒಟ್ಟಾರೆ ಆಕಾರ ಮುಖ್ಯ ಎಂದಂತಾಯಿತು. ಮಾರಾಟಕ್ಕೆ ಈ ಮೊದಲು ಬರುತ್ತಿದ್ದ ಇನ್ಸುಲಿನ್ನುಗಳೆಲ್ಲ ದನ. ಹಂದಿಗಳಿಂದ ತಯಾರಾದವು. ಯಾವ ಪ್ರಾಣಿಯಿಂದಲೇ ಬಂದಿರಲಿ ಇನ್ಸುಲಿನ್ ನಿಜಗೆಲಸಗಳು ಒಂದೇ ತೆರನಾಗಿವೆ. ಇನ್ಸುಲಿನ್ ಅಣುವಿನ ರೋಧಜನಕ (ಆಂಟಿಜನ್) ನಿರ್ಧಾರಕ (ಡಿಟರ್ಮೀನೆಂಟ್) ಎ ಭಾಗಾಂಶ ಸರಪಣಿಯ 8, 9, 10 ನೆಯ ಜಾಗಗಳ ಅಮೈನೋ ಆಮ್ಲಗಳಲ್ಲಿ ಇರುವುದೆಂಬ ಒಂದು ಸೂಚನೆ ಇದೆ. ಇದು ನಿಜವಾದರೆ ದನದ ಇನ್ಸುಲಿನ್ನಿಗಿಂತಲೂ ಹಂದಿಯಿಂದ ತಯಾರಾದ ಇನ್ಸುಲಿನ್ನೇ ಮಾನವ ರೋಗಿಗೆ ಚೆನ್ನಾಗಿ ಒಗ್ಗುವುದು ಎಂದಾಯಿತು. ರೋಗಿಗಳ ಚಕಿತ್ಸೆಯಲ್ಲಿ ತುಸುಮಟ್ಟಿಗೆ ಈ ಕಲ್ಪನೆ ನಿಜ ಎನ್ನಿಸುತ್ತದೆ. ಹಂದಿ ಇನ್ಸುಲಿನ್ನಿಗೂ ಮಾನವನ ಇನ್ಸುಲಿನ್ನಿಗೂ ಇರುವ ವ್ಯತ್ಯಾಸ ಬಿ ಭಾಗಾಂಶದ ಸರಪಣಿಯ ಕೊನೆಯ ಅಮೈನೋ ಆಮ್ಲದಲ್ಲಿ ಮಾತ್ರ.
ಈಲಿಯಲ್ಲಿ ಇನ್ಸುಲಿನ್ ಅಣು ಸಾಗಿಹೋಗುವಾಗ ಅಲ್ಲೊಂದು ದೊಳೆಯಿಂದ (ಎಂಜೈಮ್) ಎ, ಬಿ ಸರಪಣಿಗಳಾಗಿ ಒಡೆವಂತೆ ತೋರುತ್ತದೆ. ವಿದ್ಯುತ್ ಕ್ಷೇತ್ರಚಲನೆಯ (ಎಲೆಕ್ಟ್ರೊಫಾರೆಸಿಸ್) ರೀತಿಯಲ್ಲಿ ಬಿ ಸರಪಣಿ ಹಲಪೆಪ್ಟೈಡು ರಕ್ತದಲ್ಲಿರುವ ಕೋಳೆಯೊಂದಿಗೆ (ಆಲ್ಬುಮಿನ್) ಸಾಗುತ್ತದೆ. ಬಿ. ಸರಪಣಿಯ ಹಲಪೆಪ್ಟೈಡಿಗೆ ಇನ್ಸುಲಿನ್ ರೋಧಕ ಪ್ರಭಾವ ಇದೆ. ಆದ್ದರಿಂದ ಸಿಹಿಮೂತ್ರದಲ್ಲಿ ಈ ಹಲಪೆಪ್ಟೈಡು ಹೆಚ್ಚಿರುವುದೂ ಒಂದು ಕಾರಣವೆಂಬ ಊಹೆಯೂ ಇದೆ.
ಇನ್ಸುಲಿನ್ನನ್ನು ಚರ್ಮದಡಿ ಉದರದ ಮುಂದಿನ ಭಿತ್ತಿಯಲ್ಲಿ ಅಥವಾ ತೊಡೆಯ ಹೊರಭಾಗ ಇಲ್ಲವೆ ಅಂಡಿನ ಭಾಗದಲ್ಲಿ ಚುಚ್ಚಿ ಒಳಸೇರಿಸಲಾಗುತ್ತದೆ. ಆ ಸ್ಥಳದಿಂದ ಇನ್ಸುಲಿನ್ ಹೀರಿಕೆ ಕೊಡುವ ಸ್ಥಳ, -- ಮತ್ತು ಪ್ರಮಾಣ ಚರ್ಮದ ಉಷ್ಣತೆ, ಸ್ಥಳಿಕವಾಗಿ ಉಜ್ಜುವುದು ಮತ್ತು ವ್ಯಾಯಾಮವನ್ನು ಆಧರಿಸಿದೆ.
ಬಾಹ್ಯ ಕೊಂಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ cite book |last1= Stryer |first1= Lubert | title=Biochemistry. |edition= Fourth |location= New York |publisher= W.H. Freeman and Company|publication-date= 1995 |pages= 773–774|isbn= 0 7167 2009 4
- ↑ Glucose production (and excretion into the blood) by the liver is strongly inhibited by high concentrations of insulin in the blood
- ↑ cite journal | vauthors = Sonksen P, Sonksen J | title = Insulin: understanding its action in health and disease | journal = British Journal of Anaesthesia | volume = 85 | issue = 1 | pages = 69–79 | date = July 2000 | pmid = 10927996 | doi = 10.1093/bja/85.1.69
- ↑ http://link.library.utoronto.ca/insulin/