ವಿಷಯಕ್ಕೆ ಹೋಗು

19ನೆಯ ಶತಮಾನ-ರೊಮ್ಯಾಂಟಿಕ್ ಯುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

17ನೆಯ ಹಾಗೂ 18ನೆಯ ಶತಮಾನಗಳಲ್ಲಿ ಅರಿಸ್ಟಾಟಲನ ಸೂತ್ರಗಳನ್ನು ಅನುಸರಿಸಿದ ವಿಮರ್ಶಕರೆಲ್ಲ ಕಾವ್ಯವು ಜೀವನದ ಪ್ರತಿಬಿಂಬ ಅಥವಾ ಅನುಕರಣೆ ಎಂದೇ ವಾದಿಸಿದರೂ 18ನೆಯ ಶತಮಾನದ ಕೊನೆಯಲ್ಲಿ ಅದಕ್ಕೆ ವಿರುದ್ಧವಾದ ವಿಚಾರಗಳೂ ಹುಟ್ಟಿಕೊಂಡುವು. ಕವಿ ಕೇವಲ ಪ್ರಕೃತಿಯನ್ನು ಅನುಕರಿಸುವುದಿಲ್ಲ, ತಾನು ಕಂಡ ಕನಸನ್ನು ಕಲ್ಪನೆಯ ಮೂಲಕ ಪ್ರತಿರೂಪಿಸುತ್ತಾನೆಂಬ ರೊಮ್ಯಾಂಟಿಕ್ ವಿಚಾರದ ಬೀಜಾಂಕುರ ಎಡ್ಮಂಡ್ ಬರ್ಕ್ 1756ರಲ್ಲಿ ಬರೆದ ಇನ್‍ಕ್ವೈರಿ ಇನ್ ಟು ದಿ ಸಬ್ಲೈಮ್ ಅಂಡ್ ಬ್ಯೂಟಿಫುಲ್ ಎನ್ನುವ ಪ್ರಬಂಧದಲ್ಲಿದೆ. ಅದೇ ಕಾಲದ ಸುಮಾರಿನಲ್ಲಿ ಜರ್ಮನಿತತ್ತ್ವಶಾಸ್ತ್ರಜ್ಞ ಇಮ್ಯಾನ್ಯುಅಲ್ ಕಾಂಟ್ ಮನುಷ್ಯನ ಮನಸ್ಸು ಚೇತನಸ್ವರೂಪವಾದುದು, ಬಹಿರಂಗದ ಅನುಭವವನ್ನು ಕೇವಲ ಯಾಂತ್ರಿಕವಾಗಿ ಅದು ಹಿಡಿದಿಟ್ಟುಕೊಳ್ಳುವುದಿಲ್ಲ. ಇಂದ್ರಿಯಾನುಭವಕ್ಕೆ ಸಿಲುಕುವ ಬಾಹ್ಯಪ್ರಪಂಚಕ್ಕೆ ಅದು ರೂಪ ಕೊಡುತ್ತದೆ-ಎಂದು ಹೇಳಿದ. ಈ ಹೊಸ ವಿಚಾರಧಾರೆಯಿಂದ ವರ್ಡ್ಸ್‌ವರ್ತ್, ಕೋಲ್ರಿಜ್, ಡಿಕ್ವೆನ್ಸಿ, ಷೆಲ್ಲಿ-ಮೊದಲಾದ ರೊಮ್ಯಾಂಟಿಕ್ ಸಾಹಿತಿಗಳೆಲ್ಲರೂ ಪ್ರಭಾವಿತರಾದರು.

ವರ್ಡ್ಸ್‌ವರ್ತ್‌ನ ಯೌವನದ ಚಿತ್ರ

ರೊಮ್ಯಾಂಟಿಕ್ ಕವಿಗಳ ಚಿಂತನೆ

ವರ್ಡ್ಸ್‌ವರ್ತ್ವ

ವರ್ಡ್ಸ್‌ವರ್ತ್ ತನ್ನ ಲಿರಿಕಲ್ ಬ್ಯಾಲಡ್ಸ್ ಎಂಬ ಕಾವ್ಯಸಂಗ್ರಹಕ್ಕೆ ಬರೆದ (1798) ಪೀಠಿಕೆಯಲ್ಲಿ (ಪ್ರಿಫೇಸ್) ಕವಿಯ ಚೇತನ ವಿಭಾವನೆಗಳನ್ನೇ ಕುರಿತು ಸುದೀರ್ಘವಾಗಿ ವಿವೇಚಿಸಿದ. ವರ್ಡ್ಸ್‌ವರ್ತ್ ಮಾನವ ವಿಭಾವನೆಯನ್ನು(ಇಮ್ಯಾಜಿನೇಷನ್) ಅವರ್ಣನೀಯ ದೈವಿಕ ಶಕ್ತಿ ಎಂದು ಕರೆದು, ಮಾತಿನ ಗೊಂದಲವೆಬ್ಬಿಸಿದ.

ಕೋಲ್ರಿಜ್

ಕೋಲ್ರಿಜ್ ಕವಿ ಬಯಾಗ್ರಾಫಿಯ ಲಿಟರೇರಿಯ ಎಂಬ ಗಾಢ ತಾತ್ತ್ವಿಕ ಗ್ರಂಥದ ಮೂಲಕ ಮುಂದಿನ ವಿಮರ್ಶೆಯ ಪರಂಪರೆಯ ಮೇಲೆ ಅತ್ಯಂತ ಹೆಚ್ಚಿನ ಪರಿಣಾಮ ಬೀರಿದ. ಗ್ರಂಥದ ದೋಷಗಳೇನೇ ಇರಲಿ, ಅದು ಅತ್ಯಂತ ಪ್ರಭಾವಶಾಲಿ ಕವಿಯೊಬ್ಬನ ಅದ್ಭುತ ಕಲ್ಪನೆಯ ತತ್ತ್ವಚಿಂತನೆಯ ಫಲಶೃತಿ. ಆದರೆ ಕೋಲ್ರಿಜ್ ಅದೇ ಮಾತಿಗೆ ತಾತ್ತ್ವಿಕವಾದ ಅರ್ಥ ವಿವರಣೆ ಕೊಟ್ಟು ವಿಭಾವನೆ ಮತ್ತು ಕಲ್ಪನೆಗಳೆನ್ನುವ (ಫ್ಯಾನ್ಸಿ) ಪದಗಳನ್ನು ಪಾರಿಭಾಷಿಕ ಶಬ್ದಗಳನ್ನಾಗಿ ಬಳಸಿದ. ವಿಭಾವನೆ ಹೆಚ್ಚು ಉದಾತ್ತವಾದ ಶಕ್ತಿ, ಕಲ್ಪನೆ ಅನುಭವಗಳನ್ನು ಸಂಘಟಿಸಿ ಸಮಗ್ರೀಕರಣ ಮಾಡಿ ಅದಕ್ಕೊಂದು ಹೊಸ ವ್ಯವಸ್ಥೆ, ವ್ಯವಧಾನ ನೀಡುತ್ತದೆಂದು ವಿವರಿಸಿದ. ಅಮೂರ್ತ ಭಾವನೆಗಳು, ಅನಿಸಿಕೆಗಳು, ಕಾಲದೇಶಗಳ ವ್ಯವಸ್ಥೆಯಿಂದಾಚೆ ನಿಂತ ಸ್ಮೃತಿಯ ಒಂದು ವಿಧಾನ; ಮನಸ್ಸು ಗ್ರಹಿಸಿದ ಅನಿಸಿಕೆಗಳನ್ನು ಕಲ್ಪನೆ ಸಂಗ್ರಹಿಸುತ್ತದೆ, ಪರಿಷ್ಕರಿಸುತ್ತದೆ. ವಿಭಾವನೆ ಇದಕ್ಕಿಂತ ಮುಂದೆ ಹೋಗಿ ಬುದ್ಧಿವಿವೇಚನೆಗಳ ನೆರವಿನಿಂದ ಯಥಾರ್ಥತೆ ಯನ್ನೇ ಹೊಸದಾಗಿ ಕಲ್ಪಿಸುತ್ತದೆ ಎಂದು ಸ್ವಾರಸ್ಯವಾದ ವಿವರಣೆ ನೀಡಿದ.

೨೦ನೆಯ ಶತಮಾನದ ಚಿಂತಕರು

ಕೋಲ್ರಿಜ್‍ನ ಅಭಿಪ್ರಾಯಗಳನ್ನು 20ನೆಯ ಶತಮಾನದ ವಿಮರ್ಶಕರು ಕಟುವಾಗಿ ಟೀಕಿಸಿದ್ದರೂ ಅವನ ವಿಚಾರಗಳು ಸಾಹಿತ್ಯ ವಿಮರ್ಶೆಯಲ್ಲಿ ಹೊಸ ಬೆಳಕು ಮೂಡಿಸಿದುವೆನ್ನುವುದು ನಿಜ. ಷೆಲ್ಲಿ ತನ್ನ ಡಿಫೆನ್ಸ್ ಆಫ್ ಪೊಯಟ್ರಿ ಎಂಬ ದೀರ್ಘ ಪ್ರಬಂಧದಲ್ಲಿ ಕಾವ್ಯದ ಆದರ್ಶಗಳನ್ನು ಸೂತ್ರೀಕರಿಸಿದ್ದಾನೆ. ಉದಾತ್ತ ನೀತಿ ಸಾಧಿಸುವುದರಲ್ಲಿ ಪ್ರೇಮ ಸಾರ್ಥಕ್ಯ ಪಡೆಯುತ್ತದೆ. ಅಂಥ ಪ್ರೇಮವನ್ನು ಕುರಿತು ಹಾಡುವುದರ ಮೂಲಕ ಕವಿ ನೀತಿಯ ಮಾರ್ಗದತ್ತ ನಮ್ಮನ್ನು ಕೊಂಡೊಯ್ಯುತ್ತಾನೆ. ತನ್ನ ವಿಭಾವನೆಯ ಮೂಲಕ ನಮ್ಮ ಸಂವೇದನೆ ಕೆರಳಿಸುವ ದ್ರಷ್ಟಾರನಾಗುತ್ತಾನೆ. ಆದ್ದರಿಂದ ವಿಭಾವನೆಯನ್ನು ಉದ್ದೀಪನಗೊಳಿಸುವ ಎಲ್ಲ ಸಾಹಿತ್ಯದಲ್ಲೂ ಕಾವ್ಯದ ಜೀವಾಳವಿದ್ದೇ ಇದೆ. ಶೈಲಿಯ ಇಂಥ ವಿಚಾರ ಪರಂಪರೆ ರೊಮ್ಯಾಂಟಿಕ್ ಯುಗದ ವಿಮರ್ಶಾ ಸಂಪ್ರದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಬಿಡಿಬಿಡಿಯಾದ ಸಾಹಿತ್ಯ ಕೃತಿಗಳನ್ನೂ ಬೇರೆ ಬೇರೆ ಸಾಹಿತಿಗಳನ್ನೂ ಕುರಿತು ವಿವೇಚಿಸುವಾಗ ಕಾವ್ಯದ ಆದರ್ಶಗಳನ್ನು ಹಿನ್ನೆಲೆಯಾಗಿ ಕಲ್ಪಿಸಿಕೊಳ್ಳುವ ರೊಮ್ಯಾಂಟಿಕ್ ವಿಧಾನವು ಹ್ಯಾಜ್ಲಿಟ್, ಲ್ಯಾಂಬ್ ಮೊದಲಾದವರ ಲೇಖನಗಳಲ್ಲಿ ಕಾಣಸಿಗುತ್ತದೆ.[]

ಯೂರೋಪಿನ ಸಾಹಿತ್ಯ ಚಿಂತನೆ

19ನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿ ಜ್ಞಾನ, ತಿಳಿವಳಿಕೆ, ಶಿಕ್ಷಣ, ಸಂಸ್ಕೃತಿಗಳು ಅತ್ಯಂತ ವಿಸ್ತಾರವಾಗಿ ಹಬ್ಬಿದಾಗ, ಇಂಗ್ಲಿಷ್ ವಿಮರ್ಶಕರು ಯುರೋಪಿನ ಸಾಹಿತ್ಯದತ್ತ ಕಣ್ಣು ಹೊರಳಿಸಿ, ತಮ್ಮ ಕೃಷಿರಂಗವನ್ನು ವಿಸ್ತಾರ ಮಾಡಿಕೊಂಡರು. ಜರ್ಮನಿಯ ಸಾಹಿತ್ಯದಲ್ಲಿ ಇಂಗ್ಲಿಷ್ ಸಾಹಿತಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಕಾಲ ಅದು. ವಿಮರ್ಶೆಗೆ ವಿಶಾಲವಾದ ಕಾರ್ಯರಂಗ ದೊರೆತಾಗ, ತುಲನಾತ್ಮಕ ವಿಮರ್ಶೆ ಬೆಳೆಯಲು ಹೆಚ್ಚು ನೆರವು ಸಿಕ್ಕಹಾಗಾಯಿತು.

ಮ್ಯಾಥ್ಯು ಆರ್ನಾಲ್ಡ್

ಮ್ಯಾಥ್ಯು ಆರ್ನಾಲ್ಡ್ ಚಿಂತನೆ

ಹೊಸಯುಗದ ಪ್ರತಿನಿಧಿಯಾದ ಮ್ಯಾಥ್ಯು ಆರ್ನಾಲ್ಡ್ ಲೋಕೋತ್ತರವಾದ ವಿಚಾರಗಳ ಚಿಂತನ ಮಂಥನಗಳನ್ನು ಅರ್ಥಮಾಡಿಕೊಂಡು ನಿರ್ವಿಕಾರವಾದ ರೀತಿಯಲ್ಲಿ ಪ್ರಸಾರ ಮಾಡುವುದೇ ವಿಮರ್ಶೆಯ ಉದ್ದೇಶವೆಂದುದು ಈ ಅರ್ಥದಲ್ಲೇ. ಆಚಾರ, ವ್ಯವಹಾರಗಳಲ್ಲಿ ನೈತಿಕಮಟ್ಟ ಕುಗ್ಗಿ, ನಂಬಿಕೆಗಳು ಅಪಮೌಲ್ಯಗೊಳ್ಳುತ್ತಿದ್ದ ಆ ಕಾಲದಲ್ಲಿ ಆರ್ನಾಲ್ಡ್ ಉತ್ತಮ ಸಾಹಿತ್ಯ, ಸಂಸ್ಕೃತಿ, ಔಪಚಾರಿಕ ಮೌಲ್ಯಗಳು ಅನೀತಿಯ ವಿರುದ್ಧ ಹೋರಾಡಲು ಸಾಧನಗಳಾಗಿ ಪರಿಣಮಿಸಿವೆಯೆಂದು ಭಾವಿಸಿದ. ಆದ್ದರಿಂದ ಕಾವ್ಯಕ್ಕೆ ಒಂದು ಉದಾತ್ತ ಉದ್ದೇಶವಿರಬೇಕೆಂದು ಭಾವಿಸಿದ. ಇದಕ್ಕೆ ವಿರುದ್ಧವಾಗಿ ಕಾವ್ಯಕ್ಕೂ ಜೀವನಕ್ಕೂ ಸಂಬಂಧವಿಲ್ಲ. ಕಾವ್ಯದ(ಕಲೆ) ಮೂಲಕ ಜೀವನವನ್ನು ಹಸನುಗೊಳಿಸುವ ಪ್ರಯತ್ನ ನಿರರ್ಥಕ. ಕಲಾಕೃತಿಗಳಿಂದ ಪ್ರೇರಿತವಾಗುವ ಆನಂದ ಒಂದು ಸೌಂದರ್ಯ ಮೌಲ್ಯ. ಆದ್ದರಿಂದ ಜೀವನಕ್ಕಾಗಿ ಕಲೆಯಲ್ಲ, ಕಲೆಗಾಗಿ ಕಲೆ ಎಂಬ ಹೊಸ ಸೌಂದರ್ಯತತ್ತ್ವ ಹುಟ್ಟಿಕೊಂಡಿತು.

ವಾಲ್ಟರ್ ಪೇಟರ್ ಚಿಂತನೆ

ಜರ್ಮನಿಯ ಕಾಂಟ್, ಅಮೆರಿಕದ ಪೋಪ್ ಮೊದಲಾದವರು ಪ್ರತಿಪಾದಿಸಿದ ತತ್ತ್ವಗಳನ್ನು ಇಂಗ್ಲೆಂಡಿನಲ್ಲಿ ವಾಲ್ಟರ್ ಪೇಟರ್ ಸಮರ್ಥಿಸಿ ತನ್ನ ಕಾಲದ ಸಾಹಿತ್ಯ ಚಿಂತನೆಯನ್ನು ಗಾಢವಾಗಿ ಪ್ರಚೋದಿಸಿದ. ಒಂದು ಕಲಾಕೃತಿ ನಮ್ಮ ಕಲ್ಪನೆಯನ್ನು ಹೇಗೆ ಕೆರಳಿಸಿ, ತಿಳಿಸುತ್ತದೆ ಎಂಬುದನ್ನು ಬಣ್ಣಿಸುವಾಗ ಮನಸ್ಸಿನ ಪದರ ಪದರಗಳಲ್ಲಿನ ಅನಿಸಿಕೆಯನ್ನು ಚಿತ್ರಯುಕ್ತ ಶೈಲಿಯಲ್ಲಿ ಬಣ್ಣಿಸುವ ಹೊಸದೊಂದು ಪಂಥವೇ ಪೇಟರನ ಲೇಖನಗಳ ಮೂಲಕ ನಿರ್ಮಿತವಾಯಿತು. ಈ ಪಂಥದ ಉತ್ಕೃಷ್ಟ ಅಭಿವ್ಯಕ್ತಿ ಅಪ್ರಿಸಿಯೇಷನ್ಸ್ ಹಾಗೂ ದಿ ರೆನೇಸಾನ್ಸ್ ಎಂಬ ಗ್ರಂಥಗಳಲ್ಲಿದೆ. ಪೇಟರನ ಸೌಂದರ್ಯತತ್ತ್ವಗಳನ್ನು ತಪ್ಪಾಗಿ ಗ್ರಹಿಸಿದ ಆಸ್ಕರ್ ವೈಲ್ಡ್ ಕಲೆಗಾಗಿ ಕಲೆ ಎಂಬ ತತ್ತ್ವವನ್ನು ಅತಿಯಾಗಿ ಉತ್ಪ್ರೇಕ್ಷಿಸಿ, ನಗೆಪಾಟಲಿಗೀಡುಮಾಡಿದ. ಇಂಗ್ಲೆಂಡಿನಲ್ಲಿ ಗೊಂದಲಕ್ಕೀಡಾದ ಈ ತತ್ತ್ವಕ್ಕೆ ತರ್ಕದ, ದರ್ಶನದ ಬುನಾದಿ ಕಲ್ಪಿಸಿ ಅದನ್ನು ಸೌಂದರ್ಯಶಾಸ್ತ್ರವನ್ನಾಗಿ(ಈಸ್ತೆಟಿಕ್ಸ್) ರೂಪಿಸಿದ ಕೀರ್ತಿ ಈ ಶತಮಾನದ ಇಟಲಿಯ ಮಹಾಸಾಹಿತಿ ಬೆನೆಡಿಟ್ಟೊ ಕ್ರೋಚೆಗೆ ಸಲ್ಲುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

  1. https://www.goodreads.com/shelf/show/19th-century-literature