ಹೈಡ್ರೊಜನ್ ಕ್ಲೋರೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೈಡ್ರೋಜನ್ ಕ್ಲೋರೈಡ್ HCl ರಾಸಾಯನಿಕ ಸೂತ್ರವಿರುವ ಒಂದು ಸಂಯುಕ್ತ. ಕೋಣೆಯ ತಾಪಮಾನದಲ್ಲಿ ಇದು ಬಣ್ಣ ರಹಿತ ಅನಿಲ. ಇದು ವಾತಾವಾರಣದ ತೇವಾಂಶದ ಸಂಪರ್ಕಕ್ಕೆ ಬಂದರೆ ಹೈಡ್ರೊಕ್ಲೋರಿಕ್ ಆಮ್ಲದ ಹೊಗೆಯಾಗುತ್ತದೆ. ಹೈಡ್ರೊಜನ್ ಕ್ಲೋರೈಡ್ ಮತ್ತು ಹೈಡ್ರೊಕ್ಲೋರಿಕ್ ಆಮ್ಲಗಳು ತಂತ್ರಜ್ಞಾನ ಮತ್ತು ಕೈಗಾರಿಕೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಹೈಡ್ರೊಕ್ಲೋರಿಕ್ ಆಮ್ಲವು ಹೃಡ್ರೊಜನ್ ಕ್ಲೋರೈಡ್‌ನ ನೀರಿನಲ್ಲಿನ ದ್ರಾವಣ ಮತ್ತು ಇದರ ರಾಸಾಯನಿಕ ಸೂತ್ರವೂ HCl.

ರಸಾಯನಶಾಸ್ತ್ರ[ಬದಲಾಯಿಸಿ]

ಹೈಡ್ರೊಕ್ಲೋರಿಕ್ ಆಮ್ಲದ ಹೊಗೆ ಪಿಹೆಚ್ ಪೇಪರನ್ನು ಕೆಂಪು ಮಾಡುವ ಮೂಲಕ ಆಮ್ಲವೆಂದು ತೋರುತ್ತಿರುವುದು

ಹೈಡ್ರೊಜನ್ ಕ್ಲೋರೈಡ್ ಒಂದು ಜಲಜನಕ ಮತ್ತು ಒಂದು ಕ್ಲೋರಿನ್ ಪರಮಾಣುಗಳಿರುವ ಎರಡು ಪರಮಾಣುಗಳ ಅಣು ಮತ್ತು ಇದು ಒಂದು ಕೊವೆಲೆಂಟ್ ಬಂಧನದಿಂದ ಬಂಧಿತವಾಗಿದೆ. ಕ್ಲೋರಿನ್ ಪರಮಾಣು ಜಲಜನಕ ಪರಮಾಣುಗಿಂತ ಹೆಚ್ಚು ಎಲೆಕ್ಟ್ರೊರುಣಾತ್ಮಕತೆ ತೋರುತ್ತದೆಯಾದ್ದರಿಂದ ಇವೆರಡರ ನಡುವಿನ ಕೊವೆಲೆಂಟ್ ಬಂಧನವು ದ್ರುವೀಯವಾಗಿರುತ್ತದೆ. ಪರಿಣಾಮವಾಗಿ ಕ್ಲೋರಿನ್‌ನ ರುಣಾತ್ಮಕ ಭಾಗಶ ಚಾರ್ಜ್ (δ−) ಮತ್ತು ಜಲಜನಕ ಪರಾಮಾಣುವಿನ ಧನಾತ್ಮಕ ಭಾಗಶ ಚಾರ್ಜ್ (δ+) ಇರುವುದರೊಂದಿಗೆ ಅಣು ದೊಡ್ಡ ಮಟ್ಟದಲ್ಲಿ ದ್ವಿದ್ರುವೀಯ ಚಲನೆ (ಪೋಲಾರ್ ಮೂಮೆಂಟ್) ಹೊಂದಿರುತ್ತದೆ. ಈ ಹೆಚ್ಚಿನ ದ್ರುವೀಯತೆಯ ಪರಿಣಾಮವಾಗಿ HCl ನೀರಿನಲ್ಲಿ ಹೆಚ್ಚು ಕರಗುತ್ತದೆ (ಮತ್ತು ಇತರ ದ್ರುವೀಯ ದ್ರಾವಕಗಳಲ್ಲಿಯೂ ಸಹ).

H2O ಮತ್ತು HCl ಸಂಪರ್ಕಕ್ಕೆ ಬರುವುದರೊಂದಿಗೆ ಅವೆರಡೂ ಸೇರಿ ಹೈಡ್ರೊನಿಯ್ ಕ್ಯಾಟಯಾನ (H3O+) ಮತ್ತು ಕ್ಲೋರಿಯಮ್ ಅನಯಾನು (Cl-) ಆಗುತ್ತವೆ ಮತ್ತು ಇದು ಹಿಂದುಮುಂದು ಆಗಬಲ್ಲ ರಾಸಾಯನಿಕ ಕ್ರಿಯೆ:

HCl + H2O → H3O+ + Cl

ಇದರಿಂದ ಉಂಟಾಗುವ ದ್ರವಣವನ್ನು ಹೈಡ್ರೊಕ್ಲೋರಿಕ್ ಆಮ್ಲ ಎಂದು ಕರೆಯಲಾಗುತ್ತದೆ ಮತ್ತು ಇದು ತೀವ್ರ ಆಮ್ಲ. ಆಮ್ಲ ಡಿಸೋಶಿಯೇಶನ್ ಅಥವಾ ಅಯಾನೀಕರಣ ನಿಯತಾಂಕ Ka ಹೆಚ್ಚಿನ ಮೊತ್ತದ್ದಾಗಿದೆ. ಇದರ ಅರ್ಥವೆಂದರೆ HCl ನೀರಿನಲ್ಲಿ ಬಹುತೇಕ ಪೂರ್ಣವಾಗಿ ಅಯಾನಾಗುತ್ತದೆ ಎಂದು.

ಉತ್ಪಾದನೆ[ಬದಲಾಯಿಸಿ]

ನೇರ ಸಂಯೋಜನೆ[ಬದಲಾಯಿಸಿ]

ಉಪ್ಪು (ಸೋಡಿಯಂ ಕ್ಲೋರೈಡ್) ದ್ರಾವಣ (ನೀರಿನಲ್ಲಿ- ಇದನ್ನು ಬೈನ್ ಎಂದು ಕರೆಯಲಾಗುತ್ತದೆ) ದ ಎಲೆಕ್ಟ್ರೊಲೈಸಿಸ್ ಮೂಲಕ ಜಲಜನಕ (ಹೈಡ್ರೊಜನ್ H2) ಮತ್ತು ಕ್ಲೋರಿನ್‌ಗಳನ್ನು (Cl2) ಪಡೆಯಲಾಗುತ್ತದೆ.

2 NaCl + 2 H2O → Cl2 + 2 NaOH + H2

ಶುದ್ಧ ಕ್ಲೋರಿನ್ ಅನಿಲ ಹೈಡ್ರೊಜನ್‌ನೊಂದಿಗೆ ನೇರಳಾತೀತ (ಆಲ್ಟ್ರಾವೊಯೆಲಟ್) ಕಿರಣಗಳ ಉಪಸ್ಥಿತಿಯಲ್ಲಿ ಸೇರಿ ಹೈಡ್ರೊಜನ್ ಕ್ಲೋರೈಡ್ ಆಗುತ್ತದೆ:

Cl2(g) + H2(g) → 2 HCl(g)

ಈ ರಸಾಯನಿಕ ಕ್ರಿಯೆ ಉಷ್ಣಕ್ಪೇಪಕ (ಶಾಖಸೂಸಕ ಅಥವಾ ಎಕ್ಸೊಥರ್ಮಿಕ್) ಇದು HCl ಒವೆನ್‌ನಲ್ಲಿ ನಡೆಯುತ್ತದೆ. ಈ ಹೈಡ್ರೊಜನ್ ಕ್ಲೋರೈಡ್ ಅಯಾನುರಹಿತ ನೀರಿ (ಖನಿಜ ಅಯಾನುಗಳನ್ನು ತೆಗೆದ ನೀರು)ನಲ್ಲಿ ಕರಗಿಸುವ ಮೂಲಕ ಶುದ್ಧ ಹೈಡ್ರೊಕ್ಲೋರಿಕ್ ಆಮ್ಲ ಪಡೆಯಲಾಗುತ್ತದೆ. ಇದನ್ನು ಆಹಾರ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.

ಸಾವಯವ ಸಂಯೋಜನೆ[ಬದಲಾಯಿಸಿ]

ಹೈಡ್ರೊಕ್ಲೋರಿಕ್ ಆಮ್ಲದ ದೊಡ್ಡ ಮಟ್ಟದ ಉತ್ಪಾದನೆ ಕ್ಲೋರಿನೇಟೆಡ್ (ಕ್ಲೋರಿನ್‌ ಇರುವ) ಮತ್ತು ಫ್ಲೋರಿನೇಟಡ್ (ಫ್ಲೋರಿನ್ ಇರುವ) ಹೈಡ್ರೊಕಾರ್ಬನ್‌ಗಳ ತಯಾರಿಕೆಯೊಂದಿಗೆ ಹೊಂದಿಕೊಂಡಿದೆ (ಇಂತಹ ಹೈಡ್ರೊಕಾರ್ಬನ್‌ಗಳು ಟೆಫ್ಲಾನ್, ಕ್ಲೋರೊಅಸೆಟಿಕ್ ಆಮ್ಲ ಮುಂತಾದವು). ಈ ರಸಾಯನಿಕ ಕ್ರಿಯೆಗಳಲ್ಲಿ ಹೈಡ್ರೊಕಾರ್ಬನ್ ಮೇಲಿರುವ ಹೈಡ್ರೊಜನ್‌ಗೆ ಕ್ಲೋರಿನ್ ಬದಲಿಯಾಗುತ್ತದೆ ಮತ್ತು ಹೀಗೆ ಬಿಡುಗಡೆಯಾದ ಹೈಡ್ರೊಜನ್ ಪರಮಾಣುವಿನೊಂದಿಗೆ ಉಳಿದ ಇನ್ನೊಂದು ಕ್ಲೋರಿನ್ ಪರಮಾಣು ಸೇರಿ ಹೈಡ್ರೊಜನ್ ಕ್ಲೋರೈಡ್ ಆಗುತ್ತದೆ. ಫ್ರೋರಿನೇಶನ್ ಪ್ರಕ್ರಿಯೆಯು ನಂತರದ ಕ್ಲೋರಿನ್ ಬದಲಾಯಿಸುವ ಕ್ರಿಯೆ ಮತ್ತು ಇದರಲ್ಲಿಯೂ ಹೈಡ್ರೊಜನ್ ಕ್ಲೋರೈಡ್ ಉತ್ಪನ್ನವಾಗುತ್ತದೆ. ಈ ರಸಾಯನಿಕ ಕ್ರಿಯೆಗಳನ್ನು ಹೀಗೆ ಸೂಚಿಸ ಬಹುದು:

R−H + Cl2 → R−Cl + HCl
R−Cl + HF → R−F + HCl

ಹೀಗೆ ಉತ್ಪತ್ತಿಯಾದ ಹೈಡ್ರಜನ್ ಕ್ಲೋರೈಡ್ ಅನಿಲವನ್ನು ಹಾಗೆಯೇ ಬಳಸಲಾಗುತ್ತದೆ ಅಥವಾ ನೀರಿನಲ್ಲಿ ಹಿಂಗಿಸಿ ತಾಂತ್ರಿಕ ಅಥವಾ ಕೈಗಾರಿಕಾ ದರ್ಜೆಯ ಹೈಡ್ರೊಕ್ಲೋರಿಕ್ ಆಮ್ಲವನ್ನು ಉತ್ಪಾದಿಸಲಾಗುತ್ತದೆ.

ಪ್ರಯೋಗಶಾಲೆ ಪದ್ಧತಿಗಳು[ಬದಲಾಯಿಸಿ]

ಪ್ರಯೋಗಶಾಲೆಯಲ್ಲಿ ಸಣ್ಣ ಪ್ರಮಾಣದ ಹೈಡ್ರೊಜನ್ ಕ್ಲೋರೈಡ್ ಅನಿಲವನ್ನು HCl ಜನರೇಟರ್‌ನಲ್ಲಿ ಸಲ್ಫೂರಿಕ್ ಆಮ್ಲ ಅಥವಾ ಜಲರಹಿತ ಕ್ಯಾಲಿಸಿಯಮ್ ಕ್ಲೋರೈಡ್ ಬಳಸಿ ಹೈಡ್ರೊಕ್ಲೋರಿಕ್ ಆಮ್ಲವನ್ನು ನಿರ್ಜಲೀಕರಿಸುವ ಮೂಲಕ ಪಡೆಯ ಬಹುದು. ಇನ್ನೊಂದು ಮಾರ್ಗವೆಂದರೆ ಸೋಡಿಯಮ್ ಕ್ಲೋರೈಡ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ರಸಾಯನಿಕ ಕ್ರಿಯೆಯಿಂದ ಪಡೆಯ ಬಹುದು:

NaCl + H2SO4 → NaHSO4 + HCl

ಈ ರಸಾಯನಿಕ ಕ್ರಿಯೆಯು ಕೋಣೆಯ ತಾಪಮಾನದಲ್ಲಿ ಜರುಗುತ್ತದೆ. ಇನ್ನೂ NaCl ಉಳಿದಿದೆ ಎಂದಾದಲ್ಲಿ ಮತ್ತು ತಾಪಮಾನ 200 °ಸೆ ಬಿಸಿಮಾಡಿದಲ್ಲಿ ಈ ರಸಾಯನಿಕ ಕ್ರಿಯೆ ಮುಂದುವರೆಯುತ್ತದೆ:

NaCl + NaHSO4 → HCl + Na2SO4

ಜೆನರೇಟರ್‌ನಲ್ಲಿ ಈ ಕ್ರಿಯೆಗಳನ್ನು ಆಗಮಾಡಲು ಕಾರಕಗಳು (ರಿಏಜೆಂಟ್‌) ಒಣವಾಗಿರ ಬೇಕು.

ಹೈಡ್ರೊಜನ್ ಕ್ಲೋರೈಡ್‌ನ್ನು ಫಾಸ್ಪರಸ್ ಕ್ಲೋರೈಡ್, ಥಯೊನಿಲ್ ಕ್ಲೋರೈಡ್ (SOCl2) ಮತ್ತು ಅಸಿಲ್ ಕ್ಲೋರೈಡ್‌ಗಳಂತಹ ಹೆಚ್ಚು ಕ್ರಿಯಾತ್ಮಕ ಕ್ಲೋರೈಡ್ ಸಂಯುಕ್ತಗಳಿಗೆ ನೀರು ಸೇರಿಸುವ ಮೂಲಕ (ಹೈಡ್ರೊಲೈಸಿಸ್) ತಯಾರಿಸ ಬಹುದು. ಉದಾಹರಣೆಗೆ ಫಾಸ್ಪರಸ್ ಪೆಂಟಾಕ್ಲೋರೈಡ್ (PCl5) ಗೆ ನಿಧಾನವಾಗಿ ನೀರು ಹನಿಸಿದಾಗ ಹೈಡ್ರೊಜನ್ ಕ್ಲೋರೈಡ್ ಉತ್ಪತ್ತಿಯಾಗುತ್ತದೆ:

PCl5 + H2O → POCl3 + 2 HCl

ಉಪಯೋಗಗಳು[ಬದಲಾಯಿಸಿ]

ಬಹಳಷ್ಟು ಹೈಡ್ರೊಜನ್ ಕ್ಲೋರೈಡನ್ನು ಹೈಡ್ರೊಕ್ಲೋರಿಕ್ ಆಮ್ಲ ಉತ್ಪಾದಿಸಲು ಬಳಸಲಾಗುತ್ತದೆ. ಈ ಆಮ್ಲವನ್ನು ರಬ್ಬರ್‌ನ ಹೈಡ್ರೊಕ್ಲೋರಿನೇಶನ್, ವಿನೈಲ್ ಮತ್ತು ಆಲ್ಕೈನ್ ಕ್ಲೋರೈಡ್‌ಗಳ ಉತ್ಪಾದನೆಗಳಂತಹ ರನಾಯನಿಕ ಪರಿವರ್ತನೆಗಳಲ್ಲಿ ಕಾರಕಗಳಾಗಿ ಬಳಸಲಾಗುತ್ತದೆ.

ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ಸೆಮಿಕಂಡಕ್ಟರ್‌ಗಳನ್ನು ಕೆತ್ತಲು ಮತ್ತು ಟ್ರೈಕ್ಲೋರೊಸಿಲೇನ್ (SiHCl3) ಮೂಲಕ ಸಿಲಿಕಾನ್ ಶುದ್ಧೀಕರಿಸಲು ಬಳಸಲಾಗುತ್ತದೆ. ಹೈಡ್ರೊಜನ್ ಕ್ಲೋರೈಡನ್ನು ಹತ್ತಿಯ ಮೆತುಭಾಗವನ್ನು ಬೇರ್ಪಡಿಸಲು ಬಳಸಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಮಧ್ಯಕಾಲೀನ ರಸವಿದ್ಯೆಯ ವಿದ್ವಾಂಸರು ಹೈಡ್ರೊಕ್ಲೋರಿಕ್ ಆಮ್ಲವು ಹೈಡ್ರೊಜನ್ ಕ್ಲೋರೈಡ್ ಆವಿಯನ್ನು ಬಿಡುಗಡೆ ಮಾಡುತ್ತದೆ ಎಂದು ತಿಳಿದಿದ್ದರು ಮತ್ತು ಇದನ್ನು ಮೆರೈನ್ ಆಸಿಡ್ ಏರ್ ಎಂದು ಕರೆಯುತ್ತಿದ್ದರು. 17ನೆಯ ಶತಮಾನದಲ್ಲಿ ಜೊಹಾನ್ ರುಡಾಲ್ಭ್ ಗ್ಲಾಬರ್ ಉಪ್ಪು (ಸೋಡಿಯಮ್ ಕ್ಲೋರೈಡ್) ಮತ್ತು ಸಲ್ಫ್ಯೂರಿಕ್ ಆಮ್ಲ ಬಳಸಿ ಸೋಡಿಯಮ್ ಸಲ್ಫೇಟ್ ತಯಾರಿಸಿದ. ಇದರೊಂದಿಗೆ ಹೈಡ್ರೊಜನ್ ಕ್ಲೋರೈಡ್ ಅನಿಲ ಬಿಡುಗಡೆಯಾಗುತ್ತಿತ್ತು. 1772ರಲ್ಲಿ ಕಾರ್ಲ್ ವಿಲ್ಹೆಮ್ ಸ್ಕೀಲ್ ಸಹ ಇದೇ ರಸಾಯನಿಕ ಕ್ರಿಯೆಯನ್ನು ವರದಿ ಮಾಡಿದ ಮತ್ತು ಇವನನ್ನು ಕೆಲವೊಮ್ಮೆ ಈ ಅನಿಲ ಕಂಡುಹಿಡಿದ ಕೀರ್ತಿ ಸಲ್ಲಿಕೆಯಾಗಿದೆ. 1772ರಲ್ಲಿ ಪ್ರೀಸ್ಟ್‌ಲಿ 1772ರಲ್ಲಿ ಹೈಡ್ರೊಜನ್ ಕ್ಲೋರೈಡ್ ತಯಾರಿಸಿದ. 1810ರಲ್ಲಿ ಹಂಪ್ರಿ ಡೇವಿ ಇದು ಜಲಜನಕ ಮತ್ತು ಕ್ಲೋರಿನ್ ಹೊಂದಿದೆಯೆಂದು ತೋರಿಸಿಕೊಟ್ಟ.

ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಸೋಡಾ ಪುಡಿಯಂತಹ ಆಲ್‌ಕಲೈನ್ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿತು. ನಿಕೊಲಸ್ ಲೆಬ್ಲಾಂಕ್ ಸೋಡ ಪುಡಿಯನ್ನು ತಯಾರಿಸಲು ಹೊಸ ಕೈಗಾರಿಕಾ ಪದ್ಧತಿಯೊಂದನ್ನು ಅಭಿವೃದ್ಧಿ ಪಡಿಸಿದ. ಈ ಪ್ರಕ್ರಿಯೆಯಲ್ಲಿ ಉಪ್ಪನ್ನು ಸಲ್ಫೂರಿಕ್ ಆಮ್ಲ, ಸುಣ್ಣದಕಲ್ಲು ಮತ್ತು ಕಲ್ಲಿದ್ದಲು ಬಳಸಿ ಸೋಡಾ ಪುಡಿ ತಯಾರಿಸಲಾಗುತ್ತಿತ್ತು. ಇದರ ಉಪಉತ್ಪಾದನೆಗಳಲ್ಲಿ ಒಂದು ಹೈಡ್ರೊಜನ್ ಕ್ಲೋರೈಡ್ ಅನಿಲವಾಗಿತ್ತು. ಆರಂಭದಲ್ಲಿ ಇದನ್ನು ಗಾಳಿಯಲ್ಲಿ ಬಿಡಲಾಗುತ್ತಿತ್ತು ಆದರೆ 1863ರ ಆಲ್‌ಕಲಿ ಕಾನೂನು ಇದನ್ನು ನಿರ್ಬಂಧಿಸಿದ ಮೇಲೆ ಸೋಡ ಪುಡಿ ತಯಾರಕರು ಈ ಅನಿಲವನ್ನು ನೀರು ಹೀರುಕೊಳ್ಶುವಂತೆ ಮಾಡಿ ಕೈಗಾರಿಕಾ ಮಟ್ಟದ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಸ ತೊಡಗಿದರು. ನಂತರದ ಹರ್‌ಗ್ರೀವ್ಸ್ ಪ್ರಕ್ರಿಯೆ ಲೆಬ್ಲಾಂಕ್ ಪ್ರಕಿಯೆಯನ್ನು ಹೋಲುತ್ತಿದ್ದಾಗಲೂ ಅದರಲ್ಲಿ ಸಲ್ಫ್ಯೂರಿಕ್ ಆಮ್ಲದ ಬದಲು ಸಲ್ಫರ್ ಡೈಆಕ್ಸೈಡ್, ಗಾಳಿ ಮತ್ತು ನೀರನ್ನು ಬಳಸಲಾಗುತ್ತಿತ್ತು. ಆರಂಭಿಕ ಇಪ್ಪತ್ತನೆಯ ಶತಮಾನದಲ್ಲಿ ಲೆಂಬ್ಲಾಂಕ್ ಪ್ರಕ್ರಿಯೆ ಬದಲಿಗೆ ಸಾಲ್ವೆ ಪ್ರಕ್ರಿಯೆ ಬಳಕೆಗೆ ಬಂತು. ಇದು ಹೈಡ್ರೊಜನ್ ಕ್ಲೋರೈಡನ್ನು ಉತ್ಪನ್ನ ಮಾಡುತ್ತಿರಲಿಲ್ಲ. ಆದಾಗ್ಯೂ ಹೈಡ್ರೊಕ್ಲೋರಿಕ್ ಆಮ್ಲದ ಉತ್ಪಾದನೆಯ ಒಂದು ಹೆಜ್ಜೆಯಾಗಿ ಹೈಡ್ರೊಜನ್ ಕ್ಲೋರೈಡ್ ಉತ್ಪಾದನೆ ಮುಂದುವರೆಯಿತು.

ಇಪ್ಪತ್ತನೆಯ ಶತಮಾನದ ಹೈಡ್ರೊಜನ್ ಕ್ಲೋರೈಡ್‌ನ ಐತಿಹಾಸಿಕ ಬಳಕೆಯು ಅಲಕಲೈನ್‌ಗಳ ಹೈಡ್ರೊಕ್ಲೊರಿನೇಶನ್ ಮೂಲಕ ಕ್ಲೋರಿನೇಟಡ್ ಮೊನೊಮರ್ ಕ್ಲೋರೊಪ್ರೀನ್ ಮತ್ತು ವಿನೈಲ್ ಕ್ಲೋರೈಡ್‌ಗಳ ಉತ್ಪಾದನೆಯನ್ನು ಒಳಗೊಂಡಿದೆ. ನಂತರದಲ್ಲಿ ಇವನ್ನು ಪಾಲಿಮಲೀಕರಿಸಿ ಕ್ರಮವಾಗಿ ಪಾಲಿಕ್ಲೊರೊಪ್ರೀನ್ (ನಿಯೊಪ್ರೀನ್) ಮತ್ತು ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಉತ್ಪಾದಿಸಲಾಗುತ್ತಿತ್ತು. ವಿನೈಲ್ ಕ್ಲೋರೈಡ್‌ನ್ನು ಅಸಿಟಲಿನ್ (C2H2) ಗೆ HCl ಸೇರಿಸುವ ಮೂಲಕ ಪಡೆಯಲಾಗುತ್ತಿತ್ತು.

1960ರ ದಶಕದ ವರೆಗೂ ಬಳಸುತ್ತಿದ್ದ ಕ್ಲೊರೊಪ್ರೀನ್ ತಯಾರಿಸುವ "ಅಸಿಟಿಲಿನ್ ಪ್ರಕ್ರಿಯೆ"ಯು HCl ಸೇರಿಸುವದರೊಂದಿಗೆ ಮೂರು ಬಂಧನಗಳ ಮಧ್ಯವರ್ತಿಯಾಗಿ ನಂತರ ಕೆಳಗೆ ತೋರಿಸಿದಂತೆ ಕ್ಲೋರೊಪ್ರೀನ್ ಆಗುತ್ತಿತ್ತು.

ಸುರಕ್ಷೆ[ಬದಲಾಯಿಸಿ]

ಹೈಡ್ರೊಜನ್ ಕ್ಲೋರೈಡ್ ದೇಹದ ಅಂಗಾಶಗಳಲ್ಲಿನ ನೀರಿನ ಸಂಪರ್ಕಕ್ಕೆ ಬಂದಾಗ ವಿನಾಶಕಾರಿ ಹೈಡ್ರೊಕ್ಲೋರಿಕ್ ಆಮ್ಲವಾಗುತ್ತದೆ. ಹೊಗೆಯು ಉಸಿರಿನೊಂದಿಗೆ ಒಳಹೋದರೆ ಮೂಗು, ಗಂಟಲು ಮತ್ತು ಮೇಲಿನ ಶ್ವಾಸಕೋಶ ಭಾಗದಲ್ಲಿ ಕೆಮ್ಮು, ಉಸಿರುಗಟ್ಟುವುದು, ಉರಿಯೂತಗಳಿಗೆ ಕಾರಣವಾಗುತ್ತದೆ. ತೀವ್ರ ಸಂದರ್ಭಗಳಲ್ಲಿ ಪುಪ್ಪಸ ಬಾತುಕೊಳ್ಳುವುದು, ರಕ್ತ ಪರಿಚಲನೆ ವ್ಯವಸ್ಥೆಯ ವಿಫಲತೆಗೂ, ಸಾವಿಗೂ ಕಾರಣವಾಗ ಬಲ್ಲದು. ಚರ್ಮದೊಂದಿಗೆ ಸಂಪರ್ಕಕ್ಕೆ ಬಂದಲ್ಲಿ ಚರ್ಮ ಕೆಂಪಾಗುವುದು, ನೋವು ಮತ್ತು ತೀವ್ರ ಚರ್ಮ ಸುಡುವಿಕೆಗೆ ಕಾರಣವಾಗುತ್ತದೆ. ಹೈಡ್ರೊಜನ್ ಕ್ಲೋರೈಡ್ ಕಣ್ಣಿನ ತೀವ್ರ ಸುಡುವಿಕೆಗೂ ಮತ್ತು ಖಾಯಂ ಕುರುಡಿಗೂ ಕಾರಣವಾಗ ಬಲ್ಲದು.

ಈ ಅನಿಲದ ತೀವ್ರ ಹೈಡ್ರೋಪಿಲಿಕ್ ಗುಣದ (ನೀರಿನಿಂದ ಆಕರ್ಷಿಸಲ್ಪಡುವ) ಕಾರಣಕ್ಕೆ ಹೊರ ಬರುವ ಅನಿಲಗಳಲ್ಲಿನ ಹೈಡ್ರೊಜನ್ ಕ್ಲೋರೈಡನ್ನು ಗುಳ್ಳೆಗಳಾಗಿ ಬರುವಂತೆ ನೀರಿನಲ್ಲಿ ಹಾಯಿಸು ಮೂಲಕ ತೆಗೆಯ ಬಹದು. ಇದರ ಉಪಉತ್ಪನ್ನವಾಗಿ ಹೈಡ್ರೊಕ್ಲೋರಿಕ್ ಆಮ್ಲ ದೊರೆಯುತ್ತದೆ. ಹೈಡ್ರೊಜನ್ ಕ್ಲೋರೈಡ್ ಹಲವು ಪಾಲಿಮರ್‌ಗಳೊಂದಿಗೆ ಕ್ರಿಯಾತ್ಮಕವಾಗಿರುವ ಕಾರಣಕ್ಕೆ ಹೈಡ್ರೋಜನ್ ಕ್ಲೋರೈಡ್ ಬಗೆಗಿನ ಉಪಕರಣವನ್ನು ವಿಯಮಿತವಾಗಿ ಪರಿಶೀಲಿಸ ಬೇಕು.

ಅಮೆರಿಕ ಸಂಯುಕ್ತ ಸಂಸ್ಥಾನದ ಆಕುಪೇಶನಲ್ ಸೇಪ್ಟಿ ಅಂಡ್ ಹೆಲ್ತ್ ಅಡ್ಮಿನಿಸ್ಟೇಶನ್ ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಆಕುಪೇಶನಲ್ ಸೇಪ್ಟಿ ಅಂಡ್ ಹೆಲ್ತ್ ಸಂಸ್ಥೆಗಳು ಹೈಡ್ರೊಜನ್ ಕ್ಲೋರೈಡ್‌ನ ವೃತ್ತಿ ಸ್ಥಳದಲ್ಲಿನ ಒಡ್ಡುವಿಕೆಯ ಮಿತಿಯನ್ನು 5 ಪಿಪಿಎಮ್ (ಪಾರ್ಟ್ಸ್ ಪರ್ ಮಿಲಿಯನ್-ದಶಲಕ್ಷದ ಒಂದು ಭಾಗ) (7ಮಿಲ್ಲಿಗ್ರಾಂ/ಮೀ3)ಗೆ ಮಿತಿಗೊಳಿಸಿವೆ ಮತ್ತು ಈ ಅನಿಲದ ವೃತ್ತಿ ಸ್ಥಳಗಳಲ್ಲಿನ ಸುರಕ್ಷೆಯ ಕಾಳಜಿಯ ಕಡೆ ಗಮನ ಹರಿಸಿವೆ.

ಆಧಾರ[ಬದಲಾಯಿಸಿ]