ಹಿಂದಿ ಮೀಡಿಯಂ (ಚಲನಚಿತ್ರ)
ಹಿಂದಿ ಮೀಡಿಯಂ | |
---|---|
ನಿರ್ದೇಶನ | ಸಾಕೇತ್ ಚೌಧರಿ |
ನಿರ್ಮಾಪಕ | ದಿನೇಶ್ ವಿಜನ್ ಭೂಷಣ್ ಕುಮಾರ್ ಕ್ರಿಶನ್ ಕುಮಾರ್ |
ಲೇಖಕ | ಜ಼ೀನತ್ ಲಖಾನಿ ಸಾಕೇತ್ ಚೌಧರಿ |
ಪಾತ್ರವರ್ಗ |
|
ಸಂಗೀತ | ಸಚಿನ್-ಜಿಗರ್ |
ಛಾಯಾಗ್ರಹಣ | ಲಕ್ಷ್ಮಣ್ ಉಟೇಕರ್ |
ಸಂಕಲನ | ಎ. ಶ್ರೀಕರ್ ಪ್ರಸಾದ್ |
ಸ್ಟುಡಿಯೋ |
|
ವಿತರಕರು | ಎಎ ಫ಼ಿಲ್ಮ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 132 ನಿಮಿಷ |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ರೂ. 23 ಕೋಟಿ[೧] |
ಬಾಕ್ಸ್ ಆಫೀಸ್ | ರೂ. ೩೪೦.೬೦ ಕೋಟಿ |
ಹಿಂದಿ ಮೀಡಿಯಂ ೨೦೧೭ರ ಒಂದು ಹಿಂದಿ ಪ್ರಹಸನ-ಡ್ರಾಮಾ ಚಲನಚಿತ್ರ. ಇದನ್ನು ಜ಼ೀನತ್ ಲಖಾನಿ ಬರೆದಿದ್ದು ಸಾಕೇತ್ ಚೌಧರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಇರ್ಫಾನ್ ಖಾನ್ ಹಾಗೂ ಸಾಬಾ ಕಮರ್ ಮುಖ್ಯ ಪಾತ್ರಗಳಲ್ಲಿ, ದೀಪಕ್ ಡೋಬ್ರಿಯಾಲ್ ಹಾಗೂ ದಿಶಿತಾ ಸೆಹಗಲ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಟೀ-ಸೀರೀಸ್ ಹಾಗೂ ಮ್ಯಾಡಾಕ್ ಫ಼ಿಲ್ಮ್ಸ್ ನಿರ್ಮಾಣ ಮಾಡಿತು. ಈ ಚಿತ್ರವು ತಮ್ಮ ಮಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಕೊಡಲು ಬಯಸುವ ದಂಪತಿಯ ಕಥೆಯನ್ನು ಹೇಳುತ್ತದೆ. ಇದರ ಕಥಾವಸ್ತುವು ಶಿಕ್ಷಣ, ಮಕ್ಕಳ ಪಾಲನೆ, ವರ್ಗ, ಸಾಮಾಜಿಕ ಚಲನಶೀಲತೆ, ಹಾಗೂ ಭಾಷೆ ಸೇರಿದಂತೆ ಸಾಮಾಜಿಕ ವಿಷಯಗಳ ಬಗ್ಗೆ ಆಗಿದೆ. ಇದು ೨೦೧೫ರ ಮಲಯಾಳಂ ಚಿತ್ರ ಸಾಲ್ಟ್ ಮ್ಯಾಂಗೊ ಟ್ರೀ, ಪ್ರತಿಯಾಗಿ ೨೦೧೪ರ ಬಂಗಾಳಿ ಚಿತ್ರ ರಾಮ್‍ಧಾನುವಿನ ರೀಮೇಕ್ ಆಗಿತ್ತು.[೨][೩][೪]
ಚಿತ್ರವು ೧೯ ಮೇ ೨೦೧೭ರಂದು ಬಿಡುಗಡೆಗೊಂಡು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ₹23 ಕೋಟಿಯ ಸೀಮಿತ ಬಂಡವಾಳದಲ್ಲಿ ನಿರ್ಮಾಣವಾದ ಈ ಚಲನಚಿತ್ರ ಭಾರತ ಮತ್ತು ಚೀನಾದಲ್ಲಿ ಅನಿರೀಕ್ಷಿತ ಯಶಸ್ಸನ್ನು ಗಳಿಸಿತು. ಇದು ಇರ್ಫ಼ಾನ್ ಖಾನ್‍ರ ಅತ್ಯಂತ ಹೆಚ್ಚು ಆದಾಯ ಗಳಿಸಿದ ಹಿಂದಿ ಚಿತ್ರವಾಗಿದೆ, ಮತ್ತು ಪಾಕಿಸ್ತಾನಿ ನಟಿ ಸಾಬಾ ಕಮರ್‌ರ ಚೊಚ್ಚಲ ಬಾಲಿವುಡ್ ಚಿತ್ರವಾಗಿದೆ.
ಇದು ಚೀನಾ ಒಂದರಲ್ಲೇ $34 ಮಿಲಿಯನ್‍ಗಿಂತ ಹೆಚ್ಚು ಹಣ ಸೇರಿದಂತೆ, ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹3.401 ಬಿಲಿಯನ್ ನಷ್ಟು ಹಣ ಗಳಿಸಿತು. ಈ ಚಿತ್ರವು ಚೌಧರಿಯವರಿಗೆ ಅತ್ಯುತ್ತಮ ನಿರ್ದೇಶಕ, ಖಾನ್‍ರಿಗೆ ಅತ್ಯುತ್ತಮ ನಟ (ವಿಮರ್ಶಕ), ಕಮರ್‌ರಿಗೆ ಅತ್ಯುತ್ತಮ ನಟಿ ಹಾಗೂ ಡೋಬ್ರಿಯಾಲ್‍ರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ, ೬೩ನೇ ಫ಼ಿಲ್ಮ್‌ಫ಼ೇರ್ ಪ್ರಶಸ್ತಿಯಲ್ಲಿ ಆರು ಪ್ರಮುಖ ನಾಮನಿರ್ದೇಶನಗಳನ್ನು ಪಡೆಯಿತು. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಸೇರಿದಂತೆ, ಈ ಚಿತ್ರವು ಎರಡು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
ಕಥಾವಸ್ತು
[ಬದಲಾಯಿಸಿ]ತನ್ನ ಹೆಂಡತಿ ಮೀತಾಳೊಂದಿಗೆ (ಸಾಬಾ ಕಮರ್) ಇರುವ ರಾಜ್ ಬತ್ರಾ (ಇರ್ಫ಼ಾನ್ ಖಾನ್) ದೆಹಲಿಯ ಒಬ್ಬ ಶ್ರೀಮಂತ ವ್ಯಾಪಾರಿಯಾಗಿರುತ್ತಾನೆ. ರಾಜ್ ಮತ್ತು ಮೀತಾ ಹಿಂದಿ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತಾರಾದರೂ, ತಮ್ಮ ೫ ವರ್ಷದ ಮಗಳು ಪಿಯಾ (ದಿಶಿತಾ ಸೆಹಗಲ್) ದೆಹಲಿಯ ಅತಿ ಶ್ರೇಷ್ಠ ಶಾಲೆಗಳ ಪೈಕಿ ಒಂದರಲ್ಲಿ ಪ್ರವೇಶ ಪಡೆಯಬೇಕೆಂದು ಬಯಸುತ್ತಾರೆ. ಅತ್ಯುತ್ತಮ ಶಾಲೆಯಾದ 'ಡೆಲಿ ಗ್ರಾಮರ್ ಸ್ಕೂಲ್' ೩ ಕಿ.ಮಿ. ತ್ರಿಜ್ಯದೊಳಗೆ ವಾಸಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಎಂಬ ಷರತ್ತನ್ನು ಹೊಂದಿರುತ್ತದೆ, ಹಾಗಾಗಿ ಈ ಕುಟುಂಬವು ವಸಂತ್ ವಿಹಾರ್‌ಗೆ ಸ್ಥಳಾಂತರವಾಗುತ್ತದೆ.
ಪ್ರವೇಶಕ್ಕಾಗಿ ತಂದೆತಾಯಿಯರನ್ನು ಸಂದರ್ಶಿಸಲಾಗುತ್ತದೆ ಎಂದು ನಂತರ ಅವರು ಅರಿತುಕೊಳ್ಳುತ್ತಾರೆ. ಅವರು ಶಿಖಾ (ತಿಲೋತ್ತಮಾ ಶೋಮ್) ಎಂಬ ಸಲಹಾಗಾರ್ತಿಯ ಬಳಿ ಹೋಗುತ್ತಾರೆ. ಅವಳು ಅವರನ್ನು ಸಂದರ್ಶನಕ್ಕಾಗಿ ಸಿದ್ಧಗೊಳಿಸುತ್ತಾಳೆ. ಆದರೆ, ಸಂದರ್ಶನದಲ್ಲಿ ರಾಜ್ ತನಗೆ ಕಲಿಸಿಕೊಟ್ಟ ಉತ್ತರಗಳನ್ನು ಹೇಳಲು ವಿಫಲವಾಗಿ ಗುಟ್ಟುರಟ್ಟಾಗುತ್ತದೆ. ಪರಿಣಾಮವಾಗಿ, ಅವರ ಮಗಳು ಎಲ್ಲ ಶಾಲೆಗಳಿಂದ ತಿರಸ್ಕೃತಳಾಗುತ್ತಾಳೆ. ರಾಜ್ ಎಲ್ಲ ಬಗೆಯ ತಂತ್ರಗಳನ್ನು ಪ್ರಯತ್ನಿಸಿದರೂ ಯಾವ ಉಪಾಯಗಳೂ ಯಶಸ್ವಿಯಾಗುವುದಿಲ್ಲ.
ನಂತರ, ರಾಜ್ ಹಾಗೂ ಮೀತಾ ತಮ್ಮ ಒಬ್ಬ ಉದ್ಯೋಗಿಯು ತನ್ನ ಮಗಳ ಪ್ರವೇಶವನ್ನು ಶಿಕ್ಷಣದ ಹಕ್ಕಿನ (ಆರ್‌ಟಿಇ) ಕೋಟಾದ ಮೂಲಕ ಹೇಗೆ ಪಡೆದನು ಎಂದು ತಿಳಿದುಕೊಳ್ಳುತ್ತಾರೆ. ಒಬ್ಬ ದಳ್ಳಾಳಿಯು ವಿದ್ಯಾರ್ಥಿಗಳನ್ನು ಆಯ್ಕೆಮಾಡುವ ಲಾಟರಿ ಪ್ರಕ್ರಿಯೆಯನ್ನು ಮೋಸದಿಂದ ನಿರ್ವಹಿಸಬಹುದು ಎಂದು ಭರವಸೆ ಕೊಟ್ಟ ನಂತರ ರಾಜ್ ಅವನ ಸಹಾಯವನ್ನು ಕೇಳುತ್ತಾನೆ. ಆದರೆ ಇನ್ನೇನು ಆ ದಂಪತಿಯು ತಮ್ಮ ಯಶಸ್ಸನ್ನು ಸವಿಯಬೇಕೆನ್ನುವಷ್ಟರಲ್ಲಿ, ಒಂದು ವಾರ್ತಾ ವರದಿಯು ಶ್ರೀಮಂತ ತಂದೆತಾಯಿಯರು ಆರ್‌ಟಿಇ ಕೋಟಾವನ್ನು ದುರುಪಯೋಗ ಮಾಡುವುದನ್ನು ಬಹಿರಂಗಗೊಳಿಸುತ್ತದೆ. ರಾಜ್ ಹಾಗೂ ಮೀತಾ ಭಯಗೊಳ್ಳುತ್ತಾರೆ, ಏಕೆಂದರೆ ಅವರ ಮುಂದಿರುವ ಏಕೈಕ ಆಯ್ಕೆಯೆಂದರೆ ವಾಸ್ತವವಾಗಿ ತಾವು ಪ್ರಪತ್ರದಲ್ಲಿ ತುಂಬಿದ ವಿಳಾಸದಲ್ಲಿ ಬಡತನದಿಂದ ನರಳುತ್ತಿರುವ ಕುಟುಂಬದ ಜೀವನವನ್ನು ಜೀವಿಸಲು ಆರಂಭಿಸುವುದು.
ರಾಜ್ ಹಾಗೂ ಮೀತಾ ಅಲ್ಲಿಗೆ ಸ್ಥಳಾಂತರಗೊಂಡು ಪ್ರವೇಶವನ್ನು ಪಡೆಯಲು ಬಡವರಂತೆ ನಟಿಸಲು ಆರಂಭಿಸುತ್ತಾರೆ. ಅವರ ನೆರೆಹೊರೆಯವರಾದ ಶ್ಯಾಮ್ ಪ್ರಕಾಶ್ ಕೋರಿ (ದೀಪಕ್ ಡೋಬ್ರಿಯಾಲ್) ಹಾಗೂ ಅವನ ಹೆಂಡತಿ ತುಳಸಿ ತಮ್ಮ ಸೀಮಿತ ಆದಾಯದ ಹೊರತಾಗಿಯೂ ಕಡೇತನಕ ಅವರ ಕಷ್ಟಗಳನ್ನು ಹೋಗಲಾಡಿಸಲು ನೆರವಾಗುತ್ತಾರೆ. ಒಂದು ದಿನ 'ಡೆಲಿ ಗ್ರಾಮರ್ ಸ್ಕೂಲ್'ನ ಒಬ್ಬ ಶಿಕ್ಷಕ ಹಿನ್ನೆಲೆ ಪರಿಶೀಲನೆ ಮಾಡಲು ಆಗಮಿಸುತ್ತಾನೆ. ಅವನು ರಾಜ್‍ನ ಸುಳ್ಳನ್ನು ಕಂಡುಹಿಡಿಯುತ್ತಾನೆ, ಆದರೆ ಅವನು ಸಂದರ್ಭಗಳ ಬಲಿಪಶುವಾಗಿರಬಹುದು ಎಂದು ವಿವರಿಸಿ ಶ್ಯಾಮ್ ಅವನನ್ನು ಪಾರುಮಾಡುತ್ತಾನೆ. ಆ ಶಿಕ್ಷಕನ ಎರಡನೇ ಭೇಟಿಯಲ್ಲಿ ಆ ದಂಪತಿಯು ಅವನನ್ನು ಮನದಟ್ಟುಮಾಡುತ್ತಾರೆ. ಆಗ ಪಠ್ಯೇತರ ಶುಲ್ಕಗಳಾಗಿ ಅವನು ರೂ. ೨೪೦೦೦ರ ವ್ಯವಸ್ಥೆಮಾಡಲು ಅವರಿಗೆ ಹೇಳುತ್ತಾನೆ. ತಡ ರಾತ್ರಿಯಲ್ಲಿ ಶ್ಯಾಮ್ ರಾಜ್‍ನನ್ನು ಎಟಿಎಮ್‍ನಲ್ಲಿ ನೋಡಿ ಅವನು ಹಣ ಕದಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಭಾವಿಸುತ್ತಾನೆ. ಶ್ಯಾಮ್ ಅವನನ್ನು ಹಣ ತೆಗೆದುಕೊಳ್ಳದಂತೆ ತಡೆಯುತ್ತಾನೆ, ಮತ್ತು ಬದಲಾಗಿ ಒಂದು ಎಸ್‍ಯುವಿ ತನಗೆ ಡಿಕ್ಕಿ ಹೊಡೆಯುವಂತೆ ಮಾಡಿಕೊಂಡು ಆ ಕಾರಿನ ಮಾಲೀಕನಿಂದ ಹಣ ವಸೂಲಿ ಮಾಡಿಕೊಳ್ಳುತ್ತಾನೆ.
ಅಂತಿಮವಾಗಿ ಪಿಯಾ ಪ್ರವೇಶ ಪಡೆಯುತ್ತಾಳೆ, ಆದರೆ ಶ್ಯಾಮ್‍ನ ಮಗ ಮೋಹನ್ (ಅಂಗ್ಶುಮಾನ್ ನಂದಿ) ಆಯ್ಕೆಯಾಗುವುದಿಲ್ಲ. ರಾಜ್ ಮತ್ತು ಅವನ ಕುಟುಂಬ ಆ ಮನೆಯನ್ನು ಬಿಟ್ಟು ತಮ್ಮ ವಸಂತ್ ವಿಹಾರ್‌ನ ಮನೆಗೆ ಮರಳುತ್ತಾರೆ. ಆ ದಂಪತಿಯು ಮೋಹನ್ ಕಲಿಯುತ್ತಿರುವ ಶಾಲೆಗೆ ಅವನ ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಹೋಗುತ್ತಾರೆ. ಅಲ್ಲಿನ ಪರಿಸ್ಥಿತಿಯನ್ನು ನೋಡಿದ ಮೇಲೆ, ಆ ಶಾಲೆಯ ಜೀರ್ಣೋದ್ಧಾರ ಮಾಡಲು ಹಾಗೂ ಹೊಸ ಪುಸ್ತಕಗಳನ್ನು ತರಿಸಲು ಗಣನೀಯ ಪ್ರಮಾಣದ ಹಣವನ್ನು ದಾನ ಮಾಡುತ್ತಾರೆ. ತನ್ನ ಮಗನು ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿರುವುದನ್ನು ನೋಡಿ ಶ್ಯಾಮ್‍ನು ಪ್ರಾಂಶುಪಾಲರನ್ನು ಭೇಟಿಮಾಡಿ ಅವರ ಮೂಖಾಂತರ ದಾನಿಯ ವಿಳಾಸವನ್ನು ಪಡೆಯುತ್ತಾನೆ. ವಾಸ್ತವವನ್ನು ತಿಳಿದ ನಂತರ ಅವನು ಸಿಟ್ಟಾಗುತ್ತಾನಾದರೂ, ಪಿಯಾಳನ್ನು ಶಾಲೆಯಲ್ಲಿ ನೋಡಿದ ನಂತರ ಶಾಂತನಾಗುತ್ತಾನೆ. ರಾಜ್‍ನಲ್ಲಿ ಅಪರಾಧ ಪ್ರಜ್ಞೆ ಉಂಟಾಗಿ, ಮೀತಾ ಪ್ರತಿರೋಧ ತೋರಿದರೂ, ತನ್ನ ಮಗಳ ಪ್ರವೇಶವನ್ನು ರದ್ದುಮಾಡಿಸಲು ಅವನು ಶಾಲೆಯ ಪ್ರಾಂಶುಪಾಲೆಯನ್ನು ಭೇಟಿಯಾಗುತ್ತಾನೆ. ಶಾಲೆಯ ಗೌರವದ ಪ್ರಶ್ನೆಯಾಗಿರುವುದರಿಂದ ಕಳವಳಗೊಂಡು ಪ್ರಾಂಶುಪಾಲೆಯು ಅವನ ಪ್ರಸ್ತಾಪಕ್ಕೆ ಒಪ್ಪುವುದಿಲ್ಲ. ಅಂತಿಮವಾಗಿ, ರಾಜ್ ಸಭಾಂಗಣದಲ್ಲಿ ಹೃದಯಸ್ಪರ್ಶಿಯಾದ ಭಾಷಣಮಾಡಿ ಶಾಲೆಯಿಂದಾಚೆಗೆ ಹೋಗುತ್ತಾನೆ. ನಂತರ, ರಾಜ್ ಹಾಗೂ ಮೀತಾ ಪಿಯಾಳನ್ನು ಮೋಹನ್ ಓದುತ್ತಿರುವ, ಸರ್ಕಾರ ನಡೆಸುತ್ತಿರುವ ಹಿಂದಿ ಮಾಧ್ಯಮ ಶಾಲೆಗೆ ಕಳಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Hindi Medium - Movie". Box Office India. Retrieved 2017-07-28.
- ↑ "'Ready Player One' and 'Hindi Medium' lead China's Qingming Festival box office". Global Times. 8 April 2018. Archived from the original on 12 ಅಕ್ಟೋಬರ್ 2019. Retrieved 29 ಜೂನ್ 2019.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Indian Film 'Hindi Medium' Won Over China's Middle Class Moviegoers". China Film Insider. 9 April 2018.
- ↑ "Hindi Medium's success in China gives much needed push to the battle against linguistic chauvinism". Firstpost. 12 April 2018.