ಸ್ಕಂದಗಿರಿ ಬೆಟ್ಟ
'ಕಳವರದುರ್ಗ' ಎಂಬ ಹೆಸರಿನಿಂದಲೂ ಕರೆಯಲ್ಪಡುವ ಸ್ಕಂದಗಿರಿಯು ಕೋಟೆಯಿಂದಾವೃತ್ತವಾದ ಬೆಟ್ಟವಾಗಿದ್ದು, ಬೆಂಗಳೂರಿನಿಂದ ಸು. 62 ಕಿ.ಮೀ. ದೂರದಲ್ಲಿರುವ ಕಳವರ ಹಳ್ಲಿಯಲ್ಲಿದೆ. ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7 ರ ಬಳಿ ಕಂಡುಬರುತ್ತದೆ. ಬೆಟ್ಟದ ತುಡಿಯು ಸಮುದ್ರ ಮಟ್ಟದಿಂದ 1450 ಮೀ. ನಷ್ಟು ಎತ್ತರದಲ್ಲಿದೆ. ಹಾಗೂ ಇದು ಕಳವರ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ಹಳ್ಳಿಯು 2011ರ ಜನಗಣತಿ ಪ್ರಕಾರ 1093 ಜನಸಂಖ್ಯೆ ಹೊಂದಿದೆ.[೧]
| ಸ್ಕಂದಗಿರಿ ಬೆಟ್ಟ | |
|---|---|
| Native name ಕನ್ನಡ:ಕಳವರದುರ್ಗ | |
ಸ್ಕಂದಗಿರಿ ಬೆಟ್ಟ | |
| ಸ್ಥಳ | ಕಳವರದುರ್ಗ, ಚಿಕ್ಕಬಳ್ಳಾಪುರ, ಕರ್ನಾಟಕ. |
೧೭೯೧ರಲ್ಲಿ ಟಿಪ್ಪು ಬ್ರಿಟಿಷರಿಂದ ಸೋತಾಗ, ಈ ಕೋಟೆಯೂ ಆಂಗ್ಲರ ಪಾಲಾಯಿತು.
ಚಾರಣ
[ಬದಲಾಯಿಸಿ]ಕರ್ನಾಟಕ ರಾಜ್ಯ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯು (ಕೊಂಡಿ Archived 2022-12-18 ವೇಬ್ಯಾಕ್ ಮೆಷಿನ್ ನಲ್ಲಿ.) ಚಾರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಬೆಂಗಳೂರಿಗೆ ಹತ್ತಿರದ ತಾಣವಾದ್ದರಿಂದ ಅತೀ ಹೆಚ್ಚು ಚಾರಣಪ್ರಿಯರ ನೆಚ್ಚಿನ ತಾಣವಾಗಿದೆ.[೨]
ಕಾಯ್ದಿರಿಸುವಿಕೆ
[ಬದಲಾಯಿಸಿ]ಸ್ಕಂದಗಿರಿ ಹತ್ತುವ ಮೊದಲು ಆನ್ಲೈನ್ ಅಲ್ಲಿ ಶುಲ್ಕಪಾವತಿಸಿ ನಿಗದಿ ಮಾಡಬೇಕಾಗುತ್ತದೆ. ಬೆಳಿಗ್ಗೆ ೪ ಮತ್ತು ೮ ಗಂಟೆಗೆ ಆರಂಭವಾಗುವ ಚಾರಣಗಳು ತಲಾ ೧೫೦ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಗೈಡ್‌ಗಳೂ ಸಹ ಲಭ್ಯವಿರುತ್ತಾರೆ. [೩]
ಸಮಯ
[ಬದಲಾಯಿಸಿ]ಒಟ್ಟು ಅಂದಾಜು ೫ ಗಂಟೆಗಳ ಚಾರಣ (ಆರೋಹಣ - ೨ ತಾಸು, ವಿರಾಮ - ೧ ತಾಸು, ಅವರೋಹಣ - ೨ ತಾಸು) ಅತೀಸುಲಭವೂ ಅಲ್ಲದ ಅತೀ ಕಠಿಣವೂ ಅಲ್ಲದ ಚಾರಣಗಳ ಪಟ್ಟಿಗೆ ಸೇರಿದ್ದು ವರ್ಷದ ಎಲ್ಲ ಋತುಗಳಲ್ಲೂ ಕೈಗೊಳ್ಳಬಹುದಾಗಿದೆ.
ಚಾರಣ ಮಾರ್ಗ
[ಬದಲಾಯಿಸಿ]| ಪ್ರಾರಂಭ | ಅಂತ್ಯ | ದೂರ |
|---|---|---|
| ಪಾಪಾಗ್ನಿ ಮಠ | ಅರಣ್ಯ ಇಲಾಖೆ ಚೆಕ್‌ಪೋಸ್ಟ್ | ೮೦೦ಮಿ |
| ಚೆಕ್‌ಪೋಸ್ಟ್ | ವಿರಾಮ ಸ್ಥಳ ೧ | ೧೧೦೦ಮಿ |
| ವಿರಾಮ ಸ್ಥಳ ೧ | ಬೆಟ್ಟದ ತುದಿ | ೯೦೦ಮಿ |

ಕಳವಾರ ಗ್ರಾಮದ ಪಾಪಾಗ್ನಿ ಮಠದ ಹಿಂದಿನಿಂದ ಪ್ರಾರಂಭವಾಗುವ ಚಾರಣದ ಹಾದಿ 3 ಕಿ. ಮೀ. ಕ್ರಮಿಸಿದರೆ ಬೆಟ್ಟದ ತುದಿಯನ್ನು ತಲುಪುತ್ತದೆ. ಬೆಟ್ಟವು ಗಿರಿದುರ್ಗವಾಗಿದೆ (ಕೋಟೆಯಿಂದಾವೃತ್ತವಾದ ಬೆಟ್ಟ) ಸಮುದ್ರ ಮಟ್ಟದಿಂದ 1450 ಮೀ. ಎತ್ತರದಲ್ಲಿ ದೇವಾಲಯವೂ, ಕಲ್ಯಾಣಿಯೂ, ಕೆಲ ಕೋಟೆಯ ಉಳಿದ ಪಾರ್ಶ್ವಗಳೂ ಕಾಣಸಿಗುತ್ತವೆ.
ವಿಹಂಗಮ ನೋಟ
[ಬದಲಾಯಿಸಿ]ಸೂರ್ಯೋದಯಕ್ಕೂ ಮುನ್ನ ಬೆಟ್ಟವನ್ನು ಹತ್ತಿ, ತುದಿಯಲ್ಲಿ ನಿಂತು ಸೂರ್ಯೋದಯವನ್ನು ವೀಕ್ಷಿಸಲು ಕಾದರೆ, ಮೋಡಗಳ ಮೇಲೆ ನಾವು ನಿಂತಿರುವಂತೆ ಭಾಸವಾಗುತ್ತದೆ ಹಾಗೂ ಮೋಡಗಳು ಸಾಗರ ಉಕ್ಕಿ ಹರಿಯುವ ರೀತಿ ತೇಲುತ್ತಿರುತ್ತವೆ. ಮೋಡಗಳ ಕೊನೆಯಲ್ಲಿ ಉದಯಿಸುವ ಸೂರ್ಯ ಸಾಗರದಿಂದ ಹೊರಬರುತ್ತಿರುವಂತೆ ಭಾಸವಾಗುತ್ತದೆ.

ಚಿಕ್ಕಬಳ್ಳಾಪುರದ 'ಪಂಚಗಿರಿ'ಗಳೆಂದು ಹೆಸರಾಗಿರುವ ನಂದಿ , ಚನ್ನಗಿರಿ, ಬ್ರಹ್ಮಗಿರಿ ಮತ್ತು ಹೇಮಗಿರಿಗೊಳಂದಿಗೆ, ಸ್ಕಂದಗಿರಿಯೂ ಒಂದು. ಸ್ಕಂದಗಿರಿಯಿಂದ ನಂದಿಬೆಟ್ಟ ಸೇರಿದಂತೆ ಎಲ್ಲ ಪಂಚಗಿರಿಗಳಲನ್ನೂ ವೀಕ್ಷಿಸಬಹುದಾಗಿದೆ.
ಸ್ಕಂದಗಿರಿ ಇತಿಹಾಸ ಕುರಿತು ಕರ್ನಾಟಕದ ಪ್ರಸಿದ್ಧ ಇತಿಹಾಸಕಾರದ ಪಿವಿ ಕೃಷ್ಣಮೂರ್ತಿಯವರು ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಪ್ರಕಟಿಸಿರುವ ಸಂಶೋಧನ ಲೇಖನ ಸಾರಾಂಶ ಇಂತಿದೆ. [೫]
ನಮ್ಮ ಎಷ್ಟೋ ಸ್ಥಳಗಳ, ಪ್ರದೇಶಗಳ ಹೆಸರುಗಳು ಜನಾಂಗವಾಚಿಯಾಗಿಯೂ ಪ್ರಚಲಿತವಿರುವ ಅಂಶ, ಸ್ಥಳ ನಾಮಾಧ್ಯಯನಗಳಿಂದ ಸುವ್ಯಕ್ತವಾಗಿದೆ. ಪ್ರಾಚೀನ ದ್ರಾವಿಡ ಬುಡಕಟ್ಟು ಜನರಲ್ಲಿ ಕುರುಬ ಅಥವಾ ಕುರುಂಬ 'ಕಳವರ್' ಎಂಬುವರು ಕೂಡ ಗಮನಾರ್ಹರು. ಈ ಬುಡಕಟ್ಟು ಜನಾಂಗದ ಕುರುಹನ್ನು ನೀಡುವ ನಾಡೊಂದು ಪ್ರಸಿದ್ಧ ನಂದಿಬೆಟ್ಟಗಳ ಪರಿಸರದಲ್ಲಿ ಅಸ್ತಿತ್ವದಲ್ಲಿದ್ದ ವಿವರ ಶಾಸನಗಳಿಂದ ತಿಳಿದುಬರುತ್ತದೆ. ಚೋಳರ ಕಾಲದ ಅನೇಕ ಶಾಸನಗಳಲ್ಲಿ ಕಳವರನಾಡಿನ ಪ್ರಸ್ತಾಪ ಬಂದಿದೆ. ನಿಗರಿಲಿ ಚೋಳಮಂಡಲಕ್ಕೆ ಸೇರಿದ ನಾಡು ಎಂದು ಅದು ಉಕ್ತವಾಗಿದೆ. ಆದರೆ ಅದಕ್ಕೂ ಮೊದಲೇ ಆ ಪ್ರದೇಶಕ್ಕೆ 'ಕಳವರನಾಡು' ಎಂಬ ಹೆಸರೇ ಜನಬಳಕೆಯಲ್ಲಿದ್ದಿತೆಂದು ತೋರುತ್ತದೆ. ನಂದಿಬೆಟ್ಟಗಳ ಬೆಟ್ಟದ ಪೂರ್ವ ತಪ್ಪಲಿನಲ್ಲಿ ಕಳವಾರ/ಕಂದವಾರ ಎಂಬ ಹೆಸರಿನ ಗ್ರಾಮವೂ ಇದೆ. ಕಳವಾರ ಬೆಟ್ಟಗಳನ್ನು 'ಸ್ಕಂಧಗಿರಿ' ಎಂದೂ, ಕಳವಾರ ಗ್ರಾಮವನ್ನು ಕಂದವಾರವೆಂದೂ ಸಂಸ್ಕೃತಾನುಕರಣಗೊಳಿಸಿರುವುದೂ ಕಂಡು ಬರುತ್ತದೆ. ಈ ಕಳವಾರಬೆಟ್ಟ ಮತ್ತು ಗ್ರಾಮಗಳ ಪರಿಸರವೇ 'ಕಳವರನಾಡಿನ' ಮೂಲಸ್ಥಾನವಾಗಿದ್ದು ನಂದಿದುರ್ಗದ ಆಸುಪಾಸಿನ ಬೆಟ್ಟ ಗುಡ್ಡಗಳನ್ನೊಳಗೊಂಡ ಪ್ರದೇಶವೇ ಕಳವರನಾಡು ಎಂದು ಹೆಸರು ಪಡೆದಿತೆನ್ನಬಹುದು. ಉ. ಪಿನಾಕಿನಿ, ದ. ಪಿನಾಕಿನಿ, ಪಾಲಾರ್ ಮತ್ತು ಅರ್ಕಾವತೀ ಮುಂತಾದ ನದಿಗಳ ಉಗಮಸ್ಥಾನವೂ ಆಗಿದೆ. ದಕ್ಷಿಣ ಭಾರತದ ಪ್ರಾಚೀನತಮ ಅರಸು ಮನೆತನಗಳಾದ ಬಾಣರಸರು ಮತ್ತು ಗಂಗರಸರು ತಮ್ಮನ್ನು ನಂದಗಿರಿನಾಥರೆಂದೇ ಕರೆದುಕೊಂಡಿದ್ದಾರೆ.
ನಂದಿಗಿರಿಯು ಕ್ರಿಸ್ತಶಕದ ಆರಂಭದ ೩-೪ನೇ ಶತಮಾನಕ್ಕಾಗಲೇ ರಾಜಕೀಯವಾಗಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಿತು ಎಂಬುದು ಗಮನಾರ್ಹ. ಅಲ್ಲದೆ ಇದು ಉತ್ತರ ಭಾರತದ ಮೌರ್ಯ ಪೂರ್ವದ ನಂದರ ಆಳ್ವಿಕೆಗೂ ಒಳಪಟ್ಟಿದ್ದಿತೆಂಬ ಅಭಿಪ್ರಾಯವೂ ಇದೆ.
ನಂದಿಬೆಟ್ಟದ ಮೇಲಿರುವ ಗುಹೆಗಳಿಗೆ ಕ್ರಿ.ಶ. ಸು. ೮ನೇ ಶತಮಾನಕ್ಕಾಗಲೇ ಶೈವ ಪರಂಪರೆಯ ಸ್ಪರ್ಶ ಉಂಟಾಗಿತ್ತು ಎಂಬ ಸಂಗತಿ ಅಲ್ಲಿನ ನೆಲ್ಲಿಕಾಯಿ ಬಸವನಮಂಟಪದ ಸಮೀಪದಲ್ಲಿರುವ ಗುಹೆಯೊಳಗಿನ ಶಾಸನ ಮತ್ತು ಕ್ರಿ.ಶ. ೮೦೬ರ ರಾಷ್ಟ್ರಕೂಟ ಮುಮ್ಮಡಿ ಗೋವಿಂದನ ತಾಮ್ರಶಾಸನ ಗಳಿಂದ ಖಚಿತವಾಗುತ್ತದೆ. ನಂದಿಬೆಟ್ಟದ ಈಶಾನ್ಯದ ತಪ್ಪಲಿ ನಲ್ಲಿರುವ ನಂದಿಗ್ರಾಮದಲ್ಲಿನ ಶಿವದೇವಾಲಯವು (ಭೋಗ ನಂದೀಶ್ವರ) ರಾಷ್ಟ್ರಕೂಟ ಮುಮ್ಮಡಿ ಗೋವಿಂದನ ಮಗಳೂ ಬಾಣರಸನ ರಾಣಿಯೂ ಆದ 'ಮಾಣಿಕಬ್ಬೆ' ಎನಿಸಿದ 'ರತ್ನಾವಳಿ'ಯ ಆಶಯದಂತೆ ರಚನೆಗೊಂಡ ಸಂಗತಿ ಮತ್ತೊಂದು ತಾಮ್ರಶಾಸನದಿಂದ ತಿಳಿದುಬರುತ್ತದೆ. ಹೀಗೆ ಕ್ರಿಸ್ತಶಕ ಒಂಬತ್ತನೆಯ ಶತಮಾನಕ್ಕಾಗಲೇ ನಂದಿಯು ಒಂದು ಪ್ರಸಿದ್ದ ಶೈವಧರ್ಮೀಯರ ಸ್ಥಾನವಾಗಿ ಹೆಸರು ಪಡೆದಿದ್ದಿತು, ಅಂದರೆ ಅದು ತನ್ನ ಪೂರ್ವದ ರಾಜಕೀಯ ಸ್ಥಾನಮಾನದಿಂದ ಮುಕ್ತವಾಗಿ ಕೇವಲ ಧಾರ್ಮಿಕ ಸ್ಥಾನವಾಗಿ ಪರಿಗಣಿತವಾಗಿತ್ತು. ಶಿವನಿಗೆ 'ಸೇನನಾಂಪತಿ' ಎಂಬ ಹೆಸರುಂಟು. (ಕಳವರರೇ ಸ್ತೇನರೆಂಬ ಅಭಿಪ್ರಾಯವಿದೆ.) ಹಾಗಾಗಿ ಈ ಶೈವಸ್ಥಾನವು ಕಳವರ್ ಜನಾಂಗದ ಆರಾಧ್ಯ ದೈವಸ್ಥಾನವಾಗಿ ಪರಿಣಮಿಸಿತ್ತೆಂದು ತೋರುತ್ತದೆ. ಅಂತಾಗಿ ಮುಂದೆ ವಿಜಯನಗರದ ಅರಸರ ಕಾಲದವರೆಗೂ ಅದು ಒಂದು ಆಡಳಿತಾತ್ಮಕ ಸ್ಥಾನವನ್ನು ಮರಳಿ ಪಡೆದಿರಲಿಲ್ಲ. ವಿಜಯನಗರ ಅರಸರ ಆಳ್ವಿಕೆಗೊಳಪಟ್ಟ ಆವತಿನಾಡ ಪ್ರಭುಗಳ ಆಳ್ವಿಕೆಯ ಕ್ರಿ.ಶ. ೧೪೨೮ರ ಶಾಸನ ವೊಂದು "ನಂದಿಮಂಡಲ ಪಂಚಕ್ರೋಶ ಪರಿಮಿತಿ” ಯುಳ್ಳದ್ದೆಂದು ಉಲ್ಲೇಖಿಸುತ್ತದೆ. ಈ ಪ್ರದೇಶವೇ ಪ್ರಾಯಶಃ ಚೋಳರ ಕಾಲದಲ್ಲಿ ಶಾಸನಗಳಲ್ಲಿ ಉಕ್ತವಾಗಿರುವ 'ಕಳವರನಾಡು' ಆಗಿದ್ದಿತೆಂದು ಭಾವಿಸಬಹುದಾಗಿದೆ.
ನಾಡುಗಳ ಹೆಸರುಗಳು ಆ ಪ್ರದೇಶದ ಭೂ-ವೈಶಿಷ್ಟ್ಯ ಅಥವಾ ಆ ಪ್ರದೇಶದ ಒಂದು ಪ್ರಸಿದ್ದ ಸ್ಥಳದ ಹೆಸರನ್ನು ಒಳಗೊಂಡಿರುವುದು ಸಾಮಾನ್ಯ ಸಂಗತಿ. ಉದಾ: ಕುಕ್ಕಲನಾಡು, ಕಿಲಿನಾಡು, ಕಿಲೆನಾಡು, ಸೀಗಲನಾಡು, ಹೊಮ್ಮಳಿಗೆನಾಡು ಮುಂತಾದವು ಭೂ-ವೈಶಿಷ್ಟ್ಯಕ್ಕೇ ಸಂಬಂಧಿಸಿದ ನಾಡುಗಳಾಗಿವೆ. ಎಲಹಕ್ಕನಾಡು, ಕೈವಾರನಾಡು, ಕೋಳಾಲನಾಡು ಮುಂತಾದವು ನೇರವಾಗಿ ಪ್ರಸಿದ್ಧ ಸ್ಥಳಗಳಿಗೆ ಸಂಬಂಧಿಸಿದ ನಾಡುಗಳಾಗಿವೆ. ಈ ಸ್ಥಳಗಳಾದರೂ ಪ್ರಾಕೃತಿಕ ಪರಿಸರದ ಹಿನ್ನೆಲೆಯುಳ್ಳ ವಾಗಿರುವುದು ಗಮನಾರ್ಹ ಸಂಗತಿಯೆ. ಇವುಗಳಿಂದ ಭಿನ್ನವಾದ ಆದರೆ ಬುಡಕಟ್ಟುದ್ದೊಂದರ ಹಿನ್ನೆಲೆಯುಳ್ಳ ನಾಡೇ ಕುರುಬರ 'ಕಳವರನಾಡು',
ಉತ್ತರ ಭಾರತದ ಉ. ಪ್ರದೇಶ, ಮಥುರಾ, ವಿಂಧ್ಯಾ, ಬಿಹಾರ ಮತ್ತು ಪ. ಬಂಗಾಳಗಳಲ್ಲಿ KALWAR, (ಕಲರ್, ಕಲ್ಲರ್, ಸೆಹೋರ್, ಕಲಲ್, ಕೊನ್ವಾರ್) ಎಂಬ ಬುಡಕಟ್ಟಿನ ಜನರು ಇಂದಿಗೂ ವಾಸಿಸುತ್ತಿರುವುದು ಕಂಡುಬರುತ್ತದೆ. ಮಧ್ಯಭಾರತದ ವಿಂಧ್ಯಪರ್ವತಗಳ ಆಸುಪಾಸಿನಲ್ಲಿದ್ದ ಇವರ ಪೂರ್ವಜರೇ ಕಾಲಾಂತರದಲ್ಲಿ ದಕ್ಷಿಣಕ್ಕೆ ಬಂದು ತಿರುಪತಿಯಿಂದ ಚಿಕ್ಕಬಳ್ಳಾಪುರದ ನಂದಿಗಿರಿಯವರಿಗೂ ನೆಲಸಿದರೆಂದು ತೋರುತ್ತದೆ. ಕಳವರ್ ಮತ್ತು ಮರವರ್ ಎಂಬ ಎರಡು ಪ್ರಧಾನ ಬುಡಕಟ್ಟು ಜನರನ್ನು ಕುರುಬರ ಮೂಲ ದ್ರಾವಿಡರೆಂದು ಭಾವಿಸಲಾಗಿದೆ. ಇವರನ್ನು ತಮಿಳುನಾಡಿನಲ್ಲಿ ದ್ರಾವಿಡ ಕುಲಕ್ಕೆ ಸೇರಿದ ಒಂದು ಪ್ರಧಾನ ಜನಾಂಗವೆಂದು ಗುರುತಿಸಲಾಗಿದೆ. ಇವರಲ್ಲಿ ಪ್ರಧಾನವಾಗಿ ಒಂಬತ್ತು ಗುಂಪುಗಳಿವೆ. ಕಳ್ಳರ್‌ಕುಲ, ತೊಂಡಮಾನ್, ಇಸನಾಟ್ಟುಕಳ್ಳರ್, ನಾಟ್ವಾರ್‌ಕಳ್ಳರ್, ಪೆರಿಅಸುರಿಊರ್ ಕಳ್ಳರ್ ಮುಂತಾದ ಒಳ ಪಂಗಡಗಳು ಕಳವರರಲ್ಲಿ ಕಂಡುಬರುತ್ತದೆ. ಇವರಲ್ಲಿ ಪೆರಿಅಸುರಿಊರ್ ಕಳ್ಳರ್‌ರ ಸಾಂಪ್ರದಾಯಿಕ ವೃತ್ತಿ, ಮೇಲೆ ಉಲ್ಲೇಖಿಸಿದ ಉತ್ತರ ಭಾರತದ KALWAR ರಂತೆ ಮದ್ಯತಯಾರಿಕೆಯೇ ಪ್ರಧಾನವಾಗಿತ್ತೆಂದು ತಿಳಿದುಬರುತ್ತದೆ. ಉಳಿದ ಕಳವರ (ಕುರುಬ ಕುರುಂಬ) ಕುಲದ ಜನರ ಪ್ರಧಾನ ವೃತ್ತಿ ಪಶುಪಾಲನೆ, ವೀರತನ (ಸ್ವಾಭಾವಿಕ ಸೈನಿಕ ಪ್ರವೃತ್ತಿ) ಮತ್ತು ಕೃಷಿ. Oppert (1818-9) ರ ಪ್ರಕಾರ ಕಳ್ಳನ್ ಎಂಬುದು ಕುರುಬರ ಒಂದು ಶಾಖೆ ಎಂದಿದ್ದಾರೆ W. Francis ಅವರು ೧೯೦೧ರ ಜನಗಣತಿ ವರದಿಯಲ್ಲಿ 'ಇವರು ಮೂಲತಃ ಚೋಳ ಪ್ರಾಂತ್ಯದಿಂದ (ತಂಜಾವೂರು), ಪಾಂಡ್ಯ ರಾಜ್ಯಕ್ಕೆ ಕ್ರಿ.ಶ. ೧೧ನೇ ಶತಮಾನದಲ್ಲಿ ವಲಸೆ ಬಂದವರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇವರಲ್ಲಿ ನಾಟ್ವಾರ್ ಕಳ್ಳರ್ ಜನಾಂಗದವರು ಮೂಲತಃ ಪಲ್ಲವರಾಜ್ಯದವರಾಗಿದ್ದು ಅಲ್ಲಿಂದ ಚೋಳ, ಪಾಂಡ್ಯನಾಡುಗಳಿಗೆ ವಲಸೆ ಹೋದವರೆಂದು ಹೇಳಲಾಗಿದೆ.
ಇವರು ಪ್ರಧಾನತಃ ಸೈನಿಕ ಪ್ರವೃತ್ತಿಯ ಜನರಾಗಿದ್ದಾರೆ. ಇವರಿಗೆ ನಿಶ್ಚಿತ ಚಾರಿತ್ರಿಕ ಪರಂಪರೆಯಿದೆ. ಇವರ ಪ್ರಧಾನ ಆಹಾರ ರಾಗಿ. ಇವರು ಮಾಂಸಾಹಾರಿಗಳು, ಮದ್ಯ ಸೇವಕರು ಕೂಡ. ಇವರ ಸ್ತ್ರೀಯರೂ ಸಮಸಮವಾಗಿ ಕೃಷಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಜಾತಿಯ ಪುರೋಹಿತರನ್ನು ಹೊಂದಿರುತ್ತಾರೆ. ಇವರು ಪಾರಂಪರಿಕ ಯೋಧರು, ರಾಜರಾಗಿದ್ದು, ಕೃಷಿಕರು. ಇವರ ಗ್ರಾಮದೇವತೆಗಳು - ಪಂಚವೀರರು, ಬೀರರು, ಕೃಷ್ಣ, ಕುರುಪ್ಪು-ವೀರನ್, ಕಾಳಿ ಅಮ್ಮನ್, ಲಕ್ಷ್ಮಿ ಮೂಲತಃ ಭಾಗವತ ಹಾಗೂ ಶೈವರು. ಇವರಲ್ಲಿ ಸೋಲಗರ್, ಮಂಗರ್ಲ, ತೆಂಗಂಡಿಯರ್, ಪಲಂದರ್, ಕುಲಂದರ್ ಎಂಬ ಪಂಗಡಗಳೂ ಇವೆ. ತೊಂಡಮಾನ್ ಕುಲಕ್ಕೆ ಸೇರಿದ ಕಳ್ಳರ್ ತಮಿಳುನಾಡಿನ ತಿರುನೆಲ್ವೇಲಿ, ಚಿದಂಬರಂ, ಮದುರೆ, ರಾಮನಾಥಪುರಂ, ಪುದುಕೋಟೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಅಲ್ಲದೆ ತೊಂಡಮಾನನನ್ನು ತಮ್ಮ ನಾಯಕನೆಂದು ಭಾವಿಸಿರುತ್ತಾರೆ.
ಈ ಮೇಲಿನ ವಿವರಗಳನ್ನು ಗಮನಿಸಿದರೆ ಕುರುಬ ಕಳವರರು ಗೋವಳರು, ತುರುಕಾರರು ದನವೇ ಇವರ ಧನ. 'ಪರಾಕ್ರಮ'ವು ಒಂದು ಆದರ್ಶ ಗುಣವಾಗಿದ್ದ ಅತಿ ಪುರಾತನ ಕಾಲದಲ್ಲಿ ಯುದ್ಧಗಳಲ್ಲಿ ಪರರನ್ನು ಆಕ್ರಮಿಸಿ ಅವರ ಗೋಧನವನ್ನು ಗೆದ್ದುಕೊಂಡು ಬರುವುದರಲ್ಲಿ ಆ ಕಾಲದ ಜನಗಳಲ್ಲಿ ಹೆಮ್ಮೆ ಎನಿಸುತ್ತಿತ್ತು..... ಕಳವರರಿಗೂ ಧನ ಸಂಪಾದನೆಯ ಹಂಬಲವು ಕಡಿಮೆ ಇರಲಿಲ್ಲ. ದನಗಳನ್ನು ದೋಚಿಕೊಂಡೊಯ್ಯುವಲ್ಲಿ ಕಳವರ ಮತ್ತು ಮರವರ ನೈಪುಣ್ಯವು ಆಶ್ಚರ್ಯಕರವಾಗಿದೆ - ಎಂದು ಥರ್ಸ್‌ಟನ್ ಹೇಳುತ್ತಾರೆ
ಅತಿ ಪುರಾತನ ತಮಿಳು ಸಾಹಿತ್ಯದಲ್ಲಿ ಬರುವ (ವಡಕರ) ವರ್ಣನೆಗಳಲ್ಲಿಯೂ ದನಗಳನ್ನು ಯುದ್ಧಗಳಲ್ಲಿ ದೋಚಿಕೊಂಡು ಹೋಗುವ ಅವರ ಸ್ವಭಾವವೇ ಎದ್ದು ಕಾಣುತ್ತದೆ. ಮೂಲ ದ್ರಾವಿಡರೆಲ್ಲ ಕಳವರ ಕುಲದವರು ಅಂದರೆ 'ಹಾಲುಮತದವರೇ ಆದರೂ ಅನೇಕ ಕಾರಣಗಳಿಂದ ಅವರಲ್ಲಿ ಹಲವು ಬಗೆಗಳುಂಟಾಗಲಾರಂಭಿಸಿದ್ದುದು ಗೋಚರವಾಗುತ್ತದೆ. 'ಕಳ್ಳನು ಉಳ್ಳವ ನಾಗುತ್ತಲೇ ಮರವನಾಗುತ್ತಾನೆ' ಎಂಬರ್ಥದ ಒಂದು ಗಾದೆಯ ಮಾತು ತಮಿಳಿನಲ್ಲಿದೆ. ಈ ಕಳವರ ಮತ್ತು ಮರವರ ಮೂಲದ ಬಗ್ಗೆ ಒಂದು ಸ್ವಾರಸ್ಯಕರ ಕಥೆ ಪ್ರಚಲಿತವಿದೆ. ಒಂದಾನೊಂದು ಕಾಲದಲ್ಲಿ ಯಾವುದೋ ಕಾರ್ಯನಿಮಿತ್ತ ಗೌತಮ ಋಷಿಯು ಹೊರಗೆ ಹೋಗಿದ್ದ. ಆ ಸಂದರ್ಭದ ಅವಕಾಶವನ್ನು ದೇವೇಂದ್ರನು ಉಪಯೋಗಿಸಿಕೊಂಡು ಋಷಿ ಪತ್ನಿ ಅಹಲೈಯ ಸಂಪರ್ಕವನ್ನು ಬೆಳೆಸಿದನು. ತತ್ಪರಿಣಾಮವಾಗಿ ಅಹಲೈಗೆ ಮೂವರು ಮಕ್ಕಳಾದರು. ಋಷಿ ಹಿಂತಿರುಗಿದಾಗ ಆ ಮೂವರಲ್ಲಿ ಒಬ್ಬನು ಬಾಗಿಲ ಹಿಂದೆ ಕಳ್ಳನಂತೆ ಅವಿತುಕೊಂಡನು, ಒಬ್ಬನು ಮರವನ್ನು ಏರಿದನು. ಮತ್ತೊಬ್ಬನು ಆತ್ಮ ವಿಶ್ವಾಸದಿಂದ ಎದುರು ನಿಂತನು. ಬಾಗಿಲ ಹಿಂದೆ ಕಳ್ಳನಂತೆ ಅವಿತುಕೊಂಡವನು 'ಕಳ್ಳನ್' ಎಂದೂ, ಮರವನ್ನು ಏರಿದವನನ್ನು 'ಮರವನ್' ಎಂದೂ, ಪ್ರತ್ಯಕ್ಷವಾಗಿ ಕಾಣಿಸಿಕೊಂಡವನು 'ಅಹಮುಡೆಯನ್' ಎಂದು ಹೆಸರಾದರು. ಅಹಂ-ಉಡೆಯನ್ ಎಂಬುದೆ ಅಹಂಬುಡಿಯನ್ ಎಂದು ಬದಲಾಗಿದೆ. ಈ ಮೂವರ ವಂಶೀಯರೇ ಕಳ್ಳರ್, ಮರವರ್ ಮತ್ತು ಅಹಂಬುಡಿಯರ್ ಎಂಬ ಜನಾಂಗದವರಾದರೆಂಬ ಪ್ರತೀತಿ ಜನಜನಿತವಾಗಿದೆ. ಪುರಾತನ ತಮಿಳು ಸಾಹಿತ್ಯದಲ್ಲಿ ಇವರನ್ನು 'ಕುರುನಿಲಮ್ಮನ್ನೆಯ' ರೆಂದು ಕರೆಯಲಾಗಿದೆ. ಹಾಗಾಗಿ ಸಾಧಾರವಾಗಿ ಕಳವರು ಮರವರು ಒಂದೇ.
'ಇಂದು ಕಳವರನ್ನು ತಮಿಳರಲ್ಲಿ ಎಣಿಸಬಹುದಾಗಿದ್ದರೂ ಪುರಾತನ ತಮಿಳು ಸಾಹಿತ್ಯದೊಳಗಣವರ್ಣನೆಗಳನ್ನು ನೋಡಿದರೆ ಈ ಜನಗಳ ಬಗ್ಗೆ ಚೋಳ ಪಾಂಡ್ಯರಲ್ಲಿ ಆತ್ಮೀಯ ಭಾವವು ಇದ್ದಂತೆ ತೋರುವುದಿಲ್ಲ. ಕಳವರ ವಡುಕರ ಭಾಷೆ ಬೇರೆ, ರೀತಿ ಬೇರೆ ಎಂದು ತಮಿಳು ಕವಿಗಳು ವರ್ಣಿಸಿದ್ದುಂಟು. ಆದುದರಿಂದ ಕಳವರೊಳಗಿನ ಈ ವಡಕರು ತಮಿಳರಿಂದ ಭಿನ್ನರಾಗುತ್ತಲಿದ್ದಕೆಂಬುದರಲ್ಲಿ ಸಂದೇಹವಿಲ್ಲ" ಎಂಬ ಶಂ.ಬಾ. ಜೋಷಿಯವರ ಅಭಿಪ್ರಾಯ ವಿಚಾರಯೋಗ್ಯವಾಗಿದೆ. ಇಂದಿಗೂ ತಮಿಳುನಾಡಿನ ಕುರುಂಬ ಜನರು ಹಳಗನ್ನಡ ರೂಪದ ಕನ್ನಡವೇ ಮಾತುನಾಡುತ್ತಾರೆ.
ದಕ್ಷಿಣ ಭಾರತದ ಇತಿಹಾಸದಲ್ಲಿ ಸು. ಕ್ರಿ.ಶ. ೪-೭ನೇ ಶತಮಾನಗಳಲ್ಲಿ 'ಕಳಭ್ರ'ರೆಂಬ ರಾಜರು ಕಾಣಿಸಿಕೊಳ್ಳುತ್ತಾರೆ. ಇವರು ಮೂಲತಃ ಕಳವರೇ ಆಗಿರಬೇಕೆಂಬ ಅಭಿಪ್ರಾಯ ವಿದ್ವಾಂಸರಲ್ಲಿ ಇದೆ. ಪ್ರೊ॥ ಪಿ.ಟಿ. ಶ್ರೀನಿವಾಸ ಅಯಂಗಾರರು ಈ ಬಗ್ಗೆ ಡಾ|| ಕೃಷ್ಣಸ್ವಾಮಿ ಅಯ್ಯರ್ ಅವರ ಮಾತುಗಳನ್ನು . Dr. S. Krishnaswamy lyangar has given his support to the theory that the Kalabnras were Kallar of old Tamil poetry. Kallar has as alternative form of Kalvar and Kallavar". ಅಭಿಪ್ರಾಯವನ್ನು ಹಿರಿಯ ಶಾಸನ ತಜ್ಞರಾಗಿದ್ದ. ರಾ. ಸಾ. ವೆಂಕಟಯ್ಯನವರು ವ್ಯಕ್ತಪಡಿಸಿದ್ದಾರೆ. ಕಳವರೇ ಕಳಭ್ರರೆಂಬ ಹೆಸರಿನಿಂದ ಮುಂದೆ ಪ್ರಖ್ಯಾತಿಗೆ ಬಂದರೆಂದು ಸಾಮಾನ್ಯವಾಗಿ ಎಲ್ಲ ಸಂಶೋಧಕರು ಒಪ್ಪಿಕೊಂಡಿದ್ದಾರೆ. ಕಳಭ್ರ ಎಂದರೆ ಆನೆ ಗಂಗರ ಪೂರ್ವಿಕರು ಇದೇ ಕಳಭ್ರರಾಗಿದ್ದಾರೆ. ಈ ಕಳಭ್ರ ಮೂಲದ ಗಂಗರು ಕೊಂಗುನಾಡಿನಿಂದಲೇ ತಮ್ಮ ಮೂಲ ನೆಲೆ ವಡುಗಾವಳಿಗೆ ಬಂದು ನೆಲೆಸುತ್ತಾರೆ.
ನಂದಿಬೆಟ್ಟಗಳ ಪರಿಸರದ ಕಳ್ಳರನಾಡಿನ ಪೂರ್ವಕ್ಕೆ ಕೈವಾರನಾಡು ಅದರ ಪೂರ್ವಕ್ಕೆ ಪುಲಿನಾಡನ್ನೊಳಗೊಂಡ
ವಡಗಾವಳಿ ಎಂಬ ಪ್ರಾದೇಶಿಕ ವಿಭಾಗ ಅಸ್ತಿತ್ವದಲ್ಲಿದ್ದ ಸಂಗತಿ ಅನೇಕ ಶಾಸನಗಳಿಂದ ವ್ಯಕ್ತವಾಗುತ್ತದೆ. ವಡಗ/ಬಡಗ ಅಂದರೆ ಉತ್ತರ ದಿಕ್ಕು. ಅಂದರೆ ತಮಿಳು ಪ್ರದೇಶಕ್ಕೆ ಉತ್ತರದಲ್ಲಿದ್ದ ಪ್ರದೇಶವೆಂದು ಅರ್ಥ. ತಮಿಳರು ಕಳಭ್ರರನ್ನು ವಡಕರೆಂದು ಭಾವಿಸುವುದರಿಂದ ಈ ಪ್ರದೇಶದಲ್ಲಿದ್ದ ಕಳವರರೇ ವಡಗರೆನಿಸಿದ್ದ ರೆಂದರೆ ತಪ್ಪಾಗಲಾರದು. ವಡಗಾವಟಿ ಪನ್ನಿರ್ಚ್ಛಾಸಿರವೆಂದು, ಒಂಬತ್ತು-ಹತ್ತನೆಯ ಶತಮಾನದ ಶಾಸನಗಳಲ್ಲಿ ಉಕ್ತವಾಗಿರುವ ಈ ಪ್ರದೇಶ ಇಂದಿನ ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ಮತ್ತು ಚಿಂತಾಮಣಿ ತಾಲೂಕಿನ ಹಲವು ಪ್ರದೇಶಗಳನ್ನೊಳಗೊಂಡಂತೆ, ಚಿತ್ತೂರು ಜಿಲ್ಲೆಯ ಪುಂಗನೂರು ತಾಲೂಕು ಉತ್ತರ ಆರ್ಕಾಡು ಜಿಲ್ಲೆಯ ಗುಡಿಯಾತ್ತಂ ಮುಂತಾದ ತಾಲೂಕುಗಳನ್ನೊಳಗೊಂಡಿದ್ದಿತು. ಮೂಲತಃ ಪಶುಪಾಲಕರಾದ ಕಳವರರು ಈ ಪ್ರದೇಶದಲ್ಲಿ ನೆಲೆನಿಂತು ತಮಿಳರಿಗೆ ವಡಗರೆನಿಸಿ ತಮ್ಮ ವೀರ ಜೀವನವನ್ನು ಮುಂದುವರಿಸಿದ್ದರೆಂದು ತೋರುತ್ತದೆ. ಈ ಪ್ರದೇಶದ ಪ್ರಾಚೀನ ದಾನ ಶಾಸನಗಳನ್ನು ಅವಲೋಕಿಸಿದರೆ ದೇವಾಲಯದ ನಂದದೀವಿಗೆ ಮುಂತಾದ ಸೇವೆಗಳಿಗೆ ಕುರಿಗಳನ್ನೇ ದತ್ತಿಯಾಗಿ ನೀಡಿರುವುದು ಕಂಡುಬರುತ್ತದೆ. ಹಾಗಾಗಿ ಇದು ಪಶು ಸಮೃದ್ಧಿಯನ್ನು, ಪಶುಪಾಲಕರನ್ನೂ ಪಡೆದಿದ್ದ ಪ್ರದೇಶ ವಾಗಿದ್ದಿತೆನ್ನಬುಹುದು. ಅಲ್ಲದೆ ಈ ಪ್ರದೇಶದಲ್ಲೇ ಅತ್ಯಧಿಕ ಸಂಖ್ಯೆಯ ತುರುಗಾಳೆಗಕ್ಕೆ ಸಂಬಂಧಿಸಿದ ವೀರಗಲ್ಲು ಸ್ಮಾರಕಗಳು ವಿಶೇಷವಾಗಿರುವುದು ಮತ್ತೊಂದು ಗಮನಾರ್ಹ ಸಂಗತಿ ಯಾಗಿದೆ ಕಳವರ್‌ರು ಗೋಗಳ್ಳರೂ ಆಗಿದ್ದರೆಂಬ ಅಂಶವನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಈ ಗೋಗ್ರಹಣ ಕ್ರಿಯೆಯು ಮುಂದೆ ತಮ್ಮ ಅಧಿಕಾರ ಸ್ಥಾಪನೆಯ ಕುರುಹಾಗಿ ರೂಪಾಂತರಗೊಂಡ ಅಂಶ ನಮ್ಮ ಪಾರಂಪರಿಕ ಜಾನಪದ ಮತ್ತು ಶಿಷ್ಟ ಸಾಹಿತ್ಯಗಳಲ್ಲಿ ದಾಖಲುಗೊಂಡಿರುವುದು ಸರ್ವವೇದ್ಯ. ಮಹಾಭಾರತದ ಗೋಗ್ರಹಣ ಪ್ರಸಂಗ ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಕನ್ನಡ ಜಾನಪದ ಮಹಾ ಕಾವ್ಯಗಳಾದ... ಗಳಲ್ಲಿ ಉಕ್ತವಾಗಿರುವ ಸಂಗತಿಗಳು ಇದಕ್ಕೆ ಇನ್ನಷ್ಟು ಪೂರಕ ವಿವರಗಳಾಗಿವೆ.
ಈ ಮೇಲಿನ ವಿವರಣೆಯನ್ನು ಪರ್ದ್ಯಾಲೋಚಿಸುವುದರಿಂದ ಕೆಲವು ಸಂಗತಿಗಳನ್ನು ಗ್ರಹಿಸಬಹುದಾಗಿದೆ.
೧. ಕಳ್ಳರರು ಮೂಲತಃ ಉತ್ತರ ಭಾರತ ಅಂದರೆ ಮಧ್ಯ ಭಾರತದ ವಿಂದ್ಯಪರ್ವತಗಳ ಆಸುಪಾಸಿನ ಪ್ರದೇಶಗಳಿಂದ ದಕ್ಷಿಣಕ್ಕೆ ಬಂದ ದ್ರಾವಿಡ ವೃಷ್ಣಿ ಬುಡಕಟ್ಟಿಗೆ ಸೇರಿದ ಜನರು. ಕಾಲಾಂತರದಲ್ಲಿ ಇವರು ದಕ್ಷಿಣಕ್ಕೆ ಬಂದು ನಂದಿಬೆಟ್ಟದ ಪರಿಸರದಲ್ಲಿ ಸಾಂದ್ರವಾಗಿ ನೆಲೆಗೊಂಡು 'ಕಳ್ಳರನಾಡು' ಎಂಬ ಒಂದು ವಿಶಿಷ್ಟ ಭೌಗೋಳಿಕ ಪ್ರದೇಶದ ಸೃಷ್ಟಿಗೆ ಕಾರಣರಾಗಿದ್ದರು.
ಇಂದು ತಮಿಳುನಾಡಿನಾದ್ಯಂತವಿರುವ ಕಳ್ಳರ್, ಮರವರ್ ಮತ್ತು ಅಂಬುಡಿಯನ್ ಎಂಬುವ ಬುಡಕಟ್ಟಿನವರು ಮೂಲತಃ ಒಂದೇ ಮೂಲದಿಂದ ಬಂದವರಾಗಿದ್ದು ಉತ್ತರದಿಂದ, ಕಾಲಾಂತರದಲ್ಲಿ ಇಂದಿನ ಕರ್ನಾಟಕ, ಆಂಧ್ರಗಳ ಮೂಲಕ ಅಲೆಮಾರಿ ಪಶುಪಾಲಕರಾಗಿ ಮುಂದೆ ಸಾಗಿ ತಮಿಳು ಪ್ರದೇಶದಲ್ಲಿ ನೆಲಸಿ ಅಲ್ಲಿನ ಮೂಲಿಗರೆನಿಸಿರಬೇಕು.
೩. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಕಂಡುಬರುವ ಬಡಗ ವಡಗರ್ ಎಂಬುವರು ಪ್ರಾಯಶಃ ಎರಡನೇ ಹಂತದಲ್ಲಿ ೫ ತಮಿಳು ಪ್ರದೇಶಕ್ಕೆ ಪ್ರವೇಶಿಸತೊಡಗಿದ ಕಳ್ಳರರೇ ಆಗಿದ್ದು ಅವರು ನಂದಿಬೆಟ್ಟಗಳ ಪರಿಸರದಿಂದ ಪೂರ್ವಕ್ಕೆ ಸಾಗಿ ತಮಿಳುನಾಡಿನ ಉತ್ತರದಲ್ಲಿ ಅಂದರೆ ವಡಗಾವಳಿ ಪ್ರದೇಶದಲ್ಲಿ ನೆಲೆನಿಂತರು. ಆಕ್ರಮಣಶೀಲ ಪ್ರವೃತ್ತಿಯ ಈ ವಡಗಾವಚೆಯ ನವ ಕಳ್ಳರರೇ ಸಮಕಾಲೀನ ತಮಿಳರಪಾಲಿಗೆ ಸಿಂಹಸ್ವಪ್ನರಾದ ಕಳಭ್ರರೆನಿಸಿದ್ದರು. ವಡಗಾವಳಿಪ್ರದೇಶ ಮುಂದೆ ಕುರುಂಬ ಬಾಣರಸರ ಆಳ್ವಿಕೆಗೆ ಒಳಪಟ್ಟು, ಅವರ ವಿಶಾಲ 'ಪೆರ್ಬಾಣವಾಡಿ' ಪ್ರದೇಶದಲ್ಲಿ ಅಂತರ್ಗತ ವಾಯಿತೆಂದು ತೋರುತ್ತದೆ.
೪. ಪ್ರಧಾನತಃ ಪಶುಪಾಲಕರಾದ ಕಳ್ಳರರೇ ಕನ್ನಡಿಗರ ಮೂಲಿಗರೆಂದು ವಿದ್ವಾಂಸರು ಪ್ರತಿಪಾದಿಸಿರುವುದು ಮತ್ತು ಕಳ್ಳರರೇ - ಕಳಭ್ರರೆಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಟ್ಟಿರುವುದು ಮನನಯೋಗ್ಯ ಸಂಗತಿ.
ಕಳವರ ಬುಡಕಟ್ಟಿನ ಚಲನ ಪಥದಲ್ಲಿ ತಿರುಪತಿ ನಂದಿಬೆಟ್ಟಗಳ ಪರಿಸರವು ಅವರ ನೆಲೆಗೆ ಕಾರಣವಾಗಿ, ಅಲ್ಲೇ, ಅವರು ನೆಲೆನಿಂತು ಆ ಪ್ರದೇಶಕ್ಕೆ ಆ ಹೆಸರು, ಪಳೆಯುಳಿಕೆಯಂತೆ ಉಳಿದು ಶಾಸನಗಳಲ್ಲಿ ದಾಖಲುಗೊಂಡದ್ದು ಕುರುಂಬ ಬುಡಕಟ್ಟು ಅಧ್ಯಯನಕ್ಕೆ ಒಂದು ಸಣ್ಣ ಕೊಂಡಿಯನ್ನು ಒದಗಿಸುತ್ತದೆ ಎಂದು ಹೇಳಬಹುದಾಗಿದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Hiriyanna, Ambalike. Kannada Vishaya Vishvakosha- Itihasa mattu Puratatva (2009 ed.). Mysore University. p. 521.
- ↑ https://en.m.wikipedia.org/wiki/Skandagiri.
{{cite web}}: Missing or empty|title=(help) - ↑ ಸ್ಕಂದಗಿರಿ ಪ್ರವಾಸೋದ್ಯಮ ಇಲಾಖೆ Archived 2022-12-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://indiahikes.com/skandagiri-trek
- ↑ ಪಿವಿ ಕೃಷ್ಣಮೂರ್ತಿ, ಕುರುಬರ ಪ್ರಾಚೀನ ಬುಡಕಟ್ಟು (2009). ಇತಿಹಾಸ ದರ್ಶನ. ಕರ್ನಾಟಕ ಇತಿಹಾಸ ಅಕಾಡೆಮಿ.
{{cite book}}: Check date values in:|year=/|date=mismatch (help)