ಸೌಂದರ್ಯ (ಚಿತ್ರನಟಿ)

ವಿಕಿಪೀಡಿಯ ಇಂದ
Jump to navigation Jump to search
ಸೌಂದರ್ಯ
Soundarya.jpg
ಜನ್ಮನಾಮ
ಸೌಮ್ಯ

ಜಲೈ ೧೮, ೧೯೭೨
ಮುಳಬಾಗಿಲು
ಮರಣಏಪ್ರಿಲ್ ೧೭, ೨೦೦೪
ಬೆಂಗಳೂರು
ವೃತ್ತಿಚಲನಚಿತ್ರ ನಟಿ
ಸಕ್ರಿಯ ವರ್ಷಗಳು೧೯೯೨ – ೨೦೦೪
ಎತ್ತರ5'7"

ಸೌಂದರ್ಯ (ಜುಲೈ ೧೮, ೧೯೭೨ಏಪ್ರಿಲ್ ೧೭, ೨೦೦೪) ಚಲನಚಿತ್ರರಂಗದ ಪ್ರಖ್ಯಾತ ಸುಂದರ ನಟಿ, ನಿರ್ಮಾಪಕಿ. ಇನ್ನೂ ಕಿರುವಯಸ್ಸಿನಲ್ಲಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದಾಗಲೇ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಪಯಣಿಸುತ್ತಿದ್ದ ಕಿರು ವಿಮಾನದ ಅಪಘಾತದಲ್ಲಿ ದುರ್ಮರಣಕ್ಕೀಡಾದರು.

ಹೆಸರಿಗೆ ತಕ್ಕ ಸುಂದರಿ[ಬದಲಾಯಿಸಿ]

ಸೌಂದರ್ಯ ಎಂಬ ಹೆಸರು ಅದೆಷ್ಟು ಸೌಂದರ್ಯಯುತವಾದದ್ದು. ಈ ಸೌಂದರ್ಯ ಎಂಬುದು ಕೆಲವೊಂದು ವ್ಯಕ್ತಿಗಳಲ್ಲಿ ಅಪೂರ್ವವಾಗಿ ಹೊರಸೂಸುತ್ತದೆ. ಇಂತಹ ಸೌಂದರ್ಯವಂತರಲ್ಲಿ ತಮ್ಮ ರೂಪ, ಗುಣ, ಅಭಿರುಚಿ, ಘನತೆ, ಸಜ್ಜನಿಕೆ ಇತ್ಯಾದಿ ‘ಸಕಲಗುಣ ಸೌಂದರ್ಯವತಿ ಯಾಗಿ’ ಶೋಭಿಸಿದವರು ಸೌಂದರ್ಯ.

ವೈದ್ಯೆಯಾಗ ಹೊರಟು ಸಿನಿಮಾಗೆ ಬಂದರು[ಬದಲಾಯಿಸಿ]

ಸೌಂದರ್ಯದ ಖನಿ ಎಂಬಂತೆ ಶೋಭಿಸುತ್ತಿದ್ದ ಸೌಂದರ್ಯ ಅವರು ಹುಟ್ಟಿದ್ದು ಜುಲೈ 18, 1972ರ ವರ್ಷದಲ್ಲಿ. ಬದುಕು ವ್ಯಕ್ತಿಗಳ ಬದುಕನ್ನು ನಡೆಸುವ ಪರಿಯೇ ವಿಚಿತ್ರ. ಆಕೆ ಎಂ.ಬಿ.ಬಿ.ಎಸ್ ಓದುತ್ತಿದ್ದರು. ತಂದೆ ಚಿತ್ರ ನಿರ್ಮಾಪಕರು ಮತ್ತು ಲೇಖಕರು. ಮನೆಗೆ ಬಂದವರೊಬ್ಬರು ಚಿತ್ರದಲ್ಲಿ ನಟಿಸುವಂತೆ ಕೇಳಿದರು. ಒಂದು ಚಿತ್ರ ಎಂಬುದು ಎರಡು ಮೂರಾಗಿ ಕಡೆಗೆ ವಿದ್ಯಾಭ್ಯಾಸಕ್ಕೆ ಕೊನೆ ಹಾಡಿದರು.

ದಕ್ಷಿಣ ಭಾರತದಲ್ಲಿ ಅಪಾರ ಪ್ರಸಿದ್ಧಿ[ಬದಲಾಯಿಸಿ]

  • ಕನ್ನಡದಲ್ಲಿ ಪ್ರಾರಂಭದಲ್ಲಿ ಕೆಲವೊಂದು ಚಿತ್ರಗಳಲ್ಲಿ ‘ಸೌಮ್ಯ’ಳಾಗಿ ಮೂಡಿದರೂ ಪ್ರತಿಭೆಗಳನ್ನು ಬಳಸುವುದರಲ್ಲಿ ಯಾವಾಗಲೂ ನಿಧಾನವಾದ ನಮ್ಮ ಚಿತ್ರರಂಗ ಕಣ್ಣು ಬಿಡುವುದರಲ್ಲಿ ಸೌಂದರ್ಯ ತೆಲುಗು, ತಮಿಳು, ಮಲಯಾಳಗಳಲ್ಲಿ ಅಪಾರ ಬೇಡಿಕೆಯ ನಟಿಯಾಗಿಬಿಟ್ಟಿದ್ದರು. ಹಿಂದಿ ಯಲ್ಲಿ ಕೂಡಾ ಸೂರ್ಯವಂಶವೆಂಬ ಚಿತ್ರದಲ್ಲಿ ನಟಿಸಿದರು.
  • ತಮಿಳಿನಲ್ಲಿ ರಜನಿಕಾಂತರೊಂದಿಗೆ ನಟಿಸಿದ ಅರುಣಾಚಲಂ ಮತ್ತು ಪಡಿಯಪ್ಪ ಚಿತ್ರಗಳು ಜಯಭೇರಿ ಬಾರಿಸಿದ್ದವು. ಆ ಚಿತ್ರಗಳಲ್ಲಿ ಸೌಂದರ್ಯ ಕೂಡಾ ಸೊಗಸಾಗಿ ಅಭಿನಯಿಸಿದ್ದರು. ಅವರು ನಟಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು. ತೆಲುಗು ಚಿತ್ರವೊಂದರಲ್ಲೇ ಅವರಿಗೆ ಮೂರು ರಾಜ್ಯ ಪ್ರಶಸ್ತಿ ಮತ್ತು ಏಳು ಫಿಲಂ ಫೇರ್ ಪ್ರಶಸ್ತಿಗಳು ಸಂದಿದ್ದವು.

ಕನ್ನಡ ಚಿತ್ರಗಳಲ್ಲಿ[ಬದಲಾಯಿಸಿ]

  • ಸೌಂದರ್ಯ ಅವರು, ಕನ್ನಡದಲ್ಲಿ ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ ಮುಂತಾದ ಚಿತ್ರಗಳಿಗೆ ಆಗಾಗ ಬಂದು ಹೋಗಿದ್ದರು. ಅವರ ಕನ್ನಡದಲ್ಲಿನ ಮಹತ್ವದ ಪ್ರವೇಶವೆಂದರೆ ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರ. ಈ ಚಿತ್ರದ ನಿರ್ಮಾಪಕಿಯಾಗಿ ಮತ್ತು ನಟಿಯಾಗಿ ಅವರು ಕನ್ನಡಕ್ಕೆ ದೊರಕಿದ ಬಗೆಯನ್ನು ಸಾರಲೋ ಎಂಬಂತೆ ಆ ಚಿತ್ರ ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಗಳಿಸಿತು.
  • ಚಿತ್ರನಟಿಯಾಗಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸ್ವಲ್ಪದರಲ್ಲಿ ಕೈತಪ್ಪಿತಾದರೂ ನಿರ್ಮಾಪಕಿಯಾಗಿ ಸ್ವರ್ಣಕಮಲ ಪ್ರಶಸ್ತಿಯನ್ನು ಗಳಿಸುವ ಗೌರವ ಅವರದಾಯಿತು. ಆ ಚಿತ್ರಕ್ಕಾಗಿನ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಂದಿತು. ದೋಣಿ ಸಾಗಲಿ ಚಿತ್ರಕ್ಕೆ ಸಹಾ ಅವರಿಗೆ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ ಸಂದಿತ್ತು.

ದೂರದರ್ಶನಕ್ಕೊಂದು ಸುಂದರ ಕೊಡುಗೆ[ಬದಲಾಯಿಸಿ]

ಸೌಂದರ್ಯ ಕನ್ನಡಕ್ಕೆ ನೀಡಿದ ಮತ್ತೊಂದು ಪ್ರಧಾನ ಕೊಡುಗೆ ಎಂದರೆ ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿಯಾದ ‘ಗೃಹಭಂಗ’ ಕಾದಂಬರಿ ಆಧರಿಸಿದ ಅದೇ ಹೆಸರಿನ ದೂರದರ್ಶನ ಧಾರಾವಾಹಿಯನ್ನು ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಮೂಲಕ ನಿರ್ಮಿಸಿದ್ದು. ಇದು ಸಾರ್ವಕಾಲಿಕವಾಗಿ ದೂರದರ್ಶನದಲ್ಲಿ ಕಂಡ ಅತ್ಯಂತ ಮನೋಜ್ಞ ಧಾರವಾಹಿಗಳಲ್ಲಿ ಒಂದಾಗಿ ನೆಲೆನಿಲ್ಲುವಂತದ್ದಾಗಿದೆ.

ಆಪ್ತಮಿತ್ರದ ನಾಗವಲ್ಲಿ[ಬದಲಾಯಿಸಿ]

ಸೌಂದರ್ಯ ಅವರು ಕನ್ನಡದಲ್ಲಿ ಮರೆಯಲಾಗದಂತಹ ಮತ್ತೊಂದು ಛಾಪನ್ನು ಉಳಿಸಿ ಹೋಗಿದ್ದು, ನಾಗವಲ್ಲಿಯಾಗಿ ಆಪ್ತಮಿತ್ರ ಚಿತ್ರದಲ್ಲಿ ನೀಡಿದ ಅಭಿನಯದಿಂದ. ಆ ಚಿತ್ರದಲ್ಲಿ ಡಾ. ವಿಷ್ಣುವರ್ಧನ, ಸೌಂದರ್ಯ ಮತ್ತು ಅವಿನಾಶ್ ಒಬ್ಬರನ್ನೊಬ್ಬರು ಮೀರಿಸುವಂತಹ ಅಭಿನಯ ನೀಡಿ ಆ ಚಿತ್ರ ರೀಮೇಕ್ ಆದರೂ, ಕನ್ನಡದ ಒಂದು ಅವಿಸ್ಮರಣೀಯ ಚಿತ್ರವನ್ನಾಗಿಸಿದ್ದಾರೆ. ಮುಂದಿನ ಆಪ್ತರಕ್ಷಕದಲ್ಲಿ ಅಭಿನಯಿಸಲು ಸೌಂದರ್ಯರು ಬದುಕಿರಲಿಲ್ಲ. ಆಪ್ತರಕ್ಷಕ ಪ್ರೇಕ್ಷಕ ನೋಡುವ ವೇಳೆಗೆ ಆಪ್ತರಕ್ಷಕನೂ ಉಳಿದಿರಲಿಲ್ಲ!

ಸಾಮಾಜಿಕ ಕಾಳಜಿ[ಬದಲಾಯಿಸಿ]

ಸೌಂದರ್ಯ ಅದೇ ತಾನೇ ರಘು ಎಂಬುವರನ್ನು ವಿವಾಹವಾಗಿದ್ದರು. ಅನಾಥ ಮಕ್ಕಳಿಗೆ ಶಾಲೆ ನಿರ್ಮಿಸಿದ್ದರು. ಸಮಾಜಕ್ಕೆ ಏನನ್ನಾದರೂ ಮಾಡುವ ಕಳಕಳಿ ಅವರಲ್ಲಿತ್ತು. ಒಂದಷ್ಟು ಬುದ್ಧಿಶಕ್ತಿ, ಜನಪ್ರಿಯತೆ, ಜನಪರ ಕಾಳಜಿ ಎಲ್ಲಾ ಇದ್ದ ಸೌಂದರ್ಯ ಕೇವಲ ಬೊಂಬೆ ಎನಿಸದೆ ಏನಾದರೂ ಮಾಡುವ ಎಂದು ರಾಜಕೀಯಕ್ಕೆ ಬರುವ ಸಿದ್ಧತೆಯಲ್ಲಿದ್ದುದು ಜನಮಾನಸದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು. ಆದರೆ ಅದ್ಯಾವುದೂ ಆಗಲಿಲ್ಲ.

ವಿದಿಬರಹದಲ್ಲಿ ಸೌಂದರ್ಯರ ಇತಿಶ್ರೀ[ಬದಲಾಯಿಸಿ]

  • ಸೌಂದರ್ಯ ವಿಮಾನ ಅಪಘಾತದಲ್ಲಿ ಶನಿವಾರ ಬೆಳಗ್ಗೆ( ಏಪ್ರಿಲ್ 17, 2004ರ ದಿನದಂದು) ನಿಧನರಾದರು. ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(Cessna-180 single engine aircraft)ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಜಕ್ಕೂರಿನಲ್ಲಿ ಈ ಅಪಘಾತ ಸಂಭವಿಸಿದೆ.
  • ಅಪಘಾತದಲ್ಲಿ ನಟಿ ಸೌಂದರ್ಯ ಸೇರಿದಂತೆ ನಾಲ್ಕು ಮಂದಿ ದುರ್ಮರಣ ಹೊಂದಿದ್ದಾರೆ. ನಿಧನರಾದವರಲ್ಲಿ ಸೌಂದರ್ಯ ಸೋದರ ಅಮರನಾಥ್‌ ಕೂಡ ಸೇರಿದ್ದಾರೆ. ನೆಲದಿಂದ ಹಾರುವ ಸಂದರ್ಭದಲ್ಲಿ ವಿಮಾನಕ್ಕೆ ಬೆಂಕಿ ತಗುಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ತಿಳಿಸಿದ್ದಾರೆ[೧]

ಕನ್ನಡದಲ್ಲಿ ಇವರು ನಟಿಸಿದ ಪ್ರಮುಖ ಚಿತ್ರಗಳು[ಬದಲಾಯಿಸಿ]

ಉಲ್ಲೇಖನ[ಬದಲಾಯಿಸಿ]

  1. "ಖ್ಯಾತ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ದುರ್ಮರಣ". kannada.oneindia.in. Retrieved 8-2-2014. Check date values in: |accessdate= (help)