ಸೂರ್ಯನಾಥ ಕಾಮತ್
ಸೂರ್ಯನಾಥ ಕಾಮತ್ | |
---|---|
ಜನನ | ಏಪ್ರಿಲ್ ೨೬, ೧೯೩೭ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ |
ವೃತ್ತಿ | ಪ್ರಾಧ್ಯಾಪಕರು, ಇತಿಹಾಸಕಾರರು, ಪತ್ರಕರ್ತರು |
ವಿಷಯ | ಇತಿಹಾಸ |
ಡಾ. ಸೂರ್ಯನಾಥ ಕಾಮತರು (೨೬ ಎಪ್ರಿಲ್ ೧೯೩೭ – ೨೧ ಅಕ್ಟೋಬರ್ ೨೦೧೫) ಕರ್ನಾಟಕದ ಪ್ರಮುಖ ಸಂಶೋಧಕರು ಮತ್ತು ಇತಿಹಾಸ ತಜ್ಞರು. ಕರ್ನಾಟಕದ ಇತಿಹಾಸದ ಸಂಶೋಧನೆಗೆ ಇವರ ಕೊಡುಗೆ ಅಪಾರವಾದುದು. ಡಾ. ಸೂರ್ಯನಾಥ ಕಾಮತ್ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ. ಇತಿಹಾಸವನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಅವರದು ಬಹಳ ಮಹತ್ವದ ಸೇವೆ.
ಪರಿಚಯ
[ಬದಲಾಯಿಸಿ]೧೯೩೭ರ ಏಪ್ರಿಲ್ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ಇವರ ತಂದೆ ಉಪೇಂದ್ರ ಕಾಮತ್ ಮತ್ತು ತಾಯಿ ಪದ್ಮಾವತಿ. ಕಾಮತ್, ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿಯನ್ನು (೧೯೫೯) ಪಡೆದು, ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು (೧೯೬೫) ಪಡೆದುಕೊಂಡರು. 'ತುಳುವಾಸ್ ಇನ್ ವಿಜಯನಗರ ಟೈಮ್ಸ್ (ವಿಜಯನಗರ ಕಾಲದ ತುಳುವರು)’ ಅವರ ಪಿ.ಎಚ್.ಡಿ ಪ್ರಬಂಧ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮತ್ತು ರೀಡರ್ ಆಗಿ ೧೯೬೮ ರಿಂದ ೧೯೮೧ ರವರೆಗೆ ಸೇವೆ ಸಲ್ಲಿಸಿದರು.
ಸೂರ್ಯನಾಥ ಕಾಮತ್ ಬಾಲ್ಯದಲ್ಲಿ ಕಾಂಗ್ರೆಸ್ಸಿಗರೊಡನೆ ಹೆಚ್ಚು ಸಂಪರ್ಕ ಹೊಂದಿದ್ದರು. ನಾರಾಯಣಾಚಾರ್ಯ ನಾವೂರಕರರ ಪ್ರಭಾವದಿಂದ ಸಾಹಿತ್ಯ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ೧೯೫೨ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವೈಕುಂಠ ಬಾಳಿಗ ಮತ್ತು ಬೆನಗಲ್ ಶಿವರಾಯರ ಪರವಾಗಿ ಶಾಲೆ ಬಿಟ್ಟು ಪ್ರಚಾರವನ್ನೂ ಮಾಡಿದ್ದರು. ಆಗಿನಿಂದಲೇ ಪತ್ರಿಕೆಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಕಾಮತರು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯನ್ನೂ ಆರಂಭಿಸಿದರು. ಮಂಗಳೂರಿನಲ್ಲಿ ಓದುತ್ತಿದ್ದಾಗ ಸೋದರಮಾವನ ಮಕ್ಕಳ ಮೂಲಕ ಆರ್ ಎಸ್ ಎಸ್ ಶಾಖೆಯ ಸಂಪರ್ಕ ಪಡೆದು ಸ್ನೇಹಿತರು ಮತ್ತು ಸಾಹಿತ್ಯದಿಂದ ಪ್ರಭಾವಿತರಾಗಿ ನಿಷ್ಠಾವಂತ ಕಾರ್ಯಕರ್ತರಾದರು. ಓದುತ್ತಿದ್ದಾಗಲೇ ಐತಿಹಾಸಿಕ ಕಥೆಗಳನ್ನು ಬರೆಯತೊಡಗಿದ ಅವರು ಭಾಷಣಕಾರರಾಗಿಯೂ ರೂಪುಗೊಂಡರು.
ಧಾರವಾಡದಲ್ಲಿ ಇತಿಹಾಸದ ಸ್ನಾತಕೋತ್ತರ ವಿದ್ಯಾರ್ಥಿಯಾದ ಸೂರ್ಯನಾಥ ಕಾಮತರು ಪ್ರೊ. ಬಿ.ವಿ. ಕಾಳೆ, ಪ್ರೊ. ಬಿ. ಎ. ಸಾಲೆತ್ತೂರ್, ಪ್ರೊ. ಜಿ. ಎಸ್. ದೀಕ್ಷಿತ್ ಅವರಂತಹ ಪ್ರಾಧ್ಯಾಪಕರಿಂದ ಇತಿಹಾಸ ಕಲಿತರು. ಅವರ ಮಾರ್ಗದರ್ಶನ ಕಾಮತರ ಪಾಲಿಗೆ ಸಂಜೀವಿನಿ ಆಯಿತು. ಪ್ರೊ. ಬಿ.ಎ.ಸಾಲೆತ್ತೂರ್ ಅವರ ಪ್ರಭಾವದಿಂದ ಕಾಮತರು ಕರ್ನಾಟಕದ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡರು. ಕಾಲೇಜಿಗೆ ರಜೆ ಇದ್ದ ಸಂದರ್ಭದಲ್ಲಿ ಆರ್. ಎಸ್. ಎಸ್ ಕೆಲಸಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಅನೇಕ ಸ್ಥಳಗಳ ಪರಿಚಯ ಮಾತ್ರವಲ್ಲದೆ ವಿಭಿನ್ನ ಮನೋಭಾವದ ಜನರ ಪರಿಚಯವಾಗಿ ಅನುಭವ ಶ್ರೀಮಂತವಾಯಿತು.
ವೃತ್ತಿ ಜೀವನ
[ಬದಲಾಯಿಸಿ]- ಆರಂಭದ ದಿನಗಳಲ್ಲಿ ಮುಂಬಯಿಯ ‘ಫ್ರೀ ಪ್ರೆಸ್ ಜರ್ನಲ್’ನಲ್ಲಿ ಕೆಲಸ.
- ಬೆಂಗಳೂರಿನ ಪ್ರಸಿದ್ಧ ದೈನಿಕ ‘ಪ್ರಜಾವಾಣಿ’ ಹಾಗೂ ಮಾಸಪತ್ರಿಕೆ ‘ಉತ್ಥಾನ’ಗಳಲ್ಲಿ ದುಡಿದು ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ.
- ೧೯೬೮ರಿಂದ ೧೯೮೧ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರವಾಚಕರಾಗಿ ಸೇವೆ.
- ನಂತರ ೧೯೯೫ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ಗೆಜೆಟಿಯರ್‍ನ ಮುಖ್ಯ ಸಂಪಾದಕರಾಗಿ ಸೇವೆ
- ಬೆಂಗಳೂರಿನಲ್ಲಿರುವ ಮಿಥಿಕ್ ಸೊಸೈಟಿಯ ಇತಿಹಾಸ ದರ್ಶನ ನಿಯತಕಾಲಿಕೆಯ ಸಂಪಾದಕ.
ಇತಿಹಾಸ ತಜ್ಞರಾಗಿ
[ಬದಲಾಯಿಸಿ]- ‘ಪ್ರಜಾವಾಣಿ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅವರು ಕರ್ನಾಟಕದ ಸಂಕ್ಷಿಪ್ತ ಇತಿಹಾಸ ಪ್ರಕಟಿಸಿದರು. ಕಾಮತ್ ಮೂರು ಸಂಪುಟಗಳಲ್ಲಿ ಸಂಪಾದಿಸಿದ ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು (ಸುಮಾರು ೩೨೦೦ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಸುಮಾರು ೮00 ಹಿರಿಯ ಸ್ವಾತಂತ್ರ ಹೋರಾಟಗಾರರ ನೆನಪುಗಳಿವೆ). ಇಂಗ್ಲಿಷಿನಲ್ಲಿ ಬರೆದ ‘ಕ್ವಿಟ್ ಇಂಡಿಯಾ ಮೂವ್ಮೆಂಟ್ ಇನ್ ಕರ್ನಾಟಕ’ ಕೃತಿಗಳು ಅವರ ಅಧ್ಯಯನಶೀಲತೆಗೆ ಉದಾಹರಣೆಗಳಾಗಿವೆ.
- ೧೯೮೨ರಲ್ಲಿ ಕೆಲವು ತಿಂಗಳುಗಳ ಕಾಲ ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿ ಕಾಮತ್ ಸಲ್ಲಿಸಿರುವ ಸೇವೆ ವಿಶಿಷ್ಟವಾದುದು. ಸಮಗ್ರ ಕರ್ನಾಟಕಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗೆಜೆಟಿಯರಿನ ಎರಡು ಸಂಪುಟಗಳು (ಕನ್ನಡದಲ್ಲಿ ಮೂರು) ಮಾತ್ರವಲ್ಲದೆ, ಆರು ಜಿಲ್ಲೆಗಳ ಗೆಜೆಟಿಯರ್ಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಪ್ರಕಟಿಸಿದರು. ಅವರ ಕರ್ನಾಟಕ ಕೈಪಿಡಿ ಕರ್ನಾಟಕದ ಬಗ್ಗೆ ತಿಳಿಯಬೇಕೆನ್ನುವವರಿಗೆ ನಿಜಕ್ಕೂ ಒಂದು ಕೈಪಿಡಿ.
- ಹಲವು ವರ್ಷಗಳಿಂದ ಮಿಥಿಕ್ ಸೊಸೈಟಿಯ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವ ಕಾಮತ್, ಅದರ ಗೌರವ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಮನ್ನಣೆ ಪಡೆದ ಮಿಥಿಕ್ ಸೊಸೈಟಿಯ ತ್ರೈಮಾಸಿಕ ವಿದ್ವತ್ ಪತ್ರಿಕೆಯನ್ನೂ ಹಲವು ವರ್ಷಗಳಿಂದ ಅವರು ಸಂಪಾದಿಸುತ್ತಿದ್ದರು.
- ಸುವರ್ಣ ವರ್ಷವನ್ನು ಆಚರಿಸಿಕೊಂಡ ‘ಕರ್ನಾಟಕ ಇತಿಹಾಸ ಅಕಾಡೆಮಿ’ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅದರ ಅಧ್ಯಕ್ಷರಾಗಿ ಸಂಘಟನೆಯಲ್ಲೂ ತಮ್ಮ ಛಾಪನ್ನು ಒತ್ತಿರುವ ಕಾಮತ್ ಕರ್ನಾಟಕದ ಅಕಾಡೆಮಿಯ ಗೌರವಾಧ್ಯಕ್ಷರಾಗಿದ್ದರು.
- ಸೂರ್ಯನಾಥ ಕಾಮತರ ಹಿಂದುರುಗಿ ನೋಡಿದಾಗ ಪ್ರಬಂಧ ಅವರ ಅತ್ಮಚರಿತ್ರೆಯೂ ಹೌದು.
ಕೃತಿಗಳು
[ಬದಲಾಯಿಸಿ]- Studies in Indian Culture (1973)
- Karnataka, A Handbook (1977)
- A Concise History of Karnataka (1980)
- Karnataka State Gazetteer (1981-1995)
- Historiography of Karnataka (1991)
- The Origin and Spread of Gowda Saraswata (1992)
- Mythology and Culture: Confluence of thoughts (1993)
- Indian Tradition of Textile Industry (2002)
- India’s Struggle for Freedom (2007)
- Krishnadevaraya of Vijyanagara and his times (2009)
- ಹಿಂದಿರುಗಿ ನೋಡಿದಾಗ
- ಒಕ್ಕಲಿಗರ ಇತಿಹಾಸ
- ಕರ್ನಾಟಕದ ಸಂಕ್ಷಿಪ್ತ ಇತಿಹಾಸ (1973)
- ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು
ಪ್ರಶಸ್ತಿ ಗೌರವಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ತುಳು ಸಾಹಿತ್ಯ ಪ್ರಶಸ್ತಿ
- ಚುಂಚಶ್ರೀ ಪ್ರಶಸ್ತಿ
- ಚಿದಾನಂದ ಪ್ರಶಸ್ತಿ
- ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (“ಕರ್ನಾಟಕದ ಸಂಕ್ಷಿಪ್ತ ಇತಿಹಾಸ” ಕೃತಿಗೆ)
- ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋದನಾ ಬಹುಮಾನ (“ಜಾನ್ ಫ್ಲೀಟ್” ಕೃತಿಗೆ)
ನಿಧನ
[ಬದಲಾಯಿಸಿ]ಡಾ. ಸೂರ್ಯನಾಥ ಕಾಮತ್(೭೮) ೨೧ಅಕ್ಟೋಬರ್ ೨೦೧೫ ರ ಬುಧವಾರದಂದು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಒಂದು ವರ್ಷದಿಂದ ಕಾಡುತ್ತಿದ್ದ ತೀವ್ರ ಅನಾರೋಗ್ಯ ಕಾರಣವಾಗಿತ್ತು.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ ಇತಿಹಾಸ ಸಂಶೋಧಕ ಡಾ. ಸೂರ್ಯನಾಥ ಕಾಮತ್ ನಿಧನ ವಿಅಯವಾಣಿ ೨೨ಅಕ್ಟೋಬರ್೨೦೧೫
- ↑ ಇತಿಹಾಸಕಾರ ಸೂರ್ಯನಾಥ ಕಾಮತ್ ಇನ್ನಿಲ್ಲ ವಿಜಯ ಕರ್ನಾಟಕ ೨೨ ಅಕ್ಟೋಬರ್ ೨೦೧೫
ಹೊರಕೊಂಡಿಗಳು
[ಬದಲಾಯಿಸಿ]- ಸೂರ್ಯನಾಥ ಕಾಮತ್ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.-ಕಣಜ ಮಾಹಿತಿಕೋಶ
- ಡಾ. ಸೂರ್ಯನಾಥ ಕಾಮತ್ ಸಂದರ್ಶನ-ನಿಲುಮೆ
- ಕನ್ನಡಿಗರ ಹೆಮ್ಮೆಯ ಹಿನ್ನಡವಳಿಯರಿಗ ಡಾ. ಸೂರ್ಯನಾತ ಕಾಮತ್ Archived 2015-11-10 ವೇಬ್ಯಾಕ್ ಮೆಷಿನ್ ನಲ್ಲಿ.-ಹೊನಲು