ಸುಬ್ರಮಣಿಯಮ್ ರಾಮನ್

ವಿಕಿಪೀಡಿಯ ಇಂದ
Jump to navigation Jump to search
ಸುಬ್ರಮಣಿಯಮ್ ರಾಮನ್
ಜನನ
ಚೆನ್ನೈ ಜಿಲ್ಲೆ, ತಮಿಳುನಾಡು ರಾಜ್ಯ, ಭಾರತ ದೇಶ
ರಾಷ್ಟ್ರೀಯತೆಭಾರತೀಯ
ವೃತ್ತಿಮಾಜಿ ಟೇಬಲ್ ಟೆನ್ನಿಸ್ ಆಟಗಾರ, ಟೇಬಲ್ ಟೆನ್ನಿಸ್ ಕೋಚ್
ಸಂಗಾತಿಪಿ. ಭುವನೇಶ್ವರಿ
ಪ್ರಶಸ್ತಿಗಳುಅರ್ಜುನ ಪ್ರಶಸ್ತಿ

ಸುಬ್ರಮಣಿಯಮ್ ರಾಮನ್ರವರು ಮಧ್ಯಮ ವರ್ಗದ ಕುಟುಂಬದಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಅವರ ತಂದೆ ತಾಯಿಯ ನಾಲ್ವರು ಮಕ್ಕಳಲ್ಲಿ ಅವಳಿಜವಳಿಯಾಗಿ ಜನಿಸಿದ ಜೋಡಿಯಲ್ಲಿ ಸುಬ್ರಮಣಿಯಮ್ ರಾಮನ್‍ರವರು ಒಬ್ಬರು. ಇವರು ಎಡಗೈಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಇವರಿಗೆ ೧೯೯೮ರಲ್ಲಿ ಅರ್ಜುನ ಅವಾರ್ಡ್ ಲಭಿಸಿದೆ.

ಬಾಲ್ಯ ಜೀವನ[ಬದಲಾಯಿಸಿ]

ರಾಮನ್‍ರವರು ಚೆನ್ನೈನಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದರು. ಇವರು ತಮ್ಮ ಶಾಲಾ ಶಿಕ್ಶಣವನ್ನು ಚೆನ್ನೈನ ಸಾಂಥೋಮ್ ಎಂಬ ಶಾಲೆಯಲ್ಲಿ ಮುಗಿಸಿದರು. ಇವರು ೧೩ನೆಯ ವಯಸ್ಸಿನವರಾಗಿದ್ದಾಗ ಟೇಬಲ್ ಟೆನ್ನಿಸ್ ಆಡಲು ಆರಂಭಿಸಿದರು. ಇವರು ಓದುತ್ತಿದ್ದ ಶಾಲೆಯಲ್ಲಿ ಇದ್ದ ಪ್ರಾಂಶುಪಾಲರು ಶಾಲೆಯಲ್ಲಿದ್ದ ಮಕ್ಕಳಿಗೆ ಓದುವುದಷ್ಟೇ ಅಲ್ಲದೆ ಬೇರೆ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹವನ್ನು ನೀಡುತ್ತಿದ್ದರು. ಇದೇ ಕಾರಣದಿಂದಾಗಿ ರಾಮನ್‍ರವರಿಗೆ ಒಳ್ಳೆಯ ಪ್ರೋತ್ಸಾಹ ಮತ್ತು ಸಹಾಯ ಸಿಕ್ಕಿತು.

ಟೇಬಲ್ ಟೆನ್ನಿಸ್‍[ಬದಲಾಯಿಸಿ]

ಟೇಬಲ್ ಟೆನ್ನಿಸ್ ರಾಕೆಟ್ಟು ಮತ್ತು ಟೊಳ್ಳು ಚೆಂಡು

ನೋಡಲು ದುರ್ಬಲರಂತೆ ಇದ್ದ ಇವರು ಬೇರೆ ಆಟಗಳನ್ನು ಆಡಿದರೆ ತಮ್ಮ ದೇಹಕ್ಕೆ ಏಟು, ಗಾಯ ಅಥವಾ ಪೆಟ್ಟಾಗಬಹುದು ಎಂದು ಟೊಳ್ಳು ಚೆಂಡಿನೊಂದಿಗೆ ಆಡುವ ಟೇಬಲ್ ಟೆನ್ನಿಸ್ ಆಡಲು ಆರಂಭಿಸಿದರು. ಟೇಬಲ್ ಟೆನ್ನಿಸ್ ಆಟ ಆಟಗಾರನಿಂದ ಬಹಳಷ್ಟು ತಾಳ್ಮೆ ಮತ್ತು ಕೌಶಲ್ಯಗಳನ್ನು ಕೋರುತ್ತದೆ. ಟೇಬಲ್ ಟೆನ್ನಿಸ್ ಆಡುವ ಆಟಗಾರನು ಬಹಳ ಚತುರತೆಯಿಂದ ಹಾಗೂ ಏಕಾಗ್ರತೆಯಿಂದ ಶೀಘ್ರ ಮತ್ತು ಚುರುಕಾದ ಪ್ರತಿಕ್ರಿಯೆಯನ್ನು ತೋರಿಸುತ್ತಾ ಆಟವನ್ನಾಡಬೇಕು. ರಾಮನ್‍ರವರು ತಮ್ಮ ರಾಕೆಟ್ಟಿನಲ್ಲಿ ಪಿಪ್ಸ್ (PIPS) ಎಂಬ ರಬ್ಬರ್ ಬಳಸಿ ಆಡುತ್ತಿದ್ದರು.

ಸಾಧನೆ[ಬದಲಾಯಿಸಿ]

ರಾಮನ್‍ರವರು ೧೯೮೫ರಲ್ಲಿ ಮೊದಲ ಬಾರಿಗೆ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ೧೯೮೯ರಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದರು. ೧೯೯೫ರಲ್ಲಿ ಜರ್ಮನಿಡೊರ್ಟ್‍ಮಂಡ್‍ನಲ್ಲಿ ನಡೆದ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್‍ಷಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದರು, ಇದು ಅವರು ಭಾಗವಹಿಸಿದ ಮೊದಲ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್‍ಷಿಪ್ ಆಗಿತ್ತು. ೧೯೯೫ರಲ್ಲಿ ರಾಮನ್‍ರವರ ಗರ್ಭಕಂಠದ ಭಾಗದಲ್ಲಿ ಬಲವಾದ ಪೆಟ್ಟಾಗಿತ್ತು, ಈ ಕಾರಣದಿಂದಾಗಿ ಇವರಿಗೆ ಆಟವನ್ನು ಮುಂದುವರಿಸಲು ಕಷ್ಟವಾಯಿತು. ಅದಕ್ಕಾಗಿ ಅವರು ಕೆಲವು ದಿನಗಳ ಕಾಲ ತಮ್ಮ ಆಟವನ್ನು ನಿಲ್ಲಿಸಬೇಕಾಯಿತು. ಪುನಃ ಆಟವನ್ನು ಆಡಲು ಪ್ರಾರಂಭಿಸಿದಾಗ ಅವರು ಆಟವಾಡುವ ಶೈಲಿಯನ್ನು ಬದಲಾಯಿಸಿಕೊಂಡಿದ್ದರು. ರಾಮನ್‍ರವರು ಮತ್ತೆ ೧೯೯೭ರಲ್ಲಿ ಗ್ಲ್ಯಾಸ್ಗೋ, ಸ್ಕಾಟ್‍ಲ್ಯಾಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ನಲ್ಲಿ ಚೇತನ್ ಬಬೂರ್ ಎಂಬುವರೊಂದಿಗೆ ಪುರುಷರ ಡಬಲ್ಸ್ ವರ್ಗದಲ್ಲಿ ಭಾಗವಹಿಸಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ೨೦೦೨ರ ಸಮೀಕ್ಷೆಯ ಪ್ರಕಾರ ೩೩ ವರ್ಷದ ರಾಮನ್‍ರವರು ಆ ಕಾಲದಲ್ಲಿ ಇದ್ದ ಎಲ್ಲಾ ಆಟಗಾರರಿಗಿಂತ ಫಿಟ್ ಎಂದೆನಿಸಿಕೊಂಡಿದ್ದರು.[೧] ರಾಮನ್‍ರವರ ಪ್ರಕಾರ ಒಬ್ಬ ಆಟಗಾರ ಒಳ್ಳೆಯ ಫಲಿತಾಂಶ ಪಡೆಯಲು ತನ್ನ ಆಟವನ್ನು ಒಳ್ಳೆಯ ವರ್ತನೆ ತೋರಿಸಿ ಆಡಬೇಕು. ರಾಮನ್‍ರವರಿಗೆ ೧೯೯೮ರಲ್ಲಿ ಅರ್ಜುನ ಪ್ರಶಸ್ತಿ ಸಿಕ್ಕಿತು. ಇದರೊಂದಿಗೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಪಶಸ್ತಿಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ ಜೀವನ[ಬದಲಾಯಿಸಿ]

ರಾಮನ್‍ರವರು ಭಾರತದ ಮಾಜಿ ನಂಬರ್ ೧ ಟೇಬಲ್ ಟೆನ್ನಿಸ್ ಆಟಗಾರ್ತಿಯಾದ ಪಿ.ಭುವನೇಶ್ವರಿರವರನ್ನು ವಿವಾಹವಾದರು. ರಾಮನ್‍ರವರ ಹಾಗೆ ಭುವನೇಶ್ವರಿರವರು ಕೂಡ ಅತ್ತ್ಯುತ್ತಮ ಆಟಗಾರ್ತಿ ಮತ್ತು ಇವರು ಕೂಡ ಸುಮಾರು ಹತ್ತು ವರ್ಷಗಳ ಕಾಲ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಸದ್ಯಕ್ಕೆ ರಾಮನ್ ದಂಪತಿ ಚೆನ್ನೈನಲ್ಲಿ ರಾಮನ್ ಟಿಟಿ ಹೈ ಪರ್ಫ಼ಾಮೆನ್ಸ್ ಎಂಬ ಟೇಬಲ್ ಟೆನ್ನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಟೇಬಲ್ ಟೆನ್ನಿಸ್ ಕ್ಷೇತ್ರದಲ್ಲಿ ಇವರ ಅಕಾಡಮಿ ಜನಪ್ರಿಯತೆಯನ್ನು ಪಡೆದಿದೆ. ಸದ್ಯದ ವಿಶ್ವದ ನಂಬರ್ ೪೪ ಇರುವ ಸತಿಯನ್ ಗ್ನಾನಶೇಕರನ್‍ರವರು ರಾಮನ್‍ರವರ ಶಿಷ್ಯ.[೨]

ಉಲ್ಲೇಖಗಳು[ಬದಲಾಯಿಸಿ]

  1. https://www.thehindu.com/thehindu/mp/2002/12/05/stories/2002120501130400.htm
  2. http://ramantthpc.com/