ವಿಷಯಕ್ಕೆ ಹೋಗು

ಸಿ.ಎಚ್. ಪ್ರಹ್ಲಾದರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿ.ಎಚ್. ಪ್ರಹ್ಲಾದರಾವ್ (೧೩ ಜನವರಿ ೧೯೨೩ - ೧೭ ಫೆಬ್ರುವರಿ ೨೦೦೨) ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲೇಖಕರು, ಅನುವಾದಕರು, ವಿಮರ್ಶಕರು ಮತ್ತು ಪತ್ರಿಕಾ ಬರಹಗಾರರು.

ಸಿ. ಎಚ್. ಪ್ರಹ್ಲಾದರಾವ್

ವೈಯಕ್ತಿಕ ಜೀವನ

[ಬದಲಾಯಿಸಿ]

ಪ್ರಹ್ಲಾದರಾವ್ ಶಿವಮೊಗ್ಗದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದರು. ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಪ್ರಭುತ್ವ ಹೊಂದಿದ್ದ ಕಾರಣ ಅವರ ಶಿಕ್ಷಕರು ಮತ್ತು ಬಂಧುಗಳು ಮೈಸೂರಿನ ಮಹಾರಾಜಾ ಕಾಲೇಜ್‍ Archived 2015-12-22 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಬಿ.ಎ. (ಇಂಗ್ಲಿಷ್) ಪದವಿ ಪಡೆಯಲು ಸೂಚಿಸಿದರು. ಅಲ್ಲಿ ಪ್ರಹ್ಲಾದರಾವ್ ಮೂರು ಚಿನ್ನದ ಪದಕಗಳೊಂದಿಗೆ ೧೯೪೮ರಲ್ಲಿ ಉತ್ತೀರ್ಣರಾದರು (ಹಿಂದಿ, ಇಂಗ್ಲಿಷ್ ಮತ್ತು ಸೋಷಿಯಾಲಜಿ). ಎಂ.ಎ. ಓದುವ ಹಂಬಲವಿದ್ದರೂ ಜೀವನೋಪಾಯಕ್ಕಾಗಿ ನೌಕರಿ ಹಿಡಿಯುವುದು ಆವಶ್ಯಕವಾಗಿತ್ತು. ಬೆಂಗಳೂರಿನಲ್ಲಿ ಇಂಡಿಯನ್ ಕಾಫಿ ಬೋರ್ಡ್ ಸಂಸ್ಥೆ ಸೇರಿ ಅಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ೧೯೮೧ರಲ್ಲಿ ನಿವೃತ್ತರಾದರು. ಈ ಸಂಸ್ಥೆಯಲ್ಲಿದ್ದಾಗ ಅವರು ಐದು ವರ್ಷಗಳ ಕಾಲ (೧೯೬೯-೧೯೯೪) ನವದೆಹಲಿಯಲ್ಲಿ ಸೇವೆ ಸಲ್ಲಿಸಿದರು. ಕೋಮಲಾಬಾಯಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಪುತ್ರರು (ಮೋಹನ್ ಸಿ ಪಿ ಮತ್ತು ಡಾ. ಸಿ.ಪಿ.ರವಿಕುಮಾರ್).

ಸಿ.ಎಚ್. ಪ್ರಹ್ಲಾದರಾವ್ ಅವರಿಗೆ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿಯಲ್ಲಿ ಉತ್ತೀರ್ಣರಾದಾಗ ದೊರೆತ ಚಿನ್ನದ ಪದಕಗಳು (೧೯೪೮)

ಬರವಣಿಗೆ

[ಬದಲಾಯಿಸಿ]

ಪ್ರಹ್ಲಾದರಾವ್ ಬಾಲ್ಯದಲ್ಲೇ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿ ಸ್ವಾಂತಂತ್ರ್ಯ ಚಳುವಳಿಯಲ್ಲಿ ಆಸಕ್ತಿ ಹೊಂದಿದರು. ಮೈಸೂರಿಗೆ ಬಂದಾಗ ಅಲ್ಲಿನ 'ಮೈಸಿಂಡಿಯಾ' ಪತ್ರಿಕೆಗೆ ಬರೆಯತೊಡಗಿದರು. ಮೈಸಿಂಡಿಯಾ ಪತ್ರಿಕೆಯ ಸಂಪಾದಕರಾಗಿದ್ದ ಫಿಲಿಪ್ ಸ್ಪ್ರಾಟ್ ಅಚ್ಚುಮೆಚ್ಚಿನ ಯುವಬರಹಗಾರರಾದರು. ಅನೇಕ ವರ್ಷಗಳ ಕಾಲ ಮೈಸಿಂಡಿಯಾ ಪತ್ರಿಕೆಯಲ್ಲಿ ಕನ್ನಡ ಸಾರಸ್ವತ ಲೋಕದ ಬಗ್ಗೆ ಬರೆದರು. ಮುಂದೆ ಅವರು ಈ ಕೆಲಸವನ್ನು ಮುಂದುವರೆಸಿ ಕನ್ನಡ ಲೇಖಕರು ಮತ್ತು ಕಲಾವಿದರನ್ನು ಹೊರಲೋಕಕ್ಕೆ ಪರಿಚಯಿಸಿದರು. ಡೆಕ್ಕನ್ ಹೆರಾಲ್ಡ್ (ಬೆಂಗಳೂರು), ಇಂಡಿಯನ್‌ ಎಕ್ಸ್‌ಪ್ರೆಸ್‌(ಬೆಂಗಳೂರು), ಹಿಂದುಸ್ತಾನ್ ಟೈಮ್ಸ್ (ದೆಹಲಿ), ಈವನಿಂಗ್ ನ್ಯೂಸ್ (ದೆಹಲಿ), ದ ಹಿಂದೂ (ಬೆಂಗಳೂರು) ಮೊದಲಾದ ಅನೇಕ ದಿನಪತ್ರಿಕೆಗಳಲ್ಲಿ ಅವರು ಬರೆದರು. ಅನೇಕ ವರ್ಷಗಳ ಕಾಲ ಡೆಕ್ಕನ್ ಹೆರಾಲ್ಡ್, ಕನ್ನಡಪ್ರಭ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳಲ್ಲಿ ಪುಸ್ತಕವಿಮರ್ಶೆಗಳನ್ನು ಬರೆದರು. ತಮ್ಮ ಬಿಚ್ಚುಮನಸ್ಸಿನ ಸಹೃದಯ ವಿಮರ್ಶೆಗೆ ಅವರು ಹೆಸರು ಪಡೆದರು. ದ ಹಿಂದೂ ಪತ್ರಿಕೆಗೆ ಅವರು ಕನ್ನಡ ಗ್ರಂಥಲೋಕದ ಹಿರಿಯ ಲೇಖಕರನ್ನು ಕುರಿತು ಮತ್ತು ನಾಟಕಲೋಕದ ಹಿರಿಯ ನಟ-ನಟಿಯರನ್ನು ಕುರಿತು ಪರಿಚಯಾತ್ಮಕ ಲೇಖನಗಳ ವಿಶೇಷ ಮಾಲಿಕೆಯನ್ನು ಬರೆದರು.[] ನಿವೃತ್ತರಾದ ನಂತರ ದ ಹಿಂದೂ ಪತ್ರಿಕೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ವರ್ಷ "ಬಿಟ್ವೀನ್ ಯೂ ಅಂಡ್ ಮೀ" ("ನನ್ನ ನಿನ್ನ ನಡುವೆ") ಎಂಬ ಅಂಕಣ ಬರೆದರು. ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದ ಈ ಅಂಕಣಬರಹ ಅಪಾರ ಜನಪ್ರಿಯತೆ ಪಡೆಯಿತು.[]

ಅನುವಾದಗಳು

[ಬದಲಾಯಿಸಿ]

ಪ್ರಹ್ಲಾದರಾವ್ ಅವರು ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡ ಅನುವಾದಗಳಲ್ಲೂ ಖ್ಯಾತಿ ಪಡೆದರು. ರಂ.ಶ್ರೀ. ಮುಗಳಿ ಅವರು ಕನ್ನಡೇತರ ಓದುಗರಿಗಾಗಿ ಸಂಕಲಿಸಿದ ಕನ್ನಡ ಕವಿಗಳ ಕೃತಿಗಳಿಂದ ಆಯ್ದ ಭಾಗಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಲು ಸಿ.ಎಚ್. ಪ್ರಹ್ಲಾದರಾವ್ ಅವರನ್ನು ಸಂಪರ್ಕಿಸಿದರು. ಕೆ. ಸಂತಾನಂ ಅವರು ಸಂಪಾದಿಸಿದ ಭಾರತೀಯ ಸಾಹಿತ್ಯದ ಸಂಕಲನದಲ್ಲಿ ಈ ಅನುವಾದಗಳು ಪ್ರಕಟಗೊಂಡವು [][] ಮುಂದೆ ಅವರು ಐ.ಬಿ.ಎಚ್. ಪ್ರಕಾಶನ ಸಂಸ್ಥೆ, ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ನವಕರ್ನಾಟಕ ಪ್ರಕಾಶನ ಸಂಸ್ಥೆಗಳಿಗಾಗಿ ಅನೇಕ ಪುಸ್ತಕಗಳನ್ನು ಅನುವಾದಿಸಿದರು.

ಆಕಾಶವಾಣಿಯೊಂದಿಗೆ ಸಂಬಂಧ

[ಬದಲಾಯಿಸಿ]

ಬೆಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸಿ.ಎಚ್. ಪ್ರಹ್ಲಾದರಾವ್ ನಡುವೆ ಸುದೀರ್ಘ ಸೌಹಾರ್ದ ಸಂಬಂಧವಿತ್ತು. ಆಕಾಶವಾಣಿಗಾಗಿ ಅವರು ಅನೇಕ ಕೃತಿಗಳನ್ನು ಇಂಗ್ಲಿಷ್-ಕನ್ನಡ, ಕನ್ನಡ-ಇಂಗ್ಲಿಷ್ ಅನುವಾದಗಳನ್ನು ಮಾಡಿಕೊಟ್ಟರು. ಆಕಾಶವಾಣಿಯ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. ಚಿತ್ರಗೀತೆಗಳಲ್ಲಿ ಬಳಕೆಯಾದ ಕನ್ನಡ ಕವಿಗಳು ಬರೆದ ಕವಿತೆಗಳನ್ನು ಬಳಸಿಕೊಂಡು ಅವರು ನಡೆಸಿಕೊಟ್ಟ "ನಂದನವನ" ರೇಡಿಯೋ ಕಾರ್ಯಕ್ರಮ ಬಹಳ ಜನಪ್ರಿಯವಾಯಿತು. ಅವರೊಂದಿಗೆ ಪ್ರಕಟವಾದ ಸಂದರ್ಶನದ ಮತ್ತು ಅವರ ಒಂದು ಭಾಷಣದ ಆಡಿಯೋ ಮುದ್ರಿಕೆಗಳು ಲಭ್ಯವಾಗಿವೆ [] []

ಪುಸ್ತಕಗಳು

[ಬದಲಾಯಿಸಿ]
  1. Story of a Song - Ecstasy and Agony, ರಾಷ್ಟ್ರೋತ್ಥಾನ ಸಾಹಿತ್ಯ, ೧೯೭೨ (ಕನ್ನಡಭಾಷೆಯಲ್ಲಿ ಶಿವರಾಮು ಅವರು ಬರೆದ "ವಂದೇಮಾತರಂ: ಒಂದು ಕಥೆ- ಒಂದು ವ್ಯಥೆ" ಎಂಬ ಗ್ರಂಥದ ಇಂಗ್ಲಿಷ್ ಅನುವಾದ)
  2. ದೇವರು ದೇವತೆಗಳು, ಐಬಿಎಚ್ ಪ್ರಕಾಶನ, ೧೯೭೩ (ಪುರಾಣದಿಂದ ಆಯ್ದ ಮಕ್ಕಳ ಕಥೆಗಳು, ಮೂಲ ಲೇಖಕಿ - ಮಾಯಾ ಬಾಲ್ಸೆ)
  3. ದಿವಾನ್ ರಂಗಾಚಾರ್ಲು, ಐಬಿಎಚ್ ಪ್ರಕಾಶನ, ೧೯೭೪ (ಮಕ್ಕಳಿಗಾಗಿ ದಿವಾನ್ ರಂಗಾಚಾರ್ಲು ಅವರ ಜೀವನ ಚರಿತ್ರೆ)
  4. Nandalal Bose, ರಾಷ್ಟ್ರೋತ್ಥಾನ ಪರಿಷತ್, ೧೯೭೫, ಇಂಗ್ಲಿಷ್ ಭಾಷೆಯಲ್ಲಿ (ಮಕ್ಕಳಿಗಾಗಿ ಬರೆದ ಚಿತ್ರಕಾರ ನಂದಲಾಲ ಬೋಸ್ ಅವರ ಜೀವನ ಚರಿತ್ರೆ)
  5. Man the Divine - A Critical Exposition of Shoonya Sampadane, ಮಂಡಗಿರಿ ಕಲ್ಮಠ, ಆದೋಣಿ, ೧೯೭೯ ( ಪ್ರೊ| ಎಸ್.ಎಸ್. ಭೂಸನೂರಮಠ ಅವರ ಪಂಪ ಪ್ರಶಸ್ತಿ ವಿಜೇತ "ಶೂನ್ಯಸಂಪಾದನೆಯ ಪರಾಮರ್ಶೆ" ಗ್ರಂಥದ ಇಂಗ್ಲಿಷ್ ಸಂಗ್ರಹಾನುವಾದ)
  6. Sravanabelagola ಐ.ಬಿ.ಎಚ್. ಪ್ರಕಾಶನ, ೧೯೮೧ (ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದ, ಮೂಲ ಲೇಖಕರು ಜಿ. ಬ್ರಹ್ಮಪ್ಪ)
  7. ಮಕ್ಕಳ ಮಹಾಭಾರತ, ರಾಷ್ಟ್ರೀಯ ಪ್ರಸಾರಾಂಗ, ಮೂಲ ಲೇಖಕಿ: ಮಧುರಮ್ ಭೂತಲಿಂಗಮ್, ೧೯೮೧
  8. ತಾತನ ಹುಟ್ಟುಹಬ್ಬ, "ವಿಶ್ವಕಥಾಕೋಶ ಮಾಲಿಕೆ," ನವಕರ್ನಾಟಕ ಪ್ರಕಾಶನ, ೧೯೮೧, ಮರುಮುದ್ರಣ - ೨೦೧೧ (ಹಾಲೆಂಡ್ ದೇಶದ ಕಥೆಗಳ ಅನುವಾದ)
  9. ದಕ್ಷಿಣ ಭಾರತದ ಕಥಾಮಂಜರಿ, ಮಕ್ಕಳ ಸಾಹಿತ್ಯ, ಜಾನಪದ ಅಕಾಡೆಮಿ, ೧೯೮೬ (ಜಾನಪದ ಕಥೆಗಳ ಸಂಗ್ರಹ)
  10. ಜಾನಪದ ಕಥೆಗಳು, ಜಾನಪದ ಅಕಾಡೆಮಿ, ೧೯೮೯ (ಮಕ್ಕಳ ಸಾಹಿತ್ಯ)
  11. P.D. Agarwal - The Visionary, ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ, ೧೯೮೮ (ಬಡತನದಲ್ಲಿ ಹುಟ್ಟಿ ಯಶಸ್ವೀ ವ್ಯಾಪಾರಸಂಸ್ಥೆಗಳನ್ನು ಕಟ್ಟಿದ ಪಿ.ಡಿ. ಅಗರವಾಲ್ ಅವರ ಜೀವನಚರಿತ್ರೆ, ಇಂಗ್ಲಿಷ್ ಭಾಷೆಯಲ್ಲಿ)

ಉಲ್ಲೇಖಗಳು

[ಬದಲಾಯಿಸಿ]
  1. ದ ಹಿಂದೂ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮಾಲೆ
  2. ಸಿ.ಎಚ್.ಪ್ರಹ್ಲಾದರಾವ್ ಅವರು ದ ಹಿಂದೂ ಪತ್ರಿಕೆಯಲ್ಲಿ ಬರೆಯುತ್ತಿದ್ದ 'ಬಿಟ್ವೀನ್ ಯೂ ಅಂಡ್ ಮೀ' ಅಂಕಣ ಬರಹಗಳ ಸಂಕಲನ
  3. ಸಿ.ಎಚ್. ಪ್ರಹ್ಲಾದರಾವ್ ಅವರ ಪ್ರಕಟಣೆಗಳು
  4. Indian Poetry, 1360-1450 C.E.
  5. ಬಾಳ ಬೆಳಕು - ಆಕಾಶವಾಣಿಯಲ್ಲಿ ಸಿ.ಎಚ್. ಪ್ರಹ್ಲಾದರಾವ್ ಅವರ ಭಾಷಣದ ಧ್ವನಿಮುದ್ರಿಕೆ
  6. ಬೆಂಗಳೂರು - ಅಂದು, ಇಂದು ಸಿ.ಎಚ್.ಪಿ. ಅವರ ಸಂದರ್ಶನದ ಧ್ವನಿಮುದ್ರಿಕೆ

೭ . ಸಿ. ಎಚ್ ಪ್ರಹ್ಲಾದರಾವ್ ಅವರನ್ನು ಕುರಿತಾದ ಇಂಗ್ಲಿಷ್ ವಿಕಿಪೀಡಿಯ ಪುಟ https://en.wikipedia.org/wiki/C._H._Prahlada_Rao