ವಿಷಯಕ್ಕೆ ಹೋಗು

ಸಿಹಿ ಗೆಣಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಹಿಗೆಣಸು
ಸಿಹಿಗೆಣಸಿನ ಹೂವು
Hemingway, South Carolina
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
I. batatas
Binomial name
Ipomoea batatas
(L.) Lam.

'ಸಿಹಿ ಗೆಣಸು' {Sweet potato} ಒಂದು ಜಾತಿಯ ಗೆಡ್ದೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು.ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ.ಇದರ ಹೂವು ಬಹಳ ಅಂದವಾಗಿ ಇರುವುದರಿಂದ ಅಲಂಕಾರಿಕ ಸಸ್ಯವಾಗಿ ಕೂಡಾ ಉಪಯೋಗಿಸುತ್ತಾರೆ. ಪ್ರಪಂಚದ ಉಷ್ಣ ಮತ್ತು ಉಪೋಷ್ಣವಲಯಗಳಲ್ಲಿನ ದೇಶಗಳಲ್ಲೆಲ್ಲ ಬಹುಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಒಂದು ಮುಖ್ಯ ಹಾಗೂ ಸುಪ್ರಸಿದ್ಧ ಆಹಾರಸಸ್ಯ (ಸ್ವೀಟ್ ಪೊಟೇಟೊ).ಗೆಣಸಿನ ಕುಟುಂಬ(Convolvulaceae) ಕುಟುಂಬಕ್ಕೆ ಸೇರಿದೆ. ಐಪೋಮಿಯ ಬಟಾಟಸ್ ಇದರ ಶಾಸ್ತ್ರೀಯ ಹೆಸರು. ಇದರ ತವರು ಅಮೆರಿಕದ ಉಷ್ಣವಲಯ. ಅಲ್ಲಿ ಇದಕ್ಕೆ ಕಮೋಟೆ ಅಥವಾ ಕುಮರ ಎಂಬ ಸ್ಥಳೀಯ ಹೆಸರುಗಳಿವೆ. ಹಿಂದೆ ಕಾಡುಗಿಡವಾಗಿ ಬೆಳೆಯುತ್ತಿದ್ದ ಗೆಣಸು ಇಂದು ಕೃಷಿ ಬೆಳೆಯಾಗಿ ಮಾತ್ರ ಕಂಡುಬರುತ್ತದೆ. ಆಫ್ರಿಕ, ಚೀನ, ಜಪಾನ್, ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ರಾಜ್ಯಗಳು. ಆಗ್ನೇಯ ಏಷ್ಯ, ಭಾರತ, ವೆಸ್ಟ್‌ ಇಂಡೀಸ್ ಮುಂತಾದೆಡೆಗಳಲ್ಲೆಲ್ಲ ಇದರ ಬೇಸಾಯ ಮಾಡಲಾಗುತ್ತಿದೆ.

ಗೆಣಸು

[ಬದಲಾಯಿಸಿ]
Sweet potatoes in the field

ಗೆಣಸು ನೆಲದಮೇಲೆ ಹರಡಿಕೊಂಡು ಬೆಳೆಯುವ ಒಂದು ಬಳ್ಳಿ. ಸ್ವಭಾವತಃ ಇದು ಬಹುವಾರ್ಷಿಕ ಸಸ್ಯವಾದರೂ ಬೇಸಾಯ ಕ್ರಮದಲ್ಲಿ ಏಕವಾರ್ಷಿಕವೆಂಬಂತೆ ನೋಡಿಕೊಳ್ಳಲಾಗುತ್ತದೆ. ಗೆಣಸಿನ ಕಾಂಡ ತೆಳುವಾಗಿಯೂ ದುರ್ಬಲವಾಗಿಯೂ ಉಂಟು. ಗೆಣಸಿನ ಬೇರು ಸಮೂಹ ತೊಡಕು ಬೇರಿನ ರೀತಿಯದು. ಗಿಡದ ಬುಡ ಭಾಗದಿಂದ ಮಾತ್ರವಲ್ಲದೆ ಗೆಣ್ಣುಗಳಿಂದಲೂ ಆಗಂತಕ ಬೇರುಗಳು ಹುಟ್ಟುತ್ತವೆ. ಕೆಲವು ಆಗಂತುಕ ಬೇರುಗಳು ದ್ವಿತೀಯಕ ಬೆಳೆವಣಿಗೆಗೆ ಒಳಗಾಗಿ ದಪ್ಪನೆಯ ಮತ್ತು ವಿವಿಧ ಆಕಾರಗಳ ಗೆಡ್ಡೆಗಳಾಗಿ ರೂಪುಗೊಳ್ಳುತ್ತವೆ. ಇವೇ ಗೆಣಸಿನ ಗೆಡ್ಡೆಗಳು. ಇವು ಸಾಮಾನ್ಯವಾಗಿ ನೆಲದ ಮೇಲ್ಪದರದಲ್ಲಿ ಮಾತ್ರ ಮೂಡುತ್ತವೆ. ಸಾಧಾರಣವಾಗಿ ಒಂದು ಗಿಡದಲ್ಲಿ 10-15 ಗೆಡ್ಡೆಗಳು ಹುಟ್ಟುತ್ತವೆ. ಎಲೆಗಳು ಸರಳ ರೀತಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ತಮ್ಮ ಆಕಾರದಲ್ಲಿ ಭಿನ್ನತೆಯನ್ನು ಪ್ರದರ್ಶಿಸುತ್ತವೆ. ಒಂದೇ ಗಿಡದಲ್ಲಿ ಎಳೆಯ ಎಲೆಗಳು ಒಂದು ಆಕಾರದವಾದರೆ ಬಲಿತ ಎಲೆಗಳು ಬೇರೊಂದು ಆಕಾರವಾಗಿರುವುದನ್ನು ಗಮನಿಸಬಹುದು. ಎಲೆಯಂಚು ಅಖಂಡವಾಗಿರಬಹುದು ಇಲ್ಲವೆ ಹಲವಾರು ರೀತಿಗಳಲ್ಲಿ ಛಿದ್ರವಾಗಿರಬಹುದು. ಎಲೆಗಳಿಗೆ ವೃಂತಪರ್ಣಗಳಿಲ್ಲ. ಹೂಗಳು ಒಂಟೊಂಟಿಯಾಗಿ ಇಲ್ಲವೆ ಮಧ್ಯಾರಂಭಿ ಮಾದರಿ ಗೊಂಚಲುಗಳಲ್ಲಿ ಎಲೆಗಳ ಕಂಕುಳುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಆಕಾರ ಕೊಳವೆಯಂತೆ ಇಲ್ಲವೆ ಆಲಿಕೆಯಂತೆ: ಬಣ್ಣ ಬಿಳಿ ಇಲ್ಲವೆ ನೇರಳೆ. ಪ್ರತಿ ಹೂವಿನಲ್ಲಿ 5 ಪತ್ರಗಳಿಂದ ಕೂಡಿದ ಪುಷ್ಪಪಾತ್ರೆ, 5 ದಳಗಳು, 5 ಕೇಸರಗಳು ಮತ್ತು 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಫಲ ಸಂಪುಟ ಮಾದರಿಯದು; 2-4 ಕರಿಯ ಬಣ್ಣದ ಗಟ್ಟಿ ಬೀಜಗಳನ್ನೊಳಗೊಂಡಿದೆ. ಗೆಣಸು 350 ಉತ್ತರ ಅಕ್ಷಾಂಶದಿಂದ ಮೇಲಿನ ಭೌಗೋಳಿಕ ಪ್ರದೇಶಗಳಲ್ಲಿ ಹೂ ಬಿಡುವುದು ಅತಿವಿರಳ. 300 ಉತ್ತರ ಅಕ್ಷಾಂಶದಿಂದ ಮೇಲಿನ ಪ್ರದೇಶಗಳಲ್ಲಂತೂ ಬೀಜಗಳೇ ರೂಪುಗೊಳ್ಳುವುದಿಲ್ಲ. ಅಲ್ಲದೆ ಗೆಣಸು ಹೂ ಬಿಡಲು ದಿನವೊಂದಕ್ಕೆ 11 ಗಂಟೆಗಳಿಗಿಂತ ಹೆಚ್ಚಿನ ಅವಧಿಯ ಬೆಳಕು ಬೀಳಬಾರದು. ಈ ಅವಧಿಗಿಂತ ಹೆಚ್ಚಿನ ಕಾಲ ಬೆಳಕು ಬಿದ್ದರೆ ಹೂ ಬಿಡುವುದೇ ಇಲ್ಲ. ಇದರಿಂದಾಗಿ ಗೆಣಸನ್ನು ಹ್ರಸ್ವ ಪ್ರಕಾಶಾವಧಿಯ ಸಸ್ಯ (ಶಾರ್ಟ್-ಡೇ ಪ್ಲಾಂಟ್) ಎನ್ನಲಾಗುತ್ತದೆ. ಉಷ್ಣ ಪ್ರ್ರದೇಶಗಳಲ್ಲಿ ಬೀಜಗಳು ಸಹಜವಾಗಿ ಉತ್ಪತ್ತಿಯಾಗುತ್ತವೆ. ಬೀಜಗಳಿಗೆ ಬಲುಗಡುಸಾದ ಹೊದಿಕೆಯಿರುವುದರಿಂದ ಇವು ಮೊಳೆಯುವುದು ಬಹಳ ನಿಧಾನ. ಕೆಲವೊಮ್ಮೆ ಒಂದು ವರ್ಷದ ವರೆಗೂ ಬೀಜಗಳು ಮೊಳೆಯದೇ ಇರುತ್ತವೆ. ಬೀಜದ ಹೊದಿಕೆಯನ್ನು ಕೊಂಚ ಕತ್ತರಿಸಿ ತೆಗೆದರೆ ಮಾತ್ರ ಮೊಳೆಯುವಿಕೆಯನ್ನು ತ್ವರಿತಗೊಳಿಸಬಹುದು.

ಗೆಣಸಿನ ಬಗೆಗಳು

[ಬದಲಾಯಿಸಿ]
Sweet potato tubers with different skin colors, on sale in Indonesia. Locally these are known as ubi jalar (creeping yam).
* ಬೇಯಿಸಿದ ಗೆಣಸು,ಸಿಪ್ಪೆ ಸಹಿತ ಬೇಯಿಸಿದ್ದು, ಉಪ್ಪು ಇಲ್ಲದೆ
  • 100 ಗ್ರಾಂ ಪ್ರತಿ ಪೌಷ್ಟಿಕಾಂಶದ (3.5 ಔನ್ಸ್)
  • ಶಕ್ತಿ 378 ಕೆಜೆ (90 kcal)
  • ಕಾರ್ಬೋಹೈಡ್ರೇಟ್ಗಳು
  • 20.7 ಗ್ರಾಂ
  • ಪಿಷ್ಟ 7.05 ಗ್ರಾಂ
  • ಸಕ್ಕರೆ 6.5 ಗ್ರಾಂ
  • ಆಹಾರದಲ್ಲಿನ ಫೈಬರ್ 3.3 ಗ್ರಾಂ
  • ಫ್ಯಾಟ್
  • 0.15 ಗ್ರಾಂ
  • ಪ್ರೋಟೀನ್
  • 2.0 ಗ್ರಾಂ
  • ವಿಟಮಿನ್ಸ್
  • ಒಂದು equiv ವಿಟಮಿನ್. (120%) 961 μg
  • ಥಿಯಾಮೈನ್ (ಬಿ 1) (10%) 0.11 ಮಿಗ್ರಾಂ
  • ಲಿಂಕಿಂಗ್ (B2) (9%) 0.11 ಮಿಗ್ರಾಂ
  • ನಿಯಾಸಿನ್ (B3) (10%) 1.5 ಮಿಗ್ರಾಂ
  • ಜೀವಸತ್ವ B6 (22%) 0.29 ಮಿಗ್ರಾಂ
  • ಫೋಲೇಟ್ (B9) (2%) 6 μg
  • ವಿಟಮಿನ್ ಸಿ (24%) 19.6 ಮಿಗ್ರಾಂ
  • ವಿಟಮಿನ್ ಇ (5%) 0.71 ಮಿಗ್ರಾಂ
  • ಮಿನರಲ್ಸ್
  • ಕ್ಯಾಲ್ಸಿಯಂ (4%) 38 ಮಿಗ್ರಾಂ
  • ಐರನ್ (5%) 0.69 ಮಿಗ್ರಾಂ
  • ಮೆಗ್ನೀಸಿಯಮ್ (8%) 27 ಮಿಗ್ರಾಂ
  • ಮ್ಯಾಂಗನೀಸ್ (24%) 0.5 ಮಿಗ್ರಾಂ
  • ರಂಜಕ (8%) 54 ಮಿಗ್ರಾಂ
  • ಪೊಟ್ಯಾಸಿಯಮ್ (10%) 475 ಮಿಗ್ರಾಂ
  • ಸೋಡಿಯಂ (2%) 36 ಮಿಗ್ರಾಂ
  • ಝಿಂಕ್ (3%) 0.32 ಮಿಗ್ರಾಂ

[]

.

ಗೆಣಸಿನಲ್ಲಿ ನೂರಾರು ಬಗೆಗಳಿವೆ. ಅಮೆರಿಕದಲ್ಲಿ ಗೆಡ್ಡೆಯ ಗಡಸುತನದ ಆಧಾರದ ಮೇಲೆ ಮೃದು ಮತ್ತು ಗಟ್ಟಿ ಎಂದು ಎರಡು ಮುಖ್ಯ ಪಂಗಡಗಳಾಗಿ ವಿಭಾಗಿಸಲಾಗಿದೆ. ಗೆಣಸಿನ ಬಳ್ಳಿಯ ಬೆಳೆವಣಿಗೆಯ ಕ್ರಮವನ್ನು ಅನುಸರಿಸಿ ವಿಭಾಗಿಸುವುದೂ ಇದೆ. ಆದರೆ ಗೆಡ್ಡೆಗಳ ಬಣ್ಣದ ಆಧಾರದ ಮೇಲೆ ಹಲವಾರು ಬಗೆಗಳಾಗಿ ವಿಂಗಡಿಸುವುದೇ ವಾಡಿಕೆಯಲ್ಲಿರುವ ಕ್ರಮ. ಗೆಡ್ಡೆಗಳ ಬಣ್ಣ ಬಿಳಿಯಿಂದ ಹಿಡಿದು ಹೊಂಬಣ್ಣ, ಕಿತ್ತಳೆ, ಕೆಂಪುಮಿಶ್ರಿತ ಊದಾ ಬಣ್ಣದ ವರೆಗೂ ವ್ಯತ್ಯಾಸವಾಗುತ್ತದೆ. ಭಾರತದಲ್ಲಿ ಕೃಷಿಯಲ್ಲಿರುವ ಕೆಲವು ಮುಖ್ಯ ಬಗೆಗಳು ಈ ರೀತಿ ಇವೆ-

  • ಪುಸಾ ಸಫೇದ್: ಮೂಲತಃ ತೈವಾನಿನಿಂದ ಪಡೆಯಲಾದ ಬಗೆಯಿದು. ಬಿಳಿಯ ಬಣ್ಣದ ಗೆಡ್ಡೆಗಳನ್ನು ಉತ್ಪಾದಿಸುತ್ತದೆ. ಅಧಿಕ ಇಳುವರಿಗೂ ಗೆಡ್ಡೆಗಳ ಉತ್ಕೃಷ್ಟತೆಗೂ ಹೆಸರಾಗಿದೆ.
  • ಪುಸಾ ಲಾಲ್: ಜಪಾನಿನಿಂದ ತಂದ ಗೆಣಸಿನಿಂದ ಅಡ್ಡತಳಿಯೆಬ್ಬಿಸಿ ಪಡೆದ ಬಗೆಯಿದು. ಇದರ ಗೆಡ್ಡೆಗಳ ಬಣ್ಣ ಕೆಂಪು. ಬಹಳಕಾಲ ಕೆಡದಂತೆ ಸಂಗ್ರಹಿಸಿಡಬಹುದು.
  • ಪುಸಾ ಸುನೇರಿ: ಇದು ನಸುಕಿತ್ತಳೆ ಬಣ್ಣದ ಗೆಡ್ಡೆಗಳನ್ನು ಬಿಡುತ್ತದೆ. ಗೆಡ್ಡೆಗಳಲ್ಲಿ ಅಧಿಕ ಪರಿಮಾಣದಲ್ಲಿ ಕ್ಯಾರೊಟೀನ್ ಇದೆ. ಈ ಮೂರು ಮುಖ್ಯ ಬಗೆಗಳಲ್ಲದೆ ಭಾರತದ ವಿವಿಧ ರಾಜ್ಯಗಳಲ್ಲಿ ಇನ್ನೂ ಹಲವು ರೀತಿಯ ಗೆಣಸುಗಳಿವೆ. ಬಿಹಾರದಲ್ಲಿ V3, V9, SP ಲಲ್ಕಾಗಳೂ ಕರ್ನಾಟಕದಲ್ಲಿ V12 ಹೊಸೂರು ಕೆಂಪು ಮತ್ತು ಹೊಸೂರು ಹಸುರುಗಳೂ ಪಂಜಾಬಿನಲ್ಲಿ V2, V6, VS ಗಳೂ ಕೊಯಮತ್ತೂರಿನಲ್ಲಿ ಭದ್ರಕಾಳಿ, ವೆಲ್ಮನ್, V12 V6 ಗಳೂ, ಪಶ್ಚಿಮ ಬಂಗಾಳದಲ್ಲಿ ರೇಂಜರ್ ಮುಂತಾದವೂ ಮುಖ್ಯವೆನಿಸಿವೆ. ಪ್ರಪಂಚದ ಬೇರೆ ದೇಶಗಳಲ್ಲಿ ಬೇಸಾಯದಲ್ಲಿರುವ ಗೆಣಸಿನ ಬಗೆಗಳು ಇವು-ಹವಾಯ್: HS 107, ಅಮೆರಿಕ ಸಂಯುಕ್ತಸಂಸ್ಥಾನ: ರೆಡ್ ನ್ಯಾನ್ಸಿ, ಆರ್ಲಿಸ್, ನೆಮಗೋಲ್ಡ್‌, ಆಲ್ಗೋಲ್ಡ್‌, ಗೋಲ್ಡ್‌ರಷ್ ಮತ್ತು ಸೆಂಟಿನಿಯಲ್, ವೆಸ್ಟ್‌ಇಂಡೀಸ್: ಬ್ಲ್ಯಾಕ್ ರಾಕ್ ಮತ್ತು ರೆಡ್ ನಟ್.

ಗೆಣಸಿನ ಬೇಸಾಯ

[ಬದಲಾಯಿಸಿ]

ಇದು ಪ್ರಮುಖವಾಗಿ ಉಷ್ಣವಲಯದ ಬೆಳೆ. ಇದನ್ನು 400 ಉತ್ತರ ಅಕ್ಷಾಂಶದಿಂದ ಹಿಡಿದು 320 ದಕ್ಷಿಣ ಅಕ್ಷಾಂಶದ ವರೆಗಿನ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದೆ. 700 ಫ್ಯಾ. ಸರಾಸರಿ ಉಷ್ಣತೆ, 30°-50° ವಾರ್ಷಿಕ ಮಳೆ ಮತ್ತು ಯಥೇಚ್ಛ ಬಿಸಿಲು ಇರುವ ಪ್ರದೇಶಗಳಲ್ಲಿ ಇದರ ಬೆಳೆವಣಿಗೆ ಉತ್ಕೃಷ್ಟವಾಗಿರುತ್ತದೆ. 21-26 ಡಿಗ್ರಿ ಸೆ.ಶಾಖದ ಹವಾಗುಣ ಇದ್ದರೆ ಒಳಿತು. ವಿಪರೀತ ಮಳೆಯನ್ನಾಗಲಿ, ಅತಿ ಶುಷ್ಕತೆಯನ್ನಾಗಲಿ ಸಹಿಸದು. ಹಾಗೆಯೇ ಕಡುಚಳಿ ಇದ್ದರೆ ಬಲುಬೇಗ ಹಾಳಾಗುವುದರಿಂದ ಇದರ ಬೆಳೆವಣಿಗೆಯವಧಿಯಲ್ಲಿ ಕೊನೆಯಪಕ್ಷ 4-6 ತಿಂಗಳು ಕಾಲ ಚಳಿಯಿರಬಾರದು. ಗೆಣಸು ಹಲವಾರು ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲುದಾದರೂ ಮರಳುಮಿಶ್ರಿತ ಗೋಡು ಇದಕ್ಕೆ ಅತ್ಯುತ್ತಮ. ಭೂಮಿ ಸಾಕಷ್ಟು ಬೆಚ್ಚಗೂ (200-300 ಸೆಂ.ಮಿ.) ಸಡಿಲವಾಗಿಯೂ ಸರಾಗವಾಗಿ ನೀರು ಬಸಿದು ಹೋಗುವಂತೆಯೂ ಇರಬೇಕು. ಗೆಣಸಿನ ಬೆಳೆಗೆ ಗೊಬ್ಬರದ ಪುರೈಕೆಯೂ ಸಾಕಷ್ಟಿರಬೇಕು. ಹೆಕ್ಟೇರಿಗೆ 25 ಟನ್ ಕೊಟ್ಟಿಗೆ ಗೊಬ್ಬರ, 60 ಕೆಜಿ. ನೈಟ್ರೊಜನ್, 60 ಕೆಜಿ ರಂಜಕ ಮತ್ತು 120 ಕೆಜಿ ಪೊಟ್ಯಾಷ್ಗಳನ್ನು ಹಾಕಿದರೆ ಒಳ್ಳೆಯದು. ಗೊಬ್ಬರದ ಪರಿಮಾಣ ವಿಪರೀತವಾದರೂ ಒಳ್ಳೆಯದಲ್ಲ. ಇದರಿಂದ ಬಳ್ಳಿಗಳಲ್ಲಿ ಗೆಡ್ಡೆಗಿಂತ ಎಲೆ, ಕಾಂಡಗಳ ಬೆಳೆವಣಿಗೆಯೇ ಹೆಚ್ಚಾಗಿಬಿಡುತ್ತದೆ.

ಗೆಣಸನ್ನು ಗೆಡ್ಡೆಗಳಿಂದ ಹೊರಡುವ ಮೊಳಕೆಯಿಂದಾಗಲೀ, ಕಾಂಡತುಂಡು ಗಳಿಂದಾಗಲೀ, ವೃದ್ಧಿಸಲಾಗುತ್ತದೆ. ಭಾರತವನ್ನೂ ಒಳಗೊಂಡಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಎರಡನೆಯ ವಿಧಾನ ರೂಢಿಯಲ್ಲಿದೆ. ಇಳುವರಿ ಉತ್ತಮವಾಗಿರ ಬೇಕಾದರೆ ಮೊಳಕೆಗಳಿಂದ ವೃದ್ಧಿಸುವುದೇ ಸೂಕ್ತ. ಒಳ್ಳೆಯ ಗುಣಲಕ್ಷಣಗಳಿರುವ ತಳಿಯ ಗೆಡ್ಡೆಗಳನ್ನು ಆಯ್ದುಕೊಂಡು ಚೆನ್ನಾಗಿ ಹದಗೊಳಿಸಿದ ಒಟ್ಲುಪಾತಿಗಳಲ್ಲಿ 30 ಸೆಂಮೀ ಅಂತರಕ್ಕೊಂದರಂತೆ 45 ಸೆಂಮೀ ಅಂತರದ ಸಾಲುಗಳಲ್ಲಿ ನೆಡಲಾಗುತ್ತದೆ. ಇವುಗಳಿಂದ ದೊರೆತ ಮೊಳಕೆಗಳನ್ನು ಮುಂದಿನ ಬೆಳೆವಣಿಗೆಗಾಗಿ ಬೇರೆಪಾತಿಗಳಿಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಇವು ಚೆನ್ನಾಗಿ, ಉದ್ದವಾಗಿ ಬೆಳೆದ ಮೇಲೆ, ನಾಲ್ಕು ಗೆಣ್ಣುಗಳನ್ನು ಒಳಗೊಂಡಿರುವ ತುಂಡುಗಳನ್ನಾಗಿ ಕತ್ತರಿಸಿ ಕೃಷಿಭೂಮಿಯಲ್ಲಿ ನೆಡಲಾಗುತ್ತದೆ. ಬಳ್ಳಿಯ ತುದಿಯ ಕಡೆಗಿರುವ ತುಂಡುಗಳೇ ಉತ್ತಮ. ಏಕೆಂದರೆ ಇವು ಹೆಚ್ಚು ಸಂಖ್ಯೆಯಲ್ಲಿ ಗೆಡ್ಡೆಗಳನ್ನು ಉತ್ಪಾದಿಸುತ್ತವೆ. ತುಂಡುಗಳನ್ನು ನೆಟ್ಟಮೇಲೆ ಆಗಿಂದಾಗ್ಗೆ ಮಣ್ಣನ್ನು 1.5-2 ಅಡಿ ಎತ್ತರಕ್ಕೆ ಏರಿಸುತ್ತಿರಬೇಕು. ಇದರಿಂದ ಗೆಡ್ಡೆಗಳು ಸುಲಭವಾಗಿ ಮಣ್ಣಿನೊಳಕ್ಕೆ ಇಳಿದು ರೂಪುಗೊಳ್ಳುತ್ತವೆ. ಗೆಡ್ಡೆಗಳನ್ನು ನೆಡುವ ಕಾಲ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಉತ್ತರ ಭಾರತದಲ್ಲಿ ಈ ಕಾಲ ಜೂನ್-ಜುಲೈಗಳಾದರೆ ಮಧ್ಯಪ್ರದೇಶ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ಗಳಲ್ಲಿ ಅಕ್ಟೋಬರ್-ನವೆಂಬರ್ ಮತ್ತು ನೀಲಗಿರಿ ಮುಂತಾದೆಡೆ ಏಪ್ರಿಲ್-ಮೇ.

ಕಾಂಡತುಂಡುಗಳನ್ನು ನೆಟ್ಟ 10 ದಿವಸಗಳೊಳಗೆ ಗಿಡಗಳು ಬೇರುಬಿಟ್ಟು 3 ವಾರಗಳೊಳಗಾಗಿ ಹುಲುಸಾಗಿ ಬೆಳೆಯತೊಡಗುತ್ತವೆ. ಬಳ್ಳಿಗಳು ಚೆನ್ನಾಗಿ ಬೆಳೆದು ನೆಲದ ಮೇಲೆಲ್ಲ ಹರಡುವವರೆಗೂ ಕಳೆ ಕೀಳುತ್ತಿರಬೇಕು. ಆಗಿಂದಾಗ್ಗೆ ನೀರು ಹಾಯಿಸುತ್ತಿರಬೇಕು. ಗೆಡ್ಡೆಗಳನ್ನು ನೆಟ್ಟ 4-5 ತಿಂಗಳ ಅನಂತರ ಗೆಣಸು ಕೊಯ್ಲಿಗೆ ಬರುತ್ತದೆ. ಎಲೆಗಳು ಹಳದಿಬಣ್ಣಕ್ಕೆ ತಿರುಗುವುದು ಗೆಡ್ಡೆಗಳು ಬಲಿತಿರುವುದನ್ನು ಸೂಚಿಸುತ್ತದೆ. ಗೆಡ್ಡೆಗಳನ್ನು ಮೊಗೆಗುದ್ದಲಿಗಳಿಂದ ಅಗೆದು, ತೆಗೆದು ಶುಚಿಗೊಳಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಉಷ್ಣವಲಯ ದೇಶಗಳಲ್ಲಿ ಇವನ್ನು ಹಾಗೆಯೇ ಸಂಗ್ರಹಿಸಿಡಬಹುದು. ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಸಂಗ್ರಹಿಸಿಡುವ ಮುನ್ನ ಗೆಡ್ಡೆಗಳನ್ನು ಸಂಸ್ಕರಿಸಲಾಗುತ್ತದೆ. ಕೆಲವು ಸಲ ಬಿಸಿಲಿನಲ್ಲಿ 10 ದಿವಸಗಳ ಕಾಲ ಒಣಗಿಸಬೇಕಾಗುತ್ತದೆ. ಅನಂತರ ಮರದ ಹೊಟ್ಟು, ಮರಳು, ಒಣಹುಲ್ಲು ಮುಂತಾದವುಗಳನ್ನು ಬಳಸಿ ಗೆಣಸನ್ನು ಸಂಗ್ರಹಿಸಿಡಲಾಗುತ್ತದೆ.

ಗೆಣಸಿನ ಇಳುವರಿ ಅದರ ತಳಿ ಮತ್ತು ಬೆಳೆಸುವ ಪ್ರದೇಶಗಳನ್ನವಲಂಬಿಸಿ ವ್ಯತ್ಯಾಸವಾಗುತ್ತದೆ. ಮಳೆಯ ಆಸರೆಯಲ್ಲಿ ಬೇಸಾಯ ಮಾಡಿದ ಗೆಣಸಿಗಿಂತ ನೀರಾವರಿ ಮಾಡಿ ಬೆಳೆಸಿದ ಗೆಣಸಿನ ಇಳುವರಿ ಹೆಚ್ಚು. ನೀರಾವರಿ ಇಳುವರಿ 10-15 ಟನ್ ಆದರೆ ಮಳೆಯ ಬೆಳೆ 5-10 ಟನ್, ಆಗಬಹುದು. ತಳಿ (ಈಗಿನ ಹೆಸರು): ವರ್ಷಾ, ಶ್ರೀನಂದಿನಿ; ಶ್ರೀವರ್ಧಿನಿ; ಶ್ರೀ ರತ್ನಾ; ಕ್ರಾಸ್ ೪; ಕಲಾಮೇಘ; ಶ್ರೀವರುಣ; ಶ್ರೀ ಅರುಣ; ಆಶ್ವಿನಿ.

ಪೋಷಕಾಂಶ

[ಬದಲಾಯಿಸಿ]
  • ಬಿ1; ಬಿ2; ಗಿ3; ಬಿ5; ಬಿ6; ಬಿ9. ಅನ್ನಾಂಗ (ವಿಟಮಿನ್ಗಳು).ಕ್ಯಾಲ್ಸಿಯಂ; ಕಬ್ಬಿಣ; ಸೋಡಿಯಂ; ಝಿಂಕ್; ಮೆಗ್ನಿಶುಯಂ.[]

ರೋಗಬಾಧೆಗಳು

[ಬದಲಾಯಿಸಿ]

ಗೆಣಸಿಗೆ ಹಲವಾರು ರೀತಿಯ ಶಿಲೀಂಧ್ರ ರೋಗಗಳೂ ಕೀಟ ಪಿಡುಗುಗಳೂ ಬರುತ್ತವೆ. ಶಿಲೀಂಧ್ರ ರೋಗಗಳಲ್ಲಿ ಮುಖ್ಯವಾದವು ಕಾಂಡದ ಕೊಳೆಯುವಿಕೆ-ಇದು ಫ್ಯೂಸೇರಿಯಮ್ ಆಕ್ಸಿಸ್ಪೋರಮ್ ಎಂಬುದರಿಂದ ಉಂಟಾಗುತ್ತದೆ. ಕಪ್ಪುಕೊಳೆ ರೋಗ_ಇದು ಸೆರಟೋಸಿಸ್ಟಿಸ್ ಫಿಂಬ್ರಿಯೇಟ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗಗಳು ಭಾರತದಲ್ಲಿ ಅಷ್ಟು ಮುಖ್ಯವಲ್ಲದಿದ್ದರೂ ಉಳಿದ ದೇಶಗಳಲ್ಲಿ ಗಣನೀಯ ನಷ್ಟವನ್ನು ಉಂಟುಮಾಡುತ್ತವೆ. ಇವಲ್ಲದೆ ಆಫ್ರಿಕ, ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ವೈರಸಿನಿಂದ ಉಂಟಾಗುವ ಶಬಲ ರೋಗವೂ ರೈಜೋ಼ಪಸಿನಿಂದ ಉಂಟಾಗುವ ಕೊಳೆರೋಗವೂ ಮುಖ್ಯವೆನಿಸಿವೆ. ಕೀಟಪಿಡುಗುಗಳಲ್ಲಿ ಮುಖ್ಯವಾದವು ಸೈಲ್ಯಾಸ್ ಫಾರ್ಮಿಕೇರಿಯಸ್ ಎಂಬ ಸೊಂಡಿಲುಕೀಟ (ಸ್ವೀಟ್ ಪೊಟೇಟೊ ವೀವಿಲ್) ಮತ್ತು ಮೆಗಾಸ್ಟಿಸ್ ಗ್ರಾಂಡೇಲಿಸ್ ಎಂಬ ಪತಂಗದ ಕಂಬಳಿ ಹುಳುಗಳು. ಡಿಡಿಟಿ, ಲೆಡ್ ಆರ್ಸಿನೇಟ್ ಅಥವಾ ಬಿಎಚ್ಸಿ ಇವುಗಳ ಬಳಕೆಯಿಂದ ಇವನ್ನು ನಿಯಂತ್ರಿಸಬಹುದು.

ಗೆಣಸಿನ ಉಪಯೋಗಗಳು

[ಬದಲಾಯಿಸಿ]

ಗೆಣಸು ಪುಷ್ಟಿದಾಯಕ ಆಹಾರಗಳಲ್ಲೊಂದು. ಇದನ್ನು ಬೇಯಿಸಿ ಇಲ್ಲವೆ ಸುಟ್ಟು ತಿನ್ನುವುದಲ್ಲದೆ ಇದರಿಂದ ರೊಟ್ಟಿಗಳನ್ನು ತಯಾರಿಸುತ್ತಾರೆ. ಗೆಣಸಿನ ರಾಸಾಯನಿಕ ಸಂಯೋಜನೆ ಈ ರೀತಿ ಇದೆ. ತೇವಾಂಶ ಶೇ.68.5, ಕಾರ್ಬೊಹೈಡ್ರೇಟ್ ಶೇ.28.2, ಕೊಬ್ಬು ಶೇ.0.3, ಪ್ರೋಟೀನು ಶೇ.1.2, ಲೋಹಾಂಶ ಶೇ.1.0, ನಾರಿನ ಅಂಶ ಶೇ.0.8, ಅಲ್ಲದೆ ಪ್ರತಿ 100 ಗ್ರಾಂ. ಗೆಣಸಿನಲ್ಲಿ 50 ಮಿಗ್ರಾಂ ರಂಜಕ, 9 ಮಿಗ್ರಾಂ ಸೋಡಿಯಂ, 20 ಮಿಗ್ರಾಂ ಕ್ಯಾಲ್ಸಿಯಂ, 2.8 ಮಿಗ್ರಾಂ ಕಬ್ಬಿಣ, 393 ಮಿಗ್ರಾಂ ಪೊಟ್ಯಾಸಿಯಂ, 24 ಮಿಗ್ರಾಂ ಸಿ ವಿಟಮಿನ್, ಹಾಗೂ ಲಘು ಪ್ರಮಾಣದಲ್ಲಿ ಬಿ ಹಾಗೂ ಎ ವಿಟಮಿನ್ಗಳು ಇವೆ. ಕಾರ್ಬೊಹೈಡ್ರೇಟ್ ಅಂಶದಲ್ಲಿ ಶೇ.16 ಪಿಷ್ಟವೂ ಶೇ.4 ಸಕ್ಕರೆಯೂ ಇರುವುದರಿಂದ ಗೆಣಸಿನಿಂದ ಆಲ್ಕೊಹಾಲನ್ನೂ ಪಡೆಯಬಹುದಾಗಿದೆ. ಅಲ್ಲದೆ ಗೆಣಸಿನಿಂದ ಒಂದು ರೀತಿಯ ರಸಪಾಕವನ್ನೂ ತಯಾರಿಸುತ್ತಾರೆ. ಈಗ ಗೆಣಸಿನಿಂದ ಚಿಪ್ಸ್‌ ಅನ್ನು ತಯಾರಿಸಲಾಗುತ್ತಿದೆ. ಗೆಣಸಿನ ಎಳೆಚಿಗುರನ್ನು ಆಫ್ರಿಕ, ಇಂಡೋನೇಷ್ಯ ಮತ್ತು ಫಿಲಿಪೀನ್ಸ್‌ಗಳಲ್ಲಿ ಹಸುರು ತರಕಾರಿಯಾಗಿ ಬಳಸುವುದಿದೆ. ಗೆಡ್ಡೆಗಳನ್ನು ಪಡೆದ ಮೇಲೆ ಉಳಿಯುವ ಎಲೆ, ಕಾಂಡ ಇತ್ಯಾದಿಗಳನ್ನು ದನಕರುಗಳಿಗೆ ಮೇವಾಗಿ ಉಪಯೋಗಿಸಬಹುದು. ಚೇಳುಕಡಿತದ ಉರಿಯನ್ನು ಕಡಿಮೆ ಮಾಡಲು ಎಲೆಗಳ ಬೆಚ್ಚಾರವನ್ನು ಉಪಯೋಗಿಸುವ ಕ್ರಮ ಕೆಲವೆಡೆ ಇದೆ.

Tubers of a sweet potato plant, partially exposed during harvesting

ಗೆಣಸು ಬೆಳೆಯುವ ಪ್ರಮುಖ ರಾಜ್ಯಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ಯುಎಸ್ಡಿಎ ಡೇಟಾಬೇಸ್
  2. ಪ್ರಜಾವಾಣಿ:೧-೩-೨೦೧೬