ಗೆಣಸಿನ ಕುಟುಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bindweed family
Ipomoea imperati
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
Convolvulaceae

Type genus
Convolvulus
Genera

See text

Jacquemontia paniculata


ಗೆಣಸಿನ ಕುಟುಂಬ(Convolvulaceae)ಸಿಂಪೆಟಲೀ ಗುಂಪಿಗೆ ಸೇರಿದ ಒಂದು ಕುಟುಂಬ (ಕನ್ವಾಲ್ವ್ಯುಲೇಸೀ). ಇದರಲ್ಲಿ ಸುಮಾರು 50 ಜಾತಿಗಳಿವೆ. ಸುಮಾರು 21 ಜಾತಿಗಳು ದಕ್ಷಿಣ ಭಾರತದ ವನ್ಯ ಪ್ರದೇಶಗಳಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಕೆಲವನ್ನು ಉದ್ಯಾನಗಳಲ್ಲಿ ಬೆಳೆಸುವುದುಂಟು. ಇವು ಸಾಮಾನ್ಯವಾಗಿ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯಗಳು. ಈ ಕುಟುಂಬದ ಸಸ್ಯಗಳಲ್ಲಿ ಕಾಂಡ ಬಹಳ ದುರ್ಬಲವಾಗಿರುವುದರಿಂದ ಅವೆಲ್ಲ ಬಹುಮಟ್ಟಿಗೆ ಹಂಬುಗಳಾಗಿ ಅಥವಾ ಅಡರುಬಳ್ಳಿಗಳಾಗಿ ಬೆಳೆಯುತ್ತವೆ. ಒಮ್ಮೊಮ್ಮೆ ಮೂಲಿಕೆಗಳಾಗಿ ಬೆಳೆಯುವುದುಂಟು. ಕೆಲವು ವಿಜ್ಞಾನಿಗಳ ಅಭಿಪ್ರಾಯದಲ್ಲಿ ಅಡರುಬಳ್ಳಿಯಂತೆ ಬೆಳೆಯುವ ಸಸ್ಯಗಳು ಬಹುಮುಂದುವರಿದವು. ಕೆಲವು ಸಸ್ಯಗಳು ಬದನಿಕೆಗಳಾಗಿರುತ್ತವೆ. ಉದಾಹರಣೆಗೆ ಕಸ್ಕ್ಯುಟ ಎಂಬ ಸಸ್ಯ ತನ್ನ ಕಾಂಡದಿಂದ ಆಶ್ರಯದಾತ ಸಸ್ಯವನ್ನು ಬಳಸಿಕೊಂಡಿದ್ದು, ಹೀರುಬೇರುಗಳ ಸಹಾಯದಿಂದ ಆಶ್ರಯದಾತ ಸಸ್ಯದ ಕಾಂಡವನ್ನು ಪ್ರವೇಶಿಸಿ, ನಾಳಕೂರ್ಚಗಳೊಂದಿಗೆ ನೇರವಾದ ಸಂಪರ್ಕವನ್ನು ಇಟ್ಟುಕೊಂಡು ಸ್ವಂತ ಬೆಳೆವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಪಡೆಯುತ್ತದೆ. ಗೆಣಸಿನ ಕುಟುಂಬದ ಸಸ್ಯಗಳ ಎಲೆಗಳು ಸರಳರೀತಿಯವು: ಪರ್ಯಾಯವಾಗಿ ಜೋಡಣೆಗೊಂಡಿವೆ. ಹೂಗಳು ಹೆಚ್ಚಾಗಿ ಒಂಟಿಯಾಗಿದ್ದು ಅರೀಯ ಸಮಾಂಗತೆಯನ್ನು ಪ್ರದರ್ಶಿಸುತ್ತವೆ. ಇವು ವರ್ಣರಂಜಿತವಾಗಿವೆ. ಕೇಸರಗಳು ದಳಾರೂಹ ಮಾದರಿಯವು. ಅಂಡಾಶಯದ ಹೊರತು ಹೂವಿನ ಮಿಕ್ಕೆಲ್ಲ ಭಾಗಗಳು ಪಂಚಕಗಳಲ್ಲಿ (ಪೆಂಟಮೀರಸ್) ಇರುತ್ತವೆ. ಕಾಂಡದಲ್ಲಿ ಹಾಲ್ನೊರೆಯಿದೆ (ಲೇಟೆಕ್ಸ್‌). ನಾಳಕೂರ್ಚಗಳಲ್ಲಿ ಒಂದೊಂದರಲ್ಲೂ ಎರಡೂ ಕಡೆ ಆಹಾರವಾಹಕ ಅಂಗಾಂಶಗಳಿವೆ. ಇದರಿಂದಾಗಿ ಇವನ್ನು ಬೈಕೊಲ್ಯಾಟರಲ್ ಬಂಡಲ್ಸ್‌ ಎನ್ನಲಾಗುತ್ತದೆ.

ಪ್ರಭೇದಗಳು[ಬದಲಾಯಿಸಿ]

ಕನ್ವಾಲ್ವ್ಯುಲಸ್ ಮತ್ತು ಐಪೋಮಿಯ ಎಂಬೆರಡು ಜಾತಿಗಳು ಈ ಕುಟುಂಬದಲ್ಲಿ ಅತ್ಯಂತ ದೊಡ್ಡವಾದವು. ಇವು ಮೂನ್ನೂರಕ್ಕೂ ಹೆಚ್ಚು ಪ್ರಭೇದಗಳನ್ನೊಳ ಗೊಂಡಿವೆ. ಇವುಗಳಲ್ಲಿ ಕಾಂಡಕ ವಿವಿಧ ರೂಪಾಂತರಗಳನ್ನು ಗಮನಿಸಬಹುದು. ಕೆಲವು ನೆಟ್ಟಗೆ ನಿಲ್ಲುವಂಥವಾದರೆ ಮತ್ತೆ ಕೆಲವು ಭೂಮಿಗೆ ಕಚ್ಚಿಕೊಂಡು ಬೆಳೆಯುವಂಥವು. ಇನ್ನು ಕೆಲವು ಕುಂಠಿತಗೊಂಡ ಶಾಕಗಳು. ಕೆಲವು ಏಕವಾರ್ಷಿಕ ಗಳಾಗಿದ್ದರೆ ಇನ್ನು ಕೆಲವು ಬಹುವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಸ್ಯಗಳಲ್ಲಿ ಗುಪ್ತ ಕಾಂಡಗಳಿರುತ್ತವೆ. ಮರಳುಗಾಡಿನ ವಾತಾವರಣದಲ್ಲಿ ಬೆಳೆಯುವ ಸಸ್ಯಗಳಲ್ಲಿ ಗುಪ್ತಕಾಂಡ ಇರುವುದು ಒಂದು ಅನುಕೂಲ. ಕನ್ವಾಲ್ವ್ಯುಲಸ್ ಸ್ಕಾಮೋನಿಯ ಪ್ರಭೇದದಲ್ಲಿ ಗುಪ್ತಕಾಂಡ ದಪ್ಪವಾಗಿದ್ದು ಆಹಾರ ಶೇಖರಣಾಂಗವಾಗಿರುತ್ತದೆ. ಐಪೋಮಿಯ ಬಟಾಟಸ್ (ಗೆಣಸು) ಮತ್ತಿತರ ಪ್ರಭೇದಗಳಲ್ಲಿ ತಾಯಿ ಬೇರಿನ ಅಕ್ಕಪಕ್ಕದಲ್ಲಿರುವ ಬೇರುಗಳು ರಸಭರಿತವಾಗಿದ್ದು ಆಹಾರವನ್ನು ಶೇಖರಿಸಿಕೊಂಡು ಉಬ್ಬಿಕೊಂಡಿರುತ್ತವೆ. ಅರೇಬಿಯ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶದ ಕೆಲವು ಭಾಗಗಳಲ್ಲಿ ಕನ್ವಾಲ್ವ್ಯುಲಸ್ ಜಾತಿಯ ಸಸ್ಯಗಳು ಮುಳ್ಳುಮಯ ಪೊದರುಗಳಾಗಿ ಬೆಳೆಯುತ್ತವೆ. ಐಪೋಮಿಯ ಪ್ರೆಸ್ಕ್ಯಾಪ್ರೀ ಎಂಬುದು ಸಮುದ್ರ ತೀರದಲ್ಲಿರುವ ಮರಳಿನಲ್ಲಿ ಇಲ್ಲವೆ ನದೀತೀರದಲ್ಲಿ ಬೆಳೆಯುತ್ತದೆ. ಈ ಸಸ್ಯ ಮರಳುಗುಡ್ಡೆ ಹಾರಿ ಹೋಗದಂತೆ ತಡೆಯುತ್ತದೆ. ಭಾರತದ ಎಲ್ಲೆಡೆಯೂ ಎವಾಲ್ವ್ಯುಲಸ್ ಆಲ್ಸಿನಾಯ್ಡಿಸ್ (ವಿಷ್ಣುಕ್ರಾಂತಿ) ಎಂಬ ಪ್ರಭೇದ ಕುಂಠಿತವಾದ ಶಾಕಸಸ್ಯವಾಗಿ ಬಯಲುಗಳಲ್ಲಿ ಬೆಳೆಯುತ್ತದೆ. ಹಿಲ್ಡೆಬ್ರಾಂಡಿಯ ಎಂಬ ಸಸ್ಯ ಮರುಭೂಮಿಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಇದರ ಕವಲುಗಳು ಪುಟ್ಟವಾಗಿದ್ದರೂ ಗಟ್ಟಿಯಾಗಿರುತ್ತವೆ. ಅವುಗಳ ತುದಿ ಮುಳ್ಳಾಗಿದ್ದು ಸಸ್ಯಕ್ಕೆ ಸ್ವರಕ್ಷಣೆಯ ಸಾಧನವೆನಿಸಿವೆ.

ಐಪೋಮಿಯ ಕ್ವಾಮೊಕ್ಲಿಟ್ ಪೆನ್ನೇಟ[ಬದಲಾಯಿಸಿ]

ಐಪೋಮಿಯ ಕ್ವಾಮೊಕ್ಲಿಟ್ ಪೆನ್ನೇಟ ಎಂಬ ಅಡರು ಬಳ್ಳಿಯನ್ನು ಮನೆಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಕ್ರಿಸ್ಮಸ್ ಬಳ್ಳಿ ಎಂದೂ ಇದಕ್ಕೆ ಹೆಸರುಂಟು. ಇದು ಕರ್ನಾಟಕಬಾಬಾಬುಡನ್‍ಗಿರಿ ನೀಲಗಿರಿಯ ಕಾಡುಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದು ಚೆಲುವಾದ ಕೆಂಪುಬಣ್ಣದ ಹೂಗಳನ್ನು ಬಿಡುತ್ತದೆ. ಪೊರಾನ ಮಲಬಾರಿಕ ಎಂಬ ಅಡರು ಬಳ್ಳಿಯಲ್ಲಿ ಪುಷ್ಪಪತ್ರಗಳು ಕೊನೆಯವರೆಗೂ ಸ್ಥಿರವಾಗಿದ್ದು, ದಳಗಳು ಕ್ರಮೇಣ ಉದುರಿ ಹೋದರೂ ಒಣಗಿದ ಹೂವಿನಂತೆ ಕಾಣುತ್ತದೆ. ಒಣಗಿದ ಹೂಗಳನ್ನು ಅಂದಕ್ಕಾಗಿ ಮನೆಗಳಲ್ಲಿ ಹೂದಾನಿಗಳಲ್ಲಿಡುತ್ತಾರೆ.

ಕಾಲೋನಿಕ್ಟಿಯಾನ್[ಬದಲಾಯಿಸಿ]

ಕಾಲೋನಿಕ್ಟಿಯಾನ್ ಎಂಬ ಅಡರುಬಳ್ಳಿ ಕರ್ನಾಟಕದ ಕಾಡಿನಲ್ಲಿ ಕಾಣಬರುತ್ತದೆ. ಬಿಳಿಯ ಬಣ್ಣದ ಮತ್ತು ಮಧುರವಾದ ಪರಿಮಳವನ್ನು ಪಡೆದಿರುವ ಇದರ ಹೂಗಳು ರಾತ್ರಿಯಲ್ಲಿ ಅರಳುವುದರಿಂದ ಹಾಗೂ ಚಂದ್ರನ ಬೆಳಕಿರುವಾಗ ಅಧಿಕವಾಗಿ ಹೂಗಳನ್ನು ಬಿಡುತ್ತದೆ ಎಂಬ ಪ್ರತೀತಿ ಇರುವುದರಿಂದ ಇದನ್ನು ಚಂದ್ರಕಾಂತಿ ಅಥವಾ ಚಂದ್ರಪುಷ್ಪ (ಮೂನ್ ಫ್ಲವರ್) ಎಂದು ಹೇಳುತ್ತಾರೆ. ಇದರ ಬೀಜಗಳು ಹಳದಿಯಾಗಿರುತ್ತವೆ. ಇದರಲ್ಲಿ ಕೆಲವು ಪ್ರಭೇದಗಳನ್ನು ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುವುದುಂಟು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: