ಸಮೇತನಹಳ್ಳಿ ರಾಮರಾವ್

ವಿಕಿಪೀಡಿಯ ಇಂದ
Jump to navigation Jump to search
ಸಮೇತನಹಳ್ಳಿ ರಾಮರಾಯರು
ಜನನನವೆಂಬರ್ ೨೪, ೧೯೧೭
ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನ ಹಳ್ಳಿ
ಮರಣಅಕ್ಟೋಬರ್ ೫, ೧೯೯೯
ವೃತ್ತಿಆರೋಗ್ಯ ಇಲಾಖೆಯಲ್ಲಿ ಅಧಿಕಾರಿ, ಸಾಹಿತಿ

ಸಮೇತನಹಳ್ಳಿ ರಾಮರಾವ್ (ನವೆಂಬರ್ ೨೪, ೧೯೧೭ - ಅಕ್ಟೋಬರ್ ೫, ೧೯೯೯) ಕನ್ನಡದ ಐತಿಹಾಸಿಕ ಕಾದಂಬರಿಗಳಿಗೆ ಪ್ರಸಿದ್ಧರಾಗಿದ್ದಾರೆ.

ಜೀವನ[ಬದಲಾಯಿಸಿ]

ಸಮೇತನಹಳ್ಳಿ ರಾಮರಾಯರು ನವೆಂಬರ್ ೨೪, ೧೯೧೭ರಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸರಾವ್, ತಾಯಿ ರುಕ್ಮಿಣಿಯಮ್ಮ. ಅವರ ಪ್ರಾರಂಭಿಕ ಶಿಕ್ಷಣ ಬೋದನ ಹೊಸಹಳ್ಳಿ, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದು. ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಿಂದ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದರು.

ಮುಂದೆ ರಾಮರಾಯರು ಉದ್ಯೋಗಕ್ಕಾಗಿ ಕೆಲಕಾಲ ವೈಮಾನಿಕ ಕಚೇರಿ, ಸೈನಿಕ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಿ ನಂತರದಲ್ಲಿ ಮೈಸೂರು ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸ್ಯಾನಿಟರಿ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ಪುರಸಭೆ, ಹಾಸನ ಪುರಸಭೆ, ಬ್ಯೂರೊ ಆಫ್ ಮಲೇರಿಯಾಲಜಿ ಮುಂತಾದ ಕಡೆ ಹಿರಿಯ ಆರೋಗ್ಯ ತಪಾಸಣಾಧಿಕಾರಿಗಳಾಗಿ ಮಧುಗಿರಿ ಪುರಸಭೆ, ಪಾಂಡವಪುರ ಆರೋಗ್ಯ ಕೇಂದ್ರ, ನಂಜನಗೂಡು ತಾಲ್ಲೂಕು, ಹೊಸಕೋಟೆ ಆರೋಗ್ಯಕೇಂದ್ರ, ಹೀಗೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಸಾಹಿತ್ಯ ಲೋಕದಲ್ಲಿ[ಬದಲಾಯಿಸಿ]

ರಾಮರಾಯರಿಗೆ ಸಾಹಿತ್ಯದಲ್ಲಿ ಅಪಾರ ಒಲವು. ಹೀಗೆ ಬೆಳೆದ ಸಾಹಿತ್ಯದ ಒಲವಿನಿಂದ ಅವರು ಅನೇಕ ಕೃತಿಗಳನ್ನು ರಚಿಸಿದರು. ಭೀಷ್ಮ ಸಂಕಲ್ಪ, ತಲಕಾಡುಗೊಂಡ, ಮಹಾಶ್ವೇತೆ, ಶಿಲ್ಪಸಂಗೀತ, ದ್ರೋಹಾಡಂಬರ, ಶ್ರೀಕೃಷ್ಣ ಮಾನಸ ಮುಂತಾದ ಹತ್ತು ನಾಟಕಗಳು; ಎಲೆ ಮರೆಯ ಹೂ, ಮೊನೆಗಾರ, ನೃತ್ಯ ಸರಸ್ವತಿ, ಯದುವೊಡೆಯ, ಸಿರಿಯಲದೇವಿ ಮೊದಲ್ಗೊಂಡು ಒಂಬತ್ತು ಕಾದಂಬರಿಗಳು; ಸ್ವರ್ಗ ಸೋಪಾನ, ಪ್ರಾಣವೀಣೆ, ಈಸಬೇಕು ಮುಂತಾದ ಕಥಾ ಸಂಕಲನಗಳು; ರಾಸಲೀಲೆ ಎಂಬ ಗೀತನಾಟಕ; ಶಾಕುಂತಲಾ ಮಹಾಕಾವ್ಯ; ಟಿಪ್ಪು ಸುಲ್ತಾನ ಎಂಬ ಅನುವಾದ; ಆತ್ಮಕಥೆಯಾದ ಕೋಟೆಮನೆ ಮುಂತಾದ ೨೯ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಪಡಿಸಿದರು.

ರಾಮರಾಯರ ಎಲೆಮರೆಯ ಹೂ ಪ್ರೌಢಶಾಲಾ ತರಗತಿಗೆ, ತಲಕಾಡುಗೊಂಡ ನಾಟಕ ಬಿ.ಎ, ಬಿ.ಎಸ್‌ಸಿ ಮತ್ತು ಪಿ.ಯು. ತರಗತಿಗಳಿಗೆ, ಸವತಿ ಗಂಧವಾರಣೆ ಕಾದಂಬರಿ ಬಿಕಾಂ ತರಗತಿಗೆ, ನಾಟ್ಯಮಂದಾರ ನಾಟಕ ಬಿ.ಎ. ತರಗತಿಗೆ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿದ್ದವು.

ದತ್ತಿ ಸ್ಥಾಪನೆ[ಬದಲಾಯಿಸಿ]

ಸಮೇತನಹಳ್ಳಿ ರಾಮರಾಯರ ಶ್ರೀಮತಿಯವರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪನೆ; ರಾಮರಾಯರ ಹೆಸರಿನಲ್ಲಿ ಬಿ.ಎಂ.ಶ್ರೀ. ಪ್ರತಿಷ್ಠಾನ ಮತ್ತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ದತ್ತಿನಿಧಿ ಸ್ಥಾಪನೆಗಳು ಸಮೇತನಹಳ್ಳಿ ರಾಮರಾಯರ ಹೆಸರಿನಲ್ಲಿ ಉತ್ತಮ ಕೆಲಸಗಳು ಮುಂದುವರೆಯುವಂತೆ ಮಾಡಿವೆ.

ವಿದಾಯ[ಬದಲಾಯಿಸಿ]

ಸಮೇತನಹಳ್ಳಿ ರಾಮರಾಯರು ಅಕ್ಟೋಬರ್ ೫, ೧೯೯೯ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಕೃತಿಗಳು[ಬದಲಾಯಿಸಿ]

 • ಎಲೆಮರೆಯ ಹೂ
 • ಕಲಾರಾಧನೆ
 • ಜೂಲಿಯಸ್ ಸೀಜರ್
 • ತಲಕಾಡುಗೊಂಡ
 • ನಾಟ್ಯಮಂದಾರ
 • ಪ್ರಾಣವೀಣೆ
 • ಮಹಾಶ್ವೇತೆ
 • ಯದುವೊಡೆಯ
 • ರಾಸಲೀಲೆ
 • ಶಾಕುಂತಲ (ಕಾವ್ಯ)
 • ಶಿಲ್ಪ ಸಂಗೀತ
 • ಸವತಿಗಂಧ ವಾರಣಿ
 • ಸಿರಿಯಲ ದೇವಿ
 • ಸ್ವರ್ಗ ಸೋಪಾನ

ಪುರಸ್ಕಾರ[ಬದಲಾಯಿಸಿ]

 • ‘ಶಾಕುಂತಲ’ (ಕಾವ್ಯ)ಕ್ಕೆ ೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.
 • ‘ಸ್ವರ್ಗ ಸೋಪಾನ’, ‘ತಲಕಾಡುಗೊಂಡ’, 'ಶಾಕುಂತಲ' ಕೃತಿಗಳಿಗೆ ರಾಜ್ಯ ಸರಕಾರದ ಬಹುಮಾನ ಲಭಿಸಿದೆ.
 • ‘ಸಿರಿಯಲ ದೇವಿ’ ಕೃತಿಗೆ ಸಂಯುಕ್ತ ಕರ್ನಾಟಕ ಕಾದಂಬರಿ ಸ್ಪರ್ಧೆ ಬಹುಮಾನ ದೊರೆತಿದೆ.
 • ‘ಶಿಲ್ಪ ಸಂಗೀತ’, 'ಶ್ರೀಕೃಷ್ಣ ದರ್ಶನ' ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ದೊರೆತಿದೆ.
 • ಪರಶುರಾಮ ಕಾದಂಬರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿ
 • 1998ರಲ್ಲಿ ಕನ್ನಡ ಸಾಹಿತ್ಯ ಬಂಧುಗಳು ರಾಮರಾಯರಿಗೆ ‘ರಾಸದರ್ಶನ’ ಎಂಬ ಗೌರವ ಗ್ರಂಥವನ್ನು ಅರ್ಪಿಸಿದರು.

ಆಕರಗಳು[ಬದಲಾಯಿಸಿ]

 1. ಕಣಜ
 2. ಇಂಗ್ಲಿಷ್ ವಿಕಿಪೀಡಿಯ ಲೇಖನ