ಸದಸ್ಯ:MEGHANAJ 95/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಜನನ : ಲಿಂಗಾಣುಗಳು[ಬದಲಾಯಿಸಿ]

ಜೀವಿಗಳು ಅವುಗಳ ಜೀವಿತ ಅವಧಿಯಲ್ಲಿ ತಮ್ಮ ಕುಲ ಉಳಿದು ಮುಂದುವರೆಯಲಿ ಎನ್ನುವ ಉದ್ದೇಶದಿಂದ ತಮ್ಮಂತಿರುವ ನಕಲುಗಳನ್ನು ಉತ್ಪತ್ತಿಮಾಡುತ್ತವೆ. ಇದನ್ನು ವಂಶಾಭಿವೃದ್ಧಿ ಸಂತ್ತಾನೋತ್ಪತ್ತಿ ಅಥವ ಪ್ರಜನನ ( ರಿಪ್ರೊಡಕ್ಷನ್ ) ಎಂದು ಕರೆಯುತ್ತಾರೆ. ಪ್ರಜನನ ಜೀವಿಗಳ ಒಂದು ಮುಖ್ಯ ಲಕ್ಷಣ.ಪ್ರಜನನದಲ್ಲಿ ಎರಡು ಮುಖ್ಯ ವಿಧಾನಗಳಿವೆ:

ನಿರ್ಲಿಂಗ (ಎಸೆಕ್ಷುಯಲ್) ರೀತಿಯ ಪ್ರಜನನ: ಒಂದು ಜೀವಿ ತನ್ನ ಬೆಳವಣಿಗೆಯ ಒಂದು ನಿರ್ದಿಷ್ಟ ಹಂತ ತಲುಪಿದಾಗ ಸೀಳಿ ಅಥವ ಒಡೆದು ಒಂದು ಅಥವ ಹಲವಾರು ಚೂರುಗಳಾಗುವುದು ಮತ್ತು ಈ ಚೂರುಗಳು ಬೆಳೆದು ಪ್ರಭುದ್ದಾವಸ್ತೆಯನ್ನು ತಲುಪಿ ಎಂದಿನಂತೆ ಜೀವನ ನಡೆಸುವುದು ನಿರ್ಲಿಂಗ ರೀತಿಯ ಪ್ರಜನನ.

೨. ಲಿಂಗ (ಸೆಕ್ಷುಯಲ್) ರೀತಿಯ ಪ್ರಜನನ. ಒಂದು ಜೀವಿ ಸಿಡಿದು ಚೂರಾಗಿ ಅಥವ ಮರಿ ಚೂರುಗಳನ್ನು ಉತ್ಪತ್ತಿ ಮಾಡಿ, ಆ ಮರಿಚೂರುಗಳು ತನ್ನ ಪಿತೃ ಜೀವಿಯ ಅಥವ ತಮ್ಮದೇ ಪ್ರಭೇದದ ಇನ್ನೊಂದು ಜೀವಿಯ ಮರಿಚೂರಿನೊಡನೆ ಕೂಡಿ ಒಂದು ಸಂಯುಕ್ತ ರಚನೆಯಾಗಿ (ಬೀಜಾಣು) ರೂಪುಗೊಂಡು ಬೆಳೆಯುವುದು ಲಿಂಗ ರೀತಿಯ ಪ್ರಜನನ ಈ ವಿಧಾನದಲ್ಲಿ ಉತ್ಪತ್ತಿಯಾಗುವ ಮರಿಚೂರುಗಳನ್ನು ಗ್ಯಾಮೀಟುಗಳೆಂದು, ಅವು ಕೂಡುವ ಪ್ರಕ್ರಿಯೆಯನ್ನು ನಿಷೇಚನೆ (ಫರ್ಟಿಲೈಜೆಷನ್) ಎಂದು ಕರೆಯುತ್ತಾರೆ. ಇದರ ಫಲವಾಗಿ ಉತ್ಪತ್ತಿಯಾಗುವ ಸಂಯುಕ್ತ ರಚನೆಯನ್ನು ಬೀಜಾಣು (ಜೈಗೋಟ್) ಎಂದು ಕರೆಯುತ್ತಾರೆ.

ಲಿಂಗಾಣುಗಳ ಉತ್ಪಾದನೆ ಮತ್ತು ಎರಡು ಲಿಂಗಾಣುಗಳ ಕೂಡುವಿಕೆ, ಬೀಜಾಣುವಿನ ನಿರ್ಮಾಣ ಮತ್ತು ಅದರಿಂದ ಪೂರ್ಣ ಜೀವಿಯೊಂದು ಬೆಳೆಯುವ ಪ್ರಕ್ರಿಯೆಯಲ್ಲಿ ಜೀವಿಗಳ ಬದುಕಿನ ಮತ್ತು ಜೀವ ವಿಕಾಸದ ರಹಸ್ಯ ಅಡಗಿದೆ. ಜೀವಿಗಳ ಕನಿಷ್ಟ ಏಕಮಾನ ರಚನೆ ಜೀವಕೋಶ. ಒಂದು ಜೀವಿ ಒಂದೇ ಒಂದು ಜೀವಕೋಶವನ್ನು ಹೊಂದಿದ ಏಕಕೋಶ ಜೀವಿಯಾಗಿರಬಹುದು ಅಥವ ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನುಳ್ಳ ಬಹುಕೋಶ ಜೀವಿಯಾಗಿರಬಹುದು, ಪ್ರತಿಯೊಂದು ಜೀವಕೋಶದಲ್ಲಿಯೂ ಅದರ ಎಲ್ಲ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವ ನ್ಯೂಕ್ಲಿಯಸ್ ಎಂಬ ಒಂದು ಕೇಂದ್ರ ಬಿಂದುವಿರುತ್ತದೆ. ಈ ನ್ಯೂಕ್ಲಿಯಸ್ಸಿನಲ್ಲಿ ದಾರದ ತುಂಡುಗಳಂತಿರುವ ಕ್ರೋಮೂಸೋಮುಗಳೆಂಬ (ವರ್ಣತಂತುಗಳು) ರಚನೆಗಳಿವೆ. ಒಂದು ಪ್ರಭೇದದ ಜೀವಿಯಲ್ಲಿರುವ ಕ್ರೊಮೊಸೋಮುಗಳ ಸಂಖ್ಯೆ ನಿಖರ ಮತ್ತು ಅವು ಸಾಮಾನ್ಯವಾಗಿ ಜೋಡಿಯಲ್ಲಿರುತ್ತವೆ. ಒಂದು ಜೋಡಿಯ ಕ್ರೋಮೂಸೋಮುಗಳು ಉದ್ದ, ದಪ್ಪ ಮತ್ತು ಆಕಾರಗಳಲ್ಲಿ ಏಕರೀತಿಯಾಗಿರುತ್ತವೆ. ಅವುಗಳನ್ನು ಸದೃಶ (ಹೋಮೊಲಾಗಸ್) ಕ್ರೋಮೊಸೋಮುಗಳೆಂದು ಕರೆಯುತ್ತಾರೆ. ಈ ಕ್ರೋಮೊಸೋಮುಳಲ್ಲಿ ಇಡೀ ಜೀವಿಯ ರಚನೆ ಮತ್ತು ಕ್ರಿಯೆಗಳ ನಿರ್ವಹಣೆಯ ಸಂಕೇತವನ್ನೊಳಗೊಂಡ ನೀಲನಕ್ಷೆ ಡಿ.ಎನ್.ಎ ಎಂಬ ರಸಾಯನಿಕ ಅಣುವಿನಲ್ಲಿ ಅಡಗಿದೆ.

ಲಿಂಗರೀತಿಯ ಪ್ರಜನನದಲ್ಲಿ ಎರಡು ಲಿಂಗಾಣುಗಳು ಕೂಡಿ ಉತ್ಪತ್ತಿಯಾಗುವ ಸಂಯುಕ್ತ ರಚನೆ ಬೀಜಾಣುವಿನಿಂದ ಪೂರ್ಣ ಜೀವಿ ಬೆಳೆಯತ್ತದೆ. ಬೀಜಾಣು ಒಂದು ಒಂಟಿ ಜೀವಕೋಶ. ಅದು ವಿಭಜನೆಗೊಂಡು ಬಹುಕೋಶೀಯ ಜೀವಿಯಾಗಿ ಬೆಳೆದು ರೂಪುಗೊಳ್ಳುತ್ತದೆ. ಸಾಮಾನ್ಯ ಜೀವಕೋಶ ವಿಭಜನೆಯ ಕಾಲಕ್ಕೆ ವಿಭಜನೆಯ ಆರಂಭದ ಹಂತದಲ್ಲಿ ಪ್ರತಿಯೊಂದು ಕ್ರೋಮೊಸೋಮೂ ಇಮ್ಮಡಿಗೂಂಡು ಆನಂತರದ ಹಂತದಲ್ಲಿ ಬೇರ್ಪಟ್ಟು ವಿರುದ್ದ ದಿಕ್ಕಿನ ಧ್ರುವಗಳ ಕಡೆಗೆ ಚಲಿಸಿ ಎರಡು ನ್ಯೂಕ್ಲಿಯಸ್ ಗಳಾಗಿ ಎರಡು ಜೀವಕೋಶಗಳು ನಿರ್ಮಾಣವಾಗುತ್ತವೆ. ಹೀಗೆ ಒಂದು ಪ್ರಭೇದದ ಕ್ರೋಮೊಸೋಮು ಸಂಖ್ಯಾ ನಿಖರತೆಯನ್ನು ಸಂರಕ್ಷಿಸಲಾಗುತ್ತದೆ. ಆದರೆ ಲಿಂಗಾಣುಗಳ ನಿರ್ಮಾಣ ಸಂದರ್ಭದಲ್ಲಿ ಜೀವಕೋಶ ವಿಭಜನೆಯ ಕಾಲಕ್ಕೆ ಕ್ರೋಮೊಸೋಮುಗಳ ಆರಂಭದ ಇಮ್ಮಡಿಯುವಿಕೆ ನಡೆಯದೆ ಜೋಡಿಯ ಕ್ರೋಮೊಸೋಮುಗಳೆ ಬೇರ್ಪಟ್ಟು ಅರ್ಧ ಸಂಖ್ಯೆಯನ್ನೊಳಗೊಂಡ ಎರಡು ಮರಿ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಇವು ಅನಂತರ ಲಿಂಗಾಣುಗಳಾಗಿ ಪರಿರ್ವತನೆಗೊಳ್ಳುತ್ತವೆ. ಲಿಂಗ ರೀತಿಯ ಪ್ರಜನನದಲ್ಲಿ ಅರ್ಧ ಅರ್ಧ ಸಂಖ್ಯೆಯನ್ನೊಳಗೊಡ ಎರಡು ಲಿಂಗಾಣುಗಳು ಕೂಡಿದಾಗ ಆ ಪ್ರಭೇದದ ನಿಖರ ಸಂಖ್ಯೆಯ ಕ್ರೋಮೊಸೋಮುಗಳು ಹಾಗು ಪ್ರಜನನದ ಮೂಲಕ ಸಂತಾನದಿಂದ ಪಿತೃಜೀವಿಯು ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪತ್ತಿಯಾದ ಮರಿ ಸಂತಾನಗಳು ಪಿತೃವಿನ ಕ್ರೋಮೋಸೋಮು ಸಂಖ್ಯೆಯನ್ನೇ ಒಳಗೊಂಡಿರುತ್ತವೆ.

ವಿಕಾಸದ ಆರಂಭದಲ್ಲಿ ಲಿಂಗ ರೀತಿಯ ಪ್ರಜನನ ವಿಧಾನವನ್ನು ರೂಢಿಸಿಕೊಳ್ಳುವ ಸಂದರ್ಭದಲ್ಲಿ ಆಕಾರ ಮತ್ತು ಗಾತ್ರದಲ್ಲಿ ಒಂದೇ ರೀತಿಯ ಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತಿದ್ದವು. ಇವುಗಳು ಕೂಡಿ ಬೀಜಾಣು ಉತ್ಪತ್ತಿಯಾಗುತ್ತಿತ್ತು. ಈ ವಿಧಾನವನ್ನು ಐಸೊಗ್ಯಾಮೆಟಿ ಅಥವ ಸಮಲಿಂಗಾಣು ವಿಧಾನ ಎಂದು ಹೆಸರಿಸಿದೆ. ಇದರಿಂದ ಮುಂದುವರಿದ ಹಂತದಲ್ಲಿ ಆಕಾರ ಮತ್ತು ರಚನೆಯಲ್ಲಿ ಒಂದೇ ತೆರನಾಗಿದ್ದು ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿರುವ ಭಿನ್ನ ಗಾತ್ರದ ಲಿಂಗಾಣುಗಳು ಕೂಡಿ ನಿಷೇಚನೆಗೊಳ್ಳುತ್ತಿದ್ದವು. ಇದನ್ನು ಅಸಮಲಿಂಗಾಣು ವಿಧಾನ (ಅನೈಸೊಗ್ಯಾಮಸ್ ) ಎಂದು ಹೆಸರಿಸಿದ್ದಾರೆ. ಈ ಎರಡೂ ವಿಧಾನದ ನಿಷೇಚನೆಯಲ್ಲಿ ಭಾಗವಹಿಸುವ ಲಿಂಗಾಣುಗಳು ರಚನೆಯಲ್ಲಿ ಏಕರೀತಿಯಾಗಿರುವುದರಿಂದ, ಒಂದರಲ್ಲಿ ಗಾತ್ರದ ವಿನಹ ಇವೆರಡೂ ವಿಧಾನಗಳನ್ನು, ಅಂದರೆ ಅನೈಸೊಗೆಮಿ ಮತ್ತು ಐಸೊಗೆಮಿ ವಿಧಾನದ ಪ್ರಜನನವನ್ನು ಒಟ್ಟಾಗಿ ಹೋಮೊಗ್ಯಾಮೆಟಿ ಎಂದು ಕರೆಯುತ್ತಾರೆ. ವಿಕಾಸ ಮುಂದುವರಿದು ಗಾತ್ರ ಆಕಾರ ಮತ್ತು ರಚನೆಗಳಲ್ಲಿ ವ್ಯತ್ಯಾಸ ತೋರುವ ಭಿನ್ನ ಲಿಂಗಾಣುಗಳು ಉತ್ಪತ್ತಿಯಾಗತೊಡಗುತ್ತವೆ. ಅವುಗಳನ್ನು ಪುರುಷಾಣು, ಆಂಡಾಣು /ಓವಮ್ ಎಂದು ಗುರುತಿಸಬಹುದಾಗಿ, ಇವುಗಳೆರಡೂ ಕೂಡಿ ನಡೆಯುವ ನಿಷೇಚನೆಯ ವಿಧಾನವನ್ನು ಹೆಟೆರೊಗ್ಯಾಮೆಟಿ ಎಂದು ಕರೆದ್ದಿದ್ದಾರೆ.

ಲಿಂಗ ರೀತಿಯ ಪ್ರಜನನ ಜೀವವಿಕಾಸದಲ್ಲಿ ಒಂದು ಗಂಭೀರವಾದ ಮತ್ತು ಅನುಕೂಲವಾದ ಪೂರಕ ಘಟನೆ. ಆದು ಜೀವವಿಕಾಸದ ಯಶಸ್ಸಿಗೆ ಕಾರಣವಾಗುತ್ತದೆ. ಲಿಂಗ ರೀತಿಯ ಪ್ರಜನನ ಎಂದಾಗ ವಿಕಾಸದಲ್ಲಿ ಮುಂದುವರಿದ ಪ್ರಾಣಿಗಳಲ್ಲಿರುವಂತೆ ಸ್ಪಷ್ಟ ಹೆಣ್ಣು ಮತ್ತು ಗಂಡು ಲಿಂಗಗಳನ್ನು ಗುರುತಿಸಬಹುದು. ಆದರೆ ವಿಕಾಸದಲ್ಲಿ ನ್ಯೂಕ್ಲಿಯಸ್ ಇನ್ನೂ ನಿರ್ಮಾಣವಾಗದಿರುವ, ಏಕಕೋಶ ಜೀವಿಗಳೆಂದು ಕರೆಯಲೂ ಸಾಧ್ಯವಿಲ್ಲದ. ಸೂಕ್ಷ್ಮಜೀವಿಎಂದೂ ಗುರುತಿಸಬಹುದಾದ ಯಾವ ಕುರುಹೂ ಇರುವುದಿಲ್ಲ . ಆದರೂ ಅವುಗಳಲ್ಲಿಯೂ ಒಂದು ರೀತಿಯ ಲಿಂಗ ವಿಧಾನದ ಪ್ರಜನನ ನಡೆಯುತ್ತದೆ. ಅದನ್ನು ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಲ್ಲಿ ಕಾಣಬಹುದು. ಅದನ್ನು ನಿಷ್ಪತ್ತಿನಿಯೋಗ ಅಥವ ಕಾಂಜುಗೇಶನ್ ಎನ್ನುತ್ತಾರೆ. ಈ ವಿಧಾನದಲ್ಲಿ ಎರಡು ಭಿನ್ನ ಜೀವಕೋಶಗಳ ನಡುವೆ ನ್ಯೂಕ್ಲಿಯರ್ ವಸ್ತುಗಳ ವಿನಿಮಯ ನಡೆಯುತ್ತದೆ. ಹೀಗೆ ಈ ವಿನಿಮಯ ಕ್ರಿಯೆಯಲ್ಲಿ ಭಾಗವಹಿಸುವ ಕೋಶಗಳ ನಡುವೆ ಆಕಾರ ರಚನೆಯಲ್ಲಿ ಕಣ್ಣಿಗೆ ಕಾಣುವಂತೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಈ ರೀತಿಯ ಪ್ರಜನನವನ್ನು ಬ್ಯಾಕ್ಟೀರಿಯಾಗಳು ಅಲ್ಲದೆ ಪ್ಯಾರಾಮೀಸಿಯಮ್ ನಂತಹ ಪ್ರೋಟೋಜೋವ ವಂಶದ ಕಶಾಂಗಿಗಳಲ್ಲಿಯೂ ಕಾಣಬಹುದು. ಸಂಘಟಿತ ನ್ಯೂಕ್ಲೀಯಸ್ ರೂಪುಗೊಳ್ಳದಿರುವ ಬ್ಯಾಕ್ಟೀರಿಯಾಗಳಲ್ಲಿ ಎರಡು ಬ್ಯಾಕ್ಟೀರಿಯಾಗಳು ಪರಸ್ಪರ ಅಂಟಿಕೂಂಡು ಅಥವ ಲಗತ್ತಿಸಿಕೂಂಡು ತಮ್ಮ ಜೀವದ್ರದಲ್ಲಿರುವ ಡಿ.ಎನ್.ಎ ವಸ್ತುವನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸುತ್ತದೆ. ಈ ನಿಷ್ಪತ್ತಿನಿಯೋಗ ವಿಧಾನದ ಪ್ರಜನನ ಬ್ಯಾಕ್ಟೀರಿಯಾಗಳಲ್ಲಿಯೂ ನಡೆಯುವುದಿಲ್ಲ. ಸೂಕ್ಷ್ಮ ನಳಿಕಾಕಾರದ ಫೈಲಿಯ ರಚನೆಗಳನ್ನು ಉತ್ಪತ್ತಿಮಾಡಬಹುದಾದ ಪ್ರಭೇದಗಳಲ್ಲಿ ಮಾತ್ರ ಇದು ಸಂಭವಿಸುತ್ತದೆ. ತಮ್ಮ ಕೋಶದ್ರವ್ಯದಲ್ಲಿ ' ಎಫ್ ' (ಫರ್ಟಿಲಿಟಿ) ಎಂಬ ಘಟಕ ಇರುವ ಬ್ಯಾಕ್ಟೀರಿಯಾಗಳು ಮಾತ್ರ ಫೈಲಿಯ ರಚನೆಗಳನ್ನು ಉತ್ಪತ್ತಿಮಾಡಬಲ್ಲವು. ಆದ್ದರಿಂದ 'ಎಫ್ " ಘಟಕವನ್ನು ಹೊಂದಿರುವ ಬ್ಯಾಕ್ಟೀರಿಯಾಗಳನ್ನು ಎಫ್ ಧನ (ಪಾಸಿಟಿವ್) ವಿಧ ಎಂದು ಮತ್ತು ಅದು ಇಲ್ಲದಿರುವವನ್ನು 'ಎಫ್' ಋಣ (ನೆಗಟಿವ್) ವಿಧಗಳೆಂದು ವಿಂಗಡಿಸಬಹುದು. ಫೈಲಿಯೆಗಳನ್ನು ಚಾಚಬಹುದಾದವು ಮಾತ್ರ ಇನ್ನೊಂದು ಬ್ಯಾಕ್ಟೀರಿಯಾದ ಡಿ.ಎನ್.ಎ ವಸ್ತುಗಳನ್ನು ಸ್ವೀಕರಿಸ ಬಲ್ಲವು. ಇ-ಕೋಲೈ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಕೆಲವು ರೋಗಕಾರಕ ಬ್ಯಾಕ್ಟೀರಿಯಗಳು ರೋಗ ನಿರೋಧಕತೆಯನ್ನು ಬೆಳೆಸಿಕೊಳ್ಳುವುದುಂಟು. ಅವು ಕೆಲವೊಂದು ರೋಗನಿರೋಧಕಗಳನ್ನು ನಿವಾರಿಸಿಕೊಳ್ಳುವ ಪ್ರತಿಜನ್ಯಕ ಅಣುಗಳು ಅಥವ ಆಂಟಿಬಾಡೀಸ್ ಗಳನ್ನು ಉತ್ಪತ್ತಿಮಾಡಿ ರೋಗನಿವಾರಕಗಳ ಪ್ರಭಾವವನ್ನು ನಿವಾರಿಸಿಕೊಳ್ಳುತ್ತವೆ. ಈ ಬ್ಯಾಕ್ಟೀರಿಯಾಗಳಲ್ಲಿ ಈ ಗುಣಕ್ಕೆ ಕಾರಣವಾದ 'ಆರ್" ಎಂಬ ಘಟಕಗಳಿದ್ದು ಅವು ಫೈಲಿಯೆಗಳನ್ನು ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಒದಗಿಸುತ್ತವೆ ಈ ಬ್ಯಾಕ್ಟೀರಿಯಾ ಪ್ರಭೇದಗಳು ರೋಗನಿರೋಧಕಗಳ ಪ್ರಭಾವನ್ನು ನಿವಾರಿಸಿಕೊಳ್ಳುವುದರೊಂದಿಗೆ ಫೈಲಿಯೆಗಳನ್ನು ಚಾಚಿ ಇನ್ನೋಂದು ಬ್ಯಾಕ್ಟೀರಿಯಾದಿಂದ ಡಿ.ಎನ್.ಎ ಯನ್ನು ಸ್ಪೀಕರಿಸುವ ಸಾಮರ್ಥ್ಯವನ್ನು ಪಡೆಯುತ್ತವೆ ಈ ಸೂಕ್ಷ್ಮ ಜೀವಿಗಳಲ್ಲಿ ಗುರುತಿಸಬಹುದಾದ ಲಕ್ಷಣಗಳಿಲ್ಲದಿದ್ದರೂ ಅವುಗಳಲ್ಲಿ ಅವುಗಳದೇ ಆದ ಲೈಂಗಿಕ ಭಿನ್ನತೆ ಇರುವುದನ್ನು ಸೂಚಿಸುತ್ತದೆ.

ಲಿಂಗ ರೀತಿಯ ಪ್ರಜನನ ತೋರುವ ಜೀವಿಗಳಲ್ಲಿ ಎರಡು ಪ್ರಜನನ ವಿಧಾನಗಳನ್ನು ಗುರುತಿಸಬಹುದು. ಒಂದು ಜೀವಿ ಎರಡು ವಿಧದ ಲಿಂಗಾಣುಗಳನ್ನು ಉತ್ಪಾದಿಸುವುದು. ಇದನ್ನು ಮೊನೀಸಿಯಸ್ ವಿಧಾನ ಎನ್ನುತ್ತಾರೆ. ಎರಡು ವಿಧವಾದ , ಅಂದರೆ ಹೆಣ್ಣು ಮತ್ತು ಗಂಡು ಲಿಂಗಾಣುಗಳನ್ನು ಉತ್ಪಾದಿಸಿದರೂ ಹಾಗು ಅವುಗಳನ್ನು ಉತ್ಪಾದಿಸಲು ಅನುವಾದ ಪ್ರತ್ಯೇಕ ಅಂಗಗಳಿದ್ದರೂ, ಅಂದರೆ ಪುರುಷಾಣುಗಳನ್ನು ಉತ್ಪಾದಿಸುವ ವೃಷಣಗಳು (ಟಿಸ್ಟಿಸ್) ಮತ್ತು ಅಂಡಾಣುಗಳನ್ನು ಉತ್ಪಾದಿಸುವ ಅಂಡಾಶಯಗಳಿದ್ದರೂ (ಓವರಿ) ಅವೆರಡು ಅಂಗಗಳು ಒಂದೇ ಪ್ರಾಣಿಯಲ್ಲಿದ್ದರೆ ಅವುಗಳನ್ನು ಹರ್ಮಫ್ರೊಡೈಟ್ ಗಳೆಂದು ಕರೆಯುತ್ತಾರೆ. ಉದಾ: ಎರೆಹುಳು . ಈ ಪ್ರಾಣಿಗಳಲ್ಲಿಯೂ ಒಂದು ಪ್ರಾಣಿಯ ವೃಷಣದಲ್ಲಿ ಉತ್ಪತ್ತಿಯಾದ ಪುರುಷಾಣುಗಳು ಅದೇ ಪ್ರಾಣಿಯ ಅಂಡಾಶಯದಲ್ಲಿ ಉತ್ಪತ್ತಿಯಾಗುವ ಅಂಡಾಣುಗಳೊಂದಿಗೆ ನಿಷೇಚನೆಗೊಳ್ಳಬಹುದು. ಇದನ್ನು ಸ್ವನಿಷೇಚನ ಎನ್ನುತ್ತಾರೆ. ಒಂದು ಪ್ರಾಣಿಯಲ್ಲಿ ಉತ್ಪತ್ತಿಯಾದ ಪುರುಷಾಣುಗಳು ಅದೇ ಪ್ರಭೇದದ ಇನ್ನೊಂದು ಪ್ರಾಣಿಯ ಅಂಡಾಣುವಿನೊಂದಿಗೆ ನಿಷೇಚಿಸುವುದನ್ನು ಅಂತರನಿಷೇಚನ (ಕ್ರಾಸ್ ಫರ್ಟಿಲೈಜೆಷನ್) ಎನ್ನುತ್ತಾರೆ. ಇದೇ ರೀತಿ ಸಸ್ಯಗಳಲ್ಲಿಯೂ ಸ್ಪಪರಾಗಾರ್ಪಣೆ ಮತ್ತು ಅಂತರಪರಾಗಾರ್ಪಣೆ ವಿಧಾನಗಳಿವೆ.

ಜೀವವಿಕಾಸದ ಮುಂದುವರಿಕೆಯ ದೃಷ್ಟಿಯಿಂದ ಅಂತರ ನಿಷೇಚನೆ ಉತ್ತಮ ಕೊಡುಗೆಯಾಗಿದೆ. ಇದರಿಂದಾಗುವ ಉಪಯೋಗ ಎಂದರೆ ಎರಡು ಭಿನ್ನ ರೀತಿಯ ಲಕ್ಷಣಗಳನ್ನು ಹೊಂದಿದ ಜೀವಿಗಳ ಸಂಯೋಜನೆ. ಇದರಿಂದ ಹೊಸ ಪರಿಸರ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದುಕಲು ಸಂತಾನಕ್ಕೆ ಅವಕಾಶವಿರುತ್ತದೆ ಮತ್ತು ಯಶಸ್ಪಿಯಾಗಿ ಜೀವಿಸಲು ಅನುಕೂಲ ಒದಗಿಸುತ್ತದೆ. ಜಲಚರಗಳಿಗೆ ಅವುಗಳು ವಾಸಿಸುವ ಮಾಧ್ಯಮ ಪ್ರಜನನಕ್ಕೆ ಅನುಕೂಲವನ್ನು ಒದಗಿಸುತ್ತದೆ. ಅವು ತಮ್ಮ ಪ್ರಜನನವನ್ನು ತುಂಬಾ ಸರಳ ರೀತಿಯಲ್ಲಿ ನಡೆಸುತ್ತವೆ. ಅವುಗಳಲ್ಲಿ ಲಿಂಗಾಂಗಳಿದ್ದು (ಗೋನ್ಯಾಡ್) ಲಿಂಗಾಣುಗಳನ್ನು ಉತ್ಪಾದಿಸುತ್ತವೆ. ಇಲ್ಲಿ ಉತ್ಪಾದನೆಯಾದ ಲಿಂಗಾಣುಗಳನ್ನು ನೇರವಾಗಿ ಸುತ್ತಲ ಜಲ ಮಾಧ್ಯಮಕ್ಕೆ ವಿಸರ್ಜಿಸುತ್ತವೆ. ಲಿಂಗಾಣುಗಳಿಗೆ ಜಲ ಮಾಧ್ಯಮ, ಚಲಿಸಲು ಅನುಕೂಲ, ಹವಾಮಾನದ ವ್ಯತ್ಯಾಸಗಳಿಂದ ರಕ್ಷಣೆ ವತ್ತು ಬೆಳೆಯುವ ಮರಿಗೆ ಆಹಾರವನ್ನು ಒದಗಿಸುತ್ತದೆ. ಹೀಗಾಗಿ ಜಲಚರಿಗಳು ಈ ಅನುಕೂಲಗಳನ್ನು ಉಪಯೋಗಿಸಿಕೊಂಡು ಹೆಚ್ಚು ಜಟಿಲತೆಗೆ ಅವಕಾಶ ನೀಡದೆ ಇವು ಸುಲಭ ವಿಧಾನವನ್ನು ಅನುಸರಿಸುತ್ತವೆ. ಲಿಂಗಾಣುಗಳು ನೀರಿನಲ್ಲಿ ತೇಲಿಯೊ ಅಥವ ಈಜಿ ಪರಸ್ಪರರನ್ನು ಸಂದಿಸಿ ನಿಷೇಚನೆಗೊಳ್ಳುತ್ತವೆ. ಅನಂತರ ಉತ್ಪತ್ತಿಯಾಗುವ ಬೀಜಾಣು ಒಂದು ರಕ್ಷಾ ಕವಚವನ್ನು ಹೊಂದಿದ್ದು ಅದು ತತ್ತಿಯಾಗುತ್ತದೆ. ಸ್ವತಂತ್ರವಾಗಿ ಬದುಕುವ ಹಂತವನ್ನು ತಲುಪುವವರೆಗೆ ತತ್ತಿಯ ಹೊದಿಕೆಯೊಳಗೆ ಬೆಳೆದು ಅನಂತರ ಹೊದಿಗೆಯನ್ನು ಒಡೆದು ಹೊರಬರುವ ಲಾರ್ವ ಸ್ವತಂತ್ರವಾಗಿ ಜೀವಿಸುತ್ತದೆ. ನಿಧಾನವಾಗಿ ರೊಪಪರಿವರ್ತನೆಗೊಂಡು ಪ್ರಬುದ್ದ ಜೀವಿಯಾಗಿ ಬೆಳೆಯುತ್ತದೆ. ಪ್ರಜನನ ಅತಿ ಸರಳ ಎಂದು ತೋರಿದರೂ ತತ್ತಿಯ ರಕ್ಷಾ ಹೊದಿಕೆಯೊಳಗೆ ಬೆಳೆಯುವ ಅವಸ್ಥೆಯಲ್ಲಿ ಭ್ರೂಣ ತನ್ನ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಆಹಾರವನ್ನು ತತ್ತಿಯಲ್ಲಿ ತಾಯಿ ಪ್ರಾಣಿ ಕೂಡಿಟ್ಟಿರುವ ಆಹಾರವನ್ನು ಬಳಸಿಕೊಂಡು ಬೆಲೆಯುತ್ತದೆ. ಈ ವಿಧಾನದಲ್ಲಿ ಪಿತೃ ಪ್ರಾಣಿ ಈ ಸಮಸ್ಯೆಯನ್ನು ಹೆಣ್ಣು ಲಿಂಗಾಣು, ಅಂಡಾಣುವಿನಲ್ಲಿ ಸ್ವಲ್ಪ ಶಕ್ತಿ ಮೂಲ ಆಹಾರವನ್ನು ಒದಗಿಸಿ ಪೂರೈಸುತ್ತದೆ. ಅದರಲ್ಲಿ ಕೂಡಿಟ್ಟಿರುವ ಆಹಾರದಿಂದಾಗಿ ಅಂಡಾಣು ಗಾತ್ರದಲ್ಲಿ ದೊಡ್ಡದಾಗಿದ್ದು ಮತ್ತು ಹೆಚ್ಚು ಭಾರವಾಗಿ ಸುಲಭವಾಗಿ ಚಲಿಸಲಾರದು. ಆದ್ದರಿಂದ ಯಾವ ಶಕ್ತಿ ಮೂಲ ಆಹಾರವನ್ನು ಹೊಂದಿಲ್ಲದೆ ಸಾಪೇಕ್ಷೀಯವಾಗಿ ಸಣ್ಣದಾದ ಮತ್ತು ಹಗುರಾದ ಪುರುಷಾಣು ಚಲಿಸಿ ಅಂಡಾಣುವನ್ನು ತಲುಪುವ ಕರ್ತವ್ಯ ನಿರ್ವಹಣೆಯನ್ನು ವಹಿಸಿಕೊಟ್ಟಿದೆ. ಇದಕ್ಕೆ ಅನುಕೂಲವಾಗುವಂತೆ ಪುರುಷಾಣುವಿಗೆ ಬಾಲ ಅಥವ ಕಶಾಂಗವಿದ್ದು ಅದರ ನೆರವಿನಿಂದ ನೀರಿನಲ್ಲಿ ಅಥವ ದ್ರವ ಮಾಧ್ಯಮದಲ್ಲಿ ಈಜಿ ಚಲಿಸಬಲ್ಲದಾಗಿದೆ. ಚಲಿಸುವ ಪುರುಷಾಣುವಿಗೆ ಮಾರ್ಗದರ್ಶನ ನೀಡಲು, ತಾನಿರುವ ತಾಣವನ್ನು ತೋರಲು ಅಂಡಾಣು ಒಂದು ರೀತಿಯ ರಸಾಯನಿಕ ವಸ್ತುವನ್ನು ಸ್ರವಿಸುತ್ತದೆ. ಇಲ್ಲಿ ನಿಷೇಚನೆ ಪಿತೃ ದೇಹದ ಹೊರಗೆ ನಡೆಯುತ್ತದೆ. ಇದನ್ನು ಬಹಿರ್-ನಿಷೇಚನ (ಎಕ್ಸ್-ಟರ್ನಲ್ ಫರ್ಟಿಲೈಜೆಷನ್) ಎಂದು ಕರೆಯುತ್ತಾರೆ.

ಏಕಕೋಶ ಜೀವಿಗಳಾದ ಅಮೀಬ, ಯುಗ್ಲೀನ ಮತ್ತು ಪ್ಯಾರಮೀಸಿಯಮ್ ಪ್ರಾಣಿಗಳು ಸಿಹಿನೀರಿನಲ್ಲಿ ವಾಸಿಸುತ್ತವೆ. ಅವುಗಳ ಸಂತಾನೋತ್ಪತ್ತಿ ವಿಧಾನ ವಿಶೇಷರೀರಿಯದು. ಇವುಗಳು ಜೀವನದಲ್ಲಿ ಒಂದು ಅವಸ್ಥೆಯನ್ನು ತಲುಪಿದಾಗ ಅವುಗಳ ದೇಹ ಸೀಳಿ ಎರಡು ಮರಿಗಳ ಉತ್ಪತ್ತಿಯಾಗುತ್ತದೆ. ಈ ಮರಿಗಳು ಬೆಳೆದು ಸ್ವಾಭಾವಿಕ ಜೀವಿಗಳಾಗಿ ಮುಂದುವರಿಯುತ್ತದೆ. ಈ ವಿಧಾನದ ಪ್ರಜನನದಲ್ಲಿ ಪಿತೃ ಪ್ರಾಣಿ ಮರಣಿಸುವುದಿಲ್ಲ , ತನ್ನಿಂದ ಉತ್ಪತ್ತಿಯಾದ ಮರಿಗಳ ಮೂಲಕ ಮುಂದುವರಿಯುತ್ತದೆ. ಇದನ್ನು ಬೈನರಿ ಫಿಷನ್/ದ್ವಿಖಂಡನ ಎನ್ನುತ್ತಾರೆ. ಅಮೀಬ ಪ್ರಾಣಿಯಲ್ಲಿ ನಿರ್ದಿಷ್ಟ ಆಕಾರದ ದೇಹವಿಲ್ಲದಿರುವುದರಿಂದ ಅದು ಯಾವ ಕೋನದಲ್ಲಿಯಾದರೂ ಸೀಳಬಹುದು. ಆದರೆ ನಿರ್ದಿಷ್ಟ ಆಕಾರವಿರುವ ಯುಗ್ಲೀನದಲ್ಲಿ ಅದರ ಲಂಬ ಅಕ್ಷದಲ್ಲಿ ಆಂದರೆ ಉದ್ದುದ್ದವಾಗಿ ಸೀಳುತ್ತದೆ. ಅದೇ ಪ್ಯಾರಮೀಸಿಯಮ್ ನಲ್ಲಿ ಅಡ್ಡಡ್ಡನಾಗಿ ಸೀಳುತ್ತದೆ.


ಪ್ರಾರಮೀಸಿಯಮ್

ಪ್ರಾರಮೀಸಿಯಮ್ ನಲ್ಲಿ ದ್ವಿಖಂಡನ ರೀತಿಯ ನಿರ್ಲಿಂಗ ವಿಧಾನದ ಪ್ರಜನನ ಜೊತೆಗೆ ಒಂದು ರೀತಿಯ ಲಿಂಗ ರೀತಿಯ ಪ್ರಜನನವೂ ನದೆಯುತ್ತದೆ. ಆ ಸಂದರ್ಭದಲ್ಲಿ ಅದು ಲಿಂಗಾಣುಗಳನ್ನು ಉತ್ಪತ್ತಿಮಾಡುವುದಿಲ್ಲ. ಪ್ಯಾರಮೀಸಿಯಮ್ ಪ್ರಾಣಿಯಲ್ಲಿ ಎರಡು ನ್ಯೂಕ್ಲಿಯಸ್ ಗಳಿವೆ. ಅವು ಆಕಾರ ಮತ್ತು ನಿರ್ವಹಿಸುವ ಕ್ರಿಯೆಗಳಲ್ಲಿ ವ್ಯತ್ಯಾಸ ತೋರುತ್ತವೆ. ಗಾತ್ರದಲ್ಲಿ ದೊಡ್ಡದಾದ ಮ್ಯಾಕ್ರೊನ್ಯೂಕ್ಲಿಯಸ್ ಪ್ರಾಣಿಯ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಗಾತ್ರದಲ್ಲಿ ಸಣ್ಣದಾದ ಮೈಕ್ರೊಸ್ಯೂಕ್ಲಿಯಸ್ ಸಂಪೂರ್ಣ ಪ್ರಜನನಕ್ಕೆ ಮೀಸಲಾದುದು. ಪ್ಯಾರಮೀಸಿಯಮ್ ನ ಲಿಂಗ ರೀತಿಯಪ್ರಜನನವನ್ನು ಕಾಂಜುಗೇಶನ್ ಎಂದು ಕರೆಯುತ್ತಾರೆ. ಜೀವನ ಸಾಗಿ ಒಂದು ಹಂತ ತಲುಪಿದಾಗ ತನ್ನ ಶಕ್ತಿ ಸಾಮರ್ಥ್ಯಗಳನ್ನು ಪುನರ್ನವೀಕರಿಸಿಕೊಳ್ಳಲು ಕಾಂಜುದೇಶನ್ ನ ಮೊರಿಹೋಗುತ್ತದೆ. ಹಲವಾರು ದ್ವಿಖಂಡನಗಳ ನಂತರ ಅದು ಕಾಂಜುಗೆಂಟ್ ಗಳೆಂಬ ವಿಶೇಷ ಪೀಳಿಗೆಯ ಮರಿಗಳನ್ನು ಉತ್ಪತ್ತಿ ಮಾಡುತ್ತದೆ. ಇವು ಕಾಂಜುಕೇಶನ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಅವುಗಳನ್ನು ಕಾಂಜುಗೆಂಟ್ ಗಳೆಂದು ಕರೆಯುತ್ತಾರೆ. ಎರಡು ಕಾಂಜುಗೆಂಟ್ ಗಳು ಹತ್ತಿರ ಬಂದು ತಮ್ಮ ಬಾಯಿ ಇರುವ ಭಾಗದಲ್ಲಿ ಪರಸ್ವರ ಅಂಟಿಕೊಳ್ಳುತ್ತವೆ. ಈಗ ಅವುಗಳು ಮ್ಯಾಕ್ರೊನ್ಯೂಕ್ಲಿಯಸ್ ಗಳು ಛಿದ್ರಗೊಂಡು ಕಣ್ಮರೆಯಾಗುತ್ತವೆ. ಮೈಕ್ರೊನ್ಯೂಕ್ಲಿಯಸ್ ಗಳು ಮಿಯಾಸಿಸ್ ವಿಧಾನದಲ್ಲಿ ವಿಭಜನೆಗೊಂಡು ಪ್ರತಿ ಕಾಂಜುಗೆಂಟ್ ನಲ್ಲಿಯೂ ನಾಲ್ಕು ನಾಲ್ಕು ಹ್ಯಾಪ್ಲಾಯಿಡ್ (ಅಂದರೆ ಜೋಡಿ ಕ್ರೋಮೊಸೋಮುಗಳಿದ್ದರೆ ಡಿಪ್ಲಾಯಿಡ್ ಎಂತಲೂ ಜೋಡಿಗಳು ಒಡೆದು ಒಂದೊಂದು ಸದೃಷ ಕ್ರೋಮೊಸೋಮುಗಳಿರುವುದನ್ನು ಹ್ಯಾಪ್ಲಾಯಿಡ್ ಎಂದು ಕರೆಯುತ್ತಾರೆ) ಮೈಕ್ರೊನ್ಯೂಕ್ಲಿಯಸ್ ಗಳೆಂದು ಕರೆಯುತ್ತಾರೆ. ಪ್ರತಿ ಕಾಂಜುಗೆಂಟ್ ನಲ್ಲಿಯೂ ಎರಡೆರಡು ಹ್ಯಾಪ್ಲಾಯಿಡ್ ನ್ಯೂಕ್ಲಿಯಸ್ ಗಳು ಕಣ್ಮರೆಯಾಗಿ ಎರಡೆರಡು ಹ್ಯಾಪ್ಲಾಯಿಡ್ ಮೈಕ್ರೊನ್ಯೂಕ್ಲಿಯಾಸ್ ಗಳು ಉಳಿಯುತ್ತವೆ. ಈಗ ಒಂದು ಕಾಂಜುಗೆಂಟ್ ನಿಂದ ಒಂದು ಹ್ಯಾಪ್ಲಾಯಿಡ್ ಮೈಕ್ರೊನ್ಯೂಕ್ಲಿಯಸ್ ಇನ್ನೊಂದಕ್ಕೆ ಚಲಿಸಿ, ಇದೇ ರೀತಿ ಆದರಿಂದಲೂ ಒಂದು ಹ್ಯಾಪ್ಲಾಯಿಡ್ ಮೈಕ್ರೊನ್ಯೂಕ್ಲಿಯಸ್ ಮತ್ತೊಂದಕ್ಕೆ ಚಲಿಸಿ ವಿನಿಮಯ ನಡೆಯುತ್ತದೆ. ಇದರನಂತರ ಎರಡೂ ಕಾಂಜುಗೆಂಟ್ ಗಳು ಬೇರ್ಪಟ್ಟು ತಮ್ಮ ಜೀವನ ಮುಂದುವರಿಸುತ್ತವೆ. ಹೀಗೆ ಬೇರ್ಪಟ್ಟ ಕಾಂಜುಗೆಂಟ್ ಗಳನ್ನು ಎಕ್ಸ್ ಕಾಂಜುಗೆಂಟ್ ಗಳೆಂದು ಕರೆಯುತ್ತಾರೆ. ಇಲ್ಲಿ ನಡೆಯುವ ಪ್ರಜನನ ಕ್ರಿಯೆಯಲ್ಲಿ ಗ್ಯಾಮೇಟ್ ಗಳೆಂದು ಪರಿಗನಿಸಬಹುದಾದ ಕಾಂಜುಗೆಂಟ್ ಗಳು ಕೂಡುವುದಿಲ್ಲ. ಬೇರ್ಪಟ್ಟ ಎಕ್ಸ ಕಾಂಜುಗೆಂಟ್ ಗಳಲ್ಲಿ ಹೊಸದಾಗಿ ಮ್ಯಾಕ್ರೊನ್ಯೂಕ್ಲಿಯಸ್ ಗಳು ಕಾಣಿಸಿಕೊಂಡು ಜೀವನ ಪುನರ್ನವೀಕರಿಸಿಕೊಂಡು ಹೆಚ್ಚು ಸಮರ್ಥ ಜೀವನ ನಡೆಸಲು ಸಜ್ಜಾಗುತ್ತವೆ.

ಈ ರೀತಿಯ ಪ್ರಕೃತಿಯೇ ಎರಡು ರೀತಿಯ ಲಿಂಗಾಣುಗಳ ರಚನೆಯಲ್ಲಿ ಬದಲಾವಣೆಗಳನ್ನು ಅಳವಡಿಸಿ ಯಶಸ್ವೀ ಪ್ರಜನನಕ್ಕೆ ಅನುಕೂಲ ಮಾಡಿಕೊಟ್ಟಿದೆ. ಜೀವವಿಕಾಸದಲ್ಲಿ ಕಾಲಕ್ರಮದಲ್ಲಿ ನೀರಿನಲ್ಲಿ ಜೀವಿಸುತ್ತಿದ್ದ ಜೀವಿಗಳು (ಮೀನುಗಳು, ಉಭಯಚರಿಗಳು) ನೆಲದಮೇಲಕ್ಕೆ ವಲಸೆ ಬಂದು ಜೀವಿಸಲು ಪ್ರಯತ್ನಿಸಿದಾಗ ತಮ್ಮ ದೇಹ ರಚನೆಯೊಂದೇ ಅಲ್ಲ ತಮ್ಮ ಪ್ರಜನನ ವಿಧಾನವನ್ನೂ ಮಾರ್ಪಡಿಸಿಕೊಳ್ಳಬೇಕಾಯಿತು. ನೀರಿನಲ್ಲಿನಂತೆ ಲಿಂಗಾಣುಗಳನ್ನು ಪಿತೃ ದೇಹದಿಂದ ಹೊರಕ್ಕೆ ವಿಸರ್ಜಿಸುವಂತಿರಲಿಲ್ಲ. ನೆಲದ ಮೇಲಿನ ಪರಿಸರ ಲಿಂಕಾಣುಗಳ ಚಟುವಟಿಕೆಗಳಿಗೆ ಪೂರಕವಾಗಿರುವುದಿಲ್ಲ. ಅನುವಾದ ಸಮಯದಲ್ಲಿ ಗಂಡು ಪ್ರಾಣಿಯಿಂದ ಪುರುಷಾಣುಗಳನ್ನು ಹೆಣ್ಣು ಪ್ರಾಣಿಯ ದೇಹಕ್ಕೆ ವರ್ಗಾಯಿಸಬೇಕಾಗುತ್ತದೆ. ಹೆಣ್ಣು ಪ್ರಾಣಿಯ ದೇಹದಲ್ಲಿ ಹೀಗೆ ಗಂಡು ಪ್ರಾಣಿಯಿಂದ ವರ್ಗಾಯಿಸಲ್ಪಟ್ಟ ಪುರುಷಾಣುಗಳನ್ನು ಸ್ವೀಕರಿಸಿ ನಿಷೇಚನೆ ನಡೆಯುವ ಸ್ತಳಕ್ಕೆ ಕೊಂಡೊಯ್ಯಬೇಕಾಗುತ್ತದೆ. ಅನಂತರ ನಿಷೇಚಿತ ಬೀಜಾಣುವನ್ನು ಅರ್ಥಾತ್ ತತ್ತಿಯನ್ನು ಹೊರಗೆ ನಿಕ್ಷೇಪಿಸುವುದು ಅಥವ ಪಿತೃ ದೇಹದಲ್ಲಿಯೆ ಉಳಿಸಿಕೊಂಡು ಬೆಳವಣಿಗೆಗೆ ಅನುಕೂಲ ಏರ್ಪಡಿಸಬೇಕಾಗುತ್ತದೆ. ಇದಕ್ಕಾಗಿಎರದೂ ಲಿಂಗದ ಪ್ರಾಣಿಗಳಲ್ಲಿ ಲಿಂಗಾಣುಗಳನ್ನು ಉತ್ಪಾದಿಸುವ ಲಿಂಗಾಂಗಗಳ ಜೊತೆಗೆ ಉಳಿದ ಕ್ರಿಯೆಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಸಹಾಯಕವಾದ ಅನುಷಂಗಿಕ (ಅಕ್ಸೆಸರಿ) ಲಿಂಗಾಂಗಗಳನ್ನು ಬೆಳೆಸಿಕೊಂಡವು. ಹೀಗೆ ಪಿತೃ ದೇಹದ ಒಳಗೆ ನಡೆಯುವ ಪ್ರಜನನ ಪ್ರಕ್ರಿಯೆಯನ್ನು ಅಂತರನಿಷೇಚನ (ಇಂಟರ್ನಲ್ ಫರ್ಟಿಲೈಜೆಷನ್ ) ಎಂದು ಕರೆಯುತ್ತಾರೆ. ತತ್ತಿಗಳನ್ನು ಪಿತೃ ದೇಹದ ಹೊರಗೆ ನಿಕ್ಷೇಪಿಸುವ ಪ್ರಾಣಿಗಳನ್ನು ಅಂಡಜಗಳೆಂದು (ಓವಿಪ್ಯಾರಿಸ್) ಮತ್ತು ಪಿತೃ ದೇಹದ ಒಳಗೆ ಉಳಿಸಿಕೊಂಡು ಬೆಳವಣಿಗೆ ನಡೆಸುವ ಪ್ರಾಣಿಗಳನ್ನು ಜರಾಯುಜಿಗಳೆಂದು (ವೈವಿಪ್ಯಾರಸ್) ಕರೆಯುತ್ತಾರೆ.

ಕೆಲವು ಪ್ರಾಣಿಗಳು ಕಡಲಿನಲ್ಲಿ ಜೀವಿಸುವ ಶಾರ್ಕ್ ಮೀನುಗಳು ಆಹಾರ ಮತ್ತು ರಕ್ಷಾಕವಚ ಹೊಂದಿದ ತತ್ತಿಗಳನ್ನು ಉತ್ಪತ್ತಿಮಾಡುತ್ತವೆ. ಆದರೆ ಇದನ್ನು ತಾಯಿಪ್ರಾಣಿ ತನ್ನ ದೇಹದಿಂದ ಹೊರಕ್ಕೆ ನಿಕ್ಷೇಪಿಸದೆ ತನ್ನ ದೇಹದಲ್ಲಿಯೆ ಅಂಡವಾಹಿನಿಯ ವಿಶೇಷ ಭಾಗದಲ್ಲಿ ಅದನ್ನು ಗರ್ಭಕೋಶ ಎನ್ನುತ್ತಾರೆ, ಉಳಿಸಿಕೊಂಡು ಬೆಳೆಯಲು ಅನುವುಮಾಡಿಕೊಡುತ್ತವೆ. ಇದೇ ರೀತಿ ಕೆಲವು ಕಪ್ಪೆ ಜಾತಿಗಳಲ್ಲಿ ದೇಹದ ಬೆನ್ನಿನಭಾಗದಲ್ಲಿ ಮೆದು ರಚನೆ ರಚಿಸಿಕೊಂಡು ಮೊಟ್ಟೆಗಳು ಬೆಳೆದು ಗೊದಮೊಟ್ಟೆಗಳು ಹೊರಬರುವವರೆಗೆ ಹೊತ್ತು ತಿರುಗಿ ಕಾಪಾಡುತ್ತವೆ. ಕೆಲವೊಂದು ಕಪ್ಪೆಗಳು ಮೊಟ್ಟೆಗಳನ್ನು ಬೆಳೆದು ಗೊದಮೊಟ್ಟೆಯಾಗುವವರೆಗೆ ಬಾಯಿಯಲ್ಲಿ ಇಟ್ಟುಕೊಂಡು ತಿರುಗುತ್ತವೆ. ಈ ವಿಧಾನದ ಪ್ರಜನನವನ್ನು ಅಂಡಜರಾಯುಜಿ (ಓವೊವೈವಿಪ್ಯಾರಸ್)ಎಂದು ಕರೆದಿದ್ದಾರೆ.

ಏಕಕೋಶ ಜೀವಿಗಳಿಂದ ವಿಕಾಸ ವೃಕ್ಷದಲ್ಲಿ ತುಸು ಮೇಲೆ ಬಂದರೆ ಬಹುಕೋಶ ಜೀವಿಗಳಲ್ಲಿ ಜೀವಕೋಶಗಳು ಎರಡು ಪದರಗಳಾಗಿ ವ್ಯವಸ್ಥೆಗೊಂಡಿರುವ ಸೀಲೆಂತರೇಟ, ವಂಶವಿದೆ. ಈ ವಂಶ ಅಂಬಲಿ ಮೀನುಗಳು, ಕಡಲತಾವರೆ, ಮತ್ತು ಹವಳಹುಳುಗಳನ್ನೊಳಗೊಳ್ಳುತ್ತದೆ. ಈ ವಂಶಕ್ಕೆ ಸೇರುವ ಬಹುಪಾಲು ಪ್ರಾಣಿಗಳು ಕಡಲ ವಾಸಿಗಳು. ಆದರೆ ಹೈಡ್ರ ಎಂಬೊಂದು ಪ್ರಾಣಿ ಸಿಹಿನೀರಿನ ಕೆರೆಕೊಳಗಳಲ್ಲಿ ವಾಸಿಸುತ್ತದೆ. ಹೈಡ್ರ ಸಿಹಿನೀರಿನ ಕೆರೆ ಕೊಳಗಳಲ್ಲಿ ಮುಳುಗಿರುವ ಗಿಡ ಗೆಂಟೆ, ಕಲ್ಲು ಮುಂತಾದವುಗಳಿಗೆ ಅಂಟಿಕೊಂಡು ಜೀವಿಸುತ್ತದೆ. ದೇಹ ಕೊಳವೆಯಾಕಾರದಲ್ಲಿದ್ದು ಬಿಡಿ ತುದಿಯಲ್ಲಿ ಬಾಯಿ ಎನ್ನಬಹುದಾದ ರಂಧ್ರವಿದೆ, ಅದನ್ನು ಸುತ್ತುವರಿದಂತೆ ಆರರಿಂದ ಎಂಟು ಕರಬಳ್ಳಿಗಳಿರುತ್ತವೆ (ಟೆಂಟಕಲ್ಸ್ ). ಈ ಪ್ರಾಣಿ ನಿರ್ಲಿಂಗ ಮತ್ತು ಲಿಂಗ ರೀತಿಯ ಪ್ರಜನನಗಳೆರೆಡೂ ವಿಧಾನವಾಗಿ ಸಂತಾನೋತ್ಪತ್ತಿ ನಡೆಸುತ್ತದೆ. ದೇಹದ ಮೇಲೆ ಮೊಗ್ಗಿನಾಕಾರದ ಉಬ್ಬು ಕಾಣಿಸಿಕೊಂಡು ಕ್ರಮೇಣ ಅದರ ಬಿಡಿ ತುದಿಯಲ್ಲಿ ಬಾಯಿ ಮತ್ತು ಕರಬಳ್ಳಿಗಳು ಬೆಳೆದು ಪೂರ್ಣವಾದ ಮೇಲೆ ಪಿತೃಪ್ರಾಣಿಯಿಂದ ಕಳಚಿಕೊಂಡು ಹೋಗಿ ಸ್ವತಂತ್ರ ಜೀವನ ನಡೆಸುತ್ತದೆ. ಇದನ್ನು ಅಂಕುರಣ ವಿಧಾನ ಎನ್ನುತ್ತಾರೆ. ಈ ಪ್ರಾಣಿಯಲ್ಲಿ ವುನರುತ್ಪಾದನೆಯೂ ಉಂಟು ಇದೂ ಒಂದು ವಿಧದಲ್ಲಿ ನಿರ್ಲಿಂಗ ರೀತಿಯ ಪ್ರಜನನವಾಗುತ್ತದೆ.

ವಿಕಾಸದಲ್ಲಿ ಮುಂದುವರೆದ ಕಶೇರುಕಗಳ ಪುರುಷಾಣುವಿನ ಚಿತ್ರ

ಲಿಂಗರೀತಿಯ ಪ್ರಜನನ ದೇಹದ ಮೇಲೆ ಲೀಗಾಂಗಗಳು ಉಬ್ಬುಗಳ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಕಾಣಿಸಿಕೊಳ್ಳುವ ದೇಹ ಭಾಗ ಮತ್ತು ಆಕಾರದಿಂದ ಇವುಗಳನ್ನು ಗಂಡು ಅಥವ ಹೆಣ್ಣು ಲಿಂಗಾಂಗಗಳೆಂದು ಗುರುತಿಸಬಹುದು. ಬಿಡಿಯಭಾಗದ ಕಡೆಗೆ ಶಂಖುವಿನಾಕಾರದವು ವೃಷಣಗಳು (ಟಿಸ್ಟಿಸ್)ಮತ್ತು ಬುಡಕ್ಕೆ ಅಂಟಿಕೊಂಡಿರುವ ಕಡೆಗೆ ಬೆಳೆಯುವ ದುಂಡು ಉಬ್ಬುಗಳು ಅಂಡಾಶಯಗಳು. ವೃಷಣಗಳಲ್ಲಿ ಅಂತರಾಲೀಯ (ಇಂಟರ್ ಸ್ವಿಟಿಯಲ್) ಜೀವಕೋಶಗಳು ಪ್ರವೇಶಿಸಿ ವಿಭಜನೆಗೊಂಡು ಸಂಖೆಯಲ್ಲಿ ವೃದ್ದಿಯಾಗಿ, ಒಂದು ಹಂತದಲ್ಲಿ ಮಿಯಾಸಿಸ್ ವಿಧಾನದಲ್ಲಿ ವಿಭಜನೆಗೊಂಡು ಅರ್ಧ ಸಂಖ್ಯೆಯ ಕ್ರೋಮೊಸೋಮುಗಳಿರುವ ಪುರುಷಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಇವು ಬಲಿತು ಪಕ್ವವಾದ ಮೇಲೆ ಉಬ್ಬಿನ (ವೃಷಣದ) ತುದಿಯಲ್ಲಿ ಸಣ್ಣ ರಂಧ್ರ ಕಾಣಿಸಿಕೊಂಡು ಅದರ ಮೂಲಕ ಪುರುಷಾಣುಗಳು ಈಜಿಕೊಂಡು ಪಕ್ವವಾದ ಅಂಡಾಣುವಿನ ಅನ್ವೇಷಣೆಗೆ ತೊಡಗುತ್ತವೆ.

ಓವರಿ

ಅಂಡಾಶಯದಲ್ಲಿ ಒಂದು ಜೀವಕೋಶ ಅಂಡಾಣುವಾಗಿ ನಿರ್ಧಾರಗೊಂಡು ಅದರ ಸುತ್ತ ಇತರ ಜೀವಕೋಶಗಳು ಅಂಡಾಣುವನ್ನು ರಕ್ಷಿಸುವ ಮತ್ತು ಪೋಷಿಸುವ ದಾದಿಗಳಾಗಿ ವರ್ತಿಸುತ್ತವೆ. ಅಂಡಾಣು ಪಕ್ವವಾದ ಮೇಲೆ ಅದು ಒಂದು ರೀತಿಯ ರಸಾಯನಿಕವನ್ನು ಉತ್ಪತ್ತಿಮಾಡುತ್ತದೆ ಮತ್ತು ಬಿಡಿ ತುದಿಯಲ್ಲಿ ಒಂದು ಸೂಕ್ಷ್ಮ ರಂಧ್ರವು ನಿರ್ಮಾಣವಾಗುತ್ತದೆ. ಇದು ಉತ್ಪತ್ತಿ ಮಾಡಿ ಹೊರ ಸೂಸುವ ರಸಾಯನದಿಂದ ಆಕರ್ಷಿತಗೊಂಡು ಪುರುಷಾಣುಗಳು ಅಂಡಾಣುವನ್ನು ಸಮೀಪಿಸಿ ಒಂದು ಅದರೊಡನೆ ಕೂಡಿ ನಿಷೇಚನೆಯನ್ನು ಪೂರ್ಣಗೊಳಿಸುತ್ತದೆ. ಇದು ಒಂದು ವಿಧಾನದಲ್ಲಿ ಅಂತರನಿಷೇಚನೆಯಾದರೂ ಪುರುಷಾಣುಗಳನ್ನು ಸುತ್ತಲ ನೀರಿಗೆ ವಿಸರ್ಜಿಸಿ ಸ್ವಲ್ವಕಾಲ ನೀರಿನಲ್ಲಿರುವ ಅವಕಾಶವನ್ನು ಒದಗಿಸುತ್ತದೆ.ಮುಂದುವರಿದ ಕಶೇರುಕಗಳೆನ್ನುವ ಮೀನುಗಳು ಮತ್ತು ಕಪ್ಪೆಗಳಲ್ಲಿ ಪುರುಷಾಣುಗಳು ಮತ್ತು ಅಂಡಾಣುಗಳೆರಡನ್ನೂ ನೀರಿಗೆ ವಿಸರ್ಜಿಸಿ ಪಿತೃ ಪ್ರಾಣಿಗಳು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತವೆ. ನೀರಿನಲ್ಲಿಯೇ ಅವು ಚಲ್ಲಿಸಿ ಸಂಧಿಸಿ ನಿಷೇಚನೆಗೋಳ್ಳುತ್ತವೆ ಇವು ಬಹಿರ್ನಿಷೇಚನೆಗೆ ಸರಳ ಉದಾಹರಣೆ.

ಮುಂದುವರಿದು ನೆಲದ ಮೇಲೆ ವಾಸಿಸುವ ಪ್ರಾಣಿಗಳಾದ ಸರೀಸೃಪಗಳು, ಪಕ್ಷಿಗಳು ಮತ್ತು ಸ್ತನಿಗಳಲ್ಲಿ ಲಿಂಗಾಣುಗಳನ್ನು ಉತ್ಪತ್ತಿಮಾಡುವ, ಲಿಂಗಾಣುಗಳನ್ನು ಪ್ರಜನನ ಕಾಲದವರೆಗೆ ಸುರಕ್ಷಿತವಾಗಿ ಶೇಖರಿಸಿಡುವ, ಗಂಡು ಹೆಣ್ಣು ಪ್ರಾಣಿಗಳು ಕೂಡುವ ಸಂಭೋಗ ಕಾಲದಲ್ಲಿ ಪುರುಷಾಣುಗಳನ್ನು ಹೆಣ್ಣು ಪ್ರಾಣಿಯ ದೇಹಕ್ಕೆ ವರ್ಗಾಯಿಸುವ, ಹೀಗೆ ಸ್ವೀಕರಿಸಿದ ಪುರುಷಾಣುಗಳನ್ನು ನಿಷೇಚನೆಗೆ ಮೀಸಲಾದ ಭಾಗಕ್ಕೆ ಕೊಂಡೊಯ್ದು ನಿಷೇಚನೆಗೆ ಅನುವುಮಾಡಿಕೊಟ್ಟು, ಉತ್ಪತ್ತಿಯಾಗುವ ಜೀಜಾಣುವಿನ ಮುಂದಿನ ಬೆಳವಣಿಗೆಗೆ ಅನುಕೂಲವಾಗುವಂತೆ ಆಹಾರ ಮತ್ತು ರಕ್ಷಾಕವಚಗಳನ್ನು ಒದಗಿಸಿ ಆರಿಸಿದ ಜಾಗದಲ್ಲಿ ಅವುಗಳನ್ನು ಸಿಕ್ಷೇಪಿಸಿ ಅಥವಾ ತಾಯಿಪ್ರಾಣಿ ದೇಹದಲ್ಲಿಯೇ ಉಳಿಸಿಕೊಂಡು ಬೆಳವಣಿಗೆಗೆ ಅನುವುಮಾಡಿಕೊಡುವ ವಿಧಾನಗಳು ವಿಕಾಸಗೊಂಡಿವೆ.

ಉಲ್ಲೇಖ[ಬದಲಾಯಿಸಿ]

[೧] [೨] [೩] [೪]

  1. https://mohtadialkhaliq.wordpress.com/2011/02/05/binary-fission-the-amoeba/
  2. http://www.genome.gov/26524120
  3. http://users.rcn.com/jkimball.ma.ultranet/BiologyPages/S/Sexual_Reproduction.html
  4. http://www.tutorvista.com/content/biology/biology-iv/reproduction-in-animals/asexual-reproduction-types.php