ವಿಷಯಕ್ಕೆ ಹೋಗು

ಶೈನಿ ಅಬ್ರಹಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೈನಿ ಅಬ್ರಹಾಂ
೨೦೧೩ ರಲ್ಲಿ ಅಬ್ರಾಹಾಂ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಶೈನಿ ಕುರಿಸಿಂಗಲ್ ಅಬ್ರಹಾಂ-ವಿಲ್ಸನ್
ರಾಷ್ರೀಯತೆಭಾರತೀಯರು
ಜನನ (1965-05-08) ೮ ಮೇ ೧೯೬೫ (ವಯಸ್ಸು ೫೯)
ತೊಡುಪುಳ, ಇಡುಕ್ಕಿ, ಕೇರಳ, ಭಾರತ
Sport
ದೇಶ ಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)೪೦೦ ಮೀಟರ್
೮೦೦ ಮೀಟರ್
Achievements and titles
ವೈಯಕ್ತಿಕ ಪರಮಶ್ರೇಷ್ಠ೪೦೦ ಮೀಟರ್: ೫೨.೧೨ (೧೯೯೫)
೮೦೦ ಮೀಟರ್: ೧:೫೯.೮೫ (೧೯೯೫)

ಶೈನಿ ಕುರಿಸಿಂಗಲ್ ವಿಲ್ಸನ್ (ನೀ ಅಬ್ರಹಾಂ, ಜನನ ೮ ಮೇ ೧೯೬೫) ಅವರು ನಿವೃತ್ತ ಭಾರತೀಯ ಅಥ್ಲೀಟ್. ಅವರು ೧೪ ವರ್ಷಗಳಿಂದ ೮೦೦ ಮೀಟರ್‌ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.[೩] ಶೈನಿ ಅಬ್ರಹಾಂ ವಿಲ್ಸನ್ (ಶೈನಿ ಅಬ್ರಹಾಂ) ಅವರು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ೭೫ ಕ್ಕೂ ಹೆಚ್ಚು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ವಿಶ್ವಕಪ್‌ಗಳಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ ಹೆಚ್ಚುವರಿ ಹಿರಿಮೆಯನ್ನು ಅವರು ಹೊಂದಿದ್ದಾರೆ. ೧೯೮೫ ರಿಂದ ಜಕಾರ್ತಾದಲ್ಲಿ ಸತತವಾಗಿ ಆರು ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್‌ಗಳಲ್ಲಿ ಭಾಗವಹಿಸಿದ ಏಕೈಕ ಕ್ರೀಡಾಪಟು ಇವರು. ಈ ಅವಧಿಯಲ್ಲಿ ಅವರು ಏಷ್ಯನ್ ಸ್ಪರ್ಧೆಗಳಲ್ಲಿ ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು. ಅವರು ಸೆವೆನ್ ಸೌತ್ ಏಷ್ಯನ್ ಫೆಡರೇಶನ್ (ಎಸ್‌ಎ‌ಎಫ್) ಮೀಟ್‌ಗಳಲ್ಲಿ ಸ್ಪರ್ಧಿಸಿ ಒಟ್ಟು ೧೮ ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.[೩][೪]


ಆರಂಭಿಕ ಜೀವನ[ಬದಲಾಯಿಸಿ]

ಶೈನಿ ೮ ಮೇ ೧೯೬೫ ರಂದು ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಜನಿಸಿದರು. ಶೈನಿ ಬಾಲ್ಯದಿಂದಲೇ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಕೊಟ್ಟಾಯಂನಲ್ಲಿ ಕ್ರೀಡಾ ವಿಭಾಗಕ್ಕೆ ಸೇರಿದ ನಂತರ ತಮ್ಮ ಕೌಶಲ್ಯವನ್ನು ಇನ್ನೂ ಬೆಳೆಸಿಕೊಂಡರು.

ವಾಸ್ತವವಾಗಿ ಶೈನಿ, ಪಿ. ಟಿ ಉಷಾ ಮತ್ತು ಎಂ. ಡಿ. ವಲ್ಸಮ್ಮರು ಕೇರಳದ ವಿವಿಧ ಭಾಗಗಳಲ್ಲಿ ಒಂದೇ ಕ್ರೀಡಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು. ನಂತರ ಅವರಿಗೆ ಎನ್‌ಐಎಸ್ ತರಬೇತುದಾರ ಪಿ.ಜೆ ದೇವಾಸಿಯಾ ಅವರಿಂದ ತರಬೇತಿ ನೀಡಲಾಯಿತು.

ಪಲೈನಲ್ಲಿರುವ ಅಲ್ಫೋನ್ಸಾ ಕಾಲೇಜಿಗೆ ತೆರಳುವ ಮುನ್ನ ಶೈನಿ ತಿರುವನಂತಪುರದ ಜಿ.ವಿ. ರಾಜಾ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದರು.

ಅವರು ಪ್ರಸ್ತುತ ಭಾರತೀಯ ತಂಡದ ಆಯ್ಕೆಗಾರ್ತಿ ಮತ್ತು ಆಯ್ಕೆ ಸಮಿತಿ ಮಂಡಳಿಗೆ ಸರ್ಕಾರದ ನಾಮಿನಿಯಾಗಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

೧೯೮೨ ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಶೈನಿ ಅಬ್ರಹಾಂ ಮತ್ತು ಪಿಟಿ ಉಷಾ ದೇಶವನ್ನು ಪ್ರತಿನಿಧಿಸಿದಾಗಿನಿಂದ ಶೈನಿ ಅಬ್ರಹಾಂ ಅವರ ಅಥ್ಲೆಟಿಕ್ಸ್ ವೃತ್ತಿಜೀವನವು ಪಿಟಿ ಉಷಾ ಅವರ ವೃತ್ತಿಜೀವನದ ಜೊತೆಗೆ ನಡೆಯಿತು. ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ಗೆ ಒಂದು ವರ್ಷದ ಮೊದಲು ಶೈನಿ ೮೦೦ ಮೀಟರ್‌ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು.[೫]

೧೯೯೨ ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಅವರು ಭಾರತದ ಧ್ವಜಧಾರಿಯಾದ ಮೊದಲ ಮಹಿಳೆಯಾದರು. ೧೯೮೯ ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್ ಅವರ ಅತ್ಯಂತ ಸ್ಮರಣೀಯ ಸ್ಪರ್ಧೆ. ಅದರಲ್ಲಿ ಅವರು ೮೦೦ ಮೀಟರ್ ಓಡಿ ಚೀನಾದ ಸನ್ ಸುಮೇಯ್‌ ಅವರ ನಂತರ ಎರಡನೇ ಸ್ಥಾನ ಪಡೆದರು. ಆದರೆ ಸುಮೇಯ್‌ರ ಡೋಪಿಂಗ್‌ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದ್ದರಿಂದ ಶೈನಿಯವರನ್ನೇ ವಿಜೇತೆ ಎಂದು ಘೋಷಿಸಲಾಯಿತು. ಅವರ ಒಂದು ದೊಡ್ಡ ಸಾಧನೆಯೆಂದರೆ, ಅವರು ಮಗುವಿನ ಜನನದ ನಂತರ ಇನ್ನೂ ವೇಗವಾಗಿ ಓಡುತ್ತಿದ್ದರು. ೧೯೯೫ ರಲ್ಲಿ ಚೆನ್ನೈನಲ್ಲಿ ನಡೆದ ಸೌತ್ ಏಷ್ಯನ್ ಫೆಡರೇಶನ್ (ಎಸ್‌ಎ‌ಎಫ್) ಕ್ರೀಡಾಕೂಟದಲ್ಲಿ ೮೦೦ ಮೀ ಓಟವನ್ನು ೧:೫೯.೮೫ ರ ಅವಧಿಯಲ್ಲಿ ಮುಗಿಸಿ ಹೊಸ ದಾಖಲೆಯನ್ನು ಸ್ಥಾಪಿಸಿದರು.

ಶೈನಿ, ಡಿಸೆಂಬರ್ ೧೯೮೮ ರಲ್ಲಿ ಈಜುಗಾರ ವಿಲ್ಸನ್ ಚೆರಿಯನ್ ಅವರನ್ನು ವಿವಾಹವಾದರು.[೬]

ಶೈನಿ ಅವರಿಗೆ ೧೯೮೫ ರಲ್ಲಿ ಅರ್ಜುನ ಪ್ರಶಸ್ತಿ, ೧೯೯೬ ರಲ್ಲಿ ಬಿರ್ಲಾ ಪ್ರಶಸ್ತಿ ಮತ್ತು ೧೯೯೮ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು ಏಷ್ಯಾದ ಟಾಪ್ ಟೆನ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಕ್ಕಾಗಿ ೧೯೯೧ ರಲ್ಲಿ ಚೀನೀ ಪತ್ರಕರ್ತರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾಗವಹಿಸುವಿಕೆ[ಬದಲಾಯಿಸಿ]

  • ಶೈನಿ ಅಬ್ರಹಾಂ ನಾಲ್ಕು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಅವೆಂದರೆ: ಲಾಸ್ ಏಂಜಲೀಸ್ (೧೯೮೪), ಸಿಯೋಲ್ (೧೯೮೮), ಬಾರ್ಸಿಲೋನಾ (೧೯೯೨) ಮತ್ತು ಅಟ್ಲಾಂಟಾ (೧೯೯೬).
  • ಮೊದಲ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಅವರು ಯಾವುದೇ ಪದಕಗಳನ್ನು ಗೆಲ್ಲದಿದ್ದರೂ, ಶೈನಿ ಮತ್ತು ಪಿ.ಟಿ. ಉಷಾ ಅವರು ೧೯೮೪ ರ ಕ್ರೀಡಾಕೂಟದಲ್ಲಿ ಮಹಿಳೆಯರ ೪*೪೦೦ ರಿಲೇಯ ಫೈನಲ್‌‌ನಲ್ಲಿ ಆಡುವ ಮೂಲಕ ಭಾರತಕ್ಕೆ ಶಕ್ತಿ ತುಂಬಿದರು.
  • ಅವರು ೧೯೯೨ ರ ಕ್ರೀಡಾಕೂಟದಲ್ಲಿ ಭಾರತೀಯ ತುಕಡಿಯ ನಾಯಕಿಯೂ ಆಗಿದ್ದರು.
  • ಅವರು ಮೂರು ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಚಿನ್ನ, ೨ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.
  • ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್‌ಗಳಲ್ಲಿ, ಅವರು ೭ ಚಿನ್ನದ ಪದಕಗಳು, ೬ ಬೆಳ್ಳಿ ಪದಕಗಳು ಮತ್ತು ೨ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
  • ೭೫ಕ್ಕೂ ಹೆಚ್ಚು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.
  • ಇವರು ಮಹಿಳೆಯರ ೮೦೦ ಮೀ ಓಟದಲ್ಲಿ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್.
  • ೧೯೯೬ ರ ಅಟ್ಲಾಂಟಾ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡಕ್ಕೆ ಮೊದಲ ಭಾರತೀಯ ಮಹಿಳಾ ನಾಯಕಿ ಮತ್ತು ಧ್ವಜಧಾರಿ

ಪ್ರಶಸ್ತಿಗಳು[ಬದಲಾಯಿಸಿ]

  • ಅವರು ೧೯೮೪ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು.
  • ಕ್ರೀಡೆಯಲ್ಲಿನ ಅತ್ಯುತ್ತಮ ಸಾಧನೆಗಾಗಿ ಅವರು ಚೀನೀ ಸರ್ಕಾರದಿಂದ ೧೯೯೧ ರಲ್ಲಿ ಚೀನೀ ಪತ್ರಕರ್ತ ಪ್ರಶಸ್ತಿಯನ್ನು ಪಡೆದರು.
  • ಆಕೆಗೆ ೧೯೯೮ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.[೭]
  • ಆಕೆಗೆ ೧೯೯೮ ರಲ್ಲಿ ಬಿರ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ೨೦೦೨ ರಲ್ಲಿ, ಅವರು ಯುನಿಸೆಫ್, ಲಾಸ್ ಏಂಜಲೀಸ್‌ನಿಂದ ಗೌರವಿಸಲ್ಪಟ್ಟರು ಮತ್ತು ಏಷ್ಯಾದ ಪರವಾಗಿ ಕಾಗದದ ಪ್ರಸ್ತುತಿಯನ್ನು ಪ್ರಸ್ತುತಪಡಿಸಿದರು.
  • ೨೦೦೯ ರಲ್ಲಿ, ಅವರು ದೆಹಲಿಯಲ್ಲಿ ಸಿಎನ್‌ಎನ್ ಐಬಿ‌ಎನ್ ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.
  • ೨೦೧೨ ರಲ್ಲಿ, ಅವರು ಚೆನ್ನೈನಲ್ಲಿ ಜೆ‌ಎಫ್‌ಡಬ್ಲ್ಯೂ ಅಚೀವರ್ಸ್ ಪ್ರಶಸ್ತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.
  • ೨೦೧೨ ರಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಮಹಿಳಾ ಸಾಧಕರಿಗೆ ಸನ್ ನೆಟ್‌ವರ್ಕ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. "Asian Championships". gbrathletics. Retrieved 18 July 2021.
  2. "MEDAL WINNERS OF ASIAN GAMES". Athletics Federation of India. Retrieved 18 July 2021.
  3. ೩.೦ ೩.೧ Chitra Garg (2010). Indian Champions. Rajpal & Sons. pp. 52–54. ISBN 9788170288527.
  4. Somak Adhikari (3 January 2020). "Shiny Abraham, The Lady From A Forgotten Era Of Indian Athletics Who Won Us Gold At Asian Championships". IndiaTimes. Retrieved 19 July 2021.
  5. Rahul Preeth (24 September 2014). "That One Mistake!". The New Indian Express. Retrieved 19 July 2021.
  6. "Shiny Abraham the ties knot with ace swimmer Wilson Cherian". India Today (in ಇಂಗ್ಲಿಷ್). 15 December 1988. Retrieved 9 October 2019.
  7. "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.