ವಿಷಯಕ್ಕೆ ಹೋಗು

ಶಿಶಿಲೇಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shishileshwara-Temple

ಪೀಠಿಕೆ

[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಕರಾವಳಿ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ನಡುವೆ ಪಸರಿಸಿದ ತುಳುನಾಡು ಸಾವಿರಾರು ದೈವ ದೇವತೆಗಳ ಪುಣ್ಯದ ನೆಲೆವೀಡು.ಇಲ್ಲಿ ಪೂಜಿಸಲ್ಪಡುವ ನೂರಾರು ದೈವ ದೇವಸ್ಥಾನ ಗಳಲ್ಲಿ ಬಹು ಪುರಾತನ ದಿಂದಲೂ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನವೂ ಒಂದು.ಊರಿನಹೆಸರಿನೊಂದಿಗೆ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ ಮೇಲಿರುವ ಶಿಲಾಮಯ ಶಿಶಿಲೇಶ್ವರ ದೇವಾಲಯ ಪಕ್ಕದಲ್ಲಿ ನದಿಯಿಂದಾಶ್ರಯಿಸಿದ ಮನಮೋಹಕ ಮತ್ಸ್ಯತೀರ್ಥ. ಇದು ಇಲ್ಲಿಯ ದೃಶ್ಯ ವೈಶಿಷ್ಟ್ಯ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕಾಗಿ 45ಕಿ.ಮೀ. ಮತ್ತು ಉಪ್ಪಿನಂಗಡಿಯಿಂದ ನೆಲ್ಯಾಡಿ-ಕೊಕ್ಕಡ ಮಾರ್ಗವಾಗಿ ಅಷ್ಟೇ ದೂರದಲ್ಲಿದೆ ಶಿಶಿಲ. ಉತ್ತರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗಡಿ ಮತ್ತು ಸರ್ವೆಕಲ್ಲೆಂದೇ ಕರೆಯಲ್ಪಡುವ ತಲೆಯೆತ್ತಿನಿಂತಿರುವ ಅಮೇದಿ ಕಲ್ಲು, ಪೂರ್ವದಲ್ಲಿ ಎತ್ತಿನ ಬುಜಕಲ್ಲು ಮತ್ತು ಉದಯ ಪರ್ವತ ಶ್ರೇಣಿ, ಪಶ್ಚಿಮಕ್ಕೆ ಶಿಂಗಾಣಿ. ಕಲ್ಬಾರ್ ಬೆಟ್ಟಗಳು, ದಕ್ಷಿಣಕ್ಕೆ ಕುಮಾರ ಪರ್ವತ, ಕೋಟೆಬಾಗಿಲು ಗುಡ್ಡಗಳ ಸಾಲು. ಒಟ್ಟಾರೆಯಾಗಿ ಪ್ರಕೃತಿಯೇ ಮೈವೆತ್ತಿ ನಿಂತಂತಹ ಪ್ರದೇಶ ಶಿಶಿಲ.

ಇತಿಹಾಸ

[ಬದಲಾಯಿಸಿ]

ಇತಿಹಾಸ ಕಾಲದಲ್ಲಿ ಶಿಶಿಲವೊಂದು ಪ್ರಮುಖ ವ್ಯಾಪಾರ ಕೆಂದ್ರವಾಗಿತ್ತೆಂಬುದಕ್ಕೆ ಇಲ್ಲಿ ಬಲವಾದ ಸಾಕ್ಷಿಗಳಿವೆ. ಬಯಲು ಸೀಮೆ ಮತ್ತು ತುಳುನಾಡನ್ನು ಸಂಪರ್ಕಿಸುವ ದಾರಿಯೊಂದು ಇಲ್ಲಿದೆ.ಈ ದಾರಿಯನ್ನು ಅಚ್ಚುಕಟ್ಟಾಗಿ ಕಲ್ಲುಗಳಿಂದ ಅಲ್ಲಲ್ಲಿ ಕಟ್ಟಿರುವುದು ಕಾಣಬಹುದು. ಇದನ್ನು ಪೇರಾಟದ ಸಾದಿ ಎನ್ನುತ್ತಿದ್ದರು. ತುಳುನಾಡಿನಿಂದ ಬಯಲು ಸೀಮೆಗೆ, ಅಂತೆಯೇ ಬುಲು ಸೀಮೆಯಿಂದ ತುಳುನಾಡಿಗೆ ಕುದುರೆ ಅಥವಾ ಎತ್ತುಗಳ ಮೇಲೆ ಸಾಮಾನು, ಜೀವನಾವಶ್ಯಕ ವಸ್ತುಗಳನ್ನು ಸಾಗಿಸಿತ್ತಿದ್ದರು ಎಂಬುದಕ್ಕೆ ಅಲ್ಲಲ್ಲಿ ಕಾಣುವ ಕೋಟೆಗಳು, ವಿಶ್ರಾಂತಿಯ ಸ್ಥಳಗಳು , ಸಾಮಾನುಗಳನ್ನು ಏರಿಸಿ ಇಳಿಸುವ ಬಯಲುಗಳು, ಅದಲ್ಲೆ ಹೊಂದಿಕೊಂಡಿರುವ ಸ್ಥಳನಾಮಗಳು ಸಾಕ್ಷಿಯನ್ನು ಹೇಳುತ್ತಿವೆ. ಈ ದಾರಿಯ ಮುಂದೆ ಸಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಎಂಬಲ್ಲಿ ಭೈರವೇಶ್ವರ ದೇವಾಲಯದ ಸಮೀಪದಿಂದ ಹೋಗುತ್ತಿತ್ತು. ಈಗಲೂ ಶಿಶಿಲದ ಸಮೀಪದ ಕಾಡುಗಳ, ನದಿದಂಡೆಗಳ, ವಿಶಾಲ ಬಯಲುಗಳಲ್ಲಿರುವ ದೊಡ್ಡ ದೊಡ್ಡ ಪಂಚಾಂಗಗಳು, ಗದ್ದೆಗಳ ಕುರುಹುಗಳು, ತೆಂಗಿನಮರ ಗಾತ್ರದ ವೀಳ್ಯದೆಲೆ ಬಳ್ಳಿಗಳು,ಕಡೆಯವ ಕಲ್ಲುಗಳು, ನೀರಾವರಿಗಾಗಿ ನಾಲೆಗಳಿರುವ ಕೆರೆಗಳುಅಚ್ಚರಿ ಹುಟ್ಟಿಸುತ್ತಿವೆ. ಇಲ್ಲಿಯ ಸುತ್ತಮುತ್ತಲಿನ ಶಿಬರಾಜೆ , ಶಿಬಾಜೆ ,ಶಿರಡಿ, ಶಿರಬಾಗಿಲು ಮುಂತಾದ ಊರುಗಳಿಗೆ ಶಿಶಿಲವೇ ಕೇಂದ್ರವಾಗಿದ್ದಿರಬಹುದೆಂದೂ ಈ ಪ್ರದೇಶದಲ್ಲಿ ಹಿಂದೆ ಹೇರಳ ಜನಸಂಖ್ಯೆ ಇದ್ದಿರಬಹುದೆಂದು ಸಂಶಯ ಹುಟ್ಟಿಸುತ್ತವೆ.

ಗುಡಿಗಳು

[ಬದಲಾಯಿಸಿ]

ಪಾವನ ನದಿ ಕಪಿಲೆಯ ದಡದ ಮೇಲೆ ಶಿಶಿಲೇಶ್ವರ ದೇವಸ್ಥಾವವು ಸ್ಥಾಪಿತವಾಗಿದೆ. ಗರ್ಭಗೃಹವು ಸಂಪೂರ್ಣವಾಗಿ ಶಿಲಾಮಯವಾಗಿದ್ದು, ಬಾಹ್ಯವಾಗಿ ಜೈನಬಸದಿಯನ್ನು ಹೋಲುತ್ತದೆ.ಇದರ ಆಯ ಗಜಪೃಷ್ಟಾಕಾರದಲ್ಲಿದ್ದು ನವರಂಗ,ಮುಖ ಮಂಟಪಗಳಿಂದ ಕೂಡಿದೆ.ಕೆಲವು ಉಬ್ಬು ಶಿಲ್ಪಗಳು, ಮೂಡಿಸುತ್ತದೆ. ದೇವಾಲಯ ಹಿಂಬದಿಯಲ್ಲಿ ಗೋಡೆಯಲ್ಲಿರುವ ಕುಳಿತುಕೊಂಡಿರುವ ನಗ್ನ ಹೆಣ್ಣು ,ಬಿಲ್ಲು ಬಾಣ ಹಿಡಿದ ಯೋದರು ,ಮುಖಮಂಟಪದ ಒಳ ಮೇಲ್ಚಾವಣಿಯಲ್ಲಿ ಕೆತ್ತಿರುವ ದಿಕ್ಚಕ್ರಗಳು ,ಮದ್ದಳೆ ಬಾರಿಸುತ್ತಾ ನರ್ತಿಸುವ ನರ್ತಕಿ ,ಸರ್ಪ ಕ್ಯೆಯಲ್ಲಿ ಹಿಡಿದು ಹೆದರಿ ಕುಣಿಯುತ್ತಿರುವ ಕೊತಿ, ಮುನಿ ,ಕೋಪೋದ್ರಿಕ್ತ ಸಿಂಹ ,ಚಿಗುರುಬಳ್ಳಿ ತಿನ್ನುತ್ತಿರುವ ನವಿಲು ಹಾಗೂ ಇನ್ನೂ ಅನೇಕ ಚಿತ್ರಗಳು ಆಕರ್ಷಕವಾಗಿವೆ. ದೇವಾಲಯದ ಪ್ರಾಗಂಣದಲ್ಲಿ ಮಹಾಗಣಪತಿಯ ದೇವರಗುಡಿ ಇದೆ. ದೇವಾಲಯಕ್ಕಿಂತ ಸ್ವಲ್ಪ ದೂರದಲ್ಲಿ ಮಹಾಕಾಳಿ ಗುಡಿ ಇದೆ.ಹತ್ತಿರದಲ್ಲಯೇ ಕೊಡಮಣಿತ್ತಾಯ, ಶಿರಾಡಿ ಭೂತ, ಬಚ್ಚನಾಯಕ ಭೂತಾಲಯಗಳು ಅನತಿ ದೂರದಲ್ಲಿ ಬೋಳಿನ ಕಳೆ, ಕಿಲಮರತ್ತಾಯನ ಗುಡಿಗಳಿವೆ. ದೇವಾಲಯದ ಆಗ್ನೇಯ ದಿಕ್ಕಿನಲ್ಲಿರುವ ಕುಮಾರ ಗುಡ್ಡೆಯಲ್ಲಿ ಶಿಶಿಲೇಶ್ವರನ ಮೂಲಸ್ಥಾನವಿದ್ದು, ಮಹಿಷಂತಾಯ, ಕುಮಾರ ಇಷ್ಟ ದೇವತೆ, ಪಂಜುರ್ಲಿ ದೈವಗಳ ಸನ್ನಿಧಿ ಸ್ಥಾನಗಳಿವೆ. ಇದರ ಸ್ವಲ್ಪ ದೂರದಲ್ಲಿರುವ ಕಾವಿನ ಕಾನದಲ್ಲಿ ವನದೇವತೆಯ ನಿವಾಸಸ್ಥಾನ ಕೋಡಿ ಪಾದೆ ಎಂಬಲ್ಲಿ ಚಾಮುಂಡಿಯ ಶಿಲಾ ಸಂಕೇತವಿದೆ. ದೇವಾಲುದ ಪೂರ್ವಕ್ಕೆ ಅಂದಾಜು ಎರಡು ಕಿ.ಮಿ ದೂರದಲ್ಲಿ ಕೂಡಕಲ್ಲು ಮಜಲಿನ ದುರ್ಗಾ ದೇವಾಲಯವಿದೆ. ಶಿಶಿಲ ದೇವಾಲಯವನ್ನು ಜೈನ ಅರಸರು ಕಟ್ಟಿಸಿದರು. ಇದು ಉದ್ಬವ ಲಿಂಗವಾಗಿದೆ.ದೇವಾಲಯದ ಮುಂಭಾಗದಲ್ಲಿ ನಾಗಬನವಿದೆ.

ಐತಿಹ್ಯ

[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಶಿಶಿಲೇಶ್ವರನ ಮೂಲಸ್ಥಾನವಾದ ಕುಮಾರಗುಡ್ಡೆಯಲ್ಲಿ ಕಂದ ಮೂಲಗಳಾದ ನರೆ, ಕುರುಡುಗಳನ್ನು ಆಹಾರಕ್ಕಾಗಿ ಅಗೆದು ಸಂಗ್ರಹಿಸುತ್ತಿದ್ದ, ಪರಿಶಿಷ್ಟ ಜಾತಿಯ ‘ದೆಸಿಲು’ ಎಂಬವಳಿಗೆ ಮೊತ್ತಮೊದಲು ಅಲ್ಲಿ ಶಿಶಿಲೇಶ್ವರನ ಲಿಂಗವು ಗೋಚರಿಸಿತು. ಆಗ ಅವಳು ತನ್ನ ಜೊತೆಗಿದ್ದ ಬಂಧು ಕಿಲಮರತ್ತಾಯನಿಗೆ ಈ ವಿಚಾರವನ್ನಿ ತಿಳಿಸಿದಳು. ಇವರಿಬ್ಬರ ಮೂಲಕ ಈ ವಿವರವು ಇಡೀ ಊರಿಗೆ ಹಬ್ಬಿತು.ಹೀಗೆ ಈ ಶಿವಲಿಂಗದ ಇರವನ್ನು ಮೊತ್ತಮೊದಲು ಕಂಡು ಹಿಡಿದು, ಊರಿಗೆ ತಿಳಿಸಲು ಕಾರಣಳಾದ ಈ ಮಹಿಳೆಯ ಹೆಸರನ್ನು ಊರವರು ತಮ್ಮ ಊರಿಗೆ ಕೃತಜ್ಞತಾ ಪೂರ್ವಕವಾಗಿ ಇಟ್ಟುಕೊಂಡರು. ಹೀಗಾಗಿ ಅತೀ ಪ್ರಾಚೀನ ಕಾಲದಿಂದಲೂ ಈ ಊರಿಗೆ ‘ದೆಸಿಲು’ ಎಂಬ ಹೆಸರು ರೂಢಿಯಲ್ಲಿದೆ. ದೆಸಿಲು ಮತ್ತು ಕಿಲಮರತ್ತಾಯ ವರು ನರೆ ಕುರ್ಡು ಗಳನ್ನು ಅಗೆದಾಗ ಆ ಶಿವಲಿಂಗಕ್ಕೆ ಕತ್ತಿ ಭರ್ಚಿಗಳು ತಾಗಿ ಒಡಕು ಉಂಟಾದುದನ್ನು ಅವರು ಮರುಗಿ ಪಶ್ಚಾತ್ತಾಪ ಪಟ್ಟಿದ್ದರು.ಆ ಸುಂದರ ಲಿಂಗಕ್ಕೆ ಪೆಟ್ಟಾದುದನ್ನು ಮನಗಂಡು ನೊಂದ ಇವರು ಅದಕ್ಕೆ ಪ್ರಾಯಶ್ಚಿತವಾಗಿ ಬಲ್ಲವರ ಸೂಚನೆಯಂತೆ ಹತ್ತು ದಿನಗಳ ಪರ್ಯಂತ ಶಿವನಿಗೆ ತಮ್ಮ ಹಣೆಗಳಿಂದ ರಕ್ತವನ್ನು ಅರ್ಪಿಸುವುದರ ಮೂಲಕ ನೋವನ್ನನುಭವಿಸಿ ,ಸಮಾಧಾನ ಪಟ್ಟುಕೊಂಡರು.ಅನಂತರ ಆ ರಕ್ತಾರ್ಪಣವು ವಾಡಿಕೆಯಾಗಿ ,ಅವರ ವಂಶಜದಿಂದ ಪ್ರತಿವರ್ಷ ಶಿಶಿಲೇಶ್ವರನ ಜಾತ್ರೆಗೆ ಮೊದಲು ಮೇಘಮಾಸ ಇಪ್ಪತ್ತೇರಡನೇಯ ದಿನದಿನದಿಂದ ಹತ್ತು ದಿನಗಳ ಕಾಲ ಈ ವಿಧಿ ವಿಧಾನಗಳು ನಡೆದು ಬಂದಿದೆ.ಶಿವಲಿಂಗವನ್ನು ಲೋಕವರಿಯುವಂತೆ ಮಾಡಿದ ಹಾಗೂ ಲಿಂಗಕ್ಕೆ ತಮ್ಮಿಂದ ಗಾಯವಾದುದರ ಪ್ರಾಯಶ್ಚಿತವಾಗಿ ತಮ್ಮ ನೆತ್ತರನ್ನು ಪ್ರತಿ ವರ್ಷವೂ ಶಿವನಿಗೆ ದಶ ದಿನಗಳಲ್ಲಿ ಅರ್ಪಿಸುತ್ತಾ ಕೊನೆಗೊಂದು ದಿನ ಕಾಲಧರ್ಮವನೈದಿದ ದೆಸಿಲು ಕಿಲಮರತ್ತಾಯರನ್ನು ಅತಿಮಾನವರಾಗಿ ಕಂಡ ಊರವರು ಭೂತ ರೂಪದಲ್ಲಿ ಇವರನ್ನು ಪೂಜಿಸುತ್ತಾರೆ.

ವರ್ಷಾವಧಿ ಜಾತ್ರೆ- ಕುರೊಂತಾಯನೋ

[ಬದಲಾಯಿಸಿ]

ವೃಷಭ ಸಂಕ್ರಮಣದ ಮುನ್ನದಿನದಿಂದ ಏಳು ದಿನಗಳ ಕಾಲ ನಂದೀಶನ ಧ್ವಜರೋಹಣದೊಂದಿಗೆ ಪ್ರಾರಂಭವಾಗುವ ವರ್ಷಾವಧಿ ಜಾತ್ರೆಯು ಕುರೊಂತಾಯನೋ ಎಂದು ಜನಜನಿತವಾಗಿದೆ.ಇದು ತುಳುನಾಡಿನ ದೇವಸ್ಥಾನಗಳ ಜಾತ್ರೆಗಳಲ್ಲಿಯೇ ಕಡೆಯ ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ದರ್ಶನ ಬಲಿ,ರಥೋತ್ಸವ, ತೆಪ್ಪೋತ್ಸವಗಳ ನಂತರ ಸುಮಾರು ಒಂದು ಮೈಲಿ ದೂರದಲ್ಲಿರುವ ಮೀನಗುಂಡಿ ಎಂಬಲ್ಲಿ ಅವಭ್ರತ ಉತ್ಸವವು ನಡೆಯುವುದು. ಧ್ವಜರೋಹಣದ ಮರುದಿನ ದೇವರ ಮೂಲಸ್ಥಾನವಾದ ಕುಮಾರಗುಡ್ಡೆ ಎಂಬಲ್ಲಿ ಒಂದು ದಿನದ ಜಾತ್ರೆ ಮತ್ತು ಭೂತಗಳ ನೇಮಗಳು ಜರುಗುವುವು. ಅದೇ ದಿನ ರಾತ್ರಿ ದೇವಳದ ಬಾಗಿಲಲ್ಲಿ ಮತ್ತು ರಥಬೀದಿಯಲ್ಲಿ ಮರುದಿನ ಬೆಳಗಿನವರೆಗೆ ಹಲವಾರು ದೈವಗಳ ನೇಮಗಳು ನಡೆಯುವುವು.

ಕಪಿಲೆ–ಹುಲಿ ಕಲ್ಲುಗಳು

[ಬದಲಾಯಿಸಿ]

ಮತ್ಸ್ಯತಿರ್ಥದ ಪಕ್ಕದಲ್ಲಿರುವ ಕಪಿಲೆ ಕಲ್ಲು ,ಹುಲಿಕಲ್ಲು ಗಳು ಹಿಂದೆ ದನ,ಹುಲಿಗಳಾಗಿದ್ದವೆಂದು ದನವು ಈ ನದಿಗೆ ಹಾರಿದಾಗ ,ಹುಲಿಯೂ ಅದರ ಆಸೆಗೆ ಹಾರಿತೆಂದು ,ಆಗ ದ್ಯೆವ ಸಂಕಲ್ಪದಂತೆ ಕಲ್ಲುಗಳಾದವು ಎಂಬ ಐತಿಹ್ಯವಿದೆ.

ಕಪಿಲಾ ನದಿ

[ಬದಲಾಯಿಸಿ]

ಈ ಶಿವಾಲಯದ ಬದಿಯಿಂದ ಪ್ರವಹಿಸುವ ಕಪಿಲನದಿಯು ಮೂಡುಗೆರೆ ತಾಲೂಕಿನ ಗುತ್ತಿಗ್ರಾಮದ ದೇವರಮನೆ ಎಂಬ ಊರಿನ ಸಮೀಪದ ಹುಳ್ಳು ಮಲೆಯಲ್ಲಿ ಉದ್ಭವಿಸಿದೆ.ಗೋಮುಖದ ಶಿಲಾ ಕ್ರತಿಯೊಳಗಿಂದ ಈ ನದಿ ಹತ್ತಿ ಹರಿಯುತ್ತಿರುವುದರಿಂದ ಇದಕ್ಕೆ ಕಪಿಲಾ ನದಿ ಯೆಂಬ ಹೆಸರಾಗಿದೆ. ಪೆರುವೇಲು ಮೀನು ಶಿಶಿಲೇಶ್ವರ ದೇವಾಲಯದ ಎಡಬದಿಯಲ್ಲಿ ಪ್ರವಹಿಸುತ್ತಿರುವ ಕಪಿಲಾ ನದಿಯಲ್ಲಿ ಪೆರುವೇಲು ಮೀನುಗಳ ಮತ್ಸ್ಯ ತೀರ್ಥವಿದೆ. ಈ ಬ್ರಹದಾಕಾರದ ಮನಮೋಹಕ ಮತ್ಸ್ಯ ಸಂಕುಲವು ಈ ಭಾಗದ ನೀರನ್ನು ಶುದ್ದಗೊಳಿಸುವುದರಿಂದ ಇಲ್ಲಿಗೆ ಮತ್ಸ್ಯತೀರ್ಥ ವೆಂಬ ಹೆಸರಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ.ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ.[೧]

ಉಲ್ಲೇಖ

[ಬದಲಾಯಿಸಿ]
  1. ಮನೀಷಾ ವಾರ್ಷಿಕ ಸಂಚಿಕೆ

ಹೊರಕೊಂಡಿಗಳು

[ಬದಲಾಯಿಸಿ]