ವಿಠಲ್ ಶೆಣೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಠಲ್ ಶೆಣೈ
ಜನನಮಂಗಳೂರು, ಕರ್ನಾಟಕ, ಭಾರತ
ವೃತ್ತಿಸಾಫ್ಟ್ವೇರ್ ತಂತ್ರಜ್ಞ, ಲೇಖಕ,
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿಕಾದಂಬರಿ, ಕತೆ
ವಿಷಯಪತ್ತೆದಾರಿ, ಸಮಕಾಲೀನ
ಪ್ರಮುಖ ಕೆಲಸ(ಗಳು)ತಾಳಿಕೋಟೆಯ ಕದನದಲ್ಲಿ

ವಿಠಲ್ ಶೆಣೈ ಮಂಗಳೂರು ಮೂಲದ ಸಾಫ್ಟ್ವೇರ್ ತಂತ್ರಜ್ಞ. ಪ್ರಸ್ತುತ ಬೆಂಗಳೂರಿನ ನಿವಾಸಿ. ಪ್ರವೃತ್ತಿಯಿಂದ ಕನ್ನಡ ಭಾಷೆಯ ಒಬ್ಬ ಲೇಖಕ. ಕೆಲವು ವರ್ಷಗಳಿಂದ ಅವರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಅವರ ಮೊದಲ ಕಾದಂಬರಿ ತಾಳಿಕೋಟೆಯ ಕದನದಲ್ಲಿ ಅವರ ವಿಶಿಷ್ಟ ನಿರೂಪಣಾ ಶೈಲಿಯನ್ನು ಪ್ರಚುರಪಡಿಸಿತು.

ಪ್ರಾಥಮಿಕ ಜೀವನ[ಬದಲಾಯಿಸಿ]

ವಿಠಲ್ ಶೆಣೈ ಮಂಗಳೂರಿನಲ್ಲಿ ಜನಿಸಿದರು. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಜಿನೀಯರಿಂಗ್ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ವಿಠಲ್ ಶೆಣೈ ವೃತ್ತಿಯಂದ ಸಾಫ್ಟ್ವೇರ್ ತಂತ್ರಜ್ಞರಾಗಿ. ಸುಮಾರು ೯೦ರ ದಶಕದ ಅಂತ್ಯದಿಂದ ಸಾಫ್ಟ್ವೇರ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರು ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಸಿಂಗಾಪುರ ಮುಂತಾದೆಡೆ ಕೆಲಸ ಮಾಡಿದ ಅನುಭವ ಪಡೆದರು. ಇನ್ನು ಫ್ರವೃತ್ತಿಯಾದ ಕನ್ನಡ ಸಾಹಿತ್ಯಕ್ಕೆ ಬಂದರೆ, ಸುಮಾರು ೨೦೧೩ರಿಂದ ಬರೆಯಲು ಶುರು ಮಾಡಿದರು. ಪೂರ್ಣಚಂದ್ರ ತೇಜಸ್ವಿ, ಯಂಡಮೂರಿ ವೀರೇಂದ್ರನಾಥ್‌, ಕೆ. ಎನ್. ಗಣೇಶಯ್ಯ ಮುಂತಾದ ಖ್ಯಾತ ಲೇಖಕರಿಂದ ಸ್ಫೂರ್ತಿ ಪಡೆದು ಬರವಣಿಗೆಯಲ್ಲಿ ತೊಡಗಿದರು. ವಿವಿಧ ದೇಶಗಳಲ್ಲಿ ಕೆಲಸ ಮಾಡಿದ ಅನುಭವವು ಕತೆಯ ಪೋಷಣೆಯಲ್ಲಿ ಸಹಾಯಕ್ಕೆ ಬಂದಿದೆ. ಇದಲ್ಲದೆ ಇವರು ಹಲವು ಪುಸ್ತಕಗಳ ವಿಮರ್ಶೆ ಕೂಡ ಮಾಡಿದ್ದಾರೆ[೧]. ಜೊತೆಗೆ ಇವರು ತಾಂತ್ರಿಕ ಬ್ಲಾಗ್‍ಗಳನ್ನು ಬರೆಯುತ್ತಾರೆ.

ಕೃತಿಗಳು[ಬದಲಾಯಿಸಿ]

ವರ್ಷ ಹೆಸರು ಪ್ರಕಾರ ಟಿಪ್ಪಣಿಗಳು
೨೦೧೭ ಪಾರಿವಾಳಗಳು ಲಲಿತ ಪ್ರಬಂಧ ನೈಜ ಘಟನೆಗಳ ತಿಳಿ ಹಾಸ್ಯ ಮಿಶ್ರಿತ ಪ್ರಬಂಧಗಳು
೨೦೧೮ ತಾಳಿಕೋಟೆಯ ಕದನದಲ್ಲಿ ಕಾದಂಬರಿ ಕಾಲ್ಪನಿಕ ಕಾದಂಬರಿ
೨೦೧೯ ಹುಲಿವೇಷ ಕಥಾಸಂಕಲನ ಮಂಗಳೂರಿನ ಹುಲಿವೇಷದ ಆಟ ಸಹಿತ ಇತರ ಕತೆಗಳು
೨೦೨೦ ನಿಗೂಢ ನಾಣ್ಯ ಕಾದಂಬರಿ ಬಿಟ್ ಕಾಯಿನ್ ಕೇಂದ್ರೀಕರಿಸಿ ಹಣೆದ ಕಾಲ್ಪನಿಕ ಕಾದಂಬರಿ

ಕೃತಿಗಳ ಪರಿಚಯ[ಬದಲಾಯಿಸಿ]

ಇವರ ಮೊದಲ ಕೃತಿ ಪಾರಿವಾಳಗಳು. ಪಾರಿವಾಳಗಳು ಒಂದು ಲಲಿತ ಪ್ರಬಂಧಗಳ ಸಂಕಲನ. ಇಲ್ಲಿ ಬರುವ ಕಥೆಗಳು ನಿಜ ಜೀವನದಲ್ಲಿ ಲೇಖಕರಿಗೆ ಆದ ಅನುಭವಗಳನ್ನು ತಿಳಿ ಹಾಸ್ಯದೊಂದಿಗೆ ಪ್ರಬಂಧಗಳಲ್ಲಿ ನಿರೂಪಿಸಿದ್ದಾರೆ. ಬೆಂಗಳೂರು ಮತ್ತು ಅಮೇರಿಕಾದಲ್ಲಿ ಅವರಿಗಾದ ಅನುಭವಗಳನ್ನು ಇಲ್ಲಿ ನಾವು ಕಾಣಬಹುದು. ಬೆಂಗಳೂರಿನ ವಾಹನದಟ್ಟನೆಯ ಬಗ್ಗೆ, ಪಾರಿವಾಳಗಳ ಬಗ್ಗೆ, ಅಮೇರಿಕಾದಲ್ಲಿನ ರಜಾ ಪ್ರವಾಸ ಕಥನ ಓದುಗನನ್ನು ನಗೆಗಡಲಲ್ಲಿ ತೇಲಿಸುತ್ತದೆ [೨].

ಇವರ ಎರಡನೆಯ ಕೃತಿ ತಾಳಿಕೋಟೆಯ ಕದನದಲ್ಲಿ. ಇದು ಒಂದು ಕಾಲ್ಪನಿಕ ಕಾದಂಬರಿ. ಇಲ್ಲಿ ಒಬ್ಬ ಚರಿತ್ರೆಯ ಅಧ್ಯಾಪಕ ಹಂಪಿಗೆ ಹೋಗಿ ಅಲ್ಲಿನ ಪಾಳುಬಿದ್ದ ದೇವಸ್ಥಾನಗಳನ್ನು ನೋಡುತ್ತಾನೆ. ಅವನಿಗೆ ಗತಕಾಲದ ಬಗ್ಗೆ ಮಾಹಿತಿ ಕೊಡಲು ಕಾಲಗರ್ಭದಲ್ಲಿ ಅಡಗಿದ್ದ ಇಬ್ಬರು ಸಿಗುತ್ತಾರೆ. ತಾಳಿಕೋಟೆಯ ಕದನದ ಸಂಪೂರ್ಣ ಅಧಿಕೃತ ಮಾಹಿತಿ ಅವರಿಂದ ದೊರೆಯುತ್ತಿರುತ್ತದೆ. ಇದು ಅವನ ಪ್ರಸ್ತುತ ಜೀವನದೊಂದಿಗೆ ಸಂಬಂಧ ಹೊಂದಿರುತ್ತದೆ. ವರ್ತಮಾನದಲ್ಲಿ ನಿಂತು ಭೂತಕಾಲವನ್ನು ತೋರಿಸುವ ಪರಿ ವಿಶಿಷ್ಟವಾಗಿದೆ. ಈ ನಡುವೆ ವಾಚಕನಿಗೆ ವಿಜಯನಗರದ ಪತನಕ್ಕೆ ಕಾರಣೀಭೂತರಾದ ಗಿಲಾನಿ ಸಹೋದರರ ಮೋಸದ ಬಗ್ಗೆ ಪರಿಚಯವಾಗುತ್ತದೆ. ಇತಿಹಾಸ ಮತ್ತು ವಾಸ್ತವ ಇವೆರಡರ ನಡುವೆ ಕುತೂಹಲಕಾರಿ ತಿರುವುಗಳನ್ನು ಪಡೆಯುವ ಕಾದಂಬರಿಯು ಕಡೆಯಲ್ಲಿ ರೋಚಕ ಅಂತ್ಯ ಪಡೆಯುತ್ತದೆ [೩][೪].

ಇವರ ಮೂರನೆಯ ಕೃತಿ ಹುಲಿವೇಷ. ಇದು ಒಂದು ಕಥಾಸಂಕಲನ. ೭ ಕಥೆಗಳಿವೆ. ಇದರಲ್ಲಿ ಮಂಗಳೂರಿನ ಹುಲಿವೇಷದ ಸಂಸ್ಕೃತಿಯ ಕಥೆ ಬರುತ್ತದೆ. ಸಣ್ಣ ಕಥೆಯೂ ಅಲ್ಲದ, ಕಾದಂಬರಿಯೂ ಅಲ್ಲದ ಇವೆರಡರ ನಡುವೆ ಬರುವ ಕುತೂಹಲಕರ ಕಥೆ. ಹುಲಿವೇಷದ ಆಟದ ಸಮಯದಲ್ಲಿ ಏನೆಲ್ಲಾ ನಡೆಯಬಹುದು ಎಂದು ಹೇಳುತ್ತಾ ಕಥೆ ಬೆಳೆಯುತ್ತದೆ. ಅದರಲ್ಲಿ ಉತ್ತರ ಕರ್ನಾಟಕದ ಕೆಲವರಿಗೆ ಹುಲಿವೇಷ ಹಾಕಿಸಿ ಅವರಿಂದ ಇದನ್ನು ತೆಗೆಯುವ ಪರಿ ಓದಲು ಚೆನ್ನಾಗಿದೆ. ಕಡೆಯಲ್ಲಿ ಇನ್ನೆಷ್ಟೋ ವಿಚಾರಗಳು ಬಂದು ಸೇರುತ್ತವೆ. ಎಂದಿನಂತೆ ರೋಚಕ ಅಂತ್ಯಕ್ಕೆ ಕೊರತೆಯಿಲ್ಲ. ಇನ್ನೊಂದು ಕಥೆಯಲ್ಲಿ ಒಬ್ಬ ಉದಯೋನ್ಮುಖ ಗಾಯಕನ ಏರಿಳಿತದ ಪೀಕಲಾಟ ಮತ್ತು ಒಬ್ಬ ನಿಸ್ಪ್ರಹ ಗ್ರಾಮೀಣ ಗಾಯಕನ ಜೀವನ ದರ್ಶನವಿದೆ.ಇದಲ್ಲದೆ ಕೆಲವು ಕಥೆಗಳಲ್ಲಿ ನೀತಿ ಪಾಠ ಹಾಸುಹೊಕ್ಕಾಗಿದೆ. ಆದರೆ ಇದನ್ನು ಪ್ರಯತ್ನಪೂರ್ವಕವಾಗಿ ಮಾಡಿದ ಹಾಗೆ ಕಾಣದು[೫].

ಇವರ ನಾಲ್ಕನೆಯ ಕೃತಿ ನಿಗೂಢ ನಾಣ್ಯ. ಇದು ಪ್ರಾಯಶ: ಕನ್ನಡದಲ್ಲಿ "ಬಿಟ್ ಕಾಯಿನ್" ಮತ್ತು "ಬ್ಲಾಕ್ ಚೈನ್" ಬಗ್ಗೆ ಬಂದ ಮೊದಲ ಕಾಲ್ಪನಿಕ ಕಾದಂಬರಿ. ಇಲ್ಲಿ ಕಥಾನಾಯಕ, ಅಮೇರಿಕಾದಲ್ಲಿ ಬೆಳದ, ಬೆಂಗಳೂರಿನಲ್ಲಿ "ಬಿಟ್ ಕಾಯಿನ್"ಗಳ ವಹಿವಾಟು ಮಾಡುವ ಒಂದು ನವೋಧ್ಯಮ ನಡೆಸುತ್ತಿರುತ್ತಾನೆ. ಅದರಿಂದಾಗಿ ಹಲವು ತೊಂದರೆಗಳಿಗೆ ಈಡಾಗುತ್ತಾನೆ. ಅದರಿಂದ ಅವನು ಹೇಗೆ ಹೊರಬರುತ್ತಾನೆ ಎಂಬುದು ಇಲ್ಲಿಯ ಕಥೆಯ ತಿರುಳು. ಇಲ್ಲಿ "ಬಿಟ್ ಕಾಯಿನ್" ಮತ್ತು "ಬ್ಲಾಕ್ ಚೈನ್", ಹಣ-ಧನ ಇವುಗಳ ಬಗ್ಗೆ ವಿಸ್ತೃತ ಇತಿಹಾಸ ಮತ್ತು ಲೇಖಕರ ವಿಶ್ಲೇಷಣೆಯಿದೆ. ಒಟ್ಟಿನಲ್ಲಿ ಈ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಹೊಂದಿದೆ, ಎಷ್ಟೆಂದರೆ ಇದು ಕನ್ನಡದಲ್ಲಿ "ಬಿಟ್ ಕಾಯಿನ್" ಮತ್ತು "ಬ್ಲಾಕ್ ಚೈನ್" ತಂತ್ರಜ್ಞಾನಗಳ ಕೈಪಿಡಿಯ ರೀತಿಯಿದೆ. ಆದರೆ ಈ ಎಲ್ಲವನ್ನೂ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿದ್ದಾರೆ[೬].

ವಿಠಲ್ ಶೆಣೈರವರ ಪುಸ್ತಕಗಳ ಮುಖಪುಟ
ಪಾರಿವಾಳಗಳು - ಲಲಿತ ಪ್ರಬಂಧಗಳು
ಪಾರಿವಾಳಗಳು - ಲಲಿತ ಪ್ರಬಂಧಗಳು 
ತಾಳಿಕೋಟೆಯ ಕದನದಲ್ಲಿ - ಕಾದಂಬರಿ
ತಾಳಿಕೋಟೆಯ ಕದನದಲ್ಲಿ - ಕಾದಂಬರಿ 
ಹುಲಿ ವೇಷ - ಕಥಾ ಸಂಕಲನ
ಹುಲಿ ವೇಷ - ಕಥಾ ಸಂಕಲನ 
ನಿಗೊಢ ನಾಣ್ಯ - ಕಾದಂಬರಿ
ನಿಗೊಢ ನಾಣ್ಯ - ಕಾದಂಬರಿ 


ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ವಿಠಲ್. "ಮದನಿಕೆ ದಿ ಲಾಸ್ಟ ಸೀನ್ ಪುಸ್ತಕ ರಿವ್ಯೂ". kannada.pratilipi.com. Archived from the original on 28 May 2020. Retrieved 28 May 2020.
  2. "'ಪಾರಿವಾಳಗಳು' – ವಿಠಲ್ ಶೆಣೈ". ಪುಸ್ತಕಪ್ರೇಮಿ. 1 Nov 2018. Archived from the original on 30 ಮೇ 2020. Retrieved 30 May 2020.{{cite web}}: CS1 maint: bot: original URL status unknown (link)
  3. "ತಾಳಿಕೋಟೆಯ ಕದನದಲ್ಲಿ - ಮನಸ್ಸಿನ ತಾಕಲಾಟ". www.varthabharati.in. 3 Sep 2020. Archived from the original (html) on 30 May 2020. Retrieved 30 May 2020.
  4. ಹದಡಿ, ಚನ್ನಮಲ್ಲಿಕಾರ್ಜುನ್ (4 November 2018). "ವರ್ತಮಾನದಲ್ಲಿ ಇತಿಹಾಸ ತೆರೆದಿಡುವ ಕಾದಂಬರಿ". www.vijayavani.net. vijayavani. Archived from the original on 1 June 2020. Retrieved 1 June 2020.
  5. ಕಾರುಣ್ಯಾ (22 Oct 2018). "ಹುಲಿವೇಷ - ಜನಪ್ರಿಯ ದಾಟಿಯ ಕತೆಗಳು". varthabharati.erelego.com. ವಾರ್ತಾ ಭಾರತಿ. Archived from the original (jpg) on 30 May 2020. Retrieved 30 May 2020.
  6. "ನಿಗೂಢ ನಾಣ್ಯ". mylang.in. Archived from the original (html) on 30 May 2020. Retrieved 30 May 2020.

ಹೊರಗಿನ ಕೊಂಡಿಗಳು[ಬದಲಾಯಿಸಿ]

ನಿಗೊಢ ನಾಣ್ಯ - ವಿಠಲ್ ಶೆಣೈ