ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಷ್ಯಾ (Russian: Россия), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯದಲ್ಲಿರುವ ಒಂದು ದೇಶ. ಇದೊಂದು ೮೩ ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್‌, ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ಜಗತ್ತಿನ ಎಂಟನೇ ಒಂದು ಭಾಗದಷ್ಟು ಭೂಪ್ರದೇಶದಲ್ಲಿ ಹರಡಿಕೊಂಡಿರುವ ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ. ಇದು ಯೂರೋಪ್‌ನ ೪೦% ಭಾಗವನ್ನು ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ನಿಕ್ಷೇಪಗಳಿವೆ.