ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತ್ಯಾಗ್ರಹದ ನಡಿಗೆಯಲ್ಲಿ ಗಾಂಧೀಜಿ ಮತ್ತು ಇತರರು

ಉಪ್ಪಿನ ಸತ್ಯಾಗ್ರಹ ಭಾರತ ಇತಿಹಾಸದ ಒಂದು ಪ್ರಮುಖ ಘಟನೆಯಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು, ಉಪ್ಪಿನ ಸತ್ಯಾಗ್ರಹ ಅಥವ ದಂಡಿ ಯಾತ್ರೆ ಎಂದು. ಕರೆಯಲಾಗುತ್ತದೆ.

ಬ್ರಿಟೀಷ್ ಸರ್ಕಾರವು ಸಾಮಾನ್ಯ ಜನರು ಬಳಸುವ ಉಪ್ಪಿನ ಮೇಲೆ ಕರವನ್ನು ವಿಧಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸಿ ಕೊಳ್ಳುತ್ತಿತ್ತು. ಈ ಕರದಡಿಯಲ್ಲಿ ಬ್ರಿಟಿಷ್ ಸರ್ಕಾರದ ಹೊರತು ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ ಅಥವಾ ಮಾರುವಂತಿರಲಿಲ್ಲ. ಸಮುದ್ರ ತಟದಲ್ಲಿದ್ದ ನಾಗರಿಕರಿಗೆ ಸಮುದ್ರದ ಉಪ್ಪು ಪುಕ್ಕಟೆಯಲ್ಲಿ ಸುಲಭವಾಗಿ ದೊರೆಯುವಂತಿದ್ದರೂ ಅವರು ಅದನ್ನು ಸರ್ಕಾರದಿಂದ ಕೊಂಡುಕೊಳ್ಳಬೇಕಾಗಿತ್ತು.ಈ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮ ಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ಸಮುದ್ರ ತಟದಲ್ಲಿರುವ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ, ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಯಾತ್ರೆಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.

ಭಾರತದಾದ್ಯಂತ ಉಪ್ಪಿನ ಸತ್ಯಾಗ್ರಹವು ಸಹಸ್ರಾರು ಜನರನ್ನು ತನ್ನೆಡೆಗೆ ಸೆಳೆಯಿತು ಹಾಗು ತನ್ಮೂಲಕ ವಿಶ್ವದ ಗಮನವನ್ನು ಭಾರತದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹ ಚಳುವಳಿಯತ್ತ ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿ ಸತ್ಯಾಗ್ರಹವು ಒಂದು ಮಹತ್ವಪೂರ್ಣ ಘಟನೆಯಾಗಿತ್ತು.