ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೪
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ) ಹಾಗೂ ಈ ಜಿಲ್ಲೆಗಳಿಗೆ ಅಂಟಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಬಯಲಾಟಗಳಲ್ಲಿ "ತೆಂಕುತಿಟ್ಟು" ಮತ್ತು "ಬಡಗುತಿಟ್ಟು ಎಂಬ ಎರಡು ಪ್ರಮುಖ ಪ್ರಭೇದಗಳನ್ನು ಕಾಣಬಹುದು. ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಡಗುತಿಟ್ಟು ಶೈಲಿಯ ಬಯಲಾಟಗಳು ಕಂಡುಬಂದರೆ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕು ತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಲ್ಲಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ಎರಡೂ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.