ವಾಲ್ಫಗಾಂಗ್ ಪೌಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಲ್ಫಗಾಂಗ್ ಪೌಲಿ
ವಾಲ್ಫಗಾಂಗ್ ಪೌಲಿ
ಮರಣ೧೫ ಡಿಸೆಂಬರ್ ೧೯೫೮, ಜ್ಯೂರಿಕ್, ಸ್ವಿಟ್ಜರ್ಲ್ಯಾಂಡ್
ರಾಷ್ಟ್ರೀಯತೆಆಸ್ಟ್ರಿಯಾ
ಪೌರತ್ವಸ್ವಿಟ್ಜರ್ಲ್ಯಾಂಡ್
ವಿಷಯಭೌತಶಾಸ್ತ್ರ

ಪ್ರಭಾವಗಳು
  • ಕಾರ್ಲ್ ಜಂಗ್


ವಾಲ್ಫಗಾಂಗ್ ಅರ್ನೆಸ್ಟ್ ಪೌಲಿ (25 ಏಪ್ರಿಲ್ 1900 - 15 ಡಿಸೆಂಬರ್ 1958) ಆಸ್ಟ್ರಿಯದಲ್ಲಿ ಹುಟ್ಟಿದ ಒಬ್ಬ ತಾತ್ವಿಕ ಭೌತಶಾಸ್ತ್ರಜ್ಞ ಹಾಗೂ ಕ್ವಾಂಟಮ್ ಭೌತಶಾಸ್ತ್ರದ ಅನ್ವೇಷಕ. ಕ್ರಿ.ಶ. 1945ರಲ್ಲಿ ಆಲ್ಬರ್ಟ್ ಐನ್‍ಸ್ಟೀನ್ ರವರಿಂದ ನಾಮನಿರ್ದೇಶನಗೊಂಡು ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು. ಭೌತಶಾಸ್ತ್ರದಲ್ಲಿ ಅವರ "ಪೌಲಿ ಪ್ರಿನ್ಸಿಪಲ್" ಎಂಬ ಆವಿಷ್ಕಾರವು ಪರಿಭ್ರಮಣ ಸಿದ್ಧಾಂತವನ್ನು ಒಳಗೊಂಡು ಪದಾರ್ಥ ರಚನೆಯ ಸಿದ್ಧಾಂತವನ್ನು ಆಧರಿಸಿ ರಚಿಸಲ್ಪಟ್ಟಿದೆ. [೧]

ಜೀವನಚರಿತ್ರೆ[ಬದಲಾಯಿಸಿ]

ವಾಲ್ಫಗಾಂಗ್ ಜೋಸೆಫ್ ಪೌಲಿ ಎಂಬ ರಸಾಯನಶಾಸ್ತ್ರಜ್ಞ ಹಾಗೂ ಬರ್ತಾ ಕ್ಯಾಮಿಲ್ಲಾ ಸ್ಕೂಜ್ ದಂಪತಿಗಳ ಮಗನಾಗಿ ವಿಯೆನ್ನ ನಗರದಲ್ಲಿ ವಾಲ್ಫಗಾಂಗ್ ಅರ್ನೆಸ್ಟ್ ಪೌಲಿ ಜನಿಸಿದರು. ಪೌಲಿಯವರ ಅಕ್ಕ ಹರ್ತಾ ಪೌಲಿ ಒಬ್ಬ ಲೇಖಕಿ ಹಾಗೂ ನಟಿ. ಪೌಲಿಯವರ ಮಧ್ಯನಾಮವು ಅವರ ಹಿತರಕ್ಷಕ ಹಾಗೂ ಭೌತಶಾಸ್ತ್ರಜ್ಞರೂ ಆದ ಅರ್ನೆಸ್ಟ್ ಮ್ಯಾಕ್ ಅವರ ಗೌರವಾರ್ಥವಾಗಿ ಬಂದಿದೆ. ಪೌಲಿಯವರು ರೋಮನ್ ಕ್ಯಾಥೋಲಿಕರಾಗಿ ಬೆಳೆದರೂ, ತದನಂತರ ಅವರ ಪೋಷಕರು ಚರ್ಚಿಗೆ ಹೋಗುವುದನ್ನು ನಿಲ್ಲಿಸಿದರು. ಪೌಲಿಯವರು ಒಬ್ಬ ತಾರ್ಕಿಕ ದೈವವಾದಿ ಮತ್ತು ಯೋಗಿಯೂ ಹೌದು.

ಪೌಲಿಯವರು ಕ್ರಿ.ಶ. 1918ರಲ್ಲಿ ವಿಯೆನ್ನಾದಲ್ಲಿ ಭೌತಶಾಸ್ತ್ರದ ಪದವಿಯನ್ನು ಪಡೆದರು. ಪದವಿಯ ನಂತರ ಎರಡೇ ತಿಂಗಳುಗಳಲ್ಲಿ ಆಲ್ಬರ್ಟ್ ಐನ್‍ಸ್ಟೀನ್‍ರವರ ಸಾಪೇಕ್ಷತಾ ಸಿದ್ಧಾಂತದ ಬಗೆಗಿನ ತಮ್ಮ ಮೊದಲನೆಯ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. ಮ್ಯೂನಿಕ್ ಲುಡ್ವಿಗ್ ಮ್ಯಾಕ್ಸ್‍ಮಿಲ್ಲನ್ ವಿಶ್ವವಿದ್ಯಾಲಯದಲ್ಲಿ ಅರ್ನಾಲ್ಡ್ ಸೋಮರ್‍ಫೀಲ್ಡ್ ಎಂಬವರ ಮಾರ್ಗದರ್ಶನದಲ್ಲಿ ಅಭ್ಯಸಿಸಿ 1921ರಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದರು.

ಮ್ಯಾಕ್ಸ್ ಬಾರ್ನ್ ಎಂಬವರ ಬಳಿ ಸಹಾಯಕರಾಗಿ ಗೊತ್ತಿಂಗನ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿದರು. ಮುಂದಿನ ಒಂದು ವರ್ಷ ಕೋಪನ್ ಹ್ಯಾಗನ್ನಲ್ಲಿ ನೀಲ್ಸ್ ಬೋರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್‍ನ ಆಧುನಿಕ ಸಿದ್ಧಾಂತವನ್ನು ಪೌಲಿಯವರು ರಚಿಸಿದರು. ಅಣುವಿನ ಒಳಗಿನ ಎಲೆಕ್ಟ್ರಾನ್‍ನ ಬಹಿಷ್ಕರಣ ತತ್ವದ ಸೂತ್ರವನ್ನು ಅವರು ಕಂಡುಹಿಡಿದರು.

1928ರಲ್ಲಿ ಅವರನ್ನು ಸ್ವಿಟ್ಜಲ್ರ್ಯಾಂಡ್‍ನ ಜ್ಯೂರಿಚ್ ಇ.ಟಿ.ಎಚ್.ನಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕರನ್ನಾಗಿ ನೇಮಿಸಲಾಯಿತು. ಅಲ್ಲಿ ಅವರ ವೈಜ್ಞಾನಿಕ ಪ್ರಗತಿ ಗಮನಾರ್ಹವಾಗಿತ್ತು.

1931ರಲ್ಲಿ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಹಾಗೂ 1935ರಲ್ಲಿ ಪ್ರಿನ್ಸ್‍ಟನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಇಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರಿಗೆ 1931ರಲ್ಲಿ ಲಾರೆಂನ್ಜ್ ಪದಕ ನೀಡಿ ಗೌರವಿಸಲಾಯಿತು.

1930ರ ಕೊನೆಯಲ್ಲಿ ತನ್ನ ನ್ಯೂಟ್ರಿನೋ ಸಿದ್ಧಾಂತದ ಅಂಗೀಕಾರದ ನಂತರ ವಿವಾಹ ವಿಚ್ಛೇದನಕ್ಕೊಳಗಾಗಿ ಅವರಿಗೆ ಅತಿಯಾದ ಖಿನ್ನತೆ ಮೂಡಿತು. ಆಗ ಅವರು ಕಾರ್ಲ್ ಜಂಗ್ ಎಂಬ ಮನೋವೈದ್ಯರ ಸಲಹೆಯನ್ನು ಪಡೆದರು. ಕಾರ್ಲ್ ಜಂಗ್ ಕೂಡ ಜ್ಯೂರಿಚ್‍ನಲ್ಲಿ ವಾಸಿಸುತ್ತಿದ್ದರು. ಅವರ ಭೇಟಿಯಿಂದಾಗಿ ಪೌಲಿಯವರು ಮನಶ್ಶಾಸ್ತ್ರದ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರಾದರು. ಪೌಲಿಯವರ 400ಕ್ಕೂ ಹೆಚ್ಚು ಕನಸುಗಳನ್ನು ಜಂಗ್‍ರವರ "ಸೈಕಾಲಜಿ ಆಂಡ್ ಆಲ್ಕೆಮಿ" ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

1938ರಲ್ಲಿ ಆಸ್ಟ್ರಿಯವನ್ನು ಜರ್ಮನಿಯು ಆಕ್ರಮಿಸಿದ ಕಾರಣ ಪೌಲಿಯು ಜರ್ಮನ್ ನಾಗರಿಕರಾದರು.

1939ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇವರು ಬಹಳ ಕಷ್ಟವನ್ನನುಭವಿಸಿದ್ದರು. 1940ರಲ್ಲಿ ಪೌಲಿಯವರು ಅಮೇರಿಕಾದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. [೨]

ವೈಜ್ಞಾನಿಕ ಸಂಶೋಧನೆ[ಬದಲಾಯಿಸಿ]

ನೀಲ್ಸ್ ಬೋರ್ ಹಾಗು ಪೌಲಿ

ಕ್ವಾಂಟಮ್ ಭೌತಶಾಸ್ತ್ರ ಕ್ಷೇತ್ರಕ್ಕೆ ಪೌಲಿಯವರ ಕೊಡುಗೆ ಅಪಾರವಾದುದು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ಮತ್ತು ವರ್ನರ್ ಹೈಸನ್‍ಬರ್ಗ್ ಇವರಿಬ್ಬರು ಪೌಲಿಯವರ ಉತ್ತಮ ಸ್ನೇಹಿತರು. ಇವರೊಂದಿಗೆ ಪೌಲಿಯವರ ಸಂವಹನ ಗಣನೀಯವಾಗಿತ್ತು. 1924ರಲ್ಲಿ ಎರಡು ಸಂಭವನೀಯ ಬೆಲೆಯುಳ್ಳ, ಕ್ವಾಂಟಮ್ ಡಿಗ್ರೀ ಆಫ್ ಫ್ರೀಡಮ್(ಕ್ವಾಂಟಮ್ ಸಂಖ್ಯೆ) ಇದನ್ನು ಜಗತ್ತಿಗೆ ಪರಿಚಯಿಸಿದರು. ಇವರು ಪೌಲಿ ಎಕ್ಸ್ಲೂಷನ್ ತತ್ವವನ್ನು ರೂಪಿಸಿದರು. ಬಹುಶಃ ಇದು ಜಗತ್ತಿಗೆ ಅವರ ಬಲುದೊಡ್ಡ ಕೊಡುಗೆಯಾಗಿದೆ. ಇದರ ಪ್ರಕಾರ ಯಾವುದೇ ಎರಡು ಎಲೆಕ್ಟ್ರಾನ್‍ಗಳು ಒಂದೇ ಕ್ವಾಂಟಮ್ ಸಂಖ್ಯೆಯ ಡಿಗ್ರಿಯ ಆಧಾರದ ಮೇಲೆ ಒಂದೇ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಮುಂದೆ ರಾಲ್ಫ್ ಕ್ರೋನಿಗ್, ಜಾರ್ಜ್ ಉಹ್ಲೆನ್‍ಬೆಕ್ ಹಾಗೂ ಸ್ಯಾಮುಯೆಲ್ ಗೌಡ್ಸ್‍ಮಿತ್ ಇವರು ಪೌಲಿಯ ಕ್ವಾಂಟಮ್ ಡಿಗ್ರೀ ಆಫ್ ಫ್ರೀಡಮ್ ಅನ್ನು ಎಲೆಕ್ಟ್ರಾನ್‍ನ ಪರಿಭ್ರಮಣ ಎಂದು ಗುರುತಿಸಿದಾಗ "ಪರಿಭ್ರಮಣ"ದ ಪರಿಕಲ್ಪನೆಯ ಉಗಮವಾಯಿತು.

1926ರಲ್ಲಿ ಹೈಸನ್‍ಬರ್ಗ್ ತನ್ನ ಕ್ವಾಂಟಮ್ ಮ್ಯಾಟ್ರಿಕ್ಸ್ ಸಿದ್ಧಾಂತವನ್ನು ಪ್ರಕಟಿಸಿದ ನಂತರ ಪೌಲಿಯು ಅದನ್ನು ಉಪಯೋಗಿಸಿ ಹೈಡ್ರೋಜನ್ ಪರಮಾಣುವಿನ ಸ್ಪೆಕ್ಟ್ರಮ್ ಅನ್ನು ಕಂಡುಹಿಡಿದನು. ಇದು ಹೈಸನ್‍ಬರ್ಗ್‍ನ ಸಿದ್ಧಾಂತವನ್ನು ಖಾತರಿಪಡಿಸಿಕೊಳ್ಳುವಲ್ಲಿ ಸಹಕಾರಿಯಾಯಿತು. ಪೌಲಿಯು ಪರಿಭ್ರಮಣ ಸಿದ್ಧಾಂತದ ಆಪರೇಟರ್ ಆಗಿ 2 * 2 ಮಾತ್ರಿಕೆಯನ್ನು ಪರಿಚಯಿಸಿದನು. ಈ ಸಿದ್ಧಾಂತದ ಆಧಾರದ ಮೇಲೆ ಡಿರಾಕ್‍ನು ಸಾಪೇಕ್ಷತಾ ಎಲೆಕ್ಟ್ರಾನ್‍ನ ಬಗೆಗಿನ ಡಿರಾಕ್ ಸಮೀಕರಣವನ್ನು ರಚಿಸಿದನು ಎಂದು ನಂಬಲಾಗಿದೆ.

1930ರಲ್ಲಿ ಪೌಲಿಯು ಬೀಟಾ ಕೊಳೆಯುವಿಕೆಯನ್ನು ವಿವರಿಸಹೊರಟನು. ಬೀಟಾ ಕೊಳೆಯುವಿಕೆಯ ನಿರಂತರ ಸ್ಪೆಕ್ಟ್ರಮ್ ಅನ್ನು ವಿವರಿಸಲು ಪೌಲಿಯು ಅತಿ ಕಡಿಮೆ ತೂಕದ ಅಂದರೆ ಪ್ರೋಟಾನ್‍ನ 1% ತೂಕದ ಒಂದು ತಟಸ್ಥ ಕಣವನ್ನು ಉಲ್ಲೇಖಿಸಿದನು. ಇದನ್ನು ನ್ಯೂಟ್ರಿನೋ ಎಂದು ಕರೆಯಲಾಯಿತು. ಮುಂದೆ ಎನ್ರಿಕೊ ಫರ್ಮಿಯು ತನ್ನ ಬೀಟಾ ಕೊಳೆಯುವಿಕೆ ಸಿದ್ಧಾಂತದಲ್ಲಿ ಈ ನ್ಯೂಟ್ರಾನ್‍ನ ಪರಿಕಲ್ಪನೆಯನ್ನು ಅಳವಡಿಸಿದನು.

1940ರಲ್ಲಿ ಪೌಲಿಯು ಕ್ವಾಂಟಮ್ ಫೀಲ್ಡ್ ಸಿದ್ಧಾಂತದ ಪರಿಣಾಮವಾಗಿ ಜನಿಸಿದ ಪರಿಭ್ರಮಣ-ಸಂಖ್ಯಾಶಾಸ್ತ್ರದ ಪ್ರಮೇಯವನ್ನು ಮರುಸ್ಥಾಪಿಸಿದನು. ಇದರ ಪ್ರಕಾರ ಪೂರ್ಣಾಂಕದ ಅರ್ಧದಷ್ಟು ಪರಿಭ್ರಮಣವಿರುವ ಕಣಗಳು ಫರ್ಮಿಯಾನ್‍ಗಳು ಹಾಗೂ ಪೂರ್ಣಾಂಕದಷ್ಟು ಪರಿಭ್ರಮಣವಿರುವ ಕಣಗಳು ಬೋಸೋನ್‍ಗಳಾಗಿವೆ.

1949ರಲ್ಲಿ ಪೌಲಿಯು 'ಪೌಲಿ- ವಿಲ್ಲರ್ ಕ್ರಮಬದ್ಧಗೊಳಿಸುವಿಕೆ' ಇದರ ಬಗ್ಗೆ ಪ್ರಬಂಧವನ್ನು ಮಂಡಿಸಿದನು. ಇದರ ಪರಿಣಾಮವಾಗಿ ಕ್ವಾಟಮ್ ಕ್ಷೇತ್ರದ ತತ್ವಗಳಿಂದ ಅಪರಿಮಿತ ಪರಿಮಾಣಗಳನ್ನು ತೆಗೆಯಲು ಸಾಧ್ಯವಾಯಿತು. ಪುನರಾವರ್ತಿತ ವಿಕಾಸ ಜೀವಶಾಸ್ತ್ರದ ಆಧುನಿಕ ಸಂಶ್ಲೇಷಣೆಯಲ್ಲೂ ಪೌಲಿಯ ಪಾತ್ರ ಮಹತ್ವದ್ದು.

[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಮೇ 1929ರಲ್ಲಿ ಪೌಲಿಯು ರೋಮನ್ ಕ್ಯಾತೋಲಿಕ್ ಚರ್ಚಿಗೆ ಹೋಗುವುದನ್ನು ಬಿಟ್ಟರು. ಅದೇ ವರ್ಷದ ಡಿಸೆಂಬರ್‍ನಲ್ಲಿ ಅವರು ಕೇಥ್ ಮಾರ್ಗರೀಟ್ ಡಿಪೆನ್ನರ್‍ರನ್ನು ವಿವಾಹವಾದರು. ಅವರ ದಾಂಪತ್ಯ ಜೀವನ ಸುಖಕರವಾಗಿರಲಿಲ್ಲ. ಆದ್ದರಿಂದ ಕೇವಲ ಮೂರು ವರ್ಷದಲ್ಲಿ ವಿವಾಹ ವಿಚ್ಛೇದನವಾಯಿತು. ಅವರ ಎರಡನೆಯ ಮದುವೆ ಫ್ರಾನಿಸ್ಕಾ ಬಟ್ರ್ರಮ್‍ರೊಂದಿಗೆ 1934ರಲ್ಲಿ ನಡೆಯಿತು. ಅವರಿಗೆ ಮಕ್ಕಳಾಗಿರಲಿಲ್ಲ.

1958ರಲ್ಲಿ ಪೌಲಿಗೆ ಮ್ಯಾಕ್ಸ್ ಪ್ಲಾಂಕ್ ಪದಕವನ್ನು ನೀಡಲಾಯಿತು. ಅದೇ ವರ್ಷದಲ್ಲಿ ಅವರಿಗೆ ಪ್ಯಾನ್ಕ್ರಿಯಾಟಿಕ್ ಕ್ಯಾನ್ಸರ್ ಉಂಟಾಯಿತು. ತನ್ನ ಕೊನೆಯ ಸಹಾಯಕನಾದ ಚಾಲ್ರ್ಸ್ ಎನ್ಜ್ ಅವರನ್ನು ರಾಟಕ್ರಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದಾಗ ಪೌಲಿಯು, "ನೀನು ಕೊಠಡಿಯ ಸಂಖ್ಯೆಯನ್ನು ನೋಡಿದೆಯಾ?" ಎಂದು ಕೇಳಿದರು. ಕೊಠಡಿ ಸಂಖ್ಯೆ 137 ಆಗಿತ್ತು. ಪೌಲಿಯು ತನ್ನ ಜೀವನದುದ್ದಕ್ಕೂ ಆಯಾಮವಿಲ್ಲದ, ರಚನೆಯ ನಿಯತದ ಬೆಲೆಯು ಏಕೆ 1/137 ಆಗುತ್ತದೆ ಎಂಬ ಪ್ರಶ್ನೆಯಲ್ಲೇ ಮುಳುಗಿದ್ದರು. ಡಿಸೆಂಬರ್ 15ರಂದು ಅದೇ ಕೋಣೆಯಲ್ಲಿ ಮರಣಿಸಿದಾಗ ಪೌಲಿಯ ವಯಸ್ಸು 58!

ಉಲ್ಲೇಖಗಳು[ಬದಲಾಯಿಸಿ]

  1. [೧]/ನೊಬೆಲ್ ಪ್ರಶಸ್ತಿ]
  2. [೨] Archived 2016-04-01 ವೇಬ್ಯಾಕ್ ಮೆಷಿನ್ ನಲ್ಲಿ./ಜೀವನ ಚರಿತ್ರೆ]
  3. [೩]/ಅವರ ಸಂಶೋಧನೆ]