ವಾಯು ಸ್ತುತಿ

ವಿಕಿಪೀಡಿಯ ಇಂದ
Jump to navigation Jump to search

ವಾಯು ಸ್ತುತಿಯು ಅತಿ ಪ್ರಸಿದ್ಧವಾದ ವೈಷ್ಣವ ಸ್ತೋತ್ರಗಳಲ್ಲಿ ಒಂದು. ಇದನ್ನು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀ ಮಧ್ವಾಚಾರ್ಯರನ್ನು ಸ್ತುತಿಸುತ್ತ ರಚಿಸಿದ್ದು. ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತದ ಸಂಸ್ಥಾಪಕರಾಗಿದ್ದು, ಅವರ ಅನುಯಾಯಿಗಳು ಶ್ರೀ ಮಧ್ವಾಚಾರ್ಯರನ್ನು ಮುಖ್ಯಪ್ರಾಣ ದೇವರ ಅಥವಾ ವಾಯು ದೇವರ ಅವತಾರವೆಂದು ಭಾವಿಸುತ್ತಾರೆ. ವಾಯು ಸ್ತುತಿಯು ಈ ನಂಬಿಕೆಯನ್ನು ಗುರುತಿಸುವ ಸ್ತುತಿಯಾಗಿದೆ.


ಉಗಮ[ಬದಲಾಯಿಸಿ]

ಮಧ್ವಾಚಾರ್ಯರ ಜೀವನ ಚರಿತ್ರೆಯಲ್ಲಿ ಬರುವ ಒಂದು ದೃಷ್ಟಾಂತ ವಾಯು ಸ್ತುತಿ ಹೇಗೆ ಹುಟ್ಟಿತು ಎಂದು ಹೇಳುತ್ತದೆ. ಆಚಾರ್ಯ ಶ್ರೀ ಮಧ್ವರು ದಿನವೂ ಉಡುಪಿಯಲ್ಲಿ ಶ್ರೀ ಕೃಷ್ಣನ ಮಂದಿರದ ಗರ್ಭ ಗುಡಿಯಲ್ಲಿ ಪೂಜೆಯನ್ನು ನೆರವೇರಿಸುತ್ತಿದ್ದಾಗ ಅವರ ಪ್ರಿಯ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಹೊರಗೆ ದ್ವಾದಶ ಸ್ತೋತ್ರವನ್ನು ಪಠಿಸುತ್ತಿದ್ದರಂತೆ. ಗರ್ಭ ಗುಡಿಯ ಬಾಗಿಲು ಮುಂದೆ ಮಾಡಿ ಕೃಷ್ಣನಿಗೆ ನೈವೇದ್ಯ ಮಾಡಿ ಗಂಟೆ ಬಾರಿಸಿ ಬಾಗಿಲು ತೆರೆಯುತ್ತಿದ್ದರು. ಒಂದು ದಿನ, ಬಹಳ ಹೊತ್ತಿನವರೆಗೂ ಬಾಗಿಲು ತೆರೆಯದಿದ್ದನ್ನು ನೋಡಿ ತ್ರಿವಿಕ್ರಮ ಪಂಡಿತಾಚಾರ್ಯರಿಗೆ ಅತಿಯಾದ ಕುತೂಹಲವಾಗಿ ಬಾಗಿಲ ಸಂದಿಯಲ್ಲಿ ಇಣುಕಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಒಳಗೆ ಶ್ರೀ ಮಧ್ವಾಚಾರ್ಯರು ವಾಯು ದೇವರ ಮೂರೂ ಅವತಾರಗಳಲ್ಲಿ ತಮ್ಮ ತಮ್ಮ ಆರಾಧ್ಯ ದೇವತೆಗಳನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಮೊದಲ ಅವತಾರವಾಗಿ ಹನುಮಂತನು ಶ್ರೀ ರಾಮನನ್ನು, ಎರಡನೆ ಅವತಾರವಾಗಿ ಭೀಮಸೇನನು ಶ್ರೀ ಕೃಷ್ಣನನ್ನು ಮತ್ತು ಮಧ್ವಾಚಾರ್ಯರಾಗಿ ಶ್ರೀ ವೇದವ್ಯಾಸರನ್ನು ಪೂಜಿಸುತ್ತಿರುವ ಸುಂದರ ದೃಶ್ಯವನ್ನು ನೋಡಿ ಭಕ್ತಿಯಿಂದ ಪುನೀತರಾಗಿ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ವಾಯು ಸ್ತುತಿಯನ್ನು ರಚಿಸಿ ಮಧ್ವಾಚಾರ್ಯರಿಗೆ ಅರ್ಪಿಸಿದರು.


ನರಸಿಂಹ ನಖ ಸ್ತುತಿ[ಬದಲಾಯಿಸಿ]

ವಾಯು ಸ್ತುತಿಯಲ್ಲಿ ೪೧ ಪ್ಯಾರಾಗಳಿವೆ. ಈ ಸ್ತುತಿಯನ್ನು ಪಠಿಸುವಾಗ, ನರಸಿಂಹ ನಖ ಸ್ತುತಿಯನ್ನು ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪಠಿಸುವ ವಾಡಿಕೆಯಿದೆ. ನರಸಿಂಹ ನಖ ಸ್ತುತಿಯು ಚಿಕ್ಕದಾದ ಎರಡು ಪ್ಯಾರಾ ಉದ್ದವಿದ್ದು ಶ್ರೀ ಮಧ್ವಾಚಾರ್ಯರು ನರಸಿಂಹ ದೇವರನ್ನು ಸ್ತುತಿಸುತ್ತ ಈ ಮಂತ್ರವನ್ನು ರಚಿಸಿದ್ದಾರೆ. ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ವಾಯು ಸ್ತುತಿಯನ್ನು ರಚಿಸಿ ಆಚಾರ್ಯ ಮಧ್ವರಿಗೆ ಅರ್ಪಿಸಿದಾಗ ಆಚಾರ್ಯರು ಬರೀ ತಮ್ಮ ಪ್ರಶಂಸೆ ಮಾತ್ರ ಬೇಡವೆಂದು ತಕ್ಷಣವೇ ನಖ ಸ್ತುತಿಯನ್ನು ರಚಿಸಿ ಅದನ್ನು ವಾಯು ಸ್ತುತಿಯ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪಠಿಸಬೇಕೆಂದು ಆದೇಶಿಸಿದರು.

ವಾಯು ಸ್ತುತಿಯನ್ನು ಹರಿ ವಾಯು ಸ್ತುತಿ ಎಂದೂ ಕರೆಯುತ್ತಾರೆ.