ವನವಾಸಿ ಕಲ್ಯಾಣ ಆಶ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರ ಕರ್ನಾಟಕದಲ್ಲಿ ಸಿದ್ದಿಗಳಿಗಾಗಿ ವನವಾಸಿ ಕಲ್ಯಾಣ ಆಶ್ರಮವು ನಡೆಸುತ್ತಿರುವ ಶಾಲೆಯ ಒಂದು ದೃಶ್ಯ

ವನವಾಸಿ ಕಲ್ಯಾಣ ಆಶ್ರಮವು ಭಾರತದ ಬುಡಕಟ್ಟು ಜನ ಮತ್ತು ಗಿರಿಜನರ (ವನವಾಸಿಗಳು) ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಅಭಿವೃದ್ಡಿಗಾಗಿ ಶ್ರಮಿಸುತ್ತಿರುವ ಅಖಿಲ ಭಾರತ ಮಟ್ಟದ ಸೇವಾಸಂಸ್ಥೆಯಾಗಿದೆ. ಆಶ್ರಮವು ದೂರದ ವನವಾಸಿ ಗ್ರಾಮ/ಹಾಡಿಗಳಲ್ಲಿ ತನ್ನ ಸೇವಾ ಕಾರ್ಯಗಳ ಮೂಲಕ ಹಾಗೂ ಹಲವು ಹತ್ತು ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ವನವಾಸಿ ಬಂಧುಗಳು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಲು ಶ್ರಮಿಸುತ್ತಿದೆ. ಸಂಸ್ಥೆಯ ಕೆಲಸವು ರಾಷ್ಟ್ರವ್ಯಾಪಿ ಮಟ್ಟದಲ್ಲಿ ನಡೆಯುತ್ತಿದೆ. ೨೦೦೨ರಲ್ಲಿ (ವಾರಾಣಾಸಿ|ವಾರಾಣಸಿ)ಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಆಶ್ರಮದ ರಾಷ್ಟ್ರೀಯ ಆಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ ಇದು ದೇಶದ ೩೧೨ ಜಿಲ್ಲೆಗಳಲ್ಲಿ ವನವಾಸಿಗಳ ಕ್ಷೇಮಾಭಿವೃದ್ಢಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ೧೨೦೩ ಪೂರ್ಣಾವಧಿ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ಈ ಮಹತ್ತರ ಕೆಲಸ ನಡೆಯುತ್ತಿದೆಯೆಂದೂ ಸಹ ಅವರು ತಿಳಿಸಿದರು. ಕೃಷಿ, ಆರೋಗ್ಯ, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೇಮಾಭಿವೃದ್ಢಿಯೇ ಈ ಯೋಜನೆಗಳ ಉದ್ದೇಶವಾಗಿದೆ. ವನವಾಸಿಗಳು ವಾಸವಾಗಿರುವ ಬಹುತೇಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆ, ವಸತಿ ಸಹಿತ ಶಾಲೆ, ವಿದ್ಯಾರ್ಥಿ ನಿಲಯ, ಗ್ರಂಥಾಲಯ ಮತ್ತು ಆರೋಗ್ಯ ಕೇಂದ್ರಗಳನ್ನು ಆಶ್ರಮವು ನಡೆಸುತ್ತದೆ. ವಾರ್ಷಿಕವಾಗಿ ನಡೆಯುವ ಹಲವಾರು ಆಯೋಜನೆಗಳಲ್ಲಿ ವೈದ್ಯಕೀಯ ಶಿಬಿರ, ಪಾರಂಪರಿಕ ಕ್ರೀಡೆಗಳ ಸ್ಪರ್ದಾಕೂಟ, ಮತ್ತು ಬುಡಕಟ್ಟು ಜನರ ಹಬ್ಬಗಳ ಆಚರಣೆಗಳು ಮುಖ್ಯವಾದವುಗಳು.[೧]. ಕರ್ನಾಟಕದಲ್ಲಿ ೨೦೧೫ನೇ ಇಸವಿಯಲ್ಲಿ ವನವಾಸಿ ಕಲ್ಯಾಣ ಆಶ್ರಮ ರಾಜ್ಯದ ೧೦ ಜಿಲ್ಲೆಗಳ ೨೧ ತಾಲೂಕುಗಳಲ್ಲಿ ಕಾರ್ಯನಿರವಹಿಸುತ್ತಿತ್ತು[೨].

ಕ್ಷೇಮಾಭಿವೃದ್ಢಿ[ಬದಲಾಯಿಸಿ]

ಆಶ್ರಮದಿಂದ ಆಯೋಜಿತ ಒಂದು ಕಾರ್ಯಕ್ರಮದಲ್ಲಿ ವನವಾಸಿ ಬಂಧುಗಳಿಂದ ಜಾನಪದ ನೃತ್ಯ

ಆರ್ಥಿಕ[ಬದಲಾಯಿಸಿ]

ಶೈಕ್ಷಣಿಕ[ಬದಲಾಯಿಸಿ]

ವನವಾಸಿಗಳಲ್ಲಿ ಶಿಕ್ಷಣ ಮಟ್ಟ ಅತ್ಯಂತ ಕಡಿಮೆ ಇದೆ. ಇದನ್ನು ಮನಗಂಡು ಆಶ್ರಮವು ಎರಡು ಪ್ರಕಾರಗಳಲ್ಲಿ ಕಾರ್ಯ ಕೈಗೊಂಡಿದೆ.[೩][೪]

  • ಅನೌಪಚಾರಿಕ ಶಿಕ್ಷಣ

ಇದರಲ್ಲಿ ವನವಾಸಿ ಹಾಡಿಗಳಲ್ಲಿನ ಎಲ್ಲಾ ವಯಸ್ಸಿನ ಜನಗಳಿಗೂ ಮುಟ್ಟುವಂತೆ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಶಿಶುಮಂದಿರ: ೩ ರಿಂದ ೬ ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿದಿನ ೩ ಗಂಟೆಗಳ ಕಾಲ ಶಿಶುಗೀತೆ, ನೃತ್ಯ, ಶ್ಲೋಕ, ಆಟ, ಬಾಯಿಪಾಟ, ಕಥೆ ಮುಂತಾದ ಪ್ರಾಥಮಿಕ ಸಂಗತಿಗಳನ್ನು ಕಲಿಸಲಾಗುತ್ತದೆ. ಇದು ನಗರದಲ್ಲಿ ನಡೆಯುವ ಪೂರ್ವ ಪ್ರಾಥಮಿಕ ಶಾಲೆಯ ಹೋಲಿಕೆಯಂತಿದ್ದು, ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ.

ಬಾಲ ಸಂಸ್ಕಾರ ಕೇಂದ್ರ: ೬ ರಿಂದ ೧೪ ವಯಸ್ಸಿನ ಮಕ್ಕಳಿಗಾಗಿ ಮೂರು ಗಂಟೆಗಳ ಕಾಲ ಆಟ, ಭಜನೆ, ದೇಶಭಕ್ತಿ ಗೀತೆ ಮತ್ತು ಕಥೆ ಹೇಳಿಕೊಡುವ ಕೇಂದ್ರ.

ಮನೆ ಪಾಠ: ಬಾಲ ಸಂಸ್ಕಾರ ಕೇಂದ್ರದ ಮುಂದುವರಿದ ಭಾಗವಾಗಿ ಶಾಲೆ ಬಿಟ್ಟ ಮಕ್ಕಳಿಗೆ ಮತ್ತು ಹಿರಿಯರಿಗೆ ಅಕ್ಷರಾಭ್ಯಾಸ ಮಾಡಿಸುವುದು. ಹಾಗೂ ಶಾಲೆಗೆ ಹೋಗುವ ಮಕ್ಕಳಿಗೆ ಪಾಠ ಪ್ರವಚನಗಳನ್ನು ನಡೆಸುವದು.

ಈ ಎಲ್ಲಾ ಚಟುವಟಿಕೆಗಳನ್ನು ವನವಾಸಿ ಹಾಡಿಗಳಲ್ಲಿ ವಸತಿ ಮಾಡುವ ಆಶ್ರಮದ ಪೂರ್ಣಾವಧಿ ಮಹಿಳಾ ಸೇವಾವ್ರತಿಗಳು ನಡೆಸುತ್ತಾರೆ.

  • ವಿದ್ಯಾರ್ಥಿ ನಿಲಯ
೨೦೧೫ರಲ್ಲಿ ಕೇಂದ್ರೀಯ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವಲ್ ಓರಮ್, ಪಶ್ಚಿಮ ಬಂಗಾಳದ ಜಲ್ಪಾಯಿಗುರಿಯಲ್ಲಿ ವನವಾಸಿ ಕಲ್ಯಾಣ ಆಶ್ರಮದಿಂದ ನಡೆಸಲಾಗುವ ಬಾಲಕರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದರು.

ವನವಾಸಿ ಕಲ್ಯಾಣ ಆಶ್ರಮವು ಹಾಡಿಗಳ ಮಕ್ಕಳಿಗೋಸ್ಕರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವದರ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಅನುಕೂಲತೆಗಳನ್ನು ಕಲ್ಪಿಸಿದೆ. ಕರ್ನಾಟಕದಲ್ಲಿ ಪ್ರಸ್ತುತ ಇಂತಹ ೬ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದೆ. ಹೆಣ್ಣುಮಕ್ಕಳಿಗಾಗಿ ದಾಂಡೇಲಿಯಲ್ಲಿ ಮತ್ತು ಗಂಡು ಮಕ್ಕಳಿಗಾಗಿ ಚಿಪಗೇರಿ, ಅಂಬಿಕಾನಗರ, ಕುಮಟಾ ಹಾಗೂ ಮಂಗಲಗಳಲ್ಲಿ ಇವೆ. ಮಂಗಳೂರಿನ ಸುಳ್ಯದ ಅಡ್ಕಾರ್ ಎಂಬ ಪ್ರದೇಶದಲ್ಲಿ [೨] ೨೦೧೫ರಲ್ಲಿ ೬ನೇ ನಿಲಯ ಶುರುವಾಯಿತು. ಈ ವಿದ್ಯಾರ್ಥಿನಿಲಯಗಳಲ್ಲಿ ಪಠ್ಯೇತರ ಚಟುವಟಿಕೆಗಳಾದ ಆಟಗಳು, ಯೋಗಾಸನ, ಶಾರೀರಿಕ ಶಿಕ್ಷಣಗಳಲ್ಲದೆ ಸಂಸ್ಕಾರಪೂರಕವಾದ ಭಜನೆ, ದೇಶಭಕ್ತಿಗೀತೆ, ವೀರಪುರುಷರ ಕಥೆಗಳು, ಶ್ಲೋಕಗಳು, ನೃತ್ಯ ಇತ್ಯಾದಿಗಳನ್ನು ಕಲಿಸಲಾಗುತ್ತದೆ. ಜ್ಞಾನಾರ್ಜನೆಗಾಗಿ ಪುಸ್ತಕ ಭಂಡಾರದ ವ್ಯವಸ್ತೆಯೂ ಇದೆ.

ದೂರದುಸ್ತರವಾದ ಸರಕಾರಿ ಶಾಲೆಗಳಿಲ್ಲದ ವನವಾಸಿ ಹಾಡಿಗಳಲ್ಲಿ ಆಶ್ರಮವು ಏಕಲ್ ವಿದ್ಯಾಲಯಗಳ ಜಾಲವನ್ನೇ ಹೊಂದಿದೆ. ಇವು ಒಬ್ಬ ಶಿಕ್ಷಕರಿಂದಲೇ ನಡೆಸಲ್ಪಡುವ ಶಾಲೆಗಳಾಗಿರುತ್ತವೆ.[೪]

ಪಾರಂಪರಿಕ ಕ್ರೀಡೆಗಳು[ಬದಲಾಯಿಸಿ]

ವನವಾಸಿ ಕಲ್ಯಾಣ ಆಶ್ರಮದಿಂದ ಆಯೋಜಿತ ಬಿಲ್ಲುವಿದ್ಯೆ ಸ್ಪರ್ದೆಯಲ್ಲಿ ಪಾಲ್ಗೊಂಡ ವನವಾಸಿ ಬಂಧುಗಳು

ಸಂಸ್ಕೃತಿಯ ರಕ್ಷಣೆ[ಬದಲಾಯಿಸಿ]

ವನವಾಸಿ ಕಲ್ಯಾಣ ಆಶ್ರಮವು ವನವಾಸಿ ಬಂಧುಗಳ ಸಂಸ್ಕೃತಿಯ ರಕ್ಷಣೆ, ಪೋಷಣೆ ಮಾಡುತ್ತಿದೆ. ಜೊತೆಗೆ ಅವರ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸತತವಾಗಿ ಕಾರ್ಯನಿರ್ವಹಿಸುತ್ತದೆ [೫]

ಸೇವಾ[ಬದಲಾಯಿಸಿ]

ವನವಾಸಿ ಹಾಡಿಗಳಿಗೆ ಹಾದಿ ಸಾಮಾನ್ಯವಾಗಿ ದುಸ್ತರವಾಗಿರುತ್ತದೆ. ಯಾವುದಾದರೂ ದೊಡ್ಡ ತೊಂದರೆ ಬಂದಾಗ ಅಲ್ಲಿರುವ ವನವಾಸಿ ಬಂಧುಗಳಿಗೆ ಜೀವನಾವಶ್ಯಕ ವಸ್ತುಗಳು ಸಿಗುವುದು ದುಸ್ತರವಾಗುತ್ತದೆ. ವನವಾಸಿ ಕಲ್ಯಾಣ ಆಶ್ರಮವು ಇಂತಹ ಸಮಯದಲ್ಲಿ ಕಾರ್ಯನಿರ್ವಹಿಸಿದ ಕೆಲ ಉದಾಹರಣೆಗಳಲ್ಲಿ ಕೆಲವು ಹೀಗಿದೆ.

  • ೨೦೧೬ನೇ ಇಸವಿಯಲ್ಲಿ ಬಿಹಾರದ ಪ್ರವಾಹದ ಸಮಯ, ಗಂಜೀ ಕೇಂದ್ರಗಳನ್ನು ನಿರ್ವಹಿಸಿದ ಕಾರಣ ಹಲವು ವನವಾಸಿ ಪರಿವಾರಗಳಿಗೆ ಸಹಾಯ ತಲುಪಿತು[೬].
  • ಇತ್ತೇಚೆಗೆ ಕೋವಿಡ್-೧೯ ಮಹಾಮಾರಿಯಿಂಧ ಸುಮಾರು ೧೩ ಜಿಲ್ಲೆಗಳ, ೬,೦೦೦ ವನವಾಸಿ ಬಂಧುಗಳ ನೆರವಿಗೆ "Reaching the Unreached" (ನೆರವು ತಲುಪದವರಿಗೆ ತಲುಪಿಸುವ ಸೇವಾಕಾರ್ಯ) ಎಂಬ ಕಾರ್ಯಕ್ರಮದ ಮೂಲಕ ಮುಟ್ಟಿತು[೭].
  • ದೇಶದೆಲ್ಲಾ ವನವಾಸಿ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಊಟ, ಮಾಸ್ಕ ಮುಂತಾದ ಅತ್ಯಂತ ಉಪಯುಕ್ತವಾದ ವಸ್ತುಗಳನ್ನು ತಲುಪಿಸಿದರು.[೮].
  • ಈ ಸಮಯದಲ್ಲಿ ವನವಾಸಿ ಬಂಧುಗಳ ಪ್ರಾಮಾಣಿಕತೆಯ ಅನುಭವವೂ ವನವಾಸಿ ಕಲ್ಯಾಣ ಆಶ್ರಮದ ಸ್ವಯಂಸೇವಕರಿಗಾಯಿತು. ಕರ್ನಾಟಕದ ಬಸವನಬೆಟ್ಟ ಕಾಡಿನಲ್ಲಿ ಸೇವಾಕಾರ್ಯಕ್ಕೆ ಹೋಗಿದ್ದಾಗ ಪ್ರಾಮಾಣಿಕವಾಗಿ ಬೇಕಾದಷ್ಟು ಸಹಾಯ ಮಾತ್ರ ಪಡೆದು ಉಳಿದದ್ದು ಇತರ ವನವಾಸಿಗಳಿಗೆ ಕೊಡಲು ಹೇಳಿದರು [೯].

ಆಧಾರ/ಆಕರಗಳು[ಬದಲಾಯಿಸಿ]

  1. ಗೋವಿಂದ ಚಂದ್ರ ರಥ್, ಟ್ರೈಬಲ್ ಡೆವೆಲಪ್ಮೆಂಟ್ ಇನ್ ಇಂಡಿಯಾ, ೨೦೦೬, ಇಂಗ್ಲೀಷ್
  2. ೨.೦ ೨.೧ "ವನವಾಸಿ ಕಲ್ಯಾಣ ಆಶ್ರಮದಿಂದ ವನವಾಸಿ ವಿಧ್ಯಾರ್ಥಿಗಳಿಗಾಗಿ ಕರ್ನಾಟಕದಲ್ಲಿ ೬ನೇ ವಿಧ್ಯಾರ್ಥಿ ನಿಲಯ". samvada.org. samvada. Archived from the original on 13 ಜೂನ್ 2018. Retrieved 7 May 2020.{{cite web}}: CS1 maint: bot: original URL status unknown (link)
  3. ವಾರ್ಷಿಕ ವರದಿ ೨೦೦೮-೦೯, ವನವಾಸಿ ಕಲ್ಯಾಣ (ರಿ) ಕರ್ನಾಟಕ
  4. ೪.೦ ೪.೧ ಏಮಿಂಗ್ ಹೈ: ವನವಾಸಿ ಕಲ್ಯಾಣ ಆಶ್ರಮ ಈಜ್ ಹೆಲ್ಪಿಂಗ್ ಟ್ರೈಬಲ್ಸ್ ಅಛೀವ್ ಸೆಲ್ಫ್-ರಿಲೈಯನ್ಸ್, ದಿ ಹಿಂದು, ಆಂಗ್ಲ ದಿನಪತ್ರಿಕೆ, ಶನಿವಾರ, ಫೆಬ್ರುವರಿ ೨೫, ೨೦೦೬
  5. "ವನವಾಸಿ ಕಲ್ಯಾಣ ಆಶ್ರಮದಿಂದ ೧೦ ಲಕ್ಷ ವನವಾಸಿ ಪರಿವಾರಗಳ ರಕ್ಷಣೆಗಾಗಿ ಸುಗ್ರೀವಾಜ್ಞೆಗಾಗಿ ಆಗ್ರಹ". www.news18.com. news18. Archived from the original on 27 ಫೆಬ್ರವರಿ 2019. Retrieved 7 May 2020.{{cite web}}: CS1 maint: bot: original URL status unknown (link)
  6. "ಬಿಹಾರದಲ್ಲಿ ವನವಾಸಿ ಕಲ್ಯಾಣ ಆಶ್ರಮದ ಸೇವಾಕಾರ್ಯ". www.jagran.com. jagran. Retrieved 7 May 2020.
  7. "ಕೋವಿಡ್-೧೯ ಸಮಯದಲ್ಲಿ ವನವಾಸಿ ಕಲ್ಯಾಣ ಆಶ್ರಮದಿಂದ ಸೇವಾಕಾರ್ಯ". samvada.org. samvada. Archived from the original on 4 ಮೇ 2020. Retrieved 7 May 2020.{{cite web}}: CS1 maint: bot: original URL status unknown (link)
  8. ಕುಮಾರ್, ಡಾ. ಪ್ರಮೋದ್. "ಅತ್ಯಂತ ತೊಂದರೆಯಲ್ಲಿರುವವರಿಗೆ ವನವಾಸಿ ಕಲ್ಯಾಣ ಆಶ್ರಮದಿಂದ ಪರಿಹಾರ ಕಾರ್ಯ". www.organiser.org. organiser. Archived from the original on 7 ಮೇ 2020. Retrieved 7 May 2020.{{cite web}}: CS1 maint: bot: original URL status unknown (link)
  9. ವೈದ್ಯರಾಜ್, ಪ್ರಶಾಂತ. "ಕೋವಿಡ್-೧೯ ಸಮಯದಲ್ಲಿ ವನವಾಸಿಗಳ ಪ್ರಾಮಾಣಿಕತೆಯ ದರ್ಶನ". www.organiser.org. organiser. Archived from the original on 7 ಮೇ 2020. Retrieved 7 May 2020.{{cite web}}: CS1 maint: bot: original URL status unknown (link)

ಹೊರಗಿನ ಕೊಂಡಿಗಳು[ಬದಲಾಯಿಸಿ]