ರಾಸಯನಿಕ ಚಕ್ರಗಳು

ವಿಕಿಪೀಡಿಯ ಇಂದ
Jump to navigation Jump to search

'ಜೀವಭೂರಾಸಾಯನಿಕ ಚಕ್ರವು' ಹೆಸರೇ ಹೇಳುವಂತೆ ಜೈವಿಕ, ರಾಸಯನಿಕ ಮತ್ತು ಭೌಮಿಕ ಘಟಕಗಳನ್ನೊಳಗೊಂಡಿದೆ. ಇಂಗಾಲ(ಕಾರ್ಬನ್), ಆಮ್ಲಜನಕ(ಆಕ್ಸಿಜನ್), ಸಾರಜನಕ(ನೈಟ್ರೋಜನ್), ನೀರು, ರಂಜಕ(ಫೊಸ್ಫೊರಸ್), ಗಂಧಕ(ಸಲ್ಫರ್) ಮುಂತಾದ ಪೋಷಕಾಂಶಗಳು ಜೈವಿಕ ಮತ್ತು ಭೌತಿಕ ಜಗತ್ತಿನ ನಡುವೆ ನಿರಂತರವಾಗಿ ವಿನಿಮಯಗೊಳ್ಳುತ್ತವೆ. ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಚಕ್ರೀಯ ಚಲನೆಯನ್ನು, ಜೀವಭೂರಾಸಾಯನಿಕ ಚಕ್ರ ಎನ್ನುವರು. ಯಾವುದೇ ಜೀವಭೂರಾಸಾಯನಿಕ ಚಕ್ರದಲ್ಲಿ ಎರಡು ಘಟಕ ಅಥವಾ ಆಕರಗಳು ಇರುತ್ತವೆ. ಅವು :

 • ಸಂಗ್ರಹ ಆಕರ ಮತ್ತು
 • ವಿನಿಮಯ ಆಕರ.

ಸಂಗ್ರಹ ಆಕರವು ವಾಯುಗೋಳ, ಜಲಗೋಳ ಮತ್ತು ಶಿಲಾಗೋಳಗಳನ್ನು ಒಳಗೊಂಡಿರುತ್ತದೆ. ಇದು ಅಜೈವಿಕ ಘಟಕಗಳಿಂದಾದದ್ದು. ಈ ಆಕರದಲ್ಲಿ ರಾಸಾಯನಿಕಗಳ ಚಲನೆಯು ನಿಧಾನಗತಿಯಲ್ಲಿರುತ್ತದೆ. ವಿನಿಮಯ ಆಕರವು ಜೀವಿಗೋಳದ ಜೈವಿಕ ಘಟಕಗಳನ್ನು ಒಳಗೊಂಡಿರುತ್ತದೆ. ಸೂಕ್ಷ್ಮ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಈ ಆಕರವನ್ನು ಪ್ರತಿನಿಧಿಸುತ್ತವೆ. ಈ ಆಕರದಲ್ಲಿ ವಸ್ತುಗಳ ಚಲನೆಯು ಶೀಘ್ರಗತಿಯಲ್ಲಿರುತ್ತದೆ. ಸಂಗ್ರಹ ಆಕರದಿಂದ ಪೋಷಕಾಂಶಗಳು ವಿನಿಮಯ ಆಕರಕ್ಕೆ ಚಲಿಸುವುದು ಅಥವಾ ಪ್ರವೇಶಿಸುವುದನ್ನು ಸ್ಥಿರೀಕರಣ ಎನ್ನುವರು. ಪೋಷಕಗಳು ವಿನಿಮಯ ಆಕರದಿಂದ ಸಂಗ್ರಹ ಆಕರಕ್ಕೆ ಹಿಂದಿರುಗುವುದನ್ನು ಮರುಚಕ್ರೀಕರಣ ಎನ್ನುವರು. ಅನಿಲದ ಚಕ್ರಗಳು ಮತ್ತು ಚರಟದ ಚಕ್ರಗಳು ಜೀವಭೂರಾಸಾಯನಿಕ ಚಕ್ರದ ಎರಡು ವಿಧಗಳು. ಅನಿಲದ ಚಕ್ರಗಳಲ್ಲಿ ವಾಯುಗೋಳ ಮತ್ತು ಜಲಗೋಳಗಳು ಸಂಗ್ರಹ ಆಕರಗಳು. ಇಂಗಾಲ ಚಕ್ರ, ಸಾರಜನಕ ಚಕ್ರ, ಆಮ್ಲಜನಕ ಚಕ್ರ ಇತ್ಯಾದಿಗಳು ಅನಿಲದ ಚಕ್ರಗಳಿಗೆ ಕೆಲವು ಉದಾಹರಣೆಗಳು. ಚರಟದ ಚಕ್ರಗಳಲ್ಲಿ ಸಾಮಾನ್ಯವಾಗಿ ಶಿಲಾಗೋಳವು ಸಂಗ್ರಹ ಆಕರವಾಗಿರುತ್ತದೆ. ರಂಜಕದ ಚಕ್ರ, ಗಂಧಕದ ಚಕ್ರ ಇತ್ಯಾದಿಗಳು ಚರಟದ ಚಕ್ರಗಳಿಗೆ ಕೆಲವು ಉದಾಹರಗಳು.

ಇಂಗಾಲ ಚಕ್ರ[ಬದಲಾಯಿಸಿ]

Carbon cycle.jpg
 • ದ್ಯುತಿಸಂಶ್ಲೇಷಣ ಕ್ರಿಯೆಯಿಂದ ಹಸಿರು ಗಿಡಗಳು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಕಾರ್ಬೋಹೈಡ್ರೇಟು(ಸಕ್ಕರೆ)ಗಳಾಗಿ ಪರಿವರ್ತಿಸುತ್ತವೆ. ಸಸ್ಯಗಳು ಮತ್ತು ಪ್ರಾಣಿಗಳು ಈ ಕಾರ್ಬೋಹೈಡ್ರೇಟುಗಳನ್ನು(ಇವುಗಳಿಂದ ಪಡೆದ ಇತರ ಉತ್ಪನ್ನಗಳನ್ನು) ಉಸಿರಾಟ ಕ್ರಿಯೆಯ ಮೂಲಕ ಬಳಸಿಕೊಳ್ಳುತ್ತವೆ. ಇದು ದ್ಯುತಿಸಂಶ್ಲೇಷಣೆಯ ವಿರುದ್ಧ ಕ್ರಿಯೆಯಾಗಿದೆ.
 • ಸಸ್ಯಾಹಾರಿ ಪ್ರಾಣಿಗಳು ಹಸಿರು ಸಸ್ಯಗಳನ್ನು ಸೇವಿಸುತ್ತವೆ. ಅವುಗಳನ್ನು ಮಾಂಸಹಾರಿ ಪ್ರಾಣಿಗಳು ಭಕ್ಷಿಸುತ್ತವೆ. ಹೀಗೆ ಸಸ್ಯಜೀವರಾಶಿಯ ರೂಪದಲ್ಲಿರುವ ಇಂಗಾಲ ಆಹಾರದ ರೂಪದಲ್ಲಿ ಮುಂದಿನ ಸ್ತರಗಳಲ್ಲಿ ಹರಿಯುತ್ತದೆ.
 • ಉಸಿರಾಟವು ಕಾರ್ಬೋಹೈಡ್ರೇಟುಗಳಲ್ಲಿರುವ ಶಕ್ತಿಯನ್ನು ಚಯಾಪಚಯ ಕ್ರಿಯೆಗಳ ಬಳಕೆಗಾಗಿ ಬಿಡುಗಡೆ ಮಾಡುತ್ತದೆ ಮತ್ತು ಕಾರ್ಬೋಹೈಡ್ರೇಟ್ ಇಂಧನವನ್ನು ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತಿಸಿ ವಾತಾವರಣಕ್ಕೆ ಹಿಂತಿರುಗಿಸುತ್ತದೆ.
 • ಭೂಮಿಯ ಮೇಲೆ ದ್ಯುತಿಸಂಶ್ಲೇಷಣೆ ಮತ್ತು ಶ್ವಾಸಕ್ರಿಯೆಯಿಂದ ಅಗಾಧ ಪ್ರಮಾಣದ ಇಂಗಾಲವು ವಾತಾವರಣದೊಂದಿಗೆ ವಿನಿಮಯಗೊಳ್ಳುತ್ತದೆ.
 • ಭೂತೊಗಟೆಯಲ್ಲಿ ಹೂಳಲ್ಪಟ್ಟ ಸತ್ತ ಪ್ರಾಣಿಗಳ ದೇಹಗಳು ಇಂಧನಗಳಾಗಿ ಪರಿವರ್ತನೆಗೊಳ್ಳುತ್ತವೆ. ಇಂಧನಗಳ ದಹನಕ್ರಿಯೆಯಿಂದಲೂ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ.
 • ಜ್ವಾಲಾಮುಖಿಗಳ ಸ್ಫೋಟದಿಂದಲೂ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಮರುಚಕ್ರೀಕರಣಗೊಳ್ಳುತ್ತದೆ. [೧]

ಈ ರೀತಿಯಲ್ಲಿ ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿರುವ ಇಂಗಾಲ ಪರಿಸರ ವ್ಯವಸ್ಥೆಯಲ್ಲಿ ಸಂಚರಿಸುವುದನ್ನು 'ಇಂಗಾಲದ ಚಕ್ರ'ಎನ್ನುವರು. ಪರಿಸರ ವ್ಯವಸ್ಥೆಯಲ್ಲಿ ಇಂಗಾಲದ ಪರಿಚಲನೆಯು ಹಲವಾರು ರೂಪಗಳಲ್ಲಿ ನಡೆಯುತ್ತದೆ. ಇಂಗಾಲವು ಎಲ್ಲಾ ಸಾವಯವ ಸಂಯುಕ್ತಗಳ ಘಟಕವಾಗಿದ್ದು ಬಹಳ ಸಂಯುಕ್ತಗಳು ಭೂಮಿಯ ಮೇಲಿನ ಜೀವಿಗಳಿಗೆ ಅವಶ್ಯಕವಾಗಿವೆ. ಜೀವಿಗಳಿಗೆ ಇಂಗಾಲದ ಆಕರವು ಗಾಳಿಯಲ್ಲಿ ಅಥವಾ ನೀರಿನಲ್ಲಿ ಕರಗಿದ ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಲಭಿಸುತ್ತದೆ. ಶೈವಲಗಳು ಮತ್ತುನೆಲ ಸಸ್ಯಗಳು(ಉತ್ಪಾದಕರು)ದ್ಯುತಿಸಂಶ್ಲೇಷಣೆಯಿಂದ ಇಂಗಾಲದ ಡೈ ಆಕ್ಸೈಡ್ ಸ್ಥಿರೀಕರಣಗೊಳಿಸುತ್ತವೆ. ಈ ಕ್ರಿಯೆಯಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರು ಸರಳ ಕಾರ್ಬೋಹೈಡ್ರೇಟ್‍ಗಳಾಗಿ ಪರಿವರ್ತನೆ ಹೊಂದುತ್ತವೆ. ಉತ್ಪಾದಕಗಳು ಇಂತಹ ಸಂಯುಕ್ತಗಳನ್ನು ಚಯಾಪಚಯ ಕ್ರಿಯೆಗಳನ್ನು ನಡೆಸಲು ಬಳಸಿಕೊಂಡು ಹೆಚ್ಚಾದುದನ್ನು ಕೊಬ್ಬು ಮತ್ತು ಬಹುಶರ್ಕರಗಳಾಗಿ ಸಂಗ್ರಹಿಸುತ್ತವೆ. ಇಂತಹ ಸಂಗ್ರಹಿತ ಉತ್ಪನ್ನಗಳನ್ನು ಆದಿ ಜೀವಿಗಳಿಂದ ಪ್ರಾರಂಭಿಸಿ ಮನುಷ್ಯನವರೆಗಿನ ಭಕ್ಷಕ ಜೀವಿಗಳು ಸೇವಿಸಿ ಇತರ ರೂಪಗಳಿಗೆ ಪರಿವರ್ತಿಸುತ್ತವೆ. ಉಸಿರಾಟದ ಉಪ ಉತ್ಪನ್ನವಾಗಿ ಎಲ್ಲಾ ಪ್ರಾಣಿಗಳು ಇಂಗಾಲದ ಡೈ ಆಕ್ಸೈಡ್‍ನ್ನು ವಾತಾವರಣಕ್ಕೆ ಬಿಡುಗಡೆಗೊಳಿಸುತ್ತವೆ. ಪ್ರಾಣಿಗಳ ತ್ಯಾಜ್ಯ ಮತ್ತು ಎಲ್ಲಾ ಜೀವಿಗಳಲ್ಲಿರುವ ಇಂಗಾಲ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಜೀವಿಗಳ ಸೂಕ್ಷ್ಮ ಪರಿವರ್ತನೆಯಿಂದ ಕೊಳೆತು ಅಥವಾ ವಿಘಟನೆ ಹೊಂದಿ ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಬಿಡುಗಡೆಯಾಗುತ್ತದೆ. ಭೂತೊಗಟೆಯಲ್ಲಿ ಜೀವಿಗಳ ಉಳಿಕೆಗಳು, ಸುಣ್ಣದ ಕಲ್ಲು, ಹವಳಗಳು ಮತ್ತು ಪಳೆಯುಳಿಕೆ ಇಂಧನ (ಉದಾಹರಣೆ:ಕಲ್ಲಿದ್ದಲು, ಅನಿಲ ಮತ್ತು ಪೆಟ್ರೋಲಿಯಂ) ರೂಪದಲ್ಲಿ ಕ್ರೋಢೀಕೃತಗೊಳ್ಳುತ್ತದೆ. ಕೈಗಾರಿಕೆಗಳು ಮತ್ತು ಕೃಷಿ ವಿದ್ಯಮಾನಗಳಿಂದಾಗಿ ಪೂರ್ವೇತಿಹಾಸ ಕಾಲದ ಪಳೆಯುಳಿಕೆ ಇಂಧನಗಳಲ್ಲಿನ ಇಂಗಾಲವು, ಇಂಗಾಲದ ಡೈ ಆಕ್ಸೈಡ್ ರೂಪದಲ್ಲಿ ಅಗಾಧ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದೆ. ಇದರಲ್ಲಿ ಬಹುತೇಕ ಪ್ರಮಾಣವು ಸಾಗರಗಳಲ್ಲಿ ಕಾರ್ಬೋನೇಟ್‍ಗಳ ರೂಪದಲ್ಲಿ ಸ್ಥಿರೀಕರಣಗೊಳ್ಳುತ್ತದೆ. ಆಮ್ಲಜನಕ ಅತ್ಯಲ್ಪ ಪ್ರಮಾಣದಲ್ಲಿ ಲಭ್ಯವಿದ್ದಾಗ (ಒಳಚರಂಡಿ ನೀರು, ಜೌಗು ಮತ್ತು ಚೌಳು) ಸ್ವಲ್ಪ ಪ್ರಮಾಣದ ಇಂಗಾಲವು ಮಿಥೇನ್ ಅನಿಲದ ರೂಪದಲ್ಲಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

ಸಾರಜನಕ(ನೈಟ್ರೋಜನ್) ಚಕ್ರ[ಬದಲಾಯಿಸಿ]

Nitrogen Cycle.jpg

ಸಾರಜನಕವು ವಾತಾವರಣದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ. ಇದು ಜೈವಿಕ ಅಣುಗಳಾದ ಪ್ರೋಟೀನ್, ನ್ಯೂಕ್ಲಿಕ್ ಆಮ್ಲಗಳ ಅವಶ್ಯಕ ಘಟಕವಾಗಿದೆ. ನಮ್ಮ ಪರಿಸರದಲ್ಲಿ ನೈಟ್ರೋಜನ್‍ನ ಹರಿವು ಈ ಕೆಳಕಂಡಂತಿರುತ್ತದೆ.[೨]

 • ಸಾಮಾನ್ಯವಾಗಿ ವಿನಿಮಯ ಮೂಲದಲ್ಲಿರುವ ಜೀವಿಗಳಿಗೆ ನೈಟ್ರೋಜನ್ ಅನಿಲವನ್ನು ನೇರವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನೈಟ್ರೋಜನ್ ಸಂಯುಕ್ತಗಳನ್ನಾಗಿ ಪರಿವರ್ತಿಸುವುದು ಅವಶ್ಯ. ನೈಟ್ರೋಜನ್ ಅನಿಲವನ್ನು ಉಪಯುಕ್ತ ನೈಟ್ರೋಜನ್ ಸಂಯುಕ್ತಗಳನ್ನಾಗಿ ಮಾರ್ಪಡಿಸುವ ವಿದ್ಯಮಾನಕ್ಕೆ ನೈಟ್ರೋಜನ್ ಸ್ಥಿರೀಕರಣ ಎಂದು ಕರೆಯುವರು. ನೈಟ್ರೋಜನ್ ನೈಸರ್ಗಿಕವಾಗಿ ಎರಡು ವಿಧಗಳಲ್ಲಿ ಸ್ಥಿರೀಕರಣಗೊಳ್ಳುತ್ತದೆ. ಅವು ಜೈವಿಕ ಸ್ಥಿರೀಕರಣ ಮತ್ತು ವಿದ್ಯುತ್‍ ರಾಸಾಯನಿಕ ಸ್ಥಿರೀಕರಣ.
  • ರೈಜೋಬಿಯಂನಂತಹ ಬ್ಯಾಕ್ಟೀರಿಯಾ, ಅನಾಬಿನಾ, ನಾಸ್ಟಾಕ್‍ನಂತಹ ನೀಲಿ ಹಸಿರು ಶೈವಲಗಳು ಇತ್ಯಾದಿಗಳಿಂದ 'ಜೈವಿಕ ಸ್ಥಿರೀಕರಣ' ಉಂಟಾಗುತ್ತದೆ. ರೈಜೋಬಿಯಂ ದ್ವಿದಳ ಸಸ್ಯಗಳ ಬೇರಿನ ಗಂಟುಗಳಲ್ಲಿ ಆಶ್ರಯ ಪಡೆಯುತ್ತದೆ. ಅವು ವಾತಾವರಣದಲ್ಲಿರುವ ನೈಟ್ರೋಜನ್ ಅನಿಲವನ್ನು ಹೀರಿ ನೈಟ್ರೇಟ್‍ಗಳಾಗಿ ಪರಿವರ್ತಿಸಿ ಬೇರುಗಳಲ್ಲಿ ಸಂಗ್ರಹಿಸುತ್ತವೆ. ಸಸ್ಯಗಳು ಈ ನೈಟ್ರೇಟ್‍ಗಳನ್ನು ಪ್ರೋಟೀನ್‍ಗಳ ಜೈವಿಕ ಸಂಶ್ಲೇಷಣೆಗೆ ಉಪಯೋಗಿಸುತ್ತವೆ. ಕೊಳಗಳು ಹಾಗೂ ಭತ್ತದ ಗದ್ದೆಗಳಲ್ಲಿ ಸ್ವತಂತ್ರವಾಗಿ ಬದುಕುವ ನೀಲಿ-ಹಸಿರು ಶೈವಲಗಳು ವಾತಾವರಣದ ಸಾರಜನಕವನ್ನು ಹೀರಿಕೊಂಡು ಸಂಗ್ರಹಿಸುತ್ತವೆ. ಹೀಗೆ ನೈಟ್ರೋಜನ್ ಮಣ್ಣಿನಲ್ಲಿ ಸ್ಥಿರೀಕರಣ ಹೊಂದುತ್ತದೆ.
  • ಆಕಾಶದಲ್ಲಿ ಮಿಂಚು ಉಂಟಾದಾಗ ವಾತಾವರಣದಲ್ಲಿರುವ ಸಾರಜನಕ, ಆಮ್ಲಜನಕದೊಂದಿಗೆ ಸಂಯೋಗ ಹೊಂದಿ ನೈಟ್ರೋಜನ್‍ನ ಆಕ್ಸೈಡ್‍ಗಳನ್ನು ಉಂಟುಮಾಡುತ್ತದೆ. ಈ ಆಕ್ಸೈಡ್‍ಗಳು ಮಳೆ ನೀರಿನಲ್ಲಿ ಕರಗಿ ಸಾರರಿಕ್ತ ನೈಟ್ರಿಕ್ ಆಮ್ಲದ ದ್ರಾವಣವನ್ನು ಉಂಟುಮಾಡುತ್ತವೆ. ಇದು ಮಳೆ ನೀರಿನೊಂದಿಗೆ ಭೂಮಿಗೆ ಸುರಿಯುತ್ತದೆ. ನೈಟ್ರಿಕ್ ಆಮ್ಲವು ಮಣ್ಣಿನಲ್ಲಿರುವ ಲೋಹೀಯ ಅಯಾನ್‍ಗಳೊಂದಿಗೆ ಪ್ರತಿವರ್ತಿಸಿ ಸಸ್ಯಗಳು ಹೀರಿಕೊಳ್ಳುವಂತಹ ನೈಟ್ರೇಟ್‍ಗಳಾಗಿ ಪರಿವರ್ತನೆ ಹೊಂದುತ್ತದೆ. ಇದನ್ನು 'ವಿದ್ಯುತ್ ರಾಸಾಯನಿಕ ಸ್ಥಿರೀಕರಣ' ಎನ್ನುವರು.
  • ಕೃತಕ ಸ್ಥಿರೀಕರಣ'ದಲ್ಲಿ ವಾತಾವರಣದಲ್ಲಿರುವ ಸಾರಜನಕವು ಹೈಡ್ರೋಜನ್ ಅನಿಲದೊಂದಿಗೆ ಪ್ರತಿಕ್ರಿಯಿಸಿ ಅಮೋನಿಯಾ ಉಂಟುಮಾಡುತ್ತದೆ. ಅಮೋನಿಯಾ ಉತ್ಕರ್ಷಣೆ ಹೊಂದಿ ನೈಟ್ರೇಟ್‍ಗಳನ್ನು ಅಥವಾ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಅಮೋನಿಯಂ ಲವಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಸ್ಥಿರೀಕೃತ ನೈಟ್ರೋಜನ್ ಇದ್ದು ಸಸ್ಯಗಳು ಇವುಗಳನ್ನು ಹೀರಿಕೊಳ್ಳುತ್ತವೆ.
 • ನೈಟ್ರೋಜನ್ ಸ್ಥಿರೀಕರಣವು ಮುಂದುವರಿದು ಅಮೋನೀಕರಣ, ನೈಟ್ರೀಕರಣ ಮತ್ತು ಡೀನೈಟ್ರೀಕರಣಗಳಾಗುತ್ತದೆ.
 • ಪ್ರೋಟಿನ್‍ಗಳು, ನೈಟ್ರೋಜನ್ ಸಂಯುಕ್ತಗಳ ತ್ಯಾಜ್ಯಗಳು ಮತ್ತು ಪ್ರಾಣಿಗಳ ವಿಸರ್ಜಿತ ವಸ್ತುಗಳು ವಿಘಟನೆಗೆ ಒಳಪಟ್ಟು ಅಮೋನಿಯಾ ಆಗುವುದನ್ನು 'ಅಮೋನೀಕರಣ' ಎನ್ನುವರು. ಈ ಕ್ರಿಯೆಯು ಮಣ್ಣಿನಲ್ಲಿರುವ ಅಮೋನೀಕರಣ ಬ್ಯಾಕ್ಟೀರಿಯಾದಿಂದ ನಡೆಯುತ್ತದೆ.
 • ಅಮೋನಿಯಾ ಮತ್ತು ಅದರ ಲವಣಗಳನ್ನು ನೈಟ್ರೇಟ್ ಮತ್ತು ನೈಟ್ರೈಟ್‍ಗಳಾಗಿ ಪರಿವರ್ತಿಸುವ ಕ್ರಿಯೆಯೇ ನೈಟ್ರೀಕರಣ. ನೈಟ್ರೀಕರಣವು ನೈಟ್ರೋಸೊಮೊನಾಸ್, ನೈಟ್ರೋಬ್ಯಾಕ್ಟರ್ ಮುಂತಾದ ಬ್ಯಾಕ್ಟೀರಿಯಾಗಳಿಂದ ನಡೆಯುತ್ತದೆ. ನೈಟ್ರೋಸೊಮೊನಾಸ್‍ಗಳು ಅಮೋನಿಯಂ ಲವಣಗಳನ್ನು ನೈಟ್ರೇಟ್‍ಗಳಾಗಿ ಹಾಗೂ ನೈಟ್ರೋಬ್ಯಾಕ್ಟರ್‍ಗಳು ನೈಟ್ರೈಟ್‍ಗಳನ್ನು ನೈಟ್ರೇಟ್‍ಗಳಾಗಿ ಪರಿವರ್ತಿಸುತ್ತವೆ.
 • ಮಣ್ಣಿನಲ್ಲಿರುವ ನೈಟ್ರೇಟ್‍ಗಳನ್ನು ನೈಟ್ರೋಜನ್ ಅನಿಲವನ್ನಾಗಿ ಪರಿವರ್ತಿಸುವ ವಿದ್ಯಮಾನವೇ 'ಡಿನೈಟ್ರೀಕರಣ'. ಈ ಕ್ರಿಯೆಯು ಸೂಡೊಮೊನಾಸ್ ಎಂಬ ಒಂದು ವಿಧದ ಡೀನೈಟ್ರೀಕರಣ ಬ್ಯಾಕ್ಟೀರಿಯಾದಿಂದ ನಡೆಯುತ್ತದೆ. ಇದು ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಮತ್ತು ನೀರಿನಲ್ಲಿರುವ ನೈಟ್ರೇಟ್‍ಗಳನ್ನು ನೈಟ್ರೋಜನ್ ಅನಿಲವಾಗಿ ವಾತಾವರಣಕ್ಕೆ ಮರುಚಕ್ರೀಕರಣಗೊಳಿಸುತ್ತದೆ.

ಆಮ್ಲಜನಕ(ಆಕ್ಸಿಜನ್)ಚಕ್ರ[ಬದಲಾಯಿಸಿ]

Oxygen Cycle.jpg

ಆಕ್ಸಿಜನ್ ಎಲ್ಲಾ ಜೀವಿಗಳ ಅವಶ್ಯಕ ಪೋಷಕ ಇದು ಶರ್ಕರಗಳನ್ನು ಉತ್ಕರ್ಷಣೆಗೆ ಒಳಪಡಿಸಿ ಶಕ್ತಿ ಬಿಡುಗಡೆ ಮಾಡಲು ಅವಶ್ಯ. ವಾತಾವರಣದಲ್ಲಿ ಆಮ್ಲಜನಕವು ಮುಕ್ತ ಅಣುಗಳಾಗಿ ಅನಿಲ ರೂಪದಲ್ಲಿ ಲಭ್ಯವಿರುತ್ತದೆ. ಇದು ನೀರಿನಲ್ಲಿ ವಿಲೀನವಾದ ಸ್ಥಿತಿಯಲ್ಲೂ ಮತ್ತು ಇಂಗಾಲದ ಡೈ ಆಕ್ಸೈಡ್ ಹಾಗೂ ನೀರಿನಲ್ಲಿ ಸಂಯುಕ್ತ ರೂಪದಲ್ಲೂ ಇರುತ್ತದೆ.[೩]

 • ಆಕ್ಸಿಜನ್ ಸ್ಥಿರೀಕರಣವು ಜೀವಿಗಳ ಉಸಿರಾಟದ ಕ್ರಿಯೆಯಲ್ಲಿ ಶರ್ಕರಗಳ ಉತ್ಕರ್ಷಣೆಯಿಂದ ನಡೆಯುತ್ತದೆ. ನಂತರ ಉತ್ಪಾದಕರ ದೇಹದಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ ರೂಪದಲ್ಲಿ ಬಿಡುಗಡೆಯಾಗುತ್ತದೆ.
 • ಸೂಕ್ಷ್ಮಜೀವಿಗಳು ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ವಿಘಟಿಸುವುದರಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನು ಬಿಡುಗಡೆಗೊಳಿಸುತ್ತವೆ.
 • ಇಂಧನಗಳ ದಹನ ಕ್ರಿಯೆಗೆ ಆಮ್ಲಜನಕವು ಉಪಯೋಗವಾಗುತ್ತದೆ.
 • ಉಸಿರಾಟ, ವಿಘಟನೆ ಮತ್ತು ದಹನಕ್ರಿಯೆಗಳು ನಡೆಯುವಾಗ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಾವಿ ದ್ಯುತಿಸಂಶ್ಲೇಷಣ ಕ್ರಿಯೆಗೆ ಪುನರ್ಬಳಕೆಯಾಗುತ್ತದೆ. ಹೀಗೆ ಆಕ್ಸಿಜನ್ ಮರು ಚಕ್ರೀಕರಣಗೊಳ್ಳುತ್ತದೆ.

ಜಲಚಕ್ರ[ಬದಲಾಯಿಸಿ]

Watercyclesummary.jpg

ವಾತಾವರಣದಲ್ಲಿ ಸಂಗ್ರಹ ಆಕರ ಮತ್ತು ವಿನಿಮಯ ಆಕರಗಳ ನ‍ಡುವೆ ಸಂಚರಿಸುತ್ತಿರುವ ಮತ್ತೊಂದು ಘಟಕವಿದೆ. ಎಲ್ಲಾ ಜೀವಿಗಳಿಗೂ ಅತ್ಯವಶ್ಯವಾದ ಆ ಘಟಕವೇ ನೀರು.[೪]

 • ನೀರಿನ ಮೂಲಗಳಾದಂತಹ ಕೆರೆ, ನದಿ, ಸರೋವರ, ಸಾಗರ ಇತ್ಯಾದಿಗಳಿಂದ ನೀರು ಸೂರ್ಯ ಉಷ್ಣದಿಂದ ಆವಿಯಾಗುತ್ತದೆ.
 • ಈ ನೀರು ಮಳೆ ಹಾಗೂ ಹಿಮದ ರೂಪದಲ್ಲಿ ಮಣ್ಣನ್ನು ಸೇರುತ್ತದೆ.
 • ಸಸ್ಯಗಳು ಬೇರುಗಳ ಮುಖಾಂತರ ನೀರನ್ನು ಮಣ್ಣಿನಿಂದ ಹೀರಿಕೊಳ್ಳುತ್ತವೆ. ಬಳಸಿಕೊಳ್ಳದೇ ಉಳಿದ ನೀರು ಬಾಷ್ಪ ವಿಸರ್ಜನೆಯ ಮೂಲಕ ವಾತಾವರಣಕ್ಕೆ ಆವಿಯಾಗುತ್ತದೆ.
 • ನೇರವಾಗಿ ಅಥವಾ ಪರೋಕ್ಷವಾಗಿ ಎಲ್ಲಾ ಜೀವಿಗಳೂ ವಿವಿಧ ಚಯಾಪಚಯ ಕ್ರಿಯೆಗಳಿಗೆ ನೀರನ್ನು ಬಳಸಿಕೊಳ್ಳುತ್ತವೆ. ಉಸಿರಾಟ, ವಿಸರ್ಜನೆ, ಬಾಷ್ಪ ವಿಸರ್ಜನೆ, ಆವೀಕರಣ ಮುಂತಾದ ಕ್ರಿಯೆಗಳಿಂದ ನೀರು ವಾತಾವರಣವನ್ನು ಸೇರುತ್ತದೆ.
  • ಹೀಗೆ ಜೀವಭೂರಾಸಾಯನಿಕ ಚಕ್ರಗಳು ವಾತಾವರಣದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ.ಪರಿಸರದಲ್ಲಿ ಜೀವಭೂರಾಸಯನಿಕ ಚಕ್ರಗಳಿಂದಾಗಿ ವಾತಾವರಣದ ಘಟಕಗಳ ನಡುವೆ ಸಮತೋಲನ ಏರ್ಪಟ್ಟಿದೆ.

ಉಲ್ಲೇಖನಗಳು[ಬದಲಾಯಿಸಿ]