ವಿಷಯಕ್ಕೆ ಹೋಗು

ಉರುಗ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯುರುಗ್ವೆ ಇಂದ ಪುನರ್ನಿರ್ದೇಶಿತ)
ಉರುಗ್ವೆ ಪೂರ್ವ ಗಣರಾಜ್ಯ
República Oriental del Uruguay
Flag of ಉರುಗ್ವೆ
Flag
Coat of arms of ಉರುಗ್ವೆ
Coat of arms
Motto: Libertad o muerte ಸ್ಪ್ಯಾನಿಷ್
"ಸ್ವಾತಂತ್ರ್ಯ ಇಲ್ಲವೆ ಮೃತ್ಯು (Freedom or death)"
Anthem: Himno Nacional Uruguayo ಸ್ಪ್ಯಾನಿಷ್
Location of ಉರುಗ್ವೆ
Capitalಮಾಂಟೆವೀಡಿಯೊ
Largest cityರಾಜಧಾನಿ
Official languagesಸ್ಪ್ಯಾನಿಷ್
Demonym(s)Uruguayan, Oriental
Governmentಗಣರಾಜ್ಯ (ರಾಷ್ಟ್ರಪತಿ ಪದ್ಧತಿ)
ತಬರೆ ವಾಸ್ಕೇಜ್
• ಉಪರಾಷ್ಟ್ರಪತಿ
ರುಡಾಲ್ಫೊ ನಿನ್ ನೊವೊಅ
ಸ್ವಾತಂತ್ರ್ಯ 
ಆಗಸ್ಟ್ ೨೫, ೧೮೨೫
• ಘೋಷಣೆ
ಆಗಸ್ಟ್ ೨೮, ೧೮೨೮
• Water (%)
1.5%
Population
• ೨೦೦೨ census
3,399,237
GDP (nominal)೨೦೦೬ estimate
• Per capita
US$ 6,007 (2006) (508)
Gini (2003)4.99
low
HDI (೨೦೦೪)Steady 0.863
Error: Invalid HDI value · 36th
Currencyಉರುಗ್ವೆಯ ಪೆಸೊ ($, UYU ) (UYU)
Time zoneUTC-3 (UYT)
• Summer (DST)
UTC-2 (UYST)
Calling code598
Internet TLD.uy

ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay) ಆಗ್ನೇಯ ದಕ್ಷಿಣ ಅಮೇರಿಕದ ಅತಿಪುಟ್ಟ ಸ್ವತಂತ್ರದೇಶ ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.

ಇದರ ವಿಸ್ತೀರ್ಣ 1,77,508 ಚ.ಕಿ.ಮೀ. (68,536 ಚ.ಮೈ.). ಉತ್ತರದಲ್ಲಿ ಬ್ರೆಜಿಲ್, ದಕ್ಷಿಣದಲ್ಲಿ ರಿಯೊ ದೆ ಲಾ ಪ್ಲಾಟಾ ನದಿಯ ಅಳಿವೆ, ಪಶ್ಚಿಮದಲ್ಲಿ ಉರುಗ್ವೇ ನದಿ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ - ಇವು ದೇಶದ ಮೇರೆಗಳು.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಈ ದೇಶದ ದಕ್ಷಿಣ ಭಾಗ ಬ್ರೆಜಿಲಿಯನ್ ಪ್ರಸ್ಥಭೂಮಿಯ ಕೊನೆಯಾದ್ದರಿಂದ ಇಲ್ಲಿ ಹಲವಾರು ಪುಟ್ಟ ಬೆಟ್ಟಗಳಿವೆ, ಕರಾವಳಿಯ ಉದ್ದಕ್ಕೂ ಕಡಲುಬ್ಬರದಿಂದಾದ ಸರೋವರಗಳೂ ಸೈಕತ ಗುಡ್ಡಗಳೂ ಸಾಮಾನ್ಯ. ಈ ಭಾಗದಲ್ಲಿ ಹರಿಯುವ ನದಿಗಳ ದಡಗಳು ಎತ್ತರವಿಲ್ಲ. ಉತ್ತರಾರ್ಧದ ಪ್ರದೇಶ ಹೆಚ್ಚು ವೈವಿಧ್ಯಮಯ. ಇಲ್ಲಿ ಕಂದರಗಳೂ ತಗ್ಗಿನ ಪ್ರಸ್ಥಭೂಮಿಗಳೂ ವಿಶಾಲ ಕಣಿವೆಗಳೂ ಇವೆ. ಆದರೆ ಒಟ್ಟಿನಲ್ಲಿ ಈ ದೇಶದ ಯಾವ ಬಾಗವೂ ೬೦೦ ಮೀ.ಗಿಂತ ಎತ್ತರವಾಗಿಲ್ಲ. ಉರುಗ್ವೇಯಲ್ಲೇ ಹರಿಯುವ ದೊಡ್ಡ ನದಿಗಳು ಯಾವುವೂ ಇಲ್ಲ. ರಿಯೊನೇಗ್ರೊ ಅತ್ಯಂತ ದೊಡ್ಡದು. ಇದರ ಅಧೋಭಾಗ ಮಾತ್ರವೇ ನೌಕಾಸಂಚಾರ ಯೋಗ್ಯ. ಉಳಿದ ನದಿಗಳಲ್ಲಿ ಸಣ್ಣಪುಟ್ಟ ನೌಕೆಗಳು ಯಾನ ಮಾಡಬಹುದಷ್ಟೇ. ರಿಯೊನೇಗ್ರೊವನ್ನು ಬಿಟ್ಟರೆ ಹೆಸರಿಸಬಹುದಾದ ಉಳಿದ ನದಿಗಳೆಂದರೆ ಸಾಂತಾಲೂಸಿಯಾ, ಕ್ವೀಗ್ವೆರಿ ಮತ್ತು ಸಿಬೊಲಾಟಿ, ಉರುಗ್ವೇಯ ಪಶ್ಚಿಮದಂಚಿನಲ್ಲಿ ಹರಿಯುವ ಉರುಗ್ವೇ ನದಿಯ ಮೇಲೆ ಅದರ ಮುಖದಿಂದ ಪೈಸಾಂಡೂ ನಗರದವರೆಗೆ ಜಹಜು ಸಂಚಾರಾವಕಾಶವುಂಟು. ಅಲ್ಲಿಂದ ಮುಂದೆ ಸಣ್ಣ ನೌಕೆಗಳು ಸಾಲ್ಟೊ ವರೆಗೂ ಹೋಗಿ ಬರುತ್ತವೆ.

ವಾಯುಗುಣ:

[ಬದಲಾಯಿಸಿ]

ಉರುಗ್ವೇಯದು ಸಮಶೀತೋಷ್ಣ ವಾಯುಗುಣ ದಕ್ಷಿಣಾರ್ಧ ಗೋಳದಲ್ಲಿರುವುದರಿಂದ ಇಲ್ಲಿ ಜನವರಿ-ಫೆಬ್ರವರಿಗಳಲ್ಲಿ ಬೇಸಗೆಯ ಹವೆ ಇರುತ್ತದೆ. ಆಗಿನ ಸರಾಸರಿ ಉಷ್ಣತೆ 22º ಸೆ. (ಸು. 71º ಫ್ಯಾ.). ಜುಲೈ ತಿಂಗಳು ಇಲ್ಲಿ ಅತ್ಯಂತ ಚಳಿ. ಆಗಿನ ಉಷ್ಣತೆ 10º ಸೆಂ.ಗ್ರೇ. (50º ಫ್ಯಾ.) ಕರಾವಳಿಯಲ್ಲಿ ಮಂಜು ಬೀಳುವುದಿಲ್ಲ. ವರ್ಷದುದ್ದಕ್ಕೂ ದಿನದಿನವೂ ಹವೆ ಬದಲಾಗುತ್ತಿರುತ್ತದೆ. ಝಂಝಾವಾತದ ಕೇಂದ್ರಗಳು ಈ ದೇಶದ ಮೂಲಕ ಹಾದು ಹೋಗುವುದೇ ಈ ಪವನಚಾಂಚಲ್ಯಕ್ಕೆ ಮುಖ್ಯಕಾರಣ. ಉತ್ತರದ ಉಷ್ಣ ಮಾರುತಗಳು ಥಟ್ಟನೆ ಅಧೃಶ್ಯವಾಗಿ, ನೈಋತ್ಯದ ಚಳಿಗಾಳಿ ಬೀಸಿ ಉಷ್ಣಮಾಪಕದ ಪಾದರಸ ಕುಸಿಯುವುದು ಸಾಮಾನ್ಯ. ಈ ಕಾರಣದಿಂದ ಉರುಗ್ವೇಯಲ್ಲಿ ನಿಶ್ಚಿತವಾದ ಮಳೆಗಾಲವಾಗಲಿ ಒಣಹವೆಯ ಋತುವಾಗಲಿ ಇಲ್ಲ. ಏಪ್ರಿಲ್ - ಮೇ ತಿಂಗಳುಗಳಲ್ಲಿ ಗರಿಷ್ಠ ಮಳೆ ಬೀಳುತ್ತದೆ. ಚಳಿಗಾಲದಲ್ಲೂ ಮಳೆಯುಂಟು. ಸಮುದ್ರದೆಡೆಯಿಂದ ದೂರದೂರ ಸಾಗಿದಂತೆ ಮಳೆಯ ಪರಿಮಾಣ ಕಡಿಮೆ, ಆದರೆ ಎಲ್ಲೂ ಅನಾವೃಷ್ಟಿಯಿಲ್ಲ. ಬೇಸಗೆಯಲ್ಲಿ ಗುಡುಗು ಸಿಡಿಲುಗಳ ಆರ್ಭಟ ಹೆಚ್ಚು.

ಸ್ವಾಭಾವಿಕ ಸಸ್ಯ, ಪ್ರಾಣಿವರ್ಗ:

[ಬದಲಾಯಿಸಿ]

ಎತ್ತರವಾದ ಹುಲ್ಲಿನ ಬೆಳೆ ಎಲ್ಲೆಲ್ಲೂ ಸಾಮಾನ್ಯವಾಗಿದೆ. ಸ್ವದೇಶೀ ಪರದೇಶೀ ವೃಕ್ಷಗಳೂ ಹರಡಿವೆ. ಇವು ನದಿಗಳ ಕೆಳ ಪ್ರದೇಶಗಳಲ್ಲಿ ಹೆಚ್ಚು ಸಾಂದ್ರ, ಆಲ್ಡರ್, ಆಲೊ (ಕತ್ತಾಳೆ ಜಾತಿ), ಪಾಪ್ಲರ್, ಅಕೇಸಿಯ, ವಿಲೊ, ಯೂಕಲಿಪ್ಪಸ್(ಇವು ಮುಖ್ಯ ಮರಗಳು, ತಾಳೆಜಾತಿಯ ಮರಗಳು ಶುದ್ದ ಸ್ವದೇಶಿ, ಕಣಿವೆಗಳಲ್ಲೂ ಹುಲ್ಲುಗಾವಲುಗಳಲ್ಲೂ ಬಣ್ಣ ಬಣ್ಣದ ನಸುಗಂಪಿನ ಹೂಗಿಡಗಳು ಅಸಂಖ್ಯಾತ. ಜನವಸತಿ ಇರುವ ಪ್ರದೇಶಗಳಲ್ಲೆಲ್ಲ ವನ್ಯಮೃಗಗಳು ಬಹುಮಟ್ಟಿಗೆ ಅದೃಶ್ಯವಾಗಿವೆ, ಅಮೆರಿಕನ್ ಉಷ್ಟ್ರಪಕ್ಷ್ಸಿಯೂ ಈಗ ವಿರಳ. ಸಿಂಹ. ಚಿರತೆ. ನರಿ, ಜಿಂಕೆ, ಕಾಡುಬೆಕ್ಕು, ನೀರುಹಂದಿ, ಆರ್ಮಡಿಲ್ಲೊ-ಇವು ಇಲ್ಲಿನ ಕೆಲವು ಚತುಷ್ಪಾದಿ ಪ್ರಾಣಿಗಳು, ರಣಹದ್ದು, ನಾಡುಕಾಗೆ, ಉದ್ದ ತೋಕೆಯ ಸಣ್ಣಗಿಳಿ, ಬಿಲವಾಸಿ ಗೂಬೆ, ಕೆಂಪುಹಕ್ಕಿ, ಝೇಂಕಾರದ ಹಕ್ಕಿ ಇವನ್ನೂ ಇಲ್ಲಿ ಕಾಣಬಹುದು. ಚೇಳು ವಿರಳ; ಆದರೆ ದೊಡ್ಡದು. ಜೇಡಗಳು ಸಾಮಾನ್ಯ, ವಿಷಪೂರಿತ. ಹಲ್ಲಿ, ಆಮೆ, ತಲೆಯ ಮೇಲೆ ಸಿಲುಬೆಯ ಗುರುತಿರುವ ಭಯಂಕರ ವಿಷಸರ್ಪ. ಗಿಲಿಕೆ ಹಾವು ಇವು ಇಲ್ಲಿನ ಪ್ರಾಣಿಲೋಕದ ಇತರ ಪ್ರಜೆಗಳು. ಉರುಗ್ವೇ ನದಿಯ ಶಿರೋಭಾಗ ಮೊಸಳೆಗಳ ಸಾಮ್ರಾಜ್ಯ.

ಜನ,ಜೀವನ:

[ಬದಲಾಯಿಸಿ]

ಶೇಕಡಾ 50ರಷ್ಟು ಜನ ವ್ಯವಸಾಯಗಾರರು. ದಕ್ಷಿಣಭಾಗದಲ್ಲಿ ಜನಸಂಖ್ಯೆ ಹೆಚ್ಚು ದೇಶದ 83%ರಷ್ಟು ಪ್ರದೇಶದಲ್ಲಿ ಹುಲ್ಲುಗಾವಲಿರುವ ಉರುಗ್ವೇಯನ್ನು ಜಗತ್ತಿನ ಅತಿ ಉತ್ತಮ ಮೇವಿನಭೂಮಿ ಎನ್ನುತ್ತಾರೆ. 1840ರ ಅನಂತರ ಬ್ರಿಟಿಷರು ಮೆರಿನೊ ಕುರಿಗಳನ್ನು ಇಲ್ಲಿಗೆ ತಂದು ಸಾಕಿದರು. ಅವುಗಳಿಂದ ಉಣ್ಣೆ ಮತ್ತು ಮಾಂಸ ತೆಗೆದು ರಫ್ತು ಮಾಡುತ್ತಾರೆ. ಶೀತಕ ಯಂತ್ರ ಬಂದ ಮೇಲೆ ಮಾಂಸದ ಉದ್ಯೋಗ ಭರದಿಂದ ಸಾಗಿದೆ. ಉರುಗ್ವೇ ನದಿಯ ಮೇಲಿನ ಪೈಸಾಂಡೂ, ಸಾಲ್ಟೊ, ಮತ್ತು ರಿಯೊ ನೇಗ್ರೊ ನದಿಯ ಮೇಲಿರುವ ಮರ್ಸೇದೇಸ್ ಪಟ್ಟಣಗಳಲ್ಲಿ ಮಾಂಸ ಕೈಗಾರಿಕೆ ಪ್ರಬಲ. ದಕ್ಷಿಣ ಭಾಗದಲ್ಲ್ಲಿ ವ್ಯಸಾಯ ಸಾಮಾನ್ಯ. ಅರ್ಧ ಭೂಮಿ ಗೋದಿಗಾಗಿ ಮೀಸಲಾಗಿದೆ. ಅಗಸೆ ನಾರು, ಓಟ್ಸ್, ಬಾರ್ಲಿ, ದ್ರಾಕ್ಷಿ ಇತರ ಬೆಳೆಗಳು. ಎರಡನೆಯ ಮಹಾಯುದ್ಧದ ಅನಂತರ ಇಲ್ಲಿ ಪ್ರಗತಿ ಹೆಚ್ಚಿದೆ. ಸರ್ಕಾರವೇ ವ್ಯವಸಾಯ ಪದಾರ್ಥಗಳ ಬೆಲೆ ನಿಗದಿ ಮಾಡಿ ವ್ಯವಸಾಯಕ್ಕೆ ಪ್ರೋತ್ಸಾಹ ಕೊಟ್ಟಿದೆ. ಈಗ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚು ಭೂಮಿಯನ್ನು ಸಾಗುವಳಿಗೆ ಒಳಪಡಿಸಲಾಗಿದೆ. ರೈಲುಗಳ ನಿರ್ಮಾಣ ಬ್ರಿಟಿಷ್ ಬಂಡವಾಳದಿಂದಾಯಿತು. ಈಗ ಎಲ್ಲ ರೈಲುಗಳೂ ಸರ್ಕಾರದ ಅಧೀನದಲ್ಲಿವೆ. ರಸ್ತೆ ಸಾರಿಗೆಯೂ ಪ್ರಗತಿ ಹೊಂದಿದೆ. ಇಲ್ಲಿಯ ಮುಖ್ಯ ರಫ್ತು ಉಣ್ಣೆ, ಮಾಂಸ, ಮಾಂಸದ ಪದಾರ್ಥಗಳು ಮತ್ತು ಚರ್ಮ, ಈಗ ಮಾಂಸಕ್ಕಿಂತಲೂ ಗೋದಿಯ ರಫ್ತು ಹೆಚ್ಚು. ರಫ್ತಿನ ಬಹುಭಾಗ ನೆದರ್ಲೆಂಡ್ಸಿಗೆ ಹೋಗುತ್ತದೆ. ಆಮದು ವಿಶೇಷವಾಗಿ ಸಂಯುಕ್ತ ಸಂಸ್ಥಾನ. ಬ್ರೆಜಿûಲ್, ಪಶ್ಚಿಮ ಜರ್ಮನಿ ಮತ್ತು ಬ್ರಿಟನ್‍ಗಳಿಂದ. ಉರುಗ್ವೇಯ ಜನ ಪ್ರಧಾನವಾಗಿ ಬಿಳಿಯರು: 19-20ನೆಯ ಶತಮಾನಗಳಲ್ಲಿ ಸ್ಪೇನ್, ಇಟಲಿ ಮತ್ತು ಇತರ ಐರೋಪ್ಯ ದೇಶಗಳಿಂದ ಬಂದವರ ವಂಶದವರು. ಇಂಡಿಯನ್ನರು ಇಲ್ಲವೇ ಇಲ್ಲವೆನ್ನಬಹುದು. ಈ ಲಕ್ಷಣವುಳ್ಳ ಶೇ. 5 ರಷ್ಟು ಮಂದಿ ಮಾತ್ರ ಕಾಣಸಿಗುತ್ತಾರೆ. ರೋಮನ್ ಕೆಥೊಲಿಕರು ಬಹುಸಂಖ್ಯಾತರು. ಸ್ಪ್ಯಾನಿಷ್ ಅಧಿಕೃತ ಭಾಷೆ. ಉರುಗ್ವೇಯ ಜನಸಂಖ್ಯೆ 25,56,02,(1963). ಚ.ಕಿ.ಮೀ.ಗೆ 14.4 ಅಥವಾ ಚ.ಮೈ.ಗೆ 37.2 ಜನಸಾಂದ್ರತೆಯಿದೆ. ದಕ್ಷಿಣ ಕರಾವಳಿ ಹಾಗು ಉರುಗ್ವೇನದೀ ತೀರಪ್ರದೇಶಗಳಲ್ಲಿ ಜನ ಹೆಚ್ಚಾಗಿ ವಾಸಿಸುತ್ತಾರೆ. ರಾಜಧಾನಿಯಾದ ಮಾಂಟೆವಿಡೆವೋದಲ್ಲಿ ಜನದಟ್ಟಣೆ ಬಲು ಹೆಚ್ಚು (ಜನಸಂಖ್ಯೆ 11,58,632). ಇಡೀ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚಿನ ಮಂದಿ ಈ ನಗರದಲ್ಲೂ ಸುತ್ತಮುತ್ತಣ ಉಪನಗರಗಳಲ್ಲೂ ವಾಸಿಸುತ್ತಾರೆ. ಉರುಗ್ವೇಯಲ್ಲಿ ಸುಮಾರು (1,900ಮೈ.) ರೈಲುಮಾರ್ಗಗಳೂ 4,828 ಕಿ.ಮೀ. (3,000 ಮೈ.) ರಸ್ತೆಗಳೂ ಇವೆ. ಇವಕ್ಕೆ ಮಾಂಟೆವಿಡೆವೋ ಕೇಂದ್ರ. ಅಂತರರಾಷ್ಟ್ರೀಯ ಸಾಲ ಪಡೆದು ಹೆದ್ದಾರಿಗಳನ್ನು ಉತ್ತಮಪಡಿಸಿ ಮುಖ್ಯವಾಗಿ ಬ್ರೆಜಿûಲಿನೊಂದಿಗೆ ಹೆಚ್ಚಿನ ಸಂಪರ್ಕ ಕಲ್ಪಿಸಲಾಗಿದೆ. ಉರುಗ್ವೇ ಜನರಲ್ಲಿ 85%ರಷ್ಟು ಮಂದಿ ಅಕ್ಷರಸ್ಥರು. ಪೇಸೋ ಇಲ್ಲಿನ ನಾಣ್ಯ. ವಿನಿಮಯ ದರ (1968): 600 ಪೆಸೋ=1 ಪೌಂ. ಸ್ಟರ್ಲಿಂಗ್; 250 ಪೇಸೋ=1 ಡಾಲರ್ (ಅಮೆರಿಕ ಸಂ. ಸಂ.) (ಆರ್.ಆರ್.ಎ.; ಬಿ.ಒ.)

ಇತಿಹಾಸ, ಆಡಳಿತ:

[ಬದಲಾಯಿಸಿ]

17ನೇ ಶತಮಾನದ ಅಂತ್ಯದಲ್ಲಿ ಪೋರ್ಚುಗೀಸರು ಮೊಟ್ಟಮೊದಲು ಇಲ್ಲಿಗೆ ಬಂದರು ನೂರು ವರ್ಷ ಕಾಲ ಪೋರ್ಚುಗಲ್ಲಿನ ಅಧೀನದಲ್ಲಿದ್ದ ಮೇಲೆ ಈ ದೇಶ ಸ್ಪೇನ್ ಚಕ್ರಾಧಿಪತ್ಯದ ಅಂಗವಾಯಿತು. 1805ರಲ್ಲಿ ಸ್ಪೇನ್ ನೆಪೋಲಿಯನ್ನನ ವಶವಾದಾಗ ದಕ್ಷಿಣ ಅಮೆರಿಕದ ಇತರ ವಸಾಹತುಗಳಂತೆ ಉರುಗ್ವೇಯಲ್ಲೂ ಸ್ವಾತಂತ್ರ್ಯ ಚಳವಳಿ ಹರಡಿತು. ಆದರೆ ನೆರೆಯ ಬ್ರೆಜಿûಲ್ ಆರ್ಜೆಂಟೀನಗಳು ಇದನ್ನು ಆಕ್ರಮಿಸಲು ಯತ್ನಿಸಿದವು. ಈ ಪ್ರಯತ್ನಗಳು ವಿಫಲವಾಗಿ, ಕೊನೆಗೆ ಇಂಗ್ಲೆಂಡಿನ ಮಧ್ಯಸ್ಥಿಕೆಯಿಂದ ಉರುಗ್ವೇ ಸ್ವತಂತ್ರ ರಾಷ್ಟ್ರವಾಯಿತು. ಇದರ ಪ್ರಥಮ ಸಂವಿಧಾನ ಜಾರಿಗೆ ಬಂದದ್ದು 1830ರಲ್ಲಿ, ಪ್ರಜಾತಂತ್ರ ಗಣರಾಜ್ಯ ತತ್ತ್ವಗಳೇ ಇದಕ್ಕೆ ಮೂಲಾಧಾರ. ಆದರೆ ಇಲ್ಲಿ ಹುಟ್ಟಿಕೊಂಡ ಕೊಲರ್ಯಾಡೋ ಮತ್ತು ಬ್ಲಾಂಕೋ ಎಂಬ ಪಕ್ಷಗಳೆರಡರ ಕಚ್ಚಾಟದಿಂದ ದೇಶದಲ್ಲಿ ಅನಾಯಕತೆ ಮೂಡಿತು. ಚುನಾವಣೆಗಳಲ್ಲಿ ಅನೀತಿಯೂ ಮೋಸವೂ ಬೆಳೆದುವು. ಬಲ ಪ್ರದರ್ಶನದಿಂದ ಸರ್ಕಾರದ ಮೂಲಸ್ಥಾನಗಳ ಆಕ್ರಮಣ ಸಾಮಾನ್ಯವಾಯಿತು. ಈ ಕಾರಣಗಳಿಂದ 19ನೆಯ ಶತಮಾನದ ಕೊನೆಯವರೆಗೂ ಅಲ್ಲಿ ಪ್ರಜಾಪ್ರಭುತ್ವ ಬೇರೂರಲಿಲ್ಲ. ಈ ಅವ್ಯವಸ್ಥೆಯನ್ನು ಕೊನೆಗಾಣಿಸಿ ದೇಶದಲ್ಲಿ ಶಾಂತಿ ನೆಲಗೊಳಿಸಿದವ ಜೋಸೆಬಾಟ್ಯೆ. ಈತನ ನೇತೃತ್ವದಲ್ಲಿ 1918ರಲ್ಲಿ ಜಾರಿಗೆ ಬಂದ ಸುಧಾರಣೆಗಳ ಫಲವಾಗಿ ಏಕಪಕ್ಷೀಯ ಸಚಿವ ಸಂಪುಟದ ಸ್ಥಾನದಲ್ಲಿ ದ್ವಿಪಕ್ಷೀಯ ಸಂಪುಟದ ಸ್ಥಾಪನೆಯಾಯಿತು. ಚುನಾವಣೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಪಕ್ಷಗಳೆರಡಕ್ಕೂ ಅದರದರ ಬಲಾನುಗುಣವಾಗಿ ಸ್ಥಾನ ಕಾಯ್ದಿಡಲಾಯಿತು. ಇದರಿಂದ ಪಕ್ಷವೈಮನಸ್ಯ ಅಡಗಿ ಪ್ರಜಾಸರ್ಕಾರ ಸುಲಲಿತವಾಗಿ ನಡೆಯುವಂತಾಯಿತು. ಆದರೆ ಮುಂದೆ ಸಂಭವಿಸಿದ ಆರ್ಥಿಕಮುಗ್ಗಟ್ಟಿನ ಕಾಲದಲ್ಲಿ ಈ ವ್ಯವಸ್ಥೆ ಪ್ರಯೋಜನಕಾರಿಯಾಗಿರಲಿಲ್ಲ. ಈ ಸನ್ನಿವೇಶದಲ್ಲಿ ರಾಜಕಾರ್ಯಗಳನ್ನು ಏಕದೃಷ್ಟಿಯಿಂದ ಸಕಾಲಕ್ಕೆ ದಾಢ್ರ್ಯದಿಂದ ನಡೆಸಬಲ್ಲ ಆಡಳಿತದ ಅಗತ್ಯವಿತ್ತು. 1933ರಲ್ಲಿ ಗೇಬ್ರಿಯಲ್ ಟೆರ ರಾಷ್ಟ್ರದ ಸರ್ವಾಧಿಕಾರಿಯಾದ. 1917ರ ಸಂವಿಧಾನ ಮುರಿದು ಬಿತ್ತು. ಬಹಳ ಕಷ್ಟ ನಷ್ಟ ಅನುಭವಿಸಿ ಸ್ವಾತಂತ್ರ್ಯ ಪಡೆದಿದ್ದ ಉರುಗ್ವೇಯನರಿಗೆ ಇದರಿಂದ ಮುಖಭಂಗವಾಗಿ ಕೊನೆಗೆ ಅವರು ಮತ್ತೆ ಶ್ರಮಪಟ್ಟು ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡರು. 1951ರಲ್ಲಿ ಅನೇಕ ರಾಜಕೀಯ ಸುಧಾರಣೆಗಳು ಜಾರಿಗೆ ಬಂದುವು. ಆದರೂ ಉರುಗ್ವೇಯಲ್ಲಿ ದೃಢವಾದ ಸರ್ಕಾರ ಬರಲಿಲ್ಲ. ಆದ್ದರಿಂದ 1967ರ ಫೆಬ್ರವರಿಯಲ್ಲಿ ಇಲ್ಲಿ ಅಧ್ಯಕ್ಷೀಯ ಸರ್ಕಾರ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಅಧ್ಯಕ್ಷ ಹಾಗೂ ಹನ್ನೊಂದು ಮಂದಿ ಸಚಿವ ಮಂಡಲ ಆಢಳಿತ ನಡೆಸುತ್ತಾರೆ. ಇವರ ಆಯ್ಕೆ ಐದು ವರ್ಷಕ್ಕೊಮ್ಮೆ. ವಿಧಾನಮಂಡಲದಲ್ಲಿ ಎರಡು ಸದನಗಳಿವೆ. ಒಂದು ಸೆನೆಟ್ (ಸದಸ್ಯ ಸಂಖ್ಯೆ 30). ಇನ್ನೊಂದು ಚೇಂಬರ್ ಆಫ್ ಡೆಪ್ಯುಟೀಸ್ (ಸದಸ್ಯ ಸಂಖ್ಯೆ 99). ಇವುಗಳಿಗೂ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಹದಿನೆಂಟು ವರ್ಷ ತುಂಬಿದ ಎಲ್ಲರಿಗೂ ಮತ ನೀಡುವ ಅಧಿಕಾರವುಂಟು. ಸೆನೆಟಿನ ಅಧ್ಯಕ್ಷನೇ ರಾಷ್ಟ್ರದ ಉಪಾಧ್ಯಕ್ಷ. ಆಡಳಿತ ಸೌಕರ್ಯಕ್ಕಾಗಿ ದೇಶವನ್ನು 19 ವಿಭಾಗಗಳಾಗಿ ಮಾಡಲಾಗಿದೆ ಪ್ರತಿ ವಿಭಾಗದ ಆಡಳಿತವೂ ಒಬ್ಬ ಮೇಲ್ವಿಚಾರಕನ (ಇಂಟೆಂಡಂಟ್) ಹಾಗೂ 31 ಸದಸ್ಯರಿರುವ ಮಂತ್ರಣ ಸಭೆಯ (ಜಂಟ) ಅಧೀನದಲ್ಲಿರುತ್ತದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]


Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉರುಗ್ವೆ&oldid=1146785" ಇಂದ ಪಡೆಯಲ್ಪಟ್ಟಿದೆ