ಮೇ ಫ್ಲವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇ ಫ್ಲವರ್

ಮೇ ಫ್ಲವರ್ ಬೀನ್‍ ಕುಟುಂಬದ ಪ್ಯಾಬಾಸೇಯ ಹಾಗೂ ಸೀಸಲ್ಪಿನಿಯೊಡೈ ಉಪ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡೆಲೋನಿಕ್ಸ್‍ ರೇಜಿಯಾ. ಜರಿ ರೀತಿಯ ಎಲೆಗಳು ಹಾಗೂ ಯಥೇಚ್ಛಾವಾಗಿ ಬೆಳೆಯುವ ಹೂಗಳಿಂದ ಇದು ಪ್ರಸಿದ್ಧವಾಗಿದೆ. ಪ್ರಪಂಚದ ಅನೇಕ ಉಷ್ಣ ವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರದಂತೆ ಬೆಳೆಯಲಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ Royal poinciana ಅಥವಾ Flamboyant ಎಂದು ಕರೆಯಲಾಗುತ್ತದೆ. ಜ್ವಾಲೆಯ ಮರ ಎಂದು ಕರೆಯಲ್ಪಡುವ ಹಲವಾರು ವೃಕ್ಷಗಳಲ್ಲಿ ಇದೂ ಒಂದಾಗಿದೆ.

ವಿವರಣೆ[ಬದಲಾಯಿಸಿ]

ಮೇಫ್ಲವರ್ ಹೂವುಗಳು ದೊಡ್ಡದಾಗಿದ್ದು, ಕಡುಗೆಂಪು ಅಥವಾ ಕಿತ್ತಳೆ-ಕೆಂಪು ಬಣ್ಣದ ದಳಗಳು ನಾಲ್ಕು ಕಡೆಗಳಿಂದ ಹರಡಿರುತ್ತವೆ. ಇವು ಸಾಮಾನ್ಯವಾಗಿ 8 ಸೆಂ.ಮೀ. ಉದ್ದವಿರುತ್ತವೆ ಮತ್ತು ಐದನೇ ನೇರವಾದ ದಳ ಸ್ಟ್ಯಾಂಡರ್ಡ್‍ ಎಂದು ಕರೆಯಲ್ಪಡುತ್ತದೆ. ಇದು ಸ್ವಲ್ಪ ದೊಡ್ಡದಾಗಿದ್ದು, ಹಳದಿ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇವುಗಳು ಕೊಂಬೆಗಳ ತುದಿಯಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಮೊಗ್ಗುಗಳು ಹಸಿರು ಮತ್ತು ಹಳದಿ ಬಣ್ಣದಲ್ಲಿರುತ್ತವೆ, ಕ್ರಮೇಣ ಕಪ್ಪು-ಕಂದು ಬಣ್ಣಕ್ಕೆ ತಿರುಗುತ್ತವೆ. ಅವು 60 ಸೆಂ.ಮೀ ಉದ್ದ ಮತ್ತು 5 ಸೆಂ.ಮೀ ಅಗಲವಿರುತ್ತವೆ. ಬೀಜಗಳು ಚಿಕ್ಕದಾಗಿದ್ದು, ಸರಾಸರಿ 0.4 ಗ್ರಾಂ ತೂಕವಿರುತ್ತದೆ. ಇದರ ಸಂಯುಕ್ತ ಎಲೆಗಳು ಗರಿಗಳಂತೆ ಇರುತ್ತದೆ ಮತ್ತು ಗಾಢವಾದ ಹಸಿರು ಬಣ್ಣ ಹೊಂದಿರುತ್ತವೆ. ಪ್ರತಿಯೊಂದು ಎಲೆಯು 30 ರಿಂದ 50 ಸೆಂ.ಮೀ. ಉದ್ದವಾಗಿರುತ್ತದೆ.[೧]

ಹಂಚಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಮೇ ಫ್ಲವರ್ ಮೂಲತಃ ಮಡಗಾಸ್ಕರ್ನ ಶುಷ್ಕ ಪತನ ಶೀಲ ಅರಣ್ಯಗಳಿಗೆ ಸೇರಿದ್ದಾಗಿದೆ. ಆದರೆ ವಿಶ್ವಾದ್ಯಂತ ಉಷ್ಣ ವಲಯದ ಮತ್ತು ಉಪ-ಉಷ್ಣ ವಲಯದ ಪ್ರದೇಶಗಳಲ್ಲಿ ಇದನ್ನು ಕಾಣಬಹುದಾಗಿದೆ. ಕಾಡುಗಳಲ್ಲಿ ಇದು ವಿರಳವಾಗಿ ಕಂಡು ಬಂದರೂ, ಇತರ ಕಡೆಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತದೆ.

ಕೃಷಿ ವಿಧಾನ[ಬದಲಾಯಿಸಿ]

ಮೇ ಫ್ಲವರ್ ಮರ ಸಾಮಾನ್ಯವಾಗಿ ಉಷ್ಣ ವಲಯದ ವಾತಾವರಣದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆದರೆ ಬರ ಮತ್ತು ಲವಣ ಅಂಶ ಹೆಚ್ಚಿರುವ ಪ್ರದೇಶದಲ್ಲೂ ಇವುಗಳನ್ನು ಕಾಣಬಹುದು. ಈ ಮರವು ಸಾವಯವ ಗುಣಗಳಿಂದ ಸಮೃದ್ಧವಾಗಿರುವ ಕೊಳೆತ ಮಣ್ಣಿಗೆ ಆದ್ಯತೆ ನೀಡುತ್ತದೆ. ಜೇಡಿ ಮಣ್ಣು ಮೇ ಫ್ಲವರ್ ಬೆಳೆಯಲು ಸೂಕ್ತವಲ್ಲ. ಅದರ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಯಲ್ಲಿ ಇದು ನೆರಳು ಮರವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ 5 ಮೀ, ಕೆಲವೊಂದು 12 ಮೀ ಎತ್ತರವನ್ನು ತಲುಪಬಹುದು. ಅದರ ದಟ್ಟವಾದ ಎಲೆಗಳು ವ್ಯಾಪಕವಾಗಿ ಹರಡುವುದರಿಂದ ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ ಬರಗಾಲದ ಸಮಯದಲ್ಲೂ ಇದು ಬೆಳೆಯುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ ನಿತ್ಯಹರಿದ್ವರ್ಣವಾಗಿದೆ.

ಹಿನ್ನೆಲೆ[ಬದಲಾಯಿಸಿ]

ವಿಯೆಟ್ನಾದ ರಾಜವಂಶಸ್ಥರು ಇದನ್ನು ಬೆಳೆಸುತ್ತಿದ್ದರು ಎನ್ನಲಾಗಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್ನ ಉಪನಗರಗಳಲ್ಲಿ ಇದು ಒಂದು ಜನಪ್ರಿಯ ಬೀದಿ ಮರವಾಗಿದೆ. ಭಾರತದಲ್ಲೂ ಹೆಚ್ಚಾಗಿ ಕಾಣಸಿಗುವ ಈ ಮರವನ್ನು ಮೇ-ಹೂವಿನ ಮರ ಅಥವಾ ಗುಲ್ಮೊಹರ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಾಂಗ್ಲಾದೇಶದಲ್ಲಿ ಇದನ್ನು ಕೃಷ್ಣಕುರಾ ಎಂದು ಕರೆಯಲಾಗುತ್ತದೆ.

ಪ್ರಸರಣ[ಬದಲಾಯಿಸಿ]

ಮೇ ಫ್ಲವರ್ ಸಾಮಾನ್ಯವಾಗಿ ಬೀಜಗಳಿಂದ ಹರಡುತ್ತದೆ. ಬೀಜಗಳನ್ನು ಸಂಗ್ರಹಿಸಿ, ಕನಿಷ್ಠ 24 ಗಂಟೆಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿ, ಅರೆ-ಮಬ್ಬಾದ, ತೇವಭರಿತ ಮಣ್ಣಲ್ಲಿ ಇದನ್ನು ನೆಡಲಾಗುತ್ತದೆ. ಇದರ ಮೊಳಕೆಗಳು ವೇಗವಾಗಿ ಬೆಳೆಯುವುದಲ್ಲದೇ, ಕೆಲವು ವಾರಗಳಲ್ಲೇ 30 ಸೆಂ.ಮೀ.ನಷ್ಟು ಬೆಳೆಯುತ್ತದೆ. ಇದರ ಗಟ್ಟಿ ಮರವನ್ನು ಅರೆ ಕತ್ತರಿಸುವ ಮೂಲಕವೂ ಪ್ರಸರಣ ಮಾಡಬಹುದು. ಕೊನೆಯ ಋತುವಿನ ಬೆಳವಣಿಗೆಯನ್ನು ಒಳಗೊಂಡಿರುವ ಇದರ ಶಾಖೆಗಳನ್ನು 30 ಸೆಂ.ಮೀ ನಂತೆ ವಿಭಾಗಗಳಾಗಿ ಕತ್ತರಿಸಿ ತೇವಾಂಶ ಇರುವ ಜಾಗದಲ್ಲಿ ನೆಡಬಹುದಾಗಿದೆ. ಈ ವಿಧಾನದಲ್ಲಿ ಗಿಡಗಳು ಬೀಜ ಪ್ರಸರಣಕ್ಕಿಂತ ನಿಧಾನವಾಗಿ ಮೊಳಕೆ ಒಡೆಯುತ್ತದೆ.

ಮೇ ಫ್ಲವರ್ ಪ್ರಪಂಚದ ವಿವಿದೆಡೆ ಹೂ ಬಿಡುವ ಋತುಗಳು[ಬದಲಾಯಿಸಿ]

 1. ಕ್ಯಾನರಿಐಲ್ಸ್ / ಟೆನೆರೈಫ್  : ಮೇ-ಜೂನ್
 2. ಬಾಂಗ್ಲಾದೇಶ : ಏಪ್ರಿಲ್-ಮೇ
 3. ದಕ್ಷಿಣ ಫ್ಲೋರಿಡಾ : ಮೇ-ಜೂನ್
 4. ದಕ್ಷಿಣ ಟೆಕ್ಸಾಸ್  : ಮೇ-ಜೂನ್
 5. ಈಜಿಪ್ಟ್ : ಮೇ-ಜೂನ್
 6. ಡೊಮಿನಿಕನ್‍ ರಿಪಬ್ಲಿಕ್  : ಜುಲೈ-ಸೆಪ್ಟೆಂಬರ್
 7. ವಿಯೆಟ್ನಾಂ : ಮೇ-ಜುಲೈ
 8. ಕೆರೆಬಿಯನ್ : ಮೇ-ಸೆಪ್ಟೆಂಬರ್
 9. ಭಾರತೀಯ ಉಪಖಂಡ  : ಏಪ್ರಿಲ್-ಜೂನ್
 10. ಆಸ್ಟ್ರೇಲಿಯಾ  : ನವೆಂಬರ್-ಫೆಬ್ರವರಿ
 11. ಉತ್ತರ ಮರಿಯಾನಾವ ದ್ವೀಪಗಳು : ಮಾರ್ಚ್-ಜೂನ್
 12. ಯುನೈಟೆಡ್ ಅರಬ್ ಎಮಿರೇಟ್ಸ್ : ಮೇ-ಜುಲೈ
 13. ಬ್ರೆಜಿಲ್ : ನವೆಂಬರ್-ಫೆಬ್ರವರಿ
 14. ದಕ್ಷಿಣ ಸುಡಾನ್ : ಮಾರ್ಚ್-ಮೇ
 15. ಥೈಲ್ಯಾಂಡ್ : ಏಪ್ರಿಲ್-ಮೇ
 16. ಫಿಲಿಫೈನ್ಸ್ : ಏಪ್ರಿಲ್-ಜೂನ್
 17. ಪೆರು (ಕರಾವಳಿ) : ಜನವರಿ-ಮಾರ್ಚ್
 18. ಮಲಾವಿ, ಜಾಂಬಿಯಾ, ಜಿಂಬಾಬ್ವೆ : ಅಕ್ಟೋಬರ್-ಡಿಸೆಂಬರ್
 19. ಹಾಂಗ್ಕಾಂಗ್ : ಮೇ-ಜೂನ್
 20. ಮಾರಿಷಸ್ : ನವೆಂಬರ್-ಡಿಸೆಂಬರ್
 21. ಇಸ್ರೇಲ್ : ಮೇ-ಜೂನ್
 22. ಹವಾಯಿ : ಮೇ-ಜೂನ್
 23. ಕಾಂಗೋ ಆಖ : ನವೆಂಬರ್ - ಡಿಸೆಂಬರ್
 24. ಮಲೇಷಿಯಾ : ನವೆಂಬರ್ - ಡಿಸೆಂಬರ್
 25. ಬರ್ಮುಡಾ : ಮೇ - ಆಗಸ್ಟ್

ಸಾಂಸ್ಕೃತಿಕ ಮಹತ್ವ[ಬದಲಾಯಿಸಿ]

ಭಾರತದ ಕೇರಳ ರಾಜ್ಯದಲ್ಲಿ, ಮೇ ಫ್ಲವರ್ ಅನ್ನು ಕಾಲ್ವಾರಿಪ್ಪೂ ಎಂದು ಕರೆಯಲಾಗುತ್ತದೆ. ಕೇರಳದ ಸೇಂಟ್‍ಥೋಮಸ್ ಕ್ರಿಶ್ಚಿಯನ್ಸ್ ನಂಬಿಕೆಯಂತೆ, ಏಸುವನ್ನು ಶಿಲುಬೆಗೇರಿಸಿದಾಗ ಈ ಮರವು ಆತನ ಪಕ್ಕದಲ್ಲೇ ಇತ್ತು. ಏಸುವಿನ ಗಾಯದಿಂದ ಹರಿದ ರಕ್ತ ಈ ಮರದ ಹೂವಿನ ಮೇಲೆ ಬಿತ್ತು. ಆದ ಕಾರಣ ಇದರ ಹೂಗಳು ಗಾಢ ಕೆಂಪು ಬಣ್ಣವನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಕೇರಳದ ಅನೇಕ ಪ್ರದೇಶಗಳಲ್ಲಿ ಇದನ್ನು ವಗಾ ಎಂದೂ ಕರೆಯಲಾಗುತ್ತದೆ. ಇದು ಸೇಂಟ್‍ ಕಿಟ್ಸ್ ಮತ್ತು ನೇವಿಸ್‍ನ ರಾಷ್ಟ್ರೀಯ ಹೂವಾಗಿದೆ. ಕ್ಯೂಬದಲ್ಲಿನ ಈ ಮರದ ಪ್ರೇರಣೆಯಿಂದ `ಪಾಂಕಿಯಾನ' ಹಾಡು ಹುಟ್ಟಿತು ಎಂದು ಹೇಳಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಔಷಧೀಯ ಬಳಕೆ[ಬದಲಾಯಿಸಿ]

 1. ಮೇ ಫ್ಲವರ್ ಬೀಜಗಳನ್ನು ಸಾಮಾನ್ಯವಾಗಿ ಆಹಾರವಾಗಿ ಸೇವಿಸಲಾಗುತ್ತದೆ. ಇದರ ಸೇವನೆ ಮಾನವ ದೇಹಕ್ಕೆ ಪೌಷ್ಠಿಕಾಂಶವನ್ನು ಒದಗಿಸುತ್ತದೆ.
 2. ಇದರ ಎಲೆ, ಹೂವು ಮತ್ತು ಕಾಂಡ ಹಲವು ಔಷಧೀಯ ಗುಣಗಳನ್ನು ಹೊಂದಿದೆ.
 3. ಜಾನಪದ ಮೂಲಿಕೆಗಳಲ್ಲೂ ಇದನ್ನು ಉಪಯೋಗಿಸಲಾಗುತ್ತದೆ. ಮೂಲವ್ಯಾಧಿ, ಉರಿಯೂತ, ಸಕ್ಕರೆ ಖಾಯಿಲೆ, ನ್ಯಮೋನಿಯಾ ಹಾಗೂ ಮಲೇರಿಯಾ ರೋಗಗಳ ಚಿಕಿತ್ಸೆಯಲ್ಲಿ ಇದರ ಉಪಯೋಗ ಇದೆ.
 4. ಪೂರ್ವ ನೈಜಿರಿಯಾ ಪ್ರದೇಶಗಳಲ್ಲಿ ಇದನ್ನು ನೋವು ನಿವಾರಕ ಮೂಲಿಕೆಯಾಗಿ ಬಳಸಲಾಗುತ್ತದೆ.

ಇತರ ಬಳಕೆ[ಬದಲಾಯಿಸಿ]

 1. ಈ ಮರಗಳನ್ನು ಟೀ ತೋಟಗಾರಿಕಾ ಪ್ರದೇಶಗಳಲ್ಲಿ ಬೇಲಿ ಮರವಾಗಿ ಬೆಳೆಸಲಾಗುತ್ತದೆ.
 2. ಈ ಮರದ ಬೇರುಗಳು ದೃಢವಾಗಿ ಬೇರೂರುವುದರಿಂದ, ಇದನ್ನು ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸಲು ಬೆಳೆಸಲಾಗುತ್ತದೆ.
 3. ಈ ಮರವು ಅಂಟು ರೀತಿಯ ದ್ರವ್ಯವನ್ನು ಉತ್ಪಾದಿಸುತ್ತದೆ. ಇದನ್ನು ಜವಳಿ ಮತ್ತು ಆಹಾರ ತಯಾರಿಕಾ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
 4. ಇದರ ಬೀಜಗಳಲ್ಲಿ ತೈಲ ಅಂಶ ಹೆಚ್ಚಿದ್ದು, ಇದು ಸೋಪ್ ಮತ್ತು ಶಾಂಪೂ ತಯಾರಿಕೆಯಲ್ಲಿ ಹೆಚ್ಚು ಉಪಯುಕ್ತ
 5. ಇದರ ಬೀಜಗಳನ್ನು ಅಲಂಕಾರಿಕ ಆಭರಣಗಳನ್ನು ಮಾಡುವಲ್ಲಿಯೂ ಉಪಯೋಗಿಸಲಾಗುತ್ತದೆ.
 6. ಈ ಮರದ ದ್ರವ್ಯ ಸಾರ ಆಸಿಡ್ ಅಂಶವನ್ನು ಹೊಂದಿದ್ದು, ಇದನ್ನು ನೈಸರ್ಗಿಕ ಕ್ರಿಮಿನಾಶಕವಾಗಿ ಉಪಯೋಗಿಸಬಹುದು.[೨]

ಉಲ್ಲೇಖ[ಬದಲಾಯಿಸಿ]

 1. https://sciencing.com/growth-rate-royal-poinciana-8496301.html
 2. "ಆರ್ಕೈವ್ ನಕಲು". Archived from the original on 2020-08-04. Retrieved 2018-09-30.