ಕ್ಯೂಬಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕ್ಯೂಬ ಇಂದ ಪುನರ್ನಿರ್ದೇಶಿತ)
ಕ್ಯೂಬಾ ಗಣರಾಜ್ಯ
República de Cuba
Flag of ಕ್ಯೂಬಾ
Flag
Motto: Patria o Muerte(ಸ್ಪಾನಿಷ್)
"Homeland or Death" a
Anthem: La Bayamesa("The Bayamo Song")
Location of ಕ್ಯೂಬಾ
Capital
and largest city
ಹವಾನ
Official languagesಸ್ಪಾನಿಷ್
Governmentಸಮಾಜವಾದಿ ಗಣರಾಜ್ಯb
ಫಿಡೆಲ್ ಕ್ಯಾಸ್ಟ್ರೊ
ರೌಲ್ ಕ್ಯಾಸ್ಟ್ರೊ (acting)
ಸ್ವಾತಂತ್ರ್ಯ 
ಸ್ಪೇನ್ನಿಂದ
• ಘೋಷಿತc
October 10 1868
• Republic declared
May 20 1902
January 1 1959
• Water (%)
negligible
Population
• 2006 estimate
11,382,820 (73rd)
• 2002 census
11,177,743
GDP (PPP)೨೦೦೬ estimate
• Total
$44.54 billion (2006 est.) (not ranked)
• Per capita
$3,900 (not ranked)
HDI (೨೦೦೪) 0.826
Error: Invalid HDI value · 50th
CurrencyPeso (CUP)
Convertible peso d (CUC)
Time zoneUTC-5 (EST)
• Summer (DST)
UTC-4 ((Starts March 11; ends November 4))
Calling code53
Internet TLD.cu
a As shown on the obverse of the 1992 coin[೧] (Note that the Spanish word "Patria" is better translated into English as "Homeland" rather than "Fatherland" or "Motherland").
b[೨] states that "Cuba is an independent and sovereign socialist state [Article 1]... the name of the Cuban state is Republic of Cuba [Article 2]". The usage "socialist republic" to describe the style of government of Cuba is nearly uniform, though forms of government have no universally agreed typology. For example, Atlapedia[೩] describes it as "Unitary Socialist Republic"; Encyclopedia Britannica[೪] omits the word "unitary", as do most sources.
c At the start of the Ten Years' War.
d From 1993 to 2004, the U.S. dollar was used in addition to the peso until the dollar was replaced by the convertible peso.

ಕ್ಯೂಬಾ, ಅಧಿಕೃತವಾಗಿ ಕ್ಯೂಬಾ ಗಣರಾಜ್ಯ (ಸ್ಪಾನಿಷ್ ಭಾಷೆಯಲ್ಲಿ: República de Cuba) ಉತ್ತರ ಕೆರಿಬಿಯನ್ನಲ್ಲಿ ಇರುವ ಒಂದು ದ್ವೀಪಗಳ ದೇಶ.

ಅದು ವೆಸ್ಟ್ ಇಂಡೀಸಿನ ಗ್ರೇಟರ್ ಆಂಟಿಲಿಸ್ ದ್ವೀಪಗಳ ಪೈಕಿ ಅತ್ಯಂತ ದೊಡ್ಡದಾದ ಮತ್ತು ಅತ್ಯಂತ ಹೆಚ್ಚಿನ ಜನಸಂಖ್ಯೆಯುಳ್ಳ ದ್ವೀಪ. ಅಮೆರಿಕ ಸಂಯುಕ್ತಸಂಸ್ಥಾನದ ಫ್ಲಾರಿಡಕ್ಕೆ 90 ಮೈ. ದಕ್ಷಿಣದಲ್ಲಿರುವ ಈ ದ್ವೀಪದ ಉದ್ದ ಪೂರ್ವ-ಪಶ್ಚಿಮವಾಗಿ 746 ಮೈ. ಇದರ ಸರಾಸರಿ ಅಗಲ 62 ಮೈ. ಇದರ ಅಗಲ 22 ಮೈ.ಗಳಿಂದ 124 ಮೈ. ವರೆಗೆ ವ್ಯತ್ಯಾಸವಾಗುತ್ತದೆ. ತೀರದ ಬಳಿಯ ಈಸ್ಲಾ ದ ಪಿನೋಸ್ ಮತ್ತು ಸುಮಾರು 1,600 ಕಿರುದ್ವೀಪಗಳೂ ಸೇರಿ ಇದರ ವಿಸ್ತೀರ್ಣ 44,218 ಚ.ಮೈ. ಜನಸಂಖ್ಯೆ 79,37,200 (1967). ಉ.ಅ.19º 49'-23º 15' ಮತ್ತು ಪ.ರೇ.74º 8' ಮತ್ತು 84º 57' ನಡುವೆ, ಮೆಕ್ಸಿಕೋ ಕೊಲ್ಲಿಯ ದ್ವಾರದ ಬಳಿ, ಉತ್ತರಕ್ಕೆ ಬಾಗಿದ ಬಿಲ್ಲಿನಂತೆ ಇರುವ ಕ್ಯೂಬದ ಸನ್ನಿವೇಶ ಮಹತ್ವದ್ದು. ವಸಾಹತು ಯುಗದ ಆದಿಕಾಲದಲ್ಲಿ ಸ್ಪೇನಿನವರು ಇದನ್ನು ಹೊಸ ಜಗತ್ತಿನ ಬೀಗದಕೈ ಎಂದು ವರ್ಣಿಸುತ್ತಿದ್ದರು. ಈಗಲೂ ರಾಜಕೀಯವಾಗಿಯೂ ಆರ್ಥಿಕವಾಗಿಯೂ ಇದರ ಆಯಕಟ್ಟಿನ ಸ್ಥಾನಮಹತ್ತ್ವ ಕಡಿಮೆಯಾಗಿಲ್ಲ. ಅಮೆರಿಕ ಸಂಯುಕ್ತಸಂಸ್ಥಾನದ ಪೂರ್ವ ರಾಜ್ಯಗಳ ಜನನಿಬಿಡ ಕೇಂದ್ರಗಳಿಗೆ ಸನಿಯದಲ್ಲಿರುವುದರಿಂದ ಕ್ಯೂಬ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಬೃಹದ್ ರಾಷ್ಟ್ರಗಳ ಗಮನ ಸೆಳೆದಿದೆ.

ಭೌತಿಕ ಲಕ್ಷಣಗಳು[ಬದಲಾಯಿಸಿ]

ಕ್ಯೂಬ ಬಹುತೇಕ ವಿಶಾಲ ಕಣಿವೆಗಳಿಂದ ಕೂಡಿದ ನಾಡು. ಒಟ್ಟು ವಿಸ್ತೀರ್ಣದ ಕಾಲುಭಾಗ ಪರ್ವತಪ್ರದೇಶ. ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಇದು ಹಬ್ಬಿದೆ. ಪರ್ವತಶ್ರೇಣಿಗಳ ನಡುವೆ ವಿಶಾಲವಾದ ಮೈದಾನಗಳಿವೆ. ಕೃಷಿಯ ದೃಷ್ಟಿಯಿಂದ ಅಮೂಲ್ಯವಾಗಿವೆ. ಸಾರಿಗೆ ಬೆಳವಣಿಗೆಗೂ ಅನುಕೂಲವಾಗಿವೆ.

ಕ್ಯೂಬದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 325'. ಸಿಯೆರಾ ಮೇಸ್ತ್ರ ಶ್ರೇಣಿಯ ಪಿಕೋ ಟಕ್ರ್ವಿನೊ (6,578') ಅತ್ಯುನ್ನತ ಶಿಖರ. ಆಗ್ನೇಯ ತುದಿಯ ಪರ್ವತಪ್ರದೇಶದ ಕೆಲವು ಭಾಗಗಳ ಗರಿಷ್ಠ ಎತ್ತರ 2,000'ಗಿಂತ ಹೆಚ್ಚು. ಕಾಮಾಗ್ವೆಯಿಯ ಬೆಟ್ಟಗಳ ಗರಿಷ್ಠ ಇತ್ತರ ಸುಮಾರು 1,000'. ದಕ್ಷಿಣ ಲಾಸ್ ವಿಲಾಸ್‍ನ ಟ್ರಿನಿಡಾಡ್ ಪರ್ವತಗಳ ಅತ್ಯುನ್ನತ ಶಿಖರ 3,800' ಇದೆ. ಉತ್ತರ ತೀರದ ಬಳಿಯ ಪೀನಾರ್ ದೆಲ್ ರೀಯೊ ಪ್ರದೇಶದಲ್ಲಿ ಅತ್ಯಂತ ಎತ್ತರದ ಸ್ಥಳ 2,389'.

ಕ್ಯೂಬದಲ್ಲಿ 200ಕ್ಕೂ ಹೆಚ್ಚು ನದಿಗಳಿವೆ. ಇವುಗಳಲ್ಲಿ ಬಹುತೇಕ ನದಿಗಳು ಉತ್ತರಕ್ಕೋ ದಕ್ಷಿಣಕ್ಕೋ ಹರಿಯುತ್ತವೆ. ಕೆಲವು ನದಿಗಳ ಅಳಿವೆಗಳು ಆಳವಾಗಿಯೂ ಅಗಲವಾಗಿಯೂ ಉಂಟು. ಇವು ನೌಕಾಸಂಚಾರಕ್ಕೆ ಅನುಕೂಲಕರ. ಕ್ಯೂಬ ದ್ವೀಪದ ಅಗಲ ಕಿರಿದಾದ್ದರಿಂದ ಬಹುತೇಕ ನದಿಗಳು ಮೊಟಕಾಗಿವೆ. ಅತ್ಯಂತ ಉದ್ದದ ನದಿ ಕಾಟೊ (155 ಮೈ.). ಪಶ್ಚಿಮ ಓರಿಯೆಂಟೆಯ ಅಗಲವಾದ ಮೈದಾನದಲ್ಲಿ ಸಿಯೆರಾ ಮೇಸ್ತ್ರಕ್ಕೆ ಸಮಾನಾಂತರದಲ್ಲಿ ಇದು ಹರಿಯುತ್ತದೆ. ಕ್ಯೂಬದ ಕಡಲ ಕಿನಾರೆಯ (ಕೋಸ್ಟ್ ಲೈನ್) ಉದ್ದ ಸುಮಾರು 2,200 ಮೈ. ಇದರ ಉದ್ದಕ್ಕೂ ಅನೇಕ ಒಳ್ಳೆಯ ಬಂದರುಗಳಿವೆ.

ಕ್ಯೂಬವನ್ನು ಅದರ ಮೇಲ್ಮೈ ಲಕ್ಷಣಗಳಿಗೆ ಅನುಗುಣವಾಗಿ ನಾಲ್ಕು ಮುಖ್ಯ ಭೌಗೋಳಿಕ ಪ್ರದೇಶಗಳಾಗಿ ಹೀಗೆ ವಿಂಗಡಿಸಬಹುದು: 1. ಪಶ್ಚಿಮದ ಮೂರು ಪ್ರಾಂತ್ಯಗಳನ್ನೊಳಗೊಂಡ ಆಕ್ಸಿಡೆಂಟ್; 2. ಕೇಂದ್ರ ಪ್ರಾಂತ್ಯದ ಬಹು ಭಾಗವನ್ನಾವರಿಸಿರುವ ಲಾಸ್ ವಿಲಾಸ್; 3. ಕಾಮಾಗ್ವೆಯಿ ಮತ್ತು ಓರಿಯೆಂಟೆ ಪ್ರಾಂತ್ಯದ ವಾಯವ್ಯಭಾಗ; 4 ಓರಿಯೆಂಟೆಯ ಉಳಿದೆಲ್ಲ ಭಾಗ.

ವಾಯುಗುಣ[ಬದಲಾಯಿಸಿ]

ಕ್ಯೂಬದ್ದು ಸಾಮಾನ್ಯವಾಗಿ ಸಾಗರಿಕ ಉಷ್ಣವಲಯ ವಾಯುಗುಣ. ಕ್ಯೂಬದ ಯಾವ ಭಾಗವೂ ಸಮುದ್ರದಿಂದ ಬಹು ದೂರ ಇಲ್ಲವಾದ್ದರಿಂದ ಅದು ಸಮುದ್ರದ ಪ್ರಭಾವಕ್ಕೆ ಒಳಗಾಗಿದೆ. ಜನವರಿಯಲ್ಲಿ ಮಧ್ಯಕ ಉಷ್ಣತೆ 700 ಫ್ಯಾ., ಜುಲೈಯಲ್ಲಿ 810 ಫ್ಯಾ. ಅಲ್ಲಿ 900 ಫ್ಯಾ.ಗೂ ಹೆಚ್ಚಿನ ಗರಿಷ್ಠ ಉಷ್ಣತೆ ಬರ್ಫ ಬಿಂದುವಿಗಿಂತ ಕೆಳಕ್ಕೆ ಇಳಿಯುವುದುಂಟು. ವರ್ಷವೆಲ್ಲ ಬೀಸುವ ವ್ಯಾಪಾರಮಾರುತಗಳಿಂದ ತೀರಪ್ರದೇಶ ಹೆಚ್ಚು ತಂಪಾಗಿರುತ್ತದೆ. ಇವು ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೇಸಗೆಯಲ್ಲಿ ಪೂರ್ವ-ಆಗ್ನೇಯಗಳಿಂದಲೂ ಬೀಸುತ್ತವೆ. ಅಪರೂಪವಾಗಿ ಅಮೆರಿಕ ಸಂಯುಕ್ತಸಂಸ್ಥಾನದ ಖಂಡಪ್ರದೇಶದಿಂದ ಮೊತ್ತವಾಗಿ ಬೀಸುವ ಚಳಿಗಾಳಿಯ ಪ್ರಭಾವಕ್ಕೆ ಉತ್ತರ ತೀರಪ್ರದೇಶ ಒಳಗಾಗುವುದುಂಟು.

ಕ್ಯೂಬದಲ್ಲಿ ಮಳೆ ಧಾರಾಳ; ವಾರ್ಷಿಕ ಸರಾಸರಿ 54". ಪೀನ್ ದೆಲ್ ರೀಯೊ ಪರ್ವತಭಾಗದಲ್ಲಿ ಗರಿಷ್ಠ ಮಳೆಯಾಗುತ್ತದೆ (65"). ಓರಿಯೆಂಟೆಯ ದಕ್ಷಿಣ ತೀರದಲ್ಲಿ 30"ಗಿಂತ ಕಡಿಮೆ. ಮೇ-ನವೆಂಬರ್ ಮಳೆಗಾಲ. ವರ್ಷದ ಮಳೆಯ ಮುಕ್ಕಾಲು ಪಾಲು ಬೀಳುವುದು ಈ ಕಾಲದಲ್ಲಿ. ಕ್ಯೂಬ ಚಂಡಮಾರುತಗಳಿಗೆ ತುತ್ತಾಗುವುದಂಟು. ವೇಗದಿಂದ ಬೀಸುವ ಗಾಳಿ, ಅತಿಯಾದ ಮಳೆ ಮತ್ತು ಅಲೆಯ ಹೊಡೆತಗಳಿಂದ ಮನೆ, ಬೆಳೆಗಳೂ ಜನರೂ ಹಾನಿಗೆ ಒಳಗಾಗುವುದುಂಟು. ಪೂರ್ವದಲ್ಲಿ ಇವುಗಳ ಹಾವಳಿ ಹೆಚ್ಚು.

ಸಸ್ಯಗಳು, ಪ್ರಾಣಿಗಳು[ಬದಲಾಯಿಸಿ]

ಕ್ಯೂಬದ ಸಸ್ಯರಾಶಿ ವೈವಿಧ್ಯಪೂರಿತ. ವೆಸ್ಟ್ ಇಂಡೀಸ್, ದಕ್ಷಿಣ ಫ್ಲಾರಿಡ, ಮೆಕ್ಸಿಕೋ, ಮಧ್ಯ ಅಮೆರಿಕ ಇವುಗಳ ಪ್ರಭೇದಗಳು ಇಲ್ಲುಂಟು. ಹಲವಾರು ಹೊಸ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಕಬ್ಬು, ಕಾಫಿ, ಕೆಕಾವೊ, ಬಾಳೆ ಉದಾಹರಣೆಗಳು. ಕ್ಯೂಬದ ಫಲವತ್ತಾದ ಮೈದಾನಗಳಲ್ಲಿ ಹಲವಾರು ಅಮೂಲ್ಯ ಮರಗಳ ಕಾಡುಗಳು ಹಬ್ಬಿದ್ದುವು. ಅವನ್ನೆಲ್ಲ ಬಹುತೇಕ ಕೃಷಿಗಾಗಿ ಕಡಿಯಲಾಗಿದೆ. ಪರ್ವತಗಳ ಮೇಲೆ ಕಾಡುಗಳು ಉಳಿದುಕೊಂಡಿವೆ. ಕ್ಯೂಬದ ಕಾಲುಭಾಗವನ್ನು ಉಷ್ಣವಲಯದ ಹುಲ್ಲುಗಾಡು ಆವರಿಸಿತ್ತು. ತೀರಪ್ರದೇಶದಲ್ಲಿ-ಮುಖ್ಯವಾಗಿ ದಕ್ಷಿಣದ ಕರಾವಳಿಯಲ್ಲಿ-ಗುಲ್ಮವೃಕ್ಷಗಳಿವೆ.

ಕ್ಯೂಬದ ಪ್ರಾಣಿ ಪ್ರಭೇದಗಳೂ ಬಗೆಗಳೂ ವೈವಿಧ್ಯಮಯ. ಇವುಗಳಲ್ಲಿ ಕಶೇರುಕಗಳಿಗಿಂತ ಅಕಶೇರುಕಗಳು ಅಧಿಕ. ಅನೇಕ ಪ್ರಭೇದಗಳು ಸ್ಥಳೀಯವಾದವುಗಳು. ಬಾವಲಿಗಳ, ದಂಶಕಗಳ ಹಲವು ಪ್ರಭೇದಗಳುಂಟು. ಅತ್ಯಂತ ದೊಡ್ಡ ಬಾವಲಿ ಸಣ್ಣ ಮೀನುಗಳನ್ನು ತಿನ್ನುತ್ತದೆ. ಅತಿ ಸಣ್ಣ ಬಾವಲಿಗೆ ಚಿಟ್ಟೆ ಬಾವಲಿ ಎಂದು ಹೆಸರು. ದೊಡ್ಡ ಇಲಿಗಳ ಮೂರು ಪ್ರಭೇದಗಳು ಇಲ್ಲುಂಟು. ನದೀಮುಖಗಳಲ್ಲಿ ಕಡಲು ಹಸುಗಳಿವೆ. ಕ್ಯೂಬದಲ್ಲಿ ಹಕ್ಕಿಗಳ 297 ಪ್ರಭೇದಗಳೂ ಉಪಪ್ರಭೇದಗಳೂ ಉಂಟು. ಇವುಗಳಲ್ಲಿ 70 ಮಾತ್ರ ದೇಶೀಯವಾದವು. ಉರಗಗಳೂ ಸ್ಥಲ ಜಲೋಭಯ ಜೀವಿಗಳೂ ವಿರಳ. ಇಲ್ಲಿಯ ಬಲು ದೊಡ್ಡ ಹಲ್ಲಿ ಇಗ್ವಾನ. ಕೇಮನ್, ಕೊಕೊಡ್ರಿಲೊ ಎಂಬ ಎರಡು ಪ್ರಭೇದಗಳ ಮೊಸಳೆಗಳೂ ಸೀನೀರಿನ ಆಮೆಗಳೂ ಇವೆ. ಆದರೆ ವಿಷಸರ್ಪಗಳಿಲ್ಲ. ಸಮುದ್ರಮತ್ಸ್ಯಗಳೂ 4,000 ಮೃದ್ವಸ್ತಿ ಜಂತುಗಳ ಪ್ರಭೇದಗಳೂ ಬಸವನಹುಳುಗಳೂ ಉಂಟು. ಕ್ಯೂಬದ ಕೀಟ ಪ್ರಪಂಚವೂ ವೈವಿಧ್ಯಮಯ. ಹಳದಿ ಜ್ವರ ಹರಡುವ ಸೊಳ್ಳೆಯನ್ನು 1902ರಲ್ಲಿ ಬಹುತೇಕ ನಿರ್ನಾಮ ಮಾಡಲಾಯಿತು.

ಆರ್ಥಿಕತೆ[ಬದಲಾಯಿಸಿ]

ಇಪ್ಪತ್ತನೆಯ ಶತಮಾನದ ಆದಿಯಿಂದ ಕ್ಯೂಬದ ಆರ್ಥಿಕತೆ ಮುಖ್ಯವಾಗಿ ಕಬ್ಬಿನ ಬೆಳೆ ಮತ್ತು ಸಕ್ಕರೆ ತಯಾರಿಕೆಯನ್ನೇ ಆಧರಿಸಿದೆ. ಕ್ಯೂಬದ ಆದ್ಯಂತ ಕಬ್ಬನ್ನು ಬೆಳೆಯುತ್ತಾರೆ. ಆದರೆ ಕ್ಯೂಬದ ಪೂರ್ವಾರ್ಧದಲ್ಲಿ ಇದರ ಬೆಳೆ ಹೆಚ್ಚು. ಕ್ಯೂಬದಲ್ಲಿ ಕಚ್ಚಾ ಸಕ್ಕರೆ ತಯಾರಿಸುವ 160 ಕಾರ್ಖಾನೆಗಳಿದ್ದರೂ ಅದರ ಪರಿಷ್ಕರಣಕಾರ್ಯ ಅಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ಮೊದಮೊದಲು ಕ್ಯೂಬದ ಸಕ್ಕರೆ ಕೈಗಾರಿಕೆ ಪ್ರವರ್ಧಮಾನಕ್ಕೆ ಬಂತಾದರೂ ಅನಂತರ ಇದರಲ್ಲಿ ಪದೇ ಪದೇ ಏರಿಳಿತಗಳು ಸಂಭವಿಸಿವೆ. ಸಕ್ಕರೆ ಕೈಗಾರಿಕೆಯನ್ನು ಹಲವು ನಿಯಂತ್ರಣಗಳಿಗೆ ಒಳಪಡಿಸಲಾಗಿದೆ. ಕ್ಯೂಬದ ಇತರ ಬೆಳೆಗಳು ಹೊಗೆಸೊಪ್ಪು, ಆಹಾರಧಾನ್ಯಗಳು, ಬಾಳೆ, ಅನಾನಸ್ ಮತ್ತು ಪರಂಗಿ. ಕ್ಯೂಬದ ಹೊಗೆಸೊಪ್ಪನ್ನು ಚುಟ್ಟಾ ತಯಾರಿಕೆಗೆ ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಕ್ಯೂಬದಿಂದ ಹಲವು ಗಟ್ಟಿ ಮರಗಳನ್ನು ನಿರ್ಯಾತ ಮಾಡಲಾಗುತ್ತಿತ್ತು. ಈಗ ಇದನ್ನು ನಿಷೇಧಿಸಲಾಗಿದೆ.

ಕ್ಯೂಬದ ಗಣಿಗಾರಿಕೆಯೂ ಮುಖ್ಯವಾದ್ದು. ಪಿನಾರ್ ದೆಲ್ ರೀಯೊದಲ್ಲಿ ತಾಮ್ರದ ನಿಕ್ಷೇಪಗಳಿವೆ. ಓರಿಯೆಂಟೆ ಪ್ರಾಂತ್ಯದಲ್ಲಿ ಕಡಿಮೆ ದರ್ಜೆಯ ಕಬ್ಬಿಣದ ಅದುರು ಧಾರಾಳವಾಗುಂಟು. ಇದನ್ನು ಅಭಿವೃದ್ಧಿಪಡಿಸಿಲ್ಲ. ಮೋವ ಕೊಲ್ಲಿ ಪ್ರದೇಶದಲ್ಲಿ ನಿಕಲ್ ಸಿಗುತ್ತದೆ. ಗಣಿ ಕೈಗಾರಿಕೆಯನ್ನು ಬಹುತೇಕ ರಾಷ್ಟ್ರೀಕರಣಗೊಳಿಸಲಾಗಿದೆ. ಕ್ಯೂಬದಲ್ಲಿ ಕಲ್ಲಿದ್ದಲು ಇಲ್ಲ. ವಿದ್ಯುತ್ ವಿಭವವೂ ಹೆಚ್ಚಾಗಿ ಇಲ್ಲ. ಮನೆಯ ಇಂಧನ ಇದ್ದಿಲು. ಸೌದೆಯಿಂದ ಇದನ್ನು ತಯಾರಿಸಲಾಗುತ್ತದೆ. ಕಬ್ಬಿನ ಹಿಪ್ಪೆಯನ್ನು ಸಕ್ಕರೆ ಕೈಗಾರಿಕೆಯಲ್ಲಿ ಇಂಧನವಾಗಿ ಉಪಯೋಗಿಸುತ್ತಾರೆ. ಸಕ್ಕರೆಯ ಜೊತೆಗೆ ತಯಾರಾಗುವ ಪದಾರ್ಥಗಳು ರಮ್ ಮತ್ತು ಕೈಗಾರಿಕಾ ಮದ್ಯ ಸಾರ. ಕೈಗಾರಿಕಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮೀನುಗಾರಿಕೆಯನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ.

ಸಾರಿಗೆ, ನಗರಗಳು[ಬದಲಾಯಿಸಿ]

ರೈಲುಮಾರ್ಗಗಳೂ ರಸ್ತೆಗಳೂ ಕ್ಯೂಬದ ಮುಖ್ಯ ಪಟ್ಟಣಗಳ ಮತ್ತು ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸಿವೆ. 3,000 ಮೈ. ರೈಲುಮಾರ್ಗಗಳೂ 5,083 ಮೈ. ಸರ್ವಋತು ರಸ್ತೆಗಳೂ ಉಂಟು. ಕ್ಯೂಬ ಭೌಗೋಳಿಕವಾಗಿ ನೌಕಾ ಮತ್ತು ವಾಯುಮಾರ್ಗಗಳ ನಾಭಿಯಂತಿದೆ. ಹವಾನ (10,08,500) ರಾಜಧಾನಿ. ಮುಖ್ಯ ವಾಣಿಜ್ಯ ಕೇಂದ್ರ. ಕ್ಯೂಬದ ನಾಣ್ಯ ಪೇಸೋ, ಭಾಷೆ ಸ್ಪ್ಯಾನಿಷ್.

ಸರ್ಕಾರ[ಬದಲಾಯಿಸಿ]

1959ರ ಕ್ರಾಂತಿಯ ಅನಂತರ ಕ್ಯೂಬದ ಆಡಳಿತವನ್ನು ಗಣರಾಜ್ಯದ ಮೂಲ ಕಾಯಿದೆಯ ಪ್ರಕಾರ ನಡೆಸಲಾಗುತ್ತಿದೆ. ಇಪ್ಪತ್ತು ಮಂತ್ರಿಗಳ ಸಹಾಯದಿಂದ ದೇಶವನ್ನಾಳುವವನು ಪ್ರಧಾನಮಂತ್ರಿ. ಅವನೇ ಅಧ್ಯಕ್ಷನನ್ನು ನೇಮಿಸುತ್ತಾನೆ. ಆಡಳಿತಕ್ಕಾಗಿ ದೇಶವನ್ನು ಆರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ.

ಕ್ಯೂಬದ ಇತಿಹಾಸ[ಬದಲಾಯಿಸಿ]

ಕ್ಯೂಬದ ಪೂರ್ವಚರಿತ್ರೆ ಮತ್ತು ನಾಗರಿಕತೆಯ ವಿಚಾರದಲ್ಲಿ ಗಮನಾರ್ಹ ಸಂಗತಿಗಳೇನೂ ತಿಳಿದುಬಂದಿಲ್ಲ. 1492ರಲ್ಲಿ ಕೊಲಂಬಸ್ ತನ್ನ ಪ್ರಥಮ ಯಾನದಲ್ಲಿ ಕ್ಯೂಬ ದ್ವೀಪವನ್ನು ಕಂಡು ಹಿಡಿದ. 1511ರಿಂದ ಕ್ಯೂಬದ ಪರಿಶೋಧನೆ ಡೀಏಗೋ ವೆಲಜ್ ಸ್ಕ್ವೆಜ್ ನ ನೇತೃತ್ವದಲ್ಲಿ ಮುಂದುವರಿದು, 1515ರ ವೇಳೆಗೆ ಬಯಾಮೋ, ಬಾರಕೋವ, ಹವಾನ ಮುಂತಾದ ಕಡೆಗಳಲ್ಲಿ ಸ್ಪೇನ್ ವಸಾಹತುಗಳನ್ನು ಸ್ಥಾಪಿಸಿತು. ಅನಂತರದ ಕಾಲದಲ್ಲಿ ನೆರೆಯ ಭೂಭಾಗಗಳನ್ನು ಅನ್ವೇಷಿಸಲು ಸ್ಪೇನಿಗೆ ಇದು ಮುಖ್ಯ ಠಾಣೆಯಾಯಿತು. ಹವಾನ ಮುಖ್ಯ ಬಂದರಾಯಿತು. ಕ್ಯೂಬದಲ್ಲಿ ವ್ಯವಸಾಯ ಅಭಿವೃದ್ಧಿ ಹೊಂದಿತು. ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ನೌಕೆಗಳ ಅವಶ್ಯಕತೆಗಳನ್ನು ಅಲ್ಲಿಯ ವಸಾಹತುದಾರರು ಪೂರೈಸುವಂತಾಯಿತು. ಗೆಣಸು, ಬಾಳೆಗಳಲ್ಲದೆ ವಾಣಿಜ್ಯ ಬೆಳೆಗಳಾದ ಕಬ್ಬು, ಹೊಗೆಸೊಪ್ಪುಗಳನ್ನು ಬೆಳೆಯಲಾಗುತ್ತಿತ್ತು. ಬೇಸಾಯಕ್ಕೆ ಕೆಲಸಗಾರರು ಸಾಕಷ್ಟು ಸಂಖ್ಯೆಯಲ್ಲಿ ದೊರೆಯದಿದ್ದುದರಿಂದ ವಸಾಹತುದಾರರು 1522ರಿಂದಲೇ ಗುಲಾಮರನ್ನು ಇಲ್ಲಿಗೆ ತರಲಾರಂಭಿಸಿದರು. ಸ್ಪೇನಿನ ಸ್ವಾರ್ಥಿ ಅಧಿಕಾರಿ ವರ್ಗ ಇಲ್ಲಿಯ ವ್ಯವಸಾಯಪ್ರಗತಿಯನ್ನು ತನ್ನ ಲಾಭಕ್ಕೆ ಬಳಸಿಕೊಂಡಿತ್ತು.

ಕ್ಯೂಬದ ಸ್ಥಾನಮಹತ್ತ್ವದಿಂದಾಗಿ ಅದು ಐರೋಪ್ಯ ನೌಕಾರಾಷ್ಟ್ರಗಳ ಕಲಹಕ್ಕೆ ಕಾರಣವಾಯಿತು. 17ನೆಯ ಶತಮಾನದ ಉದ್ದಕ್ಕೂ ಬ್ರಿಟನ್, ಫ್ರಾನ್ಸ್ ಮತ್ತು ಹಾಲೆಂಡ್‍ಗಳೊಡನೆ ಸ್ಪೇನ್ ಹೋರಾಡುತ್ತಿದ್ದುದರ ಫಲವಾಗಿ ಕ್ಯೂಬ ತೊಂದರೆಗೀಡಾಗಿತ್ತು. ಕಡಲ್ಗಳ್ಳರೂ ದರೋಡೆಕೋರರೂ ಕ್ಯೂಬದ ಐಶ್ವರ್ಯವನ್ನು ದೋಚುತ್ತಿದ್ದರು. ಆದರೂ ಸ್ಪೇನಿನೊಡನೆ ಕ್ಯೂಬದ ನೇರ ಸಂಪರ್ಕಕ್ಕೆ ಅನೇಕ ಅಡ್ಡಿಗಳಿದ್ದುವು. 1697ರ ರಿಸ್ವಿವಿಕ್ ಕೌಲಿನಿಂದ ತಾತ್ಕಾಲಿಕವಾಗಿ ಈ ತೊಂದರೆಗಳು ಕೊನೆಗೊಂಡುವು. 1700-1763ರಲ್ಲಿ ಕ್ಯೂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಸ್ಪೇನಿನ ಯುದ್ಧಗಳ ದೆಸೆಯಿಂದ ಕ್ಯೂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಸ್ಪೇನಿನ ಮಿಲಿಟರಿ ಆಡಳಿತಗಾರರು ಇಲ್ಲಿಯ ಐಶ್ವರ್ಯ, ಸಂಪತ್ತುಗಳ ಶೋಷಣೆ ಮಾಡಿದುದಲ್ಲದೆ ದೇಶೀಯರನ್ನು ಹಲವು ವಿಧವಾದ ದಬ್ಬಾಳಿಕೆಗಳಿಗೆ ಈಡು ಮಾಡುತ್ತಿದ್ದರು. 1732ರಲ್ಲಿ ಇಂಗ್ಲಿಷರು ಹವಾನವನ್ನು ಲೂಟಿ ಮಾಡಿದರು. ಆದರೆ 1763ರಲ್ಲಿ ಸ್ಪೇನಿಗೆ ಅದನ್ನು ಹಿಂದಿರುಗಿಸಿದರು. 1764ರಿಂದ ಕ್ಯೂಬದ ಸ್ಥಿತಿ ಉತ್ತಮಗೊಳ್ಳಲಾರಂಭಿಸಿತು. ಇದರ ಸ್ಥಾನ ಮಹತ್ತ್ವವನ್ನರಿತ ಸ್ಪೇನ್ ಇಲ್ಲಿಗೆ ದಕ್ಷ ಆಡಳಿತಾಗಾರರನ್ನು ನೇಮಿಸಿತು. ವ್ಯವಸಾಯ ಮತ್ತು ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ವ್ಯಾಪಾರ ಒಪ್ಪಂದವೇರ್ಪಟ್ಟುದರಿಂದ ಇಲ್ಲಿಯ ಸಕ್ಕರೆ, ಕಾಫಿ, ಹೊಗೆಸೊಪ್ಪುಗಳಿಗೆ ಉತ್ತಮ ಮಾರುಕಟ್ಟೆ ದೊರಕಿದಂತಾಯಿತು. ಸಾವಿರಾರು ಫ್ರೆಂಚ್ ವಲಸೆಗಾರರು ಇಲ್ಲಿ ಬಂದು ನೆಲಸಿ ಇಲ್ಲಿಯ ಅಭಿವೃದ್ಧಿಗೆ ಕಾರಣರಾದರು. ದಕ್ಷ ಮತ್ತು ಉದಾರಮನೋಭಾವದ ಅಧಿಕಾರಿಗಳ ನೇತೃತ್ವದಲ್ಲಿ ಕ್ಯೂಬ 18ನೆಯ ಶತಮಾನದ ಉತ್ತರಾರ್ಧ ಮತ್ತು 19ನೆಯ ಶತಮಾನದ ಉತ್ತರಾರ್ಧ ಮತ್ತು 19ನೆಯ ಶತಮಾನದ ಆರಂಭದ ದಶಕಗಳಲ್ಲಿ ಅಭಿವೃದ್ಧಿ ಹೊಂದಿತು. ಈ ಸಮಯದಲ್ಲಿ ಸ್ಪೇನ್ ಯೂರೋಪಿನಲ್ಲಿ ಯುದ್ಧನಿರತವಾಗಿದ್ದುದರಿಂದ ಕ್ಯೂಬ ಬಹಳ ಮಟ್ಟಿಗೆ ಸ್ವತಂತ್ರವೇ ಆಗಿತ್ತೆನ್ನಬಹುದು. ಸ್ಪೇನಿನ ಪಾರ್ಲಿಮೆಂಟಿಗೆ ಕ್ಯೂಬದ ಪ್ರತಿನಿಧಿಗಳು ಆಯ್ಕೆಯಾಗಿ ಹೋಗುತ್ತಿದ್ದರು. ಇಲ್ಲಿಯ ಜನಸಂಖ್ಯೆ ಬೆಳೆಯುತ್ತಿತ್ತು. 1817ರ ವೇಳೆಗೆ 5,53,033ಕ್ಕೆ ಏರಿತು. ಜನರಲ್ಲಿ ರಾಜಕೀಯ ಸ್ವಾತಂತ್ರ್ಯಾಕಾಂಕ್ಷೆಯೂ ಬೆಳೆಯಿತು. ಜನತೆಯ ಆಶೋತ್ತರಗಳಿಗೆ ಸ್ಪೇನ್ ಗಮನ ನೀಡಲಿಲ್ಲ. ದೇಶೀಯರ ಮತ್ತು ವಸಾಹತುಗಾರರ ನಡುವೆ ಭೇದ ಭಾವನೆಗಳು ಹೆಚ್ಚಿದುವು. ಆದರೆ ದೇಶೀಯ ನಾಯಕರಲ್ಲಿ ಒಮ್ಮತವಿಲ್ಲದಿದ್ದುದರಿಂದ ಸ್ವಾತಂತ್ರ್ಯ ಚಳವಳಿ ಹೆಚ್ಚು ಫಲಕಾರಿಯಾಗಲಿಲ್ಲ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳಿಗೆ ಅಮಿತವಾದ ಅಧಿಕಾರ ನೀಡಿದ್ದಲ್ಲದೆ 1837ರಲ್ಲಿ ಪಾರ್ಲಿಮೆಂಟಿನಲ್ಲಿ ಕ್ಯೂಬದ ಪ್ರತಿನಿಧಿಗಳ ಸ್ಥಾನವನ್ನು ರದ್ದುಗೊಳಿಸಿತು. ಈ ಮಧ್ಯೆ ಸಂಯುಕ್ತ ಸಂಸ್ಥಾನದಲ್ಲಿ ಕೆಲವರು ಕ್ಯೂಬವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. 1855ರ ಸುಮಾರಿನಲ್ಲಿ ಅಲ್ಲಲ್ಲಿ ಗಲಭೆಗಳುಂಟಾದುವು. 1868ರಲ್ಲಿ ಸ್ಪೇನಿನ ವಿರುದ್ಧ ಕ್ಯೂಬದ ಜನ ಯುದ್ಧ ಘೋಷಿಸಿದರು. ಹತ್ತು ವರ್ಷಗಳ ಕಾಲ ನಡೆದ ಆಂತರಿಕ ಯುದ್ಧದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಸತ್ತರು. ಕ್ಯೂಬದ ಪೂರ್ವಭಾಗಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹೋರಾಟಕ್ಕೆ ಬೋರ್ಜಡೆಲ್ ಕ್ಯಾಸ್ಟಿಲ್ಲೊ ನಾಯಕ. ಗುಲಾಮರ ವಿಮೋಚನೆ ಮತ್ತು ಸಾರ್ವತ್ರಿಕ ಮತದಾನದ ಹಕ್ಕು ಇವು ಇವನ ಬೇಡಿಕೆಗಳಾಗಿದ್ದುವು. ಈ ಹೋರಾಟವನ್ನು ಹತ್ತಿಕ್ಕಲು ಸ್ಪೇನಿನ ಸೈನ್ಯ ದೇಶಾದ್ಯಂತ ಅಮಾನುಷ ಕೃತ್ಯಗಳನ್ನು ಕೈಗೊಂಡಿತು. 1878ರಲ್ಲಿ ಎಲ್ ಜಂóಜೋನ್ ಒಪ್ಪಂದವಾಗಿ ಹೋರಾಟ ಕೊನೆಗೊಂಡಿತು. ಆದರೆ ಸ್ಪೇನ್ ಸರ್ಕಾರ ಒಪ್ಪಂದದ ಷರತ್ತುಗಳನ್ನು ಪಾಲಿಸಲಿಲ್ಲ; ಅದು ತನ್ನ ದಬ್ಬಾಳಿಕೆ ನೀತಿಯನ್ನು ಪುನರಾರಂಭಿಸಿತು. ಈ ಮಧ್ಯೆ ಆರ್ಥಿಕ ಮುಗ್ಗಟ್ಟಿನಿಂದ ಸಂಯುಕ್ತ ಸಂಸ್ಥಾನದಲ್ಲಿ ಕ್ಯೂಬದ ಸಕ್ಕರೆಗೆ ಬೇಡಿಕೆ ಕಡಿಮೆಯಾದುದರಿಂದ ಜನರ ತೊಂದರೆಗಳು ಅಧಿಕವಾದುವು. ಈ ಎಲ್ಲ ಕಾರಣಗಳಿಂದ ಪುನಃ ಸ್ವಾತಂತ್ರ್ಯ ಚಳವಳಿ ಬಲಗೊಂಡಿತು. ಕ್ಯೂಬದ ಹೋರಾಟಗಾರರಲ್ಲಿ ಐಕಮತ್ಯವುಂಟಾಯಿತು. 1895ರಲ್ಲಿ ಪ್ರಾರಂಭವಾದ ಈ ಅಂತಿಮ ಹೋರಾಟದಲ್ಲಿ ಇಡೀ ದೇಶ ಭಾಗವಹಿಸಿತು. ಈ ಮಧ್ಯೆ ಸ್ಪೇನ್ ಮತ್ತು ಸಂಯುಕ್ತಸಂಸ್ಥಾನಗಳ ನಡುವೆ ವಿರಸ ಹುಟ್ಟಿದುದರ ಕಾರಣ ಸಂಯುಕ್ತಸಂಸ್ಥಾನವೂ ಕ್ಯೂಬದ ಜೊತೆಗೂಡಿತು. ಸ್ಪೇನು ಸೋಲನ್ನನುಭವಿಸಿತು. 1898ರ ಅಕ್ಟೋಬರ್ 10ರ ಪ್ಯಾರಿಸ್ ಸಂಧಾನದ ಪ್ರಕಾರ ಸ್ಪೇನ್ ಕ್ಯೂಬವನ್ನು ಸಂಯುಕ್ತಸಂಸ್ಥಾನಕ್ಕೆ ಒಪ್ಪಿಸಿತು. ಸಂಯುಕ್ತಸಂಸ್ಥಾನ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡು, ಕ್ರಮೇಣ ಕ್ಯೂಬದ ಜನತೆಗೆ ಸ್ವಾತಂತ್ರ್ಯ ನೀಡುವಂತೆ ತೀರ್ಮಾನವಾಯಿತು.

ಅಮೆರಿಕ ಸಂಯುಕ್ತಸಂಸ್ಥಾನ 1899ರ ಜನವರಿ 1ರಿಂದ ಕ್ಯೂಬದಲ್ಲಿ ತನ್ನ ಮಿಲಿಟರಿ ಸರ್ಕಾರವನ್ನು ಆರಂಭಿಸಿತು. ಹೊಸ ಸರ್ಕಾರ ಕ್ಯೂಬದ ಜನರನ್ನೇ ಅಧಿಕಾರಿಗಳನ್ನಾಗಿ ನೇಮಿಸಿ ಸಾರ್ವಜನಿಕರ ಪ್ರಗತಿಗೆ ಗಮನ ಕೊಟ್ಟು, ವಿದ್ಯಾಭ್ಯಾಸ, ಆರೋಗ್ಯ, ನೈರ್ಮಲ್ಯಗಳ ಸುಧಾರಣೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂತು. ಕ್ಯೂಬಕ್ಕೂ ಸಂಯುಕ್ತಸಂಸ್ಥಾನಕ್ಕೂ ಒಪ್ಪಂದವೇರ್ಪಟ್ಟು, ವ್ಯಕ್ತಿಸ್ವಾತಂತ್ರ್ಯವನ್ನೂ ಜನರ ಆಸ್ತಿಯನ್ನೂ ಪ್ರಜಾಸರ್ಕಾರವನ್ನೂ ಕಾಪಾಡಲು ಅಮೆರಿಕ ಪ್ರವೇಶಿಸಬಹುದೆಂದು ಕ್ಯೂಬ ಒಪ್ಪಿಕೊಂಡಿತು. 1902ರಲ್ಲಿ ಕ್ಯೂಬದಲ್ಲಿ ಕಾಂಗ್ರೆಸ್ ಸಭೆ ಸೇರಿ ಅದು ಅಮೆರಿಕದಿಂದ ಅಧಿಕಾರ ವಹಿಸಿಕೊಂಡಿತು. ಥಾಮಸ್ ಎಸ್‍ಟ್ರಡ ಪಾಲ್ಮ ಕ್ಯೂಬದ ಪ್ರಜಾ ಸರ್ಕಾರದ ಮೊದಲನೆಯ ಅಧ್ಯಕ್ಷ. 1902ರಿಂದ 1906ರವರೆಗೆ ಕ್ಯೂಬದ ಪ್ರಜಾ ಸರ್ಕಾರದ ಮೊದಲನೆಯ ಅಧ್ಯಕ್ಷ. 1902ರಿಂದ 1906ರ ವರೆಗೆ ಕ್ಯೂಬ ಸಾಧಿಸಿದ ಅಭಿವೃದ್ಧಿ ಸರ್ವತೋಮುಖವಾದ್ದು. ಆದರೆ ಚುನಾವಣೆಗೆ ಸಿದ್ಧತೆಗಳು ನಡೆಯಬೇಕೆನ್ನುವಾಗ ರಾಜಕೀಯ, ಸಾಮಾಜಿಕ, ಕ್ರಾಂತಿಕಾರಕ ಭಿನ್ನಾಭಿಪ್ರಾಯಗಳಿದ್ದುವು. ಭೇದಭಾವಗಳನ್ನು ಸರಿಪಡಿಸಿ ಶಾಂತಿಯನ್ನೇರ್ಪಡಿಸಲು ಅಮೆರಿಕ ಸಕಾರ ಒಂದು ಸಮಿತಿಯನ್ನು ಕ್ಯೂಬಕ್ಕೆ ಕಳಿಸಿತು. ಆದರೆ ಸಂಧಾನ ಯಶಸ್ವಿಯಾಗಿ ನಡೆಯದಿರಲು ಅಮೆರಿಕ ಸರ್ಕಾರ ಶಾಂತಿ ಸ್ಥಾಪನೆಗಾಗಿ ಕ್ಯೂಬದಲ್ಲಿ ಒಂದು ಕ್ರಾಂತಿ ಸರ್ಕಾರವನ್ನು ಏರ್ಪಡಿಸಿತು. ಅದು ಅಧ್ಯಕ್ಷರ ಅಧಿಕಾರ ಕರ್ತವ್ಯಗಳನ್ನು ನಿಶ್ಚಯಿಸಿ ಪ್ರಾಂತ್ಯಗಳ ಅಧಿಕಾರವನ್ನು ಬಲಪಡಿಸಿತು. 1909ರಲ್ಲಿ ಅಮೆರಿಕದ ಆಡಳಿತ ಮುಗಿದು ಅಮೆರಿಕನ್ ಸೇನೆ ವಾಪಸಾಯಿತು. ಎರಡನೆಯ ಸಲ ಕ್ಯೂಬದಲ್ಲಿ ಜೋಸ್ ಮಿಗೇಲ್ ಗೋಮೆಜ್ ಅಧ್ಯಕ್ಷನೂ ಆಲ್‍ಫ್ರೆಡೊ ಜಯಾಸ್ ಉಪಾಧ್ಯಕ್ಷನೂ ಆಗಿ ಚುನಾಯಿತರಾದರು. ಮುಂದೆಯೂ ಅಧ್ಯಕ್ಷನ ಸ್ವತಂತ್ರ ಆಡಳಿತ ನೀತಿ ಮುಂದುವರಿಯಿತು. ನೆರೆರಾಜ್ಯವಾದ ಕ್ಯೂಬದ ಪರಿಸ್ಥಿತಿ ತನ್ನ ರಾಜಕೀಯ ಧೋರಣೆಗೆ ಅನುಕೂಲವಾಗಿರಬೇಕೆಂಬುದು ಸಂಯುಕ್ತಸಂಸ್ಥಾನದ ಇಚ್ಛೆ. ಆದ್ದರಿಂದ 1909ರಿದ 1925ರ ಮಧ್ಯೆ ಅಧ್ಯಕ್ಷರಾಗಿದ್ದ ಗೋಮೆಜ್, ಮೆನೊಕಲ್ ಮತ್ತು ಜಯಾಸರ ಕಾಲದಲ್ಲಿ ಶಾಂತಿ ಕದಡಿದಾಗ ಅಮೆರಿಕ ಎರಡು ಸಲ ಮಧ್ಯೆ ಪ್ರವೇಶಿಸಿತು. 1925ರಲ್ಲಿ ಗೆರಾರ್ಡೊ ಮಕ್ಯಾಡೊ ಅಧ್ಯಕ್ಷನಾಗಿ ಆಯ್ಕೆಯಾಗಿ 1933ರ ವರೆಗೆ ಅಧಿಕಾರದಲ್ಲಿದ್ದ. ಲಂಚ, ದುರಾಡಳಿತಗಳ ಕಾರಣ ಮಕ್ಯಾಡೊನ ವಿರುದ್ಧ ಜನತೆ ದಂಗೆಯೆದ್ದು ಅವನನ್ನು ಅಧಿಕಾರದಿಂದ ಓಡಿಸಿದ ಮೇಲೆ 1933ರಿಂದ 1958ರ ವರೆಗೂ ಕ್ಯೂಬದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದವ ಬ್ಯಾಟಿಸ್ಟ.

1958ರಲ್ಲಿ ಕಮ್ಯೂನಿಸ್ಟರ ಪ್ರಚಾರದ ಫಲವಾಗಿ ರಾಜಕೀಯ ಕ್ರಾಂತಿಯುಂಟಾಗಿ ಫೀಡೆಲ್ ಕ್ಯಾಸ್ಟ್ರೊ ಅಧಿಕಾರ ಗಳಿಸಿದರು. 1961ರಲ್ಲಿ ತಾನು ಕಮ್ಯೂನಿಸ್ಟ್ ನೀತಿಯನ್ನನುಸರಿಸುವುದಾಗಿ ಆತ ಸಾರಿದರು. ಅಮೆರಿಕಕ್ಕೆ ಇದರಿಂದ ಆತಂಕವುಂಟಾಯಿತು. ಕ್ಯೂಬಕ್ಕೆ ಸೋವಿಯೆತ್ ದೇಶದ ಬೆಂಬಲ ದೊರಕಿತು; ವಿಪುಲವಾಗಿ ಯುದ್ಧ ಸಾಮಗ್ರಿಗಳು ಸೋವಿಯತ್ ದೇಶದಿಂದ ಬಂದವು. ಸಂಯುಕ್ತಸಂಸ್ಥಾನದ ಯುದ್ಧ ನೌಕೆಗಳು ಕ್ಯೂಬದ ಸುತ್ತ ಕಾವಲು ಹಾಕಿದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋವಿಯೆತ್ ದೇಶ ಪರಮಾಣು ಸಜ್ಜಿತ ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲವೆಂದೂ ಅಲ್ಲಾಗಲೇ ಸ್ಥಾಪಿಸಿದ ಕ್ಷಿಪಣಿಗಳನ್ನು ವಾಪಸ್ಸು ಪಡೆಯುವುದಾಗಿಯೂ ಒಪ್ಪಿಕೊಂಡಿತು. ಅಮೆರಿಕ-ರಷ್ಯಗಳ ನಡುವೆ ನಡೆಯಬಹುದಾಗಿದ್ದ ಯುದ್ಧದ ಭಯ ಈ ರೀತಿ ಕೊನೆಗೊಂಡಿತು. 1963ರ ವೇಳೆಗೆ ಅವುಗಳನ್ನು ಹಿಂತೆಗೆದುಕೊಳ್ಳಲಾಯಿತು.

1970 ರ ದಶಕದಲ್ಲಿ, ಫಿಡೆಲ್ ಕ್ಯಾಸ್ಟ್ರೋ ಆಫ್ರಿಕಾದಲ್ಲಿ ಸೋವಿಯತ್ ಬೆಂಬಲಿತ ಯುದ್ಧಗಳ ಬೆಂಬಲಕ್ಕೆ ಪಡೆಗಳನ್ನು ರವಾನಿಸಿದರು. 1975ರಲ್ಲಿ ಅಮೇರಿಕನ್ ರಾಷ್ಟ್ರಗಳ ಸಂಸ್ಥೆ (OAS) ಯು ತನ್ನ 16 ಸದಸ್ಯ ರಾಷ್ಟ್ರಗಳ ಒಪ್ಪಿಗೆಯೊಂದಿಗೆ ಕ್ಯೂಬಾದ ಮೇಲಿನ ತನ್ನ ನಿರ್ಬಂಧಗಳನ್ನು ತೆರವುಗೊಳಿಸಿತಾದರೂ ಅಮೇರಿಕವು ತನ್ನ ನಿರ್ಬಂಧಗಳನ್ನು ಮುಂದುವರೆಸಿತು.

1991 ರಲ್ಲಿ ಸೋವಿಯತ್ ಪತನದ ನಂತರ ಕ್ಯಾಸ್ಟ್ರೋ ಆಳಿಕೆಯು ತೀವ್ರವಾಗಿ ಪರೀಕ್ಷೆಗೆ ಗುರಿಯಾಯಿತು. ವಾರ್ಷಿಕವಾಗಿ $ 4 ಬಿಲಿಯನ್ ನಿಂದ $ 6 ಶತಕೋಟಿ ಮೌಲ್ಯದ ಸೋವಿಯತ್ ಸಬ್ಸಿಡಿಗಳ ರದ್ದಿನ ನಂತರ ತೀವ್ರ ಆರ್ಥಿಕ ಹಿಂಜರಿತವನ್ನು ದೇಶವು ಎದುರಿಸಿತು. ಆಹಾರ ಮತ್ತು ಇಂಧನದ ತೀವ್ರ ಅಭಾವ ಉಂಟಾಯಿತು. ಸರ್ಕಾರ 1993 ರವರೆಗೆ ಆಹಾರ, ಔಷಧ, ಮತ್ತು ನಗದು ಅಮೆರಿಕನ್ ದೇಣಿಗೆಗಳನ್ನು ಸ್ವೀಕರಿಸಲು ಸಮ್ಮತಿಸಲಿಲ್ಲ, ಆಗಸ್ಟ್ 5, 1994 ರಂದು ರಾಜ್ಯದ ಭದ್ರತಾ ಪಡೆಗಳು ಹವಾನಾದಲ್ಲಿ ಒಂದು ಧಿಡೀರ್ ಪ್ರತಿಭಟನೆಯ ಪ್ರತಿಭಟನಾಕಾರರನ್ನು ಚದುರಿಸಿದರು.

ಕ್ಯೂಬಾವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ದ ನೆರವು ಮತ್ತು ಬೆಂಬಲದ ಹೊಸ ಮೂಲವನ್ನು ಕಂಡುಹಿಡಿದಿದೆ. ವೆನೆಜುವೆಲಾ ಮತ್ತು ಬೊಲಿವಿಯಾಗಳು ಮಿತ್ರದೇಶಗಳಾಗಿವೆ. ಈ ಎರಡೂ ರಾಷ್ಟ್ರಗಳು ಪ್ರಮುಖ ತೈಲ ಮತ್ತು ಅನಿಲ ರಫ್ತುದಾರ ದೇಶಗಳಾಗಿವೆ. 2003 ರಲ್ಲಿ ಸರಕಾರವು ಭಾರೀ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳಿಸಿತು.

ಫೆಬ್ರವರಿ 2008 ರಲ್ಲಿ, ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾ ಅಧ್ಯಕ್ಷರಾಗಿ ತಮ್ಮ ರಾಜಿನಾಮೆ ನೀಡುವುದಾಗಿ ಘೋಷಿಸಿದರು. ಅವರ ಸಹೋದರ ರೌಲ್ ಕ್ಯಾಸ್ಟ್ರೋರನ್ನು ಹೊಸ ಅಧ್ಯಕ್ಷರೆಂದು ಘೋಷಿಸಲಾಯಿತು. ಜೂನ್ 3, 2009 ರಂದು, ಅಮೆರಿಕಾದ ರಾಷ್ಟ್ರಗಳ ಸಂಘ ಗುಂಪಿನ ಕ್ಯೂಬನ್ ಸದಸ್ಯತ್ವದ ಮೇಲಿನ 47 ವರ್ಷಗಳ ನಿಷೇಧವನ್ನು ಕೊನೆಗೊಳಿಸಲು ನಿರ್ಣಯ ಅಂಗೀಕರಿಸಿತು. ಫಿಡೆಲ್ ಕ್ಯಾಸ್ಟ್ರೋ ಅವರು ಅಮೆರಿಕಾದ ರಾಷ್ಟ್ರಗಳ ಸಂಘವನ್ನು ಸೇರಲು ತಮ್ಮ ಅನಾಸಕ್ತಿಯನ್ನು ಮತ್ತೆ ವ್ಯಕ್ತಪಡಿಸಿದರು.

ರೌಲ್ ಕ್ಯಾಸ್ಟ್ರೋ ಪನಾಮ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ರನ್ನು , ಏಪ್ರಿಲ್ 11, 2015ರಂದು ಭೇಟಿಯಾಗಿದ್ದರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಇವನ್ನೂ ನೋಡಿ[ಬದಲಾಯಿಸಿ]

ಹೆಚ್ಚನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Sonic.net. "1992 coin". Retrieved 2006-09-26.
  2. Government of Cuba. "The Cuban constitution". Archived from the original on 2013-05-17. Retrieved 2007-01-29.
  3. Atlapedia. "Cuba".
  4. Encyclopedia Britannica. "Cuba". Retrieved 2007-01-29.
"https://kn.wikipedia.org/w/index.php?title=ಕ್ಯೂಬಾ&oldid=1079632" ಇಂದ ಪಡೆಯಲ್ಪಟ್ಟಿದೆ