ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಕ್ಯೂಬಾ ದೇಶದಲ್ಲಿ ಸೋವಿಯತ್ ಒಕ್ಕೂಟದ ಖಂಡಾಂತರ ಕ್ಷಿಪಣಿ'

ಅಕ್ಟೋಬರ್ ಬಿಕ್ಕಟ್ಟು ಅಥವಾ ಕೆರಿಬಿಯನ್ ಬಿಕ್ಕಟ್ಟು ಅಥವಾ ಕ್ಷಿಪಣಿ ಆತಂಕವಾದ ಎಂದು ವಿವಿಧ ರೀತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಿಸಲ್ಪಡುತ್ತಿರುವ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೂ ಹಾಗು ಸೋವಿಯತ್ ಒಕ್ಕೂಟಕ್ಕೂ ನಡೆದ ಬಹು ಮುಖ್ಯವಾದ ಶೀತಲ ಸಮರ. ಸೋವಿಯತ್ ಒಕ್ಕೂಟವು ಉತ್ತರ ಅಮೇರಿಕ ಭೂ ಖಂಡಕ್ಕೆ ಸನಿಹದಲ್ಲಿರುವ ಕ್ಯೂಬಾ ದೇಶದಲ್ಲಿ ತಾನು ತಯಾರು ಮಾಡಿದ ಖಂಡಾಂತರ ಕ್ಷಿಪಣಿಗಳನ್ನು ಅನುಸ್ಥಾಪಿಸಿದ್ದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣ. ೧೯೬೧ರಲ್ಲಿ ಅಮೇರಿಕಾವು ಕ್ಯೂಬಾ ದೇಶದ ಭೂಖಂಡಕ್ಕೆ ಹೊಂದಿಕೊಂಡಿರುವ ಪಿಗ್ಸ್ ಕೊಲ್ಲಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತದೆ.ಕ್ಯೂಬಾದ ತಕ್ಕ ಪ್ರತ್ಯುತ್ತರದಿಂದ ಅದು ಸಾಧ್ಯವಾಗದೆ ಅಮೇರಿಕಾದ ಪಾಲಿಗೆ ಕನಸಾಗಿ ಉಳಿಯುತ್ತದೆ. ಈ ಆಕ್ರಮಣ ಅಮೇರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ(CIA) ಪ್ರಾಯೋಜಿತ ಅರೆಸೇನಾ ಪಡೆಯಿಂದ ನಡೆದಿರುತ್ತದೆ. ದಾಳಿಯನ್ನು ಸಮರ್ಥವಾಗಿ ಎದುರಿಸಲು ಕ್ಯೂಬಾ ದೇಶ ಸೋವಿಯತ್ ಒಕ್ಕೂಟಕ್ಕೆ ಮೊರೆ ಹೋಗುತ್ತದೆ. ಮೊರೆಯನ್ನು ಮನ್ನಿಸಿದ ಸೋವಿಯತ್ ನಾಯಕ ‘ನಿಖಿಟ ಖ್ರುಶ್ಚೆವ್‘, ಅಮೇರಿಕಾ ದೇಶ ತನ್ನ ಜುಪಿಟರ್ ಖಂಡಾಂತರ ಕ್ಷಿಪಣಿಗಳನ್ನು ಇಟಲಿ ಮತ್ತು ಟರ್ಕಿ ಗಳಲ್ಲಿ ಅನುಸ್ಥಾಪಿಸಿ ಸೋವಿಯತ್ ಒಕ್ಕೂಟಗಳಿಗೂ ಹಾಗು ಸೋವಿಯತ್ ಕೇಂದ್ರ ಸ್ಥಾನ ಮಾಸ್ಕೊ ನಗರಕ್ಕೂ ಗಂಡಾಂತರವಾಗಿದ್ದನ್ನು ಇನ್ನೂ ಮರೆತಿರುವುದಿಲ್ಲ. ಇವೆಲ್ಲಕ್ಕೂ ಪ್ರತೀಕಾರವೋ ಎಂಬಂತೆ ಕ್ಯೂಬಾ ಕೇಳಿದ ತಕ್ಷಣವೇ ಸೋವಿಯತ್ ಪ್ರಾಯೋಜಿತ ಖಂಡಾಂತರ ಕ್ಷಿಪಣಿಯನ್ನು ಕ್ಯೂಬಾದಲ್ಲಿ ತಂದು ನಿಲ್ಲಿಸಿ ಅಕ್ಷರಶಃ ಆಗಿನ ಪ್ರಬಲ ದೇಶ ಅಮೇರಿಕಾಕ್ಕೆ ಸೆಡ್ಡು ಹೊಡೆಯಿತು.

ಇಷ್ಟಕ್ಕೆ ನಿಲ್ಲದ ಈ ಪ್ರಕರಣರದ ಮುಂದುವರಿದ ಭಾಗವಾಗಿ ಸೋವಿಯತ್ ನಾಯಕ ಖ್ರುಶ್ಚೆವ್ ಹಾಗು ಕ್ಯೂಬಾದ ಆಗಿನ ಪ್ರಧಾನ ಮಂತ್ರಿ ಫಿಡೆಲ್ ಕ್ಯಾಸ್ಟ್ರೋ ರಹಸ್ಯವಾಗಿ ಮಾತು ಕತೆ ನಡೆಸಿ ಇನ್ನು ಹಲವು ಕ್ಷಿಪಣಿಗಳ ತಯಾರಿಕೆಗೆ ಹಾಗು ಅವುಗಳ ಉಡಾವಣೆಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡರು. ಅದೇ ಬೇಸಿಗೆಯಲ್ಲಿ ಕ್ಷಿಪಣಿ ಉಡಾವಣಾ ತಂತ್ರಜ್ಞಾನಗಳನ್ನು ಕ್ಯೂಬಾ ದಲ್ಲಿ ಅನುಸ್ಥಾಪಿಸಲೂ ಆರಂಭ ಮಾಡಿಯಾಗಿತ್ತು. ಇದೆ ಸಂದರ್ಭದಲ್ಲಿ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಬಿರುಸಾಗಿ ನಡೆಯುತ್ತಿದ್ದ ಕಾರಣ ಶ್ವೇತ ಭವನ ಕ್ಯೂಬಾ ದ ನಡೆಯನ್ನು ನಿರ್ಲಕ್ಷಿಸುತ್ತದೆ. ಸೋವಿಯತ್ ಕ್ಷಿಪಣಿಯೊಂದು ಅಮೇರಿಕಾದ ದಕ್ಷಿಣ ಪ್ರಾಂತ್ಯದ ಫ್ಲೋರಿಡಾದಿಂದ ಕೇವಲ ೯೦ ಮೈಲುಗಳ ದೂರದಲ್ಲಿ ನಿಂತಿದ್ದಾಗ್ಯೂ ನಿರ್ಲಕ್ಷ ಭಾವನೆ ತಳೆದ ಶ್ವೇತ ಭವನಕ್ಕೆ ಕ್ಯೂಬಾದಲ್ಲಿ ನಡೆಯುತ್ತಿದ್ದ ಕ್ಷಿಪಣಿ ಕಟ್ಟುವ ಕಾರ್ಯಗಳ ಚಿತ್ರಗಳನ್ನು ರಹಸ್ಯ ವಿಮಾನಗಳ ಮೂಲಕ ತೆಗೆದು ಗುಟ್ಟಾಗಿ ಕಳುಹಿಸಿಕೊಟ್ಟಿತು ಅಮೇರಿಕಾ ವಾಯುಸೇನೆ.ವಸ್ತು ಸ್ಥಿತಿ ಅರ್ಥ ಮಾಡಿಕೊಂಡ ಶ್ವೇತ ಭವನ ಕೂಡಲೇ ಒಂದು ಸೇನಾ ತುಕಡಿಯನ್ನು ಸಿದ್ಧಪಡಿಸಿ ಕ್ಯೂಬಾ ದೇಶಕ್ಕೆ ಇನ್ಯಾವ ಕ್ಷಿಪಣಿಗಳು ಸಮುದ್ರ ಮಾರ್ಗದ ಮುಖಾಂತರ ಒಳ ಬರದಂತೆ ಕಣ್ಗಾವಲಿಟ್ಟಿತು. ಕ್ಯೂಬಾ ದೇಶಕ್ಕೆಇನ್ನು ಮುಂದೆ ಯಾವ ಕ್ಷಿಪಣಿಗಳನ್ನು ಸರಬರಾಜು ಮಾಡಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದ ಅಮೇರಿಕಾ ಅದಾಗಲೇ ಕ್ಯೂಬಾದಲ್ಲಿ ನಿಂತಿದ್ದ ಖಂಡಾಂತರ ಕ್ಷಿಪಣಿಯನ್ನು ನಿಷ್ಕ್ರಿಯಗೊಳಿಸಿ ಅದನ್ನು ಸೋವಿಯತ್ ಒಕ್ಕೂಟಕ್ಕೆ ವಾಪಸು ಮಾಡುವಂತೆ ಆಗ್ರಹ ಮಾಡಿತು.

ಇದಕ್ಕೆಲ್ಲಾ ಸೂಕ್ತ ಪರಿಹಾರವನ್ನು ಕಂಡು ಹಿಡಿಯುವ ಸಲುವಾಗಿ ಅಮೇರಿಕಾ ಸೋವಿಯತ್ ಒಕ್ಕೂಟದೊಂದಿಗೆ ಮಾತು ಕತೆ ನಡೆಸುತ್ತದೆ. ಹಲವಾರು ಸುತ್ತಿನ ಮಾತು ಕತೆಗಳ ನಂತರ ಒಮ್ಮತಕ್ಕೆ ಬಂದ ಆಗಿನ ಅಮೇರಿಕಾ ಅಧ್ಯಕ್ಷ ಜಾನ್.ಎಫ್.ಕೆನಡಿ ಹಾಗು ಸೋವಿಯತ್ ನಾಯಕ ಖ್ರುಶ್ಚೆವ್ ಕ್ಯೂಬಾ ದೇಶದಲ್ಲಿ ನಿಲ್ಲಿಸಿರುವ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಿ ಅದನ್ನು ಕ್ಯೂಬಾ ದಿಂದ ಹಿಂದಿರುಗಿ ತೆಗೆದುಕೊಂಡು ಹೋಗಲು ಒಪ್ಪಿಕೊಂಡು ಅದಕ್ಕೆ ಬದಲಾಗಿ ಅಮೇರಿಕಾವು ಕ್ಯೂಬಾವನ್ನು ಆಕ್ರಮಿಸಿಕೊಳ್ಳದಂತೆ ಷರತ್ತು ವಿಧಿಸುತ್ತದೆ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ನಡೆದ ಮಾತು ಕತೆ ಸಫಲವಾಗುತ್ತದೆ. ಇನ್ನು ಅಮೇರಿಕಾ ತಾನು ಸೋವಿಯತ್ ವಿರುದ್ಧ ಇಟಲಿಯಲ್ಲಿ ಹಾಗು ಟರ್ಕಿಯಲ್ಲಿ ಸ್ಥಾಪಿಸಿದ್ದ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಲು ಒಪ್ಪಿಕೊಳ್ಳುತ್ತದೆ, ಇದು ರಹಸ್ಯ ಮಾತು ಕತೆಯ ಭಾಗವಾಗಿದ್ದು ಇದನ್ನು ಎಲ್ಲೂ ಬಹಿರಂಗ ಪಡಿಸುವುದಿಲ್ಲ. ತಾನು ಸ್ಥಾಪಿಸಿದ್ದ ಕ್ಷಿಪಣಿಗಳನ್ನೂ ಹಾಗು ಲಘು ಬಾಂಬರ್ ಗಳನ್ನೂ ಸೋವಿಯತ್ ಹಿಂತೆಗೆದುಕೊಂಡ ನಂತರ ಅಮೇರಿಕಾ ಕೂಡ ಕ್ಯೂಬಾದ ಮೇಲೆ ಕಣ್ಗಾವಲು ಇಡಲು ತಾನು ನಿಯೋಜಿಸಿದ್ದ ಸೇನೆಯನ್ನು ೧೯೬೨ರ ನವೆಂಬರ್ ೨೦ ರಂದು ಹಿಂಪಡೆಯಿತು. ಮಾಸ್ಕೊ ಮತ್ತು ವಾಷಿಂಗ್ಟನ್ ಗಳ ನಡುವೆ ನಡೆದ ನೇರ ಮಾತು ಕತೆಗಳಿಂದಲೂ ಹಾಗು ಸರಣಿ ಒಪ್ಪಂದಗಳಿಂದಲೂ ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ನಡುವೆ ಶೀತಲ ಸಮರ ಕೊನೆಗೊಂಡು ಶಾಂತಿ ನೆಲೆಸಲು ಸಹಕಾರಿಯಾಯಿತು.

ಅಮೇರಿಕಾ ವಾಯುಸೇನೆಯ ಗುಪ್ತ ವಿಮಾನ ಸೆರೆಹಿಡಿದ ಕ್ಯೂಬಾದ ಕ್ಷಿಪಣಿ ನಿಲ್ಲಿಸಿದ ಸ್ಥಳ. ಚಿತ್ರದಲ್ಲಿ ಕ್ಷಿಪಣಿಗೆ ಇಂಧನ ಭರ್ತಿ ಮಾಡಲು ಟೆಂಟ್ ಗಳನ್ನೂ ರಚಿಸಿರುವುದನ್ನು ಗಮನಿಸಬಹುದು.