ಮೇಷ ಮಾಸ
ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹನ್ನೆರಡು ಮಾಸಗಳ ಪೈಕಿ ಮೊದಲನೆಯದು.
ಮಾಧವ ಎಂಬ ಹೆಸರೂ ಇದೆ. ಸೂರ್ಯ ನಿರಯನ ಮೇಷರಾಶಿ ಪ್ರವೇಶಿಸಿದ ದಿನದಿಂದ ಹಿಡಿದು ನಿರಯನ ವೃಷಭರಾಶಿ ಪ್ರವೇಶಿಸುವ ತನಕದ ಅವಧಿ. ಭೂಮಂಡಲದ ಮೊದಲ ಮೂವತ್ತು ಅಂಶಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ, ನಕ್ಷತ್ರ ಒಂದನೆಯ ಪಾದದಲ್ಲಿ ಸಂಚರಿಸುವ ಅವಧಿ. ತಮಿಳಿನಲ್ಲಿ ಇದನ್ನು ಚಿತ್ತರೈಮಾಸ ಎಂದು ಕರೆದಿದೆ. ಪ್ರತಿಯೊಂದು ವರ್ಷದಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನ 13 ಅಥವಾ 14ನೆಯ ತಾರೀಖಿನ ದಿನ ಮೇಷಮಾಸ ಪ್ರಾರಂಭವಾಗಿ ಮೇ ತಿಂಗಳಿನ 14 ಅಥವಾ 15ನೆಯ ತಾರೀಖಿನ ತನಕವೂ ಇರುತ್ತದೆ. ಈ ಮಾಸದ ಮೊದಲ ದಿನದಿಂದ ಸೌರಮಾನವರ್ಷದ ಆರಂಭ. ವರ್ಷದ ನವನಾಯಕರಲ್ಲಿ ಮೇಷಮಾಸ ಆರಂಭದ ದಿನದ ವಾರಾಧಿಪತಿಗೆ ಮಂತ್ರಿಸ್ಥಾನ. ದ್ವಾದಶಾದಿಪತ್ಯರಲ್ಲಿ ಎಂಟು ಸಹಸ್ರ ಕಿರಣಗಳಿಂದ ಕೂಡಿದ ಕೆಂಪುಬಣ್ಣದ ಧಾತೃ ಎಂಬ ಸೂರ್ಯ ಈ ತಿಂಗಳಿಗೆ ದೇವತೆ. ಮೇಷಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದಾಗ ಚಾಂದ್ರಮಾನದಂತೆ ವೈಶಾಖಮಾಸ ಅಧಿಕವಾಗುತ್ತದೆ. ಸೂರ್ಯ ಮೇಷರಾಶಿಗೆ ಪ್ರವೇಶಮಾಡುವ ಅವಧಿಯ ನಾಲ್ಕುಘಂಟೆಗಳ ಕಾಲ ಮೊದಲೂ ಅನಂತರವೂ ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ಪಿತೃತರ್ಪಣ ಮಾಡಬೇಕೆಂದು ವಿಧಿ ಇದೆ. ಮೇಷದಾನ ವಿಶೇಷ ಫಲಪ್ರದ. ಮಧುಸೂದನನ ಪೂಜೆ ಈ ಮಾಸದಲ್ಲಿ ವಿಶೇಷ.
ಮೇಷಮಾಸದ ಆದ್ರ್ರಾ ನಕ್ಷತ್ರದಲ್ಲಿ ರಾಮಾನುಜಾಚಾರ್ಯರು ಜನ್ಮತಾಳಿದರು. ಪ್ರತಿವರ್ಷದಲ್ಲೂ ಈ ಮಾಸದಲ್ಲಿ ಆದ್ರ್ರಾ ನಕ್ಷತ್ರ ಉದಯಾದಿ ಹತ್ತು ಘಳಿಗೆ ಕಾಲ ಇರುವ ದಿವಸದಲ್ಲಿ ಶ್ರೀವೈಷ್ಣವರು ಆಚಾರ್ಯರ ತಿರುನಕ್ಷತ್ರ ಉತ್ಸವವನ್ನು ನಡೆಸುತ್ತಾರೆ. ಭಗವಂತ ತನ್ನ ಹತ್ತು ಅವತಾರಗಳಲ್ಲಿ ವರಾಹ ಅವತಾರ ತಾಳಿದ್ದು ಈ ತಿಂಗಳಿನ ರೇವತಿ ನಕ್ಷತ್ರದ ದಿವಸ. ಸೂರ್ಯ ಭರಣಿ ನಕ್ಷತ್ರದ ಮೂರನೆಯ ಪಾದದಲ್ಲಿ ಸಂಚರಿಸಲು ಪ್ರಾರಂಭಿಸಿದಾಗ ಅಗ್ನಿ ನಕ್ಷತ್ರ ದೋಷ ಆರಂಭವಾಗುತ್ತದೆ.
ಈ ಮಾಸದಲ್ಲಿ ಹುಟ್ಟಿದವ ಸೂಕ್ಷ್ಮಬುದ್ದಿಯುಳ್ಳವ, ಸಂಚಾರಶೀಲ, ಸಾಹಸಿ, ಪ್ರಖ್ಯಾತ, ರಕ್ತ-ಪಿತ್ತವಿಕಾರ ಇರುವವನಾಗುತ್ತಾನೆ ಎನ್ನಲಾಗಿದೆ.
ಈ ಮಾಸದ ಪ್ರಮುಖ ಹಬ್ಬಗಳು
[ಬದಲಾಯಿಸಿ]
ಸೌರಮಾನ ಮಾಸಗಳು |
---|
ಮೇಷ • ವೃಷಭ • ಮಿಥುನ • ಕಟಕ • ಸಿಂಹ • ಕನ್ಯಾ • ತುಲಾ • ವೃಶ್ಚಿಕ • ಧನು• ಮಕರ • ಕುಂಭ • ಮೀನ |