ವಿಷಯಕ್ಕೆ ಹೋಗು

ಮಕರ ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹತ್ತನೇ ಮಾಸ, ನಿರಯನ ಸೂರ್ಯ ಉತ್ತರಾಷಾಢಾ ನಕ್ಷತ್ರದ 2, 3, 4ನೆಯ ಪಾದ ಹಾಗೂ ಶ್ರವಣ ಮತ್ತು ಧನಿಷ್ಠಾ ನಕ್ಷತ್ರದ 1-2ನೆಯ ಪಾದಗಳಾದ ಮಕರ ರಾಶಿಯಲ್ಲಿ ಸಂಚರಿಸುವ ಅವಧಿ.

ಈ ತಿಂಗಳಿನಲ್ಲಿ ಭಚಕ್ರದ 270ನೆಯ ಅಂಶದಿಂದ 300ನೆಯ ಅಂಶ ಪೂರ್ತಿಯ ಭಾಗದಲ್ಲಿರುತ್ತಾನೆ. ಸೌರಮಾನ ಗಣನೆಯಂತೆ ಇದು ವರ್ಷಾರಂಭದಿಂದ ಹತ್ತನೆಯ ತಿಂಗಳು. ತಮಿಳಿನಲ್ಲಿ ಇದನ್ನು ತ್ರೈಮಾಸ ಎನ್ನಲಾಗಿದೆ. ಸಾಮಾನ್ಯವಾಗಿ ಈ ಮಾಸ ಜನವರಿ 13 ಅಥವಾ 14ನೆಯ ತಾರೀಕು ಆರಂಭವಾಗಿ ಫೆಬ್ರುವರಿ ತಿಂಗಳಿನ 12 ಅಥವಾ 13ನೆಯ ತಾರೀಕಿನವರೆಗೆ ಇರುತ್ತದೆ. ಹನ್ನೊಂದು ಸಹಸ್ರ ಕಿರಣಗಳಿಂದ ಕೂಡಿದ ಶಕ್ತಿವರ್ಣದ ಭಾಗ ಎಂಬ ಸೂರ್ಯ ಈ ಮಾಸದ ದೇವತೆ.

ಧಾರ್ಮಿಕ ಆಚರಣೆಗಳು ಮತ್ತು ಮಹತ್ವ[ಬದಲಾಯಿಸಿ]

ಈ ಮಾಸದ ಮೊದಲನೆಯ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಪ್ರಾರಂಭದ 12 ಗಂಟೆಯನ್ನು ಉತ್ತರಾಯಣ ಪುಣ್ಯಕಾಲವೆಂದು ಪರಿಗಣಿಸಿದ್ದಾರೆ. ಈ ಕಾಲದಲ್ಲಿ ಮಾಡುವ ಪಿತೃತರ್ಪಣ ಮತ್ತು ದಾನಾದಿಗಳು ವಿಶೇಷ ಪುಣ್ಯಫಲಗಳನ್ನು ಕೊಡುತ್ತವೆ. ಸೂರ್ಯ ಮಕರರಾಶಿಯಲ್ಲಿರುವಾಗ ಮಾಘಮಾಸದಲ್ಲಿ ಸೂರ್ಯೊದಯಕಾಲಕ್ಕೆ ಸರಿಯಾಗಿ ಸ್ನಾನ ಮಾಡುವುದರಿಂದ ಸರ್ವವಿಧ ಪಾಪಗಳು ನಶಿಸುತ್ತವೆ. ಈ ಮಾಸದ ಆರಂಭದ ದಿನ ಸಂಕ್ರಾಂತಿ ಹಬ್ಬ. ಈ ದಿನದಲ್ಲಿ ಎಳ್ಳುದಾನ ವಿಶೇಷ. ಮಕ್ಕಳಿಗೆ ದೋಷನಿವಾರಣೆಯಾಗಿ ಎಳ್ಳು, ಎಲಚಿಹಣ್ಣು, ನಾಣ್ಯ ಇವನ್ನು ತಲೆಯಮೇಲೆ ಸುರಿಯುವುದು ರೂಢಿಯಲ್ಲಿದೆ. ಇದರಿಂದ ಮಕ್ಕಳಿಗೆ ಪೀಡಾಪರಿಹಾರವಾಗುತ್ತದೆ ಎನ್ನುವ ನಂಬಿಕೆ. ಹಸುಗಳನ್ನು ತೊಳೆದು ಕೊಂಬಿಗೆ ಬಣ್ಣ ಬಳಿದು ಅಲಂಕಾರಮಾಡಿ ಅವಕೆ ಹುಗ್ಗಿಯನ್ನು ತಿನ್ನಿಸುತ್ತಾರೆ. ಎಲ್ಲರೂ ಹೊಸಬಟ್ಟೆ ಧರಿಸುತ್ತಾರೆ. ಹೆಣ್ಣುಮಕ್ಕಳು ಶೃಂಗರಿಸಿಕೊಂಡು ಕೊಬ್ಬರಿ ಚೂರು, ಕಡ್ಲೆಕಾಯಿ, ಬೆಲ್ಲದಚೂರುಗಳಿಂದ ಸಂಸ್ಕರಿಸಿದ ಎಳ್ಳು ಮತ್ತು ಕಬ್ಬಿನ ಚೂರುಗಳನ್ನು ಬಂಧುಗಳಿಗೆ ಮತ್ತು ಸ್ನೇಹಿತರ ಮನೆಗಳಿಗೆ ಹೋಗಿ ಕೊಡುತ್ತಾರೆ.

ಈ ತಿಂಗಳಲ್ಲಿ ಅಧಿಕಮಾಸ ಬರುವುದಿಲ್ಲ. ಸೂರ್ಯ ಮಕರಾಶಿಯಲ್ಲಿರುವಾಗ ಅಮಾವಾಸ್ಯೆ ಇಲ್ಲದಿದ್ದರೆ ಆಗ ಚಾಂದ್ರಮಾಸ ಗಣನೆಯಂತೆ ಪುಷ್ಯಮಾಸ ಕ್ಷಯವಾಗಿ ಮಾಘಮಾಸದಲ್ಲಿ ಪುಷ್ಯಮಾಸದ ಕೃತ್ಯಗಳನ್ನು ನಡೆಸುತ್ತಾರೆ. ವರ್ಷದ ನವನಾಯಕರಲ್ಲಿ ಮಕರಸಂಕ್ರಮಣ ದಿನದ ವಾರಾಧಿಪತಿಗೆ ನೀರಸಾಧಿಪತ್ಯ.

ಈ ತಿಂಗಳಿನ ಪುನರ್ವಸು ನಕ್ಷತ್ರದ ದಿವಸ ರಾಮಾನುಜಾಚಾರ್ಯರು ಮೇಲುಕೋಟೆ ಕ್ಷೇತ್ರದಲ್ಲಿ ಹುತ್ತದಲ್ಲಡಗಿದ್ದ ನಾರಾಯಣ ಮೂರ್ತಿಯನ್ನು ಪತ್ತೆ ಹಚ್ಚಿ ಪುನರುಜ್ಜೀವನಗೊಳಿಸಿದರು. ಇದರ ನೆನಪಿಗಾಗಿ ಪ್ರತಿವರ್ಷ ಮೇಲುಕೋಟೆಯಲ್ಲಿ ಪುನರ್ವಸು ನಕ್ಷತ್ರದ ದಿವಸ ರಾಮಾನುಜಾಚಾರ್ಯರೇ ಸಾಕ್ಷಾತ್ತಾಗಿ ಪೂಜೆ ನಡೆಸುವಂಥ ಸನ್ನಿವೇಶದಿಂದ ಕೂಡಿದ ಉತ್ಸವ ನಡೆಯುತ್ತದೆ.

ಸಂಕ್ರಾಂತಿ ಮಾರನೆಯ ದಿನ 'ಕನೂ ಎಂಬ ಹಬ್ಬವನ್ನು ತಮಿಳರಲ್ಲಿ ಸುಮಂಗಲಿಯರು ಆಚರಿಸುತ್ತಾರೆ. ಇದನ್ನು ಮಾಟ್ರುಪೊಂಗಲ್ ಎಂದು ಕರೆಯುತ್ತಾರೆ. ಇದರಲ್ಲಿ ಬಣ್ಣ ಬಣ್ಣದ ಅನ್ನದ ಉಂಡೆಗಳನ್ನು ಮಾಡಿ ಅಗ್ರದ ಬಾಳೆಲೆಯ ಮೇಲೆ ಈ ಉಂಡೆಗಳನ್ನು ಕಾಗೆ-ಗುಬ್ಬಚ್ಚಿಗಳನ್ನು ಉದ್ದೇಶಿಸಿ ಇಡುವುದು ಇಂದಿಗೂ ರೂಢಿಯಲ್ಲಿದೆ.

ಈ ತಿಂಗಳಲ್ಲಿ ಹುಟ್ಟಿದವ ಕಾಲೋಚಿತವಲ್ಲದ ಕಾರ್ಯವನ್ನು ಮಾಡುತ್ತಾನೆ. ಹೆಚ್ಚು ಹಣವಿಲ್ಲದ, ಲೋಭಿ, ಅನ್ಯರಭಾಗ್ಯವನ್ನು ಅನುಭವಿಸುತ್ತಾನೆ. ನಿರುತ್ಸಾಹಿ, ಸ್ವಜನರನ್ನು ವಿರೋಧಿಸುತ್ತಾನೆ ಎನ್ನಲಾಗಿದೆ.

ಈ ಮಾಸದ ಪ್ರಮುಖ ಹಬ್ಬಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:ಸೌರಮಾನ ಮಾಸಗಳು
ಮೇಷ ವೃಷಭ ಮಿಥುನ ಕಟಕ ಸಿಂಹಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ
"https://kn.wikipedia.org/w/index.php?title=ಮಕರ_ಮಾಸ&oldid=814685" ಇಂದ ಪಡೆಯಲ್ಪಟ್ಟಿದೆ